ಪ್ರವಾಹ ಹಾನಿ ತಡೆಗೆ 5,000 ಕೋಟಿ ಬಿಡುಗಡೆ ಮಾಡಿ:ಅಶೋಕ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಪ್ರವಾಹದಿಂದ ಅಪಾರ ಹಾನಿ ಉಂಟಾಗಿದ್ದು, ಸರ್ಕಾರ ಕೂಡಲೇ 5,000 ಕೋಟಿ ಬಿಡುಗಡೆ ಮಾಡಬೇಕೆಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಸಿಲ್ಕ್‌ ಬೋರ್ಡ್‌ ವೃತ್ತದ ಬಳಿ ಮಳೆ ಹಾನಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಬೆಂಗಳೂರಿನಲ್ಲಿ ಪರಿಹಾರ ಕಾರ್ಯಾಚರಣೆಗೆ 1,000 ಕೋಟಿ ರೂ. ಬಿಡುಗಡೆ ಮಾಡಲಿ ಎಂದು ಹೇಳಿದರು.

ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಇದೆ. ಮಲೆನಾಡಿನಲ್ಲಿ ಕಾಫಿ ಉದುರುತ್ತಿದೆ, ಭತ್ತದ ಬೆಳೆ ನೀರಿನಲ್ಲಿ ಮುಳುಗಿದೆ, ಈರುಳ್ಳಿ ಕೊಳೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕುಂಭಕರ್ಣನಂತೆ ನಿದ್ದೆ ಮಾಡುವುದನ್ನು ಬಿಟ್ಟು ಎಲ್ಲ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಅನಾಹುತ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಕಳೆದ ಒಂದು ತಿಂಗಳಿಂದ ಪ್ರವಾಹ ಸಂಬಂಧ ಸಭೆಯೇ ನಡೆದಿಲ್ಲ. ಸರ್ಕಾರ ಕೂಡಲೇ ಸಭೆ ಕರೆದು ಕನಿಷ್ಠ 5,000 ಕೋಟಿ ಹಾಗೂ ಬೆಂಗಳೂರಿಗೆ ವಿಶೇಷವಾಗಿ 1,000 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

16 ತಿಂಗಳ ಕಾಂಗ್ರೆಸ್‌ ಸರ್ಕಾರದ ಪಾಪದ ಫಲವನ್ನು ಬೆಂಗಳೂರಿನ ಜನರು ಅನುಭವಿಸಬೇಕಾಗಿದೆ. ರಾಜಕಾಲುವೆಯ ಹೂಳು ತೆಗೆದು ಸ್ವಚ್ಛ ಮಾಡುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಇದರಿಂದಾಗಿ ತೇಲುತ್ತಿರುವ ಬೆಂಗಳೂರು ಎಂಬ ಅಪಖ್ಯಾತಿ ನಗರಕ್ಕೆ ಬಂದಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರು ಒಂದೂವರೆ ವರ್ಷದಲ್ಲಿ ಎಷ್ಟು ಒತ್ತುವರಿ ತೆರವು ಮಾಡಿದ್ದಾರೆ, ಎಷ್ಟು ಹೂಳು ತೆಗೆಸಿದ್ದಾರೆ ಎಂದು ತಿಳಿಸಲಿ ಎಂದು ಸವಾಲು ಹಾಕಿದರು.

ಬೆಂಗಳೂರಿನಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಖಜಾನೆ ಖಾಲಿಯಾಗಿದೆ ಎಂದು ನಮಗೂ ಗೊತ್ತಿದೆ. ಆದ್ದರಿಂದ ಕನಿಷ್ಠ 500 ಕೋಟಿ ರೂ. ಹಣವಾದರೂ ಬಿಡುಗಡೆ ಮಾಡಲಿ. ಇಲ್ಲವೆಂದರೆ ಗುತ್ತಿಗೆದಾರರು ಮುಂದೆ ಬರುವುದಿಲ್ಲ ಎಂದು ಹೇಳಿದರು.

ಮಾನ್ಯತಾ ಟೆಕ್‌ ಪಾರ್ಕ್‌ ಈಗ ಮುಳುಗಡೆ ಆದಂತಾಗಿದೆ ಸಿಲ್ಕ್‌ ಬೋರ್ಡ್‌ನಲ್ಲಿ ಪ್ರತಿ ದಿನವೂ ಪ್ರವಾಹ ಉಂಟಾಗುತ್ತಿದೆ. ಪ್ರತಿ 15 ದಿನಕ್ಕೊಮ್ಮೆ ಪರಿಶೀಲನೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ 6 ತಿಂಗಳಾದರೂ ಏನೂ ಮಾಡಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ರಾತ್ರಿ ಪರಿಶೀಲನೆ ಮಾಡಿದ್ದು, ಅವರಿಗೆ ಯಾವುದೇ ಸಮಸ್ಯೆ ಕಾಣಿಸಿಯೇ ಇಲ್ಲ ಎಂದು ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

ಚನ್ನಪಟ್ಟಣ ಉಪಚುನಾವಣೆಗೆ ಅಭ್ಯರ್ಥಿಯನ್ನು ಎನ್‌ಡಿಎ ಆಯ್ಕೆ ಮಾಡಲಿದೆ. ಈ ಬಗ್ಗೆ ಚರ್ಚೆ ನಡೆದು ಶೀಘ್ರ ಅಂತಿಮ ತೀರ್ಮಾನವಾಗಲಿದೆ ಎಂದು ‌ಸ್ಪಷ್ಟಪಡಿಸಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಬಗ್ಗೆ ಸಚಿವ ಭೈರತಿ ಸುರೇಶ್‌ ಕೀಳಾಗಿ ಮಾತಾಡಿರುವುದು ಸರಿಯಲ್ಲ ಎಂದು ಅಶೋಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪ್ರವಾಹ ಹಾನಿ ತಡೆಗೆ 5,000 ಕೋಟಿ ಬಿಡುಗಡೆ ಮಾಡಿ:ಅಶೋಕ ಆಗ್ರಹ Read More

ಮುಡಾ:ಅಧಿಕಾರಿಗಳು,ಆರೋಪಿಗಳ ಪಾಸ್ ಪೋರ್ಟ್ ವಶಕ್ಕೆ ಅಶೋಕ್ ಆಗ್ರಹ

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು, ಆರೋಪಿಗಳು, ಸಂಭವನೀಯ ಸಾಕ್ಷಿದರರ ಪಾಸ್ ಪೋರ್ಟ್ ಗಳನ್ನು ವಶಕ್ಕೆ ಪಡೆಯಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಯ ದೃಷ್ಟಿಯಿಂದ ಇದು ಅಗತ್ಯವಿದೆ ಎಂದು ಅಶೋಕ್ ಟ್ವೀಟ್ ಮಾಡಿದ್ದಾರೆ.

ಮೂಡಾದಲ್ಲಿ ನಡೆದಿರುವ ಬಹುಕೋಟಿ ಹಗರಣವನ್ನ ಜಾರಿ ನಿರ್ದೇಶನಾಲಯ ತನಿಖೆ ಮಾಡುತ್ತಿದೆ,ಜತೆಗೆ ಮೈಸೂರಿನ ಮೂಡಾ ಕಚೇರಿ,ತಾಲ್ಲೂಕು ಕಚೇರಿಗೂ ಭೇಟಿ ನೀಡಿ ದಾಖಲೆಗಳ ಪರಿಶೀಲನಾ ಕಾರ್ಯ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.

