ಎಸ್ ಸಿ ಜನರ ಮೇಲೆ ದೌರ್ಜನ್ಯವಾದರೆ ತಕ್ಷಣ ಎಫ್ಐಆರ್ ದಾಖಲಿಸಿ- ವಡೆಪಲ್ಲಿ ರಾಮಚಂದರ್

ಮೈಸೂರು: ಪರಿಶಿಷ್ಟ ಜಾತಿಯ ಜನರ ಮೇಲೆ ದೌರ್ಜನ್ಯ ನಡೆದರೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ಭದ್ರತೆ ಒದಗಿಸಬೇಕು ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಸದಸ್ಯ ವಡೆಪಲ್ಲಿ ರಾಮಚಂದರ್ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯತ್ ಡಿ ದೇವರಾಜ ಅರಸು ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿಗಳು ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಪರಿಶಿಷ್ಟ ಜಾತಿಯ ಜನರಿಗೆ ಇರುವ ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ಪಾರದರ್ಶಕವಾಗಿ ತಲುಪಿಸಬೇಕು ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರಿಶಿಷ್ಟ ಜಾತಿಯ ಜನರಿಗೆ ಮುದ್ರಾ ಯೋಜನೆ, ಎಂ ಎಸ್ ಎಂ ಇ ಯೋಜನೆ, ಶೈಕ್ಷಣಿಕ ಶಾಲಾ ಯೋಜನೆ, ಸ್ಟಾರ್ಟ್ ಆಫ್ ಮುಂತಾದ ಯೋಜನೆಗಳಲ್ಲಿ ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯವನ್ನು ನೀಡಿ ಅವರ ಏಳಿಗೆಗೆ ಕ್ರಮ ಕೈಗೊಳ್ಳಬೇಕು.
ಸಾಲ ನೀಡಲು ಅವರನ್ನು ಬ್ಯಾಂಕುಗಳು ಅಲೆದಾಡಿಸಬಾರದು ಈ ಬಗ್ಗೆ ಕ್ರಮ ವಹಿಸಬೇಕು. ಬ್ಯಾಂಕುಗಳು ಸಾಲ ನೀಡುವಲ್ಲಿ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ದೂರುಗಳು ಬರುತ್ತಿವೆ. ಮುಂದೆ ಇಂತಹ ದೂರುಗಳಿಗೆ ಆಸ್ಪದ ನೀಡದಂತೆ ಕಾರ್ಯ ನಿರ್ವಹಿಸಬೇಕು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಅವರಿಗೆ
ವಡೆಪಲ್ಲಿ ರಾಮಚಂದರ್ ಸೂಚಿಸಿದರು.

ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ನಿರ್ದೇಶಕರಾದ ಸುನಿಲ್ ಕುಮಾರ್ ಬಾಬು ಅವರು ಮಾತನಾಡಿ ಸದಸ್ಯರು ಪರಿಶಿಷ್ಟ ಜಾತಿಗಳ ಜನರ ಹಕ್ಕುಗಳನ್ನು ರಕ್ಷಿಸುವ ಹಾಗೂ ಸೌಲಭ್ಯಗಳನ್ನು ಕಲ್ಪಿಸುವಂತೆ ನೋಡಿಕೊಳ್ಳುವ ಅಧಿಕಾರ ಹೊಂದಿರುತ್ತಾರೆ. ಸಮಿತಿಯ ಸದಸ್ಯರು ನ್ಯಾಯಿಕ ಅಧಿಕಾರವನ್ನು ಹೊಂದಿರುತ್ತಾರೆ ಎಂದು ಹೇಳಿದರು.

ಮೈಸೂರು ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಕಳೆದ ವರ್ಷ 69 ರಷ್ಟು ಫಲಿತಾಂಶ ಬಂದಿದೆ. ಇದು ಕಡಿಮೆ ಆಗಿದೆ. ಎಸ್ ಎಸ್ ಎಲ್ ಸಿ ಯಲ್ಲಿ ಎಸ್ ಸಿ ಹಾಗೂ ಎಸ್ ಟಿ ವಿಧ್ಯಾರ್ಥಿಗಳ ಉತ್ತೀರ್ಣ ಮಟ್ಟವನ್ನು ಹೆಚ್ಚಳ ಮಾಡಲು ಯಾವ ಯಾವ ಕ್ರಮಗಳನ್ನು ಹಮ್ಮಿಕೊಂಡಿದ್ದೀರಿ ಎಂಬ ಬಗ್ಗೆ ಡಿಡಿಪಿಐ ಅವರಿಂದ ಮಾಹಿತಿ ಪಡೆದುಕೊಂಡರು.
ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ ಅವರು ಮಾತನಾಡಿ ಜಿಲ್ಲೆಯಲ್ಲಿ ಎಸ್ ಸಿ ಹಾಗೂ ಎಸ್ ಟಿ ನಿವೇಶನ ರಹಿತರ ಸರ್ವೇ ಮಾಡಲಾಗಿದ್ದು, ಇವರಿಗೆ ಹಂತ ಹಂತವಾಗಿ ನಿವೇಶನ ನೀಡಲು ಕ್ರಮ ವಹಿಸಲಾಗುತ್ತಿದೆ. ನಗರ ಪ್ರದೇಶದಲ್ಲಿ ಪರಿಶಿಷ್ಟ ಜಾತಿಯ ನಿವೇಶನ ರಹಿತರು ಹೆಚ್ಚು ಇದ್ದಾರೆ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಂಗೇಗೌಡ ಅವರು ಮಾತನಾಡಿ,ಪ್ರತಿ ಮೂರು ತಿಂಗಳಿಗೆ ಒಮ್ಮೆ ಪರಿಶಿಷ್ಟ ಜಾತಿಗಳ ಮಾನಿಟರಿಂಗ್ ಕಮಿಟಿ ಸಮಿತಿ ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತದೆ. ಜಿಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪ್ರೀ ಮೆಟ್ರಿಕ್ 45 ಹಾಗೂ ಪೋಸ್ಟ್ ಮೆಟ್ರಿಕ್ 36 ಹಾಸ್ಟೆಲ್ ಗಳು ಇವೆ ಎಂದು ತಿಳಿಸಿದರು.

ಸಭೆಯಲ್ಲಿ ಎನ್ ಸಿ ಎಸ್ ಸಿ ಸೂರಜ್ ಕುಮಾರ್ ಯಾದವ್, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳಾದ ವಿಷ್ಣುವರ್ಧನ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶೇಕ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಗಳಾದ ಡಾ ಪಿ ಶಿವರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಎಸ್ ಸಿ ಜನರ ಮೇಲೆ ದೌರ್ಜನ್ಯವಾದರೆ ತಕ್ಷಣ ಎಫ್ಐಆರ್ ದಾಖಲಿಸಿ- ವಡೆಪಲ್ಲಿ ರಾಮಚಂದರ್ Read More

ಎಸ್ ಸಿ, ಎಸ್ ಟಿ ದೌರ್ಜನ್ಯ ಪ್ರಕರಣ; 60 ದಿನಗಳೊಳಗೆ ಆರೋಪ ಪಟ್ಟಿ ಸಲ್ಲಿಸಿ:ಸಿಎಂ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ 60 ದಿನಗಳ ಒಳಗಾಗಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸಿಎಂ ಈ ಸೂಚನೆ ನೀಡಿದರು.

ಕಳೆದ ಆರು ತಿಂಗಳಲ್ಲಿ ಶೇ.84 ರಷ್ಟು ಮಾತ್ರ ಪ್ರಕರಣಗಳಲ್ಲಿ ನಿಗದಿತ ಅವಧಿಯ ಒಳಗಾಗಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಶೇ.100 ಪ್ರಕರಣಗಳಲ್ಲಿ 60 ದಿನಗಳ ಒಳಗಾಗಿ ಕಡ್ಡಾಯವಾಗಿ ಆರೋಪ ಪಟ್ಟಿ ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪೊಲೀಸರು ಇದರಲ್ಲಿ ಯಾವುದೇ ನೆಪ ಹೇಳಬಾರದು. ನ್ಯಾಯಾಲಯದಲ್ಲಿ 56ಪ್ರಕರಣಗಳಲ್ಲಿ ತಡೆಯಾಜ್ಞೆ ಇದ್ದು, ಇದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ರಾಜ್ಯದಲ್ಲಿ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗಾಗಿ 11ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಪ್ರಕರಣಗಳ ಸರಿಯಾದ ವಿಚಾರಣೆ ನಡೆಸಿ, ತ್ವರಿತವಾಗಿ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕು.

ಪ್ರಸ್ತುತ ಶಿಕ್ಷೆಯ ಪ್ರಮಾಣ ಶೇ.10ರಷ್ಟಿದ್ದು, ಇದು ಹೆಚ್ಚಾಗಬೇಕು,ಆರೋಪಿಗಳೊಂದಿಗೆ ಪೊಲೀಸರು ಶಾಮೀಲಾಗಿರುವುದು ಕಂಡು ಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಎಚ್ಚರಿಸಿದರು.

ದೌರ್ಜ್ಯನ್ಯ ಪ್ರಕರಣಗಳಲ್ಲಿ ಅಂಗವೈಕಲ್ಯತೆ ಉಂಟಾದಲ್ಲಿ ನೀಡಲಾಗುವ ವೈದ್ಯಕೀಯ ಪರಿಹಾರದ ಮೊತ್ತವನ್ನು ಹೆಚ್ಚಿಸುವ ಕುರಿತು ಪರಿಶೀಲನೆ ಮಾಡಲಾಗುವುದು ಎಂದು ಸಿಎಂ ಭರವಸೆ ನೀಡಿದರು.

ಎಸ್ ಸಿ, ಎಸ್ ಟಿ ದೌರ್ಜನ್ಯ ಪ್ರಕರಣ; 60 ದಿನಗಳೊಳಗೆ ಆರೋಪ ಪಟ್ಟಿ ಸಲ್ಲಿಸಿ:ಸಿಎಂ Read More

ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಮಕ್ಕಳ ಪ್ರೋತ್ಸಾಹ ಧನ ಹೆಚ್ಚಳ: ಮಹದೇವಪ್ಪ

ಬೆಂಗಳೂರು: ಐಐಟಿ,ಐಐಎಂ,ಐಐಎಸ್ ಟಿ,ಎನ್ ಐ ಟಿ ಯಂತಹ ರಾಷ್ಟ್ರೀಯ ಸಂಸ್ಥೆಗಳಲ್ಲಿ ಓದುವ ಎಸ್ ಸಿ,ಎಸ್ ಟಿ ವಿದ್ಯಾರ್ಥಿಗಳ ಪ್ರೋತ್ಸಾಹ ಧನವನ್ನು 1 ರಿಂದ 2 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.

ಈ ಕುರಿತು ಸರ್ಕಾರ ಆದೇಶ ಹೊರಡಿಸಿದ್ದು ಇದು ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಒಳಿತಾಗಲಿದೆ ಎಂದು ಮಹದೇವಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಿಯುಸಿ ಪರೀಕ್ಷೆಯಲ್ಲಿ 95 ಕ್ಕೂ ಹೆಚ್ಚಿನ ಅಂಕಗಳನ್ನು ಪಡೆದು, ನೀಟ್ ಪ್ರವೇಶ ಪರೀಕ್ಷೆ ಮೂಲಕ ಸರ್ಕಾರಿ ಕೋಟಾದಡಿ ಪ್ರವೇಶ ದೊರಕದೇ ಮ್ಯಾನೇಜ್ ಮೆಂಟ್ ಕೋಟಾದಡಿ ಎಂಬಿಬಿಎಸ್ ಕೋರ್ಸ್ ಗೆ ಸೀಟು ಪಡೆದುಕೊಂಡ ಪರಿಶಿಷ್ಟ ಜಾತಿಯ ಮಕ್ಕಳಿಗೆ 25 ಲಕ್ಷ ರೂಪಾಯಿ ಶುಲ್ಕ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.

ಎಂಬಿಬಿಎಸ್ ಪದವಿಯನ್ನು ಪಡೆಯುತ್ತಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಮೊದಲ ವರ್ಷ ಶೇ. 60 ಕ್ಕೂ ಹೆಚ್ಚಿನ ಅಂಕಗಗಳನ್ನು ಪಡೆದು ಉತ್ತೀರ್ಣ ರಾದರೆ ಅವರಿಗೆ ಮತ್ತೆ 25 ಲಕ್ಷ ರೂಪಾಯಿ ಪ್ರೋತ್ಸಾಹ ಧನವನ್ನು ನೀಡಲಾಗುವುದು.

ಶಿಕ್ಷಣವೇ ಸಮಾಜವನ್ನು ಬದಲಿಸುವ ಕೀಲಿಕೈ ಎಂಬ ಅಂಶವನ್ನು ಮನಗಂಡು ಈ ಮಹತ್ವದ ಘೋಷಣೆಯನು ಸರ್ಕಾರ ಮಾಡಿದೆ ಇದರಿಂದ ಉನ್ನತ ಶಿಕ್ಷಣ ಮಾಡಬೇಕೆಂಬ ವಿದ್ಯಾರ್ಥಿಗಳ ಕನಸ್ಸು ನನಸಾಗಲಿದೆ ಎಂದು ಹೇಳಿದ್ದಾರೆ.

ಐಐಟಿ ಐಐಎಂ ನಂತಹ ಶಿಕ್ಷಣ ಸಂಸ್ಥೆಗಳಲ್ಲಿ ಓದುವಂತಹ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳು ದೇಶ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಬೇಕು, ಆ ಮೂಲಕ ಸಮೃದ್ಧ ಮತ್ತು ಸಶಕ್ತ ರಾಷ್ಟ್ರದ ನಿರ್ಮಾಣವಾಗಬೇಕು ಎಂದು ಸಚಿವರು ತಿಳಿಸಿದ್ದಾರೆ.

ಇನ್ನು ಬಡತನದ ಬೇಗೆಗೆ ಸಿಲುಕಿ ಎಂಬಿಬಿಎಸ್ ಓದುವ ಬಯಕೆ ಇರುವಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರಿ ಕೋಟಾದಡಿ ಸೀಟು ಸಿಗದೇ ಅವರು ಖಾಸಗೀ ಸಂಸ್ಥೆಗಳಲ್ಲಿ ಓದುತ್ತಿದ್ದರೆ, ಅಂತಹ ಪ್ರತಿಭಾವಂತ ಮಕ್ಕಳ ಶುಲ್ಕವನ್ನು ಸರ್ಕಾರ ಭರಿಸಲಿದ್ದು, ಇದಕ್ಕಾಗಿ ಆರಂಭಿಕವಾಗಿ 25 ಲಕ್ಷ ರೂಪಾಯಿಗಳನ್ನು ನೀಡುವ ನಿರ್ಧಾರವನ್ನು ತೆಗೆದುಕೊಂಡಿದೆ.

ಹೀಗಾಗಿ ಬಾಬಾ ಸಾಹೇಬರ ಆಶಯದಂತೆ ನಮ್ಮೆಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಹೆಚ್ಚು ಆಸಕ್ತಿ ಹೊಂದಿ, ಶ್ರಮ ಪಟ್ಟು ಓದಬೇಕೆಂದು ಮಹದೇವಪ್ಪ ಸಲಹೆ ನೀಡಿದ್ದಾರೆ.

ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಮಕ್ಕಳ ಪ್ರೋತ್ಸಾಹ ಧನ ಹೆಚ್ಚಳ: ಮಹದೇವಪ್ಪ Read More