ಅ ಭಾ ಸಾಹಿತ್ಯ ಸಮ್ಮೇಳನ:ವಿವಿ ಪರೀಕ್ಷೆ ಮುಂದೂಡಲು ಮನವಿ‌

ಮೈಸೂರು: ಇದೇ ತಿಂಗಳು 20, 21, 22 ರಂದು ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇರುವುದರಿಂದ ಡಿಸೆಂಬರ್ ತಿಂಗಳ 21, 22 ರಂದು ನಡೆಸಲು ಉದ್ದೇಶಿಸಿರುವ ಎಲ್ಲ ರೀತಿಯ ಪರೀಕ್ಷೆಗಳನ್ನು ಮುಂದೂಡಬೇಕೆಂದು ಕರ್ನಾಟಕ ಸೇನಾ ಪಡೆ ಒತ್ತಾಯಿಸಿದೆ.

ಈ‌ ಬಗ್ಗೆ ಗುರುವಾರ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಿಗೆ ಕರ್ನಾಟಕ ಸೇನಾ ಪಡೆ ವತಿಯಿಂದ ಮನವಿ ಸಲ್ಲಿಸಲಾಯಿತು.

ಬಹಳ ವರ್ಷಗಳ ನಂತರ ನಮ್ಮ ಹಳೆ ಮೈಸೂರು ಪ್ರಾಂತ್ಯವಾದ ಮಂಡ್ಯ ಜಿಲ್ಲೆಯಲ್ಲಿ ಅಖಿಲ‌ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಆಗಿರೋದು ಅತ್ಯಂತ ಹೆಮ್ಮೆಯ ಸಂಗತಿ.

ನಾಡಿನ ಏಳು ಕೋಟಿ ಕನ್ನಡಿಗರ ಜಾತ್ರೆಗೆ ದೇಶ ವಿದೇಶಗಳಿಂದ ಅತಿಥಿ ಗಣ್ಯರು, ಸಾಹಿತಿಗಳು, ವಿಶ್ವವಿದ್ಯಾನಿಲಯದ ಕುಲಪತಿಗಳು, ವಿದ್ವಾಂಸರು, ಕಲಾವಿದರು, ಹೋರಾಟಗಾರರು, ಅಧ್ಯಾಪಕರು, ಕ್ರೀಡಾಪಟುಗಳು, ಚಲನಚಿತ್ರ ನಟರು, ರಾಜಕಾರಣಿಗಳು ಹಾಗೂ ವಿದ್ಯಾರ್ಥಿಗಳು ಇನ್ನೂ ಅನೇಕ ಮಹನೀಯರು ಆಗಮಿಸುತ್ತಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಪಿ ಎಚ್ ಡಿ ಪ್ರವೇಶ ಪರೀಕ್ಷೆಗಳನ್ನು ಸಹ ಇದೇ ಡಿಸೆಂಬರ್ ತಿಂಗಳ 21, 22 ರಂದು ನಡೆಸಲು ಉದ್ದೇಶಿಸಲಾಗಿದೆ.

ಈ ಪರೀಕ್ಷೆಗಳನ್ನು ತೆಗೆದುಕೊಂಡಿರುವ ಸಹಸ್ರಾರು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಸಹ ಕನ್ನಡದ ಅಭಿಮಾನಿಗಳಾಗಿ ಕನ್ನಡ ಜಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.ಹಾಗಾಗಿ ಪಿ ಎಚ್ ಡಿ ಪ್ರವೇಶ ಪರೀಕ್ಷೆಯನ್ನು ಒಂದು ವಾರಗಳ ಕಾಲ ಮುಂದೂಡಿ ವಿದ್ಯಾರ್ಥಿಗಳು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕಣ್ತುಂಬಿಕೊಳ್ಳಲು ಅನುಕೂಲ ಮಾಡಿಕೊಡಬೇಕೆಂದು ಉಪಕುಲಪತಿಗಳಿಗೆ ಕೋರಲಾಯಿತು.

ಮನವಿಗೆ ಸ್ಪಂದಿಸಿದ ಉಪಕುಲಪತಿಗಳು ಪರೀಕ್ಷೆಗಳನ್ನು ಮುಂದೂಡುವುದಾಗಿ ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ತಿಳಿಸಿದ್ದಾರೆ.

ಮನವಿ ಸಲ್ಲಿಸಿದ ವೇಳೆ ಪ್ರಭುಶಂಕರ್, ಡಾ. ನರಸಿಂಹೇಗೌಡ, ರಾಧಾಕೃಷ್ಣ, ಹನುಮಂತಯ್ಯ, ರಘು ಅರಸ್ ಹಾಗೂ ಪ್ರಭಾಕರ್ ಉಪಸ್ಥಿತರಿದ್ದರು.

ಅ ಭಾ ಸಾಹಿತ್ಯ ಸಮ್ಮೇಳನ:ವಿವಿ ಪರೀಕ್ಷೆ ಮುಂದೂಡಲು ಮನವಿ‌ Read More