ಕಟ್ಟೆಯೊಡೆದ ಕಬ್ಬು ಬೆಳೆಗಾರರ ಆಕ್ರೋಶ:50ಕ್ಕೂ ಹೆಚ್ಚು ಟ್ರ್ಯಾಕ್ಟರ್ ಟ್ರಾಲಿಗಳಿಗೆ ಬೆಂಕಿ

ಬಾಗಲಕೋಟೆ: ಪ್ರತಿ ಟನ್​​ ಕಬ್ಬಿಗೆ 3,500 ರೂ. ಘೋಷಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸಿರುವ ಹೋರಾಟಗಾರರ ಆಕ್ರೋಶದ ಕಿಚ್ಚು‌ ಕಟ್ಟೆ ಒಡೆದಿದೆ.

ಸಂಜೆವೇಳೆಗೆ ತೀವ್ರ ಸ್ವರೂಪಕ್ಕೆ ತಿರುಗಿದ್ದು, ಜಿಲ್ಲೆಯ ಮುಧೋಳ ತಾಲೂಕಿನ ಸೈದಾಪುರ ಗ್ರಾಮದ ಸಮೀರವಾಡಿಯ ಗೋದಾವರಿ ಕಾರ್ಖಾನೆ ಬಳಿ ಸಾಲಾಗಿ ನಿಲ್ಲಿಸಿದ್ದ 50ಕ್ಕೂ ಹೆಚ್ಚು ಟ್ರ್ಯಾಕ್ಟರ್ ಟ್ರಾಲಿಗಳಿಗೆ ಬೆಂಕಿ ಹಚ್ಚಲಾಗಿದೆ.

ಬೆಳಗಾವಿಯಲ್ಲಿ ತಣ್ಣಗಾಗುತ್ತಿದ್ದಂತೆ ಬಾಗಲಕೋಟೆಯ ಮುಧೋಳದಲ್ಲಿ ರೈತರು ಸೊಡಿದೆದ್ದಾರೆ.ಇಂದು ಮುಧೋಳ ಪಟ್ಟಣವನ್ನ ಬಂದ್ ಮಾಡಿದ್ದರು. ಸಕ್ಕರೆ ಕಾರ್ಖಾನೆ ಮಾಲೀಕರೇ ಮಾತುಕತೆಗೆ ಬರಬೇಕು. ಪ್ರತಿ ಟನ್ ಕಬ್ಬಿಗೆ 3 ಸಾವಿರದ 500 ರೂಪಾಯಿ ನೀಡಬೇಕೆಂದು ಪಟ್ಟು ಹಿಡಿದಿದ್ದರು.

ನಮ್ಮ ಜೊತೆಗೆ ಕಾರ್ಖಾನೆ ಮಾಲೀಕರು ಮಾತುಕತೆಗೆ ಬರಲಿಲ್ಲವೆಂದು ಕೆಲ ರೈತರು ಸಿಟ್ಟಾಗಿದ್ದರು. ಸಮೀರವಾಡಿ ಬಳಿಯ ಗೋದಾವರಿ ಕಾರ್ಖಾನೆವರೆಗೆ ಮೆರವಣಿಗೆ ಹೊರಟಿದ್ದರು. ಬೆಳಗ್ಗೆಯಿಂದಲೇ ಟ್ರ್ಯಾಕ್ಟರ್ ರ‍್ಯಾಲಿ ಮಾಡಿದ್ದರು. ಸಮೀರವಾಡಿಯ ಗೋಧಾವರಿ ಕಾರ್ಖಾನೆಗೆ ರೈತರು ಮುತ್ತಿಗೆ ಹಾಕಲು ಹೊರಟಿದ್ದರು. ಆಗ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ನ ಕಂಡು ಅದನ್ನ ನೆಲಕ್ಕುರುಳಿಸಿ ಬೆಂಕಿ ಹಚ್ಚಿದ್ದಾರೆ.

ಈ ಬಗ್ಗೆ ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಇದು ರೈತರು ಮಾಡಿರುವ ಕೆಲಸ ಅಲ್ಲ. ಕೆಲ ಕಿಡಿಗೇಡಿಗಳು ಮಾಡಿರುವ ಕೆಲಸ. ಜಿಲ್ಲಾ ಸಚಿವರು ಮೂರು ದಿನದಿಂದ ಮುಧೋಳದಲ್ಲಿದ್ದಾರೆ. ರೈತರು-ಕಾರ್ಖಾನೆಗಳ ಜೊತೆ ಮಾತುಕತೆ ಮಾಡುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಎಲ್ಲೂ ಕೂಡ ರೈತರು ಹೀಗೆ ಮಾಡಿಲ್ಲ, ಹಾಗಾಗಿ ಇದು ರೈತರ ಹೆಸರಲ್ಲಿ ಕಿಡಿಗೇಡಿಗಳು ಮಾಡಿದ್ದು ಎಂದು ಬೇಸರ ವ್ಯಕ್ತಪಡಿಸಿದರು.

ಪೊಲೀಸರ ತನಿಖೆಯಿಂದ ಎಲ್ಲವೂ ಹೊರಗೆ ಬರಲಿದೆ. ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳುತ್ತಾರೆ. ಕಬ್ಬು ಬೆಳೆಗಾರರಿಗೆ ಸರ್ಕಾರ ಹೆಚ್ಚಿನ ಹಣ ಕೊಟ್ಟಿದೆ, ಇಡೀ ರಾಜ್ಯದ ಕಬ್ಬು ಬೆಳೆಗಾರರೇ ಒಪ್ಪಿಕೊಂಡಿದ್ದಾರೆ. ಮುಧೋಳ ಕಬ್ಬು ಬೆಳೆಗಾರರು ಸರ್ಕಾರದ ನಿರ್ಧಾರ ಒಪ್ಪಬೇಕು ಎಂದು ಮನವಿ ಮಾಡಿದರು.

ಘಟನೆ ಬಗ್ಗೆ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ‌ ಅವರು ದೂರವಾಣಿ ಮೂಲಕ ಬಾಗಲಕೋಟೆ ಡಿಸಿ, ಎಸ್‌ಪಿ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ‌ ಸಚಿವ ತಿಮ್ಮಾಪುರ ಜೊತೆಯೂ ಚರ್ಚೆ ಮಾಡಿದ್ದು, ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

ಕಟ್ಟೆಯೊಡೆದ ಕಬ್ಬು ಬೆಳೆಗಾರರ ಆಕ್ರೋಶ:50ಕ್ಕೂ ಹೆಚ್ಚು ಟ್ರ್ಯಾಕ್ಟರ್ ಟ್ರಾಲಿಗಳಿಗೆ ಬೆಂಕಿ Read More