ಶ್ರೀಗಂಧದ ಕರಂಡಿಕೆ ಹೊತ್ತು ಸಾಗಿದ ತನ್ವೀರ್ ಸೇಠ್

ಮೈಸೂರು: ಮೈಸೂರು ಸಾಮ್ರಾಜ್ಯವನ್ನು ಆಳಿದ ದೊರೆ ಹಜರತ್ ಟಿಪ್ಪು ಸುಲ್ತಾನರ 233ನೇ ಗಂಧದ ಉರುಸ್ ಕಾರ್ಯಕ್ರಮಕ್ಕೆ ಶಾಸಕ ತನ್ವೀರ್ ಸೇಠ್ ಮೈಸೂರಿನ ಮಿಲಾದ್ ಪಾರ್ಕಿನಲ್ಲಿ ಚಾಲನೆ ನೀಡಿದರು.

ಟಿಪ್ಪು ಸುಲ್ತಾನ್ ವೆಲ್‌ ಫೇರ್ ಮತ್ತು ಉರುಸ್ ಸಮಿತಿ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಸೂಫಿ ಸಂತರು, ಟಿಪ್ಪು ಸುಲ್ತಾನರ ಅಭಿಮಾನಿಗಳು, ಸಂಘ ಸಂಸ್ಥೆಗಳ ಮುಖಂಡರು, ವಿವಿಧ ಮಸೀದಿಗಳ ಧರ್ಮಗುರುಗಳು ಮತ್ತು ಸರ್‌ ಖಾಜಿ ಸೈಯದ್ ಉಸ್ಮಾನ್ ಅವರ ಸಮ್ಮುಖದಲ್ಲಿ ವಾಡಿಕೆಯಂತೆ ಶ್ರೀಗಂಧದ ಕರಂಡಿಕೆಯನ್ನು ಶಾಸಕ ತನ್ವೀರ್ ಸೇಠ್ ತಲೆಯ ಮೇಲೆ ಹೊತ್ತು ಸೂಫಿಗಳ ವಾದ್ಯದ ಮೆರವಣಿಗೆಯೊಂದಿಗೆ ಮಿಲಾದ್ ಪಾರ್ಕಿನಿಂದ ಪಾದಯಾತ್ರೆ ಹೊರಟರು.

ಬಳಿಕ ಅಲಂಕೃತ ಸಾರೂಟಿನಲ್ಲಿ ನಗರದ ಫೌಂಟನ್ ವೃತ್ತದವರೆಗೂ ಶ್ರೀಗಂಧದ ಕರಂಡಿಕೆಯನ್ನು ತಲೆಯ ಮೇಲೆ ಹೊತ್ತು ಸಾಗಿದರು. ಬಳಿಕ ಅದನ್ನು ವಾಹನದ ಮೂಲಕ ಶ್ರೀರಂಗಪಟ್ಟಣದ ಗುಂಬಜ್‌ ನಲ್ಲಿರುವ ಹಜರತ್ ಟಿಪ್ಪು ಸುಲ್ತಾನದ ಸಮಾಧಿಗೆ ಕೊಂಡೊಯ್ಯಲಾಯಿತು.

ಇದಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್ ವೆಲ್‌ಫೇರ್ ಮತ್ತು ಉರುಸ್ ಸಮಿತಿಯ ಅಧ್ಯಕ್ಷರೂ ಮತ್ತು ಹೈಕೋರ್ಟ್ ವಕೀಲರೂ ಆದ ಎಂ.ಎಸ್.ಮುಕ್ರಂ ಮಾತನಾಡಿ, ಟಿಪ್ಪು ಸುಲ್ತಾನ್ ಎಂಬ ಹೆಸರೇ ಒಂದು ದೊಡ್ಡ ಶಕ್ತಿಯಾಗಿದೆ ಎಂದು ಬಣ್ಣಿಸಿದರು.

ಆ ಹೆಸರನ್ನು ಹೇಳಿದರೆ ಎಂತಹ ಬಲಹೀನರೂ ಶೂರರಾಗುತ್ತಾರೆ, ಅಳುವವನ ಮುಖದಲ್ಲಿ ನಗೆ ಸೂಸುತ್ತದೆ, ದೇಶ ದ್ರೋಹಿಗಳ ಎದೆಯಲ್ಲಿ ನಡುಕ ಉಂಟಾಗುತ್ತದೆ ಅಂತಹ ಶಕ್ತಿ ಟಿಪ್ಪು ಸುಲ್ತಾನರ ಹೆಸರಿಗಿದೆ ಎಂದ ಮೇಲೆ ಅವರ ಶಕ್ತಿ ಎಂತಹದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಅವರು ಕೇವಲ ಶೂರರು ಮಾತ್ರವಲ್ಲ ಅಪ್ಪಟ ದೇಶ ಪ್ರೇಮಿಗಳಾಗಿದ್ದವರು, ಸಾಮಾಜಿಕ ನ್ಯಾಯದ ಹರಿಕಾರರು, ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಮಹಾ ಪರಾಕ್ರಮಿಯೂ ಆಗಿದ್ದರು. ಇಂದು ಕೇವಲ ಅವರು ಮುಸ್ಲಿಂ ಧರ್ಮಿಯರು ಎಂಬ ಕಾರಣಕ್ಕೆ ಅವರನ್ನು ಕಡೆಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸು ಮಾತನಾಡಿ, ಕೇವಲ ಓಟಿನ ರಾಜಕಾರಣಕ್ಕಾಗಿ ಟಿಪ್ಪು ಸುಲ್ತಾನ ಎಂಬ ಮಹಾನ್ ದೇಶ ಪ್ರೇಮಿಯನ್ನು ಕಡೆಗಣಿಸಲಾಗಿದೆ ಎಂದು ಕಿಡಿಕಾರಿದರು‌

ಶೃಂಗೇರಿ ಮಠವನ್ನು ಲೂಟಿ ಮಾಡಿ, ಶಾರದಾಂಬೆಯ ಮೂಲ ವಿಗ್ರಹವನ್ನು ನದಿಗೆ ಎಸೆದವರು ಬ್ರಾಹ್ಮಣ ಪೇಶ್ವೆಗಳು, ಆದರೇ ಮಠದ ಪುನರ್‌ನಿರ್ಮಾಣಕ್ಕೆ ಟಿಪ್ಪು ಸುಲ್ತಾನರು ಹಣ ಕೊಟ್ಟು ಮಠವನ್ನು ಶತ್ರುಗಳಿಂದ ರಕ್ಷಿಸಿದ್ದಾರೆ,ಇಂತಹ ಸತ್ಯ ನಮಗೆ ತಿಳಿದಿದ್ದರೂ ನಾವು ಸುಳ್ಳನ್ನೆ ನಂಬುವಂತೆ ಟಿಪ್ಪು ವಿರುದ್ಧ ಮಾತನಾಡುತ್ತೇವೆ ಎಂದು ಬೇಸರದಲ್ಲೇ ನುಡಿದರು.

ಕಾರ್ಯಕ್ರಮದಲ್ಲಿ ಎಂ.ಎಫ್.ಕಲೀಂ, ಮಜೀದ್ ಅಹಮದ್, ಮೊಹಮ್ಮದ್ ರಫಿ, ರಘುರಾಜೇ ಅರಸ್, ಶೌಕತ್ ಅಲಿಖಾನ್, ಮೊಹಮ್ಮದ್ ಅಸ್ಲಂ, ಅಜೀಜ್ ಅಲಿ ಕಿಷ್ತಿ ಮತ್ತಿತರರು ಉಪಸ್ಥಿತರಿದ್ದರು.