ನದಿಯಲ್ಲಿ ಮುಳುಗಿ ತಾತ ಮೊಮ್ಮಕ್ಕಳು ಜಲ ಸಮಾಧಿ

ಟಿ.ನರಸೀಪುರ: ನೀರಿನಲ್ಲಿ ಮುಳುಗಿ ತಾತ ಮೊಮ್ಮಕ್ಕಳು ಜಲ ಸಮಾಧಿಯಾದ ದುರ್ಘಟನೆ ಟಿ.ನರಸೀಪುರ ಪಟ್ಟಣದಲ್ಲಿ ನಡೆದಿದೆ.

ತಿ. ನರಸೀಪುರ ಪಟ್ಟಣದ ಚೌಡಯ್ಯ (70), ಭರತ್ (13) ಧನುಷ್ (10) ಮೃತ ದುರ್ದೈವಿಗಳು.

ಕಾವೇರಿ ನದಿ ಬಳಿ ಆಟ‌ ಆಡಲು ತೆರಳಿದ್ದ‌ ವೇಳೆ ಇಬ್ಬರು ಮೊಮ್ಮಕ್ಕಳು ನೀರಿನಲ್ಲಿ ಮುಳುಗಿದ್ದಾರೆ.ಇದನ್ನು ಕಂಡ ತಾತ ಚೌಡಯ್ಯ ಮೊಮ್ಮಕ್ಕಳನ್ನು ರಕ್ಷಣೆಗೆ ಮುಂದಾಗಿದ್ದಾರೆ ಸಾಧ್ಯವಾಗದೆ ಮಕ್ಕಳೊಂದಿಗೆ ಅವರೂ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಟಿ.ನರಸೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶವವನ್ನು ಹೊರತೆಗೆದು ಟಿ. ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ‌ ಕುಟುಂಬದವರಿಗೆ ರವಾನಿಸಲಾಯಿತು.

ಈ ಸಂಬಂಧ ಮಕ್ಕಳ ತಂದೆ ನೀಡಿದ‌ ದೂರಿನ ಮೇರೆಗೆ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಟುಂಬಸ್ಥರ ಆಕ್ರಂದನ ಹೇಳಲಸದಳವಾಗಿದೆ,ವಿಷಯ ತಿಳಿದು ಪಟ್ಟಣೆ ಜನತೆ ಧಾವಿಸಿ ಮಮ್ಮಲ ಮರುಗುತ್ತಿದ್ದು ಕಂಡುಬಂದಿತು.

ನದಿಯಲ್ಲಿ ಮುಳುಗಿ ತಾತ ಮೊಮ್ಮಕ್ಕಳು ಜಲ ಸಮಾಧಿ Read More

ಹೆಚ್ ಡಿ ಕೆಗೆ ಒಳಿತಾಗಲೆಂದು ಕುಂಭ ಮೇಳದಲ್ಲಿ ಜೆಡಿಎಸ್ ಮುಖಂಡರ ಪ್ರಾರ್ಥನೆ

ಟಿ.ನರಸೀಪುರ: ಟಿ.ನರಸೀಪುರದಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಜೆಡಿಎಸ್ ಮುಖಂಡರು ಪುಣ್ಯ ಸ್ನಾನ ಮಾಡಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಒಳಿತಾಗಲೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

ಎಚ್‌ ಡಿ ಕುಮಾರಸ್ವಾಮಿ ಅಭಿಮಾನಿಗಳ ಬಳಗದ ವತಿಯಿಂದ ಇಂದು ಟಿ ನರಸೀಪುರ ಕುಂಭಮೇಳದಲ್ಲಿ ಭಾಗವಹಿಸಿ ಎಚ್‌ ಡಿ ಕುಮಾರಸ್ವಾಮಿ ಅವರಿಗೆ ಇನ್ನು ಮುಂದೆ ಹೆಚ್ಚಿನ ರೀತಿಯಲ್ಲಿ ಅಧಿಕಾರ ಸಿಗಲಿ ಹಾಗೂ 2028 ನೇ ಇಸವಿಯಲ್ಲಿ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇವೆ ಎಂದು ಮುಖಂಡರು ತಿಳಿಸಿದ್ದಾರೆ.

ಕುಂಬಮೇಳದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬೆಲವತ್ತ ರಾಮಕೃಷ್ಣಗೌಡರು ಹಾಗೂ ನಗರ ಅಧ್ಯಕ್ಷ ಕೆಆರ್ ಮಿಲ್ ಕಾಲೋನಿಯ ಆನಂದ್ ಗೌಡ್ರು ಹಾಗೂ ಪದಾಧಿಕಾರಿಗಳು ಪುಣ್ಯ ಸ್ನಾನ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಹೆಚ್ ಡಿ ಕೆಗೆ ಒಳಿತಾಗಲೆಂದು ಕುಂಭ ಮೇಳದಲ್ಲಿ ಜೆಡಿಎಸ್ ಮುಖಂಡರ ಪ್ರಾರ್ಥನೆ Read More

ದಕ್ಷಿಣ ಪ್ರಯಾಗದಲ್ಲಿ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ

ಮೈಸೂರು: ದಕ್ಷಿಣ ಪ್ರಯಾಗ ಖ್ಯಾತಿಯ ಮೈಸೂರು ಜಿಲ್ಲೆ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ 13ನೇ ಕುಂಭಮೇಳಕ್ಕೆ ಸೋಮವಾರ ವಿಧ್ಯುಕ್ತ ಚಾಲನೆ ದೊರೆಯಿತು.

ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕುಂಭಮೇಳದ ಸಂಭ್ರಮದ ಮನೆ ಮಾಡಿದ್ದು,
ಧ್ವಜಾರೋಹಣದ ಮೂಲಕ ಕುಂಭಮೇಳಕ್ಕೆ ಧಾರ್ಮಿಕ ಮುಖಂಡರು ಚಾಲನೆ ನೀಡಿದರು.

ತ್ರಿವೇಣಿ ಸಂಗಮದ ನದಿ ಮದ್ಯ ಭಾಗದಲ್ಲಿರುವ ನಡುಹೊಳೆ ಬಸಪ್ಪನ ಮುಂಭಾಗ ಪೂಜೆ ಸಲ್ಲಿಸಲಾಯಿತು.

ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥೇಶ್ವರ ಸ್ವಾಮೀಜಿ, ಕಾಗಿನೆಲೆ ಕನಕಗುರು ಮಠದ ನಿರಂಜನಾನಂದ ಪುರಿ ಸ್ವಾಮೀಜಿ, ಕೈಲಾಸಾನಂದ ಮಠದ ಜಯೇಂದ್ರ ಪುರಿ ಸ್ವಾಮಿಗಳಿಂದ ವಿವಿಧ ಮಂತ್ರಘೋಷಗಳೊಂದಿಗೆ ಪೂಜಾ ಕೈಂಕರ್ಯ ನೆರವೇರಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಉಪ ವಿಭಾಗಾಧಿಕಾರಿ ರಕ್ಷಿತ್ ಸೇರಿ ಹಲವು ಅಧಿಕಾರಿಗಳು ಜನಪ್ರತಿನಿಧಿಗಳು ಉಪಸ್ಥಿತಿದ್ದರು.

ದಕ್ಷಿಣ ಪ್ರಯಾಗದಲ್ಲಿ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ Read More

ಟಿ ನರಸೀಪುರದಲ್ಲಿ ಅದ್ಧೂರಿ 13 ನೇ ಕುಂಭಮೇಳ: ಸಕಲ ಸಿದ್ಧತೆ ಪೂರ್ಣ

ಮೈಸೂರು: ಜಿಲ್ಲೆಯ ಕಾವೇರಿ, ಕಪಿಲ ಹಾಗೂ ಸ್ಫಟಿಕ ಸರೋವರಗಳು ಸೇರುವ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಫೆಬ್ರವರಿ 10ರಿಂದ 3 ದಿನಗಳ ಕಾಲ 13ನೇ ಕುಂಭಮೇಳ ನಡೆಯಲಿದ್ದು ಸಕಲ ಸಿದ್ಧತೆ ಪೂರ್ಣಗೊಂಡು ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ.

ಆರು ವರ್ಷಗಳ ನಂತರ ನಡೆಯುತ್ತಿರುವ ಕುಂಭಮೇಳದಲ್ಲಿ ಅಪಾರ ಭಕ್ತರು ಸೇರುವ ನಿರೀಕ್ಷೆ ಇದೆ.

ಸರ್ಕಾರ ಹಾಗೂ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ, ಕರ್ನಾಟಕದ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಫೆ.12ರಂದು ಪವಿತ್ರ ಕುಂಭಸ್ನಾನ ನಡೆಯಲಿದೆ.

