ನಾಗಮಂಗಲ ಕೋಮುಗಲಭೆ ವೇಳೆ ಪಾಕ್ ಪರ ಘೋಷಣೆ:ಅಶೋಕ್ ಕಿಡಿ

ನಾಗಮಂಗಲ:‌ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮು
ಗಲಭೆಯಲ್ಲಿ ಮೂವರು ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳೆ ಹೇಳಿದ್ದಾರೆ‌ ಎಂಬುದಾಗಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

ಇದು ಅಂದಿನ ಘಟನೆಯಲ್ಲಿ ನಿಷೇಧಿತ ಸಂಘಟನೆಗಳ ಕೈವಾಡವಿರುವುದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಚಿಕ್ಕಮಗಳೂರಲ್ಲಿ ಬೈಕ್ ನಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದಿರುವ ಪುಂಡಾಟ, ದಾವಣಗೆರೆಯ ಗಾಂಧಿನಗರ ಹಾಗೂ ಅಹ್ಮದ್ ನಗರಗಳಲ್ಲಿ ಹಿಂದೂ ಯುವಕರು ಬಾವುಟ ಕಟ್ಟಿದ್ದಕ್ಕೆ ಮತಾಂಧ ಪುಂಡರು ಅವರ ಮೇಲೆ ಹಲ್ಲೆ ಮಾಡಿರುವುದು, ಇದನ್ನೆಲ್ಲಾ ಗಮನಿಸಿದರೆ ಈ ಘಟನೆಗಳು ಗಣೇಶೋತ್ಸವವನ್ನೇ ಟಾರ್ಗೆಟ್ ಮಾಡಿರುವಂತಿದೆ ಎಂದು ಹೇಳಿದ್ದಾರೆ.

ಇಂತಹ ಘಟನೆಗಳು ಅಯೋಧ್ಯ ರಾಮ ಮಂದಿರದ ಉದ್ಘಾಟನೆ ಸಂದರ್ಭದಲ್ಲಿಯೂ ನಡೆದಿತ್ತು. ಹಿಂದೂಗಳ ಹಬ್ಬಗಳು, ಉತ್ಸವಗಳು, ಸಂಭ್ರಮಾಚರಣೆಗಳನ್ನೇ ಗುರಿಯಾಗಿಸಿ ರಾಜ್ಯಾದ್ಯಂತ ನಡೆಸುತ್ತಿರುವ ಇಂತಹ ದುಷ್ಕೃತ್ಯಗಳ ಹಿಂದೆ ಮತೀಯ ಮೂಲಭೂತವಾದಿ ಸಂಘಟನೆಗಳ ದೊಡ್ಡ ಜಾಲವೇ ಇರುವಂತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಂತಾರಾಜ್ಯ, ಅಂತರಾಷ್ಟ್ರೀಯ ನಂಟು ಹೊಂದಿರುವ ಇಂತಹ ವ್ಯವಸ್ಥಿತ, ಪ್ರಾಯೋಜಿತ, ಜಾಲವನ್ನ ಬೇಧಿಸುವುದು ಸ್ಥಳೀಯ ಪೊಲೀಸರಿಂದ ಅಸಾಧ್ಯವಾಗಿದ್ದು, ಕೂಡಲೇ ಈ ಪ್ರಕರಣಗಳನ್ನ ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಅಶೋಕ್ ಒತ್ತಾಯಿಸಿದ್ದಾರೆ.

