ಬೆಂಗಳೂರು: ಅಧಿಕಾರ ಹಸ್ತಾಂತರ, ಸಂಪುಟ ವಿಸ್ತರಣೆ, ಆರ್ ಎಸ್ಎಸ್ ನಿಷೇಧ, ಬುರುಡೆ ಪ್ರಕರಣ ಹೀಗೆ ಅನವಶ್ಯಕ ಗೊಂದಲಗಳಲ್ಲೇ ಮುಳುಗಿ ಕಾಲಹರಣ ಮಾಡುತ್ತಾ ರಾಜ್ಯ ಸರ್ಕಾರ ರೈತರನ್ನು ಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಕಾಟಾಚಾರಕ್ಕೆ ವೈಮಾನಿಕ ಸಮೀಕ್ಷೆ ಮಾಡಿ 30 ದಿನಗಳೊಳಗೆ ನೆರೆ ಪರಿಹಾರ ಕೊಡುತ್ತೇವೆ ಎಂದು ಹೇಳಿದಿರಲ್ಲ ಸಿದ್ದರಾಮಯ್ಯ ನವರೇ, ಎಲ್ಲಿ ಹೋಯಿತು ನಿಮ್ಮ ನುಡಿಯಂತೆ ನಡೆಯುವ ಸರ್ಕಾರದ ಬದ್ಧತೆ ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
ಪಾಪ ನೀವು ತಾನೇ ಏನು ಮಾಡುತ್ತೀರಿ ಬಿಡಿ. ಅತ್ತ ರಾಹುಲ್ ಗಾಂಧಿ ಅವರು ಭೇಟಿ ಮಾಡುವುದಕ್ಕೂ ಸಮಯ ಕೊಡುತ್ತಿಲ್ಲ. ಇತ್ತ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ಡೆಡ್ ಲೈನ್ ಮೇಲೆ ಡೆಡ್ ಲೈನ್ ಕೊಟ್ಟರೂ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಇನ್ನು ನೆರೆ ಪರಿಹಾರ, ಕಬ್ಬು, ಜೋಳ ಬೆಳೆಗಾರರಿಗೆ ಹೆಚ್ಚುವರಿ ಬೆಂಬಲ ಬೆಲೆ ಕೊಡಬೇಕು ಅಂದರೆ ನಿಮ್ಮ ಮಾತು ಯಾರು ಕೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಅಯ್ಯೋ ಸಿಎಂ ಸಿದ್ದರಾಮಯ್ಯನವರ ಅಸಹಾಯಕತೆ ನೋಡಿದರೆ ನಿಜಕ್ಕೂ ಕನಿಕರ ಮೂಡುತ್ತಿದೆ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು: ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ದಿವಾಳಿ ಆಗಿದ್ದರೂ, ಎಲ್ಲವೂ ಚೆನ್ನಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಬೊಗಳೆ ಬಿಟ್ಟುಕೊಂಡು ಓಡಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಅಶೋಕ್ ಜರಿದಿದ್ದಾರೆ.
ಎಲ್ಲವೂ ಸರಿ ಇದ್ದಿದ್ದರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಜಲಸಂಪನ್ಮೂಲ ಇಲಾಖೆ ಸೇರಿದಂತೆ ಒಟ್ಟು 1,17,884 ರಾಜ್ಯ ಸರ್ಕಾರಿ ನೌಕರರಿಗೆ ಕಳೆದ ಮೂರು ತಿಂಗಳಿಂದ 834.9 ಕೋಟಿ ಮೊತ್ತದ ಸಂಬಳ ಕೊಟ್ಟಿಲ್ಲವಲ್ಲ ಯಾಕೆ ಎಂದು ಅವರು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
ಇನ್ನೆಷ್ಟು ದಿನ ಈ ಸುಳ್ಳು, ಈ ಭಂಡತನದ ಬಾಳು ಬಾಳುತ್ತೀರಿ ಮೊದಲು ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ ಎಂದು ಅಶೋಕ್ ವ್ಯಂಗ್ಯವಾಗಿ ಸಲಹೆ ನೀಡಿದ್ದಾರೆ.
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಕಮೀಶನ್ ವ್ಯವಹಾರದ ಬಗ್ಗೆ 224 ಶಾಸಕರಿಗೂ ಗೊತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕರ ಹಣೆಬರಹವೋ ಏನೋ, ತಮ್ಮ ಕ್ಷೇತ್ರಗಳಿಗೆ ಸರ್ಕಾರದ ಯಾವುದೇ ಕಾರ್ಯಕ್ರಮ ತೆಗೆದುಕೊಂಡು ಹೋಗಬೇಕಾದರೆ ಪೇಮೆಂಟ್ ಆಗಲೇಬೇಕು ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿಗೆ ಮಾನ ಮರ್ಯಾದೆ ಎನಾದರೂ ಇದೆಯಾ ಇಂಥ ಭ್ರಷ್ಟನನ್ನು ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ. ಅಂತಹ ವ್ಯಕ್ತಿಯನ್ನು ಇನ್ನೂ ಸಂಪುಟದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸರ್ಕಾರದಲ್ಲಿ ಭ್ರಷ್ಟಾಚಾರ, ಕಮೀಶನ್ ವ್ಯವಹಾರ ಅವ್ಯಾಹತವಾಗಿ ಸಾಗಿದೆ. ಅದಕ್ಕೆ ಕೊನೆ ಎಂಬುದೇ ಇಲ್ಲ. ಪ್ರತಿಯೊಬ್ಬ ಶಾಸಕರು ಇದರಿಂದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೆಚ್ ಡಿ ಕೆ ಕಿಡಿಕಾರಿದರು.
