ವಕ್ಫ್ ಭೂ ಕಬಳಿಕೆ ವಿರುದ್ಧದ ಹೋರಾಟದಲ್ಲಿ ಬಿಜೆಪಿಗೆ ಜಯ: ಆರ್‌.ಅಶೋಕ

ಬೆಂಗಳೂರು: ವಕ್ಫ್ ಮಂಡಳಿ ಹಿಂದೂಗಳು ಹಾಗೂ ರೈತರ ಆಸ್ತಿ ಕಬಳಿಕೆ ಮಾಡುತ್ತಿರುವ ಬಗ್ಗೆ ಸದನದಲ್ಲಿ ದಾಖಲೆ ಸಮೇತ ಮಾತನಾಡಿದ್ದು, ಈ ಹೋರಾಟಕ್ಕೆ ತಕ್ಕ ಮಟ್ಟಿಗೆ ಜಯ ಸಿಕ್ಕಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ಬಿಜೆಪಿಯ ಹೋರಾಟಕ್ಕೆ ಮಣಿದ ಸರ್ಕಾರ ಸಮಿತಿ ರಚನೆಗೆ ತೀರ್ಮಾನಿಸಿದೆ. ಜೊತೆಗೆ ಬಾಣಂತಿಯರ ಸಾವಿನ ಪ್ರಕರಣವನ್ನೂ ನ್ಯಾಯಾಂಗ ತನಿಖೆಗೆ ವಹಿಸಲಾಗಿದೆ ಎಂದು ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಅಧಿವೇಶನ ಹತ್ತು ದಿನ ನಿಗದಿಯಾಗಿತ್ತು. ಆದರೆ ಕನ್ನಡ ಸಾಹಿತ್ಯ ಸಮ್ಮೇಳನ ಇದೆ ಎಂದು ಅದನ್ನು 9 ದಿನಕ್ಕೆ ಇಳಿಕೆ ಮಾಡಲಾಯಿತು,ಹಾಗಾಗಿ ಬಿಜೆಪಿಗೆ ಹೆಚ್ಚು ಕಾಲಾವಕಾಶ ಸಿಗದಿದ್ದರೂ ಅದರಲ್ಲೇ ಸರ್ಕಾರವನ್ನು ಕಟ್ಟಿ ಹಸಕುವ ಕೆಲಸ ಮಾಡಿದ್ದೇವೆ,ಅದಕ್ಕಾಗಿ ಶಾಸಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಅಶೋಕ್ ಹೇಳಿದರು.

ಕರ್ನಾಟಕದಲ್ಲಿ ವಕ್ಫ್ ವೆಬ್‌ಸೈಟ್‌ನಲ್ಲಿ 1.11 ಲಕ್ಷಕ್ಕೂ ಹೆಚ್ಚು ಎಕರೆ ಜಮೀನು ಸ್ವಾಧೀನದಲ್ಲಿದೆ ಎಂದಿದೆ. ಅದರಲ್ಲಿ 86 ಸಾವಿರ ಎಕರೆ ವಿವಾದದಲ್ಲಿದೆ. ಚಿಕ್ಕಬಳ್ಳಾಪುರದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಓದಿದ ಶಾಲೆಯನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ಘೋಷಿಸಿ ಅಲ್ಲಿ ಮಸೀದಿ ಕಟ್ಟಿದ್ದಾರೆ. ರಾಷ್ಟ್ರಧ್ವಜ ಹಾರಿಸಬೇಕಾದ ಜಾಗದಲ್ಲಿ ಹಸಿರು ಧ್ವಜ ಹಾರಿಸುತ್ತಿದ್ದಾರೆ. ಬೀದರ್‌ನಲ್ಲಿ 560 ಎಕರೆ ಇರುವ ಹಳ್ಳಿಯನ್ನು ವಕ್ಫ್ ಬೋರ್ಡ್ ಆಸ್ತಿ ಮಾಡಿಬಿಟ್ಟಿದ್ದಾರೆ. ಇಷ್ಟೆಲ್ಲ ವಿಚಾರಗಳನ್ನು ಮಂಡಿಸಿದ ಬಳಿಕ ನಮ್ಮ ಹೋರಾಟಕ್ಕೆ ಮಣಿದ ಸರ್ಕಾರ, ನಿವೃತ್ತ ಜಡ್ಜ್ ನೇತೃತ್ವದಲ್ಲಿ ಸಮಿತಿ ರಚಿಸುತ್ತೇವೆ ಎಂದು ಭರವಸೆ ನೀಡಿದೆ. ಇದು ಬಿಜೆಪಿಯ ಹೋರಾಟಕ್ಕೆ ಸಂದ ಜಯ ಎಂದು ಅಶೋಕ್ ತಿಳಿಸಿದರು.

ಬಾಣಂತಿಯರು ಹಾಗೂ ನವಜಾತ ಶಿಶುಗಳ ಸಾವಿಗೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಬಹಳಷ್ಟು ಚರ್ಚೆ ಮಾಡಿದ್ದೇವೆ. ಅವಧಿ ಮುಗಿದ ಔಷಧಿ ಬಗ್ಗೆಯೂ ದಾಖಲೆ ಕೊಟ್ಟಿದ್ದೇನೆ. ಆರೋಗ್ಯ ಸಚಿವರ ರಾಜೀನಾಮೆಗೂ ಸದನದಲ್ಲಿ ಆಗ್ರಹಿಸಿದ್ದೇವೆ. ಇದನ್ನು ನ್ಯಾಯಾಂಗ ತನಿಖೆಗೆ ವಹಿಸಲು ಸರ್ಕಾರ ಒಪ್ಪಿದೆ. ಇದು ಕೂಡ ವಿಧಾನಸಭೆಯಲ್ಲಿ ಬಿಜೆಪಿಯ ಹೋರಾಟಕ್ಕೆ ಸಿಕ್ಕ ಜಯ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಸಂತೆ ಭಾಷಣ ಮಾಡುವುದನ್ನು ಬಿಡಬೇಕು. ಕಳೆದ ಅಧಿವೇಶನದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಮಾತನಾಡಿ ಉತ್ತರ ಕರ್ನಾಟಕಕ್ಕೆ ನಾನು ಏನೇನು ಕೊಡುತ್ತೇನೆ ಎಂದು ಘೋಷಿಸಿದ್ದರು. ಬೀದರ್, ಧಾರವಾಡ, ವಿಜಯಪುರ, ಕಲ್ಬುರ್ಗಿ ಹೀಗೆ ಎಲ್ಲಾ ಜಿಲ್ಲೆಗೆ ಒಂದೊಂದು ಕೈಗಾರಿಕೆಯನ್ನು ತರುತ್ತೇನೆ ಎಂದಿದ್ದರು. ನಂಜುಡಪ್ಪ ವರದಿಯಂತೆ ಸಮಿತಿ ನೇಮಕ ಮಾಡುತ್ತೇನೆ, ಆರು ತಿಂಗಳಲ್ಲಿ ವರದಿ ನೀಡುತ್ತೇನೆ ಎಂದಿದ್ದರು. ಆದರೆ ವರ್ಷ ಕಳೆದರೂ ಇನ್ನೂ ವರದಿ ಬರಲಿಲ್ಲ. ಪ್ರವಾಸೋದ್ಯಮಕ್ಕೆ ಹಣ ಕೊಡುತ್ತೇನೆ ಎಂದು ಹೇಳಿ ಅದನ್ನೂ ಮಾಡಲಿಲ್ಲ.ಕಳೆದ ಬಾರಿ ಹೇಳಿದ್ದನ್ನೇ ಮಾಡದ ಮುಖ್ಯಮಂತ್ರಿ, ಈಗ ಮತ್ತೆ ಘೋಷಣೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಪೀಕರ್ ಯು.ಟಿ.ಖಾದರ್‌ ಅವರು ಅಧಿವೇಶನವನ್ನು ಇನ್ನಷ್ಟು ಚೆನ್ನಾಗಿ ನಡೆಸಬಹುದಿತ್ತು. ಅವರಿನ್ನೂ ಕಾಂಗ್ರೆಸ್ ಮನಸ್ಥಿತಿಯಲ್ಲೇ ಇದ್ದಾರೆ,ಅವರು ವಿರೋಧ ಪಕ್ಷದ ಕಡೆಗೆ ನೋಡಬೇಕು ಎಂದು ಅಶೋಕ್ ಸಲಹೆ ನೀಡಿದರು.

