ಬೆಂಗಳೂರು: ಬೆಂಗಳೂರು ನಗರಕ್ಕೆ ಹಲವು ವರ್ಷಗಳಿಂದ ಕುಡಿಯುವ ನೀರು ಕೊಡುತ್ತಿದ್ದ ಅರ್ಕಾವತಿ ನದಿಯ ತಿಪ್ಪಗೊಂಡನಹಳ್ಳಿ ಜಲಾಶಯ ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಹೇಳಿದೆ.
ತಿಪ್ಪಗೊಂಡನಹಳ್ಳಿ ಜಲಾಶಯ ಉಳಿಸಿಕೊಳ್ಳುವ ಅನಿವಾರ್ಯತೆ
ಹೋರಾಟದಲ್ಲಿ ಬೆಂಗಳೂರನ್ನು ಪ್ರೀತಿಸುವವರು ಮತ್ತು ನಗರದ ನಾಗರೀಕರೆಲ್ಲ ಭಾಗವಹಿಸಬೇಕಾದ ಅನಿವಾರ್ಯತೆ ಹಾಗೂ ಸಂದಿಗ್ಧತೆ ಇದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯಧ್ಯಕ್ಷ ಸೀತಾರಾಮ್ ಗುಂಡಪ್ಪ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಹೋರಾಟದ ಭಾಗವಾಗಿ ಇದೇ ಜೂನ್ 28ರಂದು ನಗರದ ಬಳ್ಳಾರಿ ರಸ್ತೆಯ ಅಖಿಲ ಭಾರತ ವೀರಶೈವ ಮಹಾಸಭಾ ಸಭಾಂಗಣದಲ್ಲಿ ಅನೇಕ ಹೋರಾಟಗಾರರು ಹಾಗೂ ತಜ್ಞರೊಂದಿಗೆ ವಿಚಾರ ಸಂಕಿರಣ ಆಯೋಜಿಸುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ಸೀತಾರಾಮ್ ಗುಂಡಪ್ಪ ತಿಳಿಸಿದರು.
ಹೋರಾಟ ಸಮಿತಿಯ ಸಂಚಾಲಕ ಶಶಿಧರ್ ಆರಾಧ್ಯ ಮಾತನಾಡಿ ಎಲ್ಲ ಸರ್ಕಾರಗಳು ಬೆಂಗಳೂರು ನಗರವನ್ನು ರಿಯಲ್ ಎಸ್ಟೇಟ್ ಅಡ್ಡೆ ಮಾಡಿಕೊಂಡು, ಕೊಳ್ಳೆ ಹೊಡೆಯುತ್ತಿವೆಯೇ ಹೊರತು ಭವಿಷ್ಯದಲ್ಲಿ ನಾಗರಿಕರಿಗೆ ಜಲಮೂಲಗಳನ್ನು ಉಳಿಸಿಕೊಳ್ಳುವ ಯಾವುದೇ ಭದ್ಧತೆ ಇವರಲ್ಲಿ ಕಾಣುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಈಗಾಗಲೇ ಜಲಾಶಯದ 10 ಕಿ.ಮೀ ವ್ಯಾಪ್ತಿಯಲ್ಲಿ ನಗರೀಕರಣ ಮತ್ತು ಕೈಗಾರಿಕೀಕರಣವನ್ನು ನಿಯಂತ್ರಿಸಲು ಸಂರಕ್ಷಣಾ ವಲಯವೆಂದು ಗುರುತಿಸಿದೆ, ಆದರೂ ಜಲಾಶಯವು ಅನೇಕ ವರ್ಷಗಳಿಂದ ಅಕ್ರಮ ಮರಳು ಹಾಗೂ ಕಲ್ಲು ಗಣಿಗಾರಿಕೆ, ಕೈಗಾರಿಕೆಗಳ ತ್ಯಾಜ್ಯ ವಿಸರ್ಜನೆ, ಬೆಂಗಳೂರಿನ ಒಳಚರಂಡಿ ಹರಿವು, ಅನುಚಿತ ಘನ ತ್ಯಾಜ್ಯ ವಿಲೇವಾರಿ, ನೀಲಗಿರಿ ಏಕ ಸಂಸ್ಕೃತಿ, ತೆರೆದ ಪಿಟ್ ಕ್ವಾರಿ
ಗಳಂತಹ ಅನೇಕ ನೈಸರ್ಗಿಕ ವಿರೋಧಿ ಕೃತ್ಯಗಳ ಪರಿಣಾಮಗಳಿಂದಾಗಿ ಈ ಜಲಾಶಯವು ಅಪಾಯದ ಅಂಚಿನಲ್ಲಿದೆ ವಿಷಾದಿಸಿದರು.
