ಜನರ ಮೃತದೇಹಗಳ ಹೆಸರಲ್ಲೂ ಭ್ರಷ್ಟಚಾರ ನಡೆಸಿದ ಬಿಜೆಪಿನ ದೇವರು ಕ್ಷಮಿಸಲ್ಲ:ಸಿಎಂ

ಸಂಡೂರು: ಬಿಜೆಪಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಮತ್ತು ಆರೋಗ್ಯ ಮಂತ್ರಿ ಶ್ರೀರಾಮುಲು ಇಬ್ಬರೂ ಕೋವಿಡ್ ಸಂದರ್ಭದಲ್ಲಿ ಚೀನಾದಿಂದ ಪಿಪಿಇ ಕಿಟ್ ತರಿಸಿ ಭ್ರಷ್ಟಾಚಾರ ನಡೆಸಿದ್ದಾರೆ ಅವರನ್ನು ಯಾವ ದೇವರೂ ಕ್ಷಮಿಸಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ. ಇದನ್ನು ನ್ಯಾ.ಮೈಕೆಲ್ ಕುನ್ಹಾ ಅವರ ತನಿಖಾ ಆಯೋಗ ಪತ್ತೆ ಹಚ್ಚಿದೆ ಎಂದು ತಿಳಿಸಿದರು.

ಸಂಡೂರು ವಿಧಾನಸಭಾ ಕ್ಷೇತ್ರದ ಮೆಟ್ರಿಕಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಬೃಹತ್ ಜನಸಮಾವೇಶವದಲ್ಲಿ ಸಿಎಂ ಮಾತನಾಡಿದರು.

ಕೋವಿಡ್ ಸಂದರ್ಭದಲ್ಲಿ ಇಡೀ ರಾಜ್ಯದ ಜನತೆ ಭಯ, ಆತಂಕದಲ್ಲಿ ದೇವರ ಪ್ರಾರ್ಥನೆ ಮಾಡುತ್ತಿದ್ದಾಗ ಬಿಜೆಪಿ ಸರ್ಕಾರ ಮತ್ತು ಸಚಿವ ಶ್ರೀರಾಮುಲು ಹಣ ಲೂಟಿ ಮಾಡುವುದರಲ್ಲಿ ಮುಳುಗಿದ್ದರು. ನಮ್ಮ ಜನರ ಮೃತದೇಹಗಳ ಹೆಸರಲ್ಲೂ ಭ್ರಷ್ಟಚಾರ ನಡೆಸಿದ ಬಿಜೆಪಿ ಯವರನ್ನು ಯಾವ ದೇವರೂ ಕ್ಷಮಿಸಲ್ಲ ಎಂದು ಟೀಕಿಸಿದರು.

ಬಿಜೆಪಿ ಶ್ರೀಮಂತರ ಮತ್ತು ಮೇಲ್ವರ್ಗದವರ ಪಕ್ಷ. ಕಾಂಗ್ರೆಸ್ ಜಾರಿ ಮಾಡುವ ಎಲ್ಲಾ ಬಡವರ ಪರವಾದ ಕಾರ್ಯಕ್ರಮಗಳನ್ನು ವಿರೋಧಿಸುತ್ತದೆ. ಅಪಪ್ರಚಾರ ಮಾಡುತ್ತದೆ ಎಂದು ಕಿಡಿಕಾರಿದರು.

ಆಗ ಇಂದಿರಾಗಾಂಧಿಯವರ 20 ಅಂಶಗಳ ಕಾರ್ಯಕ್ರಮಗಳನ್ನು ಬಿಜೆಪಿ ವಿರೋಧಿಸಿ ಅಪಪ್ರಚಾರ ಮಾಡಿತ್ತು. ಈಗ ನಮ್ಮ‌ ಸರ್ಕಾರದ ಐದು ಗ್ಯಾರಂಟಿಗಳನ್ನು ವಿರೋಧಿಸಿ ಅಪಪ್ರಚಾರ ಮಾಡುತ್ತಿದೆ. ಇದು ಬಿಜೆಪಿ ಜಾಯಮಾನ ಎಂದು ಟೀಕಿಸಿದರು.