ಅಧಿಕಾರದ ಅತ್ಯುನ್ನತ ಸ್ಥಾನದಲ್ಲಿರುವವರು, ಅವರ ಕುಟುಂಬ ಸದಸ್ಯರು, ಹಿರಿಯ ಅಧಿಕಾರಿಗಳು ಈ ಪ್ರಕರಣದಲ್ಲಿ ಆರೋಪಿಗಳಾಗಿರುವುದರಿಂದ, ಈ ಪ್ರಕರಣ ಎಷ್ಟು ಗಂಭೀರವೋ ಅಷ್ಟೆ ಸೂಕ್ಷ್ಮವೂ ಆಗಿದೆ,ಹಾಗಾಗಿ ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಯ ದೃಷ್ಟಿಯಿಂದ ಸಂಬಂಧಪಟ್ಟ ಎಲ್ಲರ ಪಾಸ್ ಪೋರ್ಟ್ ಗಳನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅಶೋಕ್ ಮನವಿ ಮಾಡಿದ್ದಾರೆ.

ಮುಡಾ:ಅಧಿಕಾರಿಗಳು,ಆರೋಪಿಗಳ ಪಾಸ್ ಪೋರ್ಟ್ ವಶಕ್ಕೆ ಅಶೋಕ್ ಆಗ್ರಹ Read More

ಅತಿ ಬುದ್ಧಿವಂತಿಕೆ ತೋರಿ ಸಿಎಂ ಕುರ್ಚಿಗೆ ಟವಲ್ ಹಾಕುವ ಕೃಷ್ಣ ಭೈರೇಗೌಡ:ಅಶೊಕ

ಬೆಂಗಳೂರು: ರೈತರ ಬಗ್ಗೆ ಕೀಳರಿಮೆ ಇರುವ ಕೃಷ್ಣ ಭೈರೇಗೌಡರು ಐದು ವರ್ಷಗಳ ಕಾಲ ಕೃಷಿ ಸಚಿವರಾಗಿದ್ದು ಈ ರಾಜ್ಯದ ದೌರ್ಭಾಗ್ಯ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕಿಸಿದ್ದಾರೆ.

ನನ್ನನ್ನು ನಿಂದಿಸುವ ಭರದಲ್ಲಿ ಕಡಲೆಕಾಯಿ ಬೆಳೆಯುವ ಸಾಮಾನ್ಯ ರೈತನಿಗೆ ಇರುವಷ್ಟು ಕನಿಷ್ಠ ಜ್ಞಾನ ಇಲ್ಲ ಎಂದು ರೈತರನ್ನು ಕೃಷ್ಣ ಭೈರೇಗೌಡರು ಹೀಯಾಳಿಸಿದ್ದಾರೆ. ಎಲ್ಲರಿಗೂ ಅವರಂತೆ ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಿಕೊಂಡು ಬರುವಷ್ಟು ಅನುಕೂಲ ಇರುವುದಿಲ್ಲ. ರಾಜಕಾರಣದಲ್ಲಿ ಕುಟುಂಬದ ಹಿನ್ನೆಲೆ ಇಲ್ಲದಂತಹ ನಮ್ಮಂತಹ ಸಾಮಾನ್ಯರೂ ಇದ್ದೀವಿ. ರೈತರ ಬಗ್ಗೆ ಇಂತಹ ಕೀಳರಿಮೆ ಇರುವ ತಮ್ಮಂತಹವರು ಐದು ವರ್ಷಗಳ ಕಾಲ ರಾಜ್ಯದ ಕೃಷಿ ಸಚಿವರಾಗಿದ್ದೀರಲ್ಲ, ಅದೇ ನಮ್ಮ ರಾಜ್ಯದ ದೌರ್ಭಾಗ್ಯ ಎಂದು ಅಶೋಕ್ ಟ್ವೀಟ್ ಮಾಡಿ ಟಾಂಗ್ ನೀಡಿದ್ದಾರೆ.

ಜಿಎಸ್‌ಟಿ ಸಭೆಯಲ್ಲಿ ತೆರಿಗೆ ಹಂಚಿಕೆ ಬಗ್ಗೆ ಅಧಿಕೃತವಾಗಿ ಚರ್ಚೆ ನಡೆಯುವುದಿಲ್ಲ ಎಂಬ ಅರಿವು ನನಗೂ ಇದೆ. ಆದರೆ ಜಿಎಸ್‌ಟಿ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವರು, ರಾಜ್ಯಗಳ ಹಣಕಾಸು ಸಚಿವರು ಅಥವಾ ಇನ್ಯಾರಾದರೂ ಪ್ರತಿನಿಧಿ ಸಚಿವರು ಬಂದಿರುತ್ತಾರೆ ಅಲ್ಲವೇ, ಇಂತಹ ವೇದಿಕೆಯಲ್ಲಿ ಅನೌಪಚಾರಿಕವಾಗಿ ತೆರಿಗೆ ಹಂಚಿಕೆ ಬಗ್ಗೆ ಚರ್ಚಿಸಿ ಒಂದು ಒಮ್ಮತ ಸೃಷ್ಟಿಸುವ ಪ್ರಯತ್ನ ಮಾಡಬಹುದಿತ್ತಲ್ಲ ಎಂಬುದು ನನ್ನ ಮಾತಿನ ಅರ್ಥವಾಗಿತ್ತು ಎಂದು ಅಶೋಕ್ ತಿಳಿಸಿದ್ದಾರೆ.

ಕೇರಳದಲ್ಲಿ ಇತ್ತೀಚೆಗೆ ಐದು ಬಿಜೆಪಿಯೇತರ ಸರ್ಕಾರಗಳ ಪ್ರತಿನಿಧಿಗಳು ಒಟ್ಟಿಗೆ ಸೇರಿ ಸಭೆ ಮಾಡಿದ್ದರು. ಅದು ತೆರಿಗೆ ಹಂಚಿಕೆ ಬಗ್ಗೆ ಚರ್ಚಿಸುವ ವೇದಿಕೆಯೇ ವೇದಿಕೆಗಳ ಮೇಲೆ ರಾಜಕೀಯ ಭಾಷಣ ಮಾಡಿ ಕೇಂದ್ರ ಸಚಿವರಿಗೆ ಬಹಿರಂಗ ಚರ್ಚೆಗೆ ಬರಲು ಸವಾಲು ಹಾಕುತ್ತೀರಲ್ಲ, ತೆರಿಗೆ ಹಂಚಿಕೆ ಬಗ್ಗೆ ಚರ್ಚಿಸಲು ಅದು ವೇದಿಕೆಯೇ ಎಂದು ಅವರು ಕಿಡಿಕಾರಿದ್ದಾರೆ.

