ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರೂಪು-ರೇಷೆ ರೂಪಿಸಿ ಯದುವೀರ್‌

ನವದೆಹಲಿ: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಇದನ್ನು ಸರಿದಾರಿಗೆ ತರಲು ಸೂಕ್ತ ಕಾನೂನು ರೂಪು-ರೇಷೆ ರೂಪಿಸಲು ಸಂಬಂಧಪಟ್ಟ ಸಚಿವಾಲಯ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು-ಕೊಡಗು ಸಂಸದ ಯದುವೀರ್‌ ಒಡೆಯರ್‌ ಒತ್ತಾಯಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ಚಳಿಗಾಲದ ಸಂಸತ್‌ ಅಧಿವೇಶನದ ಶುಕ್ರವಾರದ ಕಲಾಪದಲ್ಲಿ ಮಾತನಾಡಿದ ಯದುವೀರ್, ಮೈಸೂರಿನಲ್ಲಿ ಎಂಡಿಎಂಎ ವಶ ಹಾಗೂ ಗಣೇಶ ಮೆರವಣಿಗೆ ವೇಳೆ ಕಲ್ಲುತೂರಾಟ ನಡೆದಿರುವುದು, ಪೊಲೀಸ್‌ ಠಾಣೆ ಮೇಲೆ ದಾಳಿ ಸೇರಿದಂತೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದರು.

ಕಳೆದ ಬಾರಿಯ ಕಲಾಪದಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಿದ್ದೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈಗಾಗಲೇ ಹಲವಾರು ಪ್ರಕರಣಗಳು ವರದಿಯಾಗಿದ್ದು, ಈ ಬಗ್ಗೆ ಕರ್ನಾಟಕ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ನನ್ನ ಕ್ಷೇತ್ರದ ಪ್ರಮುಖ ನಗರವಾದ ಮೈಸೂರಿನಲ್ಲಿ ಬೃಹತ್‌ ಎಂಡಿಎಂಎ ತಯಾರಿಕಾ ಘಟಕವನ್ನು ಪತ್ತೆ ಹಚ್ಚಲಾಗಿತ್ತು. ಇದನ್ನು ಕೂಡ ಪತ್ತೆ ಹಚ್ಚಿದ್ದು ನೆರೆ ರಾಜ್ಯದ ಪೊಲೀಸರು. ನಮ್ಮ ಪರಿಸ್ಥಿತಿ ಹೀಗಿದೆ. ಇಂತಹ ನಿರಂತರ ಘಟನೆಗಳಿಂದ ಸ್ಥಳೀಯ ಆರ್ಥಿಕತೆ ಮೇಲೆ ಭಾರಿ ಪರಿಣಾಮ ಬೀರುತ್ತಿದೆ ಎಂದು ಸಂಸದರು ತಿಳಿಸಿದರು.

ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪಾರಂಪರಿಕ ಹಾಗೂ ಐತಿಹಾಸಿಕ ನಗರವಾದ ಹಂಪಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಿಂದ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ, ಇದರಿಂದ ಸ್ಥಳೀಯ ವ್ಯಾಪಾರ ಕ್ಷೇತ್ರಕ್ಕೆ ಭಾರಿ ಹೊಡೆತ ಬಿದ್ದಿದೆ ಎಂದು ಯದುವೀರ್‌ ಹೇಳಿದರು.

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವಾಲಯವು ಪ್ರವಾಸೋದ್ಯಮ ಕ್ಷೇತ್ರಕ್ಕಾಗಿ ಹೆಚ್ಚಿನ ಭದ್ರತೆ ಹಾಗೂ ಸೌಲಭ್ಯ ಒದಗಿಸುವ ರೀತಿಯಲ್ಲಿ ನೀತಿ ರೂಪಿಸಬೇಕಾದ ಅಗತ್ಯವಿದೆ ಈ‌ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರವಾಸೋದ್ಯಮ ತಾಣಗಳಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸಲು ಸಹ ಕ್ರಮ ಕೈಗೊಳ್ಳಬೇಕು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂಬ ಭರವಸೆ ಇದೆ ಎಂದು ಯದುವೀರ್‌ ಒಡೆಯರ್‌ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರೂಪು-ರೇಷೆ ರೂಪಿಸಿ ಯದುವೀರ್‌ Read More