ಸಂಡೂರಿನಲ್ಲಿರುವ ರಸ್ತೆ, ಶಾಲೆ, ವಸತಿ ಶಾಲೆ, ಅಂಗನವಾಡಿ, ಆಸ್ಪತ್ರೆ, ನೀರು, ನೀರಾವರಿ ಎಲ್ಲವೂ ಆಗಿರುವುದು ಸಂತೋಷ್ ಲಾಡ್ ಮತ್ತು ತುಕಾರಾಮ್ ಅವರ ಅವಧಿಯಲ್ಲಿ ಕಟ್ಟಿದ್ದು, ಬಿಜೆಪಿಯವರು ಕೇವಲ ಸುಳ್ಳು ಹೇಳಿಕೊಂಡು, ಜನರ ನಡುವೆ ದ್ವೇಷ ಬಿತ್ತುತ್ತಾ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮಾತನಾಡಿ,78 ವರ್ಷದ ಸಿದ್ದರಾಮಯ್ಯ ಅವರು 28 ವರ್ಷದ ಯುವಕನ ರೀತಿಯಲ್ಲಿ ದಿನಕ್ಕೆ 12-14 ಗಂಟೆ ಕೆಲಸ ಮಾಡುತ್ತಿದ್ದಾರೆ
ಬೆಂಗಳೂರಿನಲ್ಲಿ ಇದ್ದಾಗಲೂ ದಿನಕ್ಕೆ ಏಳು-ಎಂಟು ಅಧಿಕಾರಿಗಳ ಸಭೆ ನಡೆಸುತ್ತಾರೆ ಎಂದು ಕೊಂಡಾಡಿದರು.

ಮೂರು ದಿನಗಳಿಂದ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಸಂಡೂರು ಕ್ಷೇತ್ರದಲ್ಲೇ , ಸಂಡೂರು ಜನರ ಮನೆ ಬಾಗಿಲಿಗೇ ಬಂದು ಮತ ಕೇಳುತ್ತಿದ್ದಾರೆ. ನಮ್ಮ ತಂದೆ ಸಮಾನರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನ್ನಪೂರ್ಣಮ್ಮ ಅವರಿಗೆ ಆಶೀರ್ವಾದ ಮಾಡಿ ಅಂತ ಕೇಳುತ್ತಿದ್ದಾರೆ. ಇವರ ಮಾತು ನೆರವೇರಿಸಿ ಅನ್ನಪೂರ್ಣಮ್ಮ ಅವರನ್ನು ಗೆಲ್ಲಿಸಿ ಎಂದು ಲಾಡ್ ಮನವಿ ಮಾಡಿದರು.

ಜನರ ಮೃತದೇಹಗಳ ಹೆಸರಲ್ಲೂ ಭ್ರಷ್ಟಚಾರ ನಡೆಸಿದ ಬಿಜೆಪಿನ ದೇವರು ಕ್ಷಮಿಸಲ್ಲ:ಸಿಎಂ Read More

ಹಣ ಬಲ, ತೋಳ್ ಬಲದಲ್ಲಿ ಸಂಡೂರು ವಶಪಡಿಸಿಕೊಳ್ಳಲು ಬರುತ್ತಾರೆ ಎಚ್ಚರ-ಸಿಎಂ

ಸಂಡೂರು: ಹಣ ಬಲ, ತೋಳು ಬಲದಲ್ಲಿ ಸಂಡೂರನ್ನು ವಶಪಡಿಸಿಕೊಳ್ಳಲು ಬರ್ತಾರೆ ಎಚ್ಚರವಿರಿ,ಬಿಜೆಪಿ ಸೋಲಿಸಿ ಬಳ್ಳಾರಿ ಉಳಿಸಿ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

ಸಂಡೂರು ವಿಧಾನಸಭಾ ಕ್ಷೇತ್ರದ ಬನ್ನಿಹಟ್ಟಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರ ಪರ ಪ್ರಚಾರ ಸಭೆಯಲ್ಲಿ ಸಿಎಂ ಮಾತನಾಡಿದರು.

ನಾನು ಬಳ್ಳಾರಿಗೆ ಬಂದಾಗ ರೆಡ್ಡಿ ಬ್ರದರ್ಸ್ ಮತ್ತು ಶ್ರೀರಾಮುಲು ಭಾಷಣ ಮಾಡೋಕೆ ಜಾಗ ಕೊಡದೆ ಅವಮಾನ ಮಾಡಿದ್ದರು
ದೇವಸ್ಥಾನದ ಬಾಗಿಲಲ್ಲಿ ಒಬ್ಬನೆ ನಿಂತು ಭಾಷಣ ಮಾಡಿ ಹೋಗಿದ್ದೆ ಎಂದು ಸ್ಮರಿಸಿದರು.