ರಾಜ್ಯದ ಹಿತಾಸಕ್ತಿ ಕಾಪಾಡಬೇಕು, ರಾಜ್ಯದ ಬೊಕ್ಕಸಕ್ಕೆ ನಾಲ್ಕು ಕಾಸು ಹೆಚ್ಚು ಬರಬೇಕು ಎನ್ನುವ ಉದ್ದೇಶ ತಮಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಕಿಂಚಿತ್ತಾದರೂ ಇದ್ದಿದ್ದರೆ, ತಾವು ಮತ್ತು ತಮ್ಮ ಕಾಂಗ್ರೆಸ್ ಸರ್ಕಾರ, ಕೇಂದ್ರ ಸರ್ಕಾರದ ಜೊತೆ ವ್ಯವಹರಿಸುವ ರೀತಿಯೇ ಬೇರೆ ಇರುತ್ತಿತ್ತು. ಆದರೆ ಸತ್ಯ ಏನೆಂದರೆ, ನಿಮಗೆ ಅದ್ಯಾವ ಸದುದ್ದೇಶವೂ ಇದ್ದಂತಿಲ್ಲ. ತಮಗೆ ಬೇಕಾಗಿರುವುದೆಲ್ಲವೂ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮೇಲೆ ಗೊಬೆ ಕೂರಿಸುವುದು ಮಾತ್ರ. ಆ ಮೂಲಕ ತಮ್ಮ ಸರ್ಕಾರದ ವೈಫಲ್ಯಗಳನ್ನು, ಭ್ರಷ್ಟಾಚಾರವನ್ನು, ತಪ್ಪುಗಳನ್ನು ಮುಚ್ಚಿಕೊಳ್ಳುವುದು, ಜನರ ಗಮನ ಬೇರೆಡೆ ಸೆಳೆಯುವುದು, ಬಿಜೆಪಿ ವಿರುದ್ಧ ಒಂದು ಕಟ್ಟುಕಥೆ ಸೃಷ್ಟಿಸುವುದೆ ಉದ್ದೇಶ ಎಂದು ಅಶೋಕ್ ಕಿಡಿಕಾರಿದ್ದಾರೆ.

ಇದೆಲ್ಲಾ ತಮಗೆ ಗೊತ್ತಿಲ್ಲ ಎಂದೇನಿಲ್ಲ, ಬಹುಶಃ ಅತಿ ಬುದ್ಧಿವಂತಿಕೆ ಪ್ರದರ್ಶನ ಮಾಡುವ ಮೂಲಕ ಹೈಕಮಾಂಡ್ ಗಮನ ಸೆಳೆದು ಮುಖ್ಯಮಂತ್ರಿ ಕುರ್ಚಿಗೆ ನನ್ನದೂ ಒಂದು ಇರಲಿ ಅಂತ ಟವಲ್ ಹಾಕುತ್ತಿರಬಹುದು ಎಂದು ಕೃಷ್ಣಬೈರೆಗೌಡರಿಗೆ ಟಾಂಗ್ ನೀಡಿದ್ದಾರೆ.

ದುರಾಡಳಿತದಿಂದ ಬೇಸತ್ತಿರುವ ಕರ್ನಾಟಕಕ್ಕೆ ನಿಮ್ಮಂತಹ ಸುಶಿಕ್ಷಿತ, ಸಭ್ಯ, ಬುದ್ಧಿವಂತ ನಾಯಕರು ಮುಖ್ಯಮಂತ್ರಿ ಆದರೆ ಒಳ್ಳೆಯದೇ! ಆದರೆ ನಿಮ್ಮ ಕಾಂಗ್ರೆಸ್ ಹೈಕಮಾಂಡ್‌ಗೆ ಬೇಕಾಗಿರುವುದು ಸಂಪನ್ಮೂಲ ಒದಗಿಸುವ ಮಹಾನಾಯಕರೇ ಹೊರತು ನಿಮ್ಮಂತಹ ಸಂಪನ್ಮೂಲ ವ್ಯಕ್ತಿಗಳಲ್ಲ, ಒಟ್ಟಾರೆ ನಿಮಗೆ ಶುಭವಾಗಲಿ ಎಂದು ಅಶೋಕ ವ್ಯಂಗ್ಯವಾಡಿದ್ದಾರೆ.

ಅತಿ ಬುದ್ಧಿವಂತಿಕೆ ತೋರಿ ಸಿಎಂ ಕುರ್ಚಿಗೆ ಟವಲ್ ಹಾಕುವ ಕೃಷ್ಣ ಭೈರೇಗೌಡ:ಅಶೊಕ Read More

ಒಳ ಮೀಸಲಾತಿ ಜಾರಿಗೆ ಕಾಂಗ್ರೆಸ್ ಮೀನಮೇಷ – ಆರ್.ಅಶೋಕ್ ಆಕ್ರೋಶ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿಗೆ ಮೀನಮೇಷ ಎಣಿಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು, ಒಳ ಮೀಸಲಾತಿ ಬಗ್ಗೆ ದೊಡ್ಡದಾಗಿ ಮಾತನಾಡುತ್ತಾರೆ. ಜಾತಿ ಗಣತಿಯ ಬಗ್ಗೆ ಶಂಖ ಊದುತ್ತಿರುತ್ತಾರೆ‌ ಎಂದು ವ್ಯಂಗ್ಯ ವಾಡಿದರು.

ಒಳ ಮೀಸಲಾತಿಯ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿರುವುದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಹಿಂದಿನ ನಮ್ಮ ಬಿಜೆಪಿ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೆ ತಂದಿತ್ತು. ಪ್ರಧಾನಿ ನರೇಂದ್ರ ಮೋದಿ ತೆಲಂಗಾಣಕ್ಕೆ ಬಂದಾಗ ಒಳ ಮೀಸಲಾತಿಗೆ ಅನುಮೋದನೆ ನೀಡಿದ್ದರು. ಆದರೂ ಕಾಂಗ್ರೆಸ್ ಇನ್ನೂ ಮೀನಮೇಷ ಎಣಿಸುತ್ತಿದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಈಗ ಎಸ್ಐಟಿ ಯದೇ ಸದ್ದು ಕೇಳಿಬರುತ್ತಿದೆ. ಒಳ ಮೀಸಲಾತಿ ಮತ್ತು ಜಾತಿ ಗಣತಿ ವಿಚಾರದಲ್ಲೂ ಕಾಂಗ್ರೆಸ್ ಸರ್ಕಾರ ಎಸ್ಐಟಿ ರಚಿಸಿದರೆ ಅಚ್ಚರಿ ಇಲ್ಲ ಎಂದು ಅಶೋಕ್ ಟೀಕಾಪ್ರಹಾರ ನಡೆಸಿದರು.

ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಾನೂನು ಅನ್ವಯವಾಗುತ್ತಿದ್ದು, ಎಸ್ಐಟಿಯ ಮೇಲೆ ಅನುಮಾನ ಹೆಚ್ಚಾಗಿ ಅದನ್ನೇ ತನಿಖೆ ಮಾಡುವ ಸ್ಥಿತಿ ಬಂದಿದೆ. ಎಸ್ಐಟಿ ಪ್ರಕಾರ, ಶಾಸಕ ಮುನಿರತ್ನ ಅವರಿಗೆ ಒಂದು ಕಾನೂನು, ವಿನಯ್ ಕುಲಕರ್ಣಿ ಅವರಿಗೆ ಒಂದು ಕಾನೂನು ಎಂಬಂತಾಗಿದೆ. ಎಸ್ಐಟಿಗಳ ನಿಜಬಣ್ಣ ಬಯಲು ಮಾಡಲು ಡಬಲ್ ಎಸ್ಐಟಿ ಎಂಬ ಘಟಕ ಸ್ಥಾಪಿಸಬೇಕಿದೆ ಎಂದು ವ್ಯಂಗ್ಯವಾಡಿದರು.

ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕಾಂಗ್ರೆಸ್ ನಾಯಕರು ಚೆನ್ನಾಗಿ ಹಣ ನುಂಗಿದ್ದಾರೆ. ಇದರ ವಿರುದ್ಧ ಬಿಜೆಪಿ ಸಮರ್ಥವಾಗಿ ಪ್ರತಿಭಟನೆ ಮಾಡಿದೆ. ಬಿ.ಎಸ್.ಯಡಿಯೂರಪ್ಪನವರ ಪ್ರಕರಣಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.‌ ಆದರೆ ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆಗೆ ಯಾವುದೇ ತಡೆ ಇಲ್ಲ. ಈ ದೇಶದಲ್ಲಿ ನ್ಯಾಯಾಂಗವೇ ಉನ್ನತವಾದುದು. ಕಾಂಗ್ರೆಸ್ ನ್ಯಾಯಾಲಯದ ಸರ್ಟಿಫಿಕೇಟ್ ನಮ್ಮ ಪಕ್ಷಕ್ಕೆ ಬೇಕಿಲ್ಲ ಎಂದು ಅಶೋಕ್‌‌ ಟಾಂಗ್ ನೀಡಿದರು.

ಒಳ ಮೀಸಲಾತಿ ಜಾರಿಗೆ ಕಾಂಗ್ರೆಸ್ ಮೀನಮೇಷ – ಆರ್.ಅಶೋಕ್ ಆಕ್ರೋಶ Read More

ಸಿಎಂ ಆತ್ಮಸಾಕ್ಷಿಗೆ ಹಲವು ಪ್ರಶ್ನೆ ಕೇಳಿರುವ ಅಶೋಕ್

ಬೆಂಗಳೂರು: ಜಾತಿ ಜನಗಣತಿ ಬಗ್ಗೆ ಬಿಜೆಪಿಗೆ ಯಾವ ತಕರಾರು ಇಲ್ಲ, ವಿರೋಧವೂ ಇಲ್ಲ ಎಂದು ‌ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಬಿಜೆಪಿಯ ಮೂಲಸಿದ್ಧಾಂತವಾದ ಅಂತ್ಯೋದಯದ ಪರಿಕಾಲ್ಪನೆಯಲ್ಲೇ ತಳ ಸಮುದಾಯಗಳನ್ನ ರಾಜಕೀಯ, ಸಾಮಾಜಿಕವಾಗಿ, ಶೈಕ್ಷಣಿಕ, ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬ ಸಾಮಾಜಿಕ ನ್ಯಾಯದ ಬದ್ಧತೆ ಅಡಗಿದೆ. ಅದನ್ನ ಸಾಕಾರಗೊಳಿಸುವ ಯಾವ ಕ್ರಮಕ್ಕಾದರೂ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ ಎಂದು ಅಶೋಕ್ ಟ್ವೀಟ್ ಮಾಡಿದ್ದಾರೆ.

ಆದರೆ ರಾಜಕೀಯ ಚದುರಂಗದಾಟದಲ್ಲಿ ಜಾತಿ ಜನಗಣತಿಯನ್ನು ದಾಳವಾಗಿ ಬಳಸಿಕೊಳ್ಳುವುದಕ್ಕೆ ನಮ್ಮ ವಿರೋಧವಿದೆ. ರಾಜಕೀಯ ಹಾವು-ಏಣಿ ಆಟದಲ್ಲಿ ಕೆಳಗೆ ಬಿದ್ದಾಗ ಮೇಲೇಳಲು, ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿಯನ್ನ ಏಣಿಯಾಗಿ ಬಳಸಿಕೊಳ್ಳುವುದಕ್ಕೆ ನಮ್ಮ ತಕರಾರಿದೆ ಎಂದು ‌ತಿಳಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ಸಿಎಂ ನವರ ಆತ್ಮಸಾಕ್ಷಿಗೆ ನಮ್ಮ ಕೆಲವು ಪ್ರಶ್ನೆಗಳಿವೆ ಎಂದು ಪ್ರಶ್ನೆ ಹಾಕಿದ್ದಾರೆ.

ತಮಗೆ ನಿಜವಾಗಿಯೂ ಜಾತಿಗಣತಿಯ ಬಗ್ಗೆ ಬದ್ಧತೆ ಇದ್ದಿದ್ದರೆ, 2018ರಲ್ಲೇ ಕಾಂತರಾಜು ವರದಿಯನ್ನ ಏಕೆ ಸ್ವೀಕರಿಸಿ ಜಾರಿ ಮಾಡಲಿಲ್ಲ.

ಹತ್ತು ವರ್ಷಗಳ ಹಿಂದೆ ಕೈಗೊಂಡ ಜಾತಿ ಜನಗಣತಿ ವೈಜ್ಞಾನಿಕವಾಗಿ ನಡೆದಿಲ್ಲ, ಅನೇಕ ಜನರ ಮನೆಗಳಿಗೆ ಭೇಟಿಯೇ ನೀಡಿಲ್ಲ ಎಂಬ ದೂರುಗಳಿವೆ. ಹೀಗಿರುವಾಗ ಈ ವರದಿಯನ್ನ ಈಗ ಮುನ್ನೆಲೆಗೆ ತರುವ ತರಾತುರಿ ಏಕೆ.

ಈ ಅವೈಜ್ಞಾನಿಕ ಜಾತಿ ಜನಗಣತಿ ವರದಿ ಸ್ವೀಕರಿಸದಂತೆ ಒಕ್ಕಲಿಗರ ಸಂಘ ಮನವಿ ಸಲ್ಲಿಸಿದೆ. ಇದನ್ನ ಬೆಂಬಲಿಸಿ ಸ್ವತಃ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಸಹಿ ಮಾಡಿದ್ದಾರೆ. ತಮ್ಮದೇ ಪಕ್ಷದ ಹಿರಿಯ ನಾಯಕರು, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪನವರೂ ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಅನೇಕ ಮಠಾಧೀಶರು, ಧಾರ್ಮಿಕ ಮುಖಂಡರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಕಳೆದು 17 ತಿಂಗಳಿನಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಸರ್ವಸಮ್ಮತವಾದ ನಿಲುವಿಗೆ ಬರುವ ಬದಲು ಈಗ ದಿಢೀರನೆ ವರದಿ ಸ್ವೀಕರಿಸಲು ಮುಂದಾಗಿರುವುದು ಯಾವ ಕಾರಣಕ್ಕೆ.

ಹಗರಣಗಳ ಸುಳಿಯಲ್ಲಿ ಸಿಲುಕಿ ಮುಜುಗರ ಅನುಭವಿಸುತ್ತಿರುವ ಪರಿಸ್ಥಿತಿಯಿಂದ ಜನರ ಗಮನ ಬೇರೆಡೆ ಸೆಳೆಯಲು ಜಾತಿಗಣತಿ ವರದಿಯನ್ನ ಒಂದು ದಾಳವಾಗಿ ಬಳಸಲಾಗುತ್ತಿದೆಯೇ.

ಜಾತಿಗಣತಿಯನ್ನ ರಾಜಕೀಯ ದಾಳವಾಗಿ ಬಳಸುವುದು ದಲಿತರಿಗೆ, ಹಿಂದುಳಿದ ವರ್ಗಗಳಿಗೆ, ತಳ ಸಮುದಾಯಗಳಿಗೆ ಮಾಡುವ ಅಪಮಾನವಲ್ಲವೇ,ಸಾಮಾಜಿಕ ನ್ಯಾಯವೆಂಬ ಪವಿತ್ರ ಪರಿಕಲ್ಪನೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಆತ್ಮವಂಚನೆಯಲ್ಲವೇ.

ಅಕ್ಟೋಬರ್ 18ರಂದು ನಡೆಯುವ ಸಂಪುಟ ಸಭೆಗೂ ಮುನ್ನ ಮುಖ್ಯಮಂತ್ರಿಗಳ ‘ಆತ್ಮಸಾಕ್ಷಿ’ ಈ ಪ್ರಶೆಗಳನ್ನ ಆತ್ಮಾವಲೋಕನ ಮಾಡಿ ಉತ್ತರ ನೀಡುತ್ತದೆ ಎಂದು ನಿರೀಕ್ಷಿಸುತ್ತೇನೆ ಎಂದು ಅಶೋಕ್ ಹೇಳಿದ್ದಾರೆ.

