ಮೈಸೂರು: ಬುಡಕಟ್ಟು ಜನಾಂಗದಲ್ಲಿ ಬದಲಾವಣೆ ಕಾಣಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ.ಆರ್. ಗಂಗಾಧರ್ ತಿಳಿಸಿದರು.
ಸೀಸನಲ್ ಮೈಗ್ರೇಷನ್‌ನಿಂದ ಬುಡಕಟ್ಟು ಸಮುದಾಯದ ಮಕ್ಕಳ ಶಿಕ್ಷಣ ಮೊಟಕಾಗುವುದು ಸೇರಿದಂತೆ ನಾನಾ ರೀತಿಯ ಸವಾಲುಗಳನ್ನು ಎದುರಿಸುವಂತಾಗಿದೆ ಹೇಳಿದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ನಡೆದ ಬುಡಕಟ್ಟು ಶಿಕ್ಷಣ ಸಮಸ್ಯೆಗಳು ಮತ್ತು ಸವಾಲುಗಳು ಕುರಿತ ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬುಡಕಟ್ಟು ಸಮುದಾಯದವರು ಕೆಲವು ತಿಂಗಳ ಕಾಲ ಕೆಲಸಕ್ಕಾಗಿ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿ ನೆಲೆಸುತ್ತಾರೆ. ಆಗ ಅವರ ಮಕ್ಕಳು ಸರಿಯಾಗಿ ಶಿಕ್ಷಣ ಪಡೆಯಲಾಗದೆ ಅರ್ಧಕ್ಕೆ ಮೊಟಕುಗೊಳಿಸುತ್ತಾರೆ.
ಕೆಲ ಕಾಫಿ ತೋಟದವರು ಸಾರಾಯಿ ಕೊಟ್ಟು ಒಂದು ತಿಂಗಳ ಕೆಲಸವನ್ನು ೧೫ ದಿನಕ್ಕೆ ಮಾಡಿಸಿಕೊಳ್ಳುತ್ತಾರೆ. ಇದರಿಂದ ಈ ಸಮುದಾಯ ವ್ಯಸನಕ್ಕೆ ಒಳಗಾಗುತ್ತದೆ ಎಂದು ಹೇಳಿದರು.
ಬುಡಕಟ್ಟು ಸಮುದಾಯ ಬದಲಾದ ಜೀವನ ಶೈಲಿಯಿಂದ ಚಿಕ್ಕವಯಸ್ಸಿನಲ್ಲೆ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆಗೆ ಒಳಗಾಗುತ್ತಿದ್ದಾರೆ,ಈ ಸಮುದಾಯದವರಿಗೆ ಸಮರ್ಪಕವಾಗಿ ಶಿಕ್ಷಣ ದೊರೆಯುತ್ತಿಲ್ಲ. ಸರ್ಕಾರ ಬಜೆಟ್‌ನಲ್ಲಿ ಬುಡಕಟ್ಟು ಸಮುದಾಯದ ಶಿಕ್ಷಣಕ್ಕೆ ಹೆಚ್ಚು ಹಣ ನೀಡಿದರೂ ಅದು ಖರ್ಚಾಗುತ್ತಿಲ್ಲ ಎಂದು ವಿಷಾದಿಸಿದರು.
ಅಧಿಕಾರಿಗಳಿಗೆ ಇಚ್ಛಾ ಶಕ್ತಿಯಿಲ್ಲ. ಸರ್ಕಾರ ಅಗತ್ಯಕ್ಕೆ ತಕ್ಕಷ್ಟು ಶಿಕ್ಷಕರನ್ನು ನೇಮಕ ಮಾಡಬೇಕು. ಭೂಮಾಲೀಕರು ಮಕ್ಕಳಿಗೆ ಶಿಕ್ಷಣ ಕೊಡಿಸಲು ಆಸಕ್ತಿ ವಹಿಸಬೇಕು. ವಸತಿ ಯೋಜನೆಯಡಿ ವೈಜ್ಞಾನಿಕವಾಗಿ ಮನೆ ನಿರ್ಮಿಸಿಕೊಡಬೇಕು. ಭೂಮಿ ನೀಡಿ ವ್ಯವಸಾಯ ಮಾಡಲು ತರಬೇತಿ ನೀಡಬೇಕು ಎಂದು ಗಂಗಾಧರ್ ಸಲಹೆ ನೀಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ. ಜೆ. ಸೋಮಶೇಖರ್ ಮಾತನಾಡಿ, ಸಮಾಜದಲ್ಲಿ ಬಡವರಿಗೊಂದು ಶಿಕ್ಷಣ, ಶ್ರೀಮಂತರಿಗೊಂದು ಶಿಕ್ಷಣ ಇರುವಾಗ ಬುಡಕಟ್ಟು ಸಮುದಾಯದವರ ಸ್ಥಿತಿಯೇನು
ಎಂದು ಆತಂಕ ವ್ಯಕ್ತಪಡಿಸಿದರು.
