ಸಿದ್ದರಾಮಯ್ಯ ಜೈಲಿಗೆ ಹೋಗುವುದು ಖಚಿತ- ಸ್ನೇಹಮಯಿ ಕೃಷ್ಣ

ಮೈಸೂರು: ಮೂಡ ಹಗರಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗೇ ಹೋಗ್ತಾರೆ ಕಾದು ನೋಡಿ ಎಂದು ಆರ್ ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಭವಿಷ್ಯ‌ ನುಡಿದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಪಡಿಸಿಕೊಂಡು ಇಲ್ಲಿವರೆಗೆ ಕಾನೂನಿನ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ, ಇವತ್ತಲ್ಲ ನಾಳೆ ಅವರು ಜೈಲಿಗೆ ಹೋಗಲೇ ಬೇಕಾದ ಸಂದರ್ಭ ಬಂದೇ ಬರುತ್ತದೆ ಎಂದು ಹೇಳಿದರು.

ಈಗಾಗಲೇ ತನಿಖೆ ನಡೆಯುತ್ತಿದೆ, ತನಿಖೆಗೆ ಬೇಕಾದ ಪೂರಕ ಸಾಕ್ಷ್ಯಾಧಾರ ಒದಗಿಸಿದ್ದೇನೆ,ಸಾಕ್ಷ್ಯಾಧಾರ ನಾಶ ಮಾಡುವ ಕೆಲಸವನ್ನು ಪೋಲಿಸರಿಂದ ಮಾಡಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಸಿಎಂ ತಪ್ಪಿತಸ್ಥರೆಂದು 14 ನಿವೇಶನಗಳನ್ನು ಹಿಂದಿರುಗಿಸಿದಾಗಲೇ ಜನರಿಗೆ ಗೊತ್ತಾಗಿದೆ. ಕಾದು ನೋಡಿ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆ ಎಂದು ತಿಳಿಸಿದರು.

ಮುಡಾ ಹಗರಣ ಪ್ರಕರಣ ಸಂಬಂಧ, ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ ಉದೇಶ್ ಕರ್ತವ್ಯ ಲೋಪ ಎಸಗುತ್ತಿದ್ದಾರೆ ಎಂದು ದೂರಿದರು.

ಮುಡಾ ಪ್ರಕರಣದ ತನಿಖೆಯನ್ನ ಪಾರದರ್ಶಕವಾಗಿ ಮಾಡುತ್ತಿಲ್ಲ, ಸಾಕ್ಷ್ಯಾಧಾರ ನಾಶಪಡಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಇವರೇ ಸಹಕರಿಸುತ್ತಿದ್ದಾರೆ,ಕೂಡಲೇ ಉದೇಶ್ ಅವರನ್ನ ವರ್ಗಾವಣೆ ಮಾಡಬೇಕು ಎಂದು ನಿನ್ನೆ ಕೋರ್ಟ್ ನಲ್ಲಿ ವಾದ ಮಂಡಿಸಿದ್ದೇನೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದರು.

ಸಿದ್ದರಾಮಯ್ಯ ಜೈಲಿಗೆ ಹೋಗುವುದು ಖಚಿತ- ಸ್ನೇಹಮಯಿ ಕೃಷ್ಣ Read More

ಲೋಕಾ ಮೂವರು ಹಿರಿಯ ಐಪಿಎಸ್‌ ಅಧಿಕಾರಿಗಳ ಬಗ್ಗೆ ಕೇಂದ್ರ ಜಾಗೃತಿ ಆಯೋಗಕ್ಕೆ ದೂರು

ಮೈಸೂರು: ಮುಡಾ ಹಗರಣದಲ್ಲಿ ಹಲವು ಸಾಕ್ಷಿ ಇದ್ದರೂ ಆರೋಪಿಗಳನ್ನು ರಕ್ಷಣೆ ಮಾಡಲು ಸುಳ್ಳು ವರದಿ ಸಲ್ಲಿಸಿದ್ದಾರೆಂದು ಆರೋಪಿಸಿ, ಲೋಕಾಯುಕ್ತದ ಮೂವರು ಹಿರಿಯ ಐಪಿಎಸ್‌ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತಿ ಆಯೋಗಕ್ಕೆ ಸ್ನೇಹಮಯಿ ಕೃಷ್ಣ ದೂರು ಸಲ್ಲಿಸಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ,
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಕುಟುಂಬ ಭಾಗಿಯಾಗಿರುವ ಕುರಿತು ಸಾಕಷ್ಟು ಸಾಕ್ಷಿ ಇದ್ದರೂ, ಆರೋಪಿಗಳನ್ನು ರಕ್ಷಣೆ ಮಾಡಲು ಲೋಕಾಯುಕ್ತ ಪೊಲೀಸರು ಸುಳ್ಳು ವರದಿ ಸಲ್ಲಿಸಿದ್ದರು. ಈ ಬಗ್ಗೆ ಲೋಕಾಯುಕ್ತ ಎಡಿಜಿಪಿ ಮನೀಷ್ ಖರ್ಬೀಕರ್‌, ಐಜಿಪಿ ಸುಬ್ರಮಣ್ಯೇಶ್ವರ್‌ ರಾವ್‌ ಹಾಗೂ ಮೈಸೂರು ಲೋಕಾಯುಕ್ತ ಎಸ್‌ಪಿ ಉದ್ದೇಶ್‌ ವಿರುದ್ಧ ಕೇಂದ್ರದ ಜಾಗೃತ ಆಯೋಗಕ್ಕೆ ಮೂರು ಪುಟದ ದೂರನ್ನು ಇಮೇಲ್‌ ಹಾಗೂ ರಿಜಿಸ್ಟರ್‌ ಅಂಚೆ ಮೂಲಕ ಕಳುಹಿಸಿದ್ದೇನೆ ಎಂದು ತಿಳಿಸಿದರು.

ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದೇನೆ. ವರದಿಯಲ್ಲಿ ಲೋಕಾಯುಕ್ತ ಪೊಲೀಸರು ಯಾವುದೇ ದಾಖಲಾತಿ ಪರಿಶೀಲಿಸದೆ, ಯಾರನ್ನೋ ರಕ್ಷಣೆ ಮಾಡಲು ಸುಳ್ಳು ವರದಿ ತಯಾರಿಸಿ ದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಭಾಮೈದ ಮಲ್ಲಿಕಾರ್ಜುನ ಸ್ವಾಮಿ 1998ರಲ್ಲಿ ಪ್ರಕರಣದ ಎ4 ಆರೋಪಿ ದೇವರಾಜ್‌ ಹೆಸರಿನಲ್ಲಿ ಸುಳ್ಳು ಪತ್ರ ಸೃಷ್ಟಿಸಿದ್ದ. ಆ ಪತ್ರಕ್ಕೆ ದೇವರಾಜು ಸಹಿಯನ್ನು ಮಲ್ಲಿಕಾರ್ಜುನ ಸ್ವಾಮಿ ಮಾಡಿ, ಅಪರಾಧವೆಸಗಿದ್ದಾರೆ. ಈ ದಾಖಲೆಗಳು ವರದಿಯಲ್ಲಿ ಇವೆ. ಇಂತಹ ಹಲವು ಸಾಕ್ಷಿಗಳಿದ್ದರೂ, ಲೋಕಾಯುಕ್ತದ ಅಧಿಕಾರಿಗಳು ಸಾಕ್ಷಿಯಿಲ್ಲ ಎಂದು ಸುಳ್ಳು ವರದಿ ನೀಡಿದ್ದಾರೆ. ಯಾರನ್ನೋ ರಕ್ಷಣೆ ಮಾಡಲು ಈ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಕೇಂದ್ರ ಜಾಗೃತಿ ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದರು.

ಲೋಕಾ ಮೂವರು ಹಿರಿಯ ಐಪಿಎಸ್‌ ಅಧಿಕಾರಿಗಳ ಬಗ್ಗೆ ಕೇಂದ್ರ ಜಾಗೃತಿ ಆಯೋಗಕ್ಕೆ ದೂರು Read More

ಕೋರ್ಟ್ ನಲ್ಲಿ ವಾದಿಸಲಿದ್ದಾರೆ‌ ಸ್ನೇಹಮಯಿ ಕೃಷ್ಣ

ಮೈಸೂರು:ಮುಡಾದಿಂದ ಪರಿಹಾರ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ಪ್ರಕರಣದಲ್ಲಿ ದೂರುದಾರ ಸ್ನೇಹಮಯಿ ಕೃಷ್ಣ ಸ್ವತಃ ‌ವಾದ ಮಂಡಿಸಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ, ಅವರ ಸೋದರ ಮಾವ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ದಾಖಲಾದ ಪ್ರಕರಣವನ್ನು ವೈಯಕ್ತಿಕವಾಗಿ ವಾದಿಸಲು ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.

ತನಿಖೆಯ ಬಗ್ಗೆ ಅಗತ್ಯ ದಾಖಲೆಗಳನ್ನು ಮತ್ತು ಅಂತಿಮ ವರದಿಯನ್ನು ಮಾರ್ಚ್ 1 ರೊಳಗೆ ಕೃಷ್ಣ ಅವರಿಗೆ ಸಲ್ಲಿಸುವಂತೆ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿದೆ.

ಸ್ನೇಹಮಯಿ‌ ಕೃಷ್ಣ ಮತ್ತು ಲೋಕಾಯುಕ್ತ ಪೊಲೀಸರನ್ನು ಪ್ರತಿನಿಧಿಸುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವೆಂಕಟೇಶ್ ಅರಬಟ್ಟಿ ಅವರ ವಾದ ಆಲಿಸಿದ ನಂತರ ಹಾಲಿ ಮತ್ತು ಮಾಜಿ ಸಂಸದರು ಜಾಗೂ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ಆದೇಶವನ್ನು ಹೊರಡಿಸಿ, ವಿಚಾರಣೆಯನ್ನು ಮಾರ್ಚ್ 7 ಕ್ಕೆ ಮುಂದೂಡಿದರು.

ಈ ಹಿಂದೆ, ಕೃಷ್ಣ ಅವರು ವೈಯಕ್ತಿಕವಾಗಿ ಪಕ್ಷಕಾರರಾಗಿ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡಬಹುದು ಎಂದು ಸಲ್ಲಿಸಿದರು. ಸಿಆರ್ಪಿಸಿಯ ಸೆಕ್ಷನ್ 173 ರ ಅಡಿಯಲ್ಲಿ ಅವರು ಅರ್ಜಿ ಸಲ್ಲಿಸಿದ್ದು, ಪ್ರಕರಣವನ್ನು ವಿಚಾರಣೆಗೆ ಒಳಪಡಿಸಲು ಅಂತಿಮ ವರದಿಯ ಪ್ರತಿಯನ್ನು ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.

