ಮೈಸೂರು: ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಮೈಸೂರು ಮೃಗಾಲಯದ ಪ್ರವಾಸಿಗರಿಗೆ ಮೈಸೂರು ಪಾಕ್ ಮತ್ತು ಗುಲಾಬಿ ನೀಡಿ ಶುಭ ಕೋರಲಾಯಿತು.
ಚಾಮುಂಡೇಶ್ವರಿ ಯುವ ಬಳಗದ ವತಿಯಿಂದ ಮೈಸೂರು ಮೃಗಾಲಯದಲ್ಲಿ ಮೈಸೂರು ಪಾಕ್ ಹಾಗೂ ಗುಲಾಬಿ ವಿತರಿಸುವ ಮೂಲಕ ಪ್ರವಾಸೋದ್ಯಮ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ನಜರ್ಬಾದ್ ನಟರಾಜ್, ಕಾಂಗ್ರೆಸ್ ಮುಖಂಡರಾದ ರಮೇಶ್ ರಾಮಪ್ಪ, ಲೋಕೇಶ್, ಎಸ್ ಎನ್ ರಾಜೇಶ್, ರವಿಚಂದ್ರ, ಕಡಕೋಳ ಶಿವು, ದಿನೇಶ್, ಮಹಾನ್ ಶ್ರೇಯಸ್ ಮತ್ತಿತರರು ಹಾಜರಿದ್ದರು.
ಮೈಸೂರು, ಏ.4: ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದ ಸುಮಾರು 10 ವರ್ಷ 8 ತಿಂಗಳ ಮಿನ್ನಿ ಹೆಣ್ಣು ಒರಾಂಗೂಟಾನ್ ಮೃತಪಟ್ಟಿದೆ.
ಪ್ರಾಣಿ ವಿನಿಮಯ ಕಾರ್ಯಕ್ರಮದಡಿ 2021 ರಲ್ಲಿ ಮಲೇಷಿಯಾ ಮೃಗಾಲಯದಿಂದ ಮಿನ್ನಿಯನ್ನು ಆಮದು ಮಾಡಿಕೊಂಡ ನಂತರ ಸುಮಾರು 4 ವರ್ಷಗಳ ಅವಧಿಯವರೆಗೆ ಮೈಸೂರು ಮೃಗಾಲಯದಲ್ಲಿ ಪ್ರದರ್ಶನಕ್ಕಿಡಲಾಗಿತ್ತು.
ಮಿನ್ನಿಯು ಶ್ವಾಸಕೋಶ ರೋಗದ ಹಿನ್ನೆಲೆಯಲ್ಲಿ ಆಗಾಗ ಉಸಿರಾಟದ ತೊಂದರೆಯಿಂದ ಬಳಲುತಿತ್ತು. ಚಿಕಿತ್ಸೆ ಫಲಿಸದೆ ಮಿನ್ನಿ ನಿಧನ ಹೊಂದಿದೆ.
ಮೈಸೂರು ಮೃಗಾಲಯದ ತಜ್ಞ ಪಶುವೈದ್ಯರಿಂದ ಮೃಗಾಲಯದ ಪರೀಕ್ಷಾ ಕೊಠಡಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಮಿನ್ನಿ ನ್ಯುಮೋನಿಯಾ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿರುವುದಾಗಿ ಪಶುವೈದ್ಯರು ದೃಢಪಡಿಸಿದ್ದಾರೆ.
ಯುನೈಟೆಡ್ ಕಿಂಗ್‌ಡಮ್ ಮತ್ತು ಮಲೇಷಿಯಾ ದೇಶಗಳ ಪಶುವೈದ್ಯ ತಜ್ಞರ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಮೈಸೂರು ಮೃಗಾಲಯದ ಪಶುವೈದ್ಯರ ತಂಡದ ನಿರಂತರ ಪ್ರಯತ್ನಗಳ ನಡುವೆಯೂ ಮಿನ್ನಿಯ ಆರೋಗ್ಯ ಗಂಭೀರವಾಗಿತ್ತು.
