ಮೈಸೂರು: ಮೈಸೂರಿನಿಂದ ಗುಂಡ್ಲುಪೇಟೆ ಬಳಿಯ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುತ್ತಿದ್ದ ಕಾರಿನ ಮೇಲೆ ಟ್ಯಾಂಕರ್ ಲಾರಿ ಉರುಳಿ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ನಂಜನಗೂಡು ಬಳಿ ನಡೆದಿದೆ.
ನಂಜನಗೂಡು ತಾಲೂಕಿನ ಮೈಸೂರು-ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿಯ ಸಿಂಧುವಳ್ಳಿಪುರ ಗ್ರಾಮದ ಬಳಿ ಈ ದುರ್ಘಟನೆ ನಡೆದಿದ್ದು,
ಮಕ್ಕಳು ಸೇರಿದಂತೆ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರಿನಲ್ಲಿ ತೆರಳುತ್ತಿದ್ದ ಕುಟುಂಬಸ್ಥರು ಮೈಸೂರಿನ ನಿವಾಸಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟಿರುವ ಕಾರಿನ ಚಾಲಕನ ಮೃತದೇಹವನ್ನು ನಂಜನಗೂಡಿನ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಆರು ಮಂದಿಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಯ ತುರ್ತು ಘಟಕದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ನಂಜನಗೂಡಿನ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಸಿದ್ದರಾಜು, ಮಾದೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಪಘಾತಕ್ಕೆ ಕಾರಣವಾದ ಟ್ಯಾಂಕರ್ ಮತ್ತು ಜಖಂಗೊಂಡಿರುವ ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.