ನ್ಯಾಯಾಲಯವು ಮೆಮೋ ಮತ್ತು ಅರ್ಜಿ ಎರಡಕ್ಕೂ ಅನುಮತಿ ನೀಡಿತು ಮತ್ತು ಲೋಕಾಯುಕ್ತ ಪೊಲೀಸರು ಸಲ್ಲಿಸಿದ ಸಂಪೂರ್ಣ ಅಂತಿಮ ವರದಿಯ ಪ್ರತಿಯನ್ನು ಸಲ್ಲಿಸುವಂತೆ ರಿಜಿಸ್ಟ್ರಿಗೆ ನಿರ್ದೇಶನ ನೀಡಿತು.

ಎಸ್ ಪಿಪಿ ಪರವಾಗಿ, ತನಿಖಾ ಸಂಸ್ಥೆ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಒಂದು ವಾರದೊಳಗೆ ಮೈಸೂರಿನ ತನಿಖಾಧಿಕಾರಿಗಳ ಕಚೇರಿಯಲ್ಲಿ ದೂರುದಾರರಿಗೆ ಸಲ್ಲಿಸಲಿದೆ ಎಂದು ಮೆಮೋ ಸಲ್ಲಿಸಲಾಯಿತು

ದೂರುದಾರರು ಸಹ ಒಪ್ಪಿಕೊಂಡರು ಮತ್ತು ಮಾರ್ಚ್ 1 ರಂದು ಅಥವಾ ಅದಕ್ಕೂ ಮೊದಲು ದಾಖಲೆಗಳನ್ನು ಒದಗಿಸಬಹುದು ಎಂದು ವಿನಂತಿಸಿದರು.

ಲೋಕಾಯುಕ್ತ ಪೊಲೀಸರು ಇತ್ತೀಚೆಗೆ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದರು. ಈ ನಡೆ ಬಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ತನಿಖಾ ಸಂಸ್ಥೆ ಪ್ರಭಾವಕ್ಕೆ ಒಳಗಾಗಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಆರೋಪಿಸಿದ್ದರು, ಇದೀಗ ತಾವೇ ಖುದ್ದು ಕೋರ್ಟ್‌ ನಲ್ಲಿ ಪ್ರಕರಣದ ಬಗ್ಗೆ ವಾದಿಸಲಿದ್ದಾರೆ.

ಕೋರ್ಟ್ ನಲ್ಲಿ ವಾದಿಸಲಿದ್ದಾರೆ‌ ಸ್ನೇಹಮಯಿ ಕೃಷ್ಣ Read More

ಮುಡಾ ಪ್ರಕರಣ; ಸುಪ್ರೀಂ ಕೋರ್ಟ್‌ಗೆ ಹೋಗುವೆ:ಸ್ನೇಹಮಯಿ ಕೃಷ್ಣ

ಮೈಸೂರು: ನಮ್ಮ ಹೋರಾಟಕ್ಕೆ ಅಲ್ಪ ಹಿನ್ನಡೆಯಾಗಿದೆ,ಹಾಗಂತ ಹೋರಾಟದಿಂದ ಹಿಂದೆ ಸರಿಯುವುದಿಲ್ಲ, ಸುಪ್ರೀಂ ಕೋರ್ಟ್‌ಗೆ ಹೋಗುವೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಧಾರವಾಡ ಹೈಕೋರ್ಟ್‌ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದರು.

ನ್ಯಾಯಾಲಯ ಯಾವ ವಿಚಾರವನ್ನಿಟ್ಟುಕೊಂಡು ಸಿಬಿಐ ತನಿಖೆಗೆ ಕೊಡಲು ನಿರಾಕರಿಸಿದೆ ಎಂಬುದು ಗೊತ್ತಾಗಿಲ್ಲ, ಆ ಅಂಶಗಳನ್ನು ನೋಡಿ ನಮ್ಮ ವಕೀಲರ ಜೊತೆ ಮಾತಾಡುತ್ತೇನೆ. ಬಳಿಕ ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ. ಲೋಕಾಯುಕ್ತ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಹೇಳಿದಂತೆ ತನಿಖೆ ನಡೆಯುತ್ತಿದೆ ಎಂಬ ಅನುಮಾನ ಇತ್ತು. ಅದಕ್ಕಾಗಿ ನಾವು ಸಿಬಿಐಗೆ ಹೋಗುತ್ತೇವೆ, ಮುಂದಿನ ವಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಈ ಪ್ರಕರಣವನ್ನ ಸಿಬಿಐಗೆ ನೀಡುವಂತೆ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದರು.

ಇದುವರೆಗೆ ನಾವು ಗೆದ್ದಿದ್ದೆವು, ಈಗ ಸಣ್ಣ ಹಿನ್ನಡೆಯಾಗಿದೆ, ಇದರಿಂದ ನಾನು ದೃತಿಗೆಡುವುದಿಲ್ಲ. ಈಗಲೂ ನನಗೆ ಲೋಕಾಯುಕ್ತದ ತನಿಖೆ ಮೇಲೆ ನಂಬಿಕೆ ಇಲ್ಲ. ಸುಪ್ರೀಂ ಕೋರ್ಟ್‌ ಮುಡಾ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸುತ್ತದೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

ಮುಡಾ ಪ್ರಕರಣ; ಸುಪ್ರೀಂ ಕೋರ್ಟ್‌ಗೆ ಹೋಗುವೆ:ಸ್ನೇಹಮಯಿ ಕೃಷ್ಣ Read More

ಮುಡಾ ಅಕ್ರಮ:ಮತ್ತೊಂದ ಪ್ರಕರಣ ಬಯಲು

ಮೈಸೂರು: ಮುಡಾ ಅಕ್ರಮ ಹಗರಣ ಕುರಿತು ಲೋಕಾಯುಕ್ತ ತನಿಖೆ ನಡೆಯತ್ತಿರುವಾಗಲೆ ಮತ್ತೊಂದ ಪ್ರಕರಣ ಬಯಲಾಗಿದೆ.