ಯಾರ ಮನೆಗೆ ಹೋಗಿ ಕುಡಿಯೋಕೆ ನೀರು ಕೇಳಿದರೂ ನನಗೆ ನೀರು ಕೊಡಲು ಜನ ಹೆದರುತ್ತಿದ್ದರು ಎಂದು ರೆಡ್ಡಿಗಳ ಅವಧಿಯ ಘಟನೆಗಳನ್ನು ಉಲ್ಲೇಖಿಸಿ ದಬ್ಬಾಳಿಕೆ, ದೌರ್ಜನ್ಯದ ದಿನಗಳನ್ನು ನೆನೆದರು.

ಅಕ್ರಮ ಗಣಿಗಾರಿಕೆ ವಿರುದ್ಧ, ರೆಡ್ಡಿ ಬ್ರದರ್ಸ್ ಬಳ್ಳಾರಿಯನ್ನು ಹಾಳು ಮಾಡಲು ಬಿಡಬಾರದು ಎಂದು ನಾನು ಬೆಂಗಳೂರಿನಿಂದ ಪಾದಯಾತ್ರೆ ಮಾಡಿದೆ. ಬಳ್ಳಾರಿ ಜನರನ್ನು ಭಯಮುಕ್ತಗೊಳಿಸಿದ್ದು ಕಾಂಗ್ರೆಸ್ ಎಂದು ಸಿದ್ದರಾಮಯ್ಯ ಹೇಳಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಜಿಂದಾಲ್ ಗೆ ಕಾಲಿಟ್ಟರೂ ಜಿಲ್ಲಾ ಮಟ್ಟದ ಅಧಿಕಾರಿಗಳ್ಯರೂ ಯಡಿಯೂರಪ್ಪ ಅವರನ್ನು ಕಾಣಲು ಬರಲಿಲ್ಲ,ಆ ಮಟ್ಟಕ್ಕೆ ಅಧಿಕಾರಿಗಳಲ್ಲಿ ಭಯ ಸೃಷ್ಟಿ ಮಾಡಿದ್ದರು ಎಂದು ರೆಡ್ಡಿಗಳ ವಿರುದ್ದ ವಾಗ್ದಾಳಿ ನಡೆಸಿದರು.

ಮತ್ತೆ ಏನಾದರೂ ಜನಾರ್ಧನ ರೆಡ್ಡಿ ಪಟಾಲಂ ಬಳ್ಳಾರಿಯಲ್ಲಿ ಬೆಳೆದರೆ ಮತ್ತೆ ಅದೇ ಭೀತಿ, ಭಯದಲ್ಲಿ ಬಳ್ಳಾರಿ ನರಳಬೇಕಾಗುತ್ತದೆ. ಆದ್ದರಿಂದ ಇದಕ್ಕೆ ಅವಕಾಶ ಕೊಡಬೇಡಿ. ಬಿಜೆಪಿಯನ್ನು ಸೋಲಿಸಿ ಬಳ್ಳಾರಿಯನ್ನು ಉಳಿಸಿ ಎಂದು ಸಿಎಂ ಕರೆ ನೀಡಿದರು.

ಸಂಡೂರಿನಲ್ಲಿ ರಸ್ತೆ, ನೀರು, ಶಾಲೆ, ಅಂಗನವಾಡಿ, ಆಸ್ಪತ್ರೆ, ಮೊಬೈಲ್ ಕ್ಲೀನಿಕ್ ಗಳು ಸೇರಿ ಏನೇನು ಅಭಿವೃದ್ಧಿ ಆಗಿದೆಯೋ ಅದೆಲ್ಲವೂ ಸಂತೋಷ್ ಲಾಡ್ ಮತ್ತು ತುಕಾರಾಮ್ ಅವರ ಅವಧಿಯಲ್ಲಿ ಮಾತ್ರ. ಬಿಜೆಪಿ ಅವಧಿಯಲ್ಲಿ ಲೂಟಿ ಮಾಡಿದ್ದು ಬಿಟ್ಟರೆ ಬೇರೇನೂ ಇಲ್ಲ ಎಂದು ಆರೋಪಿಸಿದರು.

