ಕಲಬುರ್ಗಿ: 100 ವರ್ಷದ ಸಂಭ್ರಮಾಚರಣೆಯ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಆಯೋಜಿಸುವ ಪಥಸಂಚಲನದಲ್ಲಿ 300 ಜನ ಮಾತ್ರ ಭಾಗವಹಿಸಬೇಕು ಎಂಬ ಪೊಲೀಸ್ ಇಲಾಖೆ ಆದೇಶಕ್ಕೆ ಹಿನ್ನಡೆಯಾಗಿದೆ.
ಈ ಮೊದಲು ಸರ್ಕಾರ 300 ಜನರಿಗೆ ಅವಕಾಶ ನೀಡಿತ್ತು,ಆದರೆ ಸಂಘದಲ್ಲಿ ಹೆಚ್ಚಿನ ಜನ ಇದ್ದಾರೆ, ಆದ್ದರಿಂದ ಹೆಚ್ಚು ಜನ ಭಾಗವಹಿಸಲು ಅವಕಾಶ ಮಾಡಿಕೊಡಬೇಕು, ಸಮಯದ ಮಿತಿಯನ್ನು ಹೆಚ್ಚಿಸಬೇಕು ಎಂದು ಸಂಘದ ಸದಸ್ಯರು ಕೋರ್ಟ್ಗೆ ಮನವಿ ಮಾಡಿದ್ದರು.
ಈ ಕುರಿತು ಕಲಬುರ್ಗಿ ನ್ಯಾಯಾಲಯದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ನೇತೃತ್ವದಲ್ಲಿ ಮಹತ್ವದ ತೀರ್ಪು ಪ್ರಕಟಗೊಂಡಿದೆ.
ಪಥ ಸಂಚನದಲ್ಲಿ 350ಜನ ಮಾತ್ರ ಭಾಗವಹಿಸಬಹುದಾಗಿದೆ. ತದನಂತರ ಸೂರ್ಯಾಸ್ತ ಸಮಯ 5.45ರೊಳಗೆ ಪರೇಡ್ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ಷರತ್ತುಬದ್ಧ ಅನುಮತಿ ನೀಡಿದೆ.
ಕೋರ್ಟ್ ತೀರ್ಪಿನಂತೆ, 300 ಜನರಿಗೆ ಸರ್ಕಾರದಿಂದಲೇ ಈಗಾಗಲೇ ಪರವಾನಗಿ ನೀಡಲಾಗಿತ್ತು, ಅದಕ್ಕೆ ಹೆಚ್ಚುವರಿಯಾಗಿ ಇನ್ನೂ 50 ಜನರನ್ನು ಸೇರಿಸಲು ನ್ಯಾಯಾಲಯ ಅನುಮತಿ ನೀಡಿದೆ.
ಒಟ್ಟು 350 ಮಂದಿಗೆ ಪಥಸಂಚಲನದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಪೊಲೀಸ್ ಇಲಾಖೆ ಸುರಕ್ಷತಾ ಕಾರಣದಿಂದ ಕೆಲವು ನಿಯಮಗಳನ್ನು ವಿಧಿಸಿದೆ. ಅವುಗಳ ಪ್ರಕಾರ 50 ಮಂದಿ ಬ್ಯಾಂಡ್ ಬಳಗದವರು ಸೇರಿಕೊಳ್ಳಬಹುದು. ಪಥಸಂಚಲನದ ಸಮಯ ಮಧ್ಯಾಹ್ನ 3.30 ರಿಂದ ಸಂಜೆ 5.45ರವರೆಗೆ ಮಾತ್ರ ಎಂದು ಆದೇಶಿಸಿದೆ.
ಕೋರ್ಟ್ ಆದೇಶದಂತೆ ಸಂಜೆ 5.45ರವರೆಗೆ ಮಾತ್ರ ಪಥಸಂಚಲನ ಅವಕಾಶ ದೊರೆತ ಕಾರಣ, ಅದಾದಮೇಲೆ ಪಥಸಂಚಲನ ನಿಲ್ಲಿಸಬೇಕು. ಯಾವುದೇ ಶಿಸ್ತಿನ ಉಲ್ಲಂಘನೆ ನಡೆದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಖಡಕ್ ಸೂಚನೆ ನೀಡಿದ್ದಾರೆ.
ಕೋರ್ಟ್ ಅನುಮತಿಗೆ ಜಿಲ್ಲಾಡಳಿತ ಕೂಡಾ ಒಪ್ಪಿಕೊಂಡಿದೆ, ಪಥಸಂಚಲನ ಮಾರ್ಗದಲ್ಲಿ ಹೆಚ್ಚಿನ ಭದ್ರತಾ ಪಡೆ ನಿಯೋಜನೆ ಮಾಡಲಾಗುತ್ತಿದ್ದು, ಜನಸಂಚಾರ ಪ್ರದೇಶಗಳಲ್ಲಿ ಟ್ರಾಫಿಕ್ ತಾತ್ಕಾಲಿಕವಾಗಿ ಮರುನಿರ್ದೇಶಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.
ಚಾಮರಾಜನಗರ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ವತಿಯಿಂದ ವಿಜಯದಶಮಿ ಉತ್ಸವದ ಅಂಗವಾಗಿ ನಗರದಲ್ಲಿ ಆಕರ್ಷಕ ಪಥಸಂಚಲನ ಕಾರ್ಯಕ್ರಮ ಶನಿವಾರ ಸಂಜೆ ಜರುಗಿತು.
ನಗರದ ಚಾಮರಾಜೇಶ್ವರ ದೇವಾಲಯದ ಆವರಣದಿಂದ ಆರಂಭವಾದ ಪಥಸಂಚಲನ ನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ವೃತ್ತಗಳಲ್ಲಿ ಸಂಚರಿಸಿ ನೋಡುಗರ ಗಮನ ಸೆಳೆಯಿತು.
ನಗರದ ಪ್ರಮುಖ ವೃತ್ತಗಳಲ್ಲಿ ಹಾಗೂ ಪ್ರಮುಖ ಬೀದಿಗಳಲ್ಲಿ ಕಟ್ಟಿದ್ದ ಭಗವಧ್ವಜ, ಕೇಸರಿ ತೋರಣಗಳು ಹಾಗೂ ವಿಶೆಷವಾಗಿ ಮನೆಗಳ ಮುಂದೆ ಪಥ ಸಂಚಲನಕ್ಕಾಗಿ ಹಾಕಲಾಗಿದ್ದ ರಂಗೋಲಿಗಳು ಜನರನ್ನು ಮತ್ತಷ್ಟು ಆಕರ್ಷಿಸುತ್ತಿದ್ದವು.
450ಕ್ಕೂ ಹೆಚ್ಚು ಸ್ವಯಂ ಸೇವಕರು ಪಥಸಂಚಲನದಲ್ಲಿ ಭಾಗವಹಿಸಿದ್ದರು.
ಈ ವೇಳೆ ಸ್ವಯಂ ಸೇವಕರಿಗೆ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ವರ್ತಕರು ಹೂಮಳೆ ಸುರಿಸಿ ಭಾರತ ಮಾತೆಗೆ ಜೈಕಾರ ಹಾಕಿದರು.
ಎಸ್ಪಿ ಕವಿತಾ, ಡಿವೈಎಸ್ಪಿ ಸ್ನೇಹರಾಜ್ ಹಾಗೂ ಇನ್ಸ್ ಪೆಕ್ಟರ್ ಅವರು ಗಳು ಸೂಕ್ತ ಬಂದೂಬಸ್ತ್ ಮಾಡಿದ್ದರು.
ಮೈಸೂರು: ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಆರ್. ಎಸ್. ಎಸ್. ಚಟುವಟಿಕೆಗಳನ್ನು ನಿರ್ಬಂಧ ಹೇರುವ ನಿಟ್ಟಿನಲ್ಲಿ ಕ್ರಮ ಕೈಗೊಂಡರೆ ನಮ್ಮ ಮನೆಗಳ ಮೇಲೆ ಭಗವದ್ವಜ ಹಾರಿಸಿ, ಮನೆಗಳಲ್ಲಿ ಶಾಖೆ ಮಾಡುತ್ತೇವೆ ಎಂದು ಯುವಭಾರತ್ ಸಂಘಟನೆಯ ಜೋಗಿಮಂಜು ಎಚ್ಚರಿಸಿದ್ದಾರೆ.
