ಚಿತ್ರರಂಗದ ಸರ್ವತೋಮುಖ ಬೆಳವಣಿಗೆಗಾಗಿ ನಾಳೆ ಪ್ರತಿಭಟನೆ

Spread the love

ಬೆಂಗಳೂರು: ಚಿತ್ರರಂಗದ ಸರ್ವತೋಮುಖ ಬೆಳವಣಿಗೆಗಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಳೆ ಡಿ.13 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಭಾರತೀಯ ಜನತಾ ಪಕ್ಷದ ರಾಜ್ಯ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ಸಂಚಾಲಕರೂ, ಚಲನಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರೂ ಆದ ರೂಪ ಅಯ್ಯರ್ ಮತ್ತಿತರರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಲಿದೆ.

ಪ್ರತಿಭಟನೆ ನಾಳೆ ಬೆಳಿಗ್ಗೆ 10.30 ಕ್ಕೆ ಪ್ರಾರಂಭವಾಗಲಿದ್ದು, ರಾಜ್ಯಾದ್ಯಂತ
ನಿರ್ಮಾಪಕರುಗಳು ಭಾಗವಹಿಸಲಿದ್ದಾರೆ.

ಐದು ವರ್ಷಗಳಿಂದ ಸ್ಥಗಿತಗೊಂಡಿರುವ ಸಬ್ಸಿಡಿ ಮತ್ತು ಚಲನಚಿತ್ರ ರಾಜ್ಯ ಪ್ರಶಸ್ತಿ ಮುಂದುವರಿಯಬೇಕು, ನಿರ್ಮಾಪಕರ ನಿಲುವುಗಾಗಿ ನಮ್ಮ ಹೋರಾಟ ಅನಿವಾರ್ಯವಾಗಿದೆ ನಮ್ಮ ಸಬ್ಸಿಡಿ ನಮ್ಮ ಹಕ್ಕು ಎಂಬ ಘೋಷ ವಾಕ್ಯದಡಿ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ರೂಪ ಅಯ್ಯರ್ ತಿಳಿಸಿದ್ದಾರೆ.

ನಿರ್ಮಾಪಕರುಗಳಾದ ವೆಸ್ಲಿ ಬ್ರೌನ್, ವಿ. ಲವ, ಶಶಿಕಾಂತ್ ಗಟ್ಟಿ ಅವರು ಹೋರಾಟಕ್ಕೆ ಸಾಥ್ ನೀಡಲಿದ್ದಾರೆ,ಜತೆಗೆ ಚಿತ್ರರಂಗದ ಬಳಗದವರು‌, ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದವರು ಭಾಗವಹಿಸಲಿದ್ದಾರೆ.

ಎಷ್ಟೋ ಮಂದಿ ಸ್ವಾಭಿಮಾನಿ ನಿರ್ಮಾಪಕರು ಸಬ್ಸಿಡಿ ಸಿಗದೇ ಸಾವಿಗೆ ಶರಣಾಗಿರುವ ಉದಾಹರಣೆಗಳಿವೆ, ಐದು ವರ್ಷಗಳಿಂದ ಚಲನಚಿತ್ರ ರಾಜ್ಯ ಪ್ರಶಸ್ತಿ ನೀಡಿಲ್ಲ,ಹಾಗಾಗಿ ಪ್ರೋತ್ಸಾಹವೆ ಇಲ್ಲದಂತಾಗಿದೆ,ನಿರ್ಮಾಪಕರು ಉಳಿದರೆ ಚಿತ್ರರಂಗ ಉಳಿಯುತ್ತದೆ. ಪ್ರತಿಭಟನೆ ಅನಿವಾರ್ಯವಾಗಿದೆ‌.

ಆದ್ದರಿಂದ ರಾಜ್ಯಮಟ್ಟದ ಹೋರಾಟವನ್ನು ಹಮ್ಮಿಕೊಳ್ಳುವ ಮೂಲಕ ಸರ್ಕಾರದ ಗಮನ ಸೆಳೆಯಲಿದ್ದೇವೆ ಎಂದು ರೂಪಾ ಅಯ್ಯರ್ ತಿಳಿಸಿದ್ದಾರೆ.