ಮೈಸೂರು: ಸರಗೂರಿನ ಬಡಗಲಪುರದಲ್ಲಿ ಗ ಹುಲಿ ಸೆರೆ ಕಾರ್ಯಾಚರಣೆ ವೇಳೆ ಜಮೀನಿನಲ್ಲಿ ಹತ್ತಿ ಬಿಡಿಸುತ್ತಿದ್ದ ರೈತ ವ್ಯಗ್ರನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ 50 ಲಕ್ಷ ಪರಿಹಾರ ನೀಡುವಂತೆ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಆಗ್ರಹಿಸಿದ್ದಾರೆ.
ಮಹದೇವ್ ಎಂಬ ರೈತನ ಮೇಲೆ ಹುಲಿ ಭಿಕಾರವಾಗಿ ದಾಳಿ ನಡೆಸಿದ್ದು, ತೀವ್ರ ಗಾಯಗೊಂಡಿರುವ ರೈತ ಮಹಾದೇವ್ ಅವರಿಗೆ ಕೂಡಲೇ ಸರ್ಕಾರ 50 ಲಕ್ಷ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಮುಖ, ಕೈ, ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕುಸಿದು ಬಿದ್ದಿರುವ ವಿಡಿಯೋ ತುಣುಕುಗಳನ್ನು ನೋಡಿ ಆಘಾತ ತಂದಿದೆ ಎಂದು ತಿಳಿಸಿದ್ದಾರೆ.
ಕೂಂಬಿಂಗ್ ನಡೆಯುತ್ತಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯರಿಗೆ ಮಾಹಿತಿ ನೀಡಿ ಎಚ್ಚರಿಸ ಬೇಕಿತ್ತು. ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೆ ಈ ರೀತಿಯ ಘಟನೆ ನಡೆಯುತ್ತಿರಲಿಲ್ಲ. ಒಂದು ವೇಳೆ ಕೂಂಬಿಂಗ್ ಮಾಹಿತಿ ನೀಡಿಲ್ಲ ಎಂದರೆ ಸಂಬಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ತೇಜಸ್ವಿ ಕಿಡಿಕಾರಿದ್ದಾರೆ