ನಾಗಮಂಗಲ ಕೋಮುಗಲಭೆ ವೇಳೆ ಪಾಕ್ ಪರ ಘೋಷಣೆ:ಅಶೋಕ್ ಕಿಡಿ Read More

ಭಯೋತ್ಪಾದನಾ ಚಟುವಟಿಕೆ ನಿಯಂತ್ರಣಕ್ಕೆ ಟಾಸ್ಕ್‌ ಫೋರ್ಸ್‌ ರಚಿಸಿ:ಅಶೋಕ ಒತ್ತಾಯ

ಬೆಂಗಳೂರು: ಭಯೋತ್ಪಾದಕರು ಬಿಜೆಪಿ ಕಚೇರಿಯಲ್ಲಿ ಬಾಂಬ್‌ ಸ್ಫೋಟಿಸುವ ಸಂಚು ಮಾಡಿದ್ದು ಅತ್ಯಂತ ಖಂಡನೀಯ,
ಉಗ್ರ ಚಟುವಟಿಕೆ ನಿಯಂತ್ರಣಕ್ಕೆ ಕಾಂಗ್ರೆಸ್‌ ಸರ್ಕಾರ ವಿಶೇಷ ಟಾಸ್ಕ್‌ ಫೋರ್ಸ್‌ ರಚಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಒತ್ತಾಯಿಸಿದರು.

ಮಾಧ್ಯಮ ದವರೊಂದಿಗೆ ಮಾತನಾಡಿದ ಅಶೋಕ್, ಐಟಿ, ಬಿಟಿ ರಾಜಧಾನಿ ಬೆಂಗಳೂರಿನಲ್ಲಿ ಭಯದ ವಾತಾವರಣ ಸೃಷ್ಟಿಸಿ ಆರ್ಥಿಕತೆಯನ್ನು ನಾಶ ಮಾಡಬೇಕೆಂದು ಭಯೋತ್ಪಾದಕರು ಯೋಜನೆ ರೂಪಿಸಿದ್ದರು, ಬಾಂಗ್ಲಾದೇಶದಿಂದಲೂ ಹಲವರು ಆಧಾರ್‌ ಕಾರ್ಡ್‌ ಪಡೆದು ಬೆಂಗಳೂರಿಗೆ ಬರುತ್ತಿದ್ದಾರೆ. ಇದರಿಂದ ಭಯೋತ್ಪಾದನಾ ಚಟುವಟಿಕೆ ಹೆಚ್ಚುತ್ತಿದೆ. ರಾಜ್ಯ ಗೃಹ ಇಲಾಖೆ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯಕ್ಕೆ ನುಸುಳುವ ಬಾಂಗ್ಲಾ ಪ್ರಜೆಗಳನ್ನು ಕೂಡಲೇ ಪತ್ತೆ ಮಾಡಿ ಅವರನ್ನು ಹೊರಕ್ಕೆ ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿದೆ. ಇಲ್ಲವಾದರೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಸ್ಥಿತಿಯೇ ರಾಜ್ಯಕ್ಕೂ ಬರಲಿದೆ ಎಂದು ಅಶೋಕ್ ಎಚ್ಚರಿಸಿದರು.

ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿದ್ದನ್ನು ಕಾಂಗ್ರೆಸ್‌ ಸಚಿವರು ನಿರಾಕರಿಸಿದ್ದರು. ಪದೇ ಪದೆ ಭಯೋತ್ಪಾದಕರಿಗೆ ಪ್ರೇರಣೆಯಾಗುವ ಹೇಳಿಕೆಗಳನ್ನು ಕಾಂಗ್ರೆಸ್‌ ನಾಯಕರು ನೀಡಿದ್ದಾರೆ, ಇದರಿಂದಾಗಿ ಭಯೋತ್ಪಾದನೆಗೆ ಕುಮ್ಮಕ್ಕು ದೊರೆತಿದೆ, ಕರ್ನಾಟಕದಲ್ಲೇ ಭಯೋತ್ಪಾದನೆ ಮಾಡಿದರೆ ಏನೂ ತೊಂದರೆ ಇಲ್ಲ ಎಂದು ಭಯೋತ್ಪಾದಕರಿಗೆ ಅನ್ನಿಸಿದೆ.ಹಾಗಾಗಿಯೇ ಇಲ್ಲಿ ಹೆಚ್ಚು ಉಗ್ರ ಚಟುವಟಿಕೆ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಯೋತ್ಪಾದಕರಿಗೆ ಭಯವೇ ಇಲ್ಲ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟವಾದಾಗ, ಇದು ವ್ಯಾಪಾರ ವ್ಯಾಜ್ಯ ಎಂದು ಸಚಿವರು ಹೇಳಿದ್ದರು. ಇದರಿಂದಾಗಿಯೇ ಭಯೋತ್ಪಾದನಾ ಚಟುವಟಿಕೆ ವ್ಯವಸ್ಥಿತವಾಗಿ ನಡೆಯುತ್ತಿದೆ, ರಾಮೇಶ್ವರಂ ಕೆಫೆ ಬದಲಾಗಿ ಬಿಜೆಪಿ ಕಚೇರಿಯಲ್ಲಿ ಬಾಂಬ್‌ ಸ್ಫೋಟಿಸಬೇಕೆಂದು ಯೋಜನೆ ರೂಪಿಸಲಾಗಿತ್ತು, ಹಿಂದೂಗಳ ಮೇಲೆ ದಾಳಿ ನಡೆಸಲು ಪ್ಲಾನ್‌ ಮಾಡಲಾಗಿತ್ತು ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ವಿಚಾರದಲ್ಲಿ ಬಿಜೆಪಿಗಿಂತಲೂ ಕಾಂಗ್ರೆಸ್‌ ನಾಯಕರಿಗೆ ಹೆಚ್ಚಿನ ವಿಶ್ವಾಸವಿದೆ. ಅದಕ್ಕಾಗಿ ಸಿಎಂ ಕುರ್ಚಿಗೆ ಸ್ಪರ್ಧೆ ಹೆಚ್ಚಿದ್ದು,ಅಭಿವೃದ್ಧಿ ಚಟುವಟಿಕೆ ನಡೆಯುತ್ತಿಲ್ಲ ಎಂದು ಇದೇ ವೇಳೆ ಅಶೋಕ್ ಟೀಕಾಪ್ರಹಾರ ನಡೆಸಿದರು.

ಭಯೋತ್ಪಾದನಾ ಚಟುವಟಿಕೆ ನಿಯಂತ್ರಣಕ್ಕೆ ಟಾಸ್ಕ್‌ ಫೋರ್ಸ್‌ ರಚಿಸಿ:ಅಶೋಕ ಒತ್ತಾಯ Read More

ಬೆಂಗಳೂರು ವಿಭಜನೆಗೆ ಬಿಜೆಪಿ-ಜೆಡಿಎಸ್‌ ವಿರೋಧ- ಆರ್‌.ಅಶೋಕ್

ಬೆಂಗಳೂರು: ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ವಿಭಜನೆಯಾಗ
ಬಾರದು, ಈ ನಗರ ಕನ್ನಡಿಗರಿಗಾಗಿಯೇ ಇರಬೇಕೆಂಬ ಕಾರಣಕ್ಕೆ ಸರ್ಕಾರದ ಬೆಂಗಳೂರು ವಿಭಜನೆ ತೀರ್ಮಾನವನ್ನು ವಿರೋಧಿಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ರಾಜ್ಯ ಸರ್ಕಾರದಿಂದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಸ್ಥಾಪನೆಗೆ ಸಂಬಂಧಿಸಿದಂತೆ ಸಾಧಕ-ಬಾಧಕ ಚರ್ಚಿಸಲು ಆಯೋಜಿಸಿದ್ದ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಬ್ಭಾಗವಾಗದೆ ಹೀಗೆಯೇ ಉಳಿಯಬೇಕು. ಇಲ್ಲಿ ಕನ್ನಡಿಗರೇ ಸಾರ್ವಭೌಮರಾಗಿದ್ದು, ಇದು ಕನ್ನಡಿಗರಿಗಾಗಿಯೇ ಉಳಿಯಬೇಕು. ಇಲ್ಲಿ ಕನ್ನಡದವರೇ ಮೇಯರ್‌ ಆಗಬೇಕು. ಇದಕ್ಕಾಗಿ ಬೆಂಗಳೂರು ವಿಭಜನೆಯನ್ನು ಬಿಜೆಪಿ ಮತ್ತು ಜೆಡಿಎಸ್‌ ವಿರೋಧಿಸುತ್ತವೆ ಎಂದು ತಿಳಿಸಿದರು.