ವಸತಿ ಇಲಾಖೆಯ ಕರ್ಮಕಾಂಡದ ಬಗ್ಗೆ ಬೀದಿ ಬೀದಿಯಲ್ಲಿ ಚರ್ಚೆ ಆಗುತ್ತಿದೆ. ಇವೆಲ್ಲವನ್ನು ಇಲಾಖೆಗಳಾ,ಇವರೆಲ್ಲಾ ಮಂತ್ರಿಗಳಾ ಈ ವ್ಯಕ್ತಿಯನ್ನು ಉಪ ಮುಖ್ಯಮಂತ್ರಿ ಬೇರೆ ಮಾಡಬೇಕಿತ್ತಂತೆ ಎಂದು ಯಾರ ಹೆಸರು ಪ್ರಸ್ತಾಪಿಸದೆ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಗಣಿಗಾರಿಕೆ ಬಗ್ಗೆ ತನಿಖೆ ಮಾಡುವಂತೆ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಅವರು ಪತ್ರ ಬರೆದಿದ್ದಾರೆ. ಅವರು ಈ ಸರ್ಕಾರದಲ್ಲಿ ಎರಡು ವರ್ಷದಿಂದ ಸಚಿವರಾಗಿದ್ದಾರೆ. ಈಗ ಪತ್ರ ಬರೆದಿದ್ದಾರೆ. ಅವರು ಇಷ್ಟು ದಿನ ಏನು ಮಾಡುತ್ತಿದ್ದರು ಎಂದು ಹೆಚ್ ಡಿ ಕೆ ಕಾರವಾಗಿ ಪ್ರಶ್ನಿಸಿದರು.
2015 – 16ರಲ್ಲಿ ತನಿಖೆ ನಡೆಸುವಂತೆ ಇದೇ ಹೆಚ್.ಕೆ. ಪಾಟೀಲ್ ಶಿಫಾರಸು ಮಾಡಿದ್ದರು, ಆ ವರದಿ ಇಟ್ಟುಕೊಂಡು ಅವರು ದಿನವೂ ಪೂಜೆ ಮಾಡುತ್ತಿದ್ದರಾ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಆಡಳಿತ ಯಂತ್ರ ಕುಸಿದುಬಿದ್ದಿದ್ದು, ಭ್ರಷ್ಟಾಚಾರ ಮೇರೆ ಮೀರಿರುವುದಕ್ಕೆ ರಾಜ್ಯಾದ್ಯಂತ ವ್ಯಕ್ತವಾಗುತ್ತಿರುವ ಜನಾಕ್ರೋಶ ವೇ ಸಾಕ್ಷಿ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ ಒನ್ ಎಂದು ಸಿಎಂ ಅವರ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ನೀಡಿರುವ ಸರ್ಟಿಫಿಕೇಟ್ ಮತ್ತು 20 ತಿಂಗಳ ಬಳಿಕ ಸರ್ಕಾರ ಟೇಕಾಫ್ ಆಗುತ್ತಿದೆ ಎಂದು ಸಚಿವ ಡಿ.ಸುಧಾಕರ್ ನೀಡಿರುವ ಹೇಳಿಕೆ ಸರ್ಕಾರದ ಕಾರ್ಯವೈಖರಿಗೆ ಕನ್ನಡಿ ಹಿಡಿದಿವೆ ಎಂದು ಟೀಕಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಸರ್ಕಾರದ ಬಗ್ಗೆ ರಾಜ್ಯಾದ್ಯಂತ ಜನರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ನಮ್ಮ ಪಕ್ಷದ ಜನಾಕ್ರೋಶ ಯಾತ್ರೆಗೆ ಸಿಗುತ್ತಿರುವ ಬೆಂಬಲ ಮತ್ತು ಭೇಟಿ ನೀಡುತ್ತಿರುವ ಜಿಲ್ಲೆಗಳಲ್ಲಿ ಜನರು ವ್ಯಕ್ತಪಡಿಸುತ್ತಿರುವ ಅನಿಸಿಕೆಗಳು ಇದಕ್ಕೆ ಪೂರಕವಾಗಿವೆ ಎಂದು ಹೇಳಿದ್ದಾರೆ.
ಇದೊಂದು ವಂಚಕ ಸರ್ಕಾರ,ಕೆಟ್ಟ ಆಡಳಿತ ನೀಡುತ್ತಿದೆ. ಅದನ್ನು ಮರೆಮಾಚಲು ನಡೆಸಿದ ಕಸರತ್ತು ವಿಫಲವಾಗಿವೆ. 20 ತಿಂಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ಬಣ್ಣ ಬಯಲಾಗಿದೆ. ಅವೈಜ್ಞಾನಿಕ ಗ್ಯಾರಂಟಿ ಯೋಜನೆ ಜಾರಿಯಿಂದ ಬೊಕ್ಕಸ ಬರಿದಾಗಿ, ಸರ್ಕಾರ ದಿವಾಳಿಯಾಗಿದೆ. ಒಂದೇ ಒಂದು ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನ ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಸಿಎಂ ಮತ್ತು ಸಚಿವರು ಎಲ್ಲಿಯೂ ಪ್ರವಾಸ ಮಾಡುತ್ತಿಲ್ಲ,ಭೇಟಿ ನೀಡಿದ ಕಡೆ ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಬೆಂಗಳೂರಿನಲ್ಲಿ ಕುಳಿತು ಕಾಲಾಹರಣ ಮಾಡುತ್ತಿದ್ದಾರೆ, ಯಾವ ಕಚೇರಿಗೆ ಹೋದರು ಲಂಚದ ಹಾವಳಿಯಿಂದ ಜನ ಹೈರಾಣಾ ಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ವಾಸ್ತವ ಸಂಗತಿಯನ್ನು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರೇ ಹಾದಿ ಬೀದಿಗಳಲ್ಲಿ ಟೀಕಿಸುತ್ತಿದ್ದಾರೆ. ಹೆಚ್ಚು ದಿನ ಸುಳ್ಳು ಹೇಳಿ ಕಾಲಾಹರಣ ಮಾಡಲು ಆಗುವುದಿಲ್ಲ. ಹೀಗಾಗಿ ಆ ಸತ್ಯವನ್ನು ರಾಯರೆಡ್ಡಿ ಮತ್ತು ಸಚಿವ ಡಿ. ಸುಧಾಕರ್ ಬಹಿರಂಗವಾಗಿ ಹೇಳಿದ್ದಾರೆ. ಇದಕ್ಕಿಂತ ಈ ಸರ್ಕಾರಕ್ಕೆ ದೊಡ್ಡ ಸರ್ಟಿಫಿಕೇಟ್ ಬೇಕೆ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.