ಮೃಗಾಲಯವು ಮಿನ್ನಿಯ ಆರೋಗ್ಯ ಸುಧಾರಣೆಗೆ ಸಾಧ್ಯವಿರುವ ಎಲ್ಲಾ ಬಗೆಯ ಚಿಕಿತ್ಸಾ ವಿಧಾನಗಳನ್ನು ಅನುಸರಿಸಿರುವುದು ಮಾತ್ರವಲ್ಲದೆ ಮಿನ್ನಿಯ ಚೇತರಿಕೆಗೆ ತೀವ್ರ ನಿಗಾ ವಹಿಸಲಾಗಿತ್ತು ಎಂದು ಮೃಗಾಲಯದ ಪ್ರಕಟಣೆ ಸ್ಪಷ್ಟಪಡಿಸಿದೆ.
ಮಿನ್ನಿಯ ಅನಾರೋಗ್ಯದ ಮೂಲ ಕಾರಣಗಳನ್ನು ಅರಿಯುವ ಉದ್ದೇಶದಿಂದ ಹೆಚ್ಚಿನ ತನಿಖೆಗಾಗಿ ಅದರ ಜೈವಿಕ ಮಾದರಿಗಳನ್ನು ಸುಧಾರಿತ ಪ್ರಯೋಗಾಲಯಗಳಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಹಾಗೂ ದೃಢೀಕೃತ ರೋಗ ನಿರ್ಣಯದ ವರದಿಗಾಗಿ ಕಾಯಲಾಗಿದೆ.
ದೃಢೀಕೃತ ರೋಗ ನಿರ್ಣಯ ಪರೀಕ್ಷಾ ವರದಿಗಳು ಅಥವಾ ಸಂಶೋಧನೆಗಳು ಒರಾಂಗೂಟಾನ್ ಪ್ರಾಣಿಗಳಿಗೆ ಸಂಭವಿಸಬಹುದಾದ ಉಸಿರಾಟ ಕಾಯಿಲೆಯ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಹೊಂದಲು ಸಹಾಯಕವಾಗಲಿದೆ ಹಾಗೂ ಭವಿಷ್ಯದಲ್ಲಿ ವನ್ಯಜೀವಿಗಳ ಆರೋಗ್ಯ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದು ಪ್ರಕಟಣೆಯಲ್ಲಿ ಝೂ ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು,ಮಾ.11: ರಾಜ್ಯದಲ್ಲೂ ಹಕ್ಕಿ ಜ್ವರದ ಭೀತಿ ಇರುವುದರಿಂದ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ರಂಗಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರಂಗಸ್ವಾಮಿ ಅವರು, ಮೃಗಾಲಯದಲ್ಲಿರುವ ಪಕ್ಷಿ ಸಂಕುಲಕ್ಕೆ ಯಾವುದೇ ತೊಂದರೆ ಆಗದಂತೆ ತೀವ್ರ ನಿಗಾ ವಹಿಸಲಾಗಿದೆ ಎಂದು ಹೇಳಿದರು.
