ಮತ ಕಳವಿನ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಆಯೋಗ ರಚಿಸಿ ತನಿಖೆ ಮಾಡಿ:ಆಪ್

ಬೆಂಗಳೂರು: ಮತ ಕಳವಿನ ಬಗ್ಗೆ ಕೂಡಲೇ ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ಆಯೋಗ ರಚಿಸಿ ತನಿಖೆ ನಡೆಸಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಮತಕಳವಿನ ಆರೋಪದ ಬಗ್ಗೆ ಚುನಾವಣಾ ಆಯೋಗವು ರಾಷ್ಟ್ರದ ಜನತೆಗೆ ನಿರಾಧಾರ ಎಂದು ನಿರೂಪಿಸುವ ಕ್ರಮಗಳನ್ನು ತೆಗೆದುಕೊಳ್ಳದೆ ರಾಜಕೀಯ ನಾಯಕರುಗಳ ರೀತಿಯಲ್ಲಿ ಪ್ರತ್ಯಾರೋಪವನ್ನು ಮಾಡುತ್ತಿರುವುದು ಅಸಂವಿಧಾನಿಕ ಕ್ರಮ ಎಂದು ಆಮ್ ಆದ್ಮಿ ಪಕ್ಷದ ಸಂಘಟನಾ ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ ಎಕ್ಸ್ ಖಾತೆಯಲ್ಲಿ ಒತ್ತಾಯಿಸಿದ್ದಾರೆ.

ಕೂಡಲೇ ಕೇಂದ್ರ ಸರ್ಕಾರವು ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರುಗಳ ಆಯೋಗವನ್ನು ರಚಿಸಿ ಸಮಗ್ರ ತನಿಖೆಯನ್ನು ನಡೆಸಬೇಕು ಎಂದು ಅಶೋಕ್ ಮೃತ್ಯುಂಜಯ ಒತ್ತಾಯಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ನ್ಯಾಯ ಸಮ್ಮತವಾದ ಚುನಾವಣೆಗಳನ್ನು ನಡೆಸಲಾಗದೆ ಸಂಪೂರ್ಣ ವೈಫಲ್ಯ ಹೊಂದಿರುವ ಕೇಂದ್ರ ಚುನಾವಣಾ ಆಯೋಗವು ತನ್ನ ತಪ್ಪನ್ನು ಮರೆಮಾಚಲು ಈ ರೀತಿ ರಾಜಕೀಯ ಪ್ರೇರಿತ ಸುದ್ದಿಗೋಷ್ಠಿಗಳನ್ನು ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಮುಂಬರುವ ದಿನಗಳಲ್ಲಿ ರಾಷ್ಟ್ರದ ಯುವ ಪೀಳಿಗೆ ರಾಷ್ಟ್ರದ ಸಂವಿಧಾನ ಹಾಗೂ ಮತದಾನ ಪ್ರಕ್ರಿಯೆಗಳಲ್ಲಿಯೇ ನಂಬಿಕೆಯನ್ನು ಕಳೆದುಕೊಳ್ಳುವ ಮುಂಚೆ ಎಲ್ಲರೂ ಎಚ್ಚೆತ್ತುಕೊಂಡು ಎಚ್ಚರಿಕೆಯ ನಡೆಯನ್ನು ಪ್ರದರ್ಶಿಸಬೇಕಾಗಿದೆ.

ರಾಷ್ಟ್ರದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವ ಮಹತ್ವದ ಜವಾಬ್ದಾರಿ ಎಲ್ಲರ ಮೇಲು ಇದೆ. ಈ ರೀತಿಯ ರಾಜಕೀಯ ಆರೋಪ ಪ್ರತ್ಯಾರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಅಶೋಕ್ ಮೃತ್ಯುಂಜಯ ಅಭಿಪ್ರಾಯ ಪಟ್ಟಿದ್ದಾರೆ.

