ಎಸ್‌.ಎಲ್‌. ಭೈರಪ್ಪ ನಿವಾಸಕ್ಕೆ ಯದುವೀರ್‌ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

ಮೈಸೂರು: ಇತ್ತೀಚೆಗೆ ನಿಧನರಾದ ಸಾರಸ್ವತ ಲೋಕದ ಧ್ರುವತಾರೆ ಡಾ. ಎಸ್‌.ಎಲ್‌. ಭೈರಪ್ಪನವರ ನಿವಾಸಕ್ಕೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಯ ಭೇಟಿ ನೀಡಿ, ಪತ್ನಿ, ಪುತ್ರರಿಗೆ ಸಾಂತ್ವನ ಹೇಳಿದರು.

ಮೈಸೂರಿನ ಕುವೆಂಪು ನಗರದಲ್ಲಿರುವ ನಿವಾಸಕ್ಕೆ ಸೋಮವಾರ ಭೇಟಿ ನೀಡಿದ ಯದುವೀರ್‌, ಭೈರಪ್ಪ ಅವರ ಪತ್ನಿ ಸರಸ್ವತಮ್ಮ ಹಾಗೂ ಪುತ್ರ ರವಿಶಂಕರ್‌ ಅವರೊಂದಿಗೆ ಮಾತುಕತೆ ನಡೆಸಿ, ಸಾಂತ್ವನ ಹೇಳಿದರು.

ದಸರಾ ಹಾಗೂ ಕೆಲವು ಧಾರ್ಮಿಕ ವಿಧಿ-ವಿಧಾನಗಳು ನಡೆಯುತ್ತಿದ್ದ ಕಾರಣ ನಮ್ಮ ಮೈಸೂರಿನ ಸಾಹಿತ್ಯ ರತ್ನ ಡಾ. ಎಸ್‌.ಎಲ್‌. ಭೈರಪ್ಪ ಅವರ ನಿವಾಸಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಈಗ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿದ್ದೇವೆ ಎಂದು ಯದುವೀರ್ ಹೇಳಿದ್ದಾರೆ.

ಕರ್ನಾಟಕಕ್ಕೆ ಮತ್ತು ವಿಶೇಷವಾಗಿ ಮೈಸೂರು ಭಾಗಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರಕಿಸಿಕೊಟ್ಟಿರುವ ಎಸ್‌.ಎಲ್‌. ಭೈರಪ್ಪನವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದೇನೆ ಎಂದು ಯದುವೀರ್‌ ತಿಳಿಸಿದ್ದಾರೆ.

ಮೈಸೂರಿನ ನಗರ ಕೇಂದ್ರ ಗ್ರಂಥಾಲಯಕ್ಕೆ ಡಾ. ಎಸ್‌.ಎಲ್‌. ಭೈರಪ್ಪ ಅವರ ಹೆಸರು ಮರು ನಾಮಕರಣ ಮಾಡಲು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ,
ಗ್ರಂಥಾಲಯದ ಆವರಣದಲ್ಲಿ ಭೈರಪ್ಪನವರ ಜೀವನ ಚರಿತ್ರೆ, ಸಾಹಿತ್ಯ ಕೃತಿಗಳನ್ನು ಪ್ರತಿಬಿಂಬಿಸುವ ಶಾಶ್ವತ ಸ್ಮಾರಕವನ್ನು ನಿರ್ಮಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿನಂತಿಸಿದ್ದೇವೆ ಎಂದು ಭೈರಪ್ಪನವರ ಪತ್ನಿ ಹಾಗೂ ಪುತ್ರರಿಗೆ ಮಾಹಿತಿ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಎಸ್‌.ಎಲ್‌. ಭೈರಪ್ಪ ಅವರ ಅಗಲಿಕೆ ಇಡೀ ನಾಡಿಗೆ ತೀವ್ರ ನೋವುಂಟು ಮಾಡಿದೆ. ಅವರು ನಮ್ಮನ್ನು ಭೌತಿಕವಾಗಿ ಅಗಲಿದ್ದರೂ ಅವರ ಅಕ್ಷರಗಳ ಮೂಲಕ ಅಮರರಾಗಿದ್ದಾರೆ ಎಂದು ಸಂಸದ ಯದುವೀರ್‌ ಒಡೆಯರ್‌ ತಿಳಿಸಿದ್ದಾರೆ.