ಪಾಲಕರು ಒಂದು ಪಕ್ಷಿ ಮನೆಯಿಂದ ಇನ್ನೊಂದು ಮನೆಗೆ ಹೋಗುವಂತಿಲ್ಲ. ಪ್ರವೇಶ ದ್ವಾರದಲ್ಲೇ ಫುಟ್ ಟಿಬ್ಸ್ ಅಳವಡಿಸಿದ್ದೇವೆ.ಅದರಲ್ಲಿ ಕಾಲನ್ನ ಅದ್ದಿ ಜನ ಬರಬೇಕು. ಕೆಲಸ ಮಾಡುವವರು ಕಡ್ಡಾಯವಾಗಿ ಮಾಸ್ಕ್, ಹ್ಯಾಂಡ್ ಗ್ಲೌಸ್ ಹಾಕೊಳ್ಳಲು ಸೂಚಿಸಿದ್ದೇವೆ, ಪಕ್ಷಿಗಳ ಹಿಕ್ಕೆಗಳನ್ನು ಸಂಗ್ರಹಿಸಿ ಪ್ರಯೋಗ ಶಾಲೆಗೆ ಕಳಿಸಿಕೊಡಲಾಗಿದೆ. ನಮ್ಮಲ್ಲಿ ಅಂತಹ ಪ್ರಕರಣಗಳು ಇಲ್ಲಿವರೆಗೂ ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾಂಸಾಹಾರಿ ಪ್ರಾಣಿಗಳಿಗೆ ತರುವ ಚಿಕನ್ ಮಾಂಸವನ್ನ ಪೊಟಾಷಿಯಂ ಪರಮೋನೈಟ್ ನಿಂದ ತೊಳೆದು ಕೊಡಲಾಗುತ್ತದೆ. ರೋಗಗ್ರಸ್ತ ಕೋಳಿ ಮಾಂಸವನ್ನು ಪ್ರಾಣಿಗಳಿಗೆ ಕೊಡುವುದಿಲ್ಲ. ನಮ್ಮಲ್ಲಿರುವ ಪಕ್ಷಿಗಳಿಗೆ ಯಾವುದೇ ರೋಗ ರುಜಿನಗಳು ಕಂಡು ಬಂದಿಲ್ಲ ಎಂದು ತಿಳಿಸಿದರು.
ಬೇಸಿಗೆ ಶುರುವಾಗಿದೆ. ಪ್ರಾಣಿಗಳಿಗೆ ತೊಂದರೆ ಆಗದಂತೆ ಜೆಟ್ ಗಳು, ಸ್ಪ್ರಿಂಕ್ಲರ್ ಗಳ ಮೂಲಕ ನೀರು ಸಿಂಪಡಣೆ ಮಾಡುತ್ತಿದ್ದೇವೆ. ಮೃಗಾಲಯದಲ್ಲಿ ಒಟ್ಟು 45 ಕಡೆ ಈ ರೀತಿ ಜೆಟ್ ಸ್ಪ್ರಿಂಕ್ಲರ್ ಅಳವಡಿಸಲಾಗಿದೆ. ಗೋರಿಲ್ಲಾ, ಚಿಂಪಾಜಿ, ಕೋತಿಗಳಿಗೆ ಫ್ಯಾಮ್ ಏರ್ ಕೂಲರ್ ಗಳ ಅಳವಡಿಕೆ ಜೊತೆಗೆ ಐಸ್ ಬ್ಲಾಗ್, ಕಲ್ಲಂಗಡಿ ಹಣ್ಣುಗಳಂತಹ ತಂಪಾದ ಹಣ್ಣುಗಳನ್ನು ಕೊಡುವ ಮೂಲಕ ಅವುಗಳ ದೇಹದಲ್ಲಿ ತಾಪಮಾನ ಹೆಚ್ಚಾಗದಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಜಿಂಕೆ, ಕಡವೆಗಳಿಗೆ ಅಲ್ಲಲ್ಲಿ ನೀರಿನ ಕೊಳ, ಕೆಸರಿನ ಕೊಳಗಳ ನಿರ್ಮಾಣ ಮಾಡಲಾಗಿದೆ. ನೆರಳಿಗೆ ಶೆಡ್ ನಿರ್ಮಾಣ ಕೂಡ ಮಾಡಲಾಗಿದೆ. ಒಟ್ಟಾರೆ ಬೇಸಿಗೆ ನಿರ್ವಹಣೆಯನ್ನ ಸಮರ್ಪಕವಾಗಿ ನಿರ್ವಹಣೆ ಮಾಡುವ ಕೆಲಸವನ್ನ ನಮ್ಮ ಸಿಬ್ಬಂದಿ ಮಾಡುತ್ತಿದ್ದಾರೆ ಎಂದು ರಂಗಸ್ವಾಮಿ ವಿವರಿಸಿದರು.