ಬಿಜೆಪಿಯ ಕುತಂತ್ರಕ್ಕೆ ಉತ್ತರವಾಗಿ ನ್ಯಾಯಾಲಯದಲ್ಲಿ ನ್ಯಾಯ ದೊರೆತಿದೆ-ಸಿಎಂ

ಬೆಳಗಾವಿ: ಬಿಜೆಪಿಯ ಕುತಂತ್ರಕ್ಕೆ ಉತ್ತರವಾಗಿ ನ್ಯಾಯಾಲಯದಲ್ಲಿ ನ್ಯಾಯ ದೊರೆತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದನ್ನು ಖಂಡಿಸಿ, ಈ ಪ್ರಕರಣದಲ್ಲಿ ಇಡಿ ಸಲ್ಲಿಸಿದ ಆರೋಪ ಪಟ್ಟಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ ವಿಚಾರಣಾ ನ್ಯಾಯಾಲಯದ ತೀರ್ಮಾನವನ್ನು ಬೆಂಬಲಿಸಿ ಬೆಳಗಾವಿ ಸುವರ್ಣ ಸೌಧದ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸಿಎಂ ಮಾತನಾಡಿದರು.

ಬಿಜೆಪಿಯವರದು ದ್ವೇಷದ ರಾಜಕಾರಣ, ಕೇಂದ್ರ ಅಥವಾ ರಾಜ್ಯಗಳಾಗಲಿ, ಬಿಜೆಪಿ ಅಧಿಕಾರದಲ್ಲಿರುವ ಕಡೆ ಕಾಂಗ್ರೆಸ್ ನವರನ್ನು ಗುರಿಯಾಗಿಸಿ, ಅವರನ್ನು ಅಪರಾಧಿಗಳಾಗಿ ಬಿಂಬಿಸಿ, ನ್ಯಾಯಾಲಯಕ್ಕೆ ಎಡತಾಕುವಂತೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರು ತಮ್ಮ ತಪ್ಪುಗಳನ್ನು ಮರೆಮಾಚಲು ಇಂತಹ ದುಷ್ಕೃತ್ಯಕ್ಕೆ ಕೈಹಾಕಿದ್ದಾರೆ. ಇಂದು ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ದೇಶದಲ್ಲಿ ಹಣದುಬ್ಬರ ಹೆಚ್ಚಾಗಿದೆ, ನಿರುದ್ಯೋಗದ ಪ್ರಮಾಣ ಏರಿಕೆಯಾಗಿದೆ. ಜನರ ಮೇಲೆ ತೆರಿಗೆಗಳನ್ನು ಮನಬಂದಂತೆ ಹೇರಿ, ಭಾರತವನ್ನು ಸಾಲಗಾರ ದೇಶವನ್ನಾಗಿ ಮಾಡಲಾಗುತ್ತಿದೆ ಎಂದು ಸಿದ್ದು ಆರೋಪಿಸಿದರು.

ಮನಮೋಹನ್ ಸಿಂಗ್ ಅವರು ದೇಶದ ಪ್ರಧಾನಿಯಾಗಿದ್ದಾಗ ದೇಶದ ಸಾಲ ಸುಮಾರು 53.11 ಲಕ್ಷ ಕೋಟಿ ಆಗಿತ್ತು. ಆದರೆ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಸಾಲದ ಮೊತ್ತ ಸುಮಾರು 2 ಲಕ್ಷ ಕೋಟಿಯನ್ನೂ ಮೀರಿದೆ, ಬಿಜೆಪಿಯವರು ತಮ್ಮ ಈ ತಪ್ಪನ್ನು ಮರೆಮಾಚಲು ಇಂತಹ ಸುಳ್ಳು ಪ್ರಕರಣಗಳ ಮೊರೆಹೋಗುತ್ತಿದ್ದಾರೆ ಎಂದು ಟೀಕಿಸಿದರು.