ಅಂದು ಬೆಳಗ್ಗೆ 9ರಿಂದ 9.30ರೊಳಗೆ ಶುಭ ಮೀನ ಲಗ್ನ ಮತ್ತು ಮಧ್ಯಾಹ್ನ 12ರಿಂದ 1 ಗಂಟೆವರೆಗೆ ವೃಷಭ ಲಗ್ನದಲ್ಲಿ ಕುಂಭಮೇಳದ ಪುಣ್ಯಸ್ನಾನ ಮಾಡಲು ಮುಹೂರ್ತ ನಿಗದಿ ಮಾಡಲಾಗಿದೆ.

ಕುಂಭಮೇಳದ ಧಾರ್ಮಿಕ ಕಾರ್ಯಕ್ರಮಕ್ಕಾಗಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಸ್ವಚ್ಛತೆ, ಲೈಟಿಂಗ್ಸ್ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ.

ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ನದಿ ಪಾತ್ರದ ಹಲವೆಡೆ ಮುಳುಗುತಜ್ಞರನ್ನು ನಿಯೋಜನೆ ಮಾಡಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ.

ಫೆ.10ರಂದು ತ್ರಯೋದಶಿ, ಪುಷ್ಯ ಪ್ರಾತಃಕಾಲ 9 ಗಂಟೆಗೆ ಶ್ರೀ ಅಗಸ್ತೇಶ್ವರ ಸನ್ನಿಧಿಯಲ್ಲಿ, ಅನುಜ್ಞೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ ನೆರವೇರಿಸಲಾಗುತ್ತದೆ. ಸಂಜೆ 5 ಗಂಟೆಗೆ ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಅಥಿತಿ ಗಣ್ಯರಿಂದ ಉದ್ಘಾಟನೆ ಮತ್ತು ಧ್ವಜಾರೋಹಣ ನೆರವೇರಲಿದೆ.

ಟಿ ನರಸೀಪುರದಲ್ಲಿ ಅದ್ಧೂರಿ 13 ನೇ ಕುಂಭಮೇಳ: ಸಕಲ ಸಿದ್ಧತೆ ಪೂರ್ಣ Read More

ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ಮೇಳ

ಮೈಸೂರು : ಮುಂದಿನ ವರ್ಷ ಫೆಬ್ರವರಿ 10ರಿಂದ ಮೂರು ದಿನ ಮೈಸೂರು ಜಿಲ್ಲೆಯ ಟಿ. ನರಸೀಪುರ ಸಮೀಪ ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ಮೇಳ ನಡೆಯಲಿದೆ.

ಅದಕ್ಕಾಗಿ ಗುರುವಾರ ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಶ್ರೀಗಳ ನೇತೃತ್ವದಲ್ಲಿ ಕುಂಭಮೇಳ ಪೂರ್ವಭಾವಿ ಸಭೆ ನಡೆಯಿತು.

ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹಾಗೂ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್‌ ರೆಡ್ಡಿ, ಎಸ್. ಪಿ ವಿಷ್ಣುವರ್ಧನ್‌ ಸೇರಿದಂತೆ ಜಿಲ್ಲೆಯ ಹಲವು ಉನ್ನತಾಧಿಕಾರಿಗಳ ನೇತೃತ್ವದಲ್ಲಿ ಕುಂಭಮೇಳದ ಪೂರ್ವಭಾವಿ ಸಭೆ ನಡೆಯಿತು.

ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಹಾಗೂ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿದರು ಅಗತ್ಯ ಸಲಹೆಗಳನ್ನು ನೀಡಿದರು.

ಪ್ರತಿ ಮೂರು ವರ್ಷಕ್ಕೊಮ್ಮೆ ಮಹಾಕುಂಭಮೇಳ ನಡೆಯಬೇಕು. ಆದರೆ ಕೊರೊನಾದಿಂದಾಗಿ ರದ್ದಾಗಿದ್ದ ಮಹಾ ಕುಂಭಮೇಳ 6 ವರ್ಷದ ಬಳಿಕ 2025ರ ಫೆಬ್ರವರಿ 10, 11 ಮತ್ತು 12 ರಂದು 12ನೇ ಮಹಾ ಕುಂಭಮೇಳ ನಡೆಯುತ್ತಿದೆ.