ಭೂಮಿಯನ್ನೇ ವಶಕ್ಕೆ ಪಡೆಯದೆ ಕೋಟ್ಯಾಂತರ ರೂ. ಮೌಲ್ಯದ ಸೈಟ್ ಗಳನ್ನ ನೀಡಿದ ಮತ್ತೊಂದು ಪ್ರಕರಣ ಬಯಲಾಗಿದೆ.

ಪಾಲಿಕೆ ಮಾಜಿ ಸದಸ್ಯ ಎಂ.ಸಿ.ರಮೇಶ್ ಅವರು ಸುಳ್ಳು ದಾಖಲೆ ಸೃಷ್ಠಿಸಿ 50:50 ಯಲ್ಲಿ ಸೈಟ್ ಗಳನ್ನ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ
ಈ ಬಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ, ವಕೀಲ ರವಿಕುಮಾರ್, ಮುಡಾ ಮಾಜಿ ಉದ್ಯೋಗಿ ಪಿ.ಎಸ್.ನಟರಾಜ್ ಮಾತನಾಡಿದರು.

ನಾನು ಕೇವಲ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತಿಲ್ಲ. ಮುಡಾ ಪ್ರಕರಣದಲ್ಲಿ ಜೆಡಿಎಸ್ ವಿರುದ್ಧವೂ ಹೋರಾಡಿದ್ದೆ. ಈಗ ಬಿಜೆಪಿ ವಿರುದ್ಧವೂ ಹೋರಾಟ ಮಾಡುತ್ತಿದ್ದೇನೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದರು.

ಮುಡಾ 50:50 ಹಗರಣ ಪ್ರಕರಣ ಸಂಬಂಧ ಪಾಲಿಕೆ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಎಂ.ಸಿ.ರಮೇಶ್ ಅಕ್ರಮ ಎಸಗಿದ್ದಾರೆ. ಮುಡಾದ 50:50 ಅನುಪಾತದಲ್ಲಿ ಅಕ್ರಮವಾಗಿ ಸೈಟ್ ಪಡೆದಿದ್ದಾರೆ.

ಎಂ.ಸಿ.ರಮೇಶ್ ವಿರುದ್ಧ ಮೊದಲ ಐಟಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ‌ ಸಿಬಿಐಗೂ ಕೂಡ ವರ್ಗಾವಣೆ ಆಗುತ್ತದೆ. ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲೇಬೇಕು ಎಂದು ಅವರು ಒತ್ತಾಯಿಸಿದರು.

ಮುಡಾವನ್ನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಎಂದು ತೆಗೆದು ಹಾಕಿ. ಉಳ್ಳವರ ಆಸ್ತಿ ರಕ್ಷಣೆಯ ಪ್ರಾಧಿಕಾರ ಎಂದು ಮಾಡಿಬಿಡಲಿ ಎಂದು ಕೃಷ್ಣ ಟೀಕಿಸಿದರು.

ಪಾಲಿಕೆ ಮಾಜಿ ಸದಸ್ಯ ಎಂ.ಸಿ.ರಮೇಶ್ ವಿರುದ್ಧ ಕಿಡಿ ಕಾರಿದ ವಕೀಲ ರವಿಕುಮಾರ್, ಮುಡಾದ ಪಾದಯಾತ್ರೆಯಲ್ಲಿ ರಮೇಶ್ ಭಾಗಿಯಾಗಿದ್ದರು. ದೊಡ್ಡ ದೊಡ್ಡ ವಿಪಕ್ಷ ನಾಯಕರ ಜೊತೆ ಬೆಂಗಳೂರಿನಿಂದ ಮೈಸೂರಿಗೆ ಹೆಜ್ಜೆ ಹಾಕಿದ್ದರು. ಮುಡಾದ ಅಕ್ರಮ ಕುರಿತು ತನಿಖೆ ನಡೆಸಿ ಎಂದು ಪ್ರತಿಭಟನೆಯಲ್ಲಿ‌ ಭಾಗಿಯಾಗಿ ನಾಟಕವಾಡಿದ್ದಾರೆ. ಮಗನನ್ನೇ ಅಪ್ಪ ಮಾಡಿ ಮುಡಾ ಸೈಟ್ ಪಡೆದುಕೊಂಡಿದ್ದಾರೆ.1994 ರಲ್ಲಿ ವಶಪಡಿಸಿಕೊಳ್ಳಲಾಗಿದೆ‌ ಎಂಬ ಭೂಮಿ 2023ಕ್ಕೆ ಜಿಪಿಎ, 30 ವರ್ಷದ ಬಳಿಕ ಎಂ.ಸಿ‌.ರಮೇಶ್ ಎಂಬವರಿಗೆ ಭೂಮಿ ಜಿಪಿಎ ಮಾಡಲಾಗಿದೆ. ಕೇವಲ 3000 ರೂಪಾಯಿಗೆ ಅಧಿಕಾರಿಗಳು ಕ್ರಯ ಮಾಡಿಕೊಟ್ಟಿದ್ದಾರೆ.60/90 ಅಳತೆಯ ಎರಡು ಸೈಟ್ ನೀಡಿರುವ ಮುಡಾದ ಏಕೈಕ ಪ್ರಕರಣ ಇದಾಗಿದೆ ಎಂದು ಹೇಳಿದರು.