ನೂರು ವರ್ಷಗಳ ಇತಿಹಾಸ ಇರುವ ಆರ್. ಎಸ್. ಎಸ್. ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ,ಸ್ವಾತಂತ್ರ್ಯ ಹಾಗೂ ಸಾಮಾಜಿಕ ಕಾರ್ಯಗಳ ಹೋರಾಟದಲ್ಲಿ ತನ್ನದೇ ಆದ ಪ್ರಮುಖ ಪಾತ್ರ ವಹಿಸುವುದರ ಮೂಲಕ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯತೆ ಹಾಗೂ ಹಿಂದೂ ಧರ್ಮವನ್ನು ರಕ್ಷಿಸುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಮಾಡಿಕೊಂಡು ಬರುತಿದೆ ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಆರ್. ಎಸ್. ಎಸ್. ಚಟುವಟಿಕೆಗಳನ್ನು ನಡೆಸುವ ಸಂಬಂಧ ನಿರ್ಬಂಧ ಹೇರುವ ನಿಟ್ಟಿನಲ್ಲಿ ಕಾಂಗ್ರೆಸ್ ಹುನ್ನಾರ ನಡೆಸಲು ಮುಂದಾಗಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ತಮಿಳುನಾಡು ಮಾದರಿಯಲ್ಲಿ ಸಂಘದ ಮೇಲೆ ನಿರ್ಬಂಧ ಹೇರಲು ಪ್ರಯತ್ನ ಮಾಡುತ್ತಿದೆ, ಆದರೆ ತಮಿಳುನಾಡಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸ್ವಂತ ಸ್ಥಳಗಳಲ್ಲಿ ಶಾಖೆ ಮಾಡಲು ಸಂಪೂರ್ಣ ಸ್ವಾತಂತ್ರ್ಯ ಇದೆ.
ಸರ್ಕಾರಕ್ಕೆ ಇದರ ಅರಿವಿಲ್ಲ ಎಂದು ಕಾಣುತ್ತದೆ, ಇಂತಹ ಕಿಡಿಗೇಡಿ ಕೃತ್ಯ ಕ್ಕೆ ರಾಜ್ಯ ಸರ್ಕಾರ ಕೈ ಹಾಕಿದರೆ ರಾಜ್ಯದ ಎಲ್ಲಾ ಸ್ವಯಂ ಸೇವಕರ ಮನೆಯ ಮೇಲೆ ಭಗವಧ್ವಜ ಹಾರಿಸಿ ನಮ್ಮ ಮನೆಗಳಲ್ಲೇ ಶಾಖೆ ಮಾಡಲಾಗುವುದು ಎಂದು ಜೋಗಿ ಮಂಜು ಎಚ್ಚರಿಸಿದ್ದಾರೆ.
ನಿರ್ಬಂಧ ದ ಹೇಳಿಕೆಗಳನ್ನು ನೀಡುವ ಮೂಲಕ ಸರ್ಕಾರ ತನ್ನ ದುರಾಡಳಿತವನ್ನು ಮರೆ ಮಾಚುತ್ತಿದೆ ಇಂತಹ ಭ್ರಷ್ಟ ಹಾಗೂ ಭಂಡ ಸರ್ಕಾರದಲ್ಲಿ ಜನಸಾಮಾನ್ಯರ ಕಷ್ಟ ಹೇಳತೀರದಾಗಿದೆ ಎಂದು ಅವರು ಟೀಕಿಸಿದ್ದಾರೆ.
ಬಾಗಲಕೋಟೆ: ಸರ್ಕಾರಿ ಸ್ಥಳದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿರ್ಬಂಧಿಸುವ ಕುರಿತು ತಮಿಳುನಾಡು ರಾಜ್ಯದ ಕ್ರಮವನ್ನು ಪರಿಗಣಿಸಿ, ಪರಿಶೀಲಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈಗಾಗಲೇ ಮುಖ್ಯ ಕಾರ್ಯ ದರ್ಶಿಗಳಿಗೆ ಈ ಕುರಿತು ಸೂಚಿಸಿದ್ದೇವೆ,ಅವರು ಪರಿಶೀಲಿಸಿ ವರದಿ ನೀಡಲಿದ್ದಾರೆ,ನಂತರ ಮುಂದಿನ ಕ್ರಮ ಎಂದು ಹೇಳಿದರು.
ಸಚಿವ ಪ್ರಿಯಾಂಕ ಖರ್ಗೆಯವರು ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿರ್ಬಂಧಿಸಲು ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿ, ಆರ್ ಎಸ್ ಎಸ್ ಸಂಘಟನೆ ತನ್ನ ಚಟುವಟಿಕೆಗಳಿಗೆ ಸರ್ಕಾರಿ ಸ್ಥಳಗಳನ್ನು ಬಳಸಿಕೊಳ್ಳುತ್ತಿದೆ. ತಮಿಳುನಾಡು ರಾಜ್ಯದಲ್ಲಿ ಇದನ್ನು ನಿರ್ಬಂಧಿಸಿದಂತೆ ರಾಜ್ಯದಲ್ಲಿಯೂ ನಿರ್ಬಂಧಿಸಬೇಕು ಎಂದು ಪತ್ರ ಬರೆದಿದ್ದಾರೆ,ಹಾಗಾಗಿ ಈ ಬಗ್ಗೆ ಪರಿಶೀಲಿಸಲು ಸಿಎಸ್ ಗೆ ಸೂಚನೆ ಕೊಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬದಲಾವಣೆಯಲ್ಲಿ ಹೈಕಮಾಂಡ್ ನಿರ್ಧಾರವೇ ಮುಖ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಪಕ್ಷದ ವರಿಷ್ಠರ ಮತ್ತು ಶಾಸಕರ ಅಭಿಪ್ರಾಯ ಬಹಳ ಮುಖ್ಯ. ಶಾಸಕರ ಒಮ್ಮತ ಹಾಗೂ ಹೈಕಮಾಂಡ್ ಆರ್ಶೀವಾದ ಎರಡೂ ಇರಬೇಕು, ಇವತ್ತಿನ ಭೋಜನಕೂಟ ಕಾರ್ಯಕ್ರಮದಲ್ಲಿ ಯಾವುದೇ ವಿಶೇಷತೆ ಇಲ್ಲ. ಸಂಪುಟ ಪುನರ್ರಚನೆಗೂ ಇಂದಿನ ಭೋಜನಕೂಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಶಾಸಕ ಮುನಿರತ್ನ ಮತ್ತು ಡಿ.ಕೆ ಶಿವಕುಮಾರ್ ಅವರ ನಡುವಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ರವರು ನಿನ್ನೆ ಬೆಂಗಳೂರು ನಡಿಗೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಲಾಲ್ಬಾಗ್ ನಂತೆ ಮತ್ತಿಕರೆಯ ಜೆ ಪಿಪಾರ್ಕ್ ದಲ್ಲಿಯೂ ಕಾರ್ಯಕ್ರಮವಿತ್ತು. ಶಾಸಕ ಮುನಿರತ್ನರವರು ವೇದಿಕೆಗೆ ಆಗಮಿಸಿ, ತಮ್ಮ ಅಭಿಪ್ರಾಯವನ್ನು ನೀಡಬಹುದಾಗಿತ್ತು. ಆದರೆ ಶಾಸಕರು ತಮ್ಮ ಅಭಿಪ್ರಾಯವನ್ನು ತಿಳಿಸಲಿಲ್ಲ. ಕಾರ್ಯಕ್ರಮಕ್ಕೆ ಆಹ್ವಾನವಿತ್ತೇ ಇಲ್ಲವೇ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.
ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ಸುಧಾರಣೆಯಾಗುತ್ತಿದ್ದು, ಶೀಘ್ರವೇ ಆಸ್ಪತ್ರೆಯಿಂದ ಮನೆಗೆ ತೆರಳಿಲಿದ್ದಾರೆ ಎಂದು ಮುಖ್ಯ ಮಂತ್ರಿಗಳು ಇದೇ ವೇಳೆ ತಿಳಿಸಿದರು.
ಬೆಂಗಳೂರು: ಆರ್.ಎಸ್.ಎಸ್. ಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮೈಸೂರು ದಸರಾ ಉನ್ನತ ಮಟ್ಟದ ಸಮಿತಿ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಸಿಎಂ ಮಾತನಾಡಿದರು.
