ಕಲೆಯೂ ಸಮಾಜದಲ್ಲಿ ಸಂವೇದನೆ ಸಾಮರಸ್ಯ ಉತ್ತೇಜಿಸುತ್ತದೆ: ಗೆಹ್ಲೋಟ್

ಮೈಸೂರು: ಸಂಗೀತವು ಮನಸ್ಸಿನ ಸಂಘರ್ಷಗಳನ್ನು ಶಾಂತಗೊಳಿಸುವ, ಹಿಂಸೆಯನ್ನು ಕರುಣೆಯಾಗಿ ಪರಿವರ್ತಿಸುವ ಮತ್ತು ಮಾನವೀಯತೆಯನ್ನು ಏಕತೆಯಲ್ಲಿ ಬಂಧಿಸುವ ಶಕ್ತಿಯನ್ನು ಹೊಂದಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಲೆಯ ಉದ್ದೇಶ ಕೇವಲ ಅದನ್ನು ಪ್ರದರ್ಶಿಸುವುದಲ್ಲ, ಬದಲಾಗಿ ಸಮಾಜದಲ್ಲಿ ಸಂವೇದನೆ ಮತ್ತು ಸಾಮರಸ್ಯವನ್ನು ಉತ್ತೇಜಿಸುವುದಾಗಿದೆ ಎಂದು ಹೇಳಿದರು.

ಭಾರತೀಯ ಸಂಸ್ಕೃತಿಯಲ್ಲಿ ಸಂಗೀತ ಮತ್ತು ಕಲೆಗೆ ಬಹಳ ಉನ್ನತ ಸ್ಥಾನವಿದೆ. ನಮ್ಮ ವೇದಗಳು “ನಾದೋಸ್ಮಿ ಪರಂ ಬ್ರಹ್ಮ” ಎಂದು ಹೇಳುತ್ತವೆ, ಅಂದರೆ ಶಬ್ದವೇ ಪರಮಾತ್ಮ. ಈ ಶಬ್ದವು ಮಾನವರಲ್ಲಿ ಅಡಗಿರುವ ಸೌಂದರ್ಯ, ಕರುಣೆ ಮತ್ತು ಪ್ರೀತಿಯನ್ನು ಜಾಗೃತಗೊಳಿಸುವ ಶಕ್ತಿಯಾಗಿದೆ. ಸಂಗೀತವು ಹೃದಯವನ್ನು ಮೃದುಗೊಳಿಸುತ್ತದೆ, ಆಲೋಚನೆಗಳನ್ನು ಶುದ್ಧೀಕರಿಸುತ್ತದೆ ಮತ್ತು ಆತ್ಮವನ್ನು ಉನ್ನತೀಕರಿಸುತ್ತದೆ ಎಂದು ತಿಳಿಸಿದರು.

ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಯುಗದಲ್ಲಿ, ಕಲಾವಿದರು ಮನುಷ್ಯರಲ್ಲಿ ಸಂವಹನ, ಸಹಾನುಭೂತಿ ಮತ್ತು ಸಾಮರಸ್ಯಕ್ಕೆ ದಾರಿ ಮಾಡಿಕೊಡುವ ಸೇತುವೆಯಾಗಿದ್ದಾರೆ ಎಂದು ಬಣ್ಣಿಸಿದರು.

ವಿದ್ಯಾರ್ಥಿಗಳೇ, ನಿಮ್ಮ ಕಲೆಯನ್ನು ಸಾರ್ವಜನಿಕ ಕಲ್ಯಾಣ ಮತ್ತು ರಾಷ್ಟ್ರ ನಿರ್ಮಾಣದ ಉದ್ದೇಶಕ್ಕೆ ಬಳಸಿಕೊಳ್ಳಿ. ನೆನಪಿಡಿ, ಕಲೆಯು ಮಾನವೀಯತೆಯ ಸೇವೆಗೆ ಸಮರ್ಪಿತವಾದಾಗ ಮಾತ್ರ ಅದು ಪೂರ್ಣಗೊಳ್ಳುತ್ತದೆ. ನಿಮ್ಮ ಸಂಗೀತ, ನೃತ್ಯ, ನಾಟಕ ಮತ್ತು ಪ್ರದರ್ಶನ ಕಲೆಗಳ ಮೂಲಕ ನೀವು ದೇಶದ ಸಾಂಸ್ಕೃತಿಕ ಏಕತೆಯನ್ನು ಬಲಪಡಿಸಬಹುದು ಎಂದು ರಾಜ್ಯಪಾಲರು‌ ಸಲಹೆ ನೀಡಿದರು.