ಕೆಲ ತಿಂಗಳ ಹಿಂದೆ ವಿಧಾನಸೌಧದ ಮುಂದೆ ದಿನವಿಡೀ ಜನತಾ ದರ್ಶನ ಕಾರ್ಯಕ್ರಮ ನಡೆಸಿದ್ದ ಸಿದ್ದರಾಮಯ್ಯನವರು, ಇನ್ನು ಮುಂದೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ತಿಂಗಳು ಕಡ್ಡಾಯವಾಗಿ ಜಿಲ್ಲಾ ಕೇಂದ್ರಗಳಲ್ಲಿ ಜನತಾ ದರ್ಶನ ಮಾಡಬೇಕು ಎಂದು ಸೂಚನೆ ನೀಡಿದ್ದರು. ಸಿಎಂ ಮಾತಿಗೆ ಯಾವ ಸಚಿವರು ಕಿವಿಗಿಡಲಿಲ್ಲ. ಎಲ್ಲಿಯೂ ಜನತಾ ದರ್ಶನ ನಡೆಯಲಿಲ್ಲ. ಇದು ಸರ್ಕಾರದ ಕಾರ್ಯವೈಖರಿಗೆ ಒಂದು ಸಣ್ಣ ಉದಾಹರಣೆ ಎಂದು ಅಶೋಕ್ ಟೀಕಿಸಿದ್ದಾರೆ.
ಸಿದ್ದರಾಮಯ್ಯನವರು ಇನ್ನೆಷ್ಟು ದಿನ ಇರುತ್ತಾರೆ,ಬದಲಾಗುತ್ತಾರೆ ಎಂಬ ಉಡಾಫೆ ಸಚಿವರಲ್ಲಿದೆ. ಇದರಿಂದ ಜನರ ಅಹವಾಲು ಕೇಳುವವರು ದಿಕ್ಕಿಲ್ಲದಂತಾಗಿದೆ. ಅಧಿಕಾರಿಗಳು ಕೂಡ ಮಾತು ಕೇಳುತ್ತಿಲ್ಲ, ಕಚೇರಿಗೂ ಬರುತ್ತಿಲ್ಲ. ಹೀಗಾಗಿ ಆಡಳಿತ ಹಳಿ ತಪ್ಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ವಿಧಾನಸೌಧದ ಆಡಳಿತ ಕೇರಳದ ವಯನಾಡಿಗೆ ಶಿಫ್ಟ್ ಆಗಿದೆ. ಅಲ್ಲಿಂದ ಬರುವ ಸೂಚನೆಯನ್ನು ಇಲ್ಲಿ ಪಾಲಿಸಲಾಗುತ್ತಿದೆ. ಹುಲಿ ಯೋಜನೆ ಪ್ರದೇಶದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಪ್ರದೇಶದಲ್ಲಿ ಮಲಯಾಳಂ ಚಲನಚಿತ್ರ ಚಿತ್ರೀಕರಣ ಮಾಡಲು ಅವಕಾಶ ನೀಡಿರುವುದೇ ಇದಕ್ಕೆ ಸಾಕ್ಷಿ. ನಿರ್ಬಂಧಿತ ಪ್ರದೇಶದಲ್ಲಿ ಶೂಟಿಂಗ್ ಮಾಡಲು ಸ್ಥಳೀಯ ಅಧಿಕಾರಿಗಳು ಅವಕಾಶ ನೀಡಿಲ್ಲ,ಸರ್ಕಾರದ ಮಟ್ಟದಲ್ಲೇ ಶೂಟಿಂಗ್ ನಡೆಸಲು ಅವಕಾಶ ನೀಡಲಾಗಿದೆ ಎಂದು ಸ್ಥಳೀಯ ಎಸಿಎಫ್ ಹೇಳಿಕೆ ನೀಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ಅಂದರೆ ಯಾರು, ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕಿದೆ ಎಂದು ಅಶೋಕ್ ಒತ್ತಾಯಿಸಿದ್ದಾರೆ.
ಬೆಂಗಳೂರು,ಏ.5: ನನ್ನ ಹತ್ರ ಟನ್ ಗಟ್ಟಲೆ ದಾಖಲೆಗಳಿವೆ,ಸುಮ್ಮನೆ ನನ್ನನ್ನು ಕೆಣಕಬೇಡಿ ಎಂದು ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಠಿಣ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್ ಡಿ ಕೆ,ನಾನು ಕನಕಪುರದಲ್ಲಿ ಮಾತ್ರ ಬಂಡೆ ಒಡೆದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಬಳ್ಳಾರಿಗಿ ನನಗೂ ಏನು ಸಂಬಂಧ ಎಂದು ಹೇಳಿಕೊಂಡಿದ್ದಾರೆ,ಅದಕ್ಕೆ ನನ್ನ ಬಳಿ ಟನ್ ಗಟ್ಟಲೆ ದಾಖಲೆಗಳಿವೆ. ಗಾಳಿಯಲ್ಲಿ ಗುಂಡು ಹೊಡೆಯುತ್ತಿಲ್ಲ ನಾನು, ಸತ್ಯವನ್ನೇ ಹೇಳುತ್ತಿದ್ದೇನೆ ಎಂದು ತಿಳಿಸಿದರು.
ನನ್ನ ಮೇಲಷ್ಟೇ ರಾಜಕೀಯ ಹಗೆತನ ಸಾಧಿಸುತ್ತಿರುವುದಷ್ಟೇ ಅಲ್ಲ, ರಾಜ್ಯದ ಜನರನ್ನು ಕಿತ್ತು ತಿನ್ನುತ್ತಿರುವ ಈ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡುತ್ತಿದ್ದೇನೆ ಸವಾಲು ಹಾಕಲು ಇಲ್ಲಿಗೆ ಬಂದಿದ್ದೇನೆ, ಇಂದಿನಿಂದ ಈ ಜನ ವಿರೋಧಿ ಸರ್ಕಾರದ ವಿರುದ್ಧ ನೇರ ಯುದ್ದ ಆರಂಭ ಮಾಡುತ್ತಿದ್ದೇನೆ ಎಂದು ತಿಳಿಸಿದರು.
2003- 2004ರಲ್ಲಿ ಡಿ.ಕೆ.ಶಿವಕುಮಾರ್ ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದರು. ಅದಿರಿನ ಮಣ್ಣಿನ ನೆಪದಲ್ಲಿ ಸಾವಿರಾರು ಟನ್ ಕಬ್ಬಿಣದ ಅದಿರನ್ನು ಬಳ್ಳಾರಿಯಲ್ಲಿ ಕದ್ದು ಸಾಗಿಸಿದರು. ಆ ಅದಿರು ಎಲ್ಲಿಗೆ ಹೋಯಿತು, ಏನು ಮಾಡಿದರು. ಅವರು ಯಾರಿಗೆಲ್ಲ ಪತ್ರ ಬರೆದು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ನನ್ನ ಬಳಿ ದಾಖಲೆಗಳು ಇವೆ ಎಂದು ವಾಗ್ದಾಳಿ ನಡೆಸಿದರು.