ಮೋದಿಯವರು ಅಧಿಕಾರಕ್ಕೆ ಬಂದ ತಕ್ಷಣ, ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದು, ಪ್ರತಿವರ್ಷ 2 ಕೋಟಿ ಉದ್ಯೋಗವನ್ನು ಸೃಷ್ಟಿಸುವುದಾಗಿ ಘೋಷಿಸಿದ್ದರು ಅವರು ಹೇಳಿದ್ದುದು ಯಾವುದೂ ಈಡೇರಲಿಲ್ಲ ಎಂದು ಟೀಕಿಸಿದರು.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು 1937 ರಲ್ಲಿ ಜವಾಹರ್ ಲಾಲ್ ನೆಹರೂ ಅವರು ದೇಶದ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಜಾಗೃತಿ ಮೂಡಿಸಲು ಈ ಪತ್ರಿಕೆಯನ್ನು ಪ್ರಾರಂಭಿಸಿದರು, ಇದು ಕಾಂಗ್ರೆಸ್ ಪಕ್ಷದ ಆಸ್ತಿ. ನಂತರ ಈ ಪತ್ರಿಕೆಯನ್ನು ಯಂಗ್ ಇಂಡಿಯನ್ ಸಂಸ್ಥೆ ವಹಿಸಿಕೊಂಡಿತು.
ಸಂಸ್ಥೆಗೆ ಸೇರಿದ್ದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ , ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್ ಇವರ ಮೇಲೆ ಪ್ರಕರಣ ದಾಖಲಿಸಿ, ಇಡಿ ತನಿಖೆಯನ್ನು ಮಾಡಿಸಲಾಯಿತು. 2012 ರಲ್ಲಿ ಸುಬ್ರಮಣ್ಯಂ ಸ್ವಾಮಿಯವರು ಇವರ ವಿರುದ್ಧ ದಾವೆ ಹೂಡಿದ್ದರು. ಪ್ರಸ್ತುತ ಇಡಿಯವರು ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದೆ. ಈ ಪ್ರಕರಣವನ್ನು ಸುಳ್ಳು ಎಂದು ಹೈಕೋರ್ಟ್ ನ್ಯಾಯವನ್ನು ಎತ್ತಿಹಿಡಿದಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ ಯನ್ನು ಬದಲಿಸಿ ವಿಬಿ-ಜಿ‌ ರಾಮ್ ಜಿ ಯೋಜನೆ ಎಂದು ಬದಲಿಸಿದ್ದಾರೆ. ರಾಜಭವನವನ್ನು ಇಂದು ಲೋಕಭವನ ಎಂದು ಬದಲಾಯಿಸಿದ್ದಾರೆ. ಇದು ಸರ್ಕಾರದ ಆಸ್ತಿಯಾಗಿದ್ದು, ಇದರ ಹೆಸರನ್ನು ಬದಲಾವಣೆ ಮಾಡಿದ್ದು ಸರಿಯಲ್ಲ. ಹೆಸರು ಬದಲಾಯಿಸುವ ಕಾರ್ಯದಲ್ಲಿ ನಿರತವಾಗಿದೆಯೇ ಹೊರತು ಬಡವರಿಗೆ ಅನುಕೂಲ ಕಲ್ಪಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿಲ್ಲ ಎಂದು ಸಿಎಂ ಕಿಡಿಕಾರಿದರು.

ಈ ದಿನ ತೀರ್ಪಿನ ಪರವಾಗಿ ಪ್ರತಿಭಟನೆಯನ್ನು ಕೈಗೊಂಡಿದ್ದು, ಸದನದ ಒಳಗೆ ಮತ್ತು ಹೊರಗೆ ಹೋರಾಟ ಮುಂದುವರಿಸುತ್ತೇವೆ, ರಾಜ್ಯ ಹಾಗೂ ದೇಶದುದ್ದಕ್ಕೂ ಬಿಜೆಪಿಯ ಕುತಂತ್ರ ನೀತಿಯನ್ನು ವಿರೋಧಿಸಿ ಪ್ರತಿಭಟನೆಯನ್ನು ಕೈಗೊಳ್ಳುತ್ತೇವೆ. ಕಾಂಗ್ರೆಸ್ ಎಂದಿಗೂ ಕೈಕಟ್ಟಿ ಕೂರುವ ಪಕ್ಷವಲ್ಲ,ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದು ಕಾಂಗ್ರೆಸ್ ಪಕ್ಷ, ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ ಆದರೆ ಈಗ ದ್ವೇಷ ರಾಜಕಾರಣವನ್ನು ಮಾಡುತ್ತಿದ್ದಾರೆ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.

ಬಿಜೆಪಿಯ ಕುತಂತ್ರಕ್ಕೆ ಉತ್ತರವಾಗಿ ನ್ಯಾಯಾಲಯದಲ್ಲಿ ನ್ಯಾಯ ದೊರೆತಿದೆ-ಸಿಎಂ Read More