ಸೆಸ್ಕ್ ಸಿಬ್ಬಂದಿಗೆ ಆರೋಗ್ಯತಪಾಸಣೆ ಶಿಬಿರ: ರಮೇಶ್ ಬಂಡಿಸಿದ್ದೇಗೌಡ ಚಾಲನೆ

ಮೈಸೂರು: ಸಿಬ್ಬಂದಿಯ ಸುರಕ್ಷತೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮವು ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿಗೆ ಎರಡು ದಿನಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದೆ

ಶಾಸಕರೂ ಆಗಿರುವ ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಅವರು ಶಿಬಿರಕ್ಕೆ ಚಾಲನೆ ನೀಡಿದರು.

ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್‌ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ರಮೇಶ್ ಬಂಡಿಸಿದ್ದೇಗೌಡ ಅವರು, ಜನರಿಗೆ ವಿದ್ಯುತ್ ಪೂರೈಸುವ ಸೆಸ್ಕ್ ಸಿಬ್ಬಂದಿ ತಮ್ಮ ಆರೋಗ್ಯ ಮತ್ತು ಸುರಕ್ಷತೆ ಬಗ್ಗೆಯೂ ಗಮನ ಹರಿಸುವ ಅನಿವಾರ್ಯತೆ ಇದೆ, ಈ ನಿಟ್ಟಿನಲ್ಲಿ ನಿಗಮ ಕೈಗೊಂಡಿರುವ ಈ ಶಿಬಿರವು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.

ಮೊದಲ ದಿನದ ಶಿಬಿರದಲ್ಲಿ ಸೆಸ್ಕ್‌ ಪ್ರಧಾನ ಕಚೇರಿಯಲ್ಲಿ ಗುತ್ತಿಗೆ ಹಾಗೂ ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಡೇಟಾ ಎಂಟ್ರಿ ಸಿಬ್ಬಂದಿ, ವಾಹನ ಚಾಲಕರು, ನಿಗಮ ಕಚೇರಿಯ ಸಹಾಯಕ ಸಿಬ್ಬಂದಿ ಸೇರಿದಂತೆ ನೂರಾರು ಮಂದಿ ಆರೋಗ್ಯದ ತಪಾಸಣೆ ಮಾಡಿಕೊಳ್ಳುವ ಮೂಲಕ ಶಿಬಿರದ ಲಾಭ ಪಡೆದರು.

ಶಿಬಿರದ ಎರಡನೇ ದಿನ ಪ್ರಧಾನ ಕಚೇರಿಯಲ್ಲಿ ಕರ್ತವ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

80 ಪರೀಕ್ಷೆಗಳ ಲಾಭ: ನಿಗಮದ ಪ್ರಧಾನ ಕಚೇರಿಯಲ್ಲಿ ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 80ಕ್ಕೂ ಹೆಚ್ಚು ತಪಾಸಣೆ ನಡೆಸಲಾಯಿತು.

ಪ್ರಮುಖವಾಗಿ ರಕ್ತ ಪರೀಕ್ಷೆ, ಥೈರಾಯ್ಡ್‌ ಪರೀಕ್ಷೆ, ಮೂತ್ರ ಪರೀಕ್ಷೆ, ಎಫ್‌ಬಿಎಸ್‌, ಎಲ್‌ಎಫ್‌ಟಿ, ಕ್ಯಾಲ್ಶಿಯಂ, ವಿಟಮಿನ್‌ ಬಿ12 ಮತ್ತು ಡಿ ಪರೀಕ್ಷೆ ಸೇರಿದಂತೆ ಇನ್ನಿತರ ತಪಾಸಣೆ ನಡೆಸಲಾಯಿತು.

ಅಂದಾಜು 7000 ರೂ. ವೆಚ್ಚವಾಗುವ ಈ ಎಲ್ಲ ತಪಾಸಣೆಗಳನ್ನು ಸಂಪೂರ್ಣ ಉಚಿತವಾಗಿ ಕಲ್ಪಿಸುವ ಮೂಲಕ ನಿಗಮದ ಸಿಬ್ಬಂದಿ ಹಾಗೂ ಅಧಿಕಾರಿಗಳ ಆರೋಗ್ಯ ಸುರಕ್ಷತೆಗೆ ಸೆಸ್ಕ್‌ ಆದ್ಯತೆ ನೀಡಿದೆ.