ಫೆ. 10 ರಂದು ಪ್ರಾತಃ ಕಾಲದಲ್ಲಿ ಸಂಕಲ್ಪ, ಗಣಪತಿ ಹೋಮ, ಅಗಸ್ತ್ಯ ದೇವಾಲಯದಲ್ಲಿ ರುದ್ರಾಭಿಷೇಕ, ಸಂಜೆ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ

ಫೆ. 11 ರಂದು ಆಶ್ಲೇಷ ಪ್ರಾತಃ ಪುಣ್ಯ ನವಗ್ರಹ ಹೋಮ, ಸುದರ್ಶನ ಹೋಮ, ಧಾರ್ಮಿಕ ಸಭೆ ನಡೆಯಲಿದೆ. ನಂತರ ಸಂತರ ಹಾಗೂ ಮಹಾ ಮಂಡಲೇಶ್ವರರ ಸಂಗಮ ಕ್ಷೇತ್ರ ಪ್ರವೇಶವಾಗಲಿದೆ. ಅನಂತರ ವಾರಣಾಸಿ ಮಾದರಿಯಲ್ಲಿ ದೀಪಾರತಿ ಜರುಗಲಿದೆ.

ಫೆ.12 ಚಂಡಿಕಾ ಹೋಮ, ಪೂರ್ಣಾಹುತಿ, ತ್ರಿವೇಣಿ ಸಂಗಮದಲ್ಲಿ ಸಪ್ತ ಪವಿತ್ರ ನದಿಗಳಿಂದ ತಂದ ತೀರ್ಥ ಸಂಯೋಜನೆ, ಪುಣ್ಯಸ್ನಾನ, ಧರ್ಮಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ದಕ್ಷಿಣ ಭಾರತದ ಮಹಾ ಕುಂಭಮೇಳಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರದಿಂದಲೂ ಸಕಲ ಸಿದ್ಧತೆ ನಡೆದಿದೆ. ಪೊಲೀಸ್ ಭದ್ರತೆ, ಮೂಲ ಸೌಕರ್ಯ,ಸ್ವಚ್ಛತೆ, ವೇದಿಕೆ ನಿರ್ಮಾಣ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.

ಸುತ್ತೂರು ಶ್ರೀಗಳು ಮಾತನಾಡಿ, ಕುಂಭಮೇಳಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕಿದೆ. ಸಚಿವರ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಸಲಾಗುತ್ತದೆ, ಕುಂಭಮೇಳ ಯಶಸ್ವಿಗೆ ಅಧಿಕಾರಿಗಳ ಪಾತ್ರ ದೊಡ್ಡದು. ಸಾರ್ವಜನಿಕರು ಕೂಡ ಇದಕ್ಕೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ ಜಗತ್ತಿನ ಎಲ್ಲಾ ನಾಗರೀಕತೆಗಳು ಬೆಳೆದಿದ್ದು ನದಿ ಪಾತ್ರದಲ್ಲೆ. ಈ ಕುಂಭಮೇಳಕ್ಕೆ ಎಲ್ಲಾ ಸರ್ಕಾರಗಳು ಸಹಕಾರ ನೀಡುತ್ತಾ ಬಂದಿವೆ. ಕುಂಭಮೇಳಕ್ಕೆ ಆಗಮಿಸುವ ಜನರು, ದಾರ್ಶನಿಕರು, ಸ್ವಾಮೀಜಿಗಳ ನುಡಿಗಳನ್ನ ಆಲಿಸಬೇಕು. ಎಲ್ಲರೂ ಭಕ್ತಿ ಮಾರ್ಗದಲ್ಲಿ ಸಾಗಬೇಕು. ಎಲ್ಲಾ ‌ಮಠದ ಸ್ವಾಮೀಜಿಗಳು ಜವಾಬ್ದಾರಿ ತೆಗೆದುಕೊಂಡಿದ್ದೇವೆ. ಇದರ ಜೊತೆ‌ಗೆ ಸರ್ಕಾರ ಕೂಡಾ ಕೈ ಜೋಡಿಸುತ್ತದೆ ಎಂದು ತಿಳಿಸಿದರು.

ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ಮೇಳ Read More

ಕೇತುಪುರ ಗ್ರಾ ಪಂಗೆ ಜಿ ಪಂ ಸಿಇಒ ಗಾಯಿತ್ರಿಧಿಡೀರ್ ಭೇಟಿ

ಮೈಸೂರು‌: ಟಿ.ನರಸೀಪುರ ತಾಲೂಕಿನ ಕೇತುಪುರ ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ‌‌
ನಿರ್ವಹಣಾಧಿಕಾರಿ ಕೆ.ಎಂ. ಗಾಯಿತ್ರಿ ಧಿಡೀರ್ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

ಕೇತುಪುರ ಗ್ರಾಮದ ಬಹುಗ್ರಾಮ ಕುಡಿಯುವ ನೀರು ಸ್ಥಾವರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಸ್ಥಾವರದ ಜಾಕ್ ವೆಲ್ ಸುತ್ತ ಸ್ವಚ್ಛಗೊಳಿಸಿ, ರಿಟೈನಿಂಗ್ ವಾಲ್ ನಿರ್ಮಿಸುವಂತೆ ಸೂಚಿಸಿದರು.

ಪ್ಯಾನಲ್ ಬೋರ್ಡ್ ದುರಸ್ತಿಯಾಗಿದ್ದು ಕೂಡಲೇ ಸರಿಪಡಿಸಲು ಕ್ರಮ ವಹಿಸುವಂತೆ ಆದೇಶಿಸಿದರು.

ನೀರಿನ ಶುದ್ಧೀಕರಣ ಘಟಕ ಅರಣ್ಯದಿಂದ ಸುತ್ತುವರೆದಿದ್ದು ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿರುವುದರಿಂದ ಅಲ್ಲಿನ ಸಿಬ್ಬಂದಿಗಳ ಸುರಕ್ಷತೆಯ ದೃಷ್ಟಿಯಿಂದ ಘಟಕದ ಸುತ್ತ ಸೋಲಾರ್ ಫೆನ್ಸಿಂಗ್ ಅಳವಡಿಸಿಕೊಳ್ಳುವಂತೆ ಗಾಯಿತ್ರಿ ಸಲಹೆ ನೀಡಿದರು.

ಮುಖ್ಯ ರಸ್ತೆಯಿಂದ ನೀರಿನ ಶುದ್ಧಿಕರಣ ಘಟಕಕ್ಕೆ ಬರುವ ರಸ್ತೆಯು ಅರಣ್ಯ ಇಲಾಖೆಯ ಸುಪರ್ದಿಗೆ ಬರುವುದರಿಂದ ಅರಣ್ಯ ಇಲಾಖೆಗೆ ಪತ್ರ ಬರೆದು ಅನುಮತಿ ಪಡೆದು ರಸ್ತೆ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮಸ್ಥರಿಗೆ ಬೋರ್ ವೆಲ್ ನೀರನ್ನು ಕೊಡುವುದರ ಬದಲಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಸರಬರಾಜು ಮಾಡುವ ನದಿ ನೀರನ್ನು ಟ್ಯಾಂಕುಗಳಿಗೆ ಹರಿಸಿ, ಅದೇ ನೀರನ್ನು ಜನರಿಗೆ ಕೊಡುವಂತೆ ಪಿಡಿಒ ಗೆ ಸೂಚಿಸಿದರು.

ನಂತರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಇ ಹಾಜರಾತಿಯನ್ನು ವೆಬ್ ತಂತ್ರಾಂಶದಲ್ಲಿ ಪರಿಶೀಲಿಸಿ ತಡವಾಗಿ ಹಾಜರಾತಿ ನಮೂದಿಸುತ್ತಿರುವ ಸಿಬ್ಬಂದಿಗಳಿಗೆ ನೋಟಿಸ್ ನೀಡಲು ಸಿಇಒ ಆದೇಶಿಸಿದರು.

ನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ನೀಡುತ್ತಿರುವ ಆಹಾರವನ್ನು ಸ್ವತಃ ತಾವೇ ಸೇವಿಸಿ ಆಹಾರ ಗುಣಮಟ್ಟವನ್ನು ಗಾಯಿತ್ರಿ ಪರಿಶೀಲಿಸಿದರು.

ಕೇತುಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶೌಚಾಲಯ, ಆಟದ ಮೈದಾನ, ಶಾಲಾ ಕಾಂಪೌಂಡ್, ಶಾಲಾ ಕೊಠಡಿಗಳನ್ನು ಪರಿಶೀಲಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದರು‌

ಈ ವೇಳೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ರಂಜಿತ್, ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಿ. ಎಸ್. ಅನಂತರಾಜು, ಪಿ ಆರ್ ಇ ಡಿ ಇಲಾಖೆಯ ಇ ಇ ವೀರೇಶ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎ ಇ ಇ ಹರ್ಷದ್ ಪಾಷಾ, ತಾಲ್ಲೂಕು ಯೋಜನಾಧಿಕಾರಿ ರಂಗಸ್ವಾಮಿ, ಪಿಡಿಒ ರವೀಂದ್ರ, ಕಾರ್ಯದಶಿ ಆಶಾಲತಾ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ಕೇತುಪುರ ಗ್ರಾ ಪಂಗೆ ಜಿ ಪಂ ಸಿಇಒ ಗಾಯಿತ್ರಿಧಿಡೀರ್ ಭೇಟಿ Read More

ವೈಶಾಖ ಹುಣ್ಣಿಮೆಯಲ್ಲಿ ಬುದ್ಧನ ಸ್ಮರಣೆ:ಮಹಾಬೋಧಿ ಲುಂಬಿನಿ ಬುದ್ಧ ವಿಹಾರದಲ್ಲಿಉಪೇಖ್ಖ ಸ್ತೂಪ ಉದ್ಘಾಟನೆ

ಮೈಸೂರು: ವೈಶಾಖ ಹುಣ್ಣಿಮೆಯ ದಿನ
ಭಗವಾನ್ ಬುದ್ಧ ಮಹಾಪರಿನಿಬ್ಬಾಣ ವನ್ನು ಸಾಧಿಸಿ ತನ್ನ ಅಂತಿಮ ನಿರ್ವಾಣ ಸ್ಥಿತಿಯನ್ನು ಪ್ರವೇಶಿಸಿದನು.ಹಾಗಾಗಿ‌ ಈ ಹುಣ್ಣಿಮೆಯ ದಿನವನ್ನು ಬುದ್ಧನ ಸ್ಮರಣೆಯಲ್ಲಿ ಬೌದ್ಧ ಧರ್ಮೀಯರು ನಾನಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.

ಅದೇ ರೀತಿ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ನೆರೆಗ್ಯಾತನಹಳ್ಳಿ ,ಕಿರುಗಾವಲು ರಸ್ತೆಯಲ್ಲಿರುವ ಮಹಾಬೋಧಿ ಲುಂಬಿನಿ ಬುದ್ಧ ವಿಹಾರದಲ್ಲೂ ವಿಶೇಷ ಕಾರ್ಯಕ್ರಮಗಳು ಜರುಗಿದವು.

ನ.15 ರಂದು‌ ಈ ಬುದ್ಧ ‌ವಿಹಾರದಲ್ಲಿ ಭಗವಾನ್ ಬುದ್ದರ ಪವಿತ್ರ ಶರೀರ ಧಾತುವಿನ
ಪ್ರತಿಷ್ಠಾಪನೆ ಮತ್ತು ಮಹಾ ಬೋಧಿ ಉಪೇಖ್ಖ ಸ್ತೂಪದ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನೆರವೇರಿತು.

ಈ ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರು ಮಹಾ ಬೋಧಿ ಸೊಸೈಟಿ ಅಧ್ಯಕ್ಷರಾದ ಪೂಜ್ಯ ಕಸ್ಸಪ ಮಹಾಥೇರಾ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶ್ರೀಲಂಕಾ ವಿನಯಾಲಂಕಾರಮಯ ಪೂಜ್ಯ ಆನಂದ‌ಥೇರೋ ಪಾಲ್ಗೊಂಡಿದ್ದರು.

ಅಂದು ಬೆಳಿಗ್ಗೆ ಬೌದ್ಧ ಬಿಕ್ಖುಗಳು,ಬೌದ್ಧ ಧರ್ಮೀಯರು, ಅಭಿಮಾನಿಗಳು ಸಾರ್ವಜನಿಕರು, ಜೆಡಿಎಸ್ ಕಾರ್ಯಾಧ್ಯಕ್ಷ ಎಸ್.ಪ್ರಕಾಶ್ ಪ್ರಿಯದರ್ಶನ್ ಮತ್ತಿತರರ ಸಮ್ಮುಖದಲ್ಲಿ ಭಗವಾನ್ ಬುದ್ಧರ ಪವಿತ್ರ ಧಾತುವನ್ನು ಮೆರವಣಿಗೆಯಲ್ಲಿ ತರಲಾಯಿತು.

