ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಅನ್ಯಾಯಗಳ ವಿರುದ್ಧ ಹೋರಾಟ:ಅಶೋಕ್

ಬೆಂಗಳೂರು: ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಅನ್ಯಾಯಗಳ ವಿರುದ್ಧ ತೀವ್ರ ಹೋರಾಟ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.

ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ಎಲ್ಲ ಸಮಸ್ಯೆಗಳ ಬಗ್ಗೆ ಸದನದಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರ ಈ ಬಾರಿ ಎರಡು ವಾರ ಮಾತ್ರ ಅಧಿವೇಶನ ನಡೆಸಲಾಗುತ್ತಿದೆ. ಇನ್ನೂ ಹೆಚ್ಚು ದಿನ ಅಧಿವೇಶನ ನಡೆಸಲು ಒತ್ತಾಯಿಸುತ್ತೇವೆ. ವಕ್ಫ್‌ ಮಂಡಳಿಯಿಂದಾಗುತ್ತಿರುವ ಭೂ ಕಬಳಿಕೆ ಜ್ವಲಂತ ಸಮಸ್ಯೆಯಾಗಿದೆ. ಬಡವರ ರೇಷನ್‌ ಕಾರ್ಡ್‌ ರದ್ದು ಮಾಡಿ ಗ್ಯಾರಂಟಿಗಾಗಿ ಹಣ ಉಳಿಸಲಾಗುತ್ತಿದೆ. ಈ ಸಮಸ್ಯೆ ವಿರುದ್ಧ ಅಧಿವೇಶನದಲ್ಲಿ ಹೋರಾಟ ಮಾಡುತಗತೇವೆ, ಅಬಕಾರಿ ಇಲಾಖೆಯ ಹಗರಣ, ಬೆಳೆನಾಶಕ್ಕೆ ಪರಿಹಾರ ಮೊದಲಾದ ಸಮಸ್ಯೆಯ ವಿರುದ್ಧವೂ ಹೋರಾಟ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಉತ್ತರ ಕರ್ನಾಟಕದ ಜಿಲ್ಲೆಗಳ ಸಮಸ್ಯೆ ಬಗ್ಗೆ ಚರ್ಚಿಸಲು ನಾನು ಸಭೆ ನಡೆಸಲಿದ್ದೇನೆ. ಈ ಹಿಂದೆ ಕಲ್ಯಾಣ ಕರ್ನಾಟಕ ಕುರಿತು ಸರ್ಕಾರದಿಂದ ಸಭೆ ನಡೆದಿದೆ. ಆ ಬಳಿಕ ಯಾವುದೇ ಸುದ್ದಿ ಇಲ್ಲ. ಬ್ರ್ಯಾಂಡ್‌ ಬೆಂಗಳೂರು ಎಂದು ಹೇಳಿ, ಮಳೆ ಬಂದು ಮುಳುಗುವ ಬೆಂಗಳೂರು ಸೃಷ್ಟಿಯಾಗಿದೆ. ಮಳೆಯಿಂದಾಗಿ ರಸ್ತೆ ಗುಂಡಿ ಉಂಟಾಗಿ ವಾಹನ ಚಾಲಕರಿಗೆ ಬೆನ್ನು ನೋವು ಉಂಟಾಗಿದೆ. ಜಯನಗರ ಶಾಸಕರು ಸೇರಿದಂತೆ ಅನೇಕ ಶಾಸಕರಿಗೆ ಅನುದಾನ ಕಡಿತವಾಗಿದೆ. ಹೀಗೆ ಮೊದಲಾದ ವಿಷಯಗಳ ಬಗ್ಗೆ ಪ್ರಶ್ನಿಸಲಾಗುವುದು ಎಂದು ಅಶೋಕ ತಿಳಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಅನ್ಯಾಯಗಳ ವಿರುದ್ಧ ಹೋರಾಟ:ಅಶೋಕ್ Read More

ವಕ್ಫ್‌ ಮಂಡಳಿಯಿಂದ ಭೂ ಕಬಳಿಕೆ: ಭೀತಿಗೊಂಡ ಜನ- ಆರ್‌.ಅಶೋಕ್

ಬೆಂಗಳೂರು: ವಕ್ಫ್‌ ಮಂಡಳಿ ಬಡವರ ಭೂಮಿ ಕಬಳಿಸುತ್ತಿರುವುದರಿಂದ ಜನ ಭೀತಿಗೊಳಗಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ನೋಟಿಸ್‌ ವಾಪಸ್‌ ಪಡೆಯಲು ಸೂಚಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ಮುಖ್ಯ ಕಾರ್ಯದರ್ಶಿ ಭೂಮಿ ವಶಪಡಿಸಿಕೊಳ್ಳಲು ಲಿಖಿತ ಸೂಚನೆ ನೀಡಿದ್ದಾರೆ. ಈ ಸತ್ಯ ಮರೆಮಾಚಲು ಮುಖ್ಯಮಂತ್ರಿ ಸುಳ್ಳು ಹೇಳಿದ್ದಾರೆ ಎಂದು ದೂರಿದರು.

ಟಿಪ್ಪು ಸುಲ