ಹೊಸಬಾಳೆ ವಿರುದ್ಧ ಕ್ರಮಕ್ಕೆ ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಆಗ್ರಹ

Spread the love

ಮೈಸೂರು: ಸಂವಿಧಾನ ಪೀಠಿಕೆಯಿಂದ ಸಮಾಜವಾದಿ, ಧರ್ಮನಿರಪೇಕ್ಷ ಪದಗಳನ್ನು ಕೈಬಿಡಬೇಕು ಎಂದು ಹೇಳಿಕೆ ನೀಡಿರುವ ಆರ್‌ಎಸ್‌ಎಸ್ ಸಹಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ.

ದತ್ತಾತ್ರೇಯ ಹೊಸಬಾಳೆ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದವರು ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ತಹಶೀಲ್ದಾರ್ ರೇಖಾ ಅವರ ಮೂಲಕ ರಾಷ್ಟ್ರಪತಿ ಗಳಿಗೆ ಮನವಿ ಸಲ್ಲಿಸಿದ್ದಾರೆ.

ಈ ವೇಳೆ ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎಸ್ ಮಾತನಾಡಿ,
ಸಂವಿಧಾನದ ಪೀಠಿಕೆಯಿಂದ ಸಮಾಜವಾದ ಮತ್ತು ಜಾತ್ಯತೀತ ಪದಗಳನ್ನು ತೆಗೆದು ಹಾಕಬೇಕು ಎಂಬ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆ ಅತ್ಯಂತ ಪ್ರಚೋದನಕಾರಿಯಾಗಿದೆ, ಕೋಮು ಸಾಮರಸ್ಯ ಮತ್ತು ದೇಶದ ಜಾತ್ಯತೀತ ತತ್ವಗಳಿಗೆ ಗಂಭೀರ ಅಪಾಯ ಉಂಟು ಮಾಡುತ್ತವೆ ಎಂದು ಕಿಡಿಕಾರಿದರು.

ಹಿಂದೂಗಳೆಲ್ಲ ಒಂದು ಎನ್ನುವ ಆರ್‌ಎಸ್‌ಎಸ್‌ಗೆ ಜಾತ್ಯತೀತ, ಸಮಾಜವಾದ ಅಂದರೆ ಅಸಹನೆ, ಸಮಾಜವಾದ ಮತ್ತು ಜಾತ್ಯತೀತ ಪದಗಳು ಮನುಸ್ಮೃತಿಗೆ ಸಂಪೂರ್ಣ ವಿರುದ್ಧವಾದುದು, ಹಾಗಾಗಿ ಜಾತ್ಯತೀತ ಪದವನ್ನು ಆರ್‌ಎಸ್‌ಎಸ್‌ ವಿರೋಧಿಸುತ್ತಿದೆ. ಸಮಾಜವಾದಿ ಮತ್ತು ಜಾತ್ಯತೀತ ಸಿದ್ಧಾಂತ ದೇಶದ ಐಕ್ಯತೆಗೆ ಮುಖ್ಯ. ಆದರೆ, ಹಿಂದುತ್ವವಾದಿಗಳಿಗೆ ಮಾತ್ರ ಇವು ಅಪಥ್ಯ ಪದಗಳು ಎಂದು ಆರೋಪಿಸಿದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ದೇಶದಲ್ಲಿ ಸಮಾನತೆ ತರುವುದು ಅತಿ ಮುಖ್ಯವಾಗಿತ್ತು. ಅಲ್ಪಸಂಖ್ಯಾತ, ಹಿಂದುಳಿದವರ ಹಾಗೂ ದಲಿತರ ಒಳಿತಿಗಾಗಿ ಸಂವಿಧಾನಕ್ಕೆ 42ನೇ ತಿದ್ದುಪಡಿ ತಂದು ಸಮಾಜವಾದಿ, ಜಾತ್ಯಾತೀತ ಎಂಬ ಪದಗಳನ್ನು ಸಂವಿಧಾನದಲ್ಲಿ ಸೇರಿಸುವ ಕೆಲಸ ಮಾಡಿದರು. ಈ ತಿದ್ದುಪಡಿಯನ್ನು ಸಂಘ ಪರಿವಾರದವರು ಒಪ್ಪುತ್ತಿಲ್ಲ. ಜಾತಿ, ಧರ್ಮಗಳ ಹೆಸರಿನಲ್ಲಿ ಪ್ರಚೋದಿಸುವ ಕೆಲಸ ಮಾಡುತ್ತಲೇ ಇದ್ದಾರೆ. ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಒಗ್ಗಟ್ಟನ್ನು ಒಡೆಯುವ ಕೆಲಸವನ್ನು ಮನುವಾದಿಗಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ವಿಭಜನಕಾರಿ ಹೇಳಿಕೆ ನೀಡಿರುವ ಹೊಸಬಾಳೆ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಪೊಲೀಸರು ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕು ಎಂದು ರಾಷ್ಟ್ರಪತಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಪ್ರಕಾಶ್
ವಿನಂತಿಸಿದ್ದಾರೆ

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್,ರಾಜೀವ್ ಗಾಂಧಿ ಪಂಚಾಯತ್ ರಾಜ್ ಪ್ರಧಾನ ಕಾರ್ಯದರ್ಶಿ ಲೋಕೇಶ್, ಸೇವಾದಳ ಕಾರ್ಯಧ್ಯಕ್ಷ ಮೋಹನ್ ಕುಮಾರ್, ಕೃಷ್ಣಪ್ಪ ( ಗಂಟಯ್ಯ), ಮತ್ತಿತರರು ಹಾಜರಿದ್ದರು.