ಇದೇ ಸಂದರ್ಭದಲ್ಲಿ ನಿಗಮ ಕಚೇರಿಯಲ್ಲಿ ಹೊಸದಾಗಿ ನಿರ್ಮಿಸಿರುವ ಲಿಫ್ಟ್ ಅನ್ನು ರಮೇಶ್ ಬಂಡಿಸಿದ್ದೇಗೌಡ ಅವರು ಉದ್ಘಾಟಿಸಿದರು.

ಈ ವೇಳೆ ಸೆಸ್ಕ್ ಮುಖ್ಯ ಆರ್ಥಿಕ ಅಧಿಕಾರಿ ರೇಣುಕಾ, ಪ್ರಧಾನ ವ್ಯವಸ್ಥಾಪಕರುಗಳಾದ ಡಾ. ಬಿ.ಆರ್. ರೂಪ, ಲೋಕೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಸೆಸ್ಕ್ ಸಿಬ್ಬಂದಿಗೆ ಆರೋಗ್ಯತಪಾಸಣೆ ಶಿಬಿರ: ರಮೇಶ್ ಬಂಡಿಸಿದ್ದೇಗೌಡ ಚಾಲನೆ Read More

ವಿದ್ಯುತ್‌ ಕಳ್ಳತನ: 6.36 ಕೋಟಿ ದಂಡ ವಿಧಿಸಿದ ಸೆಸ್ಕ್

ಮೈಸೂರು, ಮಾ.5: ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿದ್ದವರ ವಿರುದ್ಧ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ (ಸೆಸ್ಕ್‌) ಜಾಗೃತ ದಳ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ.

ವಿದ್ಯುತ್ ಕಳ್ಳತನ ಮಾಡಿದವರಿಗೆ ಸೆಸ್ಕ್ ಅಧಿಕಾರಿಗಳು 6 ಕೋಟಿ ರುಪಾಯಿಗೂ ಹೆಚ್ಚು ದಂಡ ವಿಧಿಸಿದ್ದಾರೆ.

ಸೆಸ್ಕ್‌ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಸೆಸ್ಕ್ ಜಾಗೃತದಳದ ಪೊಲೀಸ್ ಅಧೀಕ್ಷಕರಾದ ಸವಿತಾ ಹೂಗಾರ ಅವರ ನೇತೃತ್ವದಲ್ಲಿ ಜಾಗೃತದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಸೆಸ್ಕ್‌ ವಿಭಾಗ ವ್ಯಾಪ್ತಿಗೆ ಒಳಪಡುವ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಹಾಗೂ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ,ಆ ಮೂಲಕ ಅಕ್ರಮವಾಗಿ ವಿದ್ಯುತ್‌ ಕಳ್ಳತನ, ವಿದ್ಯುತ್‌ ದುರುಪಯೋಗ ಮಾಡಿದವರ ವಿರುದ್ಧ ಕ್ರಮಕೈಗೊಂಡು, ಪ್ರಕರಣಗಳನ್ನು ದಾಖಲಿಸಿದ್ದಾರೆ.

ಸೆಸ್ಕ್ ಜಾಗೃತದಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ ಗೃಹ, ವಾಣಿಜ್ಯ, ಕೈಗಾರಿಕೆ, ತಾತ್ಕಾಲಿಕ ಸ್ಥಾವರಗಳು ಮತ್ತು ಇತರ ಕಡೆಗಳಲ್ಲಿ 5716 ಸ್ಥಾವರಗಳನ್ನು ಜಾಗೃತದಳದ ಅಧಿಕಾರಿಗಳು ಪರಿಶೀಲಿಸಿದ್ದು, ಈ ಸಂದರ್ಭದಲ್ಲಿ 1312 ವಿದ್ಯುತ್ ಕಳ್ಳತನ ಮತ್ತು ದುರುಪಯೋಗ ಪ್ರಕರಣಗಳನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಪ್ರಕರಣಗಳಿಂದ ಒಟ್ಟು 6,36,72,607 ರೂ. ದಂಡ ವಿಧಿಸಿದ್ದು, ಈ ಅವಧಿಯಲ್ಲಿ ಹಿಂದಿನ ಪ್ರಕರಣಗಳು ಸೇರಿ 5,94,89,898 ರೂ. ದಂಡ ವಸೂಲಿ ಮಾಡಲಾಗಿದೆ.