ಶಾಸಕ ಸಿ.ಟಿ.ರವಿ ಅವರನ್ನು ಪೊಲೀಸರು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋದರು. ಸೇಫ್ಟಿ ದೃಷ್ಟಿಯಿಂದ ಕೆಲವರು ಕಾಡು, ಕ್ವಾರಿಗಳಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ. ಪೊಲೀಸರು ಹೊಸ ಸೇಫ್ಟಿ ಮಾರ್ಗ ಹುಡುಕಿದ್ದಾರೆ. ಮುಖ್ಯಮಂತ್ರಿ ಹಾಗೂ ಸಚಿವರನ್ನು ಸುರಕ್ಷತೆ ದೃಷ್ಟಿಯಿಂದ ಕಬ್ಬಿನ ಗದ್ದೆಗೆ ಅಥವಾ ಕ್ವಾರಿಗೆ ಕರೆದುಕೊಂಡು ಹೋಗಿ ಬಿಡುವುದು ಉತ್ತಮ ಎಂದು ವ್ಯಂಗ್ಯವಾಡಿದರಲ್ಲದೆ ಸಿ ಟಿ ಬಂಧನ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರು.

ವಕ್ಫ್ ಭೂ ಕಬಳಿಕೆ ವಿರುದ್ಧದ ಹೋರಾಟದಲ್ಲಿ ಬಿಜೆಪಿಗೆ ಜಯ: ಆರ್‌.ಅಶೋಕ Read More

ವಕ್ಫ್ ಮಂಡಳಿ ಕುರಿತು ಉತ್ತರ ನೀಡಲು ಸರ್ಕಾರ ರೆಡಿ: ಸಿಎಂ

ಬೆಳಗಾವಿ: ಸರ್ಕಾರ ಉತ್ತರ ಕರ್ನಾಟಕದ ಚರ್ಚೆಗೂ ಸಿದ್ಧವಿದೆ, ವಕ್ಫ್ ಮಂಡಳಿ ಕುರಿತ ವಿರೋಧ ಪಕ್ಷಗಳ ಪ್ರಶ್ನೆಗಳಿಗೂ ಉತ್ತರ ನೀಡಲೂ ಸಿದ್ಧವಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,ವಕ್ಫ್ ಮಂಡಳಿ ಆಸ್ತಿ ಕಬಳಿಕೆ ಕುರಿತಂತೆ ಮೌನ ವಹಿಸಲು ಶಾಸಕ ಬಿ.ವೈ. ವಿಜವೇಂದ್ರ ತಮಗೆ 150 ಕೋಟಿಗಳ ಆಮಿಷ ಒಡ್ಡಿದ್ದರು ಎಂಬ ಆರೋಪ ಸುಳ್ಳು ಎಂಬ ಮಾಣಿಪ್ಪಾಡಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅವರೇ ಸ್ವತಃ ಹಿಂದೆ ಆಮಿಷ ಒಡ್ಡಿದ್ದರು ಎಂದು ಹೇಳಿರುವುದರ ಮೇಲೆ ನಾವು ಪ್ರತಿಕ್ರಿಯೆ ನೀಡಿದ್ದೇವೆ. ಅವರೇ ಪತ್ರಿಕಾಗೋಷ್ಠಿ ಕರೆದು ನೀಡಿರುವ ಹೇಳಿಕೆಗೆ ನನ್ನ ಪ್ರಕಾರ ಪ್ರತಿಕ್ರಿಯೆ ನೀಡಿರುವುದು ಸರಿಯಾಗಿದೆ ಎಂದು ಸ್ಪಷ್ಟಪಡಿಸಿದರು.

ಈಗ ಬಹಳ ವರ್ಷಗಳ ನಂತರ ಹೇಳಿಲ್ಲ ಎನ್ನುತ್ತಿದ್ದಾರೆ. ಏನು ಮಾಡಬೇಕು ಎಂದು ನೀವೇ ಹೇಳಿ ಎಂದು ಸಿದ್ದು ಮಾಧ್ಯಮದವರನ್ನೇ ಪ್ರಶ್ನಿಸಿದರು.

ಪ್ರಹ್ಲಾದ ಜೋಶಿ ಅವರು ಪಂಚಮಸಾಲಿ ಸಮುದಾಯ ವನ್ನು ಪ್ರವರ್ಗ 2ಎ ಮೀಸಲಾತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಹೋರಾಟದಲ್ಲಿ ಆಗಿರುವ ಅವಘಡಕ್ಕಾಗಿ ಸಿಎಂ ಕ್ಷಮೆ ಕೇಳಬೇಕು ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಯಾರು ಸಮಸ್ಯೆಯನ್ನು ಇತ್ಯರ್ಥ ಮಾಡಿಲ್ಲವೋ ಅವರೇ ಕ್ಷಮೆ ಕೇಳಲಿ ಎಂದು ಸಿದ್ದರಾಮಯ್ಯ ತಿಳಿಸಿದರು.

ವಕ್ಫ್ ಮಂಡಳಿ ಕುರಿತು ಉತ್ತರ ನೀಡಲು ಸರ್ಕಾರ ರೆಡಿ: ಸಿಎಂ Read More

ವಕ್ಫ್‌ ಮಂಡಳಿಯಿಂದ ಭೂ ಕಬಳಿಕೆ: ಕಾನೂನು ಸುವ್ಯವಸ್ಥೆ ಹಾಳಾದರೆ ಸರ್ಕಾರ ಕಾರಣ:ಅಶೋಕ

ಮೈಸೂರು: ವಕ್ಫ್‌ ಮಂಡಳಿ ಬಡ ಜನರ ಭೂಮಿ ಕಬಳಿಸುತ್ತಿರುವುದರಿಂದ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ಇದಕ್ಕೆಲ್ಲ ಸರ್ಕಾರವೇ ನೇರ ಕಾರಣ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಎಚ್ಚರಿಸಿದರು.

