ಪರೀಕ್ಷೆ ವೇಳೆ ಇಷ್ಟಲಿಂಗ ತೆಗೆಸುತ್ತಿರುವುದು ಸಂವಿಧಾನ ಉಲ್ಲಂಘನೆ:ಶ್ರೀ ಅಲ್ಲಮಪ್ರಭು ಸ್ವಾಮೀಜಿ
ಬೆಂಗಳೂರು: ಪರೀಕ್ಷೆಗಳ ಸಂದರ್ಭದಲ್ಲಿ ಇಷ್ಟಲಿಂಗವನ್ನು ತೆಗೆಸುತ್ತಿರುವುದು ಸಂವಿಧಾನ ಉಲ್ಲಂಘನೆಯಾದಂತೆ ಎಂದು ಬಸವಯೋಗ ಆಶ್ರಮದ
ಪೂಜ್ಯ ಶ್ರೀ ಅಲ್ಲಮಪ್ರಭು ಸ್ವಾಮೀಜಿ ಹೇಳಿದ್ದಾರೆ.
ಭಾರತ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಧರ್ಮ ಸ್ವಾತಂತ್ರ್ಯವಿದೆ. ಆದರೆ, ಇತ್ತೀಚೆಗೆ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಮೆಡಿಕಲ್ ವಿದ್ಯಾರ್ಥಿಗಳು JEE ಮತ್ತು Neet ಪರೀಕ್ಷೆಗಳನ್ನು ತೆಗೆದುಕೊಳ್ಳುವಾಗ, ಲಿಂಗವಂತ ವಿದ್ಯಾರ್ಥಿಗಳಿಗೆ ಧರ್ಮ ಸಂಸ್ಕಾರದಿಂದ ಪಡೆದ ‘ಇಷ್ಟಲಿಂಗ’ವನ್ನು ತೆಗೆಸುತ್ತಿರುವುದು ಕಂಡುಬಂದಿದೆ. ಇದು ಸ್ವಾತಂತ್ರ್ಯ ಹರಣ ಹಾಗೂ ಸಂವಿಧಾನದ ಉಲ್ಲಂಘನೆ ಎಂದು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.
ಎಲೆಕ್ಟ್ರಾನಿಕ್ ಉಪಕರಣಗಳನ್ನು ತೆಗೆದುಕೊಂಡು ಹೋಗಬಾರದು ಹಾಗೂ ಪರೀಕ್ಷೆಯ ದೃಷ್ಟಿಕೋನದಿಂದ ಕೆಲವು ವಸ್ತುಗಳನ್ನು ನಿಷಿದ್ಧ ಮಾಡಿರುವುದು ಸರಿಯಾದ ಕ್ರಮವೇ ಆಗಿದೆ. ಆದರೆ, ಧರ್ಮ ಲಾಂಛನವಾದ ಇಷ್ಟಲಿಂಗವನ್ನೇ ತೆಗೆಸುವುದು ಮೂರ್ಖತನದ ಪರಮಾವಧಿ ಎಂದು ಅವರು ಟೀಕಿಸಿದ್ದಾರೆ.
