ಮಕ್ಕಳ ಕೈಗೆ ಪೆನ್ ಬದಲು ತಲ್ವಾರ್‌ ನೀಡಿ ಹೇಳಿಕೆ ನೀಡಿದ ಸ್ವಾಮೀಜಿ ವಿರುದ್ಧ ಕ್ರಮ:ಪರಂ

ಬೆಂಗಳೂರು: ಮಕ್ಕಳ ಕೈಗೆ ಪೆನ್ನಿನ ಬದಲು ತಲ್ವಾರ್‌ ನೀಡಿ ಎಂದು ಸ್ವಾಮೀಜಿಯೊಬ್ಬರು ಹೇಳಿರುವುದು ಸರಿಯಲ್ಲ,ಈ ಬಗ್ಗೆ ಕ್ರಮ ಕೈಗೊಳ್ಳಲಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ಇದರ ವಿರುದ್ಧ ಯಾವ ಸೆಕ್ಷನ್‌ ಅಡಿ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂಬುದನ್ನು ಪರಿಶೀಲನೆ ನಡೆಸುವುದು ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಧಾರ್ಮಿಕ ಗುರುಗಳು ಧರ್ಮವನ್ನು ಪ್ರಚಾರ ಮಾಡಬೇಕು ಎಂದು ತಿಳಿಸಿದರು.

ಎಲ್ಲರೂ ಧಾರ್ಮಿಕ ನಾಯಕರಿಗೆ ಗೌರವ ಕೊಟ್ಟು ಕಾಲಿಗೆ ಬೀಳುತ್ತೇವೆ,ಪೂಜ್ಯನೀಯ ಸ್ಥಾನದಿಂದ ನೋಡುತ್ತೇವೆ,ಅವರು ಎಲ್ಲರನ್ನೂ ಸಮಾನವಾಗಿ ನೋಡಬೇಕು. ಅಂತಹವರು ಪ್ರಚೋದನೆಯ ಮಾತುಗಳನ್ನಾಡುವುದು ಸರಿಯಲ್ಲ ಎಂದು ಬೇಸರ‌ ವ್ಯಕ್ತಪಡಿಸಿದರು.

ಯಾವುದೇ ಧರ್ಮದ ಮುಖಂಡರಾದರೂ ನಿಷ್ಪಕ್ಷಪಾತವಾಗಿರಬೇಕು, ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ತಿಳಿಸಿದರು.

ಕೋವಿಡ್‌ ಹಗರಣದಲ್ಲಿ ನಾವು ಯಾವುದೇ ರೀತಿಯ ಆಯ್ಕೆ ರಾಜಕಾರಣ ಮಾಡುತ್ತಿಲ್ಲ. 2023 ರ ಚುನಾವಣೆಯಲ್ಲಿ ಕೋವಿಡ್‌ ಸಂದರ್ಭದಲ್ಲಿ ಭ್ರಷ್ಟಾಚಾರವಾಗಿದೆ ಎಂದು ಆರೋಪ ಮಾಡಿದ್ದೆವು,ಅದರ ತನಿಖೆ ನಡೆಸುವುದಾಗಿಯೂ ತಿಳಿಸಿದ್ದೆವು. ಅದರಂತೆ ಜಸ್ಟೀಸ್‌‍ ಮೈಕಲ್‌ ಕುನ್ನಾ ಸಮಿತಿ ರಚಿಸಲಾಗಿದ್ದು, ಮಧ್ಯಂತರ ವರದಿ ಬಂದಿದೆ ಎಂದು ಪರಮೇಶ್ವರ್ ಹೇಳಿದರು.

ಪಿಪಿಇ ಕಿಟ್‌ ಖರೀದಿಯಲ್ಲಿ ಸರ್ಕಾರಕ್ಕೆ 14 ಕೋಟಿ ರೂ. ನಷ್ಟವಾಗಿದೆ ಎಂಬ ವರದಿಯಿದೆ. ಇದರ ಅಧ್ಯಯನಕ್ಕೆ ಸಂಪುಟ ಉಪಸಮಿತಿ ರಚಿಸಲಾಗಿದೆ. ಉಪಚುನಾವಣೆ ಬಳಿಕ ಸಭೆ ನಡೆಸಿ ವರದಿ ನೀಡಲಾಗುವುದು ಅನಂತರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಮಕ್ಕಳ ಕೈಗೆ ಪೆನ್ ಬದಲು ತಲ್ವಾರ್‌ ನೀಡಿ ಹೇಳಿಕೆ ನೀಡಿದ ಸ್ವಾಮೀಜಿ ವಿರುದ್ಧ ಕ್ರಮ:ಪರಂ Read More