ಏನ್‌ ಸಣ್ಣ ಅಗಿದ್ಯಾ; ಅಶೋಕ್ ಗೆ ಕಿಚಾಯಿಸಿದ ಸಿದ್ದರಾಮಯ್ಯ

ಬೆಳಗಾವಿ: ಏನ್‌ ಅಶೋಕ ಸಣ್ಣ ಅಗಿದಿಯಲ್ಲಾ…ಹೀಗೆ ಕಿಚಾಯಿಸಿದ್ದು ಸಿಎಂ ಸಿದ್ದರಾಮಯ್ಯ.
ಚಳಿಗಾಲದ ಅಧಿವೇಶನ ಆರಂಭಕ್ಕೂ ಮೊದಲು ಸ್ಪೀಕರ್ ಕೊಠಡಿಯಲ್ಲಿ ಸಿದ್ದರಾಮಯ್ಯ ವಿಧಾನಸಭೆಯ ಪ್ರತಿಪಕ್ಷದ ನಾಯಕರಾದ ಅಶೋಕ್, ಸುನೀಲ್ ‌ಕುಮಾರ್ ಮುಖಾಮುಖಿಯಾದ ವೇಳೆ ಮುಖ್ಯ ಮಂತ್ರಿಗಳು ರೇಗಿಸಿದರು.
ಸಿಎಂ ಬರುವ ಮುಂಚೆಯೇ ಸ್ಪೀಕರ್ ಖಾದರ್‌ ಅವರನ್ನು ಅಶೋಕ್, ಸುನೀಲ್ ‌ಕುಮಾರ್ ಭೇಟಿಯಾಗಿದ್ದರು. ಈ ವೇಳೆ ಆಗಮಿಸಿದ ಸಿದ್ದರಾಮಯ್ಯನವರಿಗೆ ಕೈಕುಲುಕಿ ವಿಪಕ್ಷ ನಾಯಕರು ಶುಭ ಕೋರಿದರು.
ಈ ಸಂದರ್ಭದಲ್ಲಿ ನಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಾಡ್ತೀರೇನಪ್ಪಾ ಎಂದು ನಗುನಗುತ್ತಲೇ ಸಿಎಂ ರೇಗಿಸಿದರು.ಆಗ ಇಬ್ಬರು ನಾಯಕರು ಉತ್ತರ ನೀಡದೇ ನಕ್ಕಿದರು.
ಅಶೋಕ್‌ ಅವರಿಗೆ ಸಿದ್ದರಾಮಯ್ಯ, ಏನ್ ಸಣ್ಣ ಆಗಿದ್ದೀಯಾ ಅಶೋಕ್ ಎಂದು ಕಿಚಾಯಿಸಿದರು. ಅದಕ್ಕೆ ನಿಮ್ಮ ಥರ ನಾಟಿ ಕೋಳಿ ತಿನ್ನಲ್ಲ ಸರ್, ನಾನು ಎಲ್ಲವನ್ನು ಬಿಟ್ಟಿದ್ದೀನಿ ಎಂದು ನಗುತ್ತಲೇ ಟಾಂಗ್ ನೀಡಿದರು.
ಅದಕ್ಕೆ ಸಿಎಂ, ಹೇ.. ತಿನ್ನು ಏನೂ ಆಗಲ್ಲ. ಬಾ ತಿನ್ನೋಣ ಎಂದು ಕರೆದರು. ಇದಕ್ಕೆ ಅಶೋಕ್‌ ನಗುತ್ತಾ ಮುಂದೆ ಸಾಗಿದರು.