ಅನ್ನಪೂರ್ಣಮ್ಮ ಗೆದ್ದರೆ ನಾನೇ ಗೆದ್ದ ಹಾಗೆ‌. ಅನ್ನಪೂರ್ಣಮ್ಮ ಅವರಿಗೆ ಬೀಳುವ ಪ್ರತೀ ಓಟು ನನಗೆ, ಸಂತೋಷ್ ಲಾಡ್ ಅವರಿಗೆ ಹಾಕಿದಂತೆ ಎಂದು ಸಿಎಂ ಹೇಳಿದರು.

ಹಣ ಬಲ, ತೋಳ್ ಬಲದಲ್ಲಿ ಸಂಡೂರು ವಶಪಡಿಸಿಕೊಳ್ಳಲು ಬರುತ್ತಾರೆ ಎಚ್ಚರ-ಸಿಎಂ Read More

ಮಹಾರಾಷ್ಟ್ರದ ಜನರನ್ನು ಬಿಜೆಪಿ ಸುಳ್ಳುಗಳ ಮೂಲಕ ವಂಚಿಸುತ್ತಿದೆ: ಸಿ.ಎಂ

ಸಂಡೂರು: ಮಹಾರಾಷ್ಟ್ರದ ಜನರನ್ನು ಬಿಜೆಪಿ ಸರಣಿ ಸುಳ್ಳುಗಳ ಮೂಲಕ ವಂಚಿಸುತ್ತಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸಂಡೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಿಎಂ,ಮಹಾರಾಷ್ಟ್ರದ ಬಿಜೆಪಿಯು ಕರ್ನಾಟಕ ಸರ್ಕಾರ ವಾದಾ ಕಿಯಾ: ಧೋಖಾ ದಿಯಾ ಎಂದು ಸುಳ್ಳು ಜಾಹಿರಾತು ನೀಡಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆ ನೀಡಿತ್ತು. ಭರವಸೆ ಈಡೇರಿಸದೇ, ಯೋಜನೆಯನ್ನೇ ಇನ್ನೂ ಆರಂಭಿಸದೆ ವಂಚಿಸಿದೆ ಎಂಬ ಅರ್ಥದ ಪರಮ ಸುಳ್ಳಿನ ಜಾಹಿರಾತುಗಳನ್ನು ಪುಟಗಟ್ಟಲೆ ನೀಡಿದೆ ಎಂದು ಕಿಡಿಕಾರಿದರು.

ಸುಳ್ಳಿನ ಜಾಹಿರಾತನ್ನು ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ ಅವರು ಅವರದೇ ಶೈಲಿಯಲ್ಲಿ ವಾದಾ ದಿಯಾ ಪೂರಾ ಕಿಯಾ ಎಂದು ತಿರುಗೇಟು ನೀಡಿದರು.

ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು. ರಾಜ್ಯದಲ್ಲಿ ಶಕ್ತಿ ಯೋಜನೆ ಸೇರಿದಂತೆ ಐದಕ್ಕೆ ಐದೂ ಗ್ಯಾರಂಟಿಗಳು ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ. ಗೃಹಲಕ್ಷ್ಮಿಯ ಮುಂದಿನ ಕಂತಿನ ಹಣ ಒಂದೆರಡು ದಿನಗಳಲ್ಲೇ ಬಿಡುಗಡೆ ಕೂಡ ಆಗುತ್ತದೆ. ಆದರೆ ಬಿಜೆಪಿಯವರು ಸುಳ್ಳುಗಳನ್ನು ಹರಡಿಸುತ್ತಾ, ಸುಳ್ಳುಗಳನ್ನು ಹರಡುವುದಕ್ಕೇ ಕೋಟಿ ಕೋಟಿ ಖರ್ಚು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದೇಶದಲ್ಲಿರುವ ಕಪ್ಪುಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಕೊಡ್ತೀವಿ ಅಂತ ಹೇಳಿದ್ರಲ್ಲಾ ಮೋದಿಯವರೇ ಕೊಟ್ರಾ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ್ರಲ್ಲಾ ಉದ್ಯೋಗ ಸೃಷ್ಟಿ ಮಾಡಿದ್ರಾ ಎಲ್ರೀ ಸ್ವಾಮಿ ನಿಮ್ಮ ಅಚ್ಚೆ ದಿನ್, ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದ್ರಲ್ಲಾ ಮಾಡಿದ್ರಾ ಮೋದಿ ಪ್ರಧಾನಿ ಆಗುವ ಮೊದಲು ದೇಶದ ಸಾಲ ಇದ್ದದ್ದು 54 ಲಕ್ಷ ಕೋಟಿ ಮಾತ್ರ. ಈಗ ನಿಮ್ಮ ಅವಧಿಯಲ್ಲಿ ದೇಶದ ಸಾಲವನ್ನು 185 ಲಕ್ಷ ಕೋಟಿಗೆ ಏರಿಸಿದ್ದೀರಿ. ಇದೇನಾ ಸ್ವಾಮಿ ನಿಮ್ಮ ಅಚ್ಚೆ ದಿನ್ ಎಂದು ಸಿದ್ದರಾಮಯ್ಯ ವ್ಯಂಗ್ಯವಾಗಿ ಪ್ರಶ್ನಿಸಿದರು.