ಈ ಉಪ ಮುಖ್ಯಮಂತ್ರಿ ನನ್ನನ್ನು ಕೆಣಕುತ್ತಿದ್ದಾರೆ ಸುಮ್ಮನೆ ನನ್ನ ವಿರುದ್ಧ ರಾಜಕೀಯ ಹಗೆತನ ಸಾಧಿಸುತ್ತಿದ್ದಾರೆ ನಾನು ಸುಮ್ಮನಿರಲು ಸಾಧ್ಯ ಇಲ್ಲ, ಅವರ ಒಂದೊಂದೇ ಹಗರಣಗಳನ್ನು ಬಯಲಿಗೆ ಎಳೆಯುತ್ತೇನೆ ಎಂದು ಸವಾಲು ಹಾಕಿದರು.
ನಾನು ಯುವಕನಾಗಿದ್ದಾಗ ಜೀವನೋಪಾಯಕ್ಕಾಗಿ ಬೆಂಗಳೂರಿನ ಹೊಂಬೇಗೌಡನಗರ, ಸುಧಾಮನಗರ ಮತ್ತು ವಿಲ್ಸನ್ ಗಾರ್ಡನ್ ವಾರ್ಡುಗಳಲ್ಲಿ ಕಸ ಎತ್ತುವ ಗುತ್ತಿಗೆ ತೆಗೆದುಕೊಂಡಿದ್ದೆ. ಆಮೇಲೆ ನಮ್ಮ ತಂದೆಯವರು ಬೇಡ ಎಂದು ತಾಕೀತು ಮಾಡಿದ ಮೇಲೆ ಅದನ್ನು ಬಿಟ್ಟೆ. ಯಾವುದೇ ಕಾರಣಕ್ಕೂ ಸರ್ಕಾರಿ ಗುತ್ತಿಗೆ ತೆಗೆದುಕೊಳ್ಳ ಕೂಡದು ಎಂದು ಅವರು ಹೇಳಿದ್ದರು ಎಂದು ಈ ವೇಳೆ ಹೆಚ್ ಡಿ ಕೆ ಸ್ಮರಿಸಿದರು.
ಬಿಬಿಎಂಪಿ ಕಸದ ಗುತ್ತಿಗೆ ನೀಡುವುದರಲ್ಲಿಯೂ ಕೋಟ್ಯಾಂತರ ರೂಪಾಯಿ ಲೂಟಿ ಮಾಡಲು ಹೊರಟಿದ್ದರು. ಮೂವತ್ತು ವರ್ಷಗಳಷ್ಟು ಸುದೀರ್ಘ ಅವಧಿಗೆ ಬೆಂಗಳೂರಿನ ಕಸ ಎತ್ತಲು ಚೆನ್ನೈನ ಒಬ್ಬ ವ್ಯಕ್ತಿಗೆ ಗುತ್ತಿಗೆ ನೀಡುವ ಹಗರಣಕ್ಕೆ ಮುಂದಾಗಿದ್ದರು. ಪ್ರತಿ ಟನ್ ಕಸ ಎತ್ತಲು 6500 ಕ್ಕಿಂತ ಹೆಚ್ಚು ಮೊತ್ತವನ್ನು ಪಾವತಿ ಮಾಡಿ ಅಲ್ಲಿಂದ ಕಮಿಷನ್ ಹೊಡೆಯಲು ಮುಂದಾಗಿದ್ದರು. ಇಲ್ಲಿ ಕಡಿಮೆ ಎಂದರೂ 15,000 ಕೋಟಿ ಹೊಡೆಯಲು ಹೊರಟಿದ್ದರು ಎಂದು ನಾನು ಹೇಳಿದ ಮೇಲೆ 6500 ಮೊತ್ತವನ್ನು 3,000ಕ್ಕೆ ಕಡಿಮೆ ಮಾಡಿದರು. ಎರಡೂ ಮೊತ್ತಗಳ ನಡುವೆ ಎಷ್ಟು ಅಂತರ ಇದೆ ಎಂಬುದನ್ನು ನೀವು ಗಮನಿಸಬೇಕು ಎಂದು ಕುಮಾರಸ್ವಾಮಿ ಮಾಧ್ಯಮದವರಿಗೆ ಹೇಳಿದರು.
ಕಾಂಗ್ರೆಸ್ ಸರ್ಕಾರ ಎಲ್ಲಾ ಅಕ್ರಮ, ಅನ್ಯಾಯ ಮಾಡಿ ಎಲ್ಲೆಂದರಲ್ಲಿ ಕಸ ಸೃಷ್ಟಿ ಮಾಡಿದೆ,ಅದನ್ನು ಎತ್ತುವ, ಆ ಮೂಲಕ ಜನರನ್ನು ರಕ್ಷಣೆ ಮಾಡುವ ಟೆಂಡರ್ ತೆಗೆದುಕೊಂಡಿದ್ದೇನೆ ಅದೇ ನಿಮ್ಮ ಇತಿಶ್ರೀ ಹಾಡಲಿದೆ ಎಂದು ಹೆಚ್ ಡಿ ಕೆ ಕಾಂಗ್ರೆಸ್ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ನಡೆಯುತ್ತಿರುವ ಈ ಸರ್ಕಾರದ ಅಕ್ರಮಗಳು, ದರೋಡೆಗಳು ಮಿತಿಮೀರಿವೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಘಜ್ನಿ ಮಹಮ್ಮದ್, ಘೋರಿ ಮಹಮ್ಮದ್ ಹಾಗೂ ಮಲ್ಲಿಕ್ ಖಫೂರ ಇದ್ದಾರೆ. ಅವರನ್ನು ನಾಚುವ ರೀತಿಯಲ್ಲಿ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
40 ವರ್ಷಗಳ ಹಿಂದೆಯೇ ನಾನು ಬಿಡದಿಯಲ್ಲಿ ಭೂಮಿ ಖರೀದಿ ಮಾಡಿದ್ದೆ. ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಾಲ್ಕೈದು ಜೆಸಿಬಿ , 25ರಿಂದ 30 ಅಧಿಕಾರಿಗಳು, ಪೊಲೀಸರು ಬಂದು ನನ್ನ ಭೂಮಿಯನ್ನು ಅಳತೆ ಮಾಡುತ್ತಾರೆ. ತೆರವಿನ ಹೈಡ್ರಾಮಾ ಮಾಡುತ್ತಾರೆ ರಾಜಕೀಯ ಸೇಡು ಸಾಧಿಸುತ್ತಿದ್ದರೆ ಅದೆಷ್ಟು ಬೇಕೋ ಅಷ್ಟು ಸಾಧಿಸಲಿ, ಅದಕ್ಕೆ ಉತ್ತರ ಕೊಡುವ ಸಮಯ ಬರುತ್ತದೆ ಎಂದು ಕುಮಾರಸ್ವಾಮಿ ಗುಡುಗಿದರು.