ಬಿಬಿಎಂಪಿ ಅಡಿಯಲ್ಲಿ ಸ್ಲಂ ಬೋರ್ಡ್‌, ಜಲಮಂಡಳಿ, ಬಿಎಂಟಿಸಿ ಬರುವುದಿಲ್ಲ. ಇವೆಲ್ಲವೂ ಒಂದೇ ಕಡೆ ಬಂದು, ಬಿಬಿಎಂಪಿಯೇ ನಿರ್ವಹಣೆ ಮಾಡಿದರೆ ಪ್ರತ್ಯೇಕವಾಗಿ ಐಎಎಸ್‌ ಅಧಿಕಾರಿಗಳನ್ನು ನೇಮಕ ಮಾಡುವುದು ತಪ್ಪುತ್ತದೆ. ಸರ್ಕಾರಕ್ಕೆ ಖರ್ಚು ಕಡಿಮೆಯಾಗುವುದರ ಜೊತೆಗೆ, ಜನರು ಒಂದೇ ಕಡೆ ಸೇವೆಗಳನ್ನು ಪಡೆಯಬಹುದು. ಬೇರೆ ನಗರಗಳಲ್ಲೂ ಇದೇ ರೀತಿಯಿದ್ದು, ಬೆಂಗಳೂರಿಗೂ ಇಂತಹ ವ್ಯವಸ್ಥೆ ತರಬೇಕಿದೆ ಎಂದರು.

ಇಡೀ ದೇಶಕ್ಕೆ ಒಬ್ಬ ಪ್ರಧಾನಿ, ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ ಇರುವಂತೆ ಬೆಂಗಳೂರು ನಗರಕ್ಕೆ ಒಬ್ಬ ಮೇಯರ್ ಇರಲಿ. ಅವರ ಅಧಿಕಾರಾವಧಿ ಎರಡೂವರೆ ವರ್ಷ ಅಥವಾ ಐದು ವರ್ಷ ನಿಗದಿಪಡಿಸಿದರೂ ಅಡ್ಡಿಯಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ತಜ್ಞರು ನೀಡಿರುವ ವರದಿಯ ಶೇಕಡಾ ಇಪ್ಪತ್ತರಿಂದ ಮುವತ್ತರಷ್ಟನ್ನು ಮಾತ್ರ ವಿಧೇಯಕದಲ್ಲಿ ಅಳವಡಿಸಿಕೊಂಡಿದೆ ಎಂಬುದನ್ನು ವಿ.ರವಿಚಂದ್ರ ಅವರು ಸ್ಪಷ್ಟಪಡಿಸಿದ್ದಾರೆ. ಜತೆಗೆ ಯಾರಾದರೂ ಕೊಟ್೯ನಲ್ಲಿ ಪ್ರಶ್ನೆ ಮಾಡಿದರೆ ಬಿದ್ದು ಹೋಗುತ್ತದೆ ಎಂದೂ ತಿಳಿಸಿದ್ದಾರೆ. ಈ ಹಿನ್ನೆಲೆ ಯಲ್ಲಿ ಅದರಲ್ಲಿರುವ ಲೋಪಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯನವರು ಸಂಗೊಳ್ಳಿ ರಾಯಣ್ಣನವರ ಉದಾಹರಣೆ ಮೂಲಕ ಬೆನ್ನಿಗೆ ಚೂರಿ ಹಾಕಲಾಗುತ್ತಿದೆ ಎಂದು ಎರಡು ಸಲ ಹೇಳಿಕೆ ನೀಡಿದ್ದಾರೆ. ಅವರ ಪಕ್ಷದವರೇ ಅವರಿಗೆ ಮೋಸ ಮಾಡುತ್ತಿದ್ದಾರೆ. ಮುಡಾ ಪ್ರಕರಣದಲ್ಲಿ ನಾವ್ಯಾರೂ ಆರ್‌ಟಿಐ ಅರ್ಜಿ ಹಾಕಿಲ್ಲ, ಅವರ ಪಕ್ಷದವರೇ ಎಲ್ಲ ದಾಖಲೆಗಳನ್ನು ಹೊರಗೆ ತಂದಿದ್ದಾರೆ ಅಶೋಕ್ ತಿಳಿಸಿದರು.