50:50 ಪ್ರಕರಣದಲ್ಲಿ 50/60 ಗಿಂತ ದೊಡ್ಡ ಅಳತೆಯ 20/30 ಗಿಂತ ಚಿಕ್ಕ ಅಳತೆಯ ಸೈಟ್ ನೀಡುವಂತಿಲ್ಲ. ಈ ಮೂಲಕ ಮುಡಾದ ನಿಯಮಾವಳಿ ಗಳನ್ನ ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದರು.

ಬಸವನಹಳ್ಳಿ ಸರ್ವೆ ನಂಬರ್ 121ರಲ್ಲಿ 1 ಎಕರೆ 2 ಗುಂಟೆ ಕಳೆದುಕೊಂಡಿದ್ದಾರೆಂದು‌ ಸುಳ್ಳು ದಾಖಲೆ ಸೃಷ್ಠಿಸಿ, ಮುಡಾ ಮಾಲೀಕರಾದ ಮೇಲೆ 30 ವರ್ಷದ ಬಳಿಕ ಎಂ.ಸಿ.ರಮೇಶ್ ಗೆ ಜಿಪಿಎ ಮಾಡಿಕೊಟ್ಟಿದ್ದಾರೆ. ವಿಜಯನಗರ ಎರಡನೇ ಹಂತದಲ್ಲಿ ಅಡಿಗೆ 10 ಸಾವಿರಕ್ಕೂ‌ ಹೆಚ್ವು ಬೆಲೆ ಬಾಳುವ ಸೈಟ್ ಗಳು ಕೇವಲ 3 ಸಾವಿರ ರೂಪಾಯಿಗೆ ನೀಡಿದ್ದಾರೆ. 60/90 ಅಳತೆಯ ಸೈಟ್ ನೀಡಲು ಕಾನೂನಿನಲ್ಲಿ ಅವಕಾಶವೇ ಇಲ್ಲ ಎಂದು ವಕೀಲ ರವಿಕುಮಾರ್ ಹೇಳಿದರು.

ಮುಡಾದ ಮಾಜಿ ಉದ್ಯೋಗಿ ಪಿ.ಎಸ್.ನಟರಾಜ್ ಮಾತನಾಡಿ, ಎಂ.ಸಿ.ರಮೇಶ್ ಎಂಬವರು ರೈತರಿಗೆ ವಂಚನೆ ಮಾಡಿದ್ದಾರೆ. ಭೂಮಿ ಕಳೆದುಕೊಂಡ‌ ರೈತನಿಗೆ ನೀಡುವ ಬದಲು ಜಿಪಿಎ ಪಡೆದುಕೊಂಡು ನಿವೇಶನ ಪಡೆದುಕೊಂಡಿದ್ದಾರೆ, ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿದ್ದಾರೆ ಎಂದು ದೂರಿದರು.

ನಿವೃತ್ತ ನೌಕರರ ಸಂಘದಿಂದ ರಮೇಶ್ ಅವರಲ್ಲಿ‌ ಮನವಿ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಕುಟುಂಬ ಸೈಟ್ ವಾಪಸ್ ನೀಡಿದ ರೀತಿ ವಾಪಸ್ ನೀಡಿ ಎಂದು ಪತ್ರ ಬರೆಯಲಾಗುತ್ತದೆ. ಅವರು ನಮ್ಮ ಅಹವಾಲು ಸ್ವೀಕರಿಸಬೇಕು. ಇಲ್ಲವಾದರೆ ಅವರ ಸವಾಲನ್ನ ನಾವು ಸ್ವೀಕರಿಸುತ್ತೇವೆ. ಅವರ ಮನೆಯ ಎದುರು ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ಮುಡಾಗೆ ಪ್ರತ್ಯೇಕ ಕಾಯ್ದೆ ರಚಿಸುವ ಸರ್ಕಾರದ ತೀರ್ಮಾನ ನಿಜಕ್ಕೂ ಸಂತೋಷದ ವಿಚಾರ. ಮುಡಾದಿಂದ ರಾಜಕಾರಣಿಗಳನ್ನ ದೂರವಿಡಿ ಎಂದು ಹೇಳಿದರು.

ಮುಡಾ ಅಕ್ರಮ:ಮತ್ತೊಂದ ಪ್ರಕರಣ ಬಯಲು Read More

ಸಿಎಂ ವಿರುದ್ದ ಮತ್ತೊಂದು ದಾಖಲೆ ಬಿಡುಗಡೆ

ಮೈಸೂರು: ಮುಡಾ ಹಗರಣದ ಬಗ್ಗೆ
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದೂರುದಾರ ಸ್ನೇಹಮಯಿ ಕೃಷ್ಣ ಮತ್ತೊಂದು ದಾಖಲೆ ಬಿಡುಗಡೆ ಮಾಡಿದ್ದಾರೆ.

ಸಿಎಂ ಪ್ರಭಾವ ಬೀರಿದ್ದರಿಂದ ಡಿಸಿಯಾಗಿದ್ದ ಕುಮಾರನಾಯಕ ಅವರು ಭೂಮಿಯನ್ನು ಅನ್ಯ ಕ್ರಾಂತ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಭೂಮಿಯನ್ನು ಅನ್ಯಾಕ್ರಂತ ಮಾಡಬಾರದೆಂದು ದಾಖಲೆ ಇದ್ದರೂ ಸಹ ಅದನ್ನು 2005ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಕುಮಾರನಾಯಕ್ ಅವರು ಅನ್ಯಕ್ರಾಂತ ಮಾಡಿದ್ದಾರೆ ಎಂದು ಸ್ನೇಹ ಕೃಷ್ಣ ಆರೋಪಿಸಿದ್ದಾರೆ.