ಮೈಸೂರಿನಲ್ಲಿ ವಕ್ಫ್‌ ಮಂಡಳಿಯಿಂದ ನೋಟಿಸ್‌ ನೀಡಲಾದ ಸ್ಥಳಗಳಿಗೆ ಭೇಟಿ ನೀಡಿದ ಆರ್‌.ಅಶೋಕ ಅವರು, ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ವಕ್ಫ್‌ ಮಂಡಳಿ ಮೈಸೂರಿನಲ್ಲಿ ಅನೇಕರಿಗೆ ನೋಟಿಸ್‌ ನೀಡಿದೆ. ಭೂಮಿಯನ್ನು ಕಬಳಿಸುವುದರ ಜೊತೆಗೆ, ಈ ಜಾಗವನ್ನು ಲೀಸ್‌ಗೆ ಪಡೆಯಿರಿ ಎಂದು ವಕ್ಫ್‌ ಮಂಡಳಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಕೆಲವು ಕಡೆ ಬಡಜನರ ಭೂಮಿಗೆ ಬೇಲಿ ಹಾಕಿಕೊಂಡಿದ್ದಾರೆ. ಮುಸಲ್ಮಾನರೇ ಇಲ್ಲದ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನ ಮುನೇಶ್ವರ ನಗರವನ್ನು ಸಂಪೂರ್ಣ ವಕ್ಫ್‌ಗೆ ನೀಡಲು ಸಿದ್ಧತೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ರೀತಿ ಮಾಡುತ್ತಿರುವುದರಿಂದ ಕಾನೂನು ಸುವ್ಯವಸ್ಥೆ ಹಾಳಾಗಲಿದೆ. ಇದಕ್ಕೆ ಸರ್ಕಾರವೇ ನೇರ ಕಾರಣವಾಗಲಿದೆ ಎಂದು ಹೇಳಿದರು.

ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದಾಗ ಹಿಂದೂಗಳಿಗೆ ಒಂದೇ ಮದುವೆಯಾಗುವಂತೆ ಕಾನೂನು ತರಲಾಯಿತು. ಆದರೆ ಮುಸ್ಲಿಮರಿಗೆ ಈ ಕಾನೂನು ಅನ್ವಯವಾಗಲಿಲ್ಲ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ವಕ್ಫ್‌ ಮಂಡಳಿಗೆ ಸಂಪೂರ್ಣ ಅಧಿಕಾರ ನೀಡುವಂತೆ ಕಾನೂನು ತಿದ್ದುಪಡಿ ತಂದರು. ಅದಾದ ನಂತರ 1 ಲಕ್ಷ ಕೋಟಿ ರೂ.ಗೂ ಅಧಿಕ ಬೆಲೆಬಾಳುವ ಭೂಮಿ ಒಂದೇ ಬಾರಿಗೆ ವಕ್ಫ್‌ ಮಂಡಳಿಗೆ ಸೇರಿಬಿಟ್ಟಿತು. ಇವೆಲ್ಲವನ್ನೂ ವ್ಯವಸ್ಥಿತವಾಗಿದೆ ಮಾಡಲಾಗಿದೆ ಎಂದು ಅಶೋಕ್ ಆರೋಪಿಸಿದರು.

ವಕ್ಫ್‌ ಮಂಡಳಿಯದ್ದು ಸಮಸ್ಯೆಯೇ ಅಲ್ಲವೆಂದರೆ, ರೈತರು ಹಾಗೂ ಮಠಗಳ ಸ್ವಾಮೀಜಿಗಳು ಪ್ರತಿಭಟನೆ ಏಕೆ ಮಾಡುತ್ತಿದ್ದಾರೆ ಬಿಜೆಪಿ ಸಚಿವರು ಎಂದಿಗೂ ಪ್ರತಿ ಜಿಲ್ಲೆಗೆ ಹೋಗಿ ನೋಟಿಸ್‌ ಕೊಡಲು ಸೂಚನೆ ನೀಡಿರಲಿಲ್ಲ. ಆದರೆ ಈಗಿನ ಸಚಿವ ಜಮೀರ್‌ ಅಹ್ಮದ್‌ ಪ್ರತಿ ಜಿಲ್ಲೆಗೆ ಹೋಗಿ ಅಧಿಕಾರಿಗಳನ್ನು ಬೆದರಿಸಿ ನೋಟಿಸ್‌ ಕೊಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಕ್ಫ್‌ ಮಂಡಳಿಯಿಂದ ಭೂ ಕಬಳಿಕೆ: ಕಾನೂನು ಸುವ್ಯವಸ್ಥೆ ಹಾಳಾದರೆ ಸರ್ಕಾರ ಕಾರಣ:ಅಶೋಕ Read More

ವಕ್ಫ್ ವಿಚಾರದಲ್ಲಿ ಸರ್ಕಾರ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ:ಅಶೋಕ್

ಬೆಂಗಳೂರು: ವಕ್ಫ್ ವಿಚಾರದಲ್ಲಿ ದಿನಕ್ಕೊಂದು ನಾಟಕ, ಕ್ಷಣಕ್ಕೊಂದು ಸುಳ್ಳು ಹೇಳುತ್ತಿರುವ ಸರ್ಕಾರ ಈಗ ಮತ್ತೊಮ್ಮೆ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ.
ಎಂದು ಪ್ರತಿಪಕ್ಷ ನಾಯಕ ಅಶೋಕ್ ಟೀಕಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ನವರೇ,
ವಕ್ಫ್ ವಿಚಾರ ಮೊದಲು ಪ್ರಸ್ತಾಪವಾದಾಗ ಸರ್ಕಾರ ಯಾರಿಗೂ ನೋಟೀಸು ಕಳಿಸುತ್ತಲೇ ಇಲ್ಲ ಎಂದು ಸುಳ್ಳು ಹೇಳಿದಿರಿ.

ನಂತರ ವಿಜಯಪುರ ಜಿಲ್ಲೆಯಲ್ಲಿ ರೈತರು ಸಿಡಿದ್ದೆದ್ದಾಗ, ನೋಟಿಸು ವಾಪಸ್ಸು ಪಡೆದು, ಈ ಪ್ರಕ್ರಿಯೆ ನಿಲ್ಲಿಸುತ್ತೇವೆ ಎಂದು ಮತ್ತೊಂದು ಸುಳ್ಳು ಹೇಳಿದಿರಿ ಎಂದು ಟ್ವೀಟ್ ಮಾಡಿ ಟೀಕಿಸಿದ್ದಾರೆ.