ನಾನು ಮಾಜಿ ಪ್ರಧಾನಿ ಮಗ, ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ,ನಾನು ನಾಲ್ಕು ಎಕರೆ ಜಮೀನನ್ನ ಒತ್ತುವರಿ ಮಾಡಿಕೊಳ್ಳುಬೇಕಾ, 70 ಎಕರೆ ಒತ್ತುವರಿ ಎಂದು ಯಾರೋ ಸಮಾಜ ಪರಿವರ್ತನೆ ಮಾಡುವ ವ್ಯಕ್ತಿ ಹೇಳಿದ್ದಾನೆ, ಬಂದು ತೋರಿಸಲಿ ನಾನು ಅನುಭವದಲ್ಲಿ ಇರುವ ಭೂಮಿಯೇ 40 ರಿಂದ 42 ಎಕರೆ. ಅತಿಕ್ರಮಣ ಮಾಡಿಕೊಂಡಿದ್ದರೆ ದಾಖಲೆ ಬಿಡುಗಡೆ ಮಾಡಲಿ. ಈ ಸರ್ಕಾರದಲ್ಲಿರುವವರು ನಾನು ಅಪರಾಧಿ ಎಂದು ಅಪಪ್ರಚಾರ ಮಾಡುವುದಕ್ಕೆ ಹೊರಟ್ಟಿದ್ದಾರೆ ಇದಕ್ಕೆಲ್ಲ ಈ ಕುಮಾರಸ್ವಾಮಿ ಹೆದರಲ್ಲ ಎಂದು ಕಠಿಣವಾಗಿ ಹೇಳಿದರು
ನಾನು ಯಾವುದೇ ರೀತಿಯ ಒತ್ತುವರಿ ಮಾಡಿಲ್ಲ. ನನ್ನ ವ್ಯವಹಾರ ಕಾನೂನುದ್ಧವಾಗಿ ಆಗಿದೆ. ದಾಖಲೆಗಳ ಮುಖಾಂತರ ಕೆಲವು ತೀರ್ಮಾನಗಳು ಆಗಿವೆ. ಈ ವಿಚಾರದಲ್ಲಿ ಕೋರ್ಟ್ ಅನ್ನು ಮಿಸ್ ಲೀಡ್ ಮಾಡುವ ಕೆಲಸ ಆಗಿದೆ. ಸಾಯಿ ವೆಂಕಟೇಶ್ವರ ಮಿನರಲ್ಸ್ ಕೇಸ್ ಹದಿನೇಳು ವರ್ಷಗಳಿಂದ ನಡೆಯುತ್ತಿದೆ. ತಪ್ಪು ಮಾಡಿದ್ದಿದ್ದರೆ, ಇಷ್ಟು ವರ್ಷಗಳ ಕಾಲ ಬೇಕಿತ್ತಾ? ಕೇವಲ ನನ್ನ ಮೇಲೆ ರಾಜಕೀಯ ಹಗೆತನ ಸಾಧಿಸಲು ಇದನ್ನೆಲ್ಲ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವರು ಕಿಡಿಕಾರಿದರು.
ಮುಸ್ಲಿಮರಿಗೆ ಗುತ್ತಿಗೆ ಮೀಸಲು ಸೇರಿದಂತೆ ಯಾರು ಯಾರಿಗೆ ಗುತ್ತಿಗೆ ಮೀಸಲು ನೀಡಿದ್ದಾರೋ, ಅದರಿಂದ ಅವರು ಎಷ್ಟು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂಬ ಜನರಿಗೆ ಮಾಹಿತಿ,ಆ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಕೇಂದ್ರ ಸಚಿವರು ರಾಜ್ಯ ಸರಕಾರವನ್ನು ಆಗ್ರಹಿಸಿದರು.
ಬೆಂಗಳೂರು: ಈಗಾಗಲೇ ಬೇಸಿಗೆಯ ಬಿಸಲು ಜನರ ತಲೆ ಸುಡುತ್ತಿದೆ, ಗ್ಯಾರಂಟಿಗಳ ಭಾರದಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರ ಒಂದೆಡೆ ಉಚಿತಗಳನ್ನು ಕೊಟ್ಟು ಮತ್ತೊಂದುಕಡೆಯಿಂದ ಜನರಿಂದ ಕಿತ್ತುಕೊಳ್ಳುತ್ತಿದೆ.
ಬಸ್, ಮೆಟ್ರೋ, ಹಾಲು, ಮೊಸರು, ವಿದ್ಯುತ್ ದರ ಏರಿಸಿದ್ದಾಯ್ತು ಈಗ ಲಿಫ್ಟ್, ಟ್ರಾನ್ಸ್‌ಫಾರ್ಮರ್, ಜನರೇಟರ್ ಪರಿಶೀಲನೆ ಮತ್ತು ರಿನೀವಲ್ ಶುಲ್ಕವನ್ನೂ ಏರಿಕೆ ಮಾಡಿದೆ.
ರಾಜ್ಯ ಇಂಧನ ಇಲಾಖೆ ಲಿಫ್ಟ್, ಟ್ರಾನ್ಸ್‌ಫಾರ್ಮರ್, ಜನರೇಟರ್ ಪರಿಶೀಲನೆ ಮತ್ತು ರಿನೀವಲ್ ಶುಲ್ಕವನ್ನು ಏಕಾಏಕಿ ಏರಿಕೆ ಮಾಡಿ ಆದೇಶ ಹೊರಡಿಸಿದೆ.
ಹಿಂದೆ ಇದ್ದ ದರಕ್ಕಿಂತ ಮೂರು ಪಟ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ. 800 ರೂ. ನಿಂದ 1,000 ರೂ.ನಷ್ಟಿದ್ದ ಶುಲ್ಕದ ಮೊತ್ತವನ್ನ 5,000 ರೂ. ನಿಂದ 8,000 ರೂ.ಗಳಿಗೆ ಏರಿಕೆ ಮಾಡಲಾಗಿದೆ.