ಸಿಎಂ ವಿರುದ್ದ ಮತ್ತೊಂದು ದಾಖಲೆ ಬಿಡುಗಡೆ Read More

ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ದೂರು ದಾಖಲಿಸಿದ ಲಕ್ಷ್ಮಣ್

ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಮುಡಾದಿಂದ ಅಕ್ರಮವಾಗಿ ನಿವೇಶನ ಪಡೆದಿದ್ದಾರೆಂದು ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮತ್ತೊಂದು ದೂರು ದಾಖಲಿಸಿದ್ದಾರೆ.

ಮೈಸೂರಿನ ಲಕ್ಷ್ಮೀಪುರಂ ಠಾಣೆಗೆ ಬಂದು ಸ್ನೇಹಮಯಿ ಕೃಷ್ಣ ವಿರುದ್ದ ಎಂ.ಲಕ್ಷಣ್‌ ದೂರು ಸಲ್ಲಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಸ್ನೇಹಮಯಿ ಕೃಷ್ಣ ರೌಡಿಶೀಟರ್, ಆತನ ಮೇಲೆ 44 ಕೇಸ್ ಗಳಿವೆ ಎಂದು ದೂರಿದರು.

ಆತ ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ದಾಖಲೆ ಬಿಡುಗಡೆ ಮಾಡ್ತಿದ್ದಾನೆ. ಸಾರ್ವಜನಿಕ ವಲಯದಲ್ಲಿ ಸಿಎಂ ಸಿದ್ದರಾಮಯ್ಯ ಮೇಲೆ ಕೆಟ್ಟ ಅಭಿಪ್ರಾಯ ಮೂಡಿಸುತ್ತಿದ್ದಾನೆ ಎಂದು ಏಕವಚನದಲ್ಲೇ ಆರೋಪಿಸಿದರು.

ಸಿಎಂ ಪತ್ನಿ ಪಾರ್ವತಿ ಅವರ ಹೆಸರಲ್ಲಿ ಸುಳ್ಳು ದಾಖಲೆ ನೀಡಿದ್ದಾನೆ, ಆತ ಬಿಡುಗಡೆ ಮಾಡಿರುವ ಚಲನ್ ಹಣ ಕಟ್ಟಿರುವ ದಾಖಲೆ ಸುಳ್ಳು,ಆತ ಬಿಡುಗಡೆ ಮಾಡಿರುವ ದಾಖಲೆ ಸುಳ್ಳು ಅಂತಾ ಮುಡಾ ಅಧಿಕಾರಿಗಳೇ ಹೇಳುತ್ತಿದ್ದಾರೆ.ಸ್ನೇಹಮಯಿ ಕೃಷ್ಣನನ್ನ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಆತನನ್ನ ಬಂಧಿಸದಿದ್ದರೆ ಪೋಲಿಸ್ ಠಾಣೆ ಮುಂದೆ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ಲಕ್ಷ್ಮಣ್ ಹೇಳಿದರು.

ಸ್ನೇಹಮಯಿ ಕೃಷ್ಣ ವಿರುದ್ಧ 22 ಎಫ್ಐಆರ್ ಕಾಪಿ ದಾಖಲೆ ಬಿಡುಗಡೆ ಮಾಡಿದ ಎಂ.ಲಕ್ಷ್ಮಣ್,ಆತ ರೌಡಿ ಶೀಟರ್, ಕೊಲೆ,ವಂಚನೆ, ಬ್ಲಾಕ್ ಮೇಲ್ ಸೇರಿದಂತೆ ಹಲವು ಕೇಸ್ ಗಳು ಅವನ ಮೇಲೆ ಇವೆ ಆದರೂ ಪೋಲಿಸರು ಆತನನ್ನು ಅರೆಸ್ಟ್ ಮಾಡಲು ಮೀನಾ ಮೇಷ ಎಣಿಸುತ್ತಿದ್ದಾರೆ ಎಂದು ದೂರಿದರು.

ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ದೂರು ದಾಖಲಿಸಿದ ಲಕ್ಷ್ಮಣ್ Read More

ಮುಡಾ ಪ್ರಕರಣ:ಮತ್ತೊಂದು ಸಾಕ್ಷಿ ಬಹಿರಂಗ ಪಡಿಸಿದ ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾದಲ್ಲಿ ಸಿಎಂ ಪ್ರಭಾವ ಬೀರಿದ್ದಾರೆ ಎಂಬುದಕ್ಕೆ ದೂರುದಾರ ಸ್ನೇಹಮಯಿ ಕೃಷ್ಣ ಮತ್ತೊಂದು ಸಾಕ್ಷಿ ಬಹಿರಂಗಪಡಿಸಿದ್ದು ಪ್ರಕರಣಕ್ಕೆ ಮತ್ತೆ ಟ್ವಿಸ್ಟ್ ಸಿಕ್ಕಿದಂತಾಗಿದೆ.

ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರ ಕ್ರಯಪತ್ರದ ಮುದ್ರಾಂಕದ ಶುಲ್ಕವನ್ನು ತಹಶೀಲ್ದಾರ್ ಅವರೇ ಪಾವತಿಸಿದ್ದಾರೆಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.

ಮುಡಾದಿಂದ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಸೈಟ್ ಪಡೆದ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ದೂರುದಾರ ಸ್ನೇಹಮಯಿ ಕೃಷ್ಣ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.

