ತುಕಾರಾಮ್ ಅಂದರೆ ಅಭಿವೃದ್ಧಿ- ಸಿ.ಎಂ ಮೆಚ್ಚುಗೆ

Spread the love

ಸಂಡೂರು: ಈ.ತುಕಾರಾಮ್ ಅವರು ಶಾಸಕರಾದ ಮೇಲೆ 1200 ಕೋಟಿ ಅನುದಾನವನ್ನು ಸಂಡೂರು ಜನತೆಗಾಗಿ ತಂದಿದ್ದಾರೆ. ಅಭಿವೃದ್ಧಿ ಎಂದರೆ ತುಕಾರಾಮ್ ಎಂದು ಸಿ.ಎಂ.ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಡೂರು ತಾಲ್ಲೂಕಿನ ಸಾಧನಾ ಸಮಾವೇಶವನ್ನು ಉದ್ಘಾಟಿಸಿ, ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಪೂರ್ಣಗೊಂಡಿರುವ ಸುಮಾರು 400 ಕೋಟಿಗೂ ಅಧಿಕ ಮೊತ್ತದ ಯೋಜನೆಗಳನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.

ಸಂಡೂರಿನಲ್ಲಿ 12 ಸಾವಿರ ಮನೆಗಳನ್ನು ಕಟ್ಟಿ ಕ್ಷೇತ್ರದ ಜನರಿಗೆ ಹಂಚಿಕೆ ಮಾಡಿರುವುದರ ಶ್ರೇಯಸ್ಸು ಸಂತೋಷ್ ಲಾಡ್- ಈ.ತುಕಾರಾಮ್ ಜೋಡಿಗೆ ಸಲ್ಲಬೇಕು ಎಂದು ಶ್ಲಾಘಿಸಿದ ಸಿಎಂ,ನನ್ನ ವಿರುದ್ಧ ಷಡ್ಯಂತ್ರ, ಪಿತೂರಿ ನಡೆಸುತ್ತಿರುವ ಬಿಜೆಪಿಯನ್ನು ಉಪ ಚುನಾವಣೆಯಲ್ಲಿ ಸೋಲಿಸಿ ಪಾಠ ಕಲಿಸಿ ಎಂದು ಕರೆ ನೀಡಿದರು.

ಈ.ತುಕಾರಾಮ್ ಅವರು ನನ್ನ ಬಲವಂತಕ್ಕೆ, ಪಕ್ಷದ ಮಾತಿಗೆ ಬೆಲೆ ಕೊಟ್ಟು ಲೋಕಸಭೆಗೆ ಸ್ಪರ್ಧಿಸಿದರು. ಈ.ತುಕರಾಮ್ ಅವರು ಸಂಡೂರು ಜನತೆಯ ಮೇಲೆ ಬಹಳ ಪ್ರೀತಿ, ವಿಶ್ವಾಸ ಇಟ್ಟುಕೊಂಡಿದ್ದಾರೆ. ಈ.ತುಕಾರಾಮ್ ಅವರಂತಹ ಕಾಯಕ ನಾಯಕ ನಿಮಗೆ ಬೇರೆಲ್ಲೂ ಸಿಗುವುದಿಲ್ಲ. ಹೀಗಾಗಿ ಸಂಡೂರು ಉಪಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನಿಮ್ಮ ಆಶೀರ್ವಾದ ಹೀಗೇ ಮುಂದುವರೆಯಲಿ ಎಂದು ಸಿಎಂ ವಿನಂತಿಸಿದರು.

ಸಂಡೂರಿನ ಜನರ ತೆರಿಗೆ ಹಣಕ್ಕೆ, ರಾಜ್ಯದ ಜನರ ತೆರಿಗೆ ಹಣಕ್ಕೆ ಕೇಂದ್ರ ಸರ್ಕಾರ ನಿರಂರವಾಗಿ ವಂಚಿಸುತ್ತಿದೆ. ನಿಮಗೆ, ನಮಗೆ ಕೇಂದ್ರದಿಂದ ಬರಬೇಕಾದ ಹಣವನ್ನು ಕೊಡಿ ಎಂದು ಮೋದಿಗೆ ಕೇಳುವ ಧೈರ್ಯ ಬಿಜೆಪಿಗೂ ಇಲ್ಲ, ವಿಜಯೇಂದ್ರಗೂ ಇಲ್ಲ ಇದು ಸಂಡೂರಿನ ಜನತೆಗೆ, ರಾಜ್ಯದ ಜನತೆಗೆ ಬಗೆದ ದ್ರೋಹ ಅಲ್ಲವೇ ಎಂದು ಸಿಎಂ ಪ್ರಶ್ನಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, ಸಚಿವರಾದ ಸಂತೋಷ್ ಲಾಡ್, ಸತೀಶ್ ಜಾರಕಿಹೊಳಿ,ಸಂಸದ ಈ.ತುಕಾರಾಂ, ಶಾಸಕರುಗಳಾದ ಲತಾ ಮಲ್ಲಿಕಾರ್ಜುನ್, ಕಂಪ್ಲಿ ಗಣೇಶ್, ಶ್ರೀನಿವಾಸ್, ನಾಗರಾಜ್, ನಾರಾ ಭರತ್ ರೆಡ್ಡಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಧ್ಯಕ್ಷ ಮೆಹರೂಜ್ ಖಾನ್, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್, ಹಿರಿಯ ನಾಯಕರಾದ ಅಲ್ಲಂ ವೀರಭದ್ರಪ್ಪ, ಲಿಡ್ಕರ್ ಅಧ್ಯಕ್ಷ ನಾಗರಾಜ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.