ಏನ್‌ ಸಣ್ಣ ಅಗಿದ್ಯಾ; ಅಶೋಕ್ ಗೆ ಕಿಚಾಯಿಸಿದ ಸಿದ್ದರಾಮಯ್ಯ Read More

ಅಪರಾಧ ಕೃತ್ಯಗಳ ತಡೆಗಟ್ಟಲು ಅಧಿವೇಶನದಲ್ಲಿ ವಿಶೇಷ ಚರ್ಚೆಗೆ ಆಪ್ ಆಗ್ರಹ

ಬೆಂಗಳೂರು: ಕರ್ನಾಟಕ ರಾಜ್ಯದಾದ್ಯಂತ ಅಪರಾಧ ಕೃತ್ಯಗಳ ಪ್ರಮಾಣ ದಿನೇ ದಿನೇ ಹೆಚ್ಚಾಗಿದ್ದು,ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಇವುಗಳನ್ನು ತಡೆಗಟ್ಟಲು ವಿಶೇಷ ಚರ್ಚೆ ಮಾಡಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ಈ ಬಗ್ಗೆ ರಾಜ್ಯ ಪ್ರಚಾರ ಸಮಿತಿಯ ಉಪಾಧ್ಯಕ್ಷ ಹಾಗೂ ನ್ಯಾಯವಾದಿ ಲಕ್ಷ್ಮಿಕಾಂತ ರಾವ್ ಮಾತನಾಡಿ ಪ್ರತಿ ದಿವಸ 10 ಪೋಕ್ಸೋ ಕೇಸುಗಳು ದಾಖಲಾಗುತ್ತಿದ್ದರೆ , ಶಿಕ್ಷೆಯ ಪ್ರಮಾಣ ಅತ್ಯಂತ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದರು.

ರಾಜ್ಯದಾದ್ಯಂತ ಸೈಬರ್ ಅಪರಾಧ ಕೃತ್ಯಗಳು ಕೂಡಾ ಏಗ್ಗಿಲ್ಲದೆ ನಡೆಯುತ್ತಿದ್ದು ಜನಸಾಮಾನ್ಯನ ದುಡಿಮೆಯ ಹಣ ಕಳ್ಳರ ಪಾಲಾಗುತ್ತಿದೆ. ಕೊರಿಯರ್ ಮತ್ತು ಆನ್ ಲೈನ್ ಬಂಡವಾಡ ಹೂಡಿಕೆಯ ಹೆಸರಿನಲ್ಲಿ ನಡೆಯುತ್ತಿರುವ ಸಂಘಟಿತ ಅಪರಾಧಗಳು ದಿನೇ ದಿನೇ ಮುಗಿಲು ಮುಟ್ಟುತ್ತಿದೆ. ಜನಸಾಮಾನ್ಯನ ಹಣವನ್ನು ಮರಳಿ ಪಡೆದುಕೊಳ್ಳಲು ಪೊಲೀಸ್ ಇಲಾಖೆಯಿಂದ ಎಳ್ಳಷ್ಟು ಅನುಕೂಲಗಳು ಸಿಗುತ್ತಿಲ್ಲ. ಸಾಕಷ್ಟು ಪ್ರಭಾವ ಹಾಗೂ ಹಣ ಬಲವಿಲ್ಲದೆ ಯಾವುದೇ ಆರೋಪಿಗಳ ಮೇಲೆ ಎಫ್ಐಆರ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅನೇಕ ಅಪರಾಧ ಕೃತ್ಯಗಳಲ್ಲಿ ಪೊಲೀಸರೇ ನೇರವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅಂತಹ ಪೊಲೀಸರ ಮೇಲೆ ಯಾವುದೇ ಕ್ರಿಮಿನಲ್ ಮುಖದ್ದಮೆಯನ್ನು ದಾಖಲಿಸದೆ ಕೇವಲ ಇಲಾಖಾ ತನಿಖೆಗೆ ಶಿಫಾರಸು ಮಾಡುತ್ತಿರುವುದರಿಂದ ಪೊಲೀಸ್ ಸಿಬ್ಬಂದಿ ಮತ್ತಷ್ಟು ಅಪರಾಧ ಕೃತ್ಯಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತಿದೆ ಎಂದು ಆರೋಪಿಸಿದರು.

ಪ್ರತಿಯೊಂದು ದೂರಿನಲ್ಲೂ ರಾಜಕಾರಣಿಗಳ ಹಾಗೂ ಅವರ ಬಂಟರುಗಳ ಹಸ್ತಕ್ಷೇಪ ಎದ್ದು ಕಾಣುತ್ತಿದೆ. ನಗರದಾದ್ಯಂತ ಕೋಟಿಗಟ್ಟಲೆ ಹಣ ಸುರಿದು ವರ್ಗಾವಣೆ ಮಾಡಿಸಿಕೊಂಡು ಬಂದ ಅಧಿಕಾರಿಗಳಿಂದ ಯಾವುದೇ ಅಪರಾಧ ಕೃತ್ಯಗಳು ಹಾಗೂ ಶಿಕ್ಷೆಗಳು ತಕ್ಕ ಪ್ರಮಾಣದಲ್ಲಿ ಆಗದೆ ಪ್ರತಿಯೊಂದು ಪೊಲೀಸ್ ಠಾಣೆಗಳು ಸಹ ಪ್ರತಿ ದಿವಸ ಲಕ್ಷಾಂತರ ರೂಪಾಯಿಗಳನ್ನು ದುಡಿಯುವ ಎಟಿಎಂ ಗಳಾಗಿ ಪರಿವರ್ತನೆ ಆಗುತ್ತಿದೆ ಎಂದು ಕಿಡಿಕಾರಿದರು.