ಆದರೆ ರೈತರಿಗೆ, ಮಠ-ಮಂದಿರಗಳಿಗೆ ಕಳಿಸುವುದು, ರಾತ್ರೋರಾತ್ರಿ ತರಾತುರಿಯಲ್ಲಿ ಭೂದಾಖಲೆಗಳನ್ನು ತಿದ್ದುವುದು ಮಾತ್ರ ನಿಲ್ಲಲೇ ಇಲ್ಲ,ಜತೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಇದೆಲ್ಲಾ ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ನಡೆಯುತ್ತಿದೆ ಎಂದು ಹೇಳುವ ವಿಡಿಯೋ ಬಹಿರಂಗ ಆದಮೇಲೆ ತಮ್ಮ ಸುಳ್ಳು ಸಂಪೂರ್ಣ ಬಯಲಾಯಿತು ಸಿದ್ದರಾಮಯ್ಯನವರೆ ಎಂದು ಕಾಲೆಳೆದರು.

ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆಯೇ ಸರ್ಕಾರದ ಮುಂದಿಲ್ಲ ಎಂದು ಸತ್ಯದ ತಲೆಯ ಮೇಲೆ ಹೊಡೆದ ಹಾಗೆ ಮತ್ತೊಂದು ಸುಳ್ಳು ಹೇಳಿದಿರಿ. ಆದರೆ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ 4 ರಷ್ಟು ಮೀಸಲಾತಿ ಕೊಡಬೇಕು ಎಂದು ತಮ್ಮ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹ್ಮದ್, ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಮುಸ್ಲಿಂ ಶಾಸಕರು ಆಗಸ್ಟ್ 24 ರಂದು ತಮಗೆ ಪತ್ರ ಬರೆಯುತ್ತಾರೆ. ತಾವು ಅದೇ ದಿನ ಈ ಪತ್ರವನ್ನ ಪರಿಶೀಲಿಸಿ ಮಂಡಿಸಿ ಎಂದು ಆರ್ಥಿಕ ಇಲಾಖೆಗೆ ನಿರ್ದೇಶನ ನೀಡಿದ್ದೀರಿ. ಈ ಸಂಬಂಧ ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತರಲೂ ಸಹ ತಾವು ಅನುಮೋದನೆ ನೀಡಿದ್ದೀರಿ.

ಈಗ ವಕ್ಫ್ ವಿಚಾರದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲೇ ಅತಿಹೆಚ್ಚು ನೋಟಿಸುಗಳು ನೀಡಲಾಗಿದೆ ಎಂದು ಮತ್ತೊಂದು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದೀರಿ. ಓಲೈಕೆ ರಾಜಕಾರಣಕ್ಕೆ ಇನ್ನೆಷ್ಟು ಸುಳ್ಳು ಹೇಳುತ್ತೀರಿ ಸಿದ್ದರಾಮಯ್ಯನವರೆ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಅನೇಕ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಭಾವಿ ಮುಖಂಡರು ಬಡವರಿಗೆ ಸೇರಿದ ಸಾವಿರಾರು ಎಕರೆ ವಕ್ಫ್ ಭೂಮಿಯನ್ನ ಕಬಳಿಸಿದ್ದಾರೆ ಎಂಬ ವರದಿ ನಮ್ಮ ಸರ್ಕಾರಕ್ಕೆ ಬಂದಿತ್ತು. ಆಗ ಆ ವರದಿಯ ಆಧಾರದ ಮೇಲೆ ತನಿಖೆ ಮಾಡಲು ಸಂಬಂಧಪಟ್ಟವರಿಗೆ ನೋಟಿಸುಗಳನ್ನು ನೀಡಲಾಗಿತ್ತೇ ಹೊರತು ಇದರ ಹಿಂದೆ ಯಾವುದೇ ಕುತಂತ್ರ, ಷಡ್ಯಂತ್ರ ಇರಲಿಲ್ಲ ತಿಳಿದುಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.

ವಕ್ಫ್ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣ ಜನರಿಗೆ ಸ್ಪಷ್ಟವಾಗಿ ಅರ್ಥವಾಗಿದೆ. ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತರಲು ಉದ್ದೇಶಿಸಿರುವ ತಿದ್ದುಪಡಿಗೆ ಮೊದಲು ಹೇಗಾದರೂ ಮಾಡಿ ಜಮೀನು ಕಬಳಿಸಬೇಕು ಎಂಬ ಕಾಂಗ್ರೆಸ್ ಪಕ್ಷದ ಷಡ್ಯಂತ್ರ, ಕುತಂತ್ರ ಬಹುಸಂಖ್ಯಾತ ಹಿಂದೂಗಳಿಗೆ ಬಹಳ ಸ್ಪಷ್ಟವಾಗಿ ಮನವರಿಕೆಯಾಗಿದೆ ಎಂದು ಅಶೋಕ್ ತಿಳಿಸಿದ್ದಾರೆ.

ಇನ್ನಾದರೂ ವಕ್ಫ್ ಹೆಸರಿನಲ್ಲಿ ನಡೆಯುತ್ತಿರುವ ದಬ್ಬಾಳಿಕೆ ನಿಲ್ಲಿಸಿ. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿ ಮಹಾರಾಷ್ಟ್ರ, ಹರಿಯಾಣ ರಾಜ್ಯಗಳಲ್ಲಿ ಆದಂತೆ ಕರ್ನಾಟಕದಲ್ಲೂ ಧೂಳೀಪಟ ಆಗುವುದು ನಿಶ್ಚಿತ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ವಕ್ಫ್ ವಿಚಾರದಲ್ಲಿ ಸರ್ಕಾರ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ:ಅಶೋಕ್ Read More

ಅಧಿಕಾರ ಇರಲಿ, ಬಿಡಲಿ, ಜನರ ಪರ ಹೋರಾಟ ಮಾಡುತ್ತೇನೆ:ಪ್ರತಾಪ್ ಸಿಂಹ

ಮೈಸೂರು: ನನಗೆ ಯಾವುದೇ ಬಣ ಇಲ್ಲ, ನಾನೊಬ್ಬ ಬಿಜೆಪಿ ಕಾರ್ಯಕರ್ತ,ಅಧಿಕಾರ ಇರಲಿ, ಬಿಡಲಿ, ಜನರ ಪರವಾಗಿ ಹೋರಾಟ ಮಾಡುತ್ತೇನೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಹೇಳಿದರು.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮಗೋಷ್ಟಿಯಲ್ಲಿ
ವಕ್ಫ್​ ವಿರುದ್ಧದ ಹೋರಾಟದಲ್ಲಿ ತಮ್ಮ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಪ್ರತಾಪ್‌ ಸಿಂಹ ಈ‌ ರೀತಿ ಪ್ರತಿಕ್ರಿಯಿಸಿದರು.