ಕೂಡಲೇ ಜಲಾಶಯವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸಂಘಟನಾತ್ಮಕ ಹೋರಾಟವನ್ನು ಮಾಡಬೇಕಾಗಿದೆ. ಇಲ್ಲಿನ ಬಫರ್ ವಲಯವನ್ನು 500 ಮೀಟರ್ ಗಳಿಂದ ಕೇವಲ 30 ಮೀಟರ್ ಗೆ ಇಳಿಸಲಾಗುತ್ತದೆ ಎಂಬ ಸರ್ಕಾರದ ನಿರ್ಣಯವನ್ನು ನಾವೆಲ್ಲರೂ ಒಗ್ಗಟ್ಟಾಗಿ ವಿರೋಧಿಸಬೇಕಾಗಿದೆ ಎಂದು ಕರೆ ನೀಡಿದರು.
ಇದರಿಂದ ಜಲಾಶಯವು ಇನ್ನಷ್ಟು ಕಲುಷಿತವಾಗಿ ಮತ್ತು ಅಕ್ಕಪಕ್ಕದ ನೈಸರ್ಗಿಕ ಅಸಮತೋಲನಕ್ಕೆ ಕಾರಣವಾಗುತ್ತದೆ. ಈಗಾಗಲೇ ನೈಸರ್ಗಿಕ ನದಿ ಹರಿವಿನ ನಷ್ಟವನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಮಳೆ ನೀರಿನ ಒಳಹರಿವು ಕಡಿಮೆಯಾಗುವುದು ಹಾಗೂ ಸ್ಥಳೀಯ ಜೀವವೈವಿಧ್ಯತೆಗೆ ಧಕ್ಕೆಯಾಗುತ್ತದೆ ಎಂದು ಶಶಿಧರ್ ಆರಾಧ್ಯ ವಿವರಿಸಿದರು.
ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಕುಮಾರ್ ಮಾತನಾಡಿ ಆಮ್ ಆದ್ಮಿ ಪಕ್ಷವು ಸ್ಥಳೀಯ ರೈತರು,ಪರಿಸರ ಹೋರಾಟಗಾರರು, ಕೆರೆ ತಜ್ಞರು ಹಾಗೂ ನಾಗರಿಕ ಸಂಘಗಳ ಜೊತೆಗೂಡಿ ನಡೆಯುತ್ತಿರುವ ಈ ಹೋರಾಟದಲ್ಲಿ ತಜ್ಞರುಗಳಾದ ಎಂ. ಎನ್. ತಿಪ್ಪೇಸ್ವಾಮಿ , ಕಾತ್ಯಾಯಿನಿ ಚಾಮರಾಜು , ವಿಶ್ವನಾಥ್, ಸಿಂಹಾದ್ರಿ, ರಾಮಪ್ರಸಾದ್ ಸೇರಿದಂತೆ ಅನೇಕ ಹೋರಾಟಗಾರರು, ತಜ್ಞರು ಭಾಗವಹಿಸಲಿದ್ದಾರೆ.
ಮುಂಬರುವ ಹೋರಾಟಗಳ ರೂಪುರೇಷೆಯ ವಿವರಗಳನ್ನು ಸಭೆಯಲ್ಲಿ ಚರ್ಚಿಸಲಾಗುತ್ತದೆ. ಬೆಂಗಳೂರನ್ನು ಪ್ರೀತಿಸುವ ಪ್ರತಿಯೊಬ್ಬ ನಾಗರಿಕರು ಭಾಗವಹಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರುಗಳಾದ ಅನಿಲ್ ನಾಚಪ್ಪ, ಪುಟ್ಟಣ್ಣ ಗೌಡ ,ಮೋಹನ್ ರಾಜ್, ಅಂಜನಾ ಗೌಡ, ಜೋಶ್ವ ಸಿಂಟು, ಕಾರ್ತಿಕ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.