ರಾಜ್ಯಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಹೆಚ್.ಡಿ.ದೇವೇಗೌಡರ ಆಕ್ರೋಶ

ನವದೆಹಲಿ: ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರ ವಿರುದ್ಧ ಕಾಂಗ್ರೆಸ್ ಮೈತ್ರಿಕೂಟದ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಲು ನೀಡಿರುವ ನೋಟಿಸ್ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹರಿಹಾಯ್ದರು.

ಈ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ ದೇವೆಗೌಡರು, ಕಾಂಗ್ರೆಸ್ ಪಕ್ಷದ ಸದಸ್ಯರ ವರ್ತನೆಯನ್ನು ಉಗ್ರವಾಗಿ ಖಂಡಿಸಿ
ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ದೂಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭಾಪತಿಗಳು ಸದನವನ್ನು ಅತ್ಯುತ್ತಮವಾಗಿ ಮುನ್ನಡೆಸುತ್ತಿದ್ದಾರೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಶೈಲಿ ಉತಗತಮವಾಗಿದೆ,
ಸಂಸತ್ತಿನ ಘನತೆಯನ್ನು ಎತ್ತಿಹಿಡಿಯಬೇಕು ಮತ್ತು ಕಲಾಪಕ್ಕೆ ಅಡ್ಡಿಪಡಿಸುವುದನ್ನು ನಿಲ್ಲಿಸಬೇಕು ಎಂದು ಪ್ರತಿಪಕ್ಷಗಳನ್ನು ಒತ್ತಾಯಿಸಿದರು.

ರಾಜ್ಯಸಭೆಯ ಸಭಾಪತಿಗಳ ವಿರುದ್ಧ ಇಂತಹ ನಿರ್ಣಯವನ್ನು ಮಂಡಿಸಲು ಹೊರಟಿರುವುದು ಇತಿಹಾಸದಲ್ಲಿ ಇದೇ ಮೊದಲು. ಇದು ಒಳ್ಳೆಯ ಸಂಪ್ರದಾಯ ಅಲ್ಲ. ಇದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ದೇವೆಗೌಡರು ಎಚ್ಚರಿಕೆ ನೀಡಿದರು.

ಮೊದಲು ಕಾಂಗ್ರೆಸ್ ಸದಸ್ಯರು ಇಂತಹ ಕೆಟ್ಟ ಸಂಪ್ರದಾಯವನ್ನು ಆರಂಭ ಮಾಡಿದ್ದಾರೆ. ಇದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಪಡಿಸಲಿದೆ. ನಾವು ಇದನ್ನು ಸಹಿಸುವುದಿಲ್ಲ ಹಾಗೂ ಇದಕ್ಕೆ ಅವಕಾಶವನ್ನು ಕೊಡಬಾರದು ಎಂದು ಹೇಳಿದರು.

ನಿಮ್ಮ ಸದಸ್ಯರು ಸದನದ ಗೌರವ ಹಾಳು ಮಾಡುತ್ತಿದ್ದಾರೆ. ಅವರನ್ನು ತಡೆಯುವ ಜವಾಬ್ದಾರಿ ನಿಮ್ಮದು. ಸಂಸದೀಯ ಸೌಹಾರ್ದತೆಯನ್ನು ಎತ್ತಿಹಿಡಿಯುವುದು ನಿಮ್ಮ ಮತ್ತು ನಿಮ್ಮ ಪಕ್ಷದ ಹೊಣೆಗಾರಿಕೆ ಆಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೇವೇಗೌಡರು ನೇರ ಮಾತುಗಳಲ್ಲಿ ತಿಳಿಸಿದರು.

ರಾಜ್ಯಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಹೆಚ್.ಡಿ.ದೇವೇಗೌಡರ ಆಕ್ರೋಶ Read More

ಮೇಕೆದಾಟು ಯೋಜನೆಯಿಂದ ಬೆಂಗಳೂರಿಗರ ನೀರಿನ ಬವಣೆಗೆ ಮುಕ್ತಿ- ಹೆಚ್ ಡಿ ಡಿ

ನವದೆಹಲಿ: ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಟ್ಯಾಂಕರ್ ಮಾಫಿಯಾ ಜನರನ್ನು ಸುಲಿಗೆ ಮಾಡುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬೇಸರ ಪಟ್ಟರು.

