ಚಾಮರಾಜನಗರ: ನಿಮ್ಮ ಡಿಜಿಟಲ್ ಸುರಕ್ಷತೆ ನಮ್ಮ ಆದ್ಯತೆ ಎಂಬ ಕೇಂದ್ರ ಸರ್ಕಾರದ ದೂರಸಂಪರ್ಕದ ಆಶಯದೊಂದಿಗೆ ಚಾ.ನಗರದ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ಸ್ ವಿಭಾಗದ ೮ ವಿದ್ಯಾರ್ಥಿಗಳು ಜಾಗೃತಿ ಅರಿವಿಗಾಗಿ ಆಯ್ಕೆಗೊಂಡು ಸ್ವಯಂ ಪ್ರೇರಿತವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ.
ಪಟ್ಟಣದ ಜನನಿಬಿಡ ಪ್ರದೇಶಗಳಾದ ಬಸ್ ನಿಲ್ದಾಣ , ಉದ್ಯಾನವನ,ಶಾಲಾ ಕಾಲೇಜುಗಳು, ಅಷ್ಟೆ ಅಲ್ಲ ಮೈಸೂರಿನ ದಸರದಲ್ಲೂ ಭಾಗವಹಿಸಿ ಸಂಚಾರ ಮಿತ್ರ ಸ್ಕೀಂ.೨.೦ ನ ಸಂಚಾರ ಸಾಥಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ
ಸಂಚಾರ ಸಾಥಿಯಲ್ಲಿ ಮೊಬೈಲ್ ಕಳವು , ಬಿದ್ದು ಹೋದಾಗ ಅನುಸರಿಸಬೇಕಾದ ಮಾರ್ಗಗಳು, ಅದರೊಳಗೆ ಬಳಸಬಯಸಿದ ಸಿಮ್ ಹಾಗೂ ಮಾಲೀಕತ್ವ,ಮಾಲೀಕತ್ವದ ಹೆಸರಲ್ಲಿ ಇರದ ಸಿಮ್ ರದ್ದು ಮಾಡುವ , ವರದಿ ಮಾಡುವ ಬಗ್ಗೆ ತಿಳುವಳಿಕೆ ಮೂಡಿಸಿದರು.
ಚಾಮರಾಜನಗರ ಇಂಜಿನಿಯರಿಂಗ್ ಕಾಲೇಜು ಸಮೀಪ ಇರುವ ಇಂಜಿನಿಯರಿಂಗ್ ಕಾಲೇಜಿನ E&C ವಿಭಾಗದ ಮುಖ್ಯಸ್ಥರಾಗಿರುವ ಇಮ್ರಾನ್ ಅವರ ನೇತೃತ್ವದ ಈ ತಂಡದಲ್ಲಿ ಐಶ್ವರ್ಯ, ಪಲ್ಲವಿ,ಸುಸ್ಮಿತಾ, ಕೀರ್ತನಾ, ಭಾವನಾ,ಐಶ್ವರ್ಯ, ತೇಜಸ್ವಿನಿ,ಯಶಸ್ವಿನಿ ಎಂಬ ಎಂಟು ಮಕ್ಕಳು ಆಯ್ಕೆಗೊಂಡು ಸ್ವಯಂ ಪ್ರೇರಿತವಾಗಿ ಯಾವುದೆ ಪ್ರತಿಪಲಾಪೇಕ್ಷೆ ಇಲ್ಲದೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ.
ಮೈಸೂರು: ಭಾರತ ಸಂವಿಧಾನದ ಪೀಠಿಕೆಯನ್ನು ವಿದ್ಯಾರ್ಥಿಗಳು ಶಾಲೆಯ ನಿತ್ಯ ಪ್ರಾರ್ಥನೆ ಸಮಯದಲ್ಲಿ ಓದಲು ಕ್ರಮ-ವಹಿಸುವಂತೆ ಜೈ ಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷ ಚೇತನ್ ಕಾಂತರಾಜು ಮನವಿ ಮಾಡಿದ್ದಾರೆ.