ಮೈಸೂರು, ಚಾಮರಾನಗರ ಮತ್ತು ನಾನು ಪ್ರತಿನಿಧಿಸಿದ್ದ ಕೊಡಗು ಜಿಲ್ಲೆಯಲ್ಲಿ ವಕ್ಫ್ ಹೆಸರಿಗೆ ಸರ್ಕಾರಿ ಆಸ್ತಿಗಳನ್ನು ಬದಲಾಯಿಸಿದ ವಕ್ಫ್ ವಿರುದ್ಧ ನನ್ನ ಹೋರಾಟ ಅಷ್ಟೇ , ನಾನು ಜನರ ಕೆಲಸ ಮಾಡಲು ಬಂದಿದ್ದೇನೆ, ಅಧಿಕಾರ ಇದ್ದಾಗ ಜನಪರ ಕೆಲಸ ಮಾಡಿದ್ದೇನೆ,ಈಗ ಅಧಿಕಾರ ಇಲ್ಲದಿದ್ದರೂ ಜನಪರ ಹೋರಾಟದಲ್ಲಿ ಭಾಗಿಯಾಗಿದ್ದೇನೆ ಎಂದು ತಿಳಿಸಿದರು.

ಈ ವೇಳೆ ವಕ್ಫ್‌ ನೋಟಿಫಿಕೇಷನ್‌ ಆಗಿರುವ ದಾಖಲೆಗಳನ್ನ ಬಿಡುಗಡೆ ಮಾಡಿದ ಪ್ರತಾಪ್‌ ಸಿಂಹ, ಯಾವಾಗ ಆರ್.ಟಿ.ಸಿ. ಗಳು ಬದಲಾಗುತ್ತವೆ ಎಂಬ ಆತಂಕದಲ್ಲಿ, ಮಠಗಳು ಮತ್ತು ರೈತರು ಇದ್ದಾರೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಅವರ ಸರ್ಕಾರ ಬಂದಾಗ ಈ ರೀತಿಯಾಗುವುದು ಮಾಮೂಲು. ಈಗ ವಕ್ಫ್‌ ಆಸ್ತಿ ವಿಚಾರದಲ್ಲಿ ರೈತರಿಗೆ ಆತಂಕ ಸೃಷ್ಟಿಯಾಗಿದೆ. ಇದರಲ್ಲಿ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಿದ್ದು, ಮೈಸೂರು – ಚಾಮರಾಜನಗರ ಭಾಗದಲ್ಲಿ 600ಕ್ಕೂ ಹೆಚ್ಚು ಎಕರೆ ಭೂಮಿ ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದು ವಕ್ಫ್​ ಆಸ್ತಿ ಒತ್ತುವರಿ ಮಾಡಿಕೊಂಡಿರುವ ಐದಾರು ಜನ ಮುಸ್ಲಿಂ ಮುಖಂಡರಿಂದ ತೆರವುಗೊಳಿಸಿ ಅಂತಾ. ಅದನ್ನು ಬೇರೆ ರೀತಿ ಬಿಂಬಿಸಲಾಗಿದೆ ಎಂದು ಪ್ರತಾಪ್​ ಸಿಂಹ ಹೇಳಿದರು.

ಮಂತ್ರಾಲಯಕ್ಕೂ ನಾವೇ ಭೂಮಿ ಧಾನ ಮಾಡಿದ್ದು ಎಂದು ಮಾಜಿ ಸಚಿವ ಸಿ ಎಂ ಇಬ್ರಾಹಿಂ ಹೇಳಿದ್ದಾರೆ. ಇಸ್ಲಾಂ ಧರ್ಮಕ್ಕೂ , ಭಾರತಕ್ಕೂ ಏನು ಸಂಬಂಧ, ನಮಗೆ ಭೂಮಿ ದಾನ ಮಾಡಲು ನಿಮಗೆ ಭೂಮಿ ಎಲ್ಲಿಂದ ಬಂತು ಎಂದು ಪ್ರತಾಪ್​ ಸಿಂಹ ಈ ವೇಳೆ ಕಾರವಾಗಿ ಪ್ರಶ್ನಿಸಿದರು.

ಇಸ್ಲಾಂ ಧರ್ಮ ಹುಟ್ಟಿದ್ದು ಮರುಭೂಮಿಯಲ್ಲಿ, ಮುಸ್ಲಿಂರಿಗೆ ಆಶ್ರಯ ಕೊಟ್ಟಿದ್ದು ನಾವು, ಈಗ ನಮ್ಮ ಭೂಮಿ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಅಧಿಕಾರ ಇರಲಿ, ಬಿಡಲಿ, ಜನರ ಪರ ಹೋರಾಟ ಮಾಡುತ್ತೇನೆ:ಪ್ರತಾಪ್ ಸಿಂಹ Read More

ರೈತ ವಿರೋಧಿ ಕಾಂಗ್ರೆಸ್ ಸರ್ಕಾರ:ಅಶೋಕ್ ಕಿಡಿ

ಬೆಂಗಳೂರು: ಚಿಕ್ಕಬಳ್ಳಾಪುರ, ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ಜಮೀನಿನಲ್ಲಿ ಉಳುಮೆ ಮಾಡಲು ಮುಂದಾ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದು ಖಂಡನೀಯ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.

ಈ ಸರ್ಕಾರ ತನ್ನ ಓಲೈಕೆ ರಾಜಕಾರಣಕ್ಕೆ ರೈತರನ್ನು ಬಲಿಕೊಡಲು ಮುಂದಾಗಿದೆ ಇದು ಕಟುಕ ಸರ್ಕಾರ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯ ನವರೇ, ರೈತರ ಜಮೀನಿನ ಮೇಲೆ ಕಬ್ಜಾ ಮಾಡುವುದೇ ಅಲ್ಲದೆ, ಅವರ ಮೇಲೆ ಲಾಠಿ ಚಾರ್ಜ್ ಮಾಡಿ, ಟ್ರ್ಯಾಕ್ಟರ್ ವಶಕ್ಕೆ ಪಡೆದು ರೈತರ ವಿರುದ್ಧ ದೂರು ದಾಖಲಿಸಿಕೊಂಡಿದ್ದೀರಲ್ಲ, ನಿಮಗೆ ನಾಡಿನ ರೈತರಿಗಿಂತ ಓಲೈಕೆ ರಾಜಕಾರಣವೇ ಹೆಚ್ಚಾಯ್ತ ಎಂದು ಕಾರವಾಗಿ ಪ್ರಶ್ನಿಸಿದ್ದಾರೆ.

ಅನ್ನ ಹಾಕುವ ಕೈಗಳಿಗೆ ಕೋಳ ತೊಡಿಸುವ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ಅನ್ನದಾತರ ಶಾಪ ಈ ಸರ್ಕಾರವನ್ನು ಸುಡುವ ದಿನ ದೂರವಿಲ್ಲ ಎಂದು ಅಶೋಕ್ ಎಚ್ಚರಿಸಿದ್ದಾರೆ.

