ನದಿ ಪಾಲಾದ ಯುವಕರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಚನ್ನಾರೆಡ್ಡಿ ಭರವಸೆ

ಯಾದಗಿರಿ:ಭೀಮಾನದಿ ಪಾಲಾದ ಇಬ್ಬರು ಯುವಕರ ಕುಟುಂಬಕ್ಕೆ ಸರಕಾರದಿಂದ ಸಿಗುವ ಪರಿಹಾರ ಕಲ್ಪಿಸಲಾಗುವುದು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಭರವಸೆ ನೀಡಿದರು.

ಭೀಮಾನದಿಯಲ್ಲಿ ಶುಕ್ರವಾರ ಪರಶುರಾಮ ನಾಟೇಕರ್ ಹಾಗೂ ಸಿದ್ದಪ್ಪ ನೀರು ಪಾಲಾದ ಘಟನೆ ಹಿನ್ನಲೆಯಲ್ಲಿ ಇಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಮಾಚನೂರು ಗ್ರಾಮದ ಭೀಮಾನದಿ ತೀರಕ್ಕೆ ಆಗಮಿಸಿ ಘಟನೆ ನಡೆದ ಸ್ಥಳ ಪರಿಶೀಲನೆ ಮಾಡಿದರು.

ಜತೆಗೆ ಅಗ್ನಿಶಾಮಕ ದಳ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡದಿಂದ ಶವ ಶೋಧ ಕಾರ್ಯಾಚರಣೆ ಬಗ್ಗೆ ಅಗತ್ಯ ಮಾಹಿತಿಯನ್ನು ಪಡೆದರು.

ಈ ವೇಳೆ ತಹಶಿಲ್ದಾರ್ ಮಂಗಳಾ ಹಾಗೂ ಸಿಪಿಐ ಸುನೀಲ್ ಮೂಲಿಮನಿ ಅವರು ಘಟನೆ ನಡೆದ ಬಗ್ಗೆ ಮಾಹಿತಿ ನೀಡಿದರು.

ಸುಮಾರು 29 ಗಂಟೆ ಕಳೆದರು ಯುವಕರ ಮೃತ ದೇಹಗಳು ಪತ್ತೆಯಾಗಿಲ್ಲ.ಈ ಸಂದರ್ಭದಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅಗ್ನಿಶಾಮಕ ದಳ ಹಾಗೂ ಎಸ್ ಡಿಆರ್ ಎಫ್ ತಂಡದೊಂದಿಗೆ ಬೋಟ್ ನಲ್ಲಿ ಭೀಮಾನದಿಯಲ್ಲಿ ಕಿಲೋಮೀಟರ್ ವರೆಗೂ ತೆರಳಿ ಶವ ಶೋಧ ಕಾರ್ಯ ಮಾಡಿದರು‌.

ಶವ ಶೋಧ ಕಾರ್ಯಾಚರಣೆ ವೇಳೆ ಶಾಸಕರಿಗೆ ನದಿಯೊಳಗೆ ಮೊಸಳೆಗಳು ಕಾಣಿಸಿಕೊಂಡವು.ಸುಮಾರು 20 ಕ್ಕೂ ಹೆಚ್ಚು ಮೊಸಳೆಗಳು ನದಿ ಹಾಗೂ ನದಿ ತೀರದಲ್ಲಿ ಇರುವದು ಕಾಣಿಸಿದವು,ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿ ಎಂದು ತಂಡಕ್ಕೆ ಶಾಸಕರು ಸಲಹೆ ನೀಡಿದರು.

ಮೊಮ್ಮಗ ಪರಶುರಾಮ ಸಾವಿನ ಅಘಾತದಿಂದ ಅಜ್ಜ ಸಿದ್ದಪ್ಪ ಖಿನ್ನತೆಗೆ ಒಳಗಾಗಿದ್ದು, ಮೊಮ್ಮಗನ ನೆನಪಿನಲ್ಲಿಯೇ ಕೊರಗುತ್ತಾ ರೋಧಿಸುತ್ತಿದ್ದಾರೆ.

ಈ ವೇಳೆ ಅಜ್ಜನಿಗೆ ಶಾಸಕ ತುನ್ನೂರು ಸಾಂತ್ವನ ಹೇಳಿ ಧೈರ್ಯ ತುಂಬಿದರು,ಆಗ ಶಾಸಕ ತುನ್ನೂರು ಅವರಿಗೆ ನಮಸ್ಕರಿಸಿ ಅಜ್ಜ ಕಣ್ಣೀರು ಹಾಕಿ ಕೈ‌ ಮುಗಿದರು.