ಬೆಂಗಳೂರು ನಗರದಲ್ಲಿ ಸಂಚಾರಿ ಪೊಲೀಸರು ರಸ್ತೆಯಲ್ಲಿ ಕಾಣಿಸಿಕೊಳ್ಳದೆ ತಮ್ಮ ವೃತ್ತಿಪರತೆಯಲ್ಲಿ ವಿಫಲರಾಗಿರುವ ಕಾರಣದಿಂದ ಅತಿಯಾದ ಸಂಚಾರ ಸಮಸ್ಯೆ ಎದುರಾಗುತ್ತಿದೆ.

ಹಗಲಲ್ಲೇ ಬ್ಯಾಂಕ್ ರಾಬರಿಗಳು, ದೊಂಬಿ ಗಲಾಟೆಗಳು, ಗಣೇಶ ವಿಸರ್ಜನೆ ಹೆಸರಿನಲ್ಲಿ ಮೂಲಭೂತವಾದಿಗಳ ಕೋಮು ಪ್ರಚೋದಿತ ವ್ಯವಸ್ಥಿತ ಶಾಂತಿಭಂಗ ಕೃತ್ಯಗಳು ನಡೆಯುತ್ತಿದ್ದು, ತಹಬದಿಗೆ ತರಲು ಗೃಹ ಇಲಾಖೆ ಸಂಪೂರ್ಣ ವಿಫಲಗೊಂಡಿದ್ದು ಗೃಹ ಸಚಿವರು ಪ್ರತಿಯೊಂದು ಹಂತದಲ್ಲಿಯೂ ವೈಫಲ್ಯತೆಯನ್ನು ಕಾಣುತ್ತಿದ್ದಾರೆ. ಈ ಬಗ್ಗೆ ಮುಂಬರುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ವಿಶೇಷ ಚರ್ಚೆ ನಡೆಸಬೇಕು ಎಂದು ಲಕ್ಷ್ಮಿಕಾಂತ ರಾವ್ ಆಗ್ರಹಿಸಿದರು.

ಅಪರಾಧ ಕೃತ್ಯಗಳ ತಡೆಗಟ್ಟಲು ಅಧಿವೇಶನದಲ್ಲಿ ವಿಶೇಷ ಚರ್ಚೆಗೆ ಆಪ್ ಆಗ್ರಹ Read More

ಅಧಿವೇಶನದಲ್ಲಿ ಚರ್ಚೆ ಮಾಡಿದ ಎಲ್ಲ ವಿಷಯಗಳನ್ನ ಜನರ ಮುಂದೆ‌ ಇಡುತ್ತೇವೆ:ಅಶೋಕ್

ಬೆಂಗಳೂರು: ಈ ಅಧಿವೇಶನದಲ್ಲಿ ಅನೇಕ ಸಮಸ್ಯೆಗಳ ಬಗ್ಗೆ ಬಿಜೆಪಿ ಬೆಳಕು ಚೆಲ್ಲಿದೆ. ಆದರೆ ಕಾಂಗ್ರೆಸ್‌ ಸರ್ಕಾರ ಯಾವುದಕ್ಕೂ ಸರಿಯಾದ ಉತ್ತರ ನೀಡಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್‌ ಪುಸ್ತಕದಲ್ಲಿ ಬಹಳ ಸುಳ್ಳುಗಳಿವೆ. ಸಿಎಂ ಕಚೇರಿಯಲ್ಲಿ ಕೆಲಸ ಮಾಡುವವರು ಗ್ಯಾರಂಟಿಯನ್ನು ಹೊಗಳಿದ್ದನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಅಧಿವೇಶನದಲ್ಲಿ ಚರ್ಚೆ ಮಾಡಿದ ಎಲ್ಲ ವಿಷಯಗಳನ್ನ ಜನರ ಮುಂದೆ ಇಡಲಿದ್ದೇವೆ. ಜನರ ನ್ಯಾಯಾಲಯದಲ್ಲಿ ಸರ್ಕಾರದ ಬಗ್ಗೆ ಜನರೇ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.

