ಹುಲಿ ದಾಳಿಗೆ ಬಲಿಯಾದ ರೈತ ಕುಟುಂಬಕ್ಕೆ 50 ಲಕ್ಷ ಪರಿಹಾರಕ್ಕೆ ತೇಜಸ್ವಿ ಒತ್ತಾಯ

Spread the love

ಮೈಸೂರು: ಮೈಸೂರು ಜಿಲ್ಲೆ, ಸರಗೂರು ತಾಲೂಕು ಮುಳ್ಳೂರು ಗ್ರಾಮದ ರೈತ ಹುಲಿ ದಾಳಿಗೆ ಬಲಿಯಾಗಿದ್ದು,ರೈತನ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ನೀಡಬೇಕೆಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.

ಗದ್ದೆಯಲ್ಲಿ ಜಾನುವಾರು ಮೇಯಿಸುತ್ತಿದ್ದ ವೇಳೆ ಹುಲಿ ದಾಳಿ ನಡೆಸಿದೆ.

ಇತ್ತೀಚೆಗಷ್ಟೆ ಬಡಗಲಪುರದಲ್ಲಿ ನಡೆದ ಘಟನೆ ಮಾಸುವ ಮುನ್ನವೇ ಹುಲಿ ದಾಳಿಗೆ ಮುಳ್ಳೂರಿನ ರೈತ ಬಲಿಯಾಗಿರುವ ಸುದ್ದಿ ತಿಳಿದು ತೀವ್ರ ಆತಂಕ ಉಂಟುಮಾಡಿದೆ ಎಂದು ತೇಜಸ್ವಿ ಹೇಳಿದ್ದಾರೆ.

ಮೃತ ರೈತನ ಕುಟುಂಬಕ್ಕೆ ರಾಜ್ಯ ಸರ್ಕಾರ ಕೂಡಲೇ 50 ಲಕ್ಷ ಪರಿಹಾರ ಘೋಷಣೆ ಮಾಡುವಂತೆ ತೇಜಸ್ವಿ ಆಗ್ರಹಿಸಿದ್ದಾರೆ.

ಮುಳ್ಳೂರು ಗ್ರಾಮದ ರಾಜಶೇಖರ ಮೂರ್ತಿ (55) ವ್ಯಾಘ್ರನ ವಕ್ರದೃಷ್ಟಿಗೆ ಬಲಿಯಾದ ರೈತ.

ಇಂದು ಮಧ್ಯಾಹ್ನ ಒಂದು ಗಂಟೆಯಲ್ಲಿ ಘಟನೆ ನಡೆದಿದ್ದು, ಸ್ಥಳದಲ್ಲಿ ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಮತ್ತು ಸರಗೂರು ಪೊಲೀಸರು ಬೀಡುಬಿಟ್ಟಿದ್ದು ಕೂಡಲೇ ಹುಲಿ ಸೆರೆ ಹಿಡಿಯುವಂತಾಗಲಿ ಎಂದು ಹೇಳಿದ್ದಾರೆ.

ಬಡಗಲಪುರ ಗ್ರಾಮದಲ್ಲಿ ಓರ್ವ ರೈತನನ್ನ ಬಲಿ ಪಡೆದ ಬೆನ್ನ ಹಿಂದೆಯೇ ದಸರಾ ಆನೆಗಳ ನೆರವಿನಿಂದ ಕೂಂಬಿಗ್ ಕಾರ್ಯಾಚರಣೆ ನಡೆಸಿ ಹುಲಿಯನ್ನ ಸೆರೆ ಹಿಡಿಯಲಾಗಿತ್ತು.

ಹುಲಿ ಸೆರೆಯಾದ ಹಿನ್ನಲೆ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದರು,ಇದೀಗ ಮತ್ತೊಂದು ಬಲಿ ಪಡೆದಿರುವುದು ಸ್ಥಳೀಯರ ನಿದ್ದೆ ಕೆಡಿಸಿದೆ,ಜನರಲ್ಲಿ ಆತಂಕ ಮೂಡಿಸಿದೆ.

ನರಹಂತಕ ವ್ಯಾಘ್ರನನ್ನ ಗುರುತಿಸಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಆರೋಪಿಸಿದ್ದಾರೆ.

ಕೇವಲ ಒಂದೇ ತಿಂಗಳಲ್ಲಿ ಹುಲಿ ದಾಳಿಗೆ ಇಬ್ಬರು ರೈತರು ಬಲಿಯಾಗಿರುವ ಘಟನೆಯನ್ನ ಹಗುರವಾಗಿ ಪರಿಗಣಿಸದಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತೇಜಸ್ವಿ ಸಲಹೆ ನೀಡಿದ್ದಾರೆ.