ನಂತರ ಬೌದ್ಧ ಬಿಕ್ಖುಗಳಿಗೆ ಸಂಘದಾನ ಮಾಡಲಾಯಿತು.

ಪೂಜೆ ಮತ್ತು ಧ್ಯಾನ ದೊಂದಿಗೆ ಪವಿತ್ರ ಧಾತುವಿನ ಪ್ರತಿಷ್ಟಾಪನೆ ನೆರವೇರಿಸಲಾಯಿತು, ತದನಂತರ ಪೂಜ್ಯರು ಮಹಾ ಬೋಧಿ ಉಪೇಖ್ಖ ಸ್ತೂಪದ ಉದ್ಘಾಟನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಬುದ್ಧ ವಂದನೆ,ಧ್ಯನ ದೊಂದಿಗೆ ಧಾತು ಪ್ರತಿಷ್ಟಾಪನಾ ಪೂಜೆ ಹಾಗೂ ಸ್ತೂಪ ಉದ್ಘಾಟನಾ ಪೂಜೆ ಮಾಡಲಾಯಿತು. ನಂತರ ಧಮ್ಮ ಪ್ರವಚನ ನಡೆಯಿತು.

ಎಲ್ಲಾ ಕಾರ್ಯಕ್ರಮ ದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.

ಇತಿಹಾಸ:
ಬುದ್ಧನ ಮರಣದ ನಂತರ, ಅವನ ದೇಹವನ್ನು ದಹಿಸಲಾಯಿತು,ಆಗ ದೇಹದಿಂದ, ಬುದ್ಧನ ಪವಿತ್ರ ಅವಶೇಷಗಳು ರೂಪುಗೊಂಡವು.ಬುದ್ಧನ ಆಧ್ಯಾತ್ಮಿಕ ಪ್ರಯಾಣದ ಸಂಕೇತವಾಗಿ ಪೂಜಿಸಲ್ಪಟ್ಟ ಈ ಅವಶೇಷಗಳನ್ನು ಎಂಟು ರಾಜ್ಯಗಳಿಗೆ ವಿತರಿಸಲಾಯಿತು.

ನಂತರ, ಬುದ್ಧನ ಹಿರಿಯ ಶಿಷ್ಯರಲ್ಲಿ ಒಬ್ಬರಾದ ಪೂಜ್ಯ ಕಸ್ಸಪ ಮಹಾಥೇರರು ಈ ಅವಶೇಷಗಳನ್ನು ಸಂಗ್ರಹಿಸಿ, ರಾಜ ಅಜಾತಶತ್ರುವಿನ ಸಹಾಯದಿಂದ ರಾಜಗೀರ್ (ರಾಜಗ್ರಹ) ನಲ್ಲಿರುವ ಭೂಗತ ಸ್ತೂಪದಲ್ಲಿ ಪ್ರತಿಷ್ಠಾಪಿಸಿದರು.

ಎರಡು ಶತಮಾನಗಳ ನಂತರ ಭರತ ನಾಡಿನ ಚಕ್ರವರ್ತಿ ಅಶೋಕ ಚಕ್ರವರ್ತಿ ಬುದ್ಧನ ಅವಶೇಷಗಳನ್ನು ಅಗೆದು ತೆಗೆದುಕೊಂಡನು. ಭಕ್ತಿಯ ಸ್ಮಾರಕವಾಗಿ,ಅವುಗಳನ್ನು ಭಾರತದಾದ್ಯಂತ ವಿತರಿಸಿದನು.

ಅವುಗಳನ್ನು 84,000 ಸ್ತೂಪಗಳಲ್ಲಿ ಪ್ರತಿಷ್ಠಾಪಿಸಿದರು, ಇದು ಬೌದ್ಧಧರ್ಮವನ್ನು ಹರಡುವ ಅಶೋಕ ಚಕ್ರವರ್ತಿಯ ಬದ್ಧತೆಗೆ ಸಾಕ್ಷಿಯಾಗಿದೆ. ಅಂದಿನಿಂದ, ಬುದ್ಧನ ಪವಿತ್ರ ಅವಶೇಷಗಳನ್ನು ಸಂರಕ್ಷಿಸುತ್ತಾ ಬರಲಾಗಿದೆ ಮತ್ತು ಪ್ರಪಂಚದಾದ್ಯಂತ ಸ್ತೂಪಗಳಲ್ಲಿ ಪ್ರತಿಷ್ಠಾಪಿಸಲಾಗಿದೆ,