ಮನೆ, ಕಚೇರಿ, ಫ್ಯಾಕ್ಟರಿಗಳಿಗೆ 25 ಕೆವಿಎ ಟ್ರಾನ್ಸ್‌ಫಾರ್ಮರ್ ಹಾಕಿಸಿಕೊಂಡಿದ್ದರೆ ಅದನ್ನ ಪರಿಶೀಲನೆ ಮಾಡಲು 1,300 ರೂ.ನಿಂದ 1,500 ರೂ. ಶುಲ್ಕ ನೀಡಬೇಕಿತ್ತು, ಈಗ ಆ ದರವನ್ನು 3 ರಿಂದ 5 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ.
5 ರಿಂದ 10 ಕೆವಿಎ ಸಣ್ಣ ಜನರೇಟರ್ ಪರಿಶೀಲನೆ ಮತ್ತು ರಿನೀವಲ್‌ಗೆ 2 ಸಾವಿರ ರೂ. ಇದ್ದ ಶುಲ್ಕವನ್ನು 5 ರಿಂದ 8 ಸಾವಿರ ರೂ. ವರೆಗೆ ಏರಿಕೆ ಮಾಡಲಾಗಿದೆ, ರೈತರ ಐಪಿ ಸೆಟ್-25 ಕೆವಿ ವ್ಯಾಟ್‌ಗೆ 3 ಸಾವಿರ ಇದ್ದ ಶುಲ್ಕವನ್ನ 11,800 ರೂ.ಗಳಿಗೆ ಏರಿಕೆ ಮಾಡಿ ಜನರಿಗೆ ಬರೆ ಹಾಕಲಾಗುತ್ತಿದೆ.
ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ಅಧಿಕಾರ ಹಿಡಿಯುವುದಕ್ಕೆ ಉಚಿತ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದ ಸರ್ಕಾರ ಇದೀಗ ಒಂದೊಂದಾಗಿ ಬೆಲೆ ಏರಿಕೆ ಮಾಡುವ ಮೂಲಕ ಜನರಿಂದ ತೆರಿಗೆ ವಸೂಲಿಗೆ ಪ್ಲ್ಯಾನ್ ಮಾಡಿದಂತಿದೆ.
ಬೆಂಗಳೂರು: ಅಭಿವೃದ್ಧಿಗೆ ದುಡ್ಡಿಲ್ಲದೆ ಈಗಾಗಲೇ ಮನಿಟ್ರ್ಯಾಪ್ ನಲ್ಲಿ ಸಿಲುಕಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಈಗ ಹನಿ ಟ್ರ್ಯಾಪ್ ಸದ್ದು ಜೋರಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ತಮ್ಮ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ ಸದನದಲ್ಲಿ ಆರೋಪಿಸಿರುವ ಸಹಕಾರ ಸಚಿವ ರಾಜಣ್ಣ ಅವರು ತನಿಖೆಗೆ ಆಗ್ರಹಿಸಿದ್ದಾರೆ. ರಾಜಣ್ಣನವರ ಆರೋಪಕ್ಕೆ ದನಿಗೂಡಿಸಿರುವ ಮತ್ತಿಬ್ಬರು ಹಿರಿಯ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಮಹದೇವಪ್ಪ ಅವರು ಸಹ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಆದರೆ ಕನ್ನಡಿಗರಿಗೆ ಕಾಡುತ್ತಿರುವ ಯಕ್ಷ ಪ್ರಶ್ನೆ ಏನಪ್ಪಾ ಅಂದರೆ, ಹನಿಟ್ರ್ಯಾಪ್ ಜಾಲದ ಬಗ್ಗೆ ಬಹಿರಂಗವಾಗಿ ದನಿ ಎತ್ತಿರುವ ಸಚಿವರೆಲ್ಲರೂ ಸಿಎಂ ಸಿದ್ದರಾಮಯ್ಯ ಅವರ ಬಣದಲ್ಲಿ ಗುರಿತಿಸಿಕೊಂಡಿರುವವರು ಎನ್ನುವುದು ಕಾಕತಾಳೀಯವೋ ಅಥವಾ ಇದರ ಹಿಂದೆ ರಾಜಕೀಯ ಷಡ್ಯಂತ್ರವೇನಾದರೂ ಇದೆಯೋ ಎಂದು ಅಶೋಕ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಕಾಲವೇ ಎಲ್ಲದಕ್ಕೂ ಉತ್ತರಿಸಲಿದೆ ಎಂದೂ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರು: ಫ್ರೀಡಂ ಪಾರ್ಕ್ ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ ಕಾರ್ಯರ್ತೆಯರ ಟೆಂಟ್ ಕಿತ್ತುಹಾಕಿಸಿ ಬಲವಂತವಾಗಿ ಪ್ರತಿಭಟನೆ ಅಂತ್ಯಗೊಳಿಸುವ ಮೂಲಕ ಸರ್ಕಾರ ಹಿಟ್ಲರ್ ಧೋರಣೆ ತೋರಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ, ಚುನಾವಣೆ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಟ್ಟ ಆಶ್ವಾಸನೆ ಈಡೇರಿಸುವುದಕ್ಕಂತೂ ನಿಮ್ಮ ಸರ್ಕಾರಕ್ಕೆ ಯೋಗ್ಯತೆ ಇಲ್ಲ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೆಯುವ ಚಳಿಯನ್ನೂ ಲೆಕ್ಕಿಸದೆ ನಾಲ್ಕು ದಿನದಿಂದ ಅಹೋರಾತ್ರಿ ಪ್ರತಿಭಟನೆ ಮಾಡುತ್ತಿರುವ ಮಹಿಳೆಯರ ಬಳಿ ಹೋಗಿ ಕನಿಷ್ಠ ಪಕ್ಷ ಅವರನ್ನ ಸಮಾಧಾನ ಪಡಿಸುವ ಸೌಜನ್ಯವೂ ನಿಮ್ಮ ಸರ್ಕಾರಕ್ಕೆ ಇಲ್ಲ, ಈಗ ಅವರ ಶಾಂತಿಯುತ ಪ್ರತಿಭಟನೆಗೂ ಅಡ್ಡಿಪಡಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ತಮ್ಮ ನಾಯಕ ರಾಹುಲ್ ಗಾಂಧಿ ಅವರು ಹೋಗಿ ಬಂದಲ್ಲೆಲ್ಲ ತೋರಿಸುವ ಸಂವಿಧಾನದ ಪುಸ್ತಕದಲ್ಲಿ ಸಾಮಾನ್ಯ ನಾಗರಿಕರಿಗೆ ಪ್ರತಿಭಟನೆ ಮಾಡುವ ಹಕ್ಕಿಲ್ಲವೆ ಅಥವಾ ನಮ್ಮ ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಏನಾದರೂ ಇದೆಯಾ ಎಂದು ಕಾರವಾಗಿ ಕಿಡಿಕಾರಿದ್ದಾರೆ.
ನಿಮ್ಮ ಈ ಹಿಟ್ಲರ್ ಧೋರಣೆ ಜಾಸ್ತಿ ದಿನ ನಡೆಯುವುದಿಲ್ಲ ನಿಮ್ಮ ಕಾಂಗ್ರೆಸ್ ಸರ್ಕಾರದ ವಿರುದ್ಧ ಕನ್ನಡಿಗರು ತಿರುಗಿ ಬೀಳುವ ದಿನ ಬಹಳ ದೂರವಿಲ್ಲ ಎಂದು ಅಶೋಕ್ ಎಚ್ಚರಿಸಿದ್ದಾರೆ.
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಕ್ಕಾ 60 ಪರ್ಸೆಂಟ್ ಕಮಿಶನ್ ಸರ್ಕಾರ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಾಪ್ರಹಾರ ನಡೆಸಿದರು.
ಕಾಂಗ್ರೆಸ್ ಆಡಳಿತದಿಂದಾಗಿ ರಾಜ್ಯ ದಿವಾಳಿಯ ಕಡೆಗೆ ಸಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಮಾಚಲ ಪ್ರದೇಶ ಹಾಗೂ ಕೇರಳದಂತೆಯೇ ಕರ್ನಾಟಕ ಕೂಡ ದಿವಾಳಿಯ ಕಡೆಗೆ ಹೆಜ್ಜೆ ಇಡುತ್ತಿದೆ. ಕಾಂಗ್ರೆಸ್‌ನದ್ದು ಪಕ್ಕಾ 60 ಪರ್ಸೆಂಟ್ ಕಮಿಶನ್‌ನ ಸರ್ಕಾರ,ಇವರ ಬಳಿ ಗುತ್ತಿಗೆದಾರರಿಗೆ ಪಾವತಿಸಲು ಬಳಿ ಹಣವಿಲ್ಲ ಎಂದು ಕಿಡಿಕಾರಿದರು.
ಬಿಜೆಪಿ ಸರ್ಕಾರಕ್ಕೆ 40 ಪರ್ಸೆಂಟ್ ಎಂದು ಆರೋಪಿಸಿದ ಗುತ್ತಿಗೆದಾರರೇ ಈಗ ಕಾಂಗ್ರೆಸ್ ಸರ್ಕಾರ 60% ಕಮಿಶನ್ ಸರ್ಕಾರ ಎಂದು ಹೇಳಿ ದಯಾಮರಣಕ್ಕೆ ಅರ್ಜಿ ಸಲ್ಲಿಸಲು ನೋಡುತ್ತಿದ್ದಾರೆ. ಬೆಂಗಳೂರಿನಲ್ಲಿ 30-40 ನಿವೇಶನಕ್ಕೆ 10 ಲಕ್ಷ ರೂ. 40-60 ನಿವೇಶನಕ್ಕೆ 20 ಲಕ್ಷ ರೂ., ಇದಕ್ಕೂ ಹೆಚ್ಚಿನ ನಿವೇಶನಗಳಿಗೆ 40 ಲಕ್ಷ ರೂ. ಲಂಚ ಕಮಿಶನ್ ಕೊಡಬೇಕಿದೆ ಎಂದು ಆರೋಪಿಸಿದರು.
ಗುತ್ತಿಗೆದಾರರಿಗೆ ಸರ್ಕಾರ 32 ಸಾವಿರ ಕೋಟಿ ರೂ. ನೀಡಬೇಕಿದೆ. ಈ ಹಣ ಹೊಂದಿಸಲು ಎಲ್ಲದಕ್ಕೂ ಸರ್ಕಾರ ತೆರಿಗೆ ಹಾಕುತ್ತಿದೆ. ಇಲ್ಲವಾದರೆ ಗುತ್ತಿಗೆದಾರರಿಗೆ ಕೆಲಸ ಸ್ಥಗಿತಗೊಳಿಸುತ್ತಾರೆ ಇದರ ನಡುವೆ ಆಶಾ ಕಾರ್ಯಕರ್ತೆಯರು ಧರಣಿ ಆರಂಭಿಸಿದ್ದಾರೆ. ಜೊತೆಗೆ ತೊಗರಿ ಖರೀದಿಗೆ ಸರ್ಕಾರದ ಬಳಿ ಹಣವಿಲ್ಲ ಎಂದು ವ್ಯಂಗ್ಯ ವಾಡಿದರು.
ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಬಹಳ ಮೋಸ ಮಾಡುತ್ತಾರೆ. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಗೆ 2022-23 ರಲ್ಲಿ ಬಿಜೆಪಿ ಸರ್ಕಾರ 60 ಕೋಟಿ ರೂ. ಅನುದಾನ ನೀಡಿತ್ತು. 2024-25 ರಲ್ಲಿ ಕಾಂಗ್ರೆಸ್ 40 ಕೋಟಿ ರೂ. ನೀಡಿದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ ಯೋಜನೆಗೆ ಬಿಜೆಪಿ 100 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 45 ಕೋಟಿ ರೂ. ನೀಡಿದೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದ ವೆಚ್ಚವನ್ನು ಅಂಕಿ ಅಂಶಗಳ ಸಹಿತ ಅಶೋಕ್ ತಿಳಿಸಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಸಚಿವ ಪ್ರಿಯಾಂಕ್ ಖರ್ಗೆಯವರ ಆಪ್ತರನ್ನು ಇನ್ನೂ ಬಂಧಿಸಿಲ್ಲ. ಬಹುಶಃ ಸುರಕ್ಷತೆ ದೃಷ್ಟಿಯಿಂದ ಅವರನ್ನು ಪೊಲೀಸರು ಕಬ್ಬಿನ್ ಗದ್ದೆಯಲ್ಲಿ ಇರಿಸಿರಬಹುದು. ಅವರ ಆಪ್ತರು ರೌಡಿಶೀಟರ್ ಪಟ್ಟಿಯಲ್ಲಿದ್ದು, ಆ ಪಟ್ಟಿಯಿಂದ ಹೆಸರು ತೆಗೆಸಿದ್ದೇ ಕಾಂಗ್ರೆಸ್ ನಾಯಕರು ಎಂದು ಇದೇ ವೇಳೆ ಅಶೋಕ್ ದೂರಿದರು.
ಸಚಿವ ರಾಮಲಿಂಗಾರೆಡ್ಡಿ ಹಳೆಯ ಸುದ್ದಿ ಹೇಳಿದ್ದಾರೆ. ನಾನು ಸಚಿವನಾಗಿದ್ದಾಗ ಸಾರಿಗೆ ನಿಗಮಗಳನ್ನು ನಷ್ಟಕ್ಕೆ ದೂಡಲಿಲ್ಲ. ಎಲ್ಲ ಕಡೆ ಬಸ್ ನಿಲ್ದಾಣ ನಿರ್ಮಿಸಿ ಬಾಡಿಗೆ ಮೂಲಕ ಆದಾಯ ಬರುವಂತೆ ಮಾಡಲಾಗಿತ್ತು. ಈಗ ಸರ್ಕಾರ ಎಲ್ಲೂ ನಿಲ್ದಾಣ ನಿರ್ಮಿಸಿಲ್ಲ. ನಾನು ಸಚಿವ ಸ್ಥಾನದಿಂದ ಹೊರಬಂದಾಗ ಬಿಎಂಟಿಸಿ ಲಾಭದಲ್ಲಿತ್ತು. ಕೋವಿಡ್ ಸಮಯದಲ್ಲಿ ಆರ್ಥಿಕ ನಷ್ಟವಾಗಿದ್ದಾಗಲೂ ಟಿಕೆಟ್ ದರ ಏರಿಸಲಿಲ್ಲ. ಗ್ಯಾರಂಟಿಗಳಿಂದಾಗಿ ಈಗ ಟಿಕೆಟ್ ದರ ಏರಿಸಿದ್ದಾರೆ ಎಂದು ಟೀಕಿಸಿದರು.
ಹೊಸ ವೈರಸ್ ಹರಡುತ್ತಿರುವುದರಿಂದ ಸರ್ಕಾರ ಟಾಸ್ಕ್ ಫೋರ್ಸ್ ರಚಿಸಿ ಸಿದ್ಧತೆ ಮಾಡಿಕೊಳ್ಳಬೇಕು. ಆಕ್ಸಿಜನ್ ವ್ಯವಸ್ಥೆ ಮಾಡಬೇಕು. ಜಿಲ್ಲಾ, ತಾಲೂಕು ಕೇಂದ್ರದಲ್ಲಿ ಅಧಿಕಾರಿಗಳು ಆಡಿಟ್ ಮಾಡಬೇಕು. ಸರ್ಕಾರ ಕೂಡಲೇ ಸಿದ್ಧತೆ ಮಾಡಿಕೊಳ್ಳಲಿ ಎಂದು ಪ್ರತಿಪಕ್ಷದ ನಾಯಕರು ಸಲಹೆ ನೀಡಿದರು.
ನವದೆಹಲಿ: ಬೆಳಗಾವಿಯ ಸುವರ್ಣಸೌಧ ಬಳಿ ಪ್ರತಿಭಟನೆ ನಡೆಸಲು ಬಂದ ಪಂಚಮಸಾಲಿ ಸಮುದಾಯದ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ ಹಾಗೂ ಮುಖಂಡರ ಮೇಲೆ ಲಾಠಿ ಪ್ರಹಾರ ನಡೆಸಿರುವುದಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿ ದ್ದಾರೆ.
ಪಂಚಮಸಾಲಿ ಬಂಧುಗಳ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಕಾಂಗ್ರೆಸ್ ಸರಕಾರ ಅಡಾಲ್ಫ್ ಹಿಟ್ಲರ್ ಮಾರ್ಗ ಆಯ್ಕೆ ಮಾಡಿಕೊಂಡಿರುವುದು ದುರದೃಷ್ಟಕರ. ಸಂತರು, ಪಂಚಮಸಾಲಿ ಸಮುದಾಯ ಜಗದ್ಗುರು ಶ್ರೀ ಬಸವ ಮೃತ್ಯುಂಜಯ ಮಹಾಸ್ವಾಮೀಜಿಗಳನ್ನು ಅತ್ಯಂತ ಹೇಯವಾಗಿ ನಡೆಸಿಕೊಂಡಿರುವುದು ನನಗೆ ಅತೀವ ನೋವುಂಟು ಮಾಡಿದೆ. ಇದು ಶಿಲಾಯುಗ ಕಾಲದ ಮನಃಸ್ಥಿತಿಯ ಸರಕಾರ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.
ತಮ್ಮ ಬೇಡಿಕೆಗಳ ಬಗ್ಗೆ ಪೂಜ್ಯ ಸ್ವಾಮೀಜಿ ಅವರು, ಸಮುದಾಯದ ಪ್ರಮುಖರು ನಿರಂತರವಾಗಿ ಸರಕಾರಕ್ಕೆ ಮನವಿ ಮಾಡುತ್ತಲೇ ಇದ್ದರು. ಆದರೂ ಸರಕಾರ ನಿರ್ಲಕ್ಷ್ಯ ವಹಿಸಿತ್ತು. ಶಾಂತಿಯುತವಾಗಿ ಪ್ರತಿಭಟಿಸಲು ಬಂದ ಸ್ವಾಮೀಜಿಗಳು, ಸಮುದಾಯದ ನಾಯಕರು, ಜನತೆಯ ಮೇಲೆ ದಬ್ಬಾಳಿಕೆ ನಡೆಸಿ ಪೊಲೀಸ್ ವಶಕ್ಕೆ ತೆಗೆದುಕೊಂಡ ಕ್ರಮ ಖಂಡನೀಯ ಎಂದು ಹೇಳಿದ್ದಾರೆ.
ಸರಕಾರವೇ ಶಾಂತಿ ಕದಡುವ ದುಷ್ಪ್ರಯತ್ನ ಮಾಡಿದರೆ ಅದಕ್ಕೆ ಸರಕಾರವೇ ಪೂರ್ಣ ಹೊಣೆ. ಕೂಡಲೇ ಪೂಜ್ಯ ಸ್ವಾಮೀಜಿ ಅವರ ಹಾಗೂ ಸಮುದಾಯದ ಕ್ಷಮೆ ಕೇಳಬೇಕು ಹಾಗೂ ಅವರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ತುರ್ತು ಕ್ರಮ ವಹಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.