ಸಿಎಂ ಆತ್ಮಸಾಕ್ಷಿಗೆ ಹಲವು ಪ್ರಶ್ನೆ ಕೇಳಿರುವ ಅಶೋಕ್ Read More

ನ್ಯಾಯಾಲಯಕ್ಕಿಂತ ದೊಡ್ಡದಾಗಲು ಕಾಂಗ್ರೆಸ್‌ ಯತ್ನ:ಅಶೋಕ್ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್‌ ಪಕ್ಷ ನ್ಯಾಯಾಲಯಕ್ಕಿಂತ ದೊಡ್ಡದಾಗಲು ಯತ್ನಿಸಿ ತೀರ್ಪು ನೀಡಲು ಮುಂದಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ನನ್ನನ್ನು ಭೂ ಕಬಳಿಕೆದಾರ ಎಂದು ಕರೆದಿರುವ ಕಾಂಗ್ರೆಸ್‌ನ ನಾಲ್ಕು ಸಚಿವರು ನೈತಿಕತೆಯ ಪ್ರಶ್ನೆ ಎತ್ತಿದ್ದಾರೆ. ಆದರೆ ಇದೇ ಕಾಂಗ್ರೆಸ್‌ನ ಕೇಂದ್ರ ಸರ್ಕಾರ ಅಂದು ನೇಮಿಸಿದ್ದ ರಾಜ್ಯಪಾಲರು ಮತ್ತು ನ್ಯಾಯಾಲಯ ನಾನು ತಪ್ಪಿತಸ್ಥ ಅಲ್ಲ ಎಂದು ಅಭಿಪ್ರಾಯಪಟ್ಟಿದೆ. ಆದರೂ ಕಾಂಗ್ರೆಸ್‌ ನವರು ರಾಜೀನಾಮೆ ಕೇಳಿದ್ದಾರೆ ಎಂದು ತಿರುಗೇಟು ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಡಾ ಹಗರಣದಲ್ಲಿ ಅರಿಶಿನ-ಕುಂಕುಮದ ಮೂಲಕ ಭೂಮಿ ಬಂದಿದೆ. ಆದರೆ ನಾನು ಹಣ ಕೊಟ್ಟು ಭೂಮಿ ಖರೀದಿ ಮಾಡಿದ್ದೇನೆ. ಈ ಪ್ರಕರಣದ ಬಗ್ಗೆ ಆರೋಪ ಬಂದಾಗ ರಾಜ್ಯದಲ್ಲಿ ಕಾಂಗ್ರೆಸ್‌ನ ಕೇಂದ್ರ ಸರ್ಕಾರವೇ ನೇಮಿಸಿದ ರಾಜ್ಯಪಾಲ ಹಂಸರಾಜ್‌ ಭಾರಧ್ವಾಜ್‌ ಇದ್ದರು. ಅವರು ಕೂಡ ಈ ಪ್ರಕರಣವನ್ನು ತನಿಖೆಗೆ ವಹಿಸಿಲ್ಲ. ಅಷ್ಟೇ ಅಲ್ಲದೆ ನ್ಯಾಯಾಲಯ ಕೂಡ ಇದರ ವಿರುದ್ಧ ತನಿಖೆ ಮಾಡಿಸಲು ಮುಂದಾಗಲಿಲ್ಲ,ಆದರೆ ಕಾಂಗ್ರೆಸ್‌ ಪಕ್ಷ ಮಾತ್ರ ಇದರಲ್ಲಿ ತೀರ್ಪು ನೀಡಲು ಮುಂದಾಗಿದೆ ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಡಾ ಹಗರಣ ತನಿಖೆಯಾಗಬೇಕಾದ ಪ್ರಕರಣ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ತೀರ್ಪು ಬಂದ ಬಳಿಕ ಮುಖ್ಯಮಂತ್ರಿಯವರು ಭಯಗೊಂಡು ನಿವೇಶನಗಳನ್ನು ಹಿಂದಿರುಗಿಸಿದ್ದಾರೆ. ಆದರೆ ನಾನು ಕೋರ್ಟ್‌ ಆದೇಶ ಬರುವ ಮುನ್ನವೇ ನಿವೇಶನ ಹಿಂದಿರುಗಿಸಿದ್ದೆ. ಕೋರ್ಟ್‌ನಲ್ಲಿ ನಾನು ಆಪಾದಿತ ಎಂದು ಹೇಳಿಲ್ಲ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಕೂಡ ನನ್ನನ್ನು ಆರೋಪ ಮುಕ್ತ ಮಾಡಲಾಗಿದೆ. ಆದರೆ ಸಿಎಂ ಸಿದ್ದರಾಮಯ್ಯ ಇನ್ನೂ ಆರೋಪ ಮುಕ್ತವಾಗಿಲ್ಲ,ಈ ದೇಶದಲ್ಲಿ ಕೋರ್ಟ್‌ ದೊಡ್ಡದೋ, ಕಾಂಗ್ರೆಸ್‌ ದೊಡ್ಡದೋ ಎಂದು ಪ್ರಶ್ನಿಸಿದರು ಅಶೋಕ್.

ಸಚಿವರಾದ ಕೃಷ್ಣ ಭೈರೇಗೌಡರ ಕೋಲಾರದ ಆಸ್ತಿಗಳೆಲ್ಲವೂ ಕುಟುಂಬದಿಂದ ಅವರಿಗೆ ಬಂದಿದೆ. ಅದೇ ರೀತಿ ಮುನಿವೆಂಕಟಪ್ಪ ಅವರು ವಿಲ್‌ ತಯಾರಿಸಿ ಅವರ ಮಕ್ಕಳಿಗೆ ಆಸ್ತಿ ಕೊಟ್ಟಿದ್ದಾರೆ. ಆ ಕುಟುಂಬದಲ್ಲಿ ಸುಮಾರು 20 ಜನರಿದ್ದು, ನನ್ನ ಹೆಸರಿಗೆ ನೋಂದಣಿಯಾದಾಗ ಆ 20 ಜನರು ಕೂಡ ಸಹಿ ಹಾಕಿದ್ದಾರೆ. ಇದು ಹೇಗೆ ಬೇನಾಮಿಯಾಗುತ್ತದೆ ಎಂದು ಪ್ರಶ್ನಿಸಿದರು.