ಆರ್.ಎಸ್.ಎಸ್ ನ ದತ್ತಾತ್ರೇಯ ಹೊಸಬಾಳೆ ಅವರು ಸಂವಿಧಾನದ ಪೀಠಿಕೆಯಿಂದ ಸಮಾಜವಾದ ಮತ್ತು ಜಾತ್ಯತೀತ ಪದಗಳನ್ನು ತೆಗೆಯಬೇಕು ಎಂಬ ಹೇಳಿಕೆಗೆ ಆರ್.ಎಸ್.ಎಸ್. ಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದರು.
ಆರ್.ಎಸ್.ಎಸ್ ಅವರು ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟುಕೊಂಡಿರುವವರು, ಸಂವಿಧಾನ ಬದಲಾವಣೆಯಾಗಬೇಕು ಹಾಗೂ ಮನುಸ್ಮೃತಿ ಜಾರಿಯಾಗಬೇಕೆಂಬ ಮನಸ್ಥಿತಿ ಇರುವವರು, ಅದನ್ನು ಬಿಟ್ಟು ಅವರಿಗೆ ಇನ್ನೇನು ಹೇಳಲು ಸಾಧ್ಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಸಂವಿಧಾನ ಶಾಸನ ಸಭೆಯಲ್ಲಿ ಚರ್ಚೆಯಾಗಿ ರಚನೆಯಾಗಿದೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇದರ ಅಧ್ಯಕ್ಷರಾಗಿ ಸಂವಿಧಾನ ರಚಿಸಿದ್ದಾರೆ, ಜಾತ್ಯಾತೀತ ಮತ್ತು ಸಮಾಜವಾದ ಎಂಬ ಪದಗಳನ್ನು ನಂತರ ಸೇರಿಸಲಾಗಿದೆಯೆ ಎಂಬ ಪ್ರಶ್ನೆಗೆ ಸಂಸತ್ತಿನಲ್ಲಿ ಇದು ಚರ್ಚೆಯಾಗಿ ಸoವಿಧಾನ ತಿದ್ದುಪಡಿ ಮಾಡಲಾಗಿದೆ. ಸಂವಿಧಾನ ದತ್ತಾತ್ರೇಯ ಹೊಸಬಾಳೆ ಅವರು ಹೇಳಿದಂತೆ ರಚನೆಯಾಗಿಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ಮೈಸೂರು: ಮೈಸೂರಿನ ಆರ್‌ಎಸ್‌ಎಸ್ ಸ್ವಯಂಸೇವಕರಾಗಿದ್ದ ವಾಮನ್ ಜಿ ಅವರು ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.
ನಿನ್ನೆ ಅವರು ಮೈಸೂರಿನಲ್ಲಿ ನಿಧನ ಹೊಂದಿದರು. ಅವರ ಒಡನಾಟದಲ್ಲಿದ್ದ ಕೆಲವರು ವಾಮನ್ ಜಿ ಅವರ ಬಗೆಗೆ ಲೇಖನ ಬರೆಯುವ ಮೂಲಕ ಅವರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.ಅವು ಕೆಳಗಿನಂತಿವೆ.
ಈ ಭೂಮಿಯಲ್ಲಿ ಬಹಳ ಕಡಿಮೆ ಜನರು ಸೇವೆಗಾಗಿ ತಮ್ಮ ಇಡೀ ಜೀವನವನ್ನು ಅರ್ಪಿಸುತ್ತಾರೆ. ಅಂತಹ ಒಬ್ಬ ವ್ಯಕ್ತಿ ಶ್ರೀ ವಾಮನ್ ಜಿ ಮೈಸೂರಿನ ಆರ್‌ಎಸ್‌ಎಸ್ ಸ್ವಯಂಸೇವಕರಾಗಿದ್ದರು.
ಯಾವುದೇ ಅಹಂಕಾರ, ಶತ್ರುಗಳು ಅಥವಾ ಮಹದಾಸೆಗಳಿಲ್ಲದ ಅಪರೂಪದ ವ್ಯಕ್ತಿ, ತುಂಬಾ ಸರಳ ಹಾಗೂ ಸಾಮಾನ್ಯಫ ವ್ಯಕ್ತಿ. ತುಂಬಾ ಸರಳವಾದ ಉಡುಗೆ ತೊಟ್ಟವರು. ಆದರೆ ಅವರ ಕೆಲಸ ಅಸಾಧಾರಣವಾಗಿತ್ತು.
ನಾನು ಅಭ್ಯುದಯದ ಸ್ವಯಂಸೇವಕನಾಗಿ ಗಮನಿಸಿದ ಮತ್ತು ತೊಡಗಿಸಿಕೊಂಡ ಅವರ ಕೆಲವು ಕೆಲಸಗಳನ್ನು ಕೆಳಗೆ ನೀಡಲಾಗಿದೆ. ಹಲವಾರು ಬಡವರು ಅವರ ಕೆಲಸದಿಂದ ಪ್ರಯೋಜನ ಪಡೆದಿದ್ದಾರೆ.ವಾಮನ್ ಜಿ ಅನೇಕ ಬಡ ಜನರಿಗೆ ಕೊನೆಯ ಆಶಾಕಿರಣವಾಗಿದ್ದರು.
ಒಂದು ದಿನ ನಾವು ಅವರೊಂದಿಗೆ ನಾಗರಹೊಳೆಯ ದೂರದ ಕಾಡಂಚಿನ ಹಳ್ಳಿಗೆ ಹೋದೆವು, ಅಲ್ಲಿ ಅವರು ಬುಡಕಟ್ಟು ಜನಾಂಗದವರಿಗೆ ಶಿಕ್ಷಣ ಮತ್ತು ಕ್ರೀಡೆಗಳಿಗೆ ಪ್ರಾಮುಖ್ಯತೆ ನೀಡುವಂತೆ ಕೇಳಿಕೊಂಡರು.
ಅಂಗವಿಕಲ ವ್ಯಕ್ತಿಯೊಬ್ಬರು ತಮ್ಮ ಜೀವನೋಪಾಯವನ್ನು ನೋಡಿಕೊಳ್ಳಲು ಸಹಾಯ ಮಾಡಲು ಸಂಪನ್ಮೂಲಗಳನ್ನು ವಾಮನ್ ಜಿ ಸಂಗ್ರಹಿಸಿದರು ಹಾಗೂ ಅವರು ಹಲವಾರು ಸಂಸ್ಥೆಗಳ ಸಹಾಯದಿಂದ ಆವಿಕಲ ಚೇತನ ವ್ಯಕ್ತಿಗೆ ಮಾರ್ಪಡಿಸಿದ ಮೋಟಾರ್ ಸೈಕಲ್ ಕೊಟ್ಟರು.
ಕೋವಿಡ್ ಸಮಯದಲ್ಲೂ ಅವರು ಅನೇಕ ನಿರ್ಗತಿಕರನ್ನು ಭೇಟಿ ಮಾಡಿ ಸಹಾಯ ಮಾಡುತ್ತಿದ್ದರು.ಆ ಸಮಯದಲ್ಲಿ ಪತಿಯನ್ನು ಕಳೆದುಕೊಂಡ ಒಬ್ಬ ಮಹಿಳೆಗೆ ಹಲವಾರು ತಿಂಗಳುಗಳ ಕಾಲ ಆರ್ಥಿಕ ಸಹಾಯ ಮಾಡಿದರು ಜತೆಗೆ ಅವರ ಮಕ್ಕಳಿಗೆ ಶಾಲೆಯಲ್ಲಿ ಉಚಿತ ಪ್ರವೇಶವನ್ನು ಕೊಡಿಸುವ ಮೂಲಕ ನೆರವಾದರು.
ಕಠಿಣ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದ ತಾಯಿ ಮತ್ತು ಮಗನಿಗೆ ಅವರು ಸಹಾಯ ಮಾಡಿದರು. ಅಧ್ಯಯನವನ್ನು ನಿಲ್ಲಿಸಿದ ಅನೇಕ ಬಡವರು ಅವರ ಮನ ವೊಲಿಕೆಯಿಂದಾಗಿ ಶಾಲೆಗೆ ಹಿಂತಿರುಗಿದರು.
