ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಅವರಿಗೆ ರಾಜ್ಯದ ರೈತರ ಬಗ್ಗೆ ನಿಜಕ್ಕೂ ಕಾಳಜಿ ಇದ್ದಲ್ಲಿ ಕೂಡಲೇ ಟಿಟಿಡಿಯಿಂದ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಆಮ್ ಆದ್ಮಿ ಪಕ್ಷ ಸವಾಲು ಹಾಕಿದೆ.
ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ ಟ್ರಸ್ಟ್ ಅನೇಕ ವರ್ಷಗಳಿಂದ ಶುದ್ಧ ತುಪ್ಪವನ್ನು ಪೂರೈಸುತ್ತಿದ್ದ ರಾಜ್ಯದ ಕೆಎಂಎಫ್ ಅನ್ನು ಕಪ್ಪುಪಟ್ಟಿಗೆ ಸೇರಿಸಿ, 250 ಕೋಟಿಗೂ ಹೆಚ್ಚು ಮೊತ್ತದ ನಕಲಿ ತುಪ್ಪವನ್ನು ಉತ್ತರಕಾಂಡದ ವ್ಯಕ್ತಿಯೊಬ್ಬನಿಂದ ಪಡೆದು ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಅಶೋಕ್ ಮೃತ್ಯುಂಜಯ ಅವರು ಕೇವಲ ಕಾಂಗ್ರೆಸ್ ಸರ್ಕಾರ ಇರುವಾಗ ಅನೇಕ ಕೋಮು ಪ್ರಚೋದಿತ ವಿಷಯಗಳ ಬಗ್ಗೆ ಮಾತನಾಡುವ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಅವರಿಗೆ ನಿಜಕ್ಕೂ ರಾಜ್ಯದ ರೈತರ ಬಗ್ಗೆ ಕಾಳಜಿ ಇದ್ದಲ್ಲಿ ಕೂಡಲೇ ಎನ್ ಡಿ ಎ ಮೈತ್ರಿಕೂಟದ ಆಂಧ್ರ ಪ್ರದೇಶ ಸರ್ಕಾರದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಅವರೊಂದಿಗೆ ಮಾತನಾಡಿ ಮತ್ತೆ ಕೆಎಂಎಫ್ ಸಂಸ್ಥೆಯಿಂದ ತುಪ್ಪವನ್ನು ಪೂರೈಸುವ ಮರುಗುತ್ತಿಗೆಯನ್ನು ಕೊಡಿಸಲಿ ಎಂದು ಸವಾಲು ಹಾಕಿದರು.
ಅನೇಕ ವರ್ಷಗಳಿಂದ ಪೂರೈಸಿಕೊಂಡು ಬರುತ್ತಿದ್ದ ಕೆಎಂಎಫ್ ಸಂಸ್ಥೆಗೆ ನೀಡಬೇಕಿದ್ದ ಗುತ್ತಿಗೆ ರದ್ದಾದ ಕಾರಣದಿಂದ ರಾಜ್ಯದ ಬಡ ರೈತರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ಅವರ ಕೂಗನ್ನು ಯಾರೂ ಕೇಳುವವರಿಲ್ಲದಂತಾಗಿದೆ.
ತೇಜಸ್ವಿ ಸೂರ್ಯ ತನಗೆ ಸಂಬಂಧಪಡದ ಎಲ್ಲ ವಿಚಾರಗಳಲ್ಲಿಯೂ ಮೂಗು ತೂರಿಸುವುದನ್ನು ಬಿಟ್ಟು ಕೂಡಲೇ ರಾಜ್ಯದ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ತಮ್ಮ ಸಂಸದೀಯ ಪ್ರಭಾವವನ್ನು ಬಳಸಿಕೊಂಡು ಅನ್ಯಾಯವನ್ನು ಸರಿಪಡಿಸಿದರೆ ಅವರ ಮುಂದಿನ ರಾಜಕೀಯ ಭವಿಷ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಅಶೋಕ್ ಮೃತ್ಯುಂಜಯ ತಿಳಿಸಿದರು.