ಇಷ್ಟಲಿಂಗವನ್ನು ದೀಕ್ಷೆಯ ಮೂಲಕ ಪಡೆದು ಎದೆಯ ಮೇಲೆ ಧರಿಸುವುದು ಲಿಂಗಾಯತ ಸಂಪ್ರದಾಯದಲ್ಲಿ ಅತ್ಯಂತ ಪ್ರಮುಖವಾದುದು, ಲಿಂಗಾಯತರು ಇದನ್ನು ಧರಿಸುವುದು ಕಡ್ಡಾಯ, ಒಮ್ಮೆ ಇಷ್ಟಲಿಂಗವನ್ನು ದೀಕ್ಷೆಯ ಮೂಲಕ ಪಡೆದುಕೊಂಡ ನಂತರ, ಅದನ್ನು ಎಂತಹ ಸಂದರ್ಭ ಬಂದರೂ ತೆಗೆದಿರಿಸಲಾಗದು. ಇದು ಧರ್ಮ ಸಂಹಿತೆಯಾದ ವಚನಗಳಲ್ಲಿ ಬಸವಣ್ಣನವರು ಮತ್ತು ಶರಣರು ಸ್ಪಷ್ಟವಾಗಿ ಬರೆದಿರುವರು ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಬ್ರಾಹ್ಮಣರಿಗೆ ಜನಿವಾರ ಹೇಗೆ ಮುಖ್ಯವೋ, ಸಿಖ್‌ರಿಗೆ ಕಿರ್ಪಾನ್, ಕಾರಾ, ಕಚ್ಚರಾ, ಕೇಶ್, ಕಂಫಾ ಹೇಗೆ ಮುಖ್ಯವೋ, ಹಾಗೆಯೇ ಲಿಂಗವಂತರಿಗೆ ಇಷ್ಟಲಿಂಗವು ಮುಖ್ಯ ಹಾಗೂ ಕಡ್ಡಾಯ. ಧರ್ಮ ಸಂಸ್ಕಾರದಿಂದ ಪಡೆದುದನ್ನು ಎಂದಿಗೂ ತೆಗೆಯಬಾರದು ಎಂಬುದು ಧರ್ಮಸಂಹಿತೆಯಲ್ಲಿ ಇರುವುದರಿಂದ ಇದನ್ನು ಎಂದಿಗೂ ಯಾರೂ ಸಹ ಒತ್ತಾಯದಿಂದ ತೆಗೆಸಬಾರದು ಎಂದು ಅಲ್ಲಮಪ್ರಭು ಸ್ವಾಮೀಜಿ ಹೇಳಿದ್ದಾರೆ.
ಅಮೆರಿಕಾ ದೇಶದ ವಿಮಾನಗಳಲ್ಲಿ ಪ್ರಯಾಣ ಮಾಡುವಾಗ ಸಹ, ಇದು ಧರ್ಮ ಲಾಂಛನ ಎಂದು ಹೇಳಿದಾಗ ಅವರು ಎಂದಿಗೂ ತೆಗೆಯಲು ಹೇಳುವುದಿಲ್ಲ. ಆದರೆ, ಇಂದು ಬಸವಣ್ಣನವರು ಹುಟ್ಟಿದ ನಾಡಿನಲ್ಲಿಯೇ, ಅವರು ನೀಡಿದ ಇಷ್ಟಲಿಂಗವನ್ನು ದೇಹದಿಂದ ತೆಗೆಸುತ್ತಿರುವುದು ಅಸಂಬದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಸಮಸ್ತ ಲಿಂಗವಂತರಿಗೆ ಅಪಮಾನ. ಇಷ್ಟಲಿಂಗವನ್ನು ತೆಗೆಸಿದರೆ ಧರ್ಮವನ್ನೇ ದಿಕ್ಕರಿಸಿದಂತೆ. ಇಷ್ಟಲಿಂಗವನ್ನು ದೇಹದಿಂದ ತೆಗೆದರೆ ಆ ವ್ಯಕ್ತಿಯು ಧರ್ಮಭ್ರಷ್ಟರಾಗುವನು. ೧೨ನೇ ಶತಮಾನದಲ್ಲಿ ಇಷ್ಟಲಿಂಗವು ಕೈತಪ್ಪಿ ದೇಹದಿಂದ ನುಣುಚಿದರೆ, ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಹಂತಕ್ಕೆ ಹೋಗುತ್ತಿದ್ದರೆಂದು ವಚನಗಳಲ್ಲಿ ಉಲ್ಲೇಖಿಸಲಾಗಿದೆ.
ಆದ್ದರಿಂದ ಸಂಬಂಧಪಟ್ಟವರು ತಕ್ಷಣವೇ ಇಂತಹ ಧರ್ಮವಿರೋಧಿ ಕಾರ್ಯವನ್ನು ನಿಲ್ಲಿಸಬೇಕು. ಇದು ಸ್ಪಷ್ಟವಾಗಿ ಸಂವಿಧಾನದ ಉಲ್ಲಂಘನೆಯೂ ಆಗಿದ್ದು ಸಂಬಂಧಪಟ್ಟವರು ತಕ್ಷಣವೇ ಇದನ್ನು ನಿಲ್ಲಿಸಲು ಕಾರ್ಯಪ್ರವೃತ್ತರಾಗಬೇಕು
ಪೂಜ್ಯಶ್ರೀ ಅಲ್ಲಮಪ್ರಭು ಸ್ವಾಮೀಜಿ ಒತ್ತಾಯಿಸಿದ್ದಾರೆ.