ಎಸ್‌.ಎಲ್‌. ಭೈರಪ್ಪ ನಿವಾಸಕ್ಕೆ ಯದುವೀರ್‌ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ Read More

ಕನ್ನಡ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸಿದ ಮಹನೀಯರು ಭೈರಪ್ಪ-ಕಡಕೊಳ ಜಗದೀಶ್

ಮೈಸೂರು: ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಮಹನೀಯರಲ್ಲಿ ಒಬ್ಬರಾದ ಎಸ್.ಎಲ್. ಭೈರಪ್ಪ ಅವರ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ಹಾನಿ ಉಂಟಾಗಿದೆ ಎಂದು
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಪರಿಷತ್ ಜಿಲ್ಲಾಧ್ಯಕ್ಷ ಕಡಕೋಳ ಜಗದೀಶ್
ಹೇಳಿದರು.

ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಖ್ಯಾತ‌ಸಾಹಿತಿಗಳು ಮಹಾನ್ ವಾಗ್ಮಿ‌‌ ಡಾ.ಎಸ್.ಎಲ್ ಬೈರಪ್ಪನವರಿಗೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಪರಿಷತ್ ವತಿಯಿಂದ ಸಂತಾಪ ಸೂಚಿಸಿದ ವೇಳೆ ಅಪರೂಪದ ಫೋಟ್ ಹಾಕಿ ಸ್ಮರಿಸಿ ಜಗದೀಶ್ ಮಾತನಾಡಿದ್ದಾರೆ.

ಕನ್ನಡ ಸಾರಸ್ವತ ಲೋಕಕ್ಕೆ ಮೊದಲ ಸರಸ್ವತಿ ಸಮ್ಮಾನ್ ಗೌರವ ತಂದು ಕೊಟ್ಟ ಹೆಗ್ಗಳಿಕೆ ಅವರದ್ದು, ಭೈರಪ್ಪನವರ ಕಾದಂಬರಿಗಳು ಭಾರತದ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿವೆ. ಭಾರತ ಅಷ್ಟೇ ಅಲ್ಲ, ವಿದೇಶಗಳಲ್ಲೂ ಅವರ ಕಾದಂಬರಿಗಳ ಕುರಿತಾದ ವಿಚಾರಗೋಷ್ಠಿಗಳು ಆಯೋಜಿಸಲ್ಪಟ್ಟಿರುವುದು ಅವರ ಕಾದಂಬರಿಗಳಿಗೆ ಇರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಜನಪರ ಕಾಳಜಿಯನ್ನೂ ಹೊಂದಿದ್ದ ಅವರು, ಹುಟ್ಟಿದ ಊರು ಸಂತೆ ಶಿವರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸಫಲರಾಗಿದ್ದರು ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ 2019ರ ದಸರಾ ಉದ್ಘಾಟರಾಗಿ ಆಯ್ಕೆಯಾದ ಸಂದರ್ಭದಲ್ಲಿ ಡಾ ಎಸ್ ಎಲ್ ಭೈರಪ್ಪ ಅವರಿಗೆ ಮೈಸೂರು ಪಾಕ್ ತಿನ್ನಿಸಿದ ಸಂತೋಷದ ಕ್ಷಣವನ್ನು ಹಂಚಿಕೊಳ್ಳಲಾಯಿತು‌.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಜಯಸಿಂಹ ಶ್ರೀಧರ್, ಚಕ್ರಪಾಣಿ, ತೇಜೇಶ್ ಲೋಕೇಶ್ ಗೌಡ, ರಾಕೇಶ್, ಶ್ರೀನಿವಾಸ್ ರಮೇಶ್ ಮತ್ತಿತರರು ಬೈರಪ್ಪ ಅವರನ್ನು ಭೇಟಿಯಾದ ಸಂದರ್ಭದ ಫೋಟೊ ಶೇರ್ ಮಾಡಿ ಮಹಾನ್ ಸಾಹಿತಿಗೆ ನಮನ ಸಲ್ಲಿಸಿದ್ದಾರೆ.