ಧೈರ್ಯದಿಂದ ಇರು ಅಳಬೇಡ.ಸರಕಾರ ನಿಮ್ಮ ಜೊತೆ ಇರುತ್ತದೆ, ಶವ ಸಿಗುವರಗೆ ಇಲ್ಲಿಯೇ ಅಧಿಕಾರಿಗಳು ಶವ ಶೋಧ ಮಾಡಿ ಪತ್ತೆ ಹಚ್ಚುತ್ತಾರೆ ಎಂದು ಧೈರ್ಯ ತುಂಬಿ ಶಾಸಕರೂ ಬಾವುಕರಾದರು.

ಭೀಮಾನದಿಯಲ್ಲಿ ಇಬ್ಬರು ಯುವಕರು ನೀರು ಪಾಲಾಗಿದ್ದಾರೆ. ಯಾವುದೇ ಕುಟುಂಬದಲ್ಲಿ ಇಂತಹ ಘಟನೆ ಆಗಬಾರದಿತ್ತು.ಮೃತ ಕುಟುಂಬ ಸದಸ್ಯರಿಗೆ ಭಗವಂತ ಧೈರ್ಯ ಕೊಡಲಿ,ಮೃತ ಯುವಕರ ಆತ್ಮಕ್ಕೆ ಭಗವಂತ ಶಾಂತಿ ಸಿಗಲಿ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಪ್ರಾರ್ಥಿಸಿದರು.

ಈ ವೇಳೆ ಅಪರ ಜಿಲ್ಲಾಧಿಕಾರಿ
ರಮೇಶ್ ಕೋಲಾರ,ತಹಶಿಲ್ದಾರ್ ಮಂಗಳಾ ಎಮ್., ಡಿವೈಎಸ್ಪಿ ಅರುಣಕುಮಾರ್ ಪಿ.ಕೊಳ್ಳುರು, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್,ತಾಪಂ ಇಒ ಮಲ್ಲಿಕಾರ್ಜುನ ಸಂಗ್ವಾರ ಸಿಪಿಐ ಸುನೀಲ್ ಮೂಲಿಮನಿ,ಪಿಎಸ್ ಐ ಮಹೆಬೂಬ್ ಅಲಿ,ಎಸ್ ಡಿಆರ್ ಎಫ್ ಆರ್ ಪಿಐ ಅಮರೀಶ್ ಚವ್ಣಾಣ,ಅಗ್ನಿಶಾಮಕ ದಳ ಅಧಿಕಾರಿ ಮನೋಹರ್ ರಾಠೋಡ ಮತ್ತಿತರರು ಹಾಜರಿದ್ದರು.

ನದಿ ಪಾಲಾದ ಯುವಕರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಚನ್ನಾರೆಡ್ಡಿ ಭರವಸೆ Read More

ನಕಲಿ ವೈದ್ಯರು-ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ-ಡಿಸಿ ಡಾ.ಸುಶೀಲ

ಯಾದಗಿರಿ: ಜಿಲ್ಲೆಯಲ್ಲಿ ನಕಲಿ ವೈದ್ಯರು ಹಾಗೂ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಿಸಿಪಿಎನ್ ಡಿಟಿ ಹಾಗೂ ಕೆ.ಪಿ.ಎಮ್.ಇ ಕಾಯ್ದೆಯಡಿ ಕೋರಿ ಬಂದಿರುವ ಅರ್ಜಿಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಯಾವುದೇ ವೈದ್ಯಕೀಯ ಪದವಿಗಳಿಲ್ಲದೇ ನಕಲಿ ವೈದ್ಯರಿಂದ ಚಿಕಿತ್ಸೆಗೆ ಒಳಗಾಗಿ ಬಡ ಜನರ ಜೀವಕ್ಕೆ ಅಪಾಯವಾಗಬಾರದು, ಮುಗ್ಧ ಜನರಿಗೆ ಮತ್ತು ಬಡ ಜನರಿಗೆ ಅಪಾಯವಾಗದಂತೆ ನೋಡಿಕೊಳ್ಳಬೇಕು, ನೋಂದಾಯಿತವಲ್ಲದ ಆಸ್ಪತ್ರೆ ಹಾಗೂ ನಕಲಿ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದರು.

ಜಿಲ್ಲೆಯಲ್ಲಿ ನಕಲಿ ವೈದ್ಯರು ಹಾಗೂ ಆಸ್ಪತ್ರೆ ಗಳಿಗಾಗಿ ಬಾಡಿಗೆ ಮನೆಗಳನ್ನೂ ನೀಡಬಾರದೆಂದು ಸಾರ್ವಜನಿಕರಿಗೂ ತಾಕೀತು ಮಾಡಿದರು.