ರೈತ ವಿರೋಧಿ ಕಾಂಗ್ರೆಸ್ ಸರ್ಕಾರ:ಅಶೋಕ್ ಕಿಡಿ Read More

ವಕ್ಫ್‌ ಮಂಡಳಿಯಿಂದ ಭೂ ಕಬಳಿಕೆ: ಭೀತಿಗೊಂಡ ಜನ- ಆರ್‌.ಅಶೋಕ್

ಬೆಂಗಳೂರು: ವಕ್ಫ್‌ ಮಂಡಳಿ ಬಡವರ ಭೂಮಿ ಕಬಳಿಸುತ್ತಿರುವುದರಿಂದ ಜನ ಭೀತಿಗೊಳಗಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ನೋಟಿಸ್‌ ವಾಪಸ್‌ ಪಡೆಯಲು ಸೂಚಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ಮುಖ್ಯ ಕಾರ್ಯದರ್ಶಿ ಭೂಮಿ ವಶಪಡಿಸಿಕೊಳ್ಳಲು ಲಿಖಿತ ಸೂಚನೆ ನೀಡಿದ್ದಾರೆ. ಈ ಸತ್ಯ ಮರೆಮಾಚಲು ಮುಖ್ಯಮಂತ್ರಿ ಸುಳ್ಳು ಹೇಳಿದ್ದಾರೆ ಎಂದು ದೂರಿದರು.

ಟಿಪ್ಪು ಸುಲ್ತಾನ್‌ ಖಡ್ಗ ಬಳಸಿ ಅಮಾಯಕರನ್ನು ಮತಾಂತರ ಮಾಡಿದ್ದ. ಅದೇ ರೀತಿ ಈಗ ಕಾಂಗ್ರೆಸ್‌ ವಕ್ಫ್‌ ಬಳಸಿಕೊಂಡು ಜನರ ಭೂಮಿ ಕಬಳಿಸುತ್ತಿದೆ. ಸರ್‌.ಎಂ.ವಿಶ್ವೇಶ್ವರಯ್ಯನವರು ಓದಿದ ಶಾಲೆಯನ್ನೂ ವಕ್ಫ್‌ ಆಸ್ತಿ ಎಂದು ಉಲ್ಲೇಖಿಸಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಬಸವರಾಜ ಬೊಮ್ಮಾಯಿ ಅವರು ಕಬಳಿಕೆ ಮಾಡಿದ ಭೂಮಿ ವಾಪಸ್‌ ಪಡೆಯಿರಿ ಎಂದು ಹೇಳಿದ್ದಾರೆಯೇ ಹೊರತು, ರೈತರ ಜಮೀನು ಪಡೆಯಲು ಹೇಳಿಲ್ಲ. ಆದರೆ ಮಂಡಳಿಯ ಸದಸ್ಯರು ವಿಧಾನಸೌಧ ನಮ್ಮದು ಎಂದು ಕೂಡ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರವಿದ್ದಾಗ ಕೋಲಾರದಲ್ಲಿ ವಾಲ್ಮೀಕಿ ಭವನ ನಿರ್ಮಿಸಲಾಗಿತ್ತು. ಈಗ ಅದರ ಮೇಲೆ ಮಸೀದಿ ಕಟ್ಟಿಸಿ ಕಾಂಪೌಂಡ್‌ ನಿರ್ಮಿಸಲಾಗಿದೆ. ಇಂತಹ ಅಕ್ರಮದ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಸರ್ಕಾರ ಎಲ್ಲಕ್ಕೂ ಎಸ್‌ಐಟಿ ರಚಿಸುತ್ತಿದೆ. ಸಿದ್ದರಾಮಯ್ಯನವರ ಹಗರಣದ ವಿರುದ್ಧ ಕೆಂಪಣ್ಣ ಆಯೋಗ ರಚಿಸಿದ್ದು, ಅದರ ವರದಿ ಬಂದೇ ಇಲ್ಲ. ಕೋವಿಡ್‌ ಸಮಯದಲ್ಲಿ ಬಿ.ಎಸ್‌.ಯಡಿಯೂರಪ್ಪನವರು ಅಧಿಕಾರಿಗಳು ಹೇಳಿದಂತೆ ಕಿಟ್ ಖರೀದಿ ಮಾಡಲು ಸೂಚಿಸಿದ್ದರು, ಇದರಲ್ಲಿ ಯಾರದ್ದೂ ತಪ್ಪಿಲ್ಲ, ಇದು ರಾಜಕೀಯ ಪ್ರೇರಿತ ಸುಳ್ಳು ಪ್ರಕರಣ. ಖರೀದಿ ಮಾಡುವ ಅಧಿಕಾರ ಮುಖ್ಯಮಂತ್ರಿಗಿಲ್ಲ. ಯಾವ ಕಂಪನಿಯಿಂದ, ಎಲ್ಲಿಂದ ಖರೀದಿ ಮಾಡಬೇಕೆಂದು ಅಧಿಕಾರಿಗಳು ತೀರ್ಮಾನಿಸಿರುತ್ತಾರೆ. ಈ ಪ್ರಕರಣ ಸರ್ಕಾರಕ್ಕೆ ತಿರುಗುಬಾಣವಾಗಲಿದೆ ಎಂದು ಅಶೋಕ್ ಎಚ್ಚರಿಸಿದರು.

ವಕ್ಫ್‌ ಮಂಡಳಿಯಿಂದ ಭೂ ಕಬಳಿಕೆ: ಭೀತಿಗೊಂಡ ಜನ- ಆರ್‌.ಅಶೋಕ್ Read More

ಸಿಎಂ ಸ್ವಕ್ಷೇತ್ರದ ಮೇಲೂ ವಕ್ಫ್ ಕಣ್ಣು

ಮೈಸೂರು: ರಾಜ್ಯದ ವಿವಿಧೆಡೆ ವಕ್ಫ್ ಬೋರ್ಡ್ ಕಣ್ಣಿಟ್ಟಿದಗದಾಯಿತು ಇದೀಗ ಸಿಎಂ ಸ್ವಕ್ಷೇತ್ರದ ಸ್ಮಶಾನದ ಜಾಗದ ಮೇಲೂ ವಕ್ಫ್ ಕಣ್ಣು ಬಿದ್ದಿದೆ.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ವರುಣಾ ಕ್ಷೇತ್ರ ವ್ಯಾಪ್ತಿಯ ರಂಗಸಮುದ್ರ ಗ್ರಾಮದ ಸರ್ವೇ ನಂಬರ್ 257ರ ಜಮೀನು ವಕ್ಫ್ ಆಸ್ತಿ ಎಂದು ನಮೂದಾಗಿದೆ.

ಮುಸ್ಲಿಮರ ಖಬ್ರಸ್ಥಾನ ಎಂದು ಇತ್ತೀಚಿನ ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಈ ಮೊದಲು ಅಂದರೆ 2019-20 ರ ಪಹಣಿಯಲ್ಲಿ ಕಪನಯ್ಯತೋಪು ಎಂದು ನಮೂದಿಸಲಾಗಿತ್ತು. ಅಲ್ಲದೇ ಹಿಂದೂ ಸಮುದಾಯದ ರುದ್ರಭೂಮಿಯಾಗಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಹಿಂದೂ ಸಮುದಾಯದ ಪುರಾತನ ಸಮಾಧಿಗಳು ಇಲ್ಲಿವೆ.