ಪ್ರಧಾನಿ ವಿರುದ್ಧ ಅವಹೇಳನಕಾರಿ ವೀಡಿಯೋ: ನಾಳೆಯಿಂದ ಬಿಜೆಪಿ ಪ್ರತಿಭಟನೆ

ಮೈಸೂರು: ದೇಶದ ಪ್ರಧಾನಿಯವರನ್ನು ನಿಂದಿಸಿರುವವರಿಗೆ ಕಠಿಣ ಶಿಕ್ಷೆ ಜಾರಿಯಾಗಬೇಕೆಂದು ಆಗ್ರಹಿಸಿ ನಾಳೆಯಿಂದ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಸಂಸದ ಯದುವೀರ್ ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತ ಅವಹೇಳನಕಾರಿ ವೀಡಿಯೋ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸುವ ವೀಡಿಯೋಗಳನ್ನು ಹರಿಯಬಿಟ್ಟಿರುವ ಫಾಹಾದ್‌, ಬಾಸಿಲ್‌, ಸಮೀರ್‌ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟು ಮಾತ್ರ ಸಾಲದು ಇವರಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಯದುವೀರ್‌ ಆಗ್ರಹಿಸಿದ್ದಾರೆ.

ಈ ಸಂಬಂಧ ಮಾಧ್ಯಮ ಹೇಳಿಕೆ ನೀಡಿರುವ ಯದುವೀರ್, ಇಂಥವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ತಕ್ಕ ಪಾಠ ಕಲಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಈಗ ಬಂಧಿತರಾಗಿರುವವರಿಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ.

ಈ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ಜಾರಿಯಾದರೆ ಮುಂದೆ ಇಂತಹ ಅಪರಾಧ ಎಸಗಲು ಭೀತಿ ಉಂಟಾಗಬೇಕು. ಈ ಸಂಬಂಧ ಪೊಲೀಸ್‌ ಅಧಿಕಾರಿಗಳೊಂದಿಗೆ ಈಗಾಗಲೇ ಮಾತನಾಡಿದ್ದು, ಕಠಿಣ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಯದುವೀರ್ ಹೇಳಿದ್ದಾರೆ.

ಪ್ರಧಾನಿ ವಿರುದ್ಧ ಅವಹೇಳನಕಾರಿ ವೀಡಿಯೋ: ನಾಳೆಯಿಂದ ಬಿಜೆಪಿ ಪ್ರತಿಭಟನೆ Read More

ಕೇಂದ್ರ ಪ್ರವಾಸೋದ್ಯಮ ಸಚಿವರ ಭೇಟಿ ಮಾಡಿದ ಯದುವೀರ್‌ ಒಡೆಯರ್

ನವದೆಹಲಿ: ಕೇಂದ್ರ ಪ್ರವಾಸೋದ್ಯಮ ಸಚಿವ ಗಜೆಂದ್ರ ಸಿಂಗ್ ಶೇಖಾವತ್ ಅವರನ್ನು
ಸಂಸದ ಯದುವೀರ್ ಒಡೆಯರ್ ಭೇಟಿ ಮಾಡಿ ಮೈಸೂರಿನ ಪ್ರವಾಸೋದ್ಯಮ ಯೋಜನೆಗಳ ಬಗ್ಗೆ ಚರ್ಚಿಸಿದರು.

ಕೇಂದ್ರ ಪ್ರವಾಸೋದ್ಯಮ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಮಾತನಾಡಿದ ಯದುವೀರ್ ಒಡೆಯರ್,
ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ ದರ್ಶನ 2.0 ಯೋಜನೆಯಡಿ ಮೈಸೂರಿನಲ್ಲಿ ಎರಡು ಪ್ರಮುಖ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ದೊರೆತಿದೆ ಎಂದು ತಿಳಿಸಿದ್ದಾರೆ.