ಈ ಬಾರಿಯ ಅಧಿವೇಶನದಲ್ಲಿ ಕಾಂಗ್ರೆಸ್‌ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟಿಸಲಾಗಿದೆ. ಸಿಎಂ ಸಿದ್ದರಾಮಯ್ಯ ವೀಲ್‌ ಚೇರ್‌ನಲ್ಲಿದ್ದರೆ, ಸರ್ಕಾರ ಇನ್ನೂ ತೆವಳುತ್ತಿದೆ,18 ಶಾಸಕರನ್ನು ಸ್ಪೀಕರ್‌ ಯು.ಟಿ.ಖಾದರ್‌ ಅಮಾನತು ಮಾಡಿದ್ದಾರೆ. ಮಾನಗೇಡಿ ಕಾಂಗ್ರೆಸ್‌ನವರು ವಿಧಾನಪರಿಷತ್‌ನಲ್ಲಿ ಸಭಾಪತಿ ಸ್ಥಾನದಲ್ಲಿ ಕುಳಿತಿದ್ದ ಎಸ್‌.ಎಲ್‌.ಧರ್ಮೇಗೌಡ ಅವರನ್ನು ಎಳೆದು ಅಪಮಾನ ಮಾಡಿದ್ದರು. ಆದರೂ ಬಿಜೆಪಿ ಧರಣಿ ಮಾಡಿದ್ದೇ ತಪ್ಪು ಎನ್ನುತ್ತಿದ್ದಾರೆ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಂಡಿದ್ದಕ್ಕೆ ಬಿಜೆಪಿ ಪ್ರತಿಭಟಿಸಿದೆ. ಕಾಂಗ್ರೆಸ್‌ ಚಿತಾವಣೆಯಿಂದ ಸ್ಪೀಕರ್‌ ಯು.ಟಿ.ಖಾದರ್‌ ಅಮಾನತು ಮಾಡಿದ್ದಾರೆ. ಹಿಂದಿನ ಯಾವುದೇ ಸ್ಪೀಕರ್‌ ಈ ರೀತಿ ದೀರ್ಘಾವಧಿಯ ಅಮಾನತು ಮಾಡಿಲ್ಲ ಎಂದು ಕಿಡಿಕಾರಿದರು.

ಸಂವಿಧಾನ ರಚನಾ ಸಭೆಯಲ್ಲಿ ಮುಸ್ಲಿಮ್‌ ಮೀಸಲಾತಿಗೆ ವಿರೋಧ ಕೇಳಿಬಂದಿತ್ತು. ತಜ್ಮುಲ್ಲಾ ಹುಸೇನ್‌ ಎಂಬ ನಾಯಕರು ಮುಸ್ಲಿಮ್‌ ಮೀಸಲಾತಿಯನ್ನು ವಿರೋಧಿಸಿದ್ದರು. ಈಗ ಕಾಂಗ್ರೆಸ್‌ ವೋಟ್‌ಬ್ಯಾಂಕ್‌ಗಾಗಿ ಮೀಸಲಾತಿ ನೀಡಿದೆ. ಹಿಂದೂ-ಮುಸ್ಲಿಂ ನಡುವೆ ಒಡಕು ತಂದು ಬ್ರಿಟಿಷರ ಕೆಲಸವನ್ನು ಕಾಂಗ್ರೆಸ್‌ ಮುಂದುವರಿಸುತ್ತಿದೆ. ಗುತ್ತಿಗೆಯಲ್ಲಿನ ಮೀಸಲಾತಿಯಿಂದಾಗಿ ಹಿಂದೂಗಳಿಗೆ ಅವಕಾಶ ಕಡಿಮೆಯಾಗಿದೆ. ಈಗಾಗಲೇ ಗುತ್ತಿಗೆದಾರರಲ್ಲಿ ಮುಸ್ಲಿಮರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಧರ್ಮಾಧಾರಿತ ಮೀಸಲಾತಿಯನ್ನು ಅಂಬೇಡ್ಕರ್‌ ವಿರೋಧಿಸಿದ್ದರು. ಇದನ್ನು ಕೂಡ ಕಾಂಗ್ರೆಸ್ ಹೇಳಬೇಕು ಎಂದು ಅಶೋಕ್ ಒತ್ತಾಯಿಸಿದರು.

