ಹುಲಿ ಸಾವು ಗಂಭೀರವಾಗಿ ಪರಿಗಣಿಸಿ: ವಿನಯ್ ಕುಮಾರ್ ಆಗ್ರಹ

Spread the love

ಮೈಸೂರು: ಮಲೆ ಮಾದೇಶ್ವರ ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ಹಿತರಕ್ಷಣಾ ವೇದಿಕೆಯವರು ಪ್ರತಿಭಟನೆ ನಡೆಸಿದರು.

ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ
ಕರ್ನಾಟಕ ಹಿತರಕ್ಷಣಾ ವೇದಿಕೆಯವರು ಪ್ರತಿಭಟನೆ ನಡೆಸಿ,ತಪ್ಪಿತಸ್ಥರ ವಿರುದ್ಧ ಕಠಿಣ ಕೈಗೊಳ್ಳಬೇಕು ಮತ್ತು
ಕರ್ತವ್ಯಲೋಪ ಎಸಗಿರುವ ಹಿರಿಯ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಈ‌ ವೇಳೆ ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ,
ಹುಲಿಗಳ ಬಗ್ಗೆ ಸಮಾಜ ಮತ್ತು ಸರ್ಕಾರ ಎರಡೂ ಬಹಳ ಪ್ರಾಮುಖ್ಯತೆ ಕೊಡುತ್ತವೆ, ಅಂತಹುದರಲ್ಲಿ ತಾಯಿ ಹುಲಿ ಹಾಗೂ 4 ಮರಿಗಳು ಸಾವಿಗಿಡಾಗಿರುವುದು ಆಘಾತಕಾರಿ ವಿಷಯ ಎಂದು ಆತಂಕ ವ್ಯಕ್ತಪಡಿಸಿದರು.

ಹುಲಿಗಳ ಸಾವಿಗೆ ಅರಣ್ಯ ಇಲಾಖೆ ನಿರ್ಲಕ್ಷವೇ ಕಾರಣ, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ,ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬಹಳಷ್ಟು ಜನದಟ್ಟಣೆಗೆ
ಅವಕಾಶ ಮಾಡಿಕೊಟ್ಟಿರುವುದು ಇಂತಹ ಅನಾಹುತಗಳಿಗೆ ಕಾರಣವಾಗಿದೆ ಹಾಗೂ ಅರಣ್ಯ ಪ್ರದೇಶಗಳಲ್ಲಿ ಹೋಂ ಸ್ಟೇ, ರೆಸಾರ್ಟ್ ಗಳು ಹೆಚ್ಚಾಗುತ್ತಿರುವುದರಿಂದ ಇಂತಹ ಅವಘಡಗಳು ಹೆಚ್ಚಾಗುತ್ತಿದೆ
ಅದರ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯು ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ನೇತೃತ್ವದಲ್ಲಿ ನಡೆಯಿತು.

ವನ್ಯಜೀವಿ ಛಾಯಾಗ್ರಹಕ ಉಮೇಶ್, ಜಿ ರಾಘವೇಂದ್ರ, ಎಸ್ ಎನ್ ರಾಜೇಶ್, ನಂಜುಂಡಿ, ರವಿಚಂದ್ರ,ನೀತು, ಮಂಜುನಾಥ್, ರವಿ, ಯತೀಶ್ ಬಾಬು, ಈಶ್ವರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.