ಮಹಾರಾಷ್ಟ್ರದ ಜನರನ್ನು ಬಿಜೆಪಿ ಸುಳ್ಳುಗಳ ಮೂಲಕ ವಂಚಿಸುತ್ತಿದೆ: ಸಿ.ಎಂ Read More

ಶಿಗ್ಗಾವಿಗೆ ಬೊಮ್ಮಾಯಿ ಪುತ್ರ ಅಭ್ಯರ್ಥಿ

ನವದೆಹಲಿ: ರಾಜ್ಯವಷ್ಟೇ ಅಲ್ಲಾ ಇಡೀ ದೇಶದಲ್ಲೆ ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ‌ ಹೊರತುಪಡಿಸಿ ಇನ್ನೆರಡು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿದೆ.

ಶಿಗ್ಗಾವಿಯಲ್ಲಿ ಮಾಜಿ ಮುಖ್ಯ ಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರ ಪುತ್ರ ಭರತ್‌ ಬೊಮ್ಮಾಯಿ ಅವರಿಗೆ ಹೈಕಮಾಂಡ್ ಟಿಕೆಟ್ ಘೋಷಿಸಿದೆ.

ಬಳ್ಳಾರಿಯ ಸಂಡೂರಿಗೆ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ‌ಅವರ ಆಪ್ತನಿಗೆ ಮಣೆ ಹಾಕಲಾಗಿದೆ.ಬಂಗಾರು ಹನುಮಂತು ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ಇದುವರೆಗೂ ಅಂತಿಮಗೊಳಿಸದೆ ಬಿಜೆಪಿ ಕಾಯ್ದು ನೋಡುವ ತಂತ್ರ ಅನುಸರಿಸಿದೆ.

ಶಿಗ್ಗಾವಿಗೆ ಬೊಮ್ಮಾಯಿ ಪುತ್ರ ಅಭ್ಯರ್ಥಿ Read More

ತುಕಾರಾಮ್ ಅಂದರೆ ಅಭಿವೃದ್ಧಿ- ಸಿ.ಎಂ ಮೆಚ್ಚುಗೆ

ಸಂಡೂರು: ಈ.ತುಕಾರಾಮ್ ಅವರು ಶಾಸಕರಾದ ಮೇಲೆ 1200 ಕೋಟಿ ಅನುದಾನವನ್ನು ಸಂಡೂರು ಜನತೆಗಾಗಿ ತಂದಿದ್ದಾರೆ. ಅಭಿವೃದ್ಧಿ ಎಂದರೆ ತುಕಾರಾಮ್ ಎಂದು ಸಿ.ಎಂ.ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಡೂರು ತಾಲ್ಲೂಕಿನ ಸಾಧನಾ ಸಮಾವೇಶವನ್ನು ಉದ್ಘಾಟಿಸಿ, ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಪೂರ್ಣಗೊಂಡಿರುವ ಸುಮಾರು 400 ಕೋಟಿಗೂ ಅಧಿಕ ಮೊತ್ತದ ಯೋಜನೆಗಳನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.