ಡಾ. ಎಸ್.ಎಲ್. ಭೈರಪ್ಪನವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಾಣ ಮಾಡುವ ಕುರಿತು ಘೋಷಣೆ ಮಾಡಿದ ಕರ್ನಾಟಕ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಮುದಾಯದ ಪರವಾಗಿ ಧನ್ಯವಾದ ಸಲ್ಲಿಸಿದ್ದಾರೆ‌.

ಕನ್ನಡ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸಿದ ಮಹನೀಯರು ಭೈರಪ್ಪ-ಕಡಕೊಳ ಜಗದೀಶ್ Read More

ಮೈಸೂರಿನಲ್ಲಿ ಎಸ್.ಎಲ್.ಬೈರಪ್ಪನವರ ಸ್ಮಾರಕ-ಸಿದ್ದರಾಮಯ್ಯ

ಬೆಂಗಳೂರು: ಪದ್ಮಭೂಷಣ ಎಸ್.ಎಲ್ ಬೈರಪ್ಪನವರ ನಿಧನದಿಂದ ಸಾರಸ್ವತ ಲೋಕ ಬಹಳ ಬಡವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವುಕರಾಗಿ ನುಡಿದರು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪದ್ಮಭೂಷಣ ಹಿರಿಯ ಸಾಹಿತಿ ಎಸ್.ಎಲ್.ಬೈರಪ್ಪನವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮಾತನಾಡಿದ ಸಿಎಂ,ಬೈರಪ್ಪನವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

ಎಸ್.ಎಲ್ ಬೈರಪ್ಪನವರು ಸುಮಾರು 25 ಕಾದಂಬರಿಗಳನ್ನು ಬರೆದಿದ್ದು, ಮೈಸೂರಿನಲ್ಲಿಯೇ ವಿದ್ಯಾಭ್ಯಾಸ ನಡೆಸಿದ ಬೈರಪ್ಪನವರಿಗೆ ಮೈಸೂರು ಕರ್ಮಸ್ಥಳ, ಅವರ ಕಾದಂಬರಿಗಳು 40 ಭಾಷೆಗಳಿಗೆ ತರ್ಜುಮೆಯಾಗಿದ್ದು, ಇಷ್ಟು ಸಂಖ್ಯೆಯಲ್ಲಿ ಸಾಹಿತಿಯೊಬ್ಬರ ಕೃತಿಗಳು ತರ್ಜುಮೆಯಾಗಿರುವುದು ಅಪರೂಪ ಎಂದು ಬಣ್ಣಿಸಿದರು.

ಅವರು ವಿವಿಧ ಭಾಷೆಗಳ ಓದುಗರನ್ನು ಸಂಪಾದಿಸಿದ್ದರು. ಸಣ್ಣ ಗ್ರಾಮವೊಂದರಲ್ಲಿ ಜನಿಸಿದ ಬೈರಪ್ಪನವರು , ಫಿಲಾಸಫಿಯನ್ನು ಓದಿದ್ದರೂ, ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡವರು ಎಂದು ಸಿಎಂ ಹೇಳಿದರು.

ಬೋಧನಾ ವೃತ್ತಿಯಲ್ಲಿದ್ದುಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನೂ ತೊಡಗಿಸಿಕೊಂಡಿದ್ದರು. ಕಾದಂಬರಿಗಳನ್ನು ಆತ್ಮತೃಪ್ತಿಗಾಗಿ ಬರೆಯುತ್ತಿದ್ದ ಅವರ ಕೃತಿಗಳು ಜಗತ್ಪ್ರಸಿದ್ಧವಾಗಿದ್ದವು. ನಾನು ಅವರ ಕೆಲವೊಂದು ಕಾದಂಬರಿಗಳನ್ನು ಓದಿದ್ದೇನೆ. ಬದುಕಿನ ಅನುಭವಗಳನ್ನಾಧರಿಸಿ ಬರೆಯುವ ಸಾಹಿತಿ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ, ಅವರ ಕುಟುಂಬದವರು, ಸಾಹಿತ್ಯಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಿದ್ದರಾಮಯ್ಯ ಪ್ರಾರ್ಥಿಸಿದರು‌.

