ಗಾಂಧಿಯವರ ಸರ್ವೋದಯ, ಅಂಬೇಡ್ಕರ್ ಅವರ ಅಂತ್ಯೋದಯ ನಮ್ಮ ಧ್ಯೇಯ: ಸಿಎಂ

ಬೆಂಗಳೂರು: ಗಾಂಧಿಯವರ ಸರ್ವೋದಯ, ಅಂಬೇಡ್ಕರ್ ಅವರ ಅಂತ್ಯೋದಯ ನಮ್ಮ ಸರ್ಕಾರದ ಧ್ಯೇಯ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಬಿಬಿಎಂಪಿ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಜನ್ಮ ದಿನಾಚರಣೆ ಮತ್ತು ಸ್ವಚ್ಚತಾ ಆಂದೋಲನಾ ಪ್ರತಿಜ್ಞಾ ವಿಧಿ ಕಾರ್ಯಕ್ರಮ ಉದ್ಘಾಟಿಸಿ ಸಿಎಂ ಮಾತನಾಡಿದರು.

ಮಹಾತ್ಮಗಾಂಧಿ ಮೊದಲು ಇಡೀ ಗ್ರಾಮೀಣ ಭಾರತವನ್ನು ಸುತ್ತಾಡಿ ನಮ್ಮ ಜನರ ಬದುಕು ಮತ್ತು ಬವಣೆಯನ್ನು ಅರ್ಥ ಮಾಡಿಕೊಂಡು ನಂತರ ಅದಕ್ಕೆ ತಕ್ಕಂತೆ ಸ್ವಾತಂತ್ರ್ಯ ಹೋರಾಟ ಸಂಘಟಿಸಿ ಸ್ವತಃ ಜೈಲು ಸೇರಿ ಹೋರಾಟ ಮುಂದುವರೆಸಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು ಎಂದು ಹೇಳಿದರು.

ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂದು ಕರೆ ನೀಡಿ 1947 ರಲ್ಲಿ ಬ್ರಿಟೀಷರು ಭಾರತದಿಂದ ತೊಲಗುವಂತೆ ಮಾಡಿದರು ಎಂದು ಸ್ಮರಿಸಿದರು.

ಸ್ವಾತಂತ್ರ್ಯ ಭಾರತದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಆಶಯಗಳನ್ನು ಈಡೇರಿಸುವ ಸಾಮಾಜಿಕ, ಆರ್ಥಿಕ ಕಾರ್ಯಕ್ರಮಗಳನ್ನು ನಾವು ರೂಪಿಸಿ ಜಾರಿ ಮಾಡಿದ್ದೇವೆ. ನಮ್ಮ ಗ್ಯಾರಂಟಿ ಕಾರ್ಯಕ್ರಮಗಳೂ ಕೂಡ ಬಡವರಿಗೆ ಆರ್ಥಿಕ‌ ಸ್ವಾತಂತ್ರ್ಯ ಒದಗಿಸಿಕೊಡುವುದಾಗಿದೆ ಎಂದು ಸಿಎಂ ತಿಳಿಸಿದರು.

ಗ್ರಾಮಗಳ ಉದ್ದಾರ ಆಗದೆ ದೇಶ ಉದ್ದಾರ ಆಗಲು ಸಾಧ್ಯವಿಲ್ಲ ಎಂದು ನಾವು ಗ್ರಾಮಗಳ ಪ್ರಗತಿಗೆ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಹೇಳಿದರು.

ಆತ್ಮ ಸಾಕ್ಷಿಯ ನ್ಯಾಯಾಲಯ ಎಲ್ಲಾ ನ್ಯಾಯಾಲಯಗಳಿಗಿಂತ ಮಿಗಿಲಾದದು. ಆದ್ದರಿಂದ ನಾವು ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವುದೇ ಗಾಂಧಿಯವರಿಗೆ ನಾವು ಸಲ್ಲಿಸುವ ದೊಡ್ಡ ಗೌರವ ಎಂದು ಸಿದ್ದರಾಮಯ್ಯ ತಿಳಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಹೆಚ್.ಕೆ.ಪಾಟೀಲ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ, ವಿಧಾನ‌ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಬಿಬಿಎಂಪಿ ಆಯುಕ್ತರಾದ ತುಷಾರ ಗಿರಿನಾಥ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಗಾಂಧಿಯವರ ಸರ್ವೋದಯ, ಅಂಬೇಡ್ಕರ್ ಅವರ ಅಂತ್ಯೋದಯ ನಮ್ಮ ಧ್ಯೇಯ: ಸಿಎಂ Read More

ಸಿಎಂ ರಾಜೀನಾಮೆ ನೀಡದಿದ್ದರೆ ಅವರ ಪಕ್ಷದವರೇ ದಂಗೆ‌ ಏಳುತ್ತಾರೆ:ಅಶೋಕ್ ವ್ಯಂಗ್ಯ

ಬೆಂಗಳೂರು: ಸಿಎಂ ಯಾರಾಗಬೇಕೆಂದು ಕಾಂಗ್ರೆಸ್‌ ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ ಸಿದ್ದರಾಮಯ್ಯ ಈಗ ರಾಜೀನಾಮೆ ನೀಡದಿದ್ದರೆ ಅವರ ಪಕ್ಷದವರೇ ದಂಗೆ‌ ಏಳುತ್ತಾರೆ ಎಂದು ಪ್ರತಿಪಕ್ಷ ನಾಯಕ ಅಶೋಕ್ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಅವರು ಮಾತನಾಡಿದರು.