ಈ ಸ್ತೂಪಗಳು ಬೌದ್ಧ ಸಂಪ್ರದಾಯದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿವೆ. ಪ್ರತಿಯೊಂದು ಸ್ತೂಪವು ಕೇವಲ ವಾಸ್ತುಶಿಲ್ಪದ ಅದ್ಭುತವಲ್ಲ, ನಾಲ್ಕು ಉದಾತ್ತ ಸತ್ಯಗಳು, ಉದಾತ್ತ ಎಂಟು ಮಾರ್ಗ ಮತ್ತು ಜ್ಞಾನೋದಯದ ಹಂತಗಳ ಪ್ರಾತಿನಿಧ್ಯವಾಗಿದೆ.

ಕಳೆದ 2,600 ವರ್ಷಗಳಲ್ಲಿ, ಸ್ತೂಪಗಳು ಸಾಂಸ್ಕೃತಿಕ ಕೇಂದ್ರಗಳಾಗಿ ಮಾರ್ಪಟ್ಟಿವೆ-ಧ್ಯಾನ, ಕಲೆ, ವಾಸ್ತುಶಿಲ್ಪ ಮತ್ತು ಬೌದ್ಧ ಬೋಧನೆಗಳ ಪ್ರತಿಬಿಂಬದ ತಾಣಗಳಾಗಿವೆ.

ಇದೀಗ ಮಹಾಬೋಧಿ ಸೊಸೈಟಿಯು ಥಾಯ್ ಧ್ಯಾನ ಶಿಕ್ಷಕ ಅಚಾನ್ ತಿರಸಿಟ್ಟೊ ಅವರಿಂದ ಬುದ್ಧನ ಪವಿತ್ರ ಅವಶೇಷಗಳ ಪೂಜ್ಯ ಸಂಗ್ರಹವನ್ನು ಸ್ವೀಕರಿಸಿದೆ. ಈ ಅವಶೇಷಗಳನ್ನು ಮೈಸೂರು ಜಿಲ್ಲೆ ಟಿ.ನರಸೀಪುರದ ನೆರಗ್ಯಾತನಹಳ್ಳಿಯಲ್ಲಿ ಹೊಸದಾಗಿ ನಿರ್ಮಿಸಲಾದ ಸ್ತೂಪದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಈ ಸ್ತೂಪವು ಬುದ್ಧನ ಅವಶೇಷಗಳ ಭಂಡಾರ ಮಾತ್ರವಲ್ಲ, ಬೌದ್ಧಧರ್ಮದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಗುರುತಿಸುವ ಐತಿಹಾಸಿಕ ಲಿಪಿಯಾದ ತಾಮ್ರಲಿಪಿಯಲ್ಲಿ ನೂರಾರು ಪ್ರತಿಮೆಗಳು ಮತ್ತು ಪುರಾತನ ಶಾಸನಗಳೊಂದಿಗೆ ಧಮ್ಮಪದ ಮತ್ತು ತ್ರಿಪಿಟಕದಂತಹ ಪವಿತ್ರ ಗ್ರಂಥಗಳನ್ನು ಸಹ ಹೊಂದಿದೆ.

ಈ ಸ್ತೂಪವು ಬುದ್ಧನ ಬೋಧನೆಗಳ ಜ್ಞಾಪನೆಯಾಗಿ ಮತ್ತು ಮುಂದಿನ ಪೀಳಿಗೆಗೆ ಶಾಂತಿ, ಧ್ಯಾನ ಮತ್ತು ಆಧ್ಯಾತ್ಮಿಕ ಜಾಗೃತಿಯ ದಾರಿದೀಪವಾಗಿ ಕಾರ್ಯನಿರ್ವಹಿಸಲಿದೆ.

ವೈಶಾಖ ಹುಣ್ಣಿಮೆಯಲ್ಲಿ ಬುದ್ಧನ ಸ್ಮರಣೆ:ಮಹಾಬೋಧಿ ಲುಂಬಿನಿ ಬುದ್ಧ ವಿಹಾರದಲ್ಲಿಉಪೇಖ್ಖ ಸ್ತೂಪ ಉದ್ಘಾಟನೆ Read More