ರಾಜ್ಯದಲ್ಲಿ 60 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸಲು ತಯಾರಿ ನಡೆದಿದೆ. ಇದರಿಂದ ಸರ್ಕಾರಕ್ಕೆ ಹಣ ಉಳಿತಾಯವಾಗಲಿದೆ. ಈಗಾಗಲೇ ಬಿಪಿಎಲ್‌ ಕಾರ್ಡುದಾರರಿಗೆ ಅಧಿಕಾರಿಗಳು ಕಿರುಕುಳ ನೀಡಲಾರಂಭಿಸಿದ್ದಾರೆ,ಇದಕ್ಕಾಗಿ ಖಾಸಗಿ ಏಜೆನ್ಸಿ ನೇಮಕ ಮಾಡಿ, ಆ ಮೂಲಕ ಕಾರ್ಡ್‌ ರದ್ದುಪಡಿಸಿ ಗ್ಯಾರಂಟಿಗೆ ಹಣ ಉಳಿಸಲಾಗುತ್ತಿದೆ ಎಂದು ಅಶೋಕ್ ದೂರಿದರು.

ರವಿಚಂದ್ರ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿಧೇಯಕಕ್ಕೆ ಸಂಬಂಧಿಸಿದಂತೆ ತಮ್ಮ ಸಮಿತಿ ನೀಡಿದ್ದ ವರದಿಗೂ ರಾಜ್ಯ ಸರ್ಕಾರ ಮಂಡಿಸಿರುವ ವಿಧೇಯಕಕ್ಕೂ ಸಾಕಷ್ಟು ವೆತ್ಯಾಸವಿದೆ. ಶೇ.20 ರಷ್ಟು ಶಿಫಾರಸು ಗಳನ್ನು ಮಾತ್ರ ಪರಿಗಣಿಸಲಾಗಿದೆ ಎಂದು ಹೇಳಿದರು.

ಬಿಜೆಪಿ, ಜೆಡಿಎಸ್ ನ ಶಾಸಕರು, ಮಾಜಿ ಕಾರ್ಪೊರೇಟರ್ ಗಳು, ಪಕ್ಷದ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬೆಂಗಳೂರು ವಿಭಜನೆಗೆ ಬಿಜೆಪಿ-ಜೆಡಿಎಸ್‌ ವಿರೋಧ- ಆರ್‌.ಅಶೋಕ್ Read More

ಎತ್ತಿನಹೊಳೆ ಬಗ್ಗೆ ರಾಜ್ಯ ಸರ್ಕಾರ ಬೊಗಳೆಬಿಡುತ್ತಿದೆ:ಅಶೋಕ್

ಬೆಂಗಳೂರು: ಎತ್ತಿನಹೊಳೆ ಯೋಜನೆ ಬಗ್ಗೆ ಕಾಂಗ್ರೆಸ್ ಸರ್ಕಾರ ಮತ್ತೊಂದು ಬೊಗಳೆ ಬಿಡುತ್ತಿದೆ ಎಂದು ‌ಪ್ರತಿಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ 2010ರಲ್ಲಿ ಅಂದಿನ‌ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಈ ಎತ್ತಿನಹೊಳೆ ಯೋಜನೆ ರೂಪಿಸಿತ್ತು.

