ಅನಧಿಕೃತ ಕಟೌಟ್: ಕಾಂಗ್ರೆಸ್, ಬಿಜೆಪಿ ನಾಯಕರ ವಿರುದ್ಧ ಕ್ರಮಕ್ಕೆ ಎಎಪಿ ಆಗ್ರಹ

Spread the love

ಬೆಂಗಳೂರು: ಬೆಂಗಳೂರಿನ ಗೋವಿಂದರಾಜನಗರ, ವಿಜಯನಗರ ವ್ಯಾಪ್ತಿಯಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರು ಎಲ್ಲೆಂದರಲ್ಲಿ ಫ್ಲೆಕ್ಸ್, ಕಟೌಟ್ ಹಾಕಿದ್ದು ದಂಡ ವಿಧಿಸುವಂತೆ ಆಪ್ ಆಗ್ರಹಿಸಿದೆ.

ಸ್ಥಳೀಯ ಕಾಂಗ್ರೆಸ್ ಶಾಸಕರಾದ ಎಂ. ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಕೃಷ್ಣ , ಪ್ರದೀಪ್ ಕೃಷ್ಣ, ಬಿಜೆಪಿಯ ಉಮೇಶ್ ಶೆಟ್ಟಿ ಕ್ಷೇತ್ರದಾದ್ಯಂತ ಎಲ್ಲೆಂದರಲ್ಲಿ ಫ್ಲೆಕ್ಸ್ ಗಳನ್ನು ಹಾಕಿರುವುದರಿಂದ ಎಲ್ಲ ಕಡೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಆರೋಪಿಸಿದ್ದಾರೆ.

ಸಾವಿರಾರು ಕೆಜಿ ತೂಕದ ಸರ್ವೆ ಮರಗಳನ್ನು ಬಳಸಿ ವೃತ್ತಾಕಾರದ ಕಟ್ ಔಟ್ ಗಳನ್ನು ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವುದು ಅತ್ಯಂತ ಅಪಾಯಕಾರಿ, ನಿನ್ನೆ ನಾಗರಬಾವಿ ವೃತ್ತದಲ್ಲಿ ಈ ಸರ್ವೆ ಮರಗಳು ಬಿದ್ದು ಅನೇಕರಿಗೆ ಹಾನಿ ಸಹ ಆಗಿದೆ.

ಮುಖ್ಯ ರಸ್ತೆಗಳಲ್ಲಿ ಹಾಕಿರುವ ಬ್ಯಾನರ್ ಗಳು ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿವೆ, ಕೂಡಲೇ ಇವರುಗಳ ವಿರುದ್ಧ ಹೆಚ್ಚಿನ ಮೊತ್ತದ ದಂಡವನ್ನು ಹಾಕಿ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಜಗದೀಶ್ ವಿ. ಸದಂ ಒತ್ತಾಯಿಸಿದ್ದಾರೆ.

ಬ್ರಾಂಡ್ ಬೆಂಗಳೂರು ಎಂಬ ಪರಿಕಲ್ಪನೆಯ ಕನಸನ್ನು ಹೊತ್ತಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ರವರಿಗೆ ಈ ಬಗ್ಗೆ ಮಾಹಿತಿ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಬಿಬಿಎಂಪಿ ಅಧಿಕಾರಿಗಳು ಇದೆಲ್ಲ ನೋಡಿಯೂ ಮೂಕ ಪ್ರೇಕ್ಷಕರಾಗಿ ಕುಳಿತಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದು ಟೀಕಿಸಿದ್ದಾರೆ.

ಈಗಾಗಲೇ ನೂತನ ಜಾಹೀರಾತು ನೀತಿ ಜಾರಿಗೆ ಬಂದಿರುವುದು ಸ್ಥಳೀಯ ಕಾಂಗ್ರೆಸ್ ಶಾಸಕರಿಗೆ ಅರಿವಿಲ್ಲವೇ, ಸಾರ್ವಜನಿಕರ ಜೀವಕ್ಕೆ ಸಂಚಕಾರ ತರುತ್ತಿರುವ ಈ ನಾಯಕರುಗಳ ಚೆಲ್ಲಾಟಗಳನ್ನು ಕೂಡಲೇ ತಪ್ಪಿಸಬೇಕು ಹಾಗೂ ಮುಂಬರುವ ಹಾನಿಗಳನ್ನು ತಪ್ಪಿಸಲು ಕೂಡಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಜಗದೀಶ್ ವಿ ಸದಂ ಆಗ್ರಹಿಸಿದ್ದಾರೆ.