ರಾಜ್ಯಾದ್ಯಂತ ನಾಳೆ ಇಂಟರ್‌ ವಲ್ ತೆರೆಗೆ

Spread the love

ಮೈಸೂರು,ಮಾ.6: ಮೂವರು ತುಂಟಾಟದ ಹುಡುಗರು ಹಾಗೂ ಯುವತಿಯರಿಬ್ಬರ ಸುತ್ತ ನಡೆಯುವ ಒಂದಷ್ಟು ಘಟನೆಗಳನ್ನು ಹಾಸ್ಯದ ಹಿನ್ನೆಲೆಯಲ್ಲಿ ನಿರೂಪಿಸಿರುವ ಚಿತ್ರ ” ಇಂಟರ್ ವಲ್ ” ನಾಳೆ ರಾಜ್ಯಾದ್ಯಂತ ತೆರೆಕಾಣಲಿದೆ

ಶುಕ್ರವಾರ ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಗೆ ಬರಲಿದೆ.

ಭರತವರ್ಷ್ ಪಿಚ್ಚರ್ಸ್ ಅಡಿಯಲ್ಲಿ ಸುಖೇಶ್ ಹಾಗೂ ಭರತ್ ವರ್ಷ ಸೇರಿ ನಿರ್ಮಿಸಿರುವ ಹಾಗೂ ಭರತ್ ವರ್ಷ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಯೂಥ್ ಫುಲ್ ಎಂಟರ್ ಟೈನರ್ ಚಿತ್ರ ಇದು.

ಮೈಸೂರು ಪತ್ರಕರ್ತರ ಭವನದಲ್ಲಿ ಚಿತ್ರತಂಡದವರು ಇಂಟರ್ ವಲ್ ಚಿತ್ರದ ಕುರಿತು ಮನಬಿಚ್ಚಿ ಮಾತನಾಡಿದರು.

ಈಗಿನ ಕಾಲದ ಯುವಕರ ಮನಸ್ಥಿತಿ ಹಾಗೂ ವಿದ್ಯಾರ್ಥಿ ಜೀವನದಲ್ಲಿ ನಡೆಸುವ ಆಟ, ತುಂಟಾಟದ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಹೆಣೆದ ಮನರಂಜನಾತ್ಮಕ ಕಥೆ ಈ ಚಿತ್ರದ ಹೈಲೈಟ್.

ಪ್ರತಿಯೊಬ್ಬರ ಜೀವನದಲ್ಲೂ ಒಂದು ಇಂಟರ್‌ವಲ್ ಅನ್ನೋದು ಬಂದೇ ಬರುತ್ತದೆ. ಅದೇ ರೀತಿ ನಾಯಕನ ಜೀವನದಲ್ಲಿ ಆದ ಇಂಟರ್‌ವಲ್ ಆತನ ಲೈಫಲ್ಲಿ ಏನೇನೆಲ್ಲ ತಿರುವುಗಳಿಗೆ ಕಾರಣವಾಯಿತು ಅನ್ನೋದನ್ನು ಕುತೂಹಲಕರ ಕಥಾನಕದೊಂದಿಗೆ ನಿರ್ದೇಶಕ ಸುಖೀ ಅವರು ಹೇಳಹೊರಟಿದ್ದಾರೆ.

ಕಥೆ, ಚಿತ್ರಕಥೆಯನ್ನು ಸುಖೀ ಅವರೇ ಹೆಣೆದಿದ್ದಾರೆ.
ಬೆಂಗಳೂರು, ಶಿವಮೊಗ್ಗ, ತೀರ್ಥಹಳ್ಳಿಯ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ಮೂವರು ಹಳ್ಳಿ ಹುಡುಗರ ತುಂಟತನ ಹಾಗೂ ಪ್ರೇಮಕಥೆಯನ್ನು ಈ ಚಿತ್ರದಲ್ಲಿ ಹಾಸ್ಯಮಯವಾಗಿ ಕಟ್ಟಿಕೊಡಲಾಗಿದೆ.

ಈ ಚಿತ್ರದ ಕೊನೇ ಹತ್ತು ನಿಮಿಷಗಳ ಕ್ಲೈಮ್ಯಾಕ್ಸ್ ದೃಶ್ಯ ವಿಶೇಷವಾಗಿ ಮೂಡಿಬಂದಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತದೆ.

ಈ ಚಿತ್ರದಲ್ಲಿ ಯುವನಟ ಶಶಿರಾಜ್ ಅವರು ಪ್ರಥಮಬಾರಿಗೆ ನಾಯಕನಾಗಿ ತೆರೆಯಮೇಲೆ ಕಾಣಿಸಿಕೊಂಡಿದ್ದಾರೆ. ಪ್ರಜ್ವಲ್‌ ಕುಮಾರ್ ಗೌಡ, ಸುಖಿ, ಚರಿತ್ರರಾವ್, ಸಹನ ಆರಾಧ್ಯ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ವಿಕಾಸ್ ವಸಿಷ್ಠ ಅವರ ಸಂಗೀತ ಸಂಯೋಜನೆಯ ಹಾಡುಗಳಿಗೆ ವಿಜಯ್ ಪ್ರಕಾಶ್, ಚಂದನ್ ಶಟ್ಟಿ, ಆಲ್ ಓಕೆ ಅಲೋಕ್, ಸುನಿಧಿ ಗಣೇಶ್, ವಾಣಿ ಹರಿಕೃಷ್ಣ ದನಿಯಾಗಿದ್ದಾರೆ.

ಇಂಟರ್‌ವಲ್ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಸುಕೇಶ್ ರಚಿಸಿದ್ದಾರೆ. ರಾಜ್‌ಕಾಂತ್ ಅವರ ಛಾಯಾಗ್ರಹಣ, ಚಂದ್ರು ಬಂಡೆ ಅವರ ಸಾಹಸ ನಿರ್ದೇಶನ, ಶಶಿಧರ್ ಅವರ ಸಂಕಲನ ಈ ಚಿತ್ರಕ್ಕಿದೆ.