ತಾಪಮಾನ ಏರಿಕೆ;ಮುನ್ನೆಚ್ಚರಿಕೆ ಕ್ರಮ ವಹಿಸಿ-ಡಿಹೆಚ್ಒ ಡಾ.ಕುಮಾರಸ್ವಾಮಿ

ಮೈಸೂರು: ಮೈಸೂರಿನಲ್ಲಿ ತಾಪಮಾನ ಏರಿಕೆ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯ ಕಲ್ಯಾಣ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಕಲ್ಯಾಣ ಅಧಿಕಾರಿ ಡಾ.ಕುಮಾರಸ್ವಾಮಿ ತಿಳಿಸಿದರು.

ಈಗಾಗಲೇ ಎರಡು ಹಂತಗಳಲ್ಲಿ ಬೇಸಿಗೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಹೆಚ್ಚು ಬಿಸಿಲಿನ ಸಮಯದಲ್ಲಿ ಸಾರ್ವಜನಿಕರು ಅನಗತ್ಯವಾಗಿ ಓಡಾಡುವುದನ್ನು ಕಡಿಮೆ ಮಾಡಬೇಕು. ದೇಹದ ನಿರ್ಜಲೀಕರಣ ಆಗದಂತೆ ಗಮನ ವಹಿಸಬೇಕು, ಉಷ್ಣಾಂಶ ಹೆಚ್ಚಾದಾಗ ಕೆಲವು ತೊಂದರೆಗಳು ಆಗುತ್ತವೆ ಎಂದು ಹೇಳಿದರು.

ನಮ್ಮ ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆಗಳಿಗೆ ಬೇಸಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ದೇಹ ನಿರ್ಜಲೀಕರಣ ಮನೆಯಲ್ಲೇ ಓಆರ್ಎಸ್ ದ್ರಾವಣ ಹೇಗೆ ತಯಾರಿಸಬೇಕೆಂಬ ಬಗ್ಗೆ ಆಶಾ ಕಾರ್ಯಕರ್ತೆಯರು ಹೇಳಿಕೊಡುತ್ತಾರೆ ಎಂದು ಡಿಹೆಚ್ಒ ತಿಳಿಸಿದರು.

ಸಾಧ್ಯವಾದಷ್ಟು ನೀರು,ತಂಪು ಪಾನೀಯ ಸೇವಿಸಬೇಕು,ಮಾಂಸಹಾರ ಕಡಿಮೆ ಮಾಡಿ, ಸಸ್ಯಹಾರವನ್ನೇ ಹೆಚ್ಚು ಬಳಸಬೇಕು. ರೈತರು ಹೊಲ ಗದ್ದೆಗಳಲ್ಲಿ ದುಡಿಯುವವರು ಮುಂಜಾನೆ ಹೋಗಿ 10.30,11 ಗಂಟೆ ಸಮಯಕ್ಕೆ ಮನೆಗೆ ಬಂದು ವಿರಮಿಸಬೇಕು. ಬಿಸಿಲ ತಾಪದಲ್ಲಿ ಕೆಲಸ ಮಾಡುವುದನ್ನು ಆದಷ್ಟು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.

ಬೇಸಿಗೆ ನಿರ್ವಹಣೆಗೆ ನಾವು ಈಗಾಗಲೇ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದೇವೆ ಕೈಪಿಡಿಗಳು,ಪೋಸ್ಟರ್ ಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದೇವೆ ಎಂದು ಡಾ.ಕುಮಾರಸ್ವಾಮಿ ತಿಳಿಸಿದರು.

ತಾಪಮಾನ ಏರಿಕೆ;ಮುನ್ನೆಚ್ಚರಿಕೆ ಕ್ರಮ ವಹಿಸಿ-ಡಿಹೆಚ್ಒ ಡಾ.ಕುಮಾರಸ್ವಾಮಿ Read More

ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಿ-ಹೆಚ್.ಸಿ.ಮಹದೇವಪ್ಪ

ಮೈಸೂರು ಮಾ.3: ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಅಭಾವ ಆಗದಂತೆ ಈಗಿನಿಂದಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್.ಸಿ.ಮಹದೇವಪ್ಪ ಸೂಚಿಸಿದರು.