ಹೈಕೋರ್ಟ್‌ನಿಂದ ತೀರ್ಪು ಬಂದ ನಂತರವೂ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿಲ್ಲ, ಬಿ.ಎಸ್‌.ಯಡಿಯೂರಪ್ಪನವರ ಮೇಲೆ ಆರೋಪ ಬಂದಾಗ ಇವರೇ ರಾಜೀನಾಮೆಗೆ ಒತ್ತಾಯಿಸಿದ್ದರು. ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದೂ ಹೇಳಿದ್ದರು. ಹಾಗೆಯೇ ಈಗ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಕೆ.ಎಸ್‌.ಈಶ್ವರಪ್ಪ ಅವರ ಮೇಲೆ ಆರೋಪ ಬಂದಾಗಲೂ ಇದೇ ರೀತಿ ವಿಧಾನಸಭೆಯಲ್ಲಿ ಪ್ರತಿಭಟಿಸಿದ್ದರು. ಸಚಿವರಾಗಿದ್ದ ಬಿ.ನಾಗೇಂದ್ರ ಮೇಲೆ ಆರೋಪ ಬಂದು ಅವರು ರಾಜೀನಾಮೆ ನೀಡಿದ್ದಾರೆ. ಆದರೆ ಸಿಎಂ ಮಾತ್ರ ರಾಜೀನಾಮೆ ನೀಡುತ್ತಿಲ್ಲ ಎಂದು ವ್ಯಂಗ್ಯ ವಾಡಿದರು.

ವಾಲ್ಮೀಕಿ ನಿಗಮದ ಪರಿಶಿಷ್ಟ ಪಂಗಡದವರ ಹಣ ದುರ್ಬಳಕೆಯಾಗಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ, ಅಭಿವೃದ್ಧಿಗೆ ಕಾಸಿಲ್ಲ, ಆದರೆ ಲೂಟಿಗೆ ಮಾತ್ರ ಹಣ ದೊರೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂತೋಷ್‌ ಹೆಗ್ಡೆಯವರು ಈ ಹಿಂದೆ ಯಡಿಯೂರಪ್ಪನವರ ರಾಜೀನಾಮೆ ಕೇಳಿದ್ದರು. ಈಗ ಸಿದ್ದರಾಮಯ್ಯನವರ ರಾಜೀನಾಮೆ ಕೇಳಿದ್ದಾರೆ. ಹಿರಿಯ ರಾಜಕಾರಣಿ ಕೆ.ಬಿ.ಕೋಳಿವಾಡ ಕೂಡ ರಾಜೀನಾಮೆ ನೀಡುವುದು ಸೂಕ್ತ ಎಂದಿದ್ದಾರೆ. ಈ ಎಲ್ಲರ ಅಭಿಪ್ರಾಯಕ್ಕೆ ಮನ್ನಣೆ ಕೊಡಿ ಸಿದ್ದರಾಮಯ್ಯನವರೇ ಎಂದು ಅಶೋಕ್ ಆಗ್ರಹಿಸಿದರು.

ಇದು ರಾಜಕೀಯ ಪ್ರೇರಿತವಾಗಿದ್ದರೆ ಕೋರ್ಟ್‌ಗಳು ಏಕೆ ತೀರ್ಪು ನೀಡುತ್ತಿದ್ದವು, ಈ ರೀತಿ ಕಾಂಗ್ರೆಸ್‌ ಆರೋಪ ಮಾಡುವುದು ದೊಂಬರಾಟವಾಗಿದೆ ಎಂದು ವ್ಯಂಗ್ಯ ವಾಡಿದರು.

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆ ಮೊದಲಿಂದಲೂ ಸಮಸ್ಯೆ ಇದೆ. ಅನೇಕ ಬಾರಿ ಭಿನ್ನಮತ ಉಂಟಾಗಿದೆ. ಯಾರು ಸಿಎಂ ಆಗಬೇಕೆಂಬ ಚರ್ಚೆ ಕೂಡ ಕಾಂಗ್ರೆಸ್‌ನೊಳಗೆ ನಡೆಯುತ್ತಿದೆ,ಇಂತಹ ಸಮಯದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡುವುದೇ ಸೂಕ್ತ ಎಂದು ಹೇಳಿದರು.

