ಉಸಿರುಗಟ್ಟಿ ಮೂವರು ಯುವಕರು ಸಾವು

ಬೆಳಗಾವಿ: ಹೊಗೆಯಿಂದ ಉಸಿರುಗಟ್ಟಿ
ಮೂವರು ಯುವಕರು ದಾರುಣವಾಗಿ ಮೃತಪಟ್ಟಿರುವ ಘಟನೆ
ಬೆಳಗಾವಿಯ ಅಮನ್ ನಗರದಲ್ಲಿ ನಡೆದಿದೆ.

ರಾತ್ರಿ ರೂಮ್​​ನಲ್ಲಿ ಮಲಗಿದ್ದ ನಾಲ್ವರು ಯುವಕರಲ್ಲಿ ಮೂವರು ಯುವಕರು ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ.

ರಿಹಾನ್ ಮತ್ತಿ(22), ಸರ್ಫರಾಜ್(22), ಮೊಯಿನ್‌ ನಲಬಂದ್‌(22) ಮೃತಪಟ್ಟ‌ ದುರ್ದೈವಿಗಳು.

ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಶವ ಪರೀಕ್ಷೆ ನಡೆಸಿ,ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ರಾತ್ರಿ ನಾಮಕರಣ ಕಾರ್ಯಕ್ರಮ ಮುಗಿಸಿಕೊಂಡು ನಾಲ್ವರು ಯುವಕರು ಬಂದಿದ್ದಾರೆ. ಬಹಳ ಚಳಿ ಇದ್ದ ಕಾರಣ ರೂಮ್‌ನಲ್ಲಿ ಬೆಂಕಿ ಹಾಕಿಕೊಂಡು ಮಲಗಿದ್ದಾರೆ.ಜತೆಗೆ ಸೊಳ್ಳೆ ಕಾಟ‌ ತಪ್ಪಿಸಲು ನಾಲ್ಕೈದು ಮಸ್ಕಿಟೋ ಕಾಯಿಲ್ ಹಾಕಿ ಮಲಗಿದ್ದಾರೆ.

ಕಿಟಕಿಗಳನ್ನು ಬಂದ್ ಮಾಡಿದ್ದರಿಂದ‌ ಹೊಗೆ ಹೊರಹೋಗಲು ಸಾಧ್ಯವಾಗದೆ ಇಡೀ ಕೊಠಡಿ ತುಂಬಾ ಹೊಗೆ ಆವರಿಸಿ ಉಸಿರುಗಟ್ಟಿ ಮೂವರು ಸಾವನ್ನಪ್ಪಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.