ರಾಜ್ಯಸಭೆಯಲ್ಲಿ ಮಾತನಾಡಿದ ಗೌಡರು, ಮಾಹಿತಿ ತಂತ್ರಜ್ಞಾನ ರಾಜಧಾನಿ ಆಗಿರುವ ಬೆಂಗಳೂರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದರು.

ಬೆಂಗಳೂರಿನ ನೀರಿನ ಬವಣೆ ನೀಗಿಸಬೇಕಾದರೆ ಮೇಕೆದಾಟು ಯೋಜನೆಗೆ ಅನುಮತಿ ಸಿಗಬೇಕಿದೆ. ಎಲ್ಲಾ ರಾಜಕೀಯ ಬದಿಗಿಟ್ಟು ಈ ಯೋಜನೆಗೆ ಬೆಂಬಲ ಕೊಡಬೇಕು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಮೇಕೆದಾಟು ಯೋಜನೆಗಾಗಿ ಕೆಲಸ ಮಾಡಿವೆ. ಆದರೆ ಇಲ್ಲಿಯವರೆಗೂ ಯಶಸ್ಸು ಸಿಕ್ಕಿಲ್ಲ. ಯೋಜನೆಗೆ ಅನುಮತಿ ನೀಡುವಂತೆ ಕೇಂದ್ರಕ್ಕೆ ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ ಸರ್ಕಾರ ಆದಷ್ಟು ಬೇಗ ಒಪ್ಪಿಗೆ ನೀಡಬೇಕು ಎಂದು ಕೋರಿದರು.

ಬೆಂಗಳೂರು ನಗರ ಬೆಳೆಯುತ್ತಲೇ ಇದೆ, ಉದ್ಯೋಗ ಅರಸಿ ದೇಶದ ಎಲ್ಲಾ ಮೂಲೆಗಳಿಂದ ಜನರು ಅಲ್ಲಿಗೆ ಹೋಗುತ್ತಿದ್ದಾರೆ. ಎಲ್ಲರಿಗೂ ಆಶ್ರಯ ನೀಡುವ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ ಎಂದು ಹೇಳಿದರು.

1.45 ಕೋಟಿ ಜನಸಂಖ್ಯೆ ಇರುವ ಬೆಂಗಳೂರಿಗೆ 16 ಟಿಎಂಸಿ ಅಡಿಯಷ್ಟು ಕಾವೇರಿ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಆದರೆ, ನಗರದ ಬೇಡಿಕೆಗೆ ಹೋಲಿಸಿದರೆ ಈ ನೀರು ಬಹಳ ಕಡಿಮೆ. ಇದನ್ನೇ ಅಸ್ತ್ರ ಮಾಡಿಕೊಂಡಿರುವ ಟ್ಯಾಂಕರ್ ಮಾಫಿಯಾ ಜನರನ್ನು ಸುಲಿಗೆ ಮಾಡುತ್ತಿದೆ. ಒಂದು ಟ್ಯಾಂಕರ್ ನೀರಿಗೆ 3000 ರೂ ತೆರಬೇಕಿದೆ, ಕೇವಲ ನಾಲ್ಕು ಜನರಿರುವ ಒಂದು ಕುಟುಂಬ ಪ್ರತೀ ತಿಂಗಳು ನೀರಿಗಾಗಿ 20,000 ಖರ್ಚು ಮಾಡಬೇಕಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಎಲ್ಲರೂ ರಾಜಕೀಯ ಬದಿಗಿಟ್ಟು ಮೇಕೆದಾಟು ಯೋಜನೆ ಬಗ್ಗೆ ಬೆಂಬಲ ನೀಡಬೇಕು ಈ ಯೋಜನೆ ಕಾರ್ಯಗತವಾದರೆ ನೀರಿನ ಸಮಸ್ಯೆಗೆ ಮುಕ್ತಿ ದೊರೆಯಲಿದೆ ಎಂದು ದೇವೇಗೌಡರು ತಿಳಿಸಿದರು.

ಮೇಕೆದಾಟು ಯೋಜನೆಯಿಂದ ಬೆಂಗಳೂರಿಗರ ನೀರಿನ ಬವಣೆಗೆ ಮುಕ್ತಿ- ಹೆಚ್ ಡಿ ಡಿ Read More