ಬೈರಪ್ಪನವರೊಂದಿಗೆ ತಮ್ಮ ಒಡನಾಟದ ಬಗ್ಗೆ ನೆನಪು ಮಾಡಿಕೊಂಡ ಸಿಎಂ, ಸಾಹಿತ್ಯ ಹಾಗೂ ಸ್ನೇಹ ಬೇರೆಯಾಗಿದ್ದು, ನಮ್ಮ ದೃಷ್ಟಿಕೋನಗಳು ಬೇರೆಯಾಗಿದ್ದರೂ, ಉತ್ತಮ ಬಾಂಧವ್ಯವಿತ್ತು ಎಂದು ಹೇಳಿದರು.

ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿರುವ ಬೈರಪ್ಪನವರು ನಾಡು ಕಂಡ ಶ್ರೇಷ್ಠ ಸಾಹಿತಿಗಳಾಗಿದ್ದರು. ಯಾವುದೇ ಪ್ರಶಸ್ತಿಗೂ ಹಂಬಲಿಸದ ಬೈರಪ್ಪನವರಿಗೆ ಅವರ ಸಾಹಿತ್ಯದ ಕೊಡುಗೆಯನ್ನು ಪರಿಗಣಿಸಿ, ಕೇಂದ್ರ ಸರ್ಕಾರ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿದ್ದರೆ ಉತ್ತಮವಾಗಿತ್ತು ಎಂದು ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.

ಮೈಸೂರಿನಲ್ಲಿ ಎಸ್.ಎಲ್.ಬೈರಪ್ಪನವರ ಸ್ಮಾರಕ-ಸಿದ್ದರಾಮಯ್ಯ Read More

ಡಾ. ಎಸ್ ಎಲ್ ಭೈರಪ್ಪ ಅವರಿಗೆ ವಿವಿಧ ಸಂಘಟನೆಗಳಿಂದ ಸಂತಾಪ

ಮೈಸೂರು: ಬುಧವಾರ ನೀಧನರಾದ ಎಸ್.ಎಲ್.ಬೈರಪ್ಪ ಅವರಿಗೆ ವಿವಿಧ ಸಂಘಟನೆಗಳಿಂದ ಸಂತಾಪ ಸೂಚಿಸಲಾಯಿತು.

ನಗರದ ಚಾಮುಂಡಿಪುರಂ ವೃತ್ತದಲ್ಲಿ ಅಪೂರ್ವ ಸ್ನೇಹ ಬಳಗ, ಜನಮನ ವೇದಿಕೆ, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರ ವತಿಯಿಂದ ಸಂತಾಪ ಸೂಚಕ ಸಭೆ ಹಮ್ಮಿಕೊಳ್ಳಲಾಯಿತು

ಖ್ಯಾತ ಸಾಹಿತಿಗಳು, ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಡಾ. ಎಸ್.ಎಲ್. ಭೈರಪ್ಪರವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು ಎಂದು ಭಾಗವಹಿಸಿದ್ದವರೆಲ್ಲ ತೀವ್ರ ದುಃಖ ವ್ಯಕ್ತಪಡಿಸಿದರು.

ಬೈರಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ
ಅವರ ಭಾವಚಿತ್ರ ಹಿಡಿದು
ಮೇಣದಬತ್ತಿ ಬೆಳಗಿಸಿ,ಶಾಂತಿ ಮಂತ್ರ ಜಪಿಸಿ
ಸಂತಾಪ ಸೂಚಿಸಿದರು.

