ಮೈಸೂರು : ಮುಂದಿನ ವರ್ಷ ಫೆಬ್ರವರಿ 10ರಿಂದ ಮೂರು ದಿನ ಮೈಸೂರು ಜಿಲ್ಲೆಯ ಟಿ. ನರಸೀಪುರ ಸಮೀಪ ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ಮೇಳ ನಡೆಯಲಿದೆ.
ಅದಕ್ಕಾಗಿ ಗುರುವಾರ ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಶ್ರೀಗಳ ನೇತೃತ್ವದಲ್ಲಿ ಕುಂಭಮೇಳ ಪೂರ್ವಭಾವಿ ಸಭೆ ನಡೆಯಿತು.
ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹಾಗೂ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಎಸ್. ಪಿ ವಿಷ್ಣುವರ್ಧನ್ ಸೇರಿದಂತೆ ಜಿಲ್ಲೆಯ ಹಲವು ಉನ್ನತಾಧಿಕಾರಿಗಳ ನೇತೃತ್ವದಲ್ಲಿ ಕುಂಭಮೇಳದ ಪೂರ್ವಭಾವಿ ಸಭೆ ನಡೆಯಿತು.
ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಹಾಗೂ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿದರು ಅಗತ್ಯ ಸಲಹೆಗಳನ್ನು ನೀಡಿದರು.
ಪ್ರತಿ ಮೂರು ವರ್ಷಕ್ಕೊಮ್ಮೆ ಮಹಾಕುಂಭಮೇಳ ನಡೆಯಬೇಕು. ಆದರೆ ಕೊರೊನಾದಿಂದಾಗಿ ರದ್ದಾಗಿದ್ದ ಮಹಾ ಕುಂಭಮೇಳ 6 ವರ್ಷದ ಬಳಿಕ 2025ರ ಫೆಬ್ರವರಿ 10, 11 ಮತ್ತು 12 ರಂದು 12ನೇ ಮಹಾ ಕುಂಭಮೇಳ ನಡೆಯುತ್ತಿದೆ.
ಫೆ. 10 ರಂದು ಪ್ರಾತಃ ಕಾಲದಲ್ಲಿ ಸಂಕಲ್ಪ, ಗಣಪತಿ ಹೋಮ, ಅಗಸ್ತ್ಯ ದೇವಾಲಯದಲ್ಲಿ ರುದ್ರಾಭಿಷೇಕ, ಸಂಜೆ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ
ಫೆ. 11 ರಂದು ಆಶ್ಲೇಷ ಪ್ರಾತಃ ಪುಣ್ಯ ನವಗ್ರಹ ಹೋಮ, ಸುದರ್ಶನ ಹೋಮ, ಧಾರ್ಮಿಕ ಸಭೆ ನಡೆಯಲಿದೆ. ನಂತರ ಸಂತರ ಹಾಗೂ ಮಹಾ ಮಂಡಲೇಶ್ವರರ ಸಂಗಮ ಕ್ಷೇತ್ರ ಪ್ರವೇಶವಾಗಲಿದೆ. ಅನಂತರ ವಾರಣಾಸಿ ಮಾದರಿಯಲ್ಲಿ ದೀಪಾರತಿ ಜರುಗಲಿದೆ.
ಫೆ.12 ಚಂಡಿಕಾ ಹೋಮ, ಪೂರ್ಣಾಹುತಿ, ತ್ರಿವೇಣಿ ಸಂಗಮದಲ್ಲಿ ಸಪ್ತ ಪವಿತ್ರ ನದಿಗಳಿಂದ ತಂದ ತೀರ್ಥ ಸಂಯೋಜನೆ, ಪುಣ್ಯಸ್ನಾನ, ಧರ್ಮಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ದಕ್ಷಿಣ ಭಾರತದ ಮಹಾ ಕುಂಭಮೇಳಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರದಿಂದಲೂ ಸಕಲ ಸಿದ್ಧತೆ ನಡೆದಿದೆ. ಪೊಲೀಸ್ ಭದ್ರತೆ, ಮೂಲ ಸೌಕರ್ಯ,ಸ್ವಚ್ಛತೆ, ವೇದಿಕೆ ನಿರ್ಮಾಣ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ಸುತ್ತೂರು ಶ್ರೀಗಳು ಮಾತನಾಡಿ, ಕುಂಭಮೇಳಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕಿದೆ. ಸಚಿವರ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಸಲಾಗುತ್ತದೆ, ಕುಂಭಮೇಳ ಯಶಸ್ವಿಗೆ ಅಧಿಕಾರಿಗಳ ಪಾತ್ರ ದೊಡ್ಡದು. ಸಾರ್ವಜನಿಕರು ಕೂಡ ಇದಕ್ಕೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ ಜಗತ್ತಿನ ಎಲ್ಲಾ ನಾಗರೀಕತೆಗಳು ಬೆಳೆದಿದ್ದು ನದಿ ಪಾತ್ರದಲ್ಲೆ. ಈ ಕುಂಭಮೇಳಕ್ಕೆ ಎಲ್ಲಾ ಸರ್ಕಾರಗಳು ಸಹಕಾರ ನೀಡುತ್ತಾ ಬಂದಿವೆ. ಕುಂಭಮೇಳಕ್ಕೆ ಆಗಮಿಸುವ ಜನರು, ದಾರ್ಶನಿಕರು, ಸ್ವಾಮೀಜಿಗಳ ನುಡಿಗಳನ್ನ ಆಲಿಸಬೇಕು. ಎಲ್ಲರೂ ಭಕ್ತಿ ಮಾರ್ಗದಲ್ಲಿ ಸಾಗಬೇಕು. ಎಲ್ಲಾ ಮಠದ ಸ್ವಾಮೀಜಿಗಳು ಜವಾಬ್ದಾರಿ ತೆಗೆದುಕೊಂಡಿದ್ದೇವೆ. ಇದರ ಜೊತೆಗೆ ಸರ್ಕಾರ ಕೂಡಾ ಕೈ ಜೋಡಿಸುತ್ತದೆ ಎಂದು ತಿಳಿಸಿದರು.