ಸಚಿವ ರಾಜಣ್ಣ ಹಾಗೂ ಅವರ ಮಗ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅನುಮತಿ ಪಡೆದು ಹನಿಟ್ರ್ಯಾಪ್‌ ಬಗ್ಗೆ ಮಾತಾಡಿದ್ದಾರೆ. ಈ ಮೂಲಕ ಇದರ ಸೂತ್ರದಾರರು ಯಾರೆಂದು ತಿಳಿದುಬಂದಿದೆ. ದೆಹಲಿಯಿಂದ ಮಲ್ಲಿಕಾರ್ಜುನ ಖರ್ಗೆಯವರೇ ಬಂದು ಚರ್ಚೆ ನಡೆಸುವ ಸ್ಥಿತಿ ಬಂದಿದೆ. ಇಲ್ಲಿ ಕುರ್ಚಿಗಾಗಿ ಕಾದಾಟ ನಡೆಯುತ್ತಿದೆ ಎಂದು ಛೇಡಿಸಿದರು.

ಸರ್ಕಾರ ಪ್ರಮುಖ ನಾಯಕರ ಫೋನ್‌ ಕದ್ದಾಲಿಕೆ ಮಾಡುತ್ತಿದೆ. ಆಡಳಿತ ಪಕ್ಷದ ಶಾಸಕರೇ ಇದನ್ನು ಹೇಳಿದ್ದಾರೆ. ವಿರೋಧಿಗಳನ್ನು ಬಗ್ಗು ಬಡಿಯಬೇಕೆಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಅಧಿವೇಶನದಲ್ಲಿ ಚರ್ಚೆ ಮಾಡಿದ ಎಲ್ಲ ವಿಷಯಗಳನ್ನ ಜನರ ಮುಂದೆ‌ ಇಡುತ್ತೇವೆ:ಅಶೋಕ್ Read More

ಹನಿಟ್ರ್ಯಾಪ್; ಉನ್ನತ ಮಟ್ಟದ ತನಿಖೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಸದ್ದು ಮಾಡುತ್ತಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.

ಹನಿಟ್ರ್ಯಾಪ್ ಆರೋಪ ಪ್ರತ್ಯಾರೋಪದ ಬಗ್ಗೆ ಸತ್ಯಾಸತ್ಯತೆ ತಿಳಿಯಲು ತನಿಖೆಗೆ ಶೀಘ್ರವೇ ಆದೇಶಿಸಲಾಗುವುದು. ರಾಜಣ್ಣ ಅವರು ದೂರು ನೀಡಿದ ಕೂಡಲೇ ತನಿಖೆ ಮಾಡಿಸಲಾಗುವುದು ಎಂದು ಸದನದಲ್ಲಿ ತಿಳಿಸಿದರು.

ಈ ವೇಳೆ‌ ಸಭಾಧ್ಯಕ್ಷ ಯು.ಟಿ.ಖಾದರ್ ಪರಮೇಶ್ವರ್ ಅವರ ಮಾತುಗಳನ್ನು ತದೇಕಚಿತ್ತದಿಂದ ಆಲಿಸಿ ಆಗಲಿ ಎಂದು ಹೇಳಿದರು.

ಹನಿಟ್ರ್ಯಾಪ್‌ಗೆ ಫುಲ್‌ ಸ್ಟಾಪ್ ಹಾಕಬೇಕು, ಹನಿಟ್ರ್ಯಾಪ್ ಎನ್ನುವುದು ಸದನದ ಎಲ್ಲ ಸದಸ್ಯರ ಮರ್ಯಾದೆ ಪ್ರಶ್ನೆ, ಗೌರವ ಗಳಿಸಿಕೊಂಡಿರುವ ನಾಯಕರ ಘನತೆಯನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಒಬ್ಬರು, ಇಬ್ಬರು ಸಚಿವರಿಗೆ ಹನಿಟ್ರಾಪ್ ಅಂತಲ್ಲಾ ಇದು ಎಲ್ಲರ ಮರ್ಯಾದೆಯ ಪ್ರಶ್ನೆ. ಸದನದ ಮರ್ಯಾದೆಯೂ ಹೌದು. ಹೀಗಾಗಿ ನಾನು ಈ ಕೂಡಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸುವೆ ಎಂದು ಪರಮೇಶ್ವರ್ ಹೇಳಿದರು.