ಬದುಕಲು ಕಷ್ಟಪಡುತ್ತಿದ್ದ ಅನೇಕ ಬಡ ಮಹಿಳೆಯರನ್ನು ವಾಮನ್ ಅವರು ಗುರುತಿಸಿ ಅವರಿಗೆ ಟೈಲರಿಂಗ್ ಯಂತ್ರವನ್ನು ಪಡೆಯಲು ಸಹಾಯ ಮಾಡಿದರು,ಅಲ್ಲದೆ ಆ ಮಹಿಳೆಯರನ್ನು ಭೇಟಿ ಮಾಡಿ ಅವರು ಇನ್ನೂ ಕಷ್ಟಪಡುತ್ತಿದ್ದಾರೆಯೇ ಅಥವಾ ಸುಧಾರಿಸುತ್ತಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದರು, ಅವರು ಅನೇಕರಿಗೆ ತಂದೆಯಂತೆ ಇದ್ದರು.
ಅವರು ನಿಯಮಿತವಾಗಿ ಕಿರಿಯ ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡುತ್ತಿದ್ದರು. ವಯಸ್ಸಿನಲ್ಲಿ ತನಗಿಂತ ಚಿಕ್ಕವರಾದ ಸಂಘದ ಅಧಿಕಾರಿಗಳನ್ನು ಅಪಾರ ಗೌರವದಿಂದ ಕಾಣುತ್ತಿದ್ದರು.
ದೇವರು ಅವರಿಗಾಗಿ ಏನಾದರೂ ದೊಡ್ಡ ಯೋಜನೆಯನ್ನು ಹೊಂದಿರಬಹುದು ಆದ್ದರಿಂದ ಅವನು ಅವರನ್ನು ಮುಂದಿನ ಜನ್ಮಕ್ಕೆ ಕರೆದೊಯ್ದಿದ್ದಾನೆ.
ನಾನು ಸೇರಿ ಅಭ್ಯುದಯ ಮೈಸೂರು ತಂಡ ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ ಆದರೆ ಅವರಿಂದ ನಾವು ಬಹಳಷ್ಟು ಕಲಿತಿದ್ದೇವೆ ಮತ್ತು ಅವರ ಕಾರ್ಯಶೈಲಿ ನಮ್ಮೊಂದಿಗೆ ಸದಾ ಇರುತ್ತದೆ. ಸಮಾಜಕ್ಕೆ ಸೇವೆ, ಇತರ ಸ್ವಯಂಸೇವಕರಿಗೆ ಗೌರವ, ಬಡವರ ಬಗ್ಗೆ ಕಾಳಜಿ ಮತ್ತು ಯಾವಾಗಲೂ ನಗುತ್ತಿರುವ ವಾಮನ ಜಿ ಅವರನ್ನು ನಾವೆಲ್ಲ ಅನುಸರಿಸಬೇಕು. ಮತ್ತೆ ಹೊಟ್ಟಿ ಬನ್ನಿ ವಾಮನ್ ಜೀ…
ಮತ್ತೊಂದು ಲೇಖನ:
ವಾಮನ್. ಮೈಸೂರಿನಲ್ಲಿ ಕೆಲವರಿಗೆ ಅವರು ವಾಮನ್, ಹಲವರಿಗೆ ವಾಮನ್ ಜೀ, ಒಂದು ಪೀಳಿಗೆಯವರಿಗೆ ವಾಮ್ನಾ ಮಾಮಾ….
ನಾನು ಅವರನ್ನು ಮೊದಲ ಬಾರಿ ಅದ್ಯಾವಾಗ ನೋಡಿದೆನೋ ನೆನಪಿಲ್ಲ. ನನ್ನನ್ನು ‘ಲೋ’ ಎನ್ನುತ್ತಿದ್ದ ವಾಮನ್, ನಾನು ಪ್ರಚಾರಕನಾದ ನಂತರ ಏನಯ್ಯಾ ಅನ್ನುವಷ್ಟು ಬದಲಾದರು. ಅವರ ನಿರ್ಗಮನದಿಂದ ಮೈಸೂರಿನ ಸಂಘದ ಒಂದು ಅಧ್ಯಾಯ ಮುಗಿಯಿತು.
ಬಹಳ ದೀರ್ಘ ಅಧ್ಯಾಯವಿದು. ನಾಲ್ಕು ದಶಕಗಳಿಗೂ ಮಿಕ್ಕ ವಾಮನ್ ಅವರ ಮೈಸೂರಿನ ಸಂಘ ಜೀವನದಲ್ಲಿ ಸದಾ ಸಕ್ರಿಯ. ಅಂದರೆ ಬರಿಯ ಸಕ್ರಿಯತೆಯಲ್ಲ. ಪುಟಿಯುವ ವ್ಯಕ್ತಿತ್ವ. ವಾಮನ್ ಅವರು ಇದ್ದದ್ದೇ ಹಾಗೆ. ಅವರನ್ನು ಮಂದಗತಿಯಲ್ಲಿ, ಸಪ್ಪೆಯಾಗಿ, ಹತಾಶರಾಗಿ ಇದ್ದದ್ದನ್ನು ಯಾರೂ ನೊಡಿರಲಿಕ್ಕಿಲ್ಲ. ಪರಿಸ್ಥಿತಿ ಅದೆಷ್ಟೇ ಕಷ್ಟವಿದ್ದರೂ ವಾಮನ್ ರ ಉತ್ಸಾಹ ಮತ್ತು ಚಟುವಟಿಕೆಗಳನ್ನು ಅವು ಪ್ರಭಾವಿಸುತ್ತಿರಲಿಲ್ಲ. ಮೈಸೂರಿನ ವೇಗವನ್ನು ಬಲ್ಲವರು ವಾಮನ್ ರನ್ನು ನೋಡಿದರೆ ಇವರು ಅಸಲಿಗೆ ಮೈಸೂರಿನವರೋ?! ಎಂದು ಅನುಮಾನಿಸುವಷ್ಟು ಚುರುಕು.
ವಾಮನ್ ರು ಕೆಲಕಾಲ ಶಿವಮೊಗ್ಗದಲ್ಲಿ ಇದ್ದರು. ಅಲ್ಲಿ ಅವರು ಬಸವೇಶ್ವರ ಶಾಖೆಗೆ ಹೋಗುತ್ತಿದ್ದರು. ಸಂಘದ ಬಾಲಪಾಠಗಳನ್ನು, ಪದ್ಧತಿಗಳನ್ನು ಅಲ್ಲೇ ಕಲಿತರು. ಅದನ್ನವರು ಯಾವಾಗಲೂ ನೆನಪು ಮಾಡಿಕೊಳ್ಳುತ್ತಿದ್ದರು. ಮೂಲವನ್ನು ಮರೆಯಲಿಲ್ಲ. ಕೆಲವು ವರ್ಷಗಳ ಕಾಲ ಪ್ರಚಾರಕರಾಗಿಯೂ ಇದ್ದರು. ಪ್ರಚಾರಕ ಜೀವನಕ್ಕೆ ವಿದಾಯ ಹೇಳಿದ ನಂತರ ಮೈಸೂರಿನಲ್ಲಿಯೇ ಇದ್ದುಬಿಟ್ಟರು. ಅತಿ ದೀರ್ಘಕಾಲ ಅವರು ಮೈಸೂರು ನಗರ ಕಾರ್ಯಕಾರಿಣಿ ಸದಸ್ಯರಾಗಿದ್ದರು.
ಅವರಿಗೆ ಮೈಸೂರಿನ ಓಣಿ, ಕೇರಿ, ಗಲ್ಲಿ, ಮುಖ್ಯರಸ್ತೆ ಎಲ್ಲವೂ ತಮ್ಮ ಮನೆಯಷ್ಟೇ ಪರಿಚಯ. ಆದರೆ ಅವರ ವಿಶೇಷ ಗಮನವಿದ್ದದ್ದು ತಿಲಕ್ ನಗರದ ಬಗ್ಗೆ.
ರಾಜೇಂದ್ರ ನಗರಕ್ಕೂ ಸಮಾನ ಗಮನ ಕೊಟ್ಟವರು. ಸಾಂಘಿಕ ಎಂದರೆ ಶಾಖೆಗಳಿಗೆ ಮಾದರಿಯಾಗಿರಬೇಕು ಎನ್ನುತ್ತ ತಿಲಕ್ ನಗರದ ಸಾಂಘಿಕ್ ನ್ನು ಪೂರ್ತಿಯಾಗಿ ಹೆಗಲಮೇಲೆಳೆದುಕೊಂಡು ಅದನ್ನು ಪ್ರತಿ ವಾರ ಯಶಸ್ವಿಗೊಳಿಸುತ್ತಿದ್ದರು. ನಗರದ ಶಾರೀರಿಕ ವರ್ಗದಲ್ಲಿ ಪೂರ್ಣವಾಗಿ ಇರುತ್ತಿದ್ದರು.