ಸಂತಾಪ ಸಭೆಯಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ ಪ್ರಕಾಶ್, ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಮ. ವಿ ರಾಮಪ್ರಸಾದ್, ಎಂ. ಡಿ ಪಾರ್ಥಸಾರಥಿ, ಜೋಗಿ ಮಂಜು, ಮೂಡ ಮಾಜಿ ಸದಸ್ಯರಾದ ಲಕ್ಷ್ಮೀದೇವಿ, ಜಗದೀಶ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಸಿ ಎಸ್ ಚಂದ್ರಶೇಖರ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ರವಿಶಂಕರ್, ಸುಚೇಂದ್ರ, ಎಸ್ ಎನ್ ರಾಜೇಶ್,
ಮಂಜುನಾಥ್, ನಿರಂಜನ್, ಧರ್ಮೇಂದ್ರ, ಅರವಿಂದ, ಶಿವಲಿಂಗ ಆಚಾರ್ ಮತ್ತಿತರರು ಬೈರಪ್ಪ ನಿಧನಕ್ಕೆ ದುಃಖ ವ್ಯಕ್ತಪಡಿಸಿದರು.

ಡಾ. ಎಸ್ ಎಲ್ ಭೈರಪ್ಪ ಅವರಿಗೆ ವಿವಿಧ ಸಂಘಟನೆಗಳಿಂದ ಸಂತಾಪ Read More

ಕಳಚಿದ ಸಾಹಿತ್ಯ ಲೋಕದ ಮಹಾನ್ ಕೊಂಡಿ:ಎಸ್.ಎಲ್ ಬೈರಪ್ಪ ವಿಧಿವಶ

ಬೆಂಗಳೂರು: ಸರಸ್ವತಿ ಸಮ್ಮಾನ್‌ ಪುರಸ್ಕೃತ ಸಾಹಿತಿ ಎಸ್‌.ಎಲ್‌ ಭೈರಪ್ಪ ಅವರು ವಿಧಿವಶರಾಗಿದ್ದು,ಕನ್ನಡ ಸಾಹಿತ್ಯ ಲೋಕದ ಮಹಾನ್ ಕೊಂಡಿ ಕಳಚಿದಂತಾಗಿದೆ.

ಭೈರಪ್ಪ ಅವರು ಹೃದಯಸ್ತಂಭನದಿಂದ ಬುಧವಾರ ಮಧ್ಯಾಹ್ನ 2.30ಕ್ಕೆ ರಾಷ್ಟ್ರೋತ್ತಾನ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ‌ 94 ವರ್ಷಗಳಾಗಿತ್ತು.

ಅವರು ಕನ್ನಡ ಭಾಷೆಯಲ್ಲಿ ಬರೆದಿರುವ ಅನೇಕ ಕಾದಂಬರಿಗಳು ಅತಿ ಹೆಚ್ಚು ಪ್ರಸಿದ್ದಿ ಪಡೆದಿವೆ.ಜತೆಗೆ ಭಾಷಣ ಕೂಡಾ ಚುರುಕು ಮುಟ್ಟಿಸುವಂತೆ ಇರುತ್ತಿತ್ತು.

ಅವರ ಅನೇಕ ಕೃತಿಗಳು ಇಂಗ್ಲಿಷ್‌ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಸಾಹಿತ್ಯವಲಯದಲ್ಲಿ ಚಿರಸ್ಮರಣೀಯ ರಾಗಿದ್ದಾರೆ.

ಬೈರಪ್ಪ ಅವರುಗೆ ಕೇಂದ್ರ ಸರ್ಕಾರವು 2023ನೇ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ ಆಗಸ್ಟ್‌ 20, 1931 ರಲ್ಲಿ ಜನಿಸಿದ ಭೈರಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದರು.

ಪ್ರೌಢ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಮುಂದುವರೆಸಿದ ಭೈರಪ್ಪನವರು ಎಂ.ಎ.ನಲ್ಲಿ ಸ್ವರ್ಣ ಪದಕದೊಂದಿಗೆ ತೇರ್ಗಡೆಯಾದರು.

ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ “ಸತ್ಯ ಮತ್ತು ಸೌಂದರ್ಯ” ಎಂಬ ಇಂಗ್ಲಿಷ್‌ನಲ್ಲಿ ರಚಿಸಿದ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಆಯಾ ಕಾಲದಲ್ಲಿ ಬಂದ ಅವರ ಕಾದಂಬರಿಗಳೆಲ್ಲಾ ಚರ್ಚೆಗೆ ಒಳಗಾಗಿವೆ.