ಹನಿಟ್ರ್ಯಾಪ್; ಉನ್ನತ ಮಟ್ಟದ ತನಿಖೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ Read More

ಆಯುಷ್ಮಾನ್ ವ್ಯಾಪ್ತಿಗೆ ಹೃದಯಾಘಾತ, ಪಾರ್ಶ್ವವಾಯುಗೆ ಚಿಕಿತ್ಸೆ ತರಲು ಹೆಚ್.ಡಿ.ಡಿ ಒತ್ತಾಯ

ನವದೆಹಲಿ: ಆಯುಷ್ಮಾನ್ ಭಾರತ್ ಕಾರ್ಯಕ್ರಮದಡಿಯಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯುಗೆ ಚಿಕಿತ್ಸೆ ಪಡೆಯಲು ರಾಷ್ಟ್ರವ್ಯಾಪಿ ಯೋಜನೆ ರೂಪಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೋರಿದರು‌

ರಾಜ್ಯಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೃದಯಾಘಾತ ಮತ್ತು ಪಾರ್ಶ್ವವಾಯುನಿಂದ ಮರಣ ಹೊಂದುವವರು ಭಾರತದಲ್ಲಿ ಹೆಚ್ಚುತ್ತಿದ್ದಾರೆ. ಪ್ರತಿ ವರ್ಷ ನಾವು ಲಕ್ಷಾಂತರ ಜನರನ್ನು ಕಳೆದುಕೊಳ್ಳುತ್ತಿದ್ದೇವೆ ಮತ್ತು ದುರದೃಷ್ಟವಶಾತ್ ಶೇ.30ರಷ್ಟು ಹೃದಯಾಘಾತಗಳು 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಲ್ಲಿ ಸಂಭವಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶದಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿರುವ ಸಲುವಾಗಿ ತಾಲ್ಲೂಕು ಆಸ್ಪತ್ರೆಗಳಲ್ಲಿ 18,000 ಕ್ಕೆ ರಕ್ತ ಹೆಪ್ಪುಗಟ್ಟುವಿಕೆ ಕರಗಿಸುವ ಇಂಜೆಕ್ಷನ್‌ಗಳು ಲಭ್ಯವಾಗುವಂತೆ ಮಾಡಬೇಕು ಎಂದು
ಗೌಡರು ಮನವಿ ಮಾಡಿದರು.

ಆರಂಭಿಕವಾಗಿ ಆಯುಷ್ಮಾನ್ ಭಾರತ್ ಅಡಿಯಲ್ಲಿ ಆಂಜಿಯೋಪ್ಲ್ಯಾಸ್ಟಿ ಮತ್ತು ಸ್ಟಂಟ್ ಅಳವಡಿಸುವುದಕ್ಕಾಗಿ ರೋಗಿಗಳನ್ನು ಹತ್ತಿರದ ನಗರಗಳಿಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು.

ಆಯುಷ್ಮಾನ್ ಭಾರತ್ ಅಡಿಯಲ್ಲಿ ಆಂಜಿಯೋಪ್ಲ್ಯಾಸ್ಟಿ ಒಳಗೊಳ್ಳಲ್ಪಟ್ಟಿದ್ದರೂ ಜೀವ ರಕ್ಷಕ ಔಷಧಿಗಳನ್ನು ಸಹ ಈ ಯೋಜನೆಯಲ್ಲಿ ಸೇರಿಸಬೇಕು ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ಎಂಬಿಬಿಎಸ್ ವೈದ್ಯರ ವೇತನ ಹೆಚ್ಚಳ ಮಾಡುವ‌ ಅಗತ್ಯವಿದೆ ಎಂದು ದೇವೇಗೌಡರು ಒತ್ತಾಯಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಪ್ರೋತ್ಸಾಹ ಧನ ನೀಡಬೇಕು. ಗ್ರಾಮೀಣ ಆರೋಗ್ಯವನ್ನು ನಾವು ಸುಧಾರಿಸದೇ ಇದ್ದರೆ, ನಮ್ಮ ಹಳ್ಳಿಗಳು ಸರಿಯಾದ ವೈದ್ಯಕೀಯ ಆರೈಕೆಯ ಕೊರತೆಯಿಂದ ಬಳಲುತ್ತಲೇ ಇರುತ್ತವೆ ಎಂದು ಎಚ್ಚರಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಮತ್ತು ದಾದಿಯರಿಗೆ ಕಡಿಮೆ ಸಂಬಳದ ಬಗ್ಗೆಯೂ ದೇವೇಗೌಡರು ಸರ್ಕಾರದ ಗಮನ ಸೆಳೆದರು.

ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ರಾಷ್ಟ್ರೀಯ ರೋಗನಿರೋಧಕ ಕಾರ್ಯಕ್ರಮದಲ್ಲಿ ಹೆಚ್ ಪಿ‌ವಿ ಲಸಿಕೆಯನ್ನು ಸೇರಿಸಬೇಕೆಂದು ದೇವೇಗೌಡರು ಮನವಿ ಮಾಡಿದರು.

ಸೇವೆಯಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ಸೇವೆಯನ್ನು ಸುಧಾರಿಸಲು, ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ವಿಶೇಷ ಕೇಂದ್ರಗಳನ್ನು ಸ್ಥಾಪಿಸುವ ಖಾಸಗಿ ಆಸ್ಪತ್ರೆಗಳಿಗೆ ಐದು ವರ್ಷಗಳ ತೆರಿಗೆ ವಿನಾಯಿತಿ ನೀಡುವಂತೆ ದೇವೇಗೌಡರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದರು.

ಆಯುಷ್ಮಾನ್ ವ್ಯಾಪ್ತಿಗೆ ಹೃದಯಾಘಾತ, ಪಾರ್ಶ್ವವಾಯುಗೆ ಚಿಕಿತ್ಸೆ ತರಲು ಹೆಚ್.ಡಿ.ಡಿ ಒತ್ತಾಯ Read More

ಎಂಇಎಸ್ ನಾಯಕರ ಗಡಿಪಾರಿಗೆ ತೇಜಸ್ವಿ ಆಗ್ರಹ

ಮೈಸೂರು: ಎಂಇಎಸ್ ನಾಯಕರನ್ನು ನಾಡದ್ರೋಹಿ ಗಳೆಂದು ಪರಿಗಣಿಸಿ ಗಡಿಪಾರು ಮಾಡಬೇಕೆಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.

ಬೆಳಗಾವಿ ಗಡಿಭಾಗದಲ್ಲಿ ಭಾಷಾ ವೈಷಮ್ಯ ವಿಷಬೀಜ ಬಿತ್ತಿ ಮುಗ್ಧ ಕನ್ನಡಿಗರು ಮತ್ತು ಮರಾಠಿಗರನ್ನು ಪ್ರಚೋದಿಸಿ, ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿರುವ ಎಂಇಎಸ್ ನಾಯಕರನ್ನು ನಾಡದ್ರೋಹಿ ಗಳೆಂದು ಪರಿಗಣಿಸಿ ಗಡಿಪಾರು ಮಾಡಬೇಕು
ಮತ್ತು ಎಂಇಎಸ್ ಸಂಘಟನೆಯನ್ನು ನಿಷೇಧಿಸಲು ಬೆಳಗಾವಿ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ರಾಜ್ಯೋತ್ಸವ ದಿನ ಕರಾಳ ದಿನಾಚರಣೆ ಮಾಡಿ ಅಧಿವೇಶನ ಸಂದರ್ಭದಲ್ಲಿ ಮರಾಠಿ ಮೇಳಾವ್ ಮಾಡಿ ಕನ್ನಡಿಗರು ಸಂಭ್ರಮ ಪಡುವ ಸಂದರ್ಭದಲ್ಲಿ ಪದೇ ಪದೇ ಶಾಂತಿ ಭಂಗ ಮಾಡುತ್ತಿರುವ ಎಂಇಎಸ್ ನಾಯಕರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಗಡಿಪಾರು ಮಾಡಿ ಕನ್ನಡದ ಹಿತವನ್ನು ಕಾಯಬೇಕು ಎಂದು ತೇಜಸ್ವಿ ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ದಿನ ಎಂಇಎಸ್ ಸಂಘಟನೆಗೆ ಕರಾಳ ದಿನಾಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿ ರಾತ್ರೋರಾತ್ರಿ ಅನುಮತಿ ನೀಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತೇಜಸ್ವಿ ನಾಗಲಿಂಗ ಸ್ವಾಮಿ ಆಗ್ರಹಿಸಿದ್ದಾರೆ.