ಸಿಎಂ ರಾಜೀನಾಮೆ ನೀಡದಿದ್ದರೆ ಅವರ ಪಕ್ಷದವರೇ ದಂಗೆ‌ ಏಳುತ್ತಾರೆ:ಅಶೋಕ್ ವ್ಯಂಗ್ಯ Read More

ಅಪಘಾತಕ್ಕೀಡಾದವರ ಜೀವ ಉಳಿಸುವಲ್ಲಿ ಅತ್ಯಾಧುನಿಕ ಆಂಬುಲೆನ್ಸ್ ಸಹಕಾರಿ:ಸಿಎಂ

ಬೆಂಗಳೂರು: ಅತ್ಯಾಧುನಿಕ ಆಂಬ್ಯುಲೆನ್ಸ್ ಗಳ ಸೇವೆಗಳು ಅಪಘಾತಕ್ಕೊಳಗಾದವರ ಜೀವ ಉಳಿಸುವಲ್ಲಿ ಆಪತ್ಕಾಲ ಯಾನ ಸೇವೆ ಸಹಕಾರಿಯಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದ ಬಳಿ 65 ಅತ್ಯಾಧುನಿಕ ಆಂಬ್ಯುಲೆನ್ಸ್ ಲೋಕಾರ್ಪಣೆಗೊಳಿಸಿ ನಂತರ ಸಿಎಂ ಮಾಧ್ಯಮದವರೊಂದಿಗೆ ಮಾತನಾಡಿರು.

26 ಸುಧಾರಿತ ಹಾಗೂ 39 ಬೇಸಿಕ್ ಲೈಫ್ ಸಪೋರ್ಟ್ ಅಂಬ್ಯುಲೆನ್ಸ್ ಗಳನ್ನು ಇಂದು ಜನರ ಸೇವೆಗೆ ಮುಕ್ತಗೊಳಿಸಲಾಗಿದ್ದು, ಇವುಗಳನ್ನು ರಾಜ್ಯದ ವಿವಿದ ಜಿಲ್ಲೆಗಳಿಗೆ ಕಳಿಸಲಾಗುವುದು ಎಂದು ತಿಳಿಸಿದರು.

ರಾಜ್ಯಪಾಲರು ಅರ್ಕಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದು, ಬಿಜೆಪಿಯವರು ಹಿಂದೆ ನಾಲ್ಕು ವರ್ಷ ಅವಧಿಯಲ್ಲಿದ್ದಾಗ ವಿಷಯವನ್ನು ಏಕೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಲಿಲ್ಲ ಎಂದು ಪ್ರಶ್ನಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಸಿ.ಟಿ.ರವಿಯವರು ರಾಜ್ಯಪಾಲರಿಗೆ ಈಗ ಪತ್ರ ಬರೆದಿದ್ದಾರಲ್ಲಾ, ಹಿಂದೆ ಅವರು ಸಚಿವರಾಗಿದ್ದಾಗ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ತಿರುಗೇಟು ನೀಡಿದರು.

ರಾಜ್ಯಪಾಲರ ಪತ್ರವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯಪಾಲರ ನಡೆಗೆ ಸಂಬಂಧಿಸಿದಂತೆ ರಾಷ್ಟ್ರಪತಿಗಳಿಗೆ ದೂರು ಕೊಡುವಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ರಾಜ್ಯಪಾಲರು ಸಣ್ಣ ವಿಷಯಗಳ ಬಗ್ಗೆ ಗಮನ ಕೊಡುತ್ತಿದ್ದಾರೆ ಎಂದು ಬೇಸರ ಪಟ್ಟರು.

ಕನ್ನಡದಲ್ಲಿ ಸಹಿ ಮಾಡುತ್ತಿಲ್ಲವೆಂಬ ಸಣ್ಣ ವಿಷಯದ ಬಗ್ಗೆಯೂ ರಾಜ್ಯಪಾಲರು ಸರ್ಕಾರಕ್ಕೆ ಪತ್ರ ಬರೆದು ವರದಿ ಕೇಳುತ್ರಾರೆ ಕನ್ನಡದಲ್ಲಿರುವ ಪತ್ರಗಳಿಗೆ ಕನ್ನಡದಲ್ಲಿ ಹಾಗೂ ಆಂಗ್ಲದಲ್ಲಿರುವ ಪತ್ರಗಳಿಗೆ ಆಂಗ್ಲದಲ್ಲಿ ಸಹಿ ಮಾಡುವುದು ತಪ್ಪೇನಲ್ಲ, ಇಂತಹ ಕ್ಷುಲ್ಲಕ ವಿಚಾರಗಳ ಬಗ್ಗೆ ರಾಜ್ಯಪಾಲರು ಉತ್ತರ ಕೇಳುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು.

ಅಪಘಾತಕ್ಕೀಡಾದವರ ಜೀವ ಉಳಿಸುವಲ್ಲಿ ಅತ್ಯಾಧುನಿಕ ಆಂಬುಲೆನ್ಸ್ ಸಹಕಾರಿ:ಸಿಎಂ Read More