ವಾಮನ್ ಅವರು ಜೀವನೋಪಾಯಕ್ಕಾಗಿ ಒಂದು ಟೆಂಪೋ ಓಡಿಸುತ್ತಿದ್ದರು. ಅದರಿಂದ ಬಂದ ಗಳಿಕೆಯೆಷ್ಟೋ ಅಷ್ಟೇ. ತಮ್ಮ ಕಷ್ಟಗಳನ್ನು ಹೇಳಿಕೊಂಡವರಲ್ಲ ಅಥವಾ ಕೆಲವೇ ಆತ್ಮೀಯರ ಹತ್ತಿರ ಹೇಳಿಕೊಂಡಿರಬಹುದು. ಮನೆಯಲ್ಲಿ ಮಡದಿ, ಒಬ್ಬ ಮಗ, ಒಬ್ಬಳು ಮಗಳು. ಅವರಿಬ್ಬರೂ ಒಂದು ಘಟ್ಟ ಮುಟ್ಟಿದ ನಂತರವೇ ವಾಮನ್ ನಿರಾಳವಾಗಿದ್ದು. ಅವರು ತಮ್ಮ ವಾಹನದಿಂದ ಇಳಿದು ನಡೆದುಕೊಂಡು ಬರುವಾಗ ನಾನು ಮತ್ತು ರಾಘು (ಮೈಸೂರಿನಲ್ಲಿ ಜಿಲ್ಲಾ ಪ್ರಚಾರಕರಾಗಿದ್ದವರು) ಅವರಿಗೆ ಪರಾಕು ಕೂಗುವಂತೆ The Van, The Man, The Van Man Vaman ಎಂದು ಹಾಸ್ಯಮಾಡುತ್ತಿದ್ದೆವು. ಅವರಿಗೆ ಹಾಸ್ಯ, ಟೀಕೆ ಯಾವುದೂ ತಾಗುತ್ತಿರಲಿಲ್ಲ, ನಿರ್ಲಿಪ್ತ.
ವಾಮನ್ ರನ್ನು ಭೇಟಿ ಮಾಡಲು ಇದ್ದ ಜಾಗವೆಂದರೆ ಮೈಸೂರಿನ ಸಿಟಿ ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ಟೆಂಪೋ ಸ್ಟ್ಯಾಂಡ್. ಸಂತೋಷರು, ರಾಘು (ರಾಘವೇಂದ್ರ), ನಟ (ನಟರಾಜ) ಯಾರ ಜೊತೆಯಲ್ಲೇ ವಾಮನ್ ರನ್ನು ನೋಡಲು ಹೋದರೂ ಉಳಿದವರು ಬರುವ ಮುನ್ನವೇ ವಾಮನ್ ವಾಮನ್ ಎನ್ನುವುದು ರೂಢಿಯಾಗಿತ್ತು.
ವಾಮನ್ ಅವರ ಸಂಘ ಜೀವನವು ಅನುಭವ ಸಮೃದ್ಧವಾದದ್ದು. ಆ ಅನುಭವವು, ಅವರು ಸೂಕ್ಷಗಳನ್ನು ಗುರುತಿಸುವ ರೀತಿಯಲ್ಲಿ ವ್ಯಕ್ತವಾಗುತ್ತಿತ್ತು. ಒಂದು ವಿಷಯವನ್ನು ಹಲವು ಮಗ್ಗುಲುಗಳಿಂದ ನೋಡುವ, ವಿವೇಚಿಸುವ ಪರಿ, ಎಲ್ಲವನ್ನೂ ಪ್ರಶ್ನಿಸಿ ಸ್ಪಷ್ಟಪಡಿಸಿಕೊಳ್ಳುವ ಅವರ ಸ್ವಭಾವ ಗಮನಾರ್ಹವಾದದ್ದು. ಅವರೊಳಗಿದ್ದ ಒಬ್ಬ ಚಿಂತಕನು ಖಾಸಗಿ ಮಾತುಕತೆಗಳಲ್ಲಿ ಮಾತ್ರವಲ್ಲದೆ ಬೈಠಕ್, ಸಾಂಘಿಕ್ ಮತ್ತು ಇತರ ಸಾಮೂಹಿಕ ಕೂಡುಹದ ಸ್ಥಳಗಳಲ್ಲಿ ಹೊರಬರುತ್ತಿದ್ದ.
ಆ ಕಾಲಕ್ಕೆ ಮೈಸೂರಿನ ಸಾಪ್ತಾಹಿಕ ಮಂಗಳವಾರದ ಬೈಠಕ್ ವಿಶೇಷ. ಪ್ರಾಂತದ ಉಳಿದ ಕಡೆಗಳಲ್ಲಿ ನಡೆಯುವ ಸೋಮವಾರದ ಬೈಠಕ್ ಮೈಸೂರಿನಲ್ಲಿ ಮಾತ್ರ ಮಂಗಳವಾರ ನಡೆಯುತ್ತಿತ್ತು. ಆ ಬೈಠಕ್ ಹಲವು ವಿಷಯಗಳಿಗೆ ಪ್ರಸಿದ್ಧವಾಗಿತ್ತು. ಅದರಲ್ಲಿ ಪ್ರಮುಖವಾದದ್ದೆಂದರೆ – ಬೈಠಕ್ ನ ವಿಷಯ ಇಂತಹ ದಿಕ್ಕಿನಲ್ಲಿ ಸಾಗಬೇಕು, ಹೀಗ್ಹೀಗೆ ನಿರ್ಣಯ ಆದರೆ ಉತ್ತಮ ಎಂದು ಪೂರ್ವಚಿಂತನೆ ಮಾಡಿಕೊಂಡು ಬೈಠಕ್ ತೆಗೆದುಕೊಳ್ಳುವವರು ಬಂದಿದ್ದರೆ ಅವರ ಪೂರ್ವಯೋಜನೆಯು ಬೇರೊಂದು ದಿಕ್ಕಿನಲ್ಲಿ ಸಾಗುವ ಹಾಗೆ ಮಾಡುವ ನಿಪುಣರು ಹಲವರಿದ್ದರು. ಅದರಲ್ಲಿ ವಾಮನ್ ಒಬ್ಬರು.
ಆದರೆ, ಆ ಎಲ್ಲ ಚರ್ಚೆ, ಚಿಂತನೆಗಳು ಕಾರ್ಯಕ್ಕೆ ಹೊಸತೊಂದು ಆಯಾಮ, ನವೀನ ಶಕ್ತಿಯನ್ನು ಕೊಡುತ್ತಿದ್ದುವು. ಹಾಗಾಗಿ, ಬೈಠಕ್ ತೆಗೆದುಕೊಳ್ಳುವವರು ವಿಷಯದ ಪಟ್ಟಿ ಮಾಡಿಕೊಂಡು ಬಂದರಷ್ಟೇ ಸಾಕಾಗುತ್ತಿರಲಿಲ್ಲ. ಆ ವಿಷಯಗಳ ಬಗ್ಗೆ ಬೈಠಕ್ ನಲ್ಲಿ ಬರಬಹುದಾದ ಪ್ರಶ್ನೆಗಳ ಕುರಿತು anticipate ಮಾಡಿಕೊಂಡೇ ಬರಬೇಕಿತ್ತು. ಮೈಸೂರಿನಲ್ಲಿ ಕೆಲಸ ಮಾಡಿದ ಸಾಕಷ್ಟು ಕಾರ್ತಕರ್ತರಿಗೆ ಈ ಬೈಠಕ್ ಗಳ ಸ್ವಾದ ತಿಳಿದಿದೆ. ಕಾ. ಶಂ. ಶ್ರೀಧರ, ಸಾಮರಸ್ಯದ ವಾದಿರಾಜ ಇತ್ಯಾದಿ…
ವಾಮನ್ ರ ವಿಚಾರವಂತಿಕೆಗೆ ಸೂತ್ರವಿತ್ತು. ಮಂಗಳವಾರ ಯಾವುದೇ ಚರ್ಚೆ ನಡೆದು ನಿರ್ಣಯವಾದ ಮರುದಿನ – ‘ಏನನ್ನಿಸಿತು ನಿನ್ನೆಯ ಚರ್ಚೆ’ ಅಂತ ಕೇಳಿದರೆ, ಅವರು ಮೂರು ವಾಕ್ಯಗಳನ್ನು ಯಾವಾಗಲೂ ಹೇಳುವರು. ಅವು ಅವರ ವೈಚಾರಿಕತೆಯ ಪ್ರಾಥಮಿಕ ನಿಲುವುಗಳಾಗಿದ್ದುವು. ಅವೆಂದರೆ – Sometimes I don’t agree Sometimes I don’t differ Sometimes I don’t heed.