ಈ ಎರಡೂ ಯೋಜನೆಗಳನ್ನು ಕರ್ನಾಟಕ ಪ್ರವಾಸೋದ್ಯಮ ಮೂಲ ಸೌಲಭ್ಯ ನಿಗಮ ಅನುಷ್ಠಾನಕ್ಕೆ ತರಲಿದೆ ಎಂದು ಹೇಳಿದರು
ಮೈಸೂರಿನಲ್ಲಿ ಇಕಾಲಜಿಕಲ್ ಎಕ್ಸ್‌ಪೀರಿಯನ್ಸ್ ಝೋನ್ ಅಭಿವೃದ್ಧಿಗೆ 18.47 ಕೋಟಿ ರೂ. ಹಾಗೂ ಮೈಸೂರಿನ ಟಾಂಗಾ ರೈಡ್ ಎಕ್ಸ್‌ಪೀರಿಯನ್ಸ್ ಝೋನ್ ಅಭಿವೃದ್ಧಿಗೆ 271.60 ಲಕ್ಷ ರೂಪಾಯಿ ಅನುಮೋದನೆ ನೀಡಲಾಗಿದೆ ಎಂದು ಸಂಸದರು ಮಾಹಿತಿ ನೀಡಿದರು.

ಈ ಯೋಜನೆಗೆ ಅಂತಿಮ ಅನುಮೋದನೆ ದೊರಕಿರುವುದು ಸಂತಸ ತಂದಿದೆ, ಈ ಯೋಜನೆಗಳಿಂದ ಮೈಸೂರಿನಲ್ಲಿ ಪ್ರವಾಸೋದ್ಯಮ ಮತ್ತಷ್ಟು ವೃದ್ಧಿಯಾಗಲಿದೆ. ಯೋಜನೆಗಳ ಅನುಷ್ಠಾನಕ್ಕಾಗಿ ಭೂಮಿ ಪೂಜೆ ನಡೆಸಲು ಶೀಘ್ರ ದಿನಾಂಕ ನಿಗದಿಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಕೇಂದ್ರ ಸಚಿವರಾದ ಗಜೆಂದ್ರ ಸಿಂಗ್ ಶೇಖಾವತ್ ಅವರು ಯೋಜನೆಗೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.
ಮೈಸೂರಿನ ಇನ್ನೂ ಕೆಲವು ಪ್ರವಾಸೋದ್ಯಮ ಯೋಜನೆಗಳ ಬಗ್ಗೆ ಅನುಮತಿ ಪಡೆಯಲು ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಲಾಗುತ್ತದೆ ಎಂದು ತಿಳಿಸಿದರು.

ಮೈಸೂರಿನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಪ್ರವಾಸೋದ್ಯಮ ಕ್ಷೇತ್ರ ಉತ್ತೇಜನಕ್ಕೆ ಎಲ್ಲ ರೀತಿಯಿಂದಲೂ ನಮ್ಮ ಕೇಂದ್ರ ಬಿಜೆಪಿ ಸರ್ಕಾರ ಸಹಕಾರ ನೀಡಲಿದೆ. ಈ ಸಂಬಂಧ ನಾನು ಕೂಡ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಉನ್ನತಿಗೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ಯದುವೀರ್‌ ಒಡೆಯರ್‌ ಭರವಸೆ ನೀಡಿದರು

ಕೇಂದ್ರ ಪ್ರವಾಸೋದ್ಯಮ ಸಚಿವರ ಭೇಟಿ ಮಾಡಿದ ಯದುವೀರ್‌ ಒಡೆಯರ್ Read More

ಚಾಮುಂಡೇಶ್ವರಿ ನಗರ ಮಂಡಲದ ಬಿಜೆಪಿ ಕಾರ್ಯಕರ್ತರಿಂದ ‘ನಮೋ ಸಂತೆ’