ಸಂಡೂರಿನಲ್ಲಿ 12 ಸಾವಿರ ಮನೆಗಳನ್ನು ಕಟ್ಟಿ ಕ್ಷೇತ್ರದ ಜನರಿಗೆ ಹಂಚಿಕೆ ಮಾಡಿರುವುದರ ಶ್ರೇಯಸ್ಸು ಸಂತೋಷ್ ಲಾಡ್- ಈ.ತುಕಾರಾಮ್ ಜೋಡಿಗೆ ಸಲ್ಲಬೇಕು ಎಂದು ಶ್ಲಾಘಿಸಿದ ಸಿಎಂ,ನನ್ನ ವಿರುದ್ಧ ಷಡ್ಯಂತ್ರ, ಪಿತೂರಿ ನಡೆಸುತ್ತಿರುವ ಬಿಜೆಪಿಯನ್ನು ಉಪ ಚುನಾವಣೆಯಲ್ಲಿ ಸೋಲಿಸಿ ಪಾಠ ಕಲಿಸಿ ಎಂದು ಕರೆ ನೀಡಿದರು.

ಈ.ತುಕಾರಾಮ್ ಅವರು ನನ್ನ ಬಲವಂತಕ್ಕೆ, ಪಕ್ಷದ ಮಾತಿಗೆ ಬೆಲೆ ಕೊಟ್ಟು ಲೋಕಸಭೆಗೆ ಸ್ಪರ್ಧಿಸಿದರು. ಈ.ತುಕರಾಮ್ ಅವರು ಸಂಡೂರು ಜನತೆಯ ಮೇಲೆ ಬಹಳ ಪ್ರೀತಿ, ವಿಶ್ವಾಸ ಇಟ್ಟುಕೊಂಡಿದ್ದಾರೆ. ಈ.ತುಕಾರಾಮ್ ಅವರಂತಹ ಕಾಯಕ ನಾಯಕ ನಿಮಗೆ ಬೇರೆಲ್ಲೂ ಸಿಗುವುದಿಲ್ಲ. ಹೀಗಾಗಿ ಸಂಡೂರು ಉಪಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನಿಮ್ಮ ಆಶೀರ್ವಾದ ಹೀಗೇ ಮುಂದುವರೆಯಲಿ ಎಂದು ಸಿಎಂ ವಿನಂತಿಸಿದರು.

ಸಂಡೂರಿನ ಜನರ ತೆರಿಗೆ ಹಣಕ್ಕೆ, ರಾಜ್ಯದ ಜನರ ತೆರಿಗೆ ಹಣಕ್ಕೆ ಕೇಂದ್ರ ಸರ್ಕಾರ ನಿರಂರವಾಗಿ ವಂಚಿಸುತ್ತಿದೆ. ನಿಮಗೆ, ನಮಗೆ ಕೇಂದ್ರದಿಂದ ಬರಬೇಕಾದ ಹಣವನ್ನು ಕೊಡಿ ಎಂದು ಮೋದಿಗೆ ಕೇಳುವ ಧೈರ್ಯ ಬಿಜೆಪಿಗೂ ಇಲ್ಲ, ವಿಜಯೇಂದ್ರಗೂ ಇಲ್ಲ ಇದು ಸಂಡೂರಿನ ಜನತೆಗೆ, ರಾಜ್ಯದ ಜನತೆಗೆ ಬಗೆದ ದ್ರೋಹ ಅಲ್ಲವೇ ಎಂದು ಸಿಎಂ ಪ್ರಶ್ನಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, ಸಚಿವರಾದ ಸಂತೋಷ್ ಲಾಡ್, ಸತೀಶ್ ಜಾರಕಿಹೊಳಿ,ಸಂಸದ ಈ.ತುಕಾರಾಂ, ಶಾಸಕರುಗಳಾದ ಲತಾ ಮಲ್ಲಿಕಾರ್ಜುನ್, ಕಂಪ್ಲಿ ಗಣೇಶ್, ಶ್ರೀನಿವಾಸ್, ನಾಗರಾಜ್, ನಾರಾ ಭರತ್ ರೆಡ್ಡಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಧ್ಯಕ್ಷ ಮೆಹರೂಜ್ ಖಾನ್, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್, ಹಿರಿಯ ನಾಯಕರಾದ ಅಲ್ಲಂ ವೀರಭದ್ರಪ್ಪ, ಲಿಡ್ಕರ್ ಅಧ್ಯಕ್ಷ ನಾಗರಾಜ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ತುಕಾರಾಮ್ ಅಂದರೆ ಅಭಿವೃದ್ಧಿ- ಸಿ.ಎಂ ಮೆಚ್ಚುಗೆ Read More