ಜಿಲ್ಲಾ ಪಂಚಾಯತ್ ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆಯಲ್ಲಿ ಕುಡಿಯುವ ನೀರಿನ ಲಭ್ಯತೆ ಮತ್ತು ಜಾನುವಾರುಗಳ ಮೇವಿನ ಲಭ್ಯತೆ ಕುರಿತ ಪರಿಶೀಲನಾ ಸಭೆಯ ಅವರು ಮಾತನಾಡಿದರು.

ಮುಂಬರುವ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗುವ ಗ್ರಾಮಗಳನ್ನು ಗುರುತಿಸಿ ಪಟ್ಟಿ ಮಾಡಿ ನೀರಿನ ಪೂರೈಕೆಗೆ ಅಗತ್ಯ ಸಿದ್ಧತೆ ಮಾಡಿ ಎಂದು ತಿಳಿಸಿದರು.

ಕಳೆದ ಬಾರಿ ಉತ್ತಮ ಮಳೆ ಆಗಿರುವುದರಿಂದ ಜಿಲ್ಲೆಯ ಜಲಾಶಯಗಳಲ್ಲಿ ಅಗತ್ಯ ಪ್ರಮಾಣದ ನೀರು ಲಭ್ಯವಿದೆ, ಜಾನುವಾರು ಮೇವುಗಳ ಕೊರತೆ ಉಂಟಾಗದಂತೆ ಈಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಬೇಸಿಗೆಯಲ್ಲಿ ಶುದ್ಧ ಕುಡಿಯುವ ನೀರು ದೊರೆಯುವಂತೆ ನೋಡಿಕೊಳ್ಳಬೇಕು ಎಂದು ‌ಮಹದೇವಪ್ಪ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ ಜಿಲ್ಲೆಯಲ್ಲಿ 837 ಮಿಲಿ ಮೀಟರ್ ಮಳೆ ಆಗಬೇಕಿತ್ತು ಸರಾಸರಿಗಿಂತ ಹೆಚ್ಚಿನ ಅಂದರೆ 965 ಮಿಲಿ ಮೀಟರ್ ಮಳೆ ಆಗಿದೆ. ಜಿಲ್ಲೆಯ ಜಲಾಶಯಗಳಲ್ಲಿ ಅಗತ್ಯ ಪ್ರಮಾಣದ ನೀರು ಇದ್ದು ಮೇ ಅಂತ್ಯದವರೆಗೆ ಕುಡಿಯುವ ನೀರಿಗೆ ತೊಂದರೆ ಇಲ್ಲ ಎಂದು ಹೇಳಿದರು.

94 ಗ್ರಾಮಗಳಲ್ಲಿ ನೀರಿನ ಕೊರತೆ ಆಗುಬಹುದು ಎಂದು ಗ್ರಾಮೀಣ ಕುಡಿಯುವ ನೀರಿನ ಇಲಾಖೆಯಿಂದ ಪಟ್ಟಿ ಮಾಡಿಕೊಳ್ಳಲಾಗಿದೆ. ನಗರ ಪ್ರದೇಶದಲ್ಲಿ ಯಾವುದೇ ನೀರಿನ ಕೊರತೆ ಇಲ್ಲ ಎಂದು ತಿಳಿಸಿದರು.

ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸ್ಥಳೀಯ ಶಾಸಕರ ಅಧ್ಯಕ್ಷತೆಯ ಸಭೆಯಲ್ಲಿ ಅನುಮೋದನೆ ಆಗಿರಬೇಕು, ನೀರು ಸರಬರಾಜು ಟ್ಯಾಂಕರ್ ಗೆ ಜಿ ಪಿ ಎಸ್ ಅಳವಡಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್. ಹುಕೇಶ್ ಕುಮಾರ್, ಮೈಸೂರು ಮಹಾ ನಗರ ಪಾಲಿಕೆ ಆಯುಕ್ತರಾದ ಶೇಖ್ ಆಶಿಪ್ ತನ್ವೀರ್, ಅಪರ ಜಿಲ್ಲಾಧಿಕಾರಿ ಡಾ. ಪಿ ಶಿವರಾಜು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಿ-ಹೆಚ್.ಸಿ.ಮಹದೇವಪ್ಪ Read More