ಈ ಕುರಿತು ಜೂನ್ 3ರಂದು ಸರ್ಕಾರದ ಕಚೇರಿಯಿಂದ ಸುತ್ತೋಲೆ ಹೊರಡಿಸಲಾಗಿದೆ. ಭಾರತ ಸಂವಿಧಾನದ ಪೀಠಿಕೆಯನ್ನು ನಿತ್ಯ ವಿದ್ಯಾರ್ಥಿಗಳು ಶಾಲಾ ಪ್ರಾರ್ಥನೆ ಮತ್ತು ಸಭೆ ಸಮಯದಲ್ಲಿ ಕಡ್ಡಾಯವಾಗಿ ಓದಲು ಅಗತ್ಯ ಕ್ರಮವಹಿಸಲು ಸರ್ಕಾರವು ಸುತ್ತೋಲೆ ಹೊರಡಿಸಿದೆ. ಎಲ್ಲಾ ಶಾಲೆಯಲ್ಲಿ ಈ ಸುತ್ತೋಲೆಯನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು,ಮತ್ತು ಭಾರತದ ಸಂವಿಧಾನ ದಪೀಠಿಕೆ ಯನ್ನು ಎಲ್ಲಾ ಶಾಲೆಗಳಲ್ಲಿ ಪ್ರದರ್ಶಿಸಬೇಕು ಎಂದು ಚೇತನ್ ಕಾಂತರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಳ್ಳೇಗಾಲ: ಸರ್ಕಾರ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಟ್ಟಿದ್ದರಿಂದ ಅನೇಕರು ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಹೊರಹೊಮ್ಮುತ್ತಿದ್ದಾರೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಸಿ.ಡಿ.ಎಸ್ ಭವನದಲ್ಲಿ ನಗರಸಭೆ ವತಿಯಿಂದ ವಿಕಲಚೇತನ ಫಲಾನುಭವಿಗಳು ಹಾಗೂ ವಿದ್ಯಾರ್ಥಿಗಳಿಗೆ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು.
ವಿಕಲಚೇತನರಿಗೂ ಸವಲತ್ತು ವಿತರಣೆ ಮಾಡಲಾಗುತ್ತಿದೆ. ಇದ್ದ ಅನುಧಾನದಲ್ಲಿ ಯಾರು ಅರ್ಜಿ ಹಾಕಿದ್ದರೋ ಅದನ್ನು ಪರಿಶೀಲನೆ ಮಾಡಿ ಅವರಿಗೆ ಸವಲತ್ತು ತಲುಪಿಸುವ ಕೆಲಸವನ್ನು ನಗರಸಭೆ ಯವರು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಒಂದು ಕಂಪ್ಯೂಟರ್ ಖರೀದಿ ಮಾಡಬೇಕಾದರೆ ಕನಿಷ್ಠ 50 ಸಾವಿರ ಬೇಕು. ಯಾರು ಮಧ್ಯ ಪ್ರವೇಶಿಸಿಸದಂತೆ ಆ ವಿದ್ಯಾರ್ಥಿಗೆ ನೆರವಾಗಿ ತಲುಪಲು ಅವರ ಖಾತೆಗೆ ನೇರವಾಗಿ ಹಣ ಜಮೆಯಾಗುವ ನಿಟ್ಟಿನಲ್ಲಿ ನಗರಸಭೆಯವರು 20 ಸಾವಿರ ರೂ ಸಹಾಯ ಧನ ಕಲ್ಪಿಸಿದ್ದಾರೆ. ಹಾಗೆಯೇ ತ್ರಿಚಕ್ರ ವಾಹನ 3 ಮಂದಿಗೆ ಅವಕಾಶವಿರುವುದು. ಪ್ರತಿ ವಿದ್ಯಾರ್ಥಿಗೂ ಕೂಡ ವರ್ಷಕ್ಕೆ 12 ಸಾವಿರ ಕೊಡುವ ಬದಲು ತಿಂಗಳಿಗೆ ಒಂದು ಸಾವಿರದಂತೆ ಆ ವಿದ್ಯಾರ್ಥಿಯ ಪಾಲನೆ ಪೋಷಣೆ ಮಾಡುವ ಪೋಷಕರ ಖಾತೆಗೆ ನೀಡುವ ಅವಕಾಶವಿದೆ. ಇದೆಲ್ಲವೂ ಬಡ ಗ್ರಾಮೀಣ ವಿದ್ಯಾರ್ಥಿಗಳು ಹಾಗೂ ವಿಕಲಚೇತನರ ಕಲ್ಯಾಣಕ್ಕಾಗಿ ಸರ್ಕಾರ ಮಾಡಿರುವುದು ಎಂದು ಶಾಸಕರು ವಿವರಿಸಿದರು.