ಮತ ಕಳವಿನ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಆಯೋಗ ರಚಿಸಿ ತನಿಖೆ ಮಾಡಿ:ಆಪ್ Read More

‘ಕೈ’ಲಾಗದವರ ಕೊನೆಯ ಅಸ್ತ್ರವೇ ಆಪಪ್ರಚಾರ-ಅಶೋಕ್ ಟೀಕಾಪ್ರಹಾರ

ಬೆಂಗಳೂರು: ಚುನಾವಣಾ ಆಯೋಗ ಮತ್ತು ಮತದಾರರ ಪಟ್ಟಿಯ ಬಗ್ಗೆ ರಾಹುಲ್ ಗಾಂಧಿ ಅವರು ಮಾಡಿರುವ ಆರೋಪಗಳು ಆಧಾರರಹಿತ ಮತ್ತು ಸುಳ್ಳು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ ‌

ರಾಹುಲ್ ಗಾಂಧಿ ಅವರ ಆರೋಪಗಳಲ್ಲಿ ಹುರುಳಿದ್ದರೆ ಚುನಾವಣಾ ಆಯೋಗಕ್ಕೆ ಪುರಾವೆ ಒದಗಿಸಬೇಕು. ಇಲ್ಲವಾದರೆ ದೇಶದ ಮತದಾರರಲ್ಲಿ ಕ್ಷಮೆ ಯಾಚಿಸಬೇಕು ಎಂದು ಟ್ವೀಟ್ ಮಾಡಿ ಅಶೋಕ್ ಒತ್ತಾಯಿಸಿದ್ದಾರೆ.

ಒಂದು ವೇಳೆ ಆರೋಪಗಳಿಗೆ ಪುರಾವೆ ಇದ್ದರೆ 7 ದಿನಗಳಲ್ಲಿ ಅಫಿಡವಿಟ್ ಸಲ್ಲಿಸಿ, ಇಲ್ಲದಿದ್ದರೆ ಇಡೀ ದೇಶಕ್ಕೆ ಕ್ಷಮೆಯಾಚಿಸಬೇಕು ಎಂದು ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ ಈಗಾಗಲೇ
ಪ್ರತ್ಯುತ್ತರ ಕೊಟ್ಟಿದೆ. ಹಾಗಾಗಿ ರಾಹುಲ್ ಗಾಂಧಿ ಪುರಾವೆ ಒದಗಿಸಲಿ ಎಂದು ತಿಳಿಸಿದ್ದಾರೆ.

ಅದು ಬಿಟ್ಟು ಹೀಗೆ ಹಾದಿ ಬೀದಿಯಲ್ಲಿ ಪೋಸ್ಟರ್ ಅಂಟಿಸಿ ನಮ್ಮ ದೇಶದ ಚುನಾವಣಾ ವ್ಯವಸ್ಥೆಗೆ, ಮತದಾರರಿಗೆ, ಜನಾದೇಶಕ್ಕೆ ಅಪಮಾನ ಮಾಡುವುದು ಯಾವ ಸೀಮೆ ನ್ಯಾಯ ಎಂದು ಅಶೋಕ್ ಕಟುವಾಗಿ ಪ್ರಶ್ನಿಸಿದ್ದಾರೆ.

ಮತಗಳ್ಳತನ ಎಂಬ ಈ ನಾಟಕ ತಮ್ಮ ಮೂರ್ಖತನ ಪ್ರದರ್ಶನ ಮಾಡುತ್ತದೆಯೇ ಹೊರತು ಮತ್ತೇನೂ ಅಲ್ಲ,’ಕೈ’ಲಾಗದವರ ಕೊನೆಯ ಅಸ್ತ್ರವೇ ಆಪಪ್ರಚಾರ ಎಂದು ಪ್ರತಿಪಕ್ಷ ನಾಯಕ ಕುಟುಕಿದ್ದಾರೆ.

ನಿಮ್ಮ ಸೋಲಿನ ಹತಾಶೆಯಿಂದ ನಮ್ಮ ದೇಶದ ಚುನಾವಣಾ ವ್ಯವಸ್ಥೆಯ ಮೇಲೆ ಊಹಾಪೋಹ ಸೃಷ್ಟಿಸುವ ಪಾಪದ ಕೆಲಸ ಮಾಡಬೇಡಿ ಅವರು ಸಲಹೆ ನೀಡಿದ್ದಾರೆ ‌

‘ಕೈ’ಲಾಗದವರ ಕೊನೆಯ ಅಸ್ತ್ರವೇ ಆಪಪ್ರಚಾರ-ಅಶೋಕ್ ಟೀಕಾಪ್ರಹಾರ Read More