ಮೀಟರ್‌ ಪರಿಶೀಲನೆ ವಿಭಾಗದಿಂದ ವಿವಿಧ ವಿಭಾಗಗಳಲ್ಲಿ ಒಟ್ಟು 23,014 ಸ್ಥಾವರಗಳ ರೇಟಿಂಗ್‌ ಮಾಡಿ, ಲೋಪಗಳಿರುವ ಕಡೆಗಳಲ್ಲಿ ಗುರುತಿಸಲಾಗದ ಪ್ರಕರಣಗಳನ್ನು ದಾಖಲಿಸಿ 12,37,56,660 ರೂ. ದಂಡವನ್ನು ವಿಧಿಸಲಾಗಿದೆ.

ವಿದ್ಯುತ್ ಕಳ್ಳತನ ಮಾಡುವುದು ವಿದ್ಯುಚ್ಛಕ್ತಿ ಕಾಯ್ದೆಯ ಅಡಿಯಲ್ಲಿ ಕ್ರಿಮಿನಲ್ ಸ್ವರೂಪದ ಶಿಕ್ಷಾರ್ಹ ಅಪರಾಧವಾಗಿದ್ದು, ವಿದ್ಯುತ್ ಕಳ್ಳತನ ಮಾಡುವವರ ವಿರುದ್ದ ಪ್ರಕರಣ ದಾಖಲಿಸಲಾಗುವುದು. ಸಾರ್ವಜನಿಕರು ವಿದ್ಯುತ್ ಕಳ್ಳತನದ ಬಗ್ಗೆ ಮಾಹಿತಿ ಇದ್ದಲ್ಲಿ ಈ ಕೆಳಕಂಡ ಸಂಖ್ಯೆಗಳಿಗೆ ಮಾಹಿತಿ ನೀಡಬಹುದು. ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಸೆಸ್ಕ್‌ ಜಾಗೃತ ದಳದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಸಿ. ಉಮೇಶ್‌ ಹಾಗೂ ಪೊಲೀಸ್‌ ಉಪ ಅಧೀಕ್ಷಕರಾದ ಆನಂದಮೂರ್ತಿ ತಿಳಿಸಿದ್ದಾರೆ.

ಅಲ್ಲದೆ, ವಿದ್ಯುತ್ ಕಳ್ಳತನ ಕಂಡುಬಂದಲ್ಲಿ ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಿದ್ದಾರೆ.

ಸೆಸ್ಕ್‌ ಜಾಗೃತ ದಳ:
ಮೈಸೂರು ಜಿಲ್ಲೆ: ಪೊಲೀಸ್‌ ಇನ್ಸ್‌ಪೆಕ್ಟರ್‌ 9448994736
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) – 9448994737.

ಮಂಡ್ಯ ಜಿಲ್ಲೆ: ಪೊಲೀಸ್‌ ಇನ್ಸ್‌ಪೆಕ್ಟರ್‌ 9448994919
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) 9448994863.

ಹಾಸನ ಜಿಲ್ಲೆ: ಪೊಲೀಸ್‌ ಇನ್ಸ್‌ಪೆಕ್ಟರ್‌ 9448994935
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) 9448994936

ಚಾಮರಾಜನಗರ ಜಿಲ್ಲೆ: ಪೊಲೀಸ್‌ ಇನ್ಸ್‌ಪೆಕ್ಟರ್‌ 9449598689
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) 9448994926

ಕೊಡಗು ಜಿಲ್ಲೆ: ಪೊಲೀಸ್‌ ಇನ್ಸ್‌ಪೆಕ್ಟರ್‌ 9449598620
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) 9448499902