1995 ರಲ್ಲಿ ಆಗಿರುವ ಪಹಣಿಯಲ್ಲಿ ಇಡೀ ಕುಟುಂಬದವರ ಹೆಸರಿದೆ. ಆದರೆ ಇದು ಬಿಡಿಎ ಭೂಮಿ ಎಂದು ಸಚಿವರು ಸುಳ್ಳು ಹೇಳಿದ್ದಾರೆ. ಇದನ್ನು ಬಿ.ಎಸ್‌.ಯಡಿಯೂರಪ್ಪ ಅಕ್ರಮವಾಗಿ ಡಿ ನೋಟಿಫೈ ಮಾಡಿದ್ದಾರೆ ಎಂದು ಕೂಡ ಸುಳ್ಳು ಆರೋಪ ಮಾಡಿದ್ದಾರೆ. ಸುಮಾರು 1 ಎಕರೆ ವ್ಯಾಪ್ತಿಯ ಈ ಜಾಗ, ಹೊರವರ್ತುಲ ರಸ್ತೆಯ ಪಕ್ಕವಿದೆ. ರಸ್ತೆಗೆ ಅಗತ್ಯವಿರುವ ಭೂಮಿ ಪಡೆದು, ಉಳಿದಿದ್ದನ್ನು ಡಿನೋಟಿಫೈ ಮಾಡಲು ತೀರ್ಮಾನಿಸಲಾಗಿತ್ತು ಎಂದೇ ಅಂದು ಸಿಎಂ ಆಗಿದ್ದ ಎಸ್‌.ಎಂ.ಕೃಷ್ಣ ಹೇಳಿದ್ದರು. ಈ ಭೂಮಿ 70:30 ಅನುಪಾತದಲ್ಲಿ ಹಂಚಿಕೆಯಾಗಿದೆ. ಅಂದರೆ ಶೇ70 ಸರ್ಕಾರಕ್ಕೆ ಹಾಗೂ ಶೇ 30 ಮಾಲೀಕರಿಗೆ ನೀಡಲಾಗಿದೆ. ಅಂದರೆ ಬಿಡಿಎಗೆ ಹೆಚ್ಚು ಲಾಭವಾಗಿದೆ. ಉಳಿದ ಜಮೀನು ಅಗತ್ಯವಿಲ್ಲವೆಂದು ಸರ್ಕಾರವೇ ವಾಪಸ್‌ ನೀಡಿದೆ. ಬಿಡಿಎ ದಿಂದಲೇ ಭೂ ಮಾಲೀಕರಿಗೆ ಪತ್ರ ಬರೆದಿದ್ದು, ಅದರಂತೆ ಭೂಮಿಯನ್ನು ಬಿಟ್ಟುಕೊಡಲಾಗಿದೆ. ಇಲ್ಲಿ ಎಲ್ಲವೂ ಕಾನೂನು ಪ್ರಕಾರವೇ ನಡೆದಿದೆ. ನನ್ನ ವಿರುದ್ಧ ತನಿಖೆ ನಡೆಸಲು ಅನುಮತಿ ಕೊಡುವಂತೆ ರಾಜ್ಯಪಾಲರಾಗಿದ್ದ ಹಂಸರಾಜ್‌ ಭಾರಧ್ವಾಜ್‌ ಅವರನ್ನು ಕೋರಲಾಗಿತ್ತು. ಆದರೆ ರಾಜ್ಯಪಾಲರು ಕೂಡ ನನ್ನ ವಿರುದ್ಧ ತನಿಖೆಗೆ ಅವಕಾಶ ನೀಡಲಿಲ್ಲ. ಆದರೂ ನನ್ನನ್ನು ಕಾಂಗ್ರೆಸ್‌ ಸಚಿವರು ಭೂ ಕಬಳಿಕೆದಾರ ಎನ್ನುತ್ತಿದ್ದಾರೆ. ಕಾಂಗ್ರೆಸ್‌ನ ರಾಜ್ಯಪಾಲರಾಗಲೀ, ನ್ಯಾಯಾಲಯವಾಗಲೀ ನನ್ನನ್ನು ತಪ್ಪಿತಸ್ಥ ಎಂದು ಭಾವಿಸಿಲ್ಲ. ಆದರೆ ಈಗ ಸಿದ್ದರಾಮಯ್ಯನವರಿಗೆ ನನ್ನನ್ನು ಹೋಲಿಸಲಾಗುತ್ತಿದೆ ಎಂದು ವಿವರಣೆ ಸಹಿತ ಅಶೋಕ್ ಗುಡುಗಿದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡರ ಬಳಿ ಅಧಿಕಾರವಿದೆ. ಎಚ್‌.ಕೆ.ಪಾಟೀಲ್‌ ಹಾಗೂ ಡಾ.ಜಿ.ಪರಮೇಶ್ವರ್‌ ಹಿರಿಯರು. ಸತೀಶ್‌ ಜಾರಕಿಹೊಳಿ ಮಾತ್ರ ಈ ಬಗ್ಗೆ ಮಾತಾಡಿಲ್ಲ. ಏಕೆಂದರೆ ಇದು ಬುರುಡೆ ಕೇಸ್‌ ಎಂದು ಅವರಿಗೂ ಗೊತ್ತಿತ್ತು. ಈ ನಾಲ್ಕು ಸಚಿವರು ನನಗೆ ಆದರ್ಶವಾಗಿದ್ದಾರೆ. ಕೃಷ್ಣ ಬೈರೇಗೌಡರು ಈ ಹಿಂದೆ ವಿಧಾನಸಭೆಯಲ್ಲಿ ಅಶೋಕ್‌ ನಮ್ಮ ಬಂಧುಗಳು ಎಂದು ಹೇಳಿದ್ದರು. ನಾನು ಕನ್ನಡ ಶಾಲೆಯಲ್ಲಿ ಓದಿದವನು. ಆದರೆ ರಾಜ್ಯಪಾಲರಿಗೆ ಇಂಗ್ಲಿಷ್‌ನಲ್ಲಿ ಪತ್ರ ಬರೆಯಬೇಕಾಗುತ್ತದೆ. ಸ್ಪೀಕರ್‌ಗೂ ಇಂಗ್ಲಿಷ್‌ನಲ್ಲೇ ಪತ್ರ ಬರೆಯಬೇಕಾಗುತ್ತದೆ. ನಾನೀಗ ಏನು ಮಾಡಬೇಕು ಹಾಗೂ ಯಾರಿಗೆ ಪತ್ರ ಬರೆಯಬೇಕೆಂದು ಕೃಷ್ಣ ಬೈರೇಗೌಡರು ತಿಳಿಸಿದರೆ ನಾನು ಹಾಗೆಯೇ ನಡೆದುಕೊಳ್ಳುತ್ತೇನೆ. ನಾನು ಯಾವುದೇ ಸಚಿವರಿಗೆ ಸವಾಲು ಹಾಕುತ್ತಿಲ್ಲ. ನನಗೆ ಯಾವುದೇ ಆಯ್ಕೆ ಇಲ್ಲ. ಈ ನಾಲ್ಕು ಸಚಿವರು ನೈತಿಕತೆಯ ಆಧಾರದಲ್ಲಿ ಏನು ಹೇಳುತ್ತಾರೋ, ಅದನ್ನೇ ಪಾಲನೆ ಮಾಡುತ್ತೇನೆ ಎಂದರು.