ಆದರೆ ಈ ಜಾಗದ ಈಗಿನ ಪಹಣಿಯಲ್ಲಿ ಸುನ್ನಿವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. ಕಾವೇರಿ ನದಿ ತೀರದಿಂದ ಕೇವಲ 200 ಮೀಟರ್ ಅಂತರದಲ್ಲಿರುವ ಜಾಗ ಇದು. ರಂಗಸಮುದ್ರ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಘಟಕವೂ ಇದೇ ಸ್ಥಳದಲ್ಲಿದೆ. ಈ ಜಾಗವನ್ನು ಏಕಾಏಕಿ ವಕ್ಫ್ ಆಸ್ತಿ ಎಂದು ನಮೂದಿಸಿರುವುದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಸ್ವಕ್ಷೇತ್ರದ ಮೇಲೂ ವಕ್ಫ್ ಕಣ್ಣು Read More

ಚಂದಗಾಲು ಗ್ರಾಮದಲ್ಲಿ ಶಾಲೆ ವಾಕ್ಫ್ ಬೋರ್ಡ್ ಗೆ ಸೇರಿಸಿದ್ದನ್ನು ಖಂಡಿಸಿ ಪ್ರತಿಭಟನೆ

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಕ್ಷೇತ್ರದ ಚಂದಗಾಲು ಗ್ರಾಮದಲ್ಲಿ ಶಾಲೆಯನ್ನು ವಾಕ್ಫ್ ಬೋರ್ಡ್ ಗೆ ಸೇರಿಸಲಾಗಿದ್ದು ಇದನ್ನು ಖಂಡಿಸಿ ರಾಜ್ಯ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ವಿರೋದ ಪಕ್ಷದ ನಾಯಕ ಆರ್. ಅಶೋಕ್, ಮೈಸೂರು ಮತ್ತು ಕೊಡಗು ಸಂಸದ ಎದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಇಂಡವಾಳು ಸಚ್ಚಿದಾನಂದ, ಮಾಜಿ ಸಚಿವ ನಾರಾಯಣಗೌಡ ಮತ್ತಿತರರು ಭಾಗವಹಿಸಿದ್ದರು.

ನಿಮಗೆ ತಾಕತ್ತು ಅನ್ನುವುದಿದ್ದರೆ ನಮ್ಮನ್ನ ಬಂಧಿಸಿ ಎಂದು ಘೊಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

ಪ್ರತಿ ಜಾಗದಲ್ಲೂ ಕೂಡ ವಕ್ಫ್ ಬೋರ್ಡ್ ನಾಮಫಲಕವನ್ನ ಹಾಕುತ್ತಿದ್ದಾರೆ, 2000 ಆಸೆಗೆ ಹೋಗಿ ತಮ್ಮ ಒಳಗದ್ದೆಗಳು ದೇವಸ್ಥಾನಗಳೆಲ್ಲ ವಕ್ಫ್ ಬೋರ್ಡ್ ಜಾಗ ಮಾಡಲು ಆರಂಭಿಸಿದ್ದಾರೆ ಆದ್ದರಿಂದ ಹಿಂದುಗಳು ಒಗ್ಗಟ್ಟಾಗಿ ನಮ್ಮ ಜಾಗವನ್ನು ನಾವು ಸಂರಕ್ಷಿಸಿಕೊಳ್ಳುವಬೇಕು ಎಂದು ಪ್ರತಿಭಟನಾ ನಿರತರು ಕರೆ ನೀಡಿದರು.

ನಮ್ಮ ದೇವಸ್ಥಾನವನ್ನು ಸಂರಕ್ಷಿಸಬೇಕು, ನಮ್ಮ ಸಹೋದರಿಯರನ್ನ ರಕ್ಷಿಸಬೇಕು ಇದು ನಮ್ಮ ಕರ್ತವ್ಯವಾಗಬೇಕು ಎಂದು ಹೇಳಿದರು.

ಈಗ ಸರ್ಕಾರ ಈ ಕಾಯ್ದೆಯನ್ನು ಹಿಂಪಡೆಯುತ್ತೇವೆ ಎಂದು ಹೇಳುತ್ತಿದೆ ಆದರೆ ಯಾವುದೇ ರೀತಿಯಲ್ಲೂ ಕಾಯ್ದೆ ಹಿಂಪಡೆಯುವುದಿಲ್ಲ ಒಂದು ಕೋಮನ್ನು ಒಲೈಸಲು ಸರ್ಕಾರ ಇಂತಹ ಕಾಯಿದೆಯನ್ನು ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಂದಗಾಲು ಗ್ರಾಮದಲ್ಲಿ ಶಾಲೆ ವಾಕ್ಫ್ ಬೋರ್ಡ್ ಗೆ ಸೇರಿಸಿದ್ದನ್ನು ಖಂಡಿಸಿ ಪ್ರತಿಭಟನೆ Read More

ವಕ್ಫ್ ಆಸ್ತಿ ಕಾಪಾಡುವೆ ಎಂದಿದ್ದ ಬಸವರಾಜ ಬೊಮ್ಮಾಯಿ ಈಗ ಉಲ್ಟಾ : ಸಿಎಂ ಟೀಕೆ

ಹುಬ್ಬಳ್ಳಿ: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಒತ್ತುವರಿಯಾಗಿರುವ ವಕ್ಫ್ ಆಸ್ತಿಯನ್ನು ಕಾಪಾಡುವುದಾಗಿ ಹೇಳಿದ್ದರು ಈಗ ಉಲ್ಟಾ ಹೊಡೆದದ್ದು ಏಕೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬಸವರಾಜ ಬೊಮ್ಮಾಯಿಯವರು ರಾಜಕೀಯ ಕಾರಣಕ್ಕಾಗಿ ಈಗ ವಿರುದ್ಧವಾಗಿ ಮಾತನಾಡುತ್ತಾರೆ, ಅವರೇ ಹೇಳಿದ್ದ ಮಾತುಗಳಿಗೆ ರಾಜಕೀಯ ಕಾರಣಕ್ಕಾಗಿ ಉಲ್ಟಾ ಹೊಡೆದಿದ್ದಾರೆ ಎಂದು ಟೀಕಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸಿಎಂ ಮಾಧ್ಯಮದವರೊಂದಿಗೆ ಮಾತನಾಡಿದರು.