ಅವರೊಬ್ಬ ಉತ್ತಮ ಸಂವಹನಕಾರ. ಒಮ್ಮೆ ಮೈಸೂರು ನಗರದ ಸಾಂಘಿಕ್ ಮುಗಿದ ನಂತರ ಕೆಲವು ಸೂಚನೆಗಳನ್ನು ಕೊಡುವುದಿತ್ತು. ವಾಮನ್ ಸೂಚನೆಗಳನ್ನು ಕೊಟ್ಟರು. ಸರಳವಾಗಿ, ಕಡಿಮೆ ಪದಗಳಲ್ಲಿ, ಸಮಗ್ರವಾಗಿ ಸೂಚನೆ ಕೊಟ್ಟರು. ಸ್ವಯಂಸೇವಕರಿಗೆ ಸೂಚನೆಗಳನ್ನು ಹೇಗೆ ಕೊಡಬೇಕು ಎಂಬುದಕ್ಕೆ ಅದೊಂದು ಮಾದರಿ. ವಾಮನ್ ವೇದಿಕೆ ಹತ್ತಿದ್ದು ಮೈಕ್ ಎದುರು ನಿಂತಿದ್ದು ಬಹಳ ಕಡಿಮೆ. ಅಂತಹ ಕಡಿಮೆ ಸಂದರ್ಭಗಳ ಪೈಕಿ ಇದೂ ಒಂದು.
ಸಂಘ ಕಾರ್ಯದ ಕುರಿತು ಅದೆಷ್ಟು ಕಾಳಜಿಯೋ ರಾಜಕೀಯ ಕ್ಷೇತ್ರ ಬೆಳೆಯಬೇಕು ಎಂಬ ಕಕ್ಕುಲತೆ ಅವರಿಗಿತ್ತು. ಹಾಗಾಗಿ ಆ ಕೆಲಸಗಳಲ್ಲಿಯೂ ತೊಡಗುತ್ತಿದ್ದರು. ಅವರ ತೊಡಗುವಿಕೆಯ ಪ್ರಮಾಣಕ್ಕೂ ಅದರಿಂದ ಉಂಟಾದ ಪರಿಣಾಮಕ್ಕೂ ಏನಾದರೂ ತಾಳೆ ಇದೆಯೇ ಎಂದು ಕೇಳಿದರೆ ನಕ್ಕು ಸುಮ್ಮನಾಗುವರು.
ಅವರಿಗೆ ಅಭಿಪ್ರಾಯ ಇರಲಿಲ್ಲವೆಂದಲ್ಲ. ಹಲವು ವಿಷಯಗಳಲ್ಲಿ ಅವರಿಗೆ Informed opinions ಇರುತ್ತಿದ್ದವು. ಕೆಲವು ಅನುಭವ ಜನ್ಯವಾಗಿರುತ್ತಿದ್ದುವು. ಉದಾಹರಣೆಗೆ – ನಮ್ಮ ಮೈಸೂರಿನ ಪ್ರಚಾರಕರು ಈಗಷ್ಟೇ Under 18 team ಕಟ್ಟುತ್ತಿದ್ದಾರೆ. ಹಾಗಾಗಿ ಪ್ರಚಾರಕರು ಮತ್ತು ತಂಡ ಇಬ್ಬರೂ ಒಟ್ಟಿಗೆ ಸ್ನಾತಕರಾಗುವವರೆಗೆ ಕಾಯಬೇಕು ಕಣಯ್ಯಾ ಎನ್ನುತ್ತಿದ್ದರು.
ಅವರಿಗೆ ಇತ್ತೀಚಿನ ವರ್ಷಗಳಲ್ಲಿ ಧರ್ಮ ಜಾಗರಣದ ಜವಾಬ್ದಾರಿ ಇತ್ತು. ಹೇಗಿದೆ ವಾಮನ್ ಹೊಸ ಜವಾಬ್ದಾರಿ ಎಂದು ಕೇಳಿದಾಗ – ಇದೇ ಜವಾಬ್ದಾರಿಯನ್ನು, ಈ ಥರದ ಕೆಲಸವನ್ನು 25 ವರ್ಷಗಳ ಮೊದಲೇ ಕೊಡಬೇಕಿತ್ತು ಕಣಯ್ಯಾ ಎಂದರು.
ಮೈಸೂರಿಗೆ ಹೋದಾಗಲೆಲ್ಲಾ ಸಿಗುತ್ತಿದ್ದ ವಾಮನ್ ಕಳೆದ ಕೆಲವು ತಿಂಗಳಿಂದ ಸಿಕ್ಕಿರಲಿಲ್ಲ. ಅವರ ಅನಾರೋಗ್ಯದ ವಿಷಯವನ್ನು ಕೇಳಿ ತಿಳಿದುಕೊಂಡೆ.
ವಾಮನ್ ರದ್ದು ಸರಳ ಸಜ್ಜನಿಕೆಯ ಬದುಕು. ಅವರ ಸ್ವಯಂಸೇವಕತ್ವವು ಒಂದು ಮಾದರಿ. ಸಂಘ ಮತ್ತು ಸಮಾಜವಲ್ಲದೆ ಬೇರಾವುದೂ ಅವರ ಬದುಕಿನಲ್ಲಿ ಇರಲಿಲ್ಲ. ‘ಜೀವನವನ್ನು ಸವೆಸಿದರು’ ಎಂಬ ಮಾತು ವಾಮನ್ ರ ವಿಷಯದಲ್ಲಿ ಅಕ್ಷರಶಃ ನಿಜ.
ಅವರ ಚಿಂತನೆ, ಮಾತು, ನಡವಳಿಕೆಯನ್ನು ನೋಡಿದಾಗ ಕುವೆಂಪು ಅವರ ಕವನದ ಕೆಲವು ಸಾಲುಗಳು ನೆನಪಾಗುತ್ತದೆ. ಈ ಸಾಲುಗಳು ಇವರಿಗಾಗಿಯೋ ಇಂತಹವರಿಗಾಗಿಯೋ ಬರೆದದ್ದು ಅನಿಸುತ್ತದೆ –
ವಸಂತ ವನದಲಿ ಕೂಗುವ ಕೋಗಿಲೆ ರಾಜನ ಪದವಿಯ ಬಯಸುವುದಿಲ್ಲ | ಹೂವಿನ ಮರದಲಿ ಜೇನಿನ ಹುಳುಗಳು ಮೊರೆವುದು ರಾಜನ ಭಯದಿಂದಲ್ಲ ||
ವಾಮ್ನಾ ಮಾಮನ ಸ್ಮೃತಿಗೆ ಭಾವಪೂರ್ಣ ಶ್ರದ್ಧಾಂಜಲಿ 🙏
ದೀಪು
ಇನ್ನೊಂದು ಲೇಖನ: ನಮ್ಮ ವಾಮನ್-ಜಿಯ ದೇಶ ಭಕುತಿ ಎಂದರೆ….
ವಾಮನ್ ಜಿ, ಮೈಸೂರಿನ ಈ ಸ್ವಯಂಸೇವಕನನ್ನು ನೋಡಿದಾಗಲೆಲ್ಲಾ ಮೂಡುತ್ತಿದ್ದ ಪ್ರಶ್ನೆಗಳು ಹತ್ತಾರು. ಯಾರೀ, ಬೆವರಿನ ಮನುಷ್ಯ ? ಹಳತಾದ ಅಂಗಿ, ಶೇವಿಂಗ್ ರಹಿತ ಕೆನ್ನೆ, ಮುಗ್ಧ ನಗು, ಚಡಪಡಿಕೆಯ ಮುಖ ಅದೇನೋ ಧಾವಂತ.. ನೋಡಲು ಥೇಟ್ ಬಣ್ಣಿತ ಕಾಮ್ರೇಡ್. ನಡೆಯಲ್ಲಿ ಮಾತ್ರ ಅದಕ್ಕಿಂತ ಮಿಗಿಲು ಸೇವೆ ಎಂಬ ಯಜ್ಞ, ದೇಶವೆಂಬ ಭಕುತಿಯೂ ಅವರ ಉಸಿರು.