ನಾನು 24 ಗಂಟೆ ಗಡುವು ನೀಡುತ್ತೇನೆ. ನೈತಿಕತೆಯ ಆಧಾರದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ. ಸಚಿವ ಸಂಪುಟದ ಎಲ್ಲ ಸಚಿವರು ಮುಖ್ಯಮಂತ್ರಿಗಾಗಿ ಪ್ರಾಣಕ್ಕೆ ಪ್ರಾಣ ಕೊಡುತ್ತೇವೆ, ಬಂಡೆಯಂತೆ ನಿಂತಿದ್ದೇವೆ ಎಂದು ಹೇಳಿದ್ದಾರೆ. ಆಂಜನೇಯ ಎದೆ ಬಗೆದು ಶ್ರೀರಾಮನನ್ನು ತೋರಿಸಿದಂತೆ ನಮ್ಮ ಎದೆಯಲ್ಲೂ ಸಿದ್ದರಾಮಯ್ಯ ಇದ್ದಾರೆ ಎಂಬಂತೆ ಈ ಸಚಿವರು ಹೇಳಿದ್ದಾರೆ. ಈಗ ಎಲ್ಲ ಸಚಿವರಿಗೆ ರಾಜೀನಾಮೆ ಕೊಡುವ ಅವಕಾಶವಿದೆ. ಮೊದಲು ಈ ನಾಲ್ಕು ಸಚಿವರು ಸಿದ್ದರಾಮಯ್ಯನವರಿಗಾಗಿ ರಾಜೀನಾಮೆ ನೀಡಲಿ. ಈ ಮೂಲಕ ಅವರ ಎದೆಯಲ್ಲಿ ಸಿದ್ದರಾಮಯ್ಯ ಇದ್ದಾರೆಯೇ? ಡಿ.ಕೆ.ಶಿವಕುಮಾರ್‌ ಅಥವಾ ಮಲ್ಲಿಕಾರ್ಜುನ ಖರ್ಗೆ ಇದ್ದಾರೆಯೇ ಎಂದು ಗೊತ್ತಾಗಲಿ. ಅವರೆಲ್ಲರೂ ರಾಜೀನಾಮೆ ನೀಡುವುದಾದರೆ ನಾನು ಕೂಡ ರಾಜೀನಾಮೆ ನೀಡುತ್ತೇನೆ ಎಂದು ಅಶೋಕ್ ಪಾಟೀ ಸವಾಲು ಹಾಕಿದರು.

ನ್ಯಾಯಾಲಯಕ್ಕಿಂತ ದೊಡ್ಡದಾಗಲು ಕಾಂಗ್ರೆಸ್‌ ಯತ್ನ:ಅಶೋಕ್ ವಾಗ್ದಾಳಿ Read More

ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ಹೋರಾಟ:ಅಶೋಕ್

ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ಮತ್ತು ಸಿಬಿಐ ತನಿಖೆಗೆ ವಹಿಸುವವರೆಗೂ ಹೋರಾಟ ನಡೆಯಲಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಹೋರಾಟದ ಫಲವಾಗಿ ಮುಡಾ ಹಗರಣ ಈ ಹಂತಕ್ಕೆ ಬಂದಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಸಚಿವ ಬಿ.ನಾಗೇಂದ್ರ ರಾಜೀನಾಮೆ ಕೊಡಲ್ಲ ಎಂದಿದ್ದರು. ಬಳಿಕ ಕಾನೂನಿನ ಕುಣಿಕೆಯಲ್ಲಿ ಸಿಲುಕಿಕೊಂಡು ರಾಜೀನಾಮೆ ನೀಡಿದರು. ಇದೇ ರೀತಿ ಸಿದ್ದರಾಮಯ್ಯ ಕೂಡ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಚುನಾವಣಾ ಬಾಂಡ್‌ ಬಗ್ಗೆ ಕಾಂಗ್ರೆಸ್‌ ದೊಡ್ಡದಾಗಿ ಮಾತಾಡುತ್ತಿದೆ. ಕಾಂಗ್ರೆಸ್‌ ಪಕ್ಷಕ್ಕೆ 1,500 ಕೋಟಿ ರೂ.ಗೂ ಅಧಿಕ‌ ಹಣ ದೇಣಿಗೆ ಬಂದಿದೆ, ಇದು ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಮುಗಿದುಹೋಗಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ವಿರುದ್ಧ ಮಾತನಾಡಲು ಈ ವಿವಾದ ಮಾಡಲಾಗಿದೆ, ಇದೆಲ್ಲ ಕಾಂಗ್ರೆಸ್‌ ಪ್ರಾಯೋಜಿತ ಎಂದು ಅಶೋಕ್ ಟೀಕಿಸಿದರು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೂರು ವರ್ಷ ಬಾಳಲಿ. ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸವಾಲೆಸೆಯುವುದು ಬೇಡ. ಕರ್ನಾಟಕದಲ್ಲಿ ಒಮ್ಮೆ ಸಿಎಂ ಆಗಬೇಕು ಎಂಬ ಆಸೆಯನ್ನು ಮಲ್ಲಿಕಾರ್ಜುನ ಖರ್ಗೆ ತೀರಿಸಿಕೊಳ್ಳಬಹುದು. ಆದರೆ ಮೋದಿಯವರನ್ನು ಪ್ರಧಾನಿ ಹುದ್ದೆಯಿಂದ ಕೆಳಕ್ಕಿಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್‌ ಹಂದಿ ಎಂದು ನಿಂದಿಸಿದ್ದಾರೆ. ಈ ಅಧಿಕಾರಿಯ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ಹೋರಾಟ:ಅಶೋಕ್ Read More

ನಿರ್ಮಲಾ ವಿರುದ್ಧ ಎಫ್‌ಐಆರ್‌ ಗೂ ಸಿಎಂ ಮುಡಾ ಹಗರಣಕ್ಕೂ ವ್ಯತ್ಯಾಸವಿದೆ:ಅಶೋಕ್

ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿರುವುದಕ್ಕೂ ಸಿಎಂ ಸಿದ್ದರಾಮಯ್ಯ ಅವರ ಮುಡಾ ಹಗರಣಕ್ಕೂ ವ್ಯತ್ಯಾಸವಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಜನ ಪಕ್ಷಪಾತ ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನನ್ನು ಕಬಳಿಸಿದ್ದಾರೆ. ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಸ್ವಂತಕ್ಕಾಗಿ ಏನೂ ಮಾಡಿಲ್ಲ. ಆ ಹಣ ಪಕ್ಷಕ್ಕೆ ಬಂದಿದೆ. ಕಾಂಗ್ರೆಸ್‌ ಪಕ್ಷಕ್ಕೆ 1,200 ಕೋಟಿ ರೂ.ಗೂ ಅಧಿಕ ಹಣ ಹೋಗಿದೆ,ಆ ಹಣವನ್ನು ಮೊದಲು ವಾಪಸ್‌ ನೀಡಲಿ, ಆ ನಂತರ ಸಚಿವರ ರಾಜೀನಾಮೆ ಕೇಳಲಿ ಎಂದು ‌ತಿರುಗೇಟು ನೀಡಿದರು.

ಎಲ್ಲ ಪಕ್ಷಗಳು ದೇಣಿಗೆ ಸಂಗ್ರಹ ಮಾಡಿವೆ. ಹೀಗೆ ಹಣ ತೆಗೆದುಕೊಂಡವರ ಮೇಲೆ ಎಫ್‌ಐಆರ್‌ ದಾಖಲಿಸುವುದಾದರೆ, ಎಲ್ಲರ ಮೇಲೂ ದಾಖಲಿಸಬೇಕಾಗುತ್ತದೆ. ಸಿಎಂ ಸಿದ್ದರಾಮಯ್ಯ ಅವರೇ ಯಾರಿಂದಲೋ ಹೇಳಿಸಿ ದೂರು ದಾಖಲಿಸಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಹೀಗೆ ದೂರು ದಾಖಲಿಸಿರುವುದು ರಾಜಕೀಯ ಪ್ರೇರಿತ ಎಂದು ದೂರಿದರು.

