ಸಿದ್ದಾರ್ಥ ನಗರದ ಮುಖ್ಯ ರಸ್ತೆಯಲ್ಲಿ ‌ಉರುಳಿದ‌ ಭಾರೀ ಮರ:ತಪ್ಪಿದ ಅನಾಹುತ

Spread the love

ಮೈಸೂರು: ಮಳೆಯೂ‌ ಇಲ್ಲ,ಭಾರೀ ಗಾಳಿಯೂ ಇರಲಿಲ್ಲ,ಆದರೂ ಮೈಸೂರಿನ ಸಿದ್ದಾರ್ಥ ನಗರದ ಮುಖ್ಯ ರಸ್ತೆಯಲ್ಲೇ ಭಾರೀ ಗಾತ್ರದ ಮರವೊಂದು ಇದ್ದಕ್ಕಿದ್ದಂತೆ ಉರುಳಿ ಬಿದ್ದಿದ್ದು ಭಾರೀ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.

ಸಿದ್ದಾರ್ಥ ಲೇಔಟ್ ಮುಖ್ಯ ರಸ್ತೆ ಟೆರೇಶಿಯನ್ ಸ್ಕೂಲ್ ಹಿಂಭಾಗ ಮೂಲೆಯಲ್ಲಿದ್ದ‌ ಮರ‌ ರಸ್ತೆಗೆ ಉರುಳಿ ಬಿದ್ದಿದೆ.

ಅದೃಷ್ಟವಶಾತ್ ಯಾರಿಗೂ ಯಾವ ಅಪಾಯವೂ ಆಗಿಲ್ಲ.ಶನಿವಾರ ಸಂಜೆ ಸುಮಾರು 4 ಗಂಟೆ ವೇಳೆ ಮರ ಬಿದ್ದಿದೆ.

ಇವತ್ತು ಬಕ್ರೀದ್, ಹಾಗಾಗಿ ರಜೆ ಇದ್ದುದರಿಂದ ಟೆರೇಶಿಯನ್ ಸ್ಕೂಲ್ ತೆರೆದಿರಲಿಲ್ಲ.ಒಂದು ವೇಳೆ ಶಾಲೆ ಇದ್ದಿದ್ದರೆ ಎಂದು ಊಹಿಸಿಕೊಂಡರೆ ಮೈ ಜುಮ್ ಎನ್ನುತ್ತದೆ.ಏಕೆಂದರೆ ಶಾಲಾ ಮಕ್ಕಳು ಅಲ್ಲೇ ಇರುತ್ತಿದ್ದರು,ಅನಾಹುತ ಆಗಿಬಿಡುತ್ತಿತ್ತು.

ಇದು ಮುಖ್ಯ ರಸ್ತೆಯಾದುದರಿಂದ ಸದಾ ವಾಹನ ಸಂಚಾರ ಇದ್ದೇ ಇರುತ್ತದೆ.ರಜೆಯ ಕಾರಣ ವಾಹನಗಳು ಅಷ್ಟಾಗಿ ಇರಲಿಲ್ಲ.ಮರ ವಾಹನ ಸವಾರರ ಮೇಲೆ ಬಿದ್ದರೂ ದುರಂತ ಸಂಭವಿಸುತ್ತಿತ್ತು.

ಪುಣ್ಯವಶಾತ್ ಏನೂ ಆಗಿಲ್ಲ.ಮರದ ಸ್ವಲ್ಪ‌ಭಾಗ ಟೆರೇಶಿಯನ್ ಶಾಲೆಯ ಕಾಂಪೌಂಡ್ ‌ಮೇಲೆ ಬಿದ್ದಿದೆ‌,ಆದರೆ ಹಾನಿ ಅಷ್ಟಾಗಿ ಆಗಿಲ್ಲ.ಇನ್ನು ಎದುರು ಭಾಗದಲ್ಲಿ ಹಣ್ಣಿನ ಅಂಗಡಿ ಮತ್ತಿತರ ಅಂಗಡಿಗಳಿದ್ದರೂ ಅಲ್ಲೂ ಯಾವ ತೊಂದರೆ ಆಗಿಲ್ಲ.

ವಿಷಯ ತಿಳಿಯುತ್ತಿದ್ದಂತೆ ಮೈಸೂರು ನಗರಪಾಲಿಕೆ ಮತ್ತು ವಿದ್ಯುತ್ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದರು.

ವಿದ್ಯುತ್ ಕಡಿತಗೊಳಿಸಲಾಯಿತು.ನಂತರ ‌ಪಾಲಿಕೆ ಸಿಬ್ಬಂದಿ ಮರವನ್ನು ಕತ್ತರಿಸಿ ಸಾಗಿಸುವ ಮೂಲಕ‌ ವಾಹನ‌ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಸಧ್ಯ ದೇವರ ದಯೆ ಯಾರಿಗೂ ಏನೂ ತೊಂದರೆ ಆಗಲಿಲ್ಲ.