ಎಂಇಎಸ್ ನಾಯಕರ ಗಡಿಪಾರಿಗೆ ತೇಜಸ್ವಿ ಆಗ್ರಹ Read More

ನ. 25 ರಿಂದ ಚಳಿಗಾಲದ ಸಂಸತ್ ಅಧಿವೇಶನ: ವಕ್ಫ್ ಮಸೂದೆ ಮಂಡನೆ ಸಾಧ್ಯತೆ

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ನ. 25ರಿಂದ ಡಿಸೆಂಬರ್ 20 ರವರೆಗೆ ನಡೆಯಲಿದೆ.

ಅಧಿವೇಶನದ ಸಮಯದಲ್ಲಿ, ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಒಂದು ರಾಷ್ಟ್ರ ಒಂದು ಚುನಾವಣೆ ಮತ್ತು ವಕ್ಫ್ ಮಸೂದೆಗಳನ್ನು ಮಂಡಿಸುವ ಸಾಧ್ಯತೆ ಇದೆ.

ನವೆಂಬರ್ 23 ರಂದು ಪ್ರಕಟವಾಗಲಿರುವ ಜಾರ್ಖಂಡ್ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಅಧಿವೇಶನದ ಮೇಲೆ ಮಹತ್ವದ ಪ್ರಭಾವ ಬೀರಲಿವೆ ಎಂದು ಹೇಳಲಾಗುತ್ತಿದೆ.

ಹರಿಯಾಣದ ಸೋಲಿನಿಂದ ಚುರುಕಾಗಿರುವ ಕಾಂಗ್ರೆಸ್ ಮತ್ತು ಮಹಾ ವಿಕಾಸ್ ಅಘಾಡಿ ಮತ್ತು ಅದರ ಮಿತ್ರಪಕ್ಷಗಳು ಜಾರ್ಖಂಡ್‌ನಲ್ಲಿ ಹೇಮಂತ್ ಸೋರೆನ್ ನೇತೃತ್ವದ ಸರ್ಕಾರವನ್ನು ಉಳಿಸಿಕೊಂಡು ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿಯುವ ವಿಶ್ವಾಸ ಹೊಂದಿವೆ

ಸಾಂವಿಧಾನಿಕ ಹಕ್ಕುಗಳನ್ನು ಮರುಸ್ಥಾಪಿಸುವ ಹಾಗೂ ಈ ಪ್ರದೇಶದ ನಿವಾಸಿಗಳ ಅನನ್ಯ ಗುರುತನ್ನು ಕಾಪಾಡುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯಾದ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯತ್ವದ ಸ್ಥಾನಮಾನ ನೀಡಲು ಸರ್ಕಾರ ನಿರ್ಣಯ ಅಂಗೀಕರಿಸುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ರಾಜ್ಯತ್ವವನ್ನು ಶೀಘ್ರ ಮರುಸ್ಥಾಪಿಸುವುದು ಸೇರಿದಂತೆ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದ್ದರು.

ಭಾರತದ ಸಂವಿಧಾನವನ್ನು ಅಂಗೀಕರಿಸಿದ 75 ನೇ ವಾರ್ಷಿಕೋತ್ಸವದ ಅಂಗವಾಗಿ ನವೆಂಬರ್ 26 ರಂದು ಸಂಸತ್ತಿನ ಉಭಯ ಸದನಗಳ ವಿಶೇಷ ಜಂಟಿ ಅಧಿವೇಶನ ನಡೆಯಲಿದೆ.

ನ. 25 ರಿಂದ ಚಳಿಗಾಲದ ಸಂಸತ್ ಅಧಿವೇಶನ: ವಕ್ಫ್ ಮಸೂದೆ ಮಂಡನೆ ಸಾಧ್ಯತೆ Read More