ಒಂದು ವೇಳೆ ಅಂತಹವರಿಗೆ ಬಾಡಿಗೆ ಮನೆ ಅಥವಾ ಕಟ್ಟಡ ಒದಗಿಸಿದ ಬಗ್ಗೆ ಗೊತ್ತಾದಲ್ಲಿ,ಅಂತಹವರ ಕಟ್ಟಡಕ್ಕೆ ನೀರು ಹಾಗೂ ವಿದ್ಯುತ್ ಸಂಪರ್ಕ ಕಡಿತದಂತಹ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿನ ಅಧಿಕೃತ ಹಾಗೂ ಅನಧಿಕೃತ ಆಸ್ಪತ್ರೆಗಳ ಪರಿಶೀಲನೆಗಾಗಿ, ಅನಿರೀಕ್ಷಿತವಾಗಿ ತಂಡದೊಂದಿಗೆ ಭೇಟಿ ನೀಡಬೇಕು,ಸಾರ್ವಜನಿಕ ದೂರುಗಳ ಜೊತೆಗೆ ಸಂಬಂಧಿಸಿದ ಆರೋಗ್ಯ ಅಧಿಕಾರಿಗಳು ತಂಡದೊಂದಿಗೆ ಇರಬೇಕು ಎಂದು ಹೇಳಿದರು.

ವೈದ್ಯಕೀಯ ನಿಯಮಾನುಸಾರ ಕಾರ್ಯನಿರ್ವಹಿಸುತ್ತಿವೆಯೇ ಎಂಬುದರ ಬಗ್ಗೆ ನಿಗಾವಹಿಸಲು ಪೋಲಿಸ್ ಹಾಗೂ ಆರೋಗ್ಯ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸುಶೀಲಾ ಸೂಚಿಸಿದರು.

ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆಯಡಿ ಅನಧಿಕೃತವಾಗಿ ಅಲ್ಟ್ರಾಸೋನೋಗ್ರಾಫಿ ಮಶೀನ್ ಬಳಸುವದಾಗಲಿ, ಆಸ್ಪತ್ರೆ ನಡೆಸುವುದಾಗಲಿ ಶಿಕ್ಷಾರ್ಹ ಅಪರಾಧವಾಗಿದೆ.ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಬಿರಾದಾರ್, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಹಣುಮಂತರೆಡ್ಡಿ, ಡಾ.ರಮೇಶ, ಸರ್ಕಾರಿ ರೇಡಿಯಾಲಾಜಿಸ್ಟ್ ಡಾ.ಶಾಂತಲಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸುಗೂರಪ್ಪ ಮತ್ತಿತರರು ಉಪಸ್ಥಿತರಿದ್ದರು.

ನಕಲಿ ವೈದ್ಯರು-ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ-ಡಿಸಿ ಡಾ.ಸುಶೀಲ Read More

ಹನಿಟ್ರ‍್ಯಾಪ್‌ ಡೈರೆಕ್ಟರ್, ಪ್ರೊಡ್ಯುಸರ್ ಯಾರಂತ ಗೊತ್ತಾಗಲು ಸಿಬಿಐ ತನಿಖೆ ಅಗತ್ಯ: ಶ್ರೀರಾಮುಲು

ಯಾದಗಿರಿ: ಹನಿಟ್ರ‍್ಯಾಪ್‌ನ ಡೈರೆಕ್ಟರ್ ಮತ್ತು ಪ್ರೊಡ್ಯುಸರ್ ಯಾರು ಅಂತ ಗೊತ್ತಾಗಬೇಕಾದರೆ ಸಿಬಿಐ ತನಿಖೆ ಆಗಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಒತ್ತಾಯಿಸಿದ್ದಾರೆ.

ಜಿಲ್ಲೆಯ ಮಹಲ್ ರೋಜಾದಲ್ಲಿ ಹನಿಟ್ರ‍್ಯಾಪ್ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹನಿಟ್ರ‍್ಯಾಪ್ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕು. ರಾಜ್ಯದಲ್ಲಿ ಇದೊಂದು ಫ್ಯಾಷನ್, ಒಂದು ಟ್ರೆಂಡ್ ಆಗಿದೆ. ಹನಿಟ್ರ‍್ಯಾಪ್ ಪ್ರಕರಣದಿಂದ ಇಡೀ ರಾಜ್ಯದ ಜನ ಅಸಹ್ಯಪಡುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಯಾವುದೇ ಪಕ್ಷದವರಿದ್ದರೂ ಈ ರೀತಿ ಹನಿಟ್ರ‍್ಯಾಪ್‌ನಿಂದ ಮುಜುಗರ ಆಗುತ್ತದೆ. ರಾಜಕೀಯದಲ್ಲಿ ಹಲವು ವರ್ಷಗಳಿಂದ ಜನರ ಪ್ರೀತಿಗಳಿಸಿ, ದೊಡ್ಡ ಮಟ್ಟಕ್ಕೆ ಬೆಳೆದಿದ್ದೀವಿ.ಹಾಗಿರುವಾಗ ಹನಿಟ್ರ‍್ಯಾಪ್‌ ವಿಷಯಗಳನ್ನು ತಂದು ಮನಸ್ಸಿಗೆ ನೋವು ಮಾಡುವ ಕೆಲಸವನ್ನು ಕೆಲವು ವ್ಯಕ್ತಿಗಳು ಮಾಡುತ್ತಿದ್ದಾರೆ ಎಂದು ಬೇಸರ ಪಟ್ಟರು.