ಗೃಹಭಂಗ, ವಂಶವೃಕ್ಷ, ನೆಲೆ, ಸಾಕ್ಷಿ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ದಾಟು, ಧರ್ಮಶ್ರೀ, ಪರ್ವ, ಭಿತ್ತಿ ಮುಂತಾದವು ಕನ್ನಡ ಹಿಂದಿ, ಮರಾಠಿಯಲ್ಲಿ ಹೆಚ್ಚು ಜನಪ್ರಿಯವಾಗಿವೆ.

ಬೈರಪ್ಪ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ,ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು ಸಾಹಿತಿಗಳು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಕಳಚಿದ ಸಾಹಿತ್ಯ ಲೋಕದ ಮಹಾನ್ ಕೊಂಡಿ:ಎಸ್.ಎಲ್ ಬೈರಪ್ಪ ವಿಧಿವಶ Read More

ಸುಧಾ ಮೂರ್ತಿ, ಎಸ್ ಎಲ್ ಭೈರಪ್ಪ ಹುಟ್ಟುಹಬ್ಬ ;ಮಕ್ಕಳಿಗೆ ಪುಸ್ತಕ ವಿತರಣೆ

ಮೈಸೂರು: ರಾಜ್ಯಸಭಾ ಸದಸ್ಯರೂ ಹೆಮ್ಮೆಯ ಕನ್ನಡತಿ, ಪದ್ಮಭೂಷಣ ಪುರಸ್ಕೃತರಾದ ಸುಧಾಮೂರ್ತಿ ಮತ್ತು ಪದ್ಮಶ್ರೀ ಪುರಸ್ಕೃತ ಎಸ್ ಎಲ್ ಭೈರಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ
ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು.

ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪುಸ್ತಕ ಹಾಗೂ ಲೇಖನಿ ನೀಡುವ ಮೂಲಕ ಈ ಇಬ್ಬರು ಸಾಧಕರ ಜನುಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಕರ್ನಾಟಕದ ಇಬ್ಬರು ಮಹನೀಯರ ಕೊಡುಗೆ ಅಪಾರ.ಸಾಹಿತ್ಯ,ಹಾಗೂ ಅವರ ಸಮಾಜ ಸೇವೆಗಳು ಅನನ್ಯ, ಅವರ ಸೇವೆಗಳು ನಮ್ಮಂತ ನೂರಾರು ಸಂಘಟನೆಗಳಿಗೆ ಸ್ಪೂರ್ತಿದಾಯಕ,ಕನ್ನಡದ ಹಿರಿಮೆಯನ್ನು ವಿಶ್ವಮಟ್ಟದಲ್ಲಿ ಶ್ರೀಮಂತ ಗೊಳಿಸಿರುವ ಇಬ್ಬರು ಮಹನೀಯರು ಆದರ್ಶಪ್ರಾಯರು ಎಂದು ಹೇಳಿದರು.

ಈ ವೇಳೆ ಜೆಡಿಎಸ್ ಕಾರ್ಯಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್, ಚಕ್ರಪಾಣಿ, ಜತ್ತಿ ಪ್ರಸಾದ್, ಮಹಾನ್ ಶ್ರೇಯಸ್, ಶಾಲೆಯ ಮುಖ್ಯ ಶಿಕ್ಷಕರಾದ ರತ್ನಮಾಲ,ಶೃತಿ, ನರಸಿಂಹ,ಶಾಲೆಯ ಶಿಕ್ಷಕ ವೃಂದ ಮತ್ತಿತರರು ಹಾಜರಿದ್ದರು.

ಸುಧಾ ಮೂರ್ತಿ, ಎಸ್ ಎಲ್ ಭೈರಪ್ಪ ಹುಟ್ಟುಹಬ್ಬ ;ಮಕ್ಕಳಿಗೆ ಪುಸ್ತಕ ವಿತರಣೆ Read More