ಸಿಎಂ ಸಿದ್ದರಾಮಯ್ಯ‌ ಆರೋಗ್ಯದಲ್ಲಿ ದಿಢೀರ್ ಏರುಪೇರು

ಬೆಳಗಾವಿ: ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಚಿಕಿತ್ಸೆ ನಡೆದಿದೆ.

ಬೆಳಗಾವಿ ಸರ್ಕ್ಯೂಟ್ ಹೌಸ್​​ ನಲ್ಲಿ ಸಿಎಂ ವಿಶ್ರಾಂತಿ ಪಡೆಯುತ್ತಿದ್ದು,ಅವರಿಗೆ ಚಿಕಿತ್ಸೆ ನೀಡಲಾಗಿದೆ.

ಚಳಿಗಾಲದ ಅಧಿವೇಶನದಲ್ಲಿ ಭಾರೀ ಚರ್ಚೆ ನಡೆಯುತ್ತಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನದಿಂದ ಸದನಕ್ಕೆ ಗೈರಾಗಿದ್ದು, ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಶಾಸಕರು, ಸಚಿವರುಗಳು ಸರ್ಕ್ಯೂಟ್ ಹೌಸ್​​ಗೆ ದೌಡಾಯಿಸಿ ಸಿಎಂ ಆರೋಗ್ಯ ವಿಚಾರಿಸಿದ್ದಾರೆ.

ಬುಧವಾರ ಮಧ್ಯಾಹ್ನದ ಬಳಿಕ ಸಿಎಂ ಸಿದ್ದರಾಮಯ್ಯ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಅವರು ಅಧಿವೇಶನಕ್ಕೆ ಹೋಗದೆ ಸರ್ಕ್ಯೂಟ್ ಹೌಸ್‌ನಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.

ಹೀಗಾಗಿ ಸಂಜೆಯವರೆಗೆ ನಿಗದಿಯಾಗಿದ್ದ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.ವಿಷಯ ತಿಳಿಯುತ್ತಿದ್ದಂತೆ ಸಿಎಂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸರ್ಕ್ಯೂಟ್ ಹೌಸ್‌ಗೆ ಧಾವಿಸಿ ತಂದೆಯ ಆರೋಗ್ಯ ವಿಚಾರಿಸಿದ್ದಾರೆ.

ತಂದೆ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ.ಯತೀಂದ್ರ ಅವರು ತಂದೆಯವರ ಆರೋಗ್ಯ ಚೆನ್ನಾಗಿದೆ. ಗ್ಯಾಸ್ಟ್ರೋಕೇಷನ್ ಇನ್ಫೆಕ್ಸನ್ ಆಗಿದೆ. ಡೈರಿಯಾ ಸಮಸ್ಯೆ ತರ ಆಗಿದೆ. ವೈದ್ಯರು ತಪಾಸಣೆ ಮಾಡಿ ಮಾತ್ರೆಗಳನ್ನು ಕೊಟ್ಟಿದ್ದು, ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ ನಾಳೆ ಅಧಿವೇಶನಕ್ಕೆ ಬರುತ್ತಾರೆ ಎಂದ ಸ್ಪಷ್ಟಪಡಿಸಿದರು.

ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರಾದ ಸುದ್ದಿ ಹರಡುತ್ತಿದ್ದಂತೆ ವಿವಿಧ ಪಕ್ಷಗಳ ನಾಯಕರು ಸರ್ಕ್ಯೂಟ್ ಹೌಸ್‌ಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಅದರಲ್ಲೂ ವಿಶೇಷವಾಗಿ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಏಕಾಂಗಿಯಾಗಿ ಬಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು ತೀವ್ರ ಕುತೂಹಲ ಮೂಡಿಸಿದೆ.

ನಂತರ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರು ಕೂಡ ಸಿಎಂ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಸಿದ್ದು ಆಪ್ತರಲ್ಲಿ ಒಬ್ಬರಾದ ಸಚಿವ ಬೈರತಿ ಸುರೇಶ್ ಅವರು ಪ್ರತಿಕ್ರಿಯಿಸಿ, ಸಿಎಂ ಆರೋಗ್ಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ, ಅವರು ಚೆನ್ನಾಗಿದ್ದಾರೆ. ಅವರ ಜೊತೆ ನಾನು ಊಟ ಮಾಡಿ ಬಂದಿದ್ದೇನೆ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ‌ ಆರೋಗ್ಯದಲ್ಲಿ ದಿಢೀರ್ ಏರುಪೇರು Read More