ಈ ಯೋಜನೆಯನ್ನ ಕಾಂಗ್ರೆಸ್ ಸರ್ಕಾರ ಇಂದು ತನ್ನದೇ ಸಾಧನೆ ಎಂದು ಪುಟಗಟ್ಟಲೆ ಜಾಹೀರಾತು ಕೊಟ್ಟು ಪ್ರಚಾರ ಪಡೆಯಲು ಪ್ರಯತ್ನಿಸುತ್ತಿದೆ,ಇದು ಕಾಂಗ್ರೆಸ್ ಪಕ್ಷ ಬೌದ್ಧಿಕವಾಗಿ, ನೈತಿಕವಾಗಿ ಎಷ್ಟು ದಿವಾಳಿ ಆಗಿದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಎಂದು ವ್ಯಂಗ್ಯ ವಾಡಿದ್ದಾರೆ.

2010ರಲ್ಲಿ ಅಂದಿನ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ಎತ್ತಿನಹೊಳೆ ಯೋಜನೆಯ ಪ್ರಸ್ತಾವನೆಯನ್ನು ಯಡಿಯರಪ್ಪನವರ ಮುಂದಿಟ್ಟಾಗ ಅವರು ತಾತ್ವಿಕ ಒಪ್ಪಿಗೆ ನೀಡಿದ್ದರು.

2012 ರಲ್ಲಜ ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಒಟ್ಟು 8,000 ಕೋಟಿ ರೂಪಾಯಿ ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರು.

ನಂತರ 2013ರಲ್ಲಿ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2017ರ ವೇಳೆಗೆ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಮಾತು ಕೊಟ್ಟು, ಬಯಲು ಸೀಮೆ ಜನರಿಗೆ ಮೋಸ ಮಾಡಿದರು ಎಂದು ಅಶೋಕ್ ದೂರಿದ್ದಾರೆ.

ನಂತರ 2022-23ರ ಬಜೆಟ್ ನಲ್ಲಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ 3,000 ಕೋಟಿ ರೂಪಾಯಿ ಅನುದಾನ ನೀಡಿ ಎತ್ತಿನಹೊಳೆ ಯೋಜನೆಗೆ ವೇಗ ನೀಡಿತ್ತು.

2014ರಲ್ಲಿ 8,500 ಕೋಟಿ ರೂಪಾಯಿ ವೆಚ್ಚದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಯೋಜನೆಯ ವೆಚ್ಚ ಇದೀಗ 23,251 ಕೋಟಿ ರೂ.ಗೆ ಮುಟ್ಟಿದೆ. ಇದಕ್ಕೆ ಯಾರು ಕಾರಣ ಎಂದು ಅವರು ಪ್ರಶ್ನಿಸಿದ್ದಾರೆ.

ಸುಮಾರು ಆರೂವರೆ ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳಾಗಿದ್ದರೂ ಈ ಯೋಜನೆ ಇಷ್ಟು ವಿಳಂಬವಾಗಲು ಯಾರು ಕಾರಣ ಎಂದು ಅವರು ಕೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನಿಜವಾಗಿಯೂ ಈ ಭಾಗದ ಜನರ ಬಗ್ಗೆ ಬದ್ಧತೆ ಇದ್ದಿದ್ದರೆ ಎತ್ತಿನಹೊಳೆ ಯೋಜನೆಗೆ ಈ ಮೂರು ಜಿಲ್ಲೆಗಳಲ್ಲಿ ಒಂದು ಕಡೆ ಚಾಲನೆ ನೀಡಬೇಕಾಗಿತ್ತು.

ಕಾಂಗ್ರೆಸ್ ಸರ್ಕಾರದ ಬೋಗಸ್ ಗ್ಯಾರೆಂಟಿಗಳ ರೀತಿಯಲ್ಲಿ ಈಗಿನ ಕಾರ್ಯಕ್ರಮವೂ ಒಂದು ಬಿಟ್ಟಿ ಪ್ರಚಾರ ಪಡೆಯುವ ನಾಟಕವಷ್ಟೇ ಎಂದು ಅಶೋಕ್ ಟೀಕಿಸಿದ್ದಾರೆ.

ಎತ್ತಿನಹೊಳೆ ಬಗ್ಗೆ ರಾಜ್ಯ ಸರ್ಕಾರ ಬೊಗಳೆಬಿಡುತ್ತಿದೆ:ಅಶೋಕ್ Read More

ನಂಬಿಕೆ ನಕ್ಷೆ ಯೋಜನೆ ಬಗ್ಗೆ ಅಶೋಕ್ ವ್ಯಂಗ್ಯ

ಬೆಂಗಳೂರು: ಬೆಂಗಳೂರಿನಲ್ಲಿ ಕಟ್ಟಡ ನಕ್ಷೆ ಮಂಜೂರಾತಿಗೆ ನಂಬಿಕೆ ನಕ್ಷೆ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ‌ಹೇಳಿರುವುದು ಬ್ರ್ಯಾಂಡ್ ಬೆಂಗಳೂರು ನಾಟಕದ ಮತ್ತೊಂದು ಅಧ್ಯಾಯ ಎಂಬುದು ಬೆಂಗಳೂರಿಗರ ನಂಬಿಕೆಯಾಗಿದೆ ಎಂದು ಆರ್.ಅಶೋಕ್ ಛೇಡಿಸಿದ್ದಾರೆ.

ಪಾರ್ಟ್ ಟೈಮ್ ಬೆಂಗಳೂರು ಅಭಿವೃದ್ಧಿ ಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅನೇಕ ಹೇಳಿಕೆಗಳು ಘೋಷಣೆಯಲ್ಲೇ ಉಳಿದಿರುವುದರಿಂದ ಸಾರ್ವಜನಿಕರಿಗೆ ಇವರ ಮೇಲೆ ಕಿಂಚಿತ್ತೂ ನಂಬಿಕೆ ಇಲ್ಲದಂತಾಗಿದೆ ಎಂದು ಟ್ವೀಟ್ ಮಾಡಿ ಕಾಲೆಳೆದಿದ್ದಾರೆ.

ಮೇಕೆದಾಟು ನೀರು ಸಿಗುವ ನಂಬಿಕೆ ಇಲ್ಲ,ರಸ್ತೆ ಗುಂಡಿ ಮುಚ್ಚುವ ಬಗ್ಗೆ ನಂಬಿಕೆ ಇಲ್ಲ,ಮನೆ ಬಾಗಿಲಿಗೆ ಆಡಳಿತ ಘೋಷಣೆ ಬಗ್ಗೆ ನಂಬಿಕೆ ಇಲ್ಲ,ಕಾನೂನು ಸುವ್ಯವಸ್ಥೆ ಬಗ್ಗೆ ನಂಬಿಕೆ ಇಲ್ಲ,ನುಡಿದಂತೆ ನಡೆದಿದ್ದೇವೆ ಎಂಬ ಬಗ್ಗೆ ನಂಬಿಕೆ ಇಲ್ಲ,ಭ್ರಷ್ಟಾಚಾರ ಮುಕ್ತ ಆಡಳಿತದ ಬಗ್ಗೆಯಂತೂ ಎಳ್ಳಷ್ಟೂ ನಂಬಿಕೆ ಇಲ್ಲ.

ಒಟ್ಟಿನಲ್ಲಿ ಈ ಅಪನಂಬಿಕೆ ಸರ್ಕಾರದಿಂದ ನಂಬಿಕೆ ಹೆಸರಿನಲ್ಲಿ ಯೋಜನೆ ಘೋಷಣೆ ಆಗಿರುವುದು ಅತ್ಯಂತ ದೊಡ್ಡ ವಿರೋಧಾಭಾಸ ಎಂದರೆ ಅತಿಶಯೋಕ್ತಿ ಅಲ್ಲ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.

ನಂಬಿಕೆ ನಕ್ಷೆ ಯೋಜನೆ ಬಗ್ಗೆ ಅಶೋಕ್ ವ್ಯಂಗ್ಯ Read More