ಎದುರು ಸಿಕ್ಕಾಗಲೆಲ್ಲಾ ಅವರ ಮೊದಲ ಕುಶಲೋಪರಿ- “ನಮ್ಮವರು ನಮ್ ಹುಡುಗನಿಗೆ ಮತ್ತೇನಾದ್ರೂ ಮೋಸ ಮಾಡಿದ್ರಾ ?, ಬದಲಿಸೋಣ ನಮ್ಮವರನು…’ ನಮ್ಮ ಹುಡುಗರು ಎಂದರೆ ಶೋಷಿತರು, ಅಸಹಾಯಕರು ನಮ್ಮವರು ಅಂದ್ರೆ ಅವರಂಥ ಶ್ರೇಷ್ಠತಮರು ! ವಾಮನ್ ಜಿಯ ಎರಡನೇ ಮಾತು: “ನೋಡಪ್ಪಾ, ನಮ್ಮಜ್ಜ ಮಹಾನ್ ಬಲಿತ, ಕೈಯಲ್ಲಿ ಕಾಸು ಕರಿಮಣಿ ಇಲ್ಲದಿದ್ದರೂ ಹುಸಿ ಶ್ರೇಷ್ಠತೆಗೆ ಬರವಿರಲಿಲ್ಲ. ಅರಿವಿದ್ದೋ ಇಲ್ಲದೆಯೋ ನೋಯಿಸುವುದೇ ಆತನ ಹುಟ್ಟುಗುಣವಾಗಿತ್ತು ! ಆದರೆ ಆತ ಒಳ್ಳೆಯವ, ಬದಲಾಯಿಸೋಣ, ಅಸಹಾಯಕರನ್ನು ಶಕ್ತರಾಗಿಸೋಣ”
ವ್ಯಾನ್ ಓಡಿಸುತ್ತಲೇ ಬದುಕು ಕಟ್ಟಿಕೊಂಡಿದ್ದ ವಾಮನ್ ಜಿ ಆ ಕೂಲಿನಾಲಿಯ ಶ್ರಮದಲ್ಲೆ ಅಸಹಾಯಕರ ನೆರವಿಗೆ ಧಾವಿಸುತ್ತಿದ್ದರು. ದುಡಿಮೆಯ ಒಂದಿಷ್ಟು ಕೂಲಿಯನು ಸಮಾಜದ ಅಕ್ಷಯಕ್ಕೆ ಮೀಸಲಿಟ್ಟಿದ್ದರು ನಾಡು, ನುಡಿ, ದೇಶ,ಕೋಶ, ಸೇವೆ, ಸಾಮರಸ್ಯ ಎಂದರೆ ಮೊದಲಿಗರಾಗಿ ಎದ್ದುನಿಲ್ಲುತ್ತಿದ್ದರೂ ಅದು ಯಾತಕ್ಕೆ ? ಬಾವುಟ ಕಟ್ಟಲು, ಭಾಷಣ ಕೇಳಲು, ಊಟ ಬಡಿಸಲು… ಸಹಾಯ ಮಾಡಲಷ್ಟೆ ! ವೇದಿಕೆ ಹತ್ತಿ ಭಾಷಣ ಮಾಡಿದ್ದು ಬೈಠಕ್ ತೆಗೆದುಕೊಂಡಿದ್ದು ಕಡಿಮೆ ಅವರದೇನಿದ್ದರೂ ಕಾರ್ನರ್ ಮಾತು ಅಸಹಾಯಕರಿಗೆ ಮಾತು ಬರಲಿ, ವೇದಿಕೆ ಅವರಿಗೆ ಮೀಸಲಿರಲಿ ಎನ್ನುತ್ತಿದ್ದರು.
ಮನೆಯಲ್ಲಿ ಅಜ್ಜ ಕಾಯಿಲೆಯಿಂದ ಮಲಗಿದ್ದರೂ ಮೊದಲ ಮಾತು ಲೋಕದ್ದೇ, ಬಳಿಕ ಅಜ್ಜನ ವಿಚಾರ ! ಅದೊಮ್ಮೆ ಅವರೆಂದರು- “ಆಸ್ಪತ್ರೆಯಲ್ಲಿರುವ ನಮ್ಮಜ್ಜನಿಗೆ ದಲಿತರಿಂದಲೇ ರಕ್ತ ಕೊಡಿಸಿದೆ, ಅವರ ಮನೆಯ ಗಂಜಿ ಕುಡಿಸಿದೆ ಈಗ ಆತ ಬದಲಾದ,”
ನಿಜ ಹೇಳುವೆ ಅವರೊಬ್ಬ ಮೀಸಲುವಾದಿ, ರಾಷ್ಟ್ರೀಯ ಸಮಾಜವಾದಿ, ಸಾಮರಸ್ಯ ಸಹಾಯವಾದಿ ಇಂತಿರ್ಪ ಸ್ವಯಂಸೇವಕ ಲೋಕದ ಸೇವೆ ನಿಲ್ಲಿಸಿ ಹೊರಟೇ ಬಿಟ್ಟರು ಹೋಗಿ ಬನ್ನಿ ವಾಮನ್ ಜಿ…
ನೀವು ಹೇಳಿಕೊಡುತ್ತಿದ್ದ ಸಂಘದ ಗೀತೆ ನೆನಪಾಗುತ್ತಿದೆ ‘ದೀನ ದಲಿತ ಸೇವೆಯೇ ಪರಮ ಆರಾಧನೆ, ಸಾಕು ಬರಿಯ ಬೋಧನೆ, ಬೇಕು ಹಿರಿಯ ಸಾಧನೆ ದಿಟದಿ ನಾವು ಅಳಿಸಬೇಕು ನುಡಿಯ ನಡೆಯ ಅಂತರ ರಚಿಸಬೇಕು ನವ ಸಮಾಜ ಸರ್ವಾಂಗ ಸುಂದರ!”
ಈ ಗೀತೆಯಲ್ಲಿ, ಅದರ ಆಶಯದಲ್ಲಿ ನೀವಿರುತ್ತೀರಿ, ನಾವು ಹಾಡುತಿರುತ್ತೇವೆ ಸಮಾಜ ಬದಲಾಗುವವರೆಗೆ !
-ಒಬ್ಬ ಸ್ವಯಂಸೇವಕ (ವಾಮನ್ ಜಿ ಪ್ರಚಾರ ಬಯಸುತ್ತಿರಲಿಲ್ಲ. ಹಾಗಾಗಿ ಬರೆದವರ ಹೆಸರನ್ನು ಬಹಿರಂಗ ಪಡಿಸುತ್ತಿಲ್ಲ)
ಮೈಸೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಯುಗಾದಿ ಉತ್ಸವವು ಮೈಸೂರಿನ ಕೃಷ್ಣಮೂರ್ತಿ ಪುರಂದಲ್ಲಿರುವ ಶಾರದಾ ವಿದ್ಯಾಸಂಸ್ಥೆಯ ಮೈದಾನದಲ್ಲಿ ವಿಶೇಷವಾಗಿ ನಡೆಯಿತು.
ಸ್ವಯಂ ಸೇವಕರ ಲಯಬದ್ಧ ಲಘು ವ್ಯಾಯಾಮದಿಂದ ಶುರುವಾದ ಕಾರ್ಯಕ್ರಮವು ಸಾವಿರಾರು ಜನರ ಘೋಷದೊಂದಿಗೆ ಧ್ವಜಾರೋಹಣ, ಪ್ರಣಾಮ್ ಮುಂದುವರೆಯಿತು.
ಸಂಘದ ನೂರನೇ ವರ್ಷದ ಸಂಭ್ರಮಕ್ಕೆ ಬಿಡುಗಡೆಗೊಂಡ ಯುಗಾದಿ ವಿಶೇಷಾಂಕದ ಪರಿಚಯ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ವಿಜ್ಞಾನಿ ಪ್ರೊ. ಕೆ. ಎಸ್. ರಂಗಪ್ಪ ಅವರು ಪಾಲ್ಗೊಂಡಿದ್ದರು.
ಹೊಸ ವರುಷದ ಮೊದಲ ದಿನ, ಯುಗಾದಿ ದಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ.ಕೇಶವ ಬಲಿರಾಮ ಹೆಗ್ಡೆವಾರ್ ಮೊದಲ ಸರಸಂಘಚಾಲಕರು ಹುಟ್ಟಿದ ದಿನ. ಅವರ ಕುರಿತಾದ ಕೇಶವನ ಧ್ಯೇಯವಿದು ಹಾಡು ಎಲ್ಲರ ಮನಸೆಳೆಯಿತು.