ನಗರಸಭೆ ಪೌರಯುಕ್ತ ಪರಶಿವಯ್ಯನವರು ಕೇವಲ 2 ತಿಂಗಳ ಹಿಂದೆ ಪೌರಯುಕ್ತರಾಗಿ ಈ ತಿಂಗಳ 30 ಕ್ಕೆ ನಿವೃತ್ತಿ ಹೊಂದಲಿದ್ದಾರೆ. ಆದರೆ ಅವರನ್ನು ಹಿಂದೆಯೇ ಪೌರಯುಕ್ತರನ್ನಾಗಿ ಮಾಡಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರೂ ಕೂಡ ಪೌರಾಡಳಿತ ಆಡಳಿತ ಸೇವೆಗೆ ಸಂಬಂಧಿಸಿದಂತೆ ವ್ಯಾಸಂಗ ಮಾಡಿದ್ದರೆ ಮಾತ್ರ ಪೌರಯುಕ್ತರಾಗುವ ನಿಯಮವಿದ್ದರಿಂದ ಅವಕಾಶವಾಗಲಿಲ್ಲ. ಪೌರಯುಕ್ತ ರಮೇಶ್ ಅವರು 2 ತಿಂಗಳು ರಜೆ ಹಾಕಿದ್ದರಿಂದ ಎಇಇ ಪ್ರಸನ್ನ ಅವರು ಇದ್ದಾಗಿಯೂ ನಗರಸಭೆಯ ಕ್ಷೇತ್ರಾಭಿವೃಧ್ಧಿ ಅಧಿಕಾರಿಯಾಗಿರುವ ಪರಶಿವಯ್ಯರವರನ್ನು ನಗರಸಭೆ ಪೌರಯುಕ್ತರಾಗಿ ಕೆಲಸ ಮಾಡುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ ಎಂದು ಸ್ಮರಿಸಿದರು.
ನಗರಸಭೆಯಲ್ಲಿ ಕೆಲಸ ಕಾರ್ಯಗಳಾಗುತ್ತಿಲ್ಲ ವರಮಾನ ಬರುತ್ತಿಲ್ಲ ಎಂಬ ಆರೋಪ ಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಾನು ಹಿಂದೆ ಬೆಳಗಾವಿ ಯಲ್ಲಿ ನಡೆದ ಅಧಿವೇಶನದಲ್ಲಿ ಖಾತೆಗಳಾಗುತ್ತಿಲ್ಲ ಎಂಬ ವಿಚಾರವನ್ನು ಪ್ರಸ್ತಾಪ ಮಾಡಿದ್ದೆ. ಅದನ್ನು ಪರಿಗಣಿಸಿದ ಸರ್ಕಾರ ಇಂದು ರಾಜ್ಯಾದ್ಯಂತ ಎ ಖಾತಾ, ಬಿ ಖಾತಾ ಮಾಡಲು ಹೊಸ ಕಾನೂನು ತಂದಿದೆ.
ಹೆಚ್ಚು ಶುಲ್ಕ ಪಾವತಿಸ ಬೇಕೆಂದು ಆರೋಪಿಸಿ ಮಧ್ಯವರ್ತಿಗಳು ಪ್ರತಿ ಭಟನೆ ಸಹ ಮಾಡಿದ್ದರು. ಆದರೆ ಶುಲ್ಕ ಜಾಸ್ತಿಯಾಗಿಲ್ಲ. ಹಿಂದೆ ಮಧ್ಯವರ್ತಿಗಳು ದುಪ್ಪಟ್ಟು ಹಣ ಪಡೆದು ಖಾತೆ ಮಾಡಿಸಿ ಕೊಡುತ್ತಿದ್ದರು ಆದರೆ ಇಂದು ಮಧ್ಯವರ್ತಿಗಳ ಹಾವಳಿ ತಪ್ಪಿದೆ. ಇಂದು ಅನೇಕ ಮಂದಿ ಪ್ರಾಮಾಣಿಕವಾಗಿ ಖಾತೆ ಮಾಡಿಸಿ ಕೊಳ್ಳುತ್ತಿದ್ದಾರೆ.
ನಗರಸಭೆಯ ವಿಚಾರದಲ್ಲಿ ಎಲ್ಲಿಯೂ ಕೂಡ ವಿರುದ್ಧ ವಾದ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರಬಾರದು ಆನಿಟ್ಟಿನಲ್ಲಿ ಕಾರ್ಯೋನ್ಮುರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮ ದಲ್ಲಿ ನಗರಸಭೆ ಪೌರಯುಕ್ತ ಪರಶಿವಯ್ಯ, ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರಾದ ಸುಮಾ ಸುಬ್ಬಣ್ಣ, ಭಾಗ್ಯ, ಕವಿತಾ, ರಾಘವೇಂದ್ರ, ಪ್ರಕಾಶ್, ಶಿವಮಲ್ಲು, ಮಂಜುನಾಥ್, ಜಿ.ಪಿ.ಶಿವಕುಮಾರ್ ಮತ್ತಿತರರು ಹಾಜರಿದ್ದರು.
ಮೈಸೂರು: ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ವಿದ್ಯಾರ್ಥಿಗಳು ತಾಯಂದಿರು ಹಾಗೂ ಶಿಕ್ಷಕರಿಗೆ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದುಕೊಂಡರು.
ಅದಕ್ಕೂ ಮುನ್ನ ಸರಸ್ವತಿ ಪೂಜೆ ಮಾಡಿ ನಮಿಸಿದರು.
ನಂತರ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಮಕ್ಕಳಿಗೆ ಪರೀಕ್ಷಾ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಸಮಾಜ ಸೇವಕಿ ಖುಷಿ ವಿನು ಶಿಕ್ಷಣದ ಜತೆಗೆ ಮಕ್ಕಳಿಗೆ ಸಂಸ್ಕಾರವೂ ಮುಖ್ಯ, ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಿದರಷ್ಟೇ ಸಾಲದು ಮುಖ್ಯವಾಗಿ ಸಮಾಜ ಹಾಗೂ ಕುಟುಂಬದಲ್ಲಿ ಹೇಗೆ ಹೊಂದಾಣಿಕೆಯಿಂದ ಸಾಗಬೇಕು ಎಂಬುದನ್ನು ಕಲಿಸಬೇಕು ಎಂದು ಸಲಹೆ ನೀಡಿದರು.
ಹಿರಿಯರನ್ನು ಗೌರವಿಸುವ ಸಂಪ್ರದಾಯವನ್ನು ಮನುವರಿಕೆ ಮಾಡಲು ಅಕ್ಕನ ಬಳಗ ಶಾಲೆ ಶಿಕ್ಷಕ ವೃಂದ ಮಕ್ಕಳು ಪರೀಕ್ಷೆ ಬರೆಯುವ ಮುನ್ನ ತಾಯಂದರಿಗೆ ಹಾಗೂ ಶಿಕ್ಷಕರಿಗೆ ಪಾದಪೂಜೆ ಮಾಡಿದ್ದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಸಂಧ್ಯಾ, ಶಾಲೆಯ ಮುಖ್ಯ ಶಿಕ್ಷಕರಾದ ಸುಗುಣಾವತಿ, ಎಸ್ ಎನ್ ರಾಜೇಶ್, ಚಕ್ರಪಾಣಿ, ಮಹಾನ್ ಶ್ರೇಯಸ್, ದುರ್ಗಾ ಪ್ರಸಾದ್, ಐಶ್ವರ್ಯ, ಹೇಮಾ ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು.
ಬೆಂಗಳೂರು: ಐಐಟಿ,ಐಐಎಂ,ಐಐಎಸ್ ಟಿ,ಎನ್ ಐ ಟಿ ಯಂತಹ ರಾಷ್ಟ್ರೀಯ ಸಂಸ್ಥೆಗಳಲ್ಲಿ ಓದುವ ಎಸ್ ಸಿ,ಎಸ್ ಟಿ ವಿದ್ಯಾರ್ಥಿಗಳ ಪ್ರೋತ್ಸಾಹ ಧನವನ್ನು 1 ರಿಂದ 2 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.
ಈ ಕುರಿತು ಸರ್ಕಾರ ಆದೇಶ ಹೊರಡಿಸಿದ್ದು ಇದು ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಒಳಿತಾಗಲಿದೆ ಎಂದು ಮಹದೇವಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿಯುಸಿ ಪರೀಕ್ಷೆಯಲ್ಲಿ 95 ಕ್ಕೂ ಹೆಚ್ಚಿನ ಅಂಕಗಳನ್ನು ಪಡೆದು, ನೀಟ್ ಪ್ರವೇಶ ಪರೀಕ್ಷೆ ಮೂಲಕ ಸರ್ಕಾರಿ ಕೋಟಾದಡಿ ಪ್ರವೇಶ ದೊರಕದೇ ಮ್ಯಾನೇಜ್ ಮೆಂಟ್ ಕೋಟಾದಡಿ ಎಂಬಿಬಿಎಸ್ ಕೋರ್ಸ್ ಗೆ ಸೀಟು ಪಡೆದುಕೊಂಡ ಪರಿಶಿಷ್ಟ ಜಾತಿಯ ಮಕ್ಕಳಿಗೆ 25 ಲಕ್ಷ ರೂಪಾಯಿ ಶುಲ್ಕ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.
ಎಂಬಿಬಿಎಸ್ ಪದವಿಯನ್ನು ಪಡೆಯುತ್ತಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಮೊದಲ ವರ್ಷ ಶೇ. 60 ಕ್ಕೂ ಹೆಚ್ಚಿನ ಅಂಕಗಗಳನ್ನು ಪಡೆದು ಉತ್ತೀರ್ಣ ರಾದರೆ ಅವರಿಗೆ ಮತ್ತೆ 25 ಲಕ್ಷ ರೂಪಾಯಿ ಪ್ರೋತ್ಸಾಹ ಧನವನ್ನು ನೀಡಲಾಗುವುದು.
ಶಿಕ್ಷಣವೇ ಸಮಾಜವನ್ನು ಬದಲಿಸುವ ಕೀಲಿಕೈ ಎಂಬ ಅಂಶವನ್ನು ಮನಗಂಡು ಈ ಮಹತ್ವದ ಘೋಷಣೆಯನು ಸರ್ಕಾರ ಮಾಡಿದೆ ಇದರಿಂದ ಉನ್ನತ ಶಿಕ್ಷಣ ಮಾಡಬೇಕೆಂಬ ವಿದ್ಯಾರ್ಥಿಗಳ ಕನಸ್ಸು ನನಸಾಗಲಿದೆ ಎಂದು ಹೇಳಿದ್ದಾರೆ.
ಐಐಟಿ ಐಐಎಂ ನಂತಹ ಶಿಕ್ಷಣ ಸಂಸ್ಥೆಗಳಲ್ಲಿ ಓದುವಂತಹ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳು ದೇಶ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಬೇಕು, ಆ ಮೂಲಕ ಸಮೃದ್ಧ ಮತ್ತು ಸಶಕ್ತ ರಾಷ್ಟ್ರದ ನಿರ್ಮಾಣವಾಗಬೇಕು ಎಂದು ಸಚಿವರು ತಿಳಿಸಿದ್ದಾರೆ.
ಇನ್ನು ಬಡತನದ ಬೇಗೆಗೆ ಸಿಲುಕಿ ಎಂಬಿಬಿಎಸ್ ಓದುವ ಬಯಕೆ ಇರುವಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರಿ ಕೋಟಾದಡಿ ಸೀಟು ಸಿಗದೇ ಅವರು ಖಾಸಗೀ ಸಂಸ್ಥೆಗಳಲ್ಲಿ ಓದುತ್ತಿದ್ದರೆ, ಅಂತಹ ಪ್ರತಿಭಾವಂತ ಮಕ್ಕಳ ಶುಲ್ಕವನ್ನು ಸರ್ಕಾರ ಭರಿಸಲಿದ್ದು, ಇದಕ್ಕಾಗಿ ಆರಂಭಿಕವಾಗಿ 25 ಲಕ್ಷ ರೂಪಾಯಿಗಳನ್ನು ನೀಡುವ ನಿರ್ಧಾರವನ್ನು ತೆಗೆದುಕೊಂಡಿದೆ.
ಹೀಗಾಗಿ ಬಾಬಾ ಸಾಹೇಬರ ಆಶಯದಂತೆ ನಮ್ಮೆಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಹೆಚ್ಚು ಆಸಕ್ತಿ ಹೊಂದಿ, ಶ್ರಮ ಪಟ್ಟು ಓದಬೇಕೆಂದು ಮಹದೇವಪ್ಪ ಸಲಹೆ ನೀಡಿದ್ದಾರೆ.