ಮೈಸೂರು: ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಪಾಳು ಬೀಳುತ್ತಿದ್ದ ಶಾರದಾ ದೇವಿನಗರದ ಮುಡಾ ಮಾರುಕಟ್ಟೆ ಶುಚಿಗೊಳಿಸಿ ನಮೋ ಸಂತೆ ಆರಂಭ ಮಾಡಿ
ಚಾಮುಂಡೇಶ್ವರಿ ನಗರ ಮಂಡಲದ ಬಿಜೆಪಿ ಕಾರ್ಯಕರ್ತರು ಮಾದರಿಯಾಗಿದ್ದಾರೆ.

ಶಾರದಾ ದೇವಿನಗರದ ನೂತನ ಪಾಲಿಕೆ ವಲಯ ಕಚೇರಿಯ ಎದುರು ಇರುವ ಮೂಡಾ ಮಾರುಕಟ್ಟೆ ಅನೇಕ ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ಸಾರ್ವಜನಿಕರ ಬಳಕೆಯಿಲ್ಲದೇ ಅನೈರ್ಮಲ್ಯದ ತಾಣವಾಗಿತ್ತು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಚಾಮುಂಡೇಶ್ವರಿ ನಗರ ಮಂಡಲದ ಬಿಜೆಪಿ ಕಾರ್ಯಕರ್ತರು ಸಂಪೂರ್ಣ ಮಾರುಕಟ್ಟೆಯನ್ನು ಸ್ವಚ್ಛಗೊಳಿಸಿ ನಮೋ ಸಂತೆ ಹೆಸರಿನಲ್ಲಿ ಸ್ವದೇಶಿ ವಸ್ತುಗಳು, ಸಾವಯವ, ಗವ್ಯ ಉತ್ಪನ್ನಗಳು ಸೇರಿದಂತೆ ಬೀದಿಬದಿ ವರ್ತಕರನ್ನು ಸಹ ಕರೆಸಿ ವ್ಯಾಪಾರ ಪ್ರಾರಂಭಿಸುವಂತೆ ಪ್ರೇರಣೆ ನೀಡಿದರು.

ಸಂಸದರಾದ ಯದುವೀರ ಕೃಷ್ಣದತ್ತ‌‌ ಚಾಮರಾಜ ಒಡೆಯರ್ ಅವರು ನಮೋ ಸಂತೆಯನ್ನು ಉದ್ಘಾಟಿಸಿ ಸ್ವದೇಶಿ ಉತ್ಪನ್ನಗಳ ಬಳಕೆ ಮೂಲಕ ಆತ್ಮನಿರ್ಭರ ಭಾರತವನ್ನು ಕಟ್ಟಲು ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ಅಧ್ಯಕ್ಷ ರಾಕೇಶ್ ಭಟ್, ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ ರಘು, ನಮೋ ಸಂತೆಯ ಸಂಚಾಲಕರಾದ ಎಸ್. ತ್ಯಾಗರಾಜ್, ಸಹ-ಸಂಚಾಲಕ ಶಿವು ಪಟೇಲ್, ಮಂಡಲದ ಪ್ರಧಾನ ಕಾರ್ಯದರ್ಶಿ ಆರ್. ಸೋಮಶೇಖರ್, ಮುಖಂಡರಾದ ಬಿ.ಸಿ ಶಶಿಕಾಂತ್, ಹೆಚ್.ಎಸ್. ಹಿರಿಯಣ್ಣ, ಹೆಚ್.ಜಿ. ರಾಜಮಣಿ, ಚಂದ್ರಶೇಖರಸ್ವಾಮಿ, ಎಸ್.ಮಹೇಶ್ ಕುಮಾರ್, ರಂಗೇಶ್, ಸೋಮಣ್ಣ, ರಾಘವೇಂದ್ರ, ದೇವರಾಜ್, ಪುಟ್ಟಮ್ಮಣ್ಣಿ, ಮಂಜುಳಾ, ರವಿ ನಾಯಕಂಡ, ಬಸವಣ್ಣ, ರಾಜ ನಾಯಕ್, ನಾಗರಾಜ್ ಜನ್ನು, ನಾಗೇಶ್, ಕಾಂತರಾಜ ಅರಸು, ಲಕ್ಷ್ಮಿ ಜಯಶಂಕರ್, ಗೋಪಾಲ್, ಚಂದನ್ ಗೌಡ, ಸಾಗರ್ ಸಿಂಗ್, ಮಧು, ರಾಮಕೃಷ್ಣಪ್ಪ, ಬಸವಣ್ಣ, ಚೇತನಾ ಭೂಷಣ್, ಕಲಾವತಿ, ತುಳಸಿ, ಪ್ರವೀಣೆ ಜೋನ್ಸ್ ಸೇರಿದಂತೆ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