ಕರ್ನಾಟಕ ದಕ್ಷಿಣ, ಸಹ ಪ್ರಾಂತ ಪ್ರಚಾರಕರಾದ ನಂದೀಶ ಅವರು ಮಾತನಾಡಿ,ಯುಗಾದಿ ಎಂದರೆ ಅವಧಿಯ ಪ್ರಾರಂಭ. ಮನುಷ್ಯ ಜೀವನವು ನಿರಂತನ ಪರಿವರ್ತನೆಯಲ್ಲಿಯೇ ನಡೆಯುತ್ತಿರುತ್ತದೆ. ನಮ್ಮ ಹಬ್ಬ ಹರಿದಿನಗಳು ಪ್ರಕೃತಿ ಜೊತೆಗೆ ಹೊಂದಿಕೊಂಡು ರೂಪುಗೊಂಡಿವೆ ಎಂದು ತಿಳಿಸಿದರು.
ಬೇವು ಬೆಲ್ಲದ ಸಮ್ಮಿಶ್ರಣದೊಂದಿಗೆ ನಳನಳಿಸುವ ಪ್ರಕೃತಿಯನ್ನು ಪೂಜಿಸುತ್ತ ನಮ್ಮ ಶರೀರವನ್ನು ಕಹಿಯಿಂದ ಶುದ್ಧೀಕರಿಸಿ ಸಿಹಿಯನ್ನು ಹಂಚುತ್ತ ಕಳೆಯುವ ದಿನಕ್ಕೆ ನಾಂದಿ ಹಾಕುವ ಯುಗಾದಿ ಹಬ್ಬ ಹಿಂದೂ ಹಬ್ಬಗಳಲ್ಲಿ ಮೊದಲನೆಯ ಹಬ್ಬ.
ಒಳ್ಳೆಯದನ್ನು ಒಳಗಿರಿಸಿಕೊಂಡು, ಬೇಡದ್ದನ್ನು ಹೊರದಬ್ಬಿ ನಮ್ಮ ಬೇರುಗಳನ್ನು ಗಟ್ಟಿಗೊಳಿಸಿಕೊಂಡು ,ಹೊಸ ಚಿಗುರಿಗೆ ಭಧ್ರತೆಯ ಬುನಾದಿಯನ್ನು ಸಜ್ಜುಗೊಳಿಸುವದರೆಡೆಗೆ ಸಂಘದ ಉದ್ದೇಶವು ಸಮ್ಮಿಳಿತವಾಗಿದೆ. ಇದಕ್ಕೆ ಪೂರಕದಂತೆ ನಿರಂತರ ಪರಿವರ್ತನ ಪ್ರಕ್ರಿಯೆಯು ಹಿಂದೂ ಸಮಾಜದ ಉದಾರತೆ, ಬಿಗಿತನವನ್ನು ಹುರಿಗೊಳಿಸಿ ಇಂದಿಗೂ ಸನಾತನ ಧರ್ಮದ ತತ್ವದ ಬಿಂಬದಂತೆ ಕಂಡಿದೆ.
ಸಮಾಜವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದರು. ಸಮಸ್ಯೆಯ ಪರಿಹಾರಕ್ಕೆ ಮಾರ್ಗಗಳನ್ನು ಹುಡುಕುವುದರ ಕಡೆ ಯೋಚನೆಗಳನ್ನು ಮಾಡಬೇಕಾಗಿದೆ ಎಂಬ ಪಂಡಿತ್ ದೀನದಯಾಳವರ ಮಾತುಗಳನ್ನು ಅವರು ಸ್ಮರಿಸಿದರು.
ಹಿಂದೂ ರಾಷ್ಟ್ರದ ಯೋಚನೆಗಳು ಸನಾತನ ಧರ್ಮದ, ಹಿಂದುತ್ವದ ತಳಹದಿಯಲ್ಲೇ ರೂಪುಗೊಂಡಿರುತ್ತವೆ. ಭಾರತ ಪೂರ್ವದಲ್ಲಿದೆ,ಪೂರ್ವವೆಂದರೆ ಬೆಳಕು, ಜ್ಞಾನದ ದ್ಯೋತಕ. ರಷ್ಯಾದ ಎಷ್ಟೋ ಸಮಸ್ಯೆಗಳಿಗೆ ಭಾರತದ ಎಷ್ಟೋ ನಿಲುವುಗಳು ಪರಿಹಾರವಾಗಿ ಕಂಡಿವೆ. ಯುದ್ಧದ ಸಂದರ್ಭದಲ್ಲಿ ಭಾರತದ ಮಧ್ಯಸ್ಥಿಕೆಯು ಯುದ್ಧವನ್ನು ನಿಲ್ಲಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ ಎಂದು ನಂದೀಶ ತಿಳಿಸಿದರು.
ಪರ್ಯಾವರಣದ ಚಿಂತನೆಯನ್ನು ಮಾಡುವಲ್ಲಿ ನಮ್ಮ ಸಮಾಜ ಹೇಗಿರಬೇಕು ಎಂಬುದನ್ನು ಉದಾಹರಣೆ ಸಹಿತ ವಿವರಣೆ ನೀಡಿದರು. ನಮ್ಮ ಪೂರ್ವಜರ ಪ್ರಕೃತಿ ಪೋಷಣೆಯು ಅದರಲ್ಲಿಯ ಬದಲಾವಣೆಗೆ ಅನುಗುಣವಾಗಿ ಹಬ್ಬ ಹರಿದಿನಗಳನ್ನು ಹುಟ್ಟಿ ಹಾಕಿದೆ. ಒಂದೊಂದು ಹಬ್ಬದಲ್ಲಿಯೂ ಈ ಎಲ್ಲ ಅಂಶಗಳನ್ನು ಕಾಣಬಹುದು.
ವ್ಯಕ್ತಿ ನಿರಪೇಕ್ಷಿತ, ಪರಿಸ್ಥಿತಿ ನಿರಪೇಕ್ಷಿತ,ಕಾಲ ನಿರಪೇಕ್ಷಿತದ ಅಡಿಯಲ್ಲಿ ಕುಡಿಯೊಡೆದ ಸಂಘವು ತನ್ನದೇ ಆದ ನಿಲುವಿನೊಂದಿಗೆ ಭಾರತ, ಹಿಂದೂ ರಾಷ್ಟ್ರದ ಚಿಂತನೆಗಳ ಮೂಲದೊಡನೆ ಸ್ಥಾಪನೆಗೊಂಡಿದೆ. ಇಂದಿಗೂ ಜಗತ್ತಿನ ಎಲ್ಲರ ನೋಟ ಭಾರತದೆಡೆಗೆ ನೋಡುವಂತೆ ಮಾಡಿದೆ, ದೂರದೃಷ್ಟಿತ್ವದ ನಾಯಕತ್ವ, ವಿಶ್ವಕ್ಕೆ ಗುರುವಾಗಿರುವ ಚಿಂತನೆಗಳು ನಮ್ಮ ದೇಶದ ನೆಲದ ತತ್ವ ಸತ್ವಗಳು ಎಂದು ತಿಳಿಸಿದರು.
ಶಾಂತಿಯ ನೆಲೆಗೆ ಒಂದು ಮನೆಯ ಸದಸ್ಯರೆಲ್ಲರೂ ಶ್ರಮಿಸುವಾಗ ಒಂದು ದೇಶದ ಶಾಂತಿಯು ನಮ್ಮ ನಿಮ್ಮಂತಹ ಜನರ ವಿಚಾರದಲ್ಲಿ ಇರಬೇಕು.ಶ್ರೀ ರಾಮನ ಪ್ರತಿಷ್ಠಾಪನೆಯ ಸಂದರ್ಭವು ನಿರಂತರತೆಯಲ್ಲಿ ಜಯವಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಹಾಗಾಗಿ ನಮ್ಮೆಲ್ಲರ ಯೋಚನೆಯು ನಿರಂತರವಾಗಿದ್ದು ಹೋರಾಟ ಮುಂದುವರಿಯಬೇಕು ಎಂದು ಪ್ರೊ.ರಂಗಪ್ಪ ಹಾಗೂ ನಂದೀಶ ಕರೆಕೊಟ್ಟರು.