ಬುಡಕಟ್ಟು ಸಮುದಾಯದವರು ಪಿಎಚ್‌ಡಿ ಮಾಡಿದರೂ ಕೆಲಸ ಸಿಗುತ್ತಿಲ್ಲ. ನಿಜವಾದ ಬುಡಕಟ್ಟುಗಳ ಸ್ಥಾನವೇನು, ರಾಜ್ಯ ಸರ್ಕಾರ ಬುಡಕಟ್ಟು ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಕಾಡಿನಲ್ಲಿರುವ ಬುಡಕಟ್ಟು ಸಮುದಾಯದವರ ಬದುಕನ್ನು ಸಮಾಜದ ಮುಖ್ಯವಾಹಿನಿಗೆ ತರದಿದ್ದರೆ ಭಾರತಕ್ಕೆ ಬಹುದೊಡ್ಡ ಸವಾಲಾಗುತ್ತದೆ ಎಂದರು.
ವಿಚಾರ ಸಂಕಿರಣದಲ್ಲಿ ವೀಡಿಯೋ ಕಾನ್ಫೆರನ್ಸ್ ಮೂಲಕ ಬುಡಕಟ್ಟು ಸಮುದಾಯದ ಮುಖಂಡರು ಹೇಳಿದ ಸಮಸ್ಯೆಗಳನ್ನು ಆಲಿಸಿದ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ರಂದೀಪ್ ಡಿ., ನಿರ್ದೇಶಕ ಯೋಗೀಶ್ ಟಿ. ಮಾತನಾಡಿ ಬುಡಕಟ್ಟು ಮುಖಂಡರಾದ ನೀವು ಹೇಳಿರುವ ಸಮಸ್ಯೆಗಳನ್ನು ಯಾವ ರೀತಿ ಬಗೆಹರಿಸಬಹುದು ಎಂದು ಸರ್ಕಾರದೊಂದಿಗೆ ಚೃಚಿಸಿ, ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಬಿ.ಎಸ್. ಪ್ರಭಾ ಅರಸ್ ಮಾತನಾಡಿ, ಭಾರತದಲ್ಲಿ ಶೈಕ್ಷಣಿಕ ಪ್ರಗತಿ ಶೇ. ೭೭ ರಷ್ಟಿದ್ದರೆ ಪರಿಶಿಷ್ಠ ಪಂಗಡದ ಶೈಕ್ಷಣಿಕ ಪ್ರಗತಿ ಶೇ. ೫೮ ರಷ್ಟಿದೆ. ಅದರಲ್ಲೂ ಗ್ರಾಮೀಣ ಬುಡಕಟ್ಟು ಜನರ ಶೈಕ್ಷಣಿಕ ಪ್ರಗತಿ ಶೇ. ೪೨ ರಷ್ಟಿದೆ. ಪಿ.ವಿ.ಟಿ.ಜಿ ಸಮುದಾಯದವರ ಶೈಕ್ಷಣಿಕ ಪ್ರಗತಿ ತೀರ ಕಡಿಮೆ ಇದ್ದು ಶೇ. ೪೦ ರಷ್ಟು ವಿದ್ಯಾರ್ಥಿಗಳು ೮ನೇ ತರಗತಿಯಲ್ಲೇ ಶಾಲೆ ಬಿಡುತ್ತಿದ್ದಾರೆ. ಶೇ. ೨ ರಷ್ಟು ಜೇನು ಕುರುಬ ಮಕ್ಕಳು ಕಾಲೇಜು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಪ್ರೊ. ವೆಂಕಟೇಶ್‌ಕುಮಾರ್ ಜಿ., ಪ್ರೊ. ರಮಣಯ್ಯ, ಸಂಶೋಧನಾಧಿಕಾರಿ ಎಲ್. ಶ್ರೀನಿವಾಸ, ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಎಂ.ಕೆ. ಮಲ್ಲೇಶ್, ಡಾ. ಮೋಹನ್‌ಕುಮಾರ್, ಡಾ. ಮಂಜುನಾಥ್, ಡಾ. ರವಿಕುಮಾರ್, ಡಾ. ಕಲಾವತಿ, ಭವ್ಯ, ಗುಣಧರ್, ಪುಷ್ಪಲತಾ ಉಪಸ್ಥಿತರಿದ್ದರು.