ಚಾಮುಂಡೇಶ್ವರಿ ನಗರ ಮಂಡಲದ ಬಿಜೆಪಿ ಕಾರ್ಯಕರ್ತರಿಂದ ‘ನಮೋ ಸಂತೆ’ Read More

ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಮೂಲಸೌಕರ್ಯ ಯೋಜನೆ ಪರಿಶೀಲಿಸಿದ ಯದುವೀರ್

ಮೈಸೂರು: ಸಂಸತ್ ಸದಸ್ಯ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು

ವಿಭಾಗದಾದ್ಯಂತ ನಡೆಯುತ್ತಿರುವ ಪ್ರಮುಖ ಮೂಲಸೌಕರ್ಯ ಹಾಗೂ ಸೇವಾ ಸಂಬಂಧಿತ ಅಭಿವೃದ್ಧಿಗಳ ಕುರಿತು ವಿವರ ಪಡೆದರು‌

ಮೈಸೂರು–ಚಾಮರಾಜನಗರ ರೈಲ್ವೆ ಮಾರ್ಗದ ಡಬಲಿಂಗ್ ಕಾಮಗಾರಿಗೆ ಸಂಬಂಧಿಸಿದ ಅಂತಿಮ ಸ್ಥಳ ಸಮೀಕ್ಷೆ ಆಗಿದ್ದು, ಈ ಮಾರ್ಗದ ಉದ್ದವು 60 ಕಿಮೀ. ಈ ಯೋಜನೆಯ ಕ್ಷೇತ್ರ ಸಮೀಕ್ಷೆ ಪೂರ್ಣಗೊಂಡಿದ್ದು, ಈಗ ವಿವರವಾದ ಯೋಜನಾ ವರದಿ ತಯಾರಾಗುತ್ತಿದೆ. ಈ ವರದಿಯನ್ನು ಆಗಸ್ಟ್ 2025ರೊಳಗೆ ರೈಲ್ವೆ ಮಂಡಳಿಗೆ ಸಲ್ಲಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು

ಅರಸೀಕೆರೆಯ ಮೂಲಕ ಹಾಸನ–ಮೈಸೂರು ರೈಲ್ವೆ ಮಾರ್ಗದ ಡಬಲಿಂಗ್ ಕಾರ್ಯದ ಪರಿಶೀಲನೆಯಾಗಿದ್ದು, ಈ ಮಾರ್ಗವು 165.80 ಕಿಮೀ ವಿಸ್ತಾರ ಹೊಂದಿದೆ, ಇದರ ಅಂತಿಮ ಸ್ಥಳ ಸಮೀಕ್ಷೆಗೆ ರೈಲ್ವೆ ಮಂಡಳಿಯಿಂದ ಆಗಸ್ಟ್ 2024ರಲ್ಲಿ ಅನುಮೋದನೆ ದೊರಕಿದೆ. ಹೆಲಿಕಾಪ್ಟರ್ ಆಧಾರಿತ ಗಗನ ಸಮೀಕ್ಷೆ ಪೂರ್ಣಗೊಂಡಿದ್ದು, ಪ್ರಸ್ತುತ ಭೂಸಮೀಕ್ಷೆ ನಡೆಯುತ್ತಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ಈ ಮಾರ್ಗದಲ್ಲಿ ರೈಲು ಸಂಚಾರ
ಸಾಮರ್ಥ್ಯ ಹೆಚ್ಚಳವಾಗಲಿದ್ದು, ಕಾರ್ಯಾಚರಣೆ ದಕ್ಷತೆಗೂ ಸಹಕಾರಿ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಮೈಸೂರಿನ ರೈಲ್ವೆ ನಿಲ್ದಾಣದ ಭಾರವನ್ನು ಕಡಿಮೆ ಮಾಡಲು ಪ್ರಸ್ತಾಪಿತ ನಾಗನಹಳ್ಳಿ ಹೊಸ ಟರ್ಮಿನಲ್ ಅಭಿವೃದ್ಧಿ ಕಾಮಗಾರಿಯ ಮೇಲೂ ಚರ್ಚೆ ನಡೆಯಿತು.