ಸ್ವತಂತ್ರ ಭಾರತದಲ್ಲಿ ಖಯಾಲ್ ಗಾಯನಕ್ಕೆ ಹೊಸ ಗುರುತನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಹೆಸರಾಂತ ಗಾಯಕಿ, ಗೌರವಾನ್ವಿತ ಗಂಗೂಬಾಯಿ ಹಾನಗಲ್ ಅವರ ಹೆಸರಿನಲ್ಲಿ ಸ್ಥಾಪನೆಯಾದ ಈ ವಿಶ್ವವಿದ್ಯಾಲಯವು ಸಂಸ್ಕೃತಿ, ಕಲೆ ಮತ್ತು ಸಂಗೀತದ ಅಮೂಲ್ಯ ಪರಂಪರೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿದೆ ಎಂದು ಗೆಹ್ಲೋಟ್ ಶ್ಲಾಘಿಸಿದರು.

ಈ ವಿಶ್ವವಿದ್ಯಾಲಯವು ಭಾರತೀಯ ಸಂಗೀತ ಮತ್ತು ಪ್ರದರ್ಶನ ಕಲೆಗಳ ಕ್ಷೇತ್ರದಲ್ಲಿ ಒಂದು ದಾರಿದೀಪವಾಗಿ ಕಾರ್ಯನಿರ್ವಹಿಸುತ್ತದೆ. ಸಂಗೀತ ಮತ್ತು ಪ್ರದರ್ಶನ ಕಲೆಗಳಿಗೆ ತನ್ನ ಸಮರ್ಪಿತ ಕೊಡುಗೆಗಳ ಮೂಲಕ ತನಗಾಗಿ ಒಂದು ವಿಶಿಷ್ಟ ಗುರುತನ್ನು ಕೆತ್ತಿಕೊಂಡಿದೆ. ಇದು ಭಾರತೀಯ ಸಂಸ್ಕೃತಿಯ ಚೈತನ್ಯವಾದ ಸಂಗಿತಂ ಸರ್ವಭಾಷು ಮೌನಂ ಅನ್ನು ಸಾಕಾರಗೊಳಿಸುತ್ತದೆ ಎಂದು ಹೇಳಿದರು.

ಇಂದಿನ ಘಟಿಕೋತ್ಸವವು ಕಲೆ, ಆಧ್ಯಾತ್ಮಿಕ ಅಭ್ಯಾಸ ಮತ್ತು ಸಂಸ್ಕೃತಿಯ ಸಂಗಮದ ಆಚರಣೆಯಾಗಿದೆ. ಈ ಘಟಿಕೋತ್ಸವ ಸಮಾರಂಭದಲ್ಲಿ, ಗೌರವಾನ್ವಿತ ಜನಾರ್ದನ, ಪ್ರೊಫೆಸರ್ ಬಿ.ಆರ್. ಶೇಷಾದ್ರಿ ಅಯ್ಯಂಗಾರ್ ಮತ್ತು ಜಿ.ಎಂ. ಶಿವಪ್ರಸಾದ್ ಅವರಿಗೆ ಗೌರವ ಪದವಿಗಳನ್ನು ಪ್ರದಾನ ಮಾಡುವ ಮೂಲಕ ಗೌರವಿಸಲಾಗಿದೆ. ಈ ಮಹನೀಯರ ಅತ್ಯುತ್ತಮ ಸಾಧನೆಗಳು ಮತ್ತು ಸಮಾಜದ ಪ್ರಗತಿಗೆ ನೀಡಿದ ಕೊಡುಗೆಗಾಗಿ ಅವರನ್ನು ಅಭಿನಂದಿಸುತ್ತೇನೆ ಮತ್ತು ಈ ಮಹನೀಯರು ಸಮಾಜ, ಸಾರ್ವಜನಿಕ ಹಿತಾಸಕ್ತಿ ಮತ್ತು ದೇಶದ ಹಿತದೃಷ್ಟಿಯಿಂದ ಕೆಲಸ ಮಾಡುವುದನ್ನು ಮುಂದುವರಸಲಿ ಎಂದು ಆಶಿಸುತ್ತೇನೆ ಎಂದು ರಾಜ್ಯಪಾಲರು ಹೇಳಿದರು.

ಸಮಾರಂಭದಲ್ಲಿ ಕೇರಳದ ಕಲಾಮಂಡಲ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಅನಂತ್ಕೃಷ್ಣನ್, ಕುಲಪತಿ ಪ್ರೊ.ನಾಗೇಶ್ ವಿ ಬೆಟ್ಟಕೋಟೆ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.