ಬಿಜೆಪಿಯವರು ರಾಜಕಾರಣಕ್ಕಾಗಿ ಈ ವಿಚಾರವನ್ನು ಇಟ್ಟುಕೊಂಡು ಹೋರಾಡುತ್ತಿದ್ದಾರೆ. ವಕ್ಫ್ ಆಸ್ತಿ ವಿಚಾರ ನಿನ್ನೆ ಮೊನ್ನೆಯದಲ್ಲ. ಬಿಜೆಪಿ ಸರ್ಕಾರದ ಕಾಲದಲ್ಲೂ ನೋಟೀಸು ಕೊಟ್ಟಿದ್ದಾರೆ, ಎಲ್ಲಾ ಕಾಲದಲ್ಲಿಯೂ ನೋಟೀಸು ನೀಡಲಾಗಿದೆ ಎಂಬುದು ಜನರಿಗೆ ಅರ್ಥವಾಗಿದೆ ಎಂದು ಹೇಳಿದರು.

ವಕ್ಫ್ ಆಸ್ತಿ ವಿಚಾರ ನಮಗೆ ಗೊತ್ತಾದ ತಕ್ಷಣವೇ ನೋಟೀಸು ಹಿಂಪಡೆಯಲಾಗಿದೆ . ಬಿಜೆಪಿ ಅವಧಿಯಲ್ಲಿ 216 ಪ್ರಕರಣಗಳಲ್ಲಿ ನೋಟೀಸು ಕೊಟ್ಟಿದ್ದರು. ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್, ಹೆಚ್.ಡಿ ಕುಮಾಸ್ವಾಮಿ ಇದ್ದಾಗ ಏಕೆ ನೋಟೀಸು ಕೊಟ್ಟಿದ್ದಾರೆ ಎಂದು ಸಿದ್ದು ಕಾರವಾಗಿ ಪ್ರಶ್ನಿಸಿದರು.

ಬಿಜೆಪಿಯ ಈ ಡಬ್ಬಲ್ ಗೇಮ್ ವಿಚಾರವನ್ನು ಜನರಿಗೆ ನಾವು ತಲುಪಿಸುತ್ತಿದ್ದೇವೆ ಎಂದು ತಿಳಿಸಿದರು.

ತೆರಿಗೆ ವಿಚಾರದಲ್ಲಿ ಕೇಂದ್ರದಿಂದ ಅನ್ಯಾಯವಾಗುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ 16 ನೇ ಹಣಕಾಸು ಆಯೋಗದವರು ಬೆಂಗಳೂರಿಗೆ ಭೇಟಿ ನೀಡಿದಾಗ 15 ನೇ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ ಅನ್ಯಾಯವಾಗಿರುವ ಅನ್ಯಾಯದ ಬಗ್ಗೆ ಗಮನ ಸೆಳೆದಿದ್ದೇವೆ. ಸುಮಾರು 4.50 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಮೊತ್ತವನ್ನು ವರ್ಷಕ್ಕೆ ತೆರಿಗೆ ನೀಡುತ್ತಿದ್ದೇವೆ. ಅದರಲ್ಲಿ ನಮಗೆ ವಾಪಸ್ಸು ಬರುವುದು 55 ರಿಂದ 60 ಸಾವಿರ ಕೋಟಿ ರೂಪಯಿಗಳಷ್ಟು ಮಾತ್ರ. ಇದು ನ್ಯಾಯವೇ ಎಂದು ಸಿಎಂ ಪ್ರಶ್ನಿಸಿದರು.

11495 ಕೋಟಿ ರೂಪಾಯಿಗಳನ್ನ ಕೊಟ್ಟಿದ್ದಾರೆಯೇ, ಕೊಟ್ಟಿದ್ದರೆ ನಾನು ರಾಜಕೀಯವನ್ನೇ ಬಿಟ್ಟುಬಿಡುವೆ ಎಂದ ಸಿದ್ದರಾಮಯ್ಯ ಪ್ರಹ್ಲಾದ ಜೋಶಿ ಬಿಡುತ್ತಾರೆಯೇ ಕೇಳಿ ಎಂದು ಪ್ರಶ್ನಿಸಿದರು.

ಆರ್ಥಿಕ, ಸಾಮಾಜಿಕ ಶಕ್ತಿ ಬಡವರಿಗೆ ಬರಬಾರದೆಂಬ ತತ್ವದಲ್ಲಿ ಬಿಜೆಪಿಗೆ ನಂಬಿಕೆ ಇದೆ. ಬಿಜೆಪಿ 600 ಭರವಸೆ ಗಳನ್ನು 2018 ರಲ್ಲಿ ನೀಡಿತ್ತು. ಅವುಗಳಲ್ಲಿ ಎಷ್ಟನ್ನು ಈಡೇರಿಸಿದ್ದಾರೆ. ನಾವು 165 ಭರವಸೆ ಕೊಟ್ಟು 158 ಈಡೇರಿಸಿದ್ದಾಗಿ ಲೆಕ್ಕ ಕೊಡುತ್ತಿದ್ದೇವೆ. ಅವರು ಎಷ್ಟು ಭರವಸೆ ನೀಡಿ ಎಷ್ಟನ್ನು ಈಡೇರಿಸಿದ್ದಾರೆ ಎನ್ನುವ‌ ಲೆಕ್ಕ ಕೊಡುತ್ತಾರೆಯೇ ಎಂದು ಸಿಎಂ ಸವಾಲು ಹಾಕಿದರು.

ವಕ್ಫ್ ವಿಚಾರದಲ್ಲಿ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಹೇಳಿದ ಮೇಲೂ ಬಿಜೆಪಿ ಹೋರಾಟ ಮಾಡುತ್ತಿದೆ ಎಂದರೆ ರಾಜಕೀಯ ಅಲ್ಲದೆ ಇನ್ನೇನು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಾಜಿ ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿಗಳು ಸಂಪೂರ್ಣ ಮುಸ್ಲಿಂ ಆಗಿದ್ದಾರೆ ಎಂಬ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಅವರೊಬ್ಬ ಮಹಾನ್ ಕೋಮುವಾದಿ. ಕೋಮುವಾದಿಗಳಿಂದ ಇನ್ನೇನು ನಿರೀಕ್ಷೆ ಮಾಡಲಾಗುತ್ತದೆ ಎಂದರು.

ಅವರಿಗೆ ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಗೌರವವಿಲ್ಲ ಕೋಮುವಾದ ಮಾಡುವುದೇ ಅವರ ಕಸುಬು. ಸಮಾಜವನ್ನು ಜಾತಿ, ಧರ್ಮದ ಹೆಸರಿನಲ್ಲಿ ಒಡೆಯುವುದೇ ಅವರ ರಾಜಕಾರಣ ಎಂದು ಸಿದ್ದರಾಮಯ್ಯ ಇದೇ ವೇಳೆ ವಾಗ್ದಾಳಿ ನಡೆಸಿದರು.

ವಕ್ಫ್ ಆಸ್ತಿ ಕಾಪಾಡುವೆ ಎಂದಿದ್ದ ಬಸವರಾಜ ಬೊಮ್ಮಾಯಿ ಈಗ ಉಲ್ಟಾ : ಸಿಎಂ ಟೀಕೆ Read More