ಸಿಎಂ ಸಿದ್ದರಾಮಯ್ಯನವರ ಪ್ರಕರಣ ಕ್ಯಾಬೆನೆಟ್‌ನಲ್ಲಿ ಚರ್ಚೆಯಾಗಿರಲಿಲ್ಲ. ಆದರೆ ಚುನಾವಣಾ ಬಾಂಡ್‌ ಬಗ್ಗೆ ಕ್ಯಾಬಿನೆಟ್‌ನಲ್ಲೇ ಚರ್ಚೆಯಾಗಿ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಮುಡಾ ಹಗರಣದ ಆರೋಪದಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್‌ ನಾಯಕರು ಹೀಗೆ ಮಾತಾಡುತ್ತಿದ್ದಾರೆ. ಮೊದಲು ಲೋಕಾಯುಕ್ತ ಮುಚ್ಚಿಹಾಕಲು ಪ್ರಯತ್ನ ಮಾಡಿದ್ದರು. ಈಗ ಸಿಬಿಐ ಅಧಿಕಾರ ಕಿತ್ತುಕೊಳ್ಳಲು ಕ್ರಮ ವಹಿಸಿದ್ದಾರೆ. ಕಾಂಗ್ರೆಸ್‌ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಅನೇಕ ಹಗರಣಗಳನ್ನು ಮಾಡಿ ನುಂಗಿ ನೀರು ಕುಡಿದಿದ್ದರು ಎಂದು ಟೀಕಾಪ್ರಹಾರ ನಡೆಸಿದರು.

ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದರೆ, ಅವರು ಪೊಲೀಸರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಅದಕ್ಕಾಗಿ ರಾಜೀನಾಮೆ ನೀಡಲು ಆಗ್ರಹಿಸುತ್ತಿದ್ದೇವೆ ಎಂದು ಅಶೋಕ್ ತಿಳಿಸಿದರು.

ನಿರ್ಮಲಾ ವಿರುದ್ಧ ಎಫ್‌ಐಆರ್‌ ಗೂ ಸಿಎಂ ಮುಡಾ ಹಗರಣಕ್ಕೂ ವ್ಯತ್ಯಾಸವಿದೆ:ಅಶೋಕ್ Read More

ಸಿದ್ದರಾಮಯ್ಯ ರಾಜೀನಾಮೆ ನೀಡಿ ರಾಜ್ಯಕ್ಕೆ ಮಾದರಿಯಾಗಲಿ: ಅಶೋಕ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಿ ರಾಜ್ಯಕ್ಕೆ ಮಾದರಿಯಾಗಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ತಾವು ಸಜ್ಜನ ಎಂದು ಸಿದ್ದರಸಮಯ್ಯ ಯಾವಾಗಲೂ ಹೇಳಿಕೊಳ್ಳುತ್ತಾರೆ, ಸಜ್ಜನನಾಗುವ ಅವಕಾಶ ಎಂದರೆ ಅದು ರಾಜೀನಾಮೆ ನೀಡುವುದು ಎಂದು ಅಶೋಕ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್‌ ಆದೇಶ ಬಂದಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಿತ್ತು. ಅಥವಾ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದ ಕೂಡಲೇ ರಾಜೀನಾಮೆ ಕೊಡಬೇಕಿತ್ತು,ಆದರೆ ಹಾಗೆ ಮಾಡಲಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತನಿಖೆಗೆ ಆದೇಶಿಸಿದ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್‌ ಎತ್ತಿ ಹಿಡಿದಿರುವುದರ ಜೊತೆಗೆ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೂಡಾ ಲೋಕಾಯುಕ್ತ ತನಿಖೆಗೆ ಆದೇಶಿಸಿದೆ.

ಬಿಜೆಪಿಯಿಂದ ಸದನದಲ್ಲಿ ಈ ಕುರಿತು ಹೋರಾಟ ಮಾಡಿದಾಗ, ಇದು ಬಿಜೆಪಿ ಪ್ರೇರಿತ, ಇದು ಷಡ್ಯಂತ್ರ ಎಂದು ಸಚಿವರು ಆರೋಪ ಮಾಡಿದ್ದರು. ರಾಜಭವನಕ್ಕೆ ಮುತ್ತಿಗೆ ಹಾಕಿದ ಶಾಸಕರು, ಬಾಂಗ್ಲಾ ಮಾದರಿ ಹೋರಾಟ ಮಾಡುತ್ತೇವೆಂದು ಬೆದರಿಕೆ ಹಾಕಿದ್ದರು. ಈಗ ಇದು ತನಿಖೆಗೆ ಸೂಕ್ತ ಎಂದು ನ್ಯಾಯಾಂಗದಿಂದಲೇ ತಿಳಿದುಬಂದಿದೆ.

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೇರೆ ದಾರಿಯಿಲ್ಲ. ಅವರು ಯಾವುದಕ್ಕೆ ಕಾಯುತ್ತಿದ್ದಾರೊ ತಿಳಿಯುತ್ತಿಲ್ಲ. ಬಿಜೆಪಿಯವರು ಪ್ರಕರಣ ದಾಖಲಿಸಿಲ್ಲ. ದೂರು ದಾಖಲಿಸಿದ್ದು ಆರ್‌ಟಿಐ ಕಾರ್ಯಕರ್ತರು ಹಾಗೂ ಹೋರಾಟಗಾರರು. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ ಎಂದು ಆಪಾದನೆ ಮಾಡಿದ್ದರು. ಈಗ ನ್ಯಾಯಾಲಯಕ್ಕೆ ಯಾವ ರೀತಿಯ ಆಪಾದನೆ ಮಾಡುತ್ತಾರೆ ಎಂದು ಅಶೋಕ್ ಪ್ರಶ್ನಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲು ಒತ್ತಾಯಿಸಿದ್ದೇವೆ. ಪಕ್ಷದ ಎಲ್ಲ ಮುಖಂಡರು ಸೇರಿ ಗುರುವಾರ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸುತ್ತೇವೆ ಎಂದು ಅಶೋಕ್ ಇದೇ‌ ವೇಳೆ ತಿಳಿಸಿದರು.

ಸಿದ್ದರಾಮಯ್ಯ ರಾಜೀನಾಮೆ ನೀಡಿ ರಾಜ್ಯಕ್ಕೆ ಮಾದರಿಯಾಗಲಿ: ಅಶೋಕ್ Read More

ಸಿದ್ದರಾಮಯ್ಯ ರಾಜೀನಾಮೆಗೆ‌ ಅಶೋಕ್ ಆಗ್ರಹ

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ‌ ಸಿದ್ದರಾಮಯ್ಯ ನವರ ವಿರುದ್ಧ ರಾಜ್ಯಪಾಲರ ನಿರ್ಧಾರವನ್ನ ಹೈಕೋರ್ಟ್ ಎತ್ತಿಹಿಡಿದಿದ್ದು, ಇದು ಸತ್ಯಕ್ಕೆ ಸಂದ ಜಯವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದಾಗಿನಿಂದ ಮುಖ್ಯಮಂತ್ರಿ ಆದಿಯಾಗಿ, ಸಚಿವರು, ಶಾಸಕರು ಸೇರಿದಂತೆ ಕಾಂಗ್ರೆಸ್ ನಾಯಕರು ರಾಜ್ಯಪಾಲರು ಮತ್ತು ರಾಜಭವನವನ್ನ ನಿಂದಿಸುತ್ತಾ ಬಂದಿದ್ದು, ಹೈಕೋರ್ಟ್ ತೀರ್ಪು ಇಡೀ ಕಾಂಗ್ರೆಸ್ ಪಕ್ಷಕ್ಕೆ ಛಡಿ ಏಟು ಕೊಟ್ಟಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನಾದರೂ ಅನಗತ್ಯವಾಗಿ ರಾಜ್ಯಪಾಲರನ್ನ ನಿಂದಿಸುವುದು ಬಿಟ್ಟು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ರಾಜೀನಾಮೆಗೆ‌ ಅಶೋಕ್ ಆಗ್ರಹ Read More