ಯಾವುದೇ ಪಕ್ಷದವರು ಇರಲಿ ಸಿಬಿಐ ತನಿಖೆ ಮಾಡಬೇಕು. ಜನಪ್ರತಿನಿಧಿಗಳಿಗೆ ರಕ್ಷಣೆ ಕೊಡಬೇಕು, ಅವರ ಮೇಲಿನ ವಿಶ್ವಾಸ ಉಳಿಸಬೇಕು. ಅದಕ್ಕಾಗಿ ಈ ಹನಿಟ್ರ‍್ಯಾಪ್‌ಗೆ ಕಡಿವಾಣ ಹಾಕಬೇಕು. ಸಿಬಿಐ ತನಿಖೆಯಾದರೆ ಇದರ ಹಿಂದೆ ಯಾರಿದ್ದಾರೆಂದು ಹೊರಗಡೆ ಬರುತ್ತದೆ ಎಂದು ಶ್ರೀರಾಮುಲು ಹೇಳಿದರು.

ಇದಕ್ಕಿಂತ ಮುಂಚೆ ಅನೇಕರಿಗೆ ಹನಿಟ್ರ‍್ಯಾಪ್ ಆಗಿದೆ. ಹಿಂದುಳಿದ ಜಾತಿಯ ವ್ಯಕ್ತಿಗಳಾದ ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಇದೀಗ ಸಚಿವ ರಾಜಣ್ಣ ಅವರ ಮೇಲೆ ಹನಿಟ್ರ‍್ಯಾಪ್‌ ಯತ್ನ ನಡೆದಿದೆ. ಪಕ್ಷಾತೀತಿವಾಗಿ ರಾಜಕಾರಣಿಗಳಿಗೆ ಈ ರೀತಿ ಆದರೆ ನೋವು ಉಂಟಾಗುತ್ತದೆ. ಇದಕ್ಕೆ ಯಾರು ಡೈರೆಕ್ಟರ್, ಯಾರು ಪ್ರೊಡ್ಯುಸರ್, ಈ ಹನಿಟ್ರ‍್ಯಾಪ್ ಫ್ಯಾಕ್ಟರಿಯನ್ನು ಯಾರು ಇಟ್ಟುಕೊಂಡಿದ್ದಾರೆ ಎನ್ನೋದು ಹೊರಬರಬೇಕಾದರೆ ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ವಿಚಾರ ಕುರಿತು ಮಾತನಾಡಿ, ಸಭಾಪತಿಗಳಿಗೂ ಹನಿಟ್ರ‍್ಯಾಪ್‌ನಿಂದ ಮುಜುಗರ ಆಗಿದೆ. ಇದರಿಂದ ಅವರಿಗೂ ತೊಂದರೆ ಆಗುತ್ತದೆ. 30-40 ವರ್ಷ ರಾಜಕಾರಣದಲ್ಲಿದ್ದು, ಸಭಾಪತಿಗಳಾಗಿರುತ್ತಾರೆ. ಹನಿಟ್ರ‍್ಯಾಪ್ ಬೇರೆ ಬೇರೆ ವಿಚಾರ ಬಂದಾಗ ಮುಜುಗರ ಆಗುತ್ತದೆ. ಹೊರಟ್ಟಿಯವರು ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಯಾರಿಗೂ ನೋವು ಆಗಬಾರದು ಅಂದರೆ ಸಿಬಿಐ ತನಿಖೆಗೆ ಕೊಡಬೇಕು ಎಂದು ಹೇಳಿದರು.

ಹನಿಟ್ರ‍್ಯಾಪ್‌ ಡೈರೆಕ್ಟರ್, ಪ್ರೊಡ್ಯುಸರ್ ಯಾರಂತ ಗೊತ್ತಾಗಲು ಸಿಬಿಐ ತನಿಖೆ ಅಗತ್ಯ: ಶ್ರೀರಾಮುಲು Read More