ವಿದ್ಯುತ್‌ ಕಳ್ಳತನ: 6.36 ಕೋಟಿ ದಂಡ ವಿಧಿಸಿದ ಸೆಸ್ಕ್ Read More

ಸೆಸ್ಕ್‌ ಕಾರ್ಯಕ್ಕೆ “ಎ” ಶ್ರೇಣಿ ರೇಟಿಂಗ್‌

ಮೈಸೂರು: ಪವರ್ ಫೈನಾನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ಸೆಸ್ಕ್‌ ಕಾರ್ಯವೈಖರಿಗೆ “ಎ” ಶ್ರೇಣಿ ರೇಟಿಂಗ್‌ ಮನ್ನಣೆ ದೊರೆತಿದ್ದು,ಎ ಶ್ರೇಣಿ ಪಡೆದ ರಾಜ್ಯದ ಮೊದಲ ಎಸ್ಕಾಂ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಜತೆಗೆ ವಿದ್ಯುತ್‌ ಉಳಿತಾಯ, ಫೀಡರ್‌ ನಿರ್ವಹಣೆ ಹೀಗೆ ಹಲವು ವಿಭಾಗಗಳಲ್ಲಿ ಬದ್ಧತೆಯೊಂದಿಗೆ ಕಾರ್ಯನಿರ್ವಹಣೆ ಮಾಡಿರುವ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಸೆಸ್ಕ್‌)ವು ಪವರ್ ಫೈನಾನ್ಸ್ ಕಾರ್ಪೊರೇಷನ್ (PFC) ಆಫ್ ಇಂಡಿಯಾ ನೀಡುವ ರೇಟಿಂಗ್‌ನಲ್ಲಿ “ಎ” ಶ್ರೇಣಿಗೆ ಉನ್ನತೀಕರಣಗೊಂಡಿದೆ.

ನಗರದ ವಿಜಯನಗರ 2ನೇ ಹಂತದಲ್ಲಿರುವ ನಿಗಮದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಿಗಮದ ಅಧ್ಯಕ್ಷ ರಮೇಶ್‌ ಬಂಡಿಸಿದ್ದೇಗೌಡ ಅವರು, “ಸೆಸ್ಕ್ ನ ನಿರಂತರ ಪರಿಶ್ರಮ, ಉತ್ಕೃಷ್ಟತೆಯ ಬದ್ಧತೆಯಿಂದ ರಾಷ್ಟ್ರೀಯ ಮಟ್ಟದಲ್ಲಿ ಕಂಪನಿಗಳ ಶ್ರೇಯಾಂಕ ನೀಡುವ ಪವರ್‌ ಫೈನಾನ್ಸ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ ಅವರು ನೀಡುವ ರೇಟಿಂಗ್‌ನಲ್ಲಿ ಸೆಸ್ಕ್ “ಬಿ” ಶ್ರೇಣಿಯಿಂದ “ಎ” ಶ್ರೇಣಿಗೆ ಉನ್ನತೀಕರಣಗೊಂಡಿದೆ. ಆ ಮೂಲಕ “ಎ” ಶ್ರೇಯಾಂಕ ಪಡೆದಿರುವ ರಾಜ್ಯದ ಏಕೈಕ ಎಸ್ಕಾಂ ನಮ್ಮದು ಎಂದು ಹೆಮ್ಮೆಯಿಂದ ನುಡಿದರು.

ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡುವ ಮೂಲಕ ಎ- ಪ್ಲಸ್ ಶ್ರೇಣಿ ಪಡೆಯುವ ಗುರಿ ಇದೆ ಎಂದು ತಿಳಿಸಿದರು.

ಸೆಸ್ಕ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಉತ್ತಮ ಕಾರ್ಯನಿರ್ವಹಣೆಯಿಂದಾಗಿ ಈ ಶ್ರೇಯಾಂಕ ಪಡೆಯಲು ಸಾಧ್ಯವಾಗಿದೆ. ದೇಶದ ಎಲ್ಲಾ ಎಸ್ಕಾಂಗಳ ಸೇವೆಯನ್ನು ಪವರ್ ಫೈನಾನ್ಸ್ ಕಾರ್ಪೋರೇಶನ್ ಆಫ್‌ ಇಂಡಿಯಾ ಪ್ರತಿ ವರ್ಷವೂ ಗಮನಿಸಿ ಶ್ರೇಯಾಂಕನೀಡುತ್ತದೆ.

ಸೆಸ್ಕ್ ಉತ್ತಮ ಕಾರ್ಯನಿರ್ವಹಣೆ ಮಾಡಿರುವ ಹಿನ್ನಲೆಯಲ್ಲಿ ಬಿ ಗ್ರೇಡ್ ನಿಂದ ಎ ಗ್ರೇಡ್‌ಗೆ ಉನ್ನತೀಕರಣಗೊಂಡಿದೆ. ಅಲ್ಲದೇ ರಾಷ್ಟ್ರಮಟ್ಟದಲ್ಲಿ 16ನೇ ಶ್ರೇಯಾಂಕವನ್ನು ಸೆಸ್ಕ್‌ ಪಡೆದಿದ್ದು, ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಇದರಿಂದ ಸೆಸ್ಕ್‌ಗೆ ಕೇಂದ್ರ ಮತ್ತು ರಾಜ್ಯದಿಂದ ಅಗತ್ಯ ಅನುದಾನ ಸಿಗುವುದರೊಂದಿಗೆ ಬ್ಯಾಂಕ್ ನಿಂದ ಸಾಲ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು.

ಸಮರ್ಪಕ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆಯ ಪರಿಣಾಮ ವಿದ್ಯುತ್‌ ನಷ್ಟ ತಡೆಯುವಲ್ಲಿಯೂ ಸೆಸ್ಕ್‌ ಪ್ರಗತಿ ಸಾಧಿಸಿದೆ. ಕಳೆದ ಬಾರಿ 10.3ರಷ್ಟಿದ್ದ ವಿದ್ಯುತ್‌ ನಷ್ಟದ ಪ್ರಮಾಣ ಇದೀಗ 9.03ಕ್ಕೆ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇದನ್ನು 7ರಷ್ಟಕ್ಕೆ ಇಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ರಮೇಶ್‌ ತಿಳಿಸಿದರು.

ರೈತರಿಗೆ ನಿರಂತರ ವಿದ್ಯುತ್‌ ಪೂರೈಕೆಗೆ ಆದ್ಯತೆ ನೀಡಲಾಗಿದ್ದು, ಟ್ರಾನ್ಸ್‌ಫಾರ್ಮರ್‌ಗಳ ತ್ವರಿತ ದುರಸ್ತಿ ಮಾಡುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಲಾಗಿದೆ. 23,061 ಅಪಾಯಕಾರಿ ಸ್ಥಳ ಗುರುತಿಸಿ ಸರಿಪಡಿಸಲಾಗಿದೆ ಎಂದು ಹೇಳಿದರು.

ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕರಾದ ಜಿ. ಶೀಲಾ ಅವರು ಮಾತನಾಡಿ,ಸೆಸ್ಕ್ ವತಿಯಿಂದ ಪಿಎಂ ಕುಸುಮ್-ಸಿ ಯೋಜನೆಯಡಿ 500 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಗೆ ಯೋಜನೆ ರೂಪಿಸಲಾಗಿದ್ದು, ಅದಕ್ಕಾಗಿ 110 ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ರಾಜ್ಯ ಸರ್ಕಾರದ ನೆರವಿನಿಂದ ಅಗತ್ಯ ಸರಕಾರಿ ಭೂಮಿ ಸಿಕ್ಕಿದ್ದು, ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿ ಯೋಜನೆ ಅನುಷ್ಠಾನವಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸೆಸ್ಕ್‌ನ ವಿದ್ಯುತ್ ಕಂಬಗಳನ್ನು ಬಳಸಿಕೊಂಡು ಖಾಸಗಿ ಟಿವಿ ಕೇಬಲ್ ಮತ್ತು ಇಂಟರ್‌ನೆಟ್ ಕೇಬಲ್‌ಗಳ ವೈರ್‌ಗಳನ್ನು ಎಳೆಯಲಾಗಿದೆ. ಶುಲ್ಕ ಪಾವತಿಸಿ ಅನುಮತಿ ಪಡೆದವರಿಂದ ಡಿಸೆಂಬರ್ ಅಂತ್ಯಕ್ಕೆ 78.78 ಲಕ್ಷ ರೂ. ಸಂಗ್ರಹವಾಗಿದ್ದು, ಯಾರಾದರೂ ಅನುಮತಿ ಪಡೆಯದೇ ವಿದ್ಯುತ್ ಕಂಬಗಳನ್ನು ಬಳಸುತ್ತಿದ್ದರೆ ಅಂತಹ ಕಂಪನಿಗಳ ಕೇಬಲ್‌ಗಳನ್ನು ತೆರವುಗೊಳಿಸಲಾಗುವುದು ಎಂದು ತಾಂತ್ರಿಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್‌ ರಾಜು ಎಚ್ಚರಿಕೆ ನೀಡಿದರು.

ಸೆಸ್ಕ್‌ ಕಾರ್ಯಕ್ಕೆ “ಎ” ಶ್ರೇಣಿ ರೇಟಿಂಗ್‌ Read More