580 ಮೀ ಉದ್ದ ಮತ್ತು 10.5 ಮೀ ಅಗಲದ ವೇದಿಕೆಯನ್ನು ವಿಸ್ತರಿಸುವುದು
760 ಮೀ ಉದ್ದದ ಪ್ಯಾಸೆಂಜರ್ ಲೈನ್ ಮತ್ತು ಸ್ಟೆಬ್ಲಿಂಗ್ ಲೈನ್ ನಿರ್ಮಾಣ
750 ಮೀ ಉದ್ದದ ಶಂಟಿಂಗ್ ನೆಕ್, ಡ್ರೈ ಪಿಟ್ ಲೈನ್, 350 ಮೀ ಉದ್ದದ ಮೆಷಿನ್ ಸೈಡಿಂಗ್
1,176 ಚದರ ಮೀ ವ್ಯಾಪ್ತಿಯ ವೇದಿಕೆ ಛಾವಣಿ,ನಾಲ್ಕು ಸಣ್ಣ ಸೇತುವೆ ಹಾಗೂ ಒಂದು ರಸ್ತೆ ಕೆಳಸೇತುವೆ ವಿಸ್ತರಣೆ
ಈ ಯೋಜನೆಗಾಗಿ ಒಟ್ಟು 8 ಎಕರೆ 29 ಗುಂಟೆ ಭೂಮಿ ಗುರುತಿಸಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಯದುವೀರ್ ಅವರಿಗೆ ಮನವಿ ಮಾಡಲಾಯಿತು.

ಕುವೆಂಪುನಗರ, ಮೈಸೂರುನಲ್ಲಿರುವ ಪಿಆರ್‌ಎಸ್ ಕೌಂಟರ್‌ಗೆ ಬಾಡಿಗೆರಹಿತ ವಸತಿ ಒದಗಿಸುವ ಕುರಿತು ವಿನಂತಿಸಲಾಯಿತು.

ಯದುವೀರ್ ಅವರು ಮೈಸೂರು ರೈಲ್ವೆ ವಿಭಾಗದ ಶ್ಲಾಘನೀಯ ಕಾರ್ಯಗಳನ್ನು ಮೆಚ್ಚಿ ರೈಲು ಸಂಪರ್ಕ ವಿಸ್ತರಣೆ ಹಾಗೂ ಪ್ರಯಾಣಿಕ ಸೌಲಭ್ಯಗಳ ಅನುಕೂಲತೆಗೆ ಉಪಯುಕ್ತ ಸಲಹೆಗಳನ್ನು ನೀಡಿದರು.

ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್,ಶಮ್ಮಸ್ ಹಮೀದ್,
ಗಿರೀಶ ಧರ್ಮರಾಜ ಕಲಗೊಂಡ ಮತ್ತಿತರರು ಉಪಸ್ಥಿತರಿದ್ದರು.

ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಮೂಲಸೌಕರ್ಯ ಯೋಜನೆ ಪರಿಶೀಲಿಸಿದ ಯದುವೀರ್ Read More