ಸಿಎಂ ಪತ್ನಿ ಪಾರ್ವತಿ ಅವರ ಕ್ರಯಪತ್ರದ ಮುದ್ರಾಂಕ ಶುಲ್ಕವನ್ನು ತಹಶೀಲ್ದಾರರು ಪಾವತಿ ಮಾಡಿದ್ದಾರೆ ಎಂದು ದೂರಿದ್ದಾರೆ.

ಅದೇ ರೀತಿ ಮತ್ತೊಂದು ಕ್ರಯಪತ್ರದ ಉದಾಹರಣೆ ನೀಡಿ ದೂರುದಾರ ಆರೋಪಿಸಿದ್ದಾರೆ. ಆ ಕ್ರಯ ಪತ್ರದಲ್ಲಿ ನೋಂದಣಿ ಮಾಡಿಸಿಕೊಂಡ ವ್ಯಕ್ತಿಯಿಂದ ಹಣ ಪಾವತಿಯಾಗಿದೆ ಎಂದಿದ್ದಾರೆ.

ಸಿಎಂ ಪತ್ನಿ ವಿಚಾರದಲ್ಲಿ ಮುಡಾ ವಿಶೇಷ ತಹಶೀಲ್ದಾರ್‌ರಿಂದ ಹಣ ಪಾವತಿಯಾಗಿದೆ. ನನ್ನ ಆರೋಪಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಸ್ನೇಹಮಯಿ ಕೃಷ್ಣ ಪ್ರಶ್ನಿಸಿದ್ದಾರೆ.

ಮುಡಾ ಪ್ರಕರಣ:ಮತ್ತೊಂದು ಸಾಕ್ಷಿ ಬಹಿರಂಗ ಪಡಿಸಿದ ಸ್ನೇಹಮಯಿ ಕೃಷ್ಣ Read More

ಮುಖ್ಯ ಮಂತ್ರಿಗಳ ವಿಚಾರಣೆ ಸರಿಯಾದ ದಿಕ್ಕಿನಲ್ಲಿ ಇಲ್ಲ:ಸ್ನೇಹಮಯಿ ಕೃಷ್ಣ ದೂರು

ಮೈಸೂರು: ಒಳ ಒಪ್ಪಂದದ ರೀತಿ ಲೋಕಾಯುಕ್ತ ಎಸ್ಪಿ ಮುಖ್ಯ ಮಂತ್ರಿಗಳ ವಿಚಾರಣೆ ಮಾಡಿದ್ದು,ತನಿಖೆ ಸರಿಯಾದ ದಿಕ್ಕಿನಲ್ಲಿ ಇಲ್ಲ ಎಂದು ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.

ಲೋಕಾಯುಕ್ತ ಎಸ್ಪಿ ಉದೇಶ್ ಕರ್ತವ್ಯಲೋಪ ಎಸಗಿದ್ದಾರೆ. ನಿನ್ನೆ ನಡೆದ ಸಿಎಂ ವಿಚಾರಣೆ ಒಳ ಒಪ್ಪಂದದ ರೀತಿ ಇದೆ. ಇದುವರೆಗೆ ಪ್ರಕರಣದಲ್ಲಿ ಒಬ್ಬನೇ ಒಬ್ಬ ಆರೋಪಿಯನ್ನು ಲೋಕಾಯುಕ್ತರು ವಶಕ್ಕೆ ಪಡೆದಿಲ್ಲ. ದಾಖಲೆಗಳ ಮಹಜರ್ ಸರಿಯಾಗಿ ಆಗಿಲ್ಲ. ಹೀಗಾಗಿ ವಿಚಾರಣೆ ಸರಿಯಾದ ಟ್ರ‍್ಯಾಕ್‌ಗೆ ತನ್ನಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಮುಖ್ಯ ಮಂತ್ರಿಗಳನ್ನು ವಿಚಾರಣೆಗೆ ಒಳಪಡಿಸುವ ನಿಟ್ಟಿನಲ್ಲಿ ಹಲವಾರು ದಾಖಲೆಗಳನ್ನು ಇಟ್ಟುಕೊಂಡು ನಾನು ಮನವಿ ಪತ್ರವನ್ನು ಕೊಟ್ಟಿದ್ದೇನೆ. ಜೊತೆಗೆ ಕೆಲವು ಸಾಕ್ಷ್ಯ ಪತ್ರಗಳನ್ನು ಅವರು ಸಂಗ್ರಹ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಸಿಎಂ ಅವರನ್ನು ವಿವರವಾಗಿ ವಿಚಾರಣೆಗೆ ಒಳಪಡಿಸಬೇಕಾಗಿತ್ತು.ಹಾಗೆ ವಿಚಾರಣೆ ಮಾಡಬೇಕಾದರೆ ಹಲವಾರು ಗಂಟೆಗಳ ಸಮಯಾವಕಾಶ ಬೇಕಾಗುತ್ತದೆ. ಆದರೆ ಇಲ್ಲಿ ಆರೋಪಿ ಮೊದಲೇ ವಿಚಾರಣೆಗೆ ಹಾಜರಾಗುವ ಸಮಯವನ್ನು ತನಿಖಾಧಿಕಾರಿ ನಿಗದಿ ಮಾಡುತ್ತಾರೆ. ವಿಚಾರಣೆಯಿಂದ ಹೋಗುವ ಸಮಯವನ್ನು ಸಿಎಂ ನಿಗದಿ ಮಾಡಿದ್ದಾರೆ ಅನ್ನುವ ರೀತಿಯಲ್ಲಿ ಅವರು 12 ಗಂಟೆಗೆ ಹೊರಡುವ ಹಾಗೆ 1 ದಿನ ಮುಂಚೆಯೆ ಸಿಎಂ ಪ್ರವಾಸ ಕಾರ್ಯಕ್ರಮ ನಿಗದಿಯಾಗಿರುತ್ತದೆ. ಅದೇ ರೀತಿಯಲ್ಲಿ ವಿಚಾರಣೆ ಮುಗಿಸಿ ಅವರನ್ನು ಕಳುಹಿಸಿ ಕೊಡುತ್ತಾರೆ. ಇದನ್ನೆಲ್ಲಾ ನೋಡುವಾಗ ಸಾಕಷ್ಟು ಅನುಮಾನಗಳು ಬರುತ್ತದೆ ಎಂದು ಹೇಳಿದರು.

ಇನ್ನೊಂದು ವಿಚಾರವೇನೆಂದರೆ ಎ2, ಎ3, ಎ4 ಆರೋಪಿಗಳನ್ನು ವಿಚಾರಣೆ ಮಾಡಿ ಹಲವಾರು ದಿನ ಆಗಿದೆ. ಆದರೆ ಎ1 ಆರೋಪಿಯನ್ನು ವಿಚಾರಣೆಗೆ ಒಳಪಡಿಸಿರಲಿಲ್ಲ. ಈ ಕೇಸನ್ನು ಹೈಕೋರ್ಟ್‌ನಲ್ಲಿ ಸಿಬಿಐಗೆ ವಹಿಸಬೇಕು ಎಂದು ಮನವಿ ಮಾಡಿದ್ದೆವು. ಆ ಕಾರಣದಿಂದಾಗಿ ಈ ವಿಚಾರಣೆ ಆಗಿದೆ. ಇಲ್ಲದಿದ್ದರೆ ಇವರು ಮಾಡುತ್ತಿರಲಿಲ್ಲ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದರು.

ಈವರೆಗೆ ನಡೆದ ತನಿಖೆಯ ಬಗ್ಗೆ ನನಗೆ ತೃಪ್ತಿ ಇಲ್ಲ. ಇಷ್ಟು ದೊಡ್ಡ ಹಗರಣ ಮಾಡಿರುವಾಗ ಒಬ್ಬರನ್ನಾದರೂ ಬಂಧಿಸಬೇಕಿತ್ತು. ಆದರೆ ಇಲ್ಲಿ ಯಾರನ್ನು ಬಂಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯ ಮಂತ್ರಿಗಳ ವಿಚಾರಣೆ ಸರಿಯಾದ ದಿಕ್ಕಿನಲ್ಲಿ ಇಲ್ಲ:ಸ್ನೇಹಮಯಿ ಕೃಷ್ಣ ದೂರು Read More

ಮುಡಾದಲ್ಲಿ ನಡೆದ ಎಲ್ಲ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ಆಗಲಿ:ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಪ್ರಕರಣದಲ್ಲಿ ವಿಚಾರಣೆಗೆ ಬರುವಂತೆ ಕರೆದ ಹಿನ್ನೆಲೆ ಬೆಳ್ಳಂಬೆಳಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ ಮೈಸೂರಿನ ಲೋಕಾಯುಕ್ತ ಕಚೇರಿಗೆ ಆಗಮಿಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾಖಲೆಗಳಿಗೆ ಸಂಬಂಧಿಸಿದ ಯಾವುದೇ ನೋಟಿಸ್‌ ಬಂದಿಲ್ಲ. ಆದರೆ, ವಿಚಾರಣೆಯಲ್ಲಿ ಯಾವುದೇ ದಾಖಲಾತಿ ಕೋರಿದರೆ ನಾನು ಕೊಡಲು ಸಿದ್ಧನಿದ್ದೇನೆ ಎಂದು ತಿಳಿಸಿದರು.

ಮೊದಲು ದೂರು ನೀಡಿದಾಗಲೇ ದಾಖಲಾತಿಗಳನ್ನು ಕೊಟ್ಟಿದ್ದೇನೆ, ಈಗ ಮತ್ತೆ ವಿಚಾರಣೆ ಸಂದರ್ಭದಲ್ಲಿ ದಾಖಲಾತಿಗಳನ್ನು ಕೇಳಿದರೆ ಕೊಡಲು ಸಿದ್ಧ ಎಂದರಲ್ಲದೆ ಮುಡಾದಲ್ಲಿ ನಡೆದ ಎಲ್ಲ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಇಡಿಯಲ್ಲಿ ಎಫ್​ಐಆರ್​ ದಾಖಲಾಗಿದೆ,ಇದು ನಮಗೆ ಸಿಕ್ಕ ಜಯ ಎಂದು ‌ಸ್ನೇಹಮಯಿ ಕೃಷ್ಣ ತಿಳಿಸಿದರು.

ಸಿಎಂ ಪತ್ನಿ 14 ನಿವೇಶನಗಳನ್ನು ಹಿಂತಿರುಗಿಸುವುದಾಗಿ ಮುಡಾಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿ, ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಸುಳ್ಳು ಆರೋಪ ಮಾಡುವುದಿಲ್ಲ. ಈವರೆಗಿನ ಎಲ್ಲಾ ಪ್ರಕರಣಗಳಲ್ಲೂ ಜಯಗಳಿಸಿದ್ದೇನೆ. ಅದೇ ರೀತಿ ಇಲ್ಲೂ ಜಯ ಗಳಿಸುವ ವಿಶ್ವಾಸವಿದೆ ಎಂದು ಹೇಳಿದರು.

ಮುಡಾದಲ್ಲಿ ನಡೆದ ಎಲ್ಲ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ಆಗಲಿ:ಸ್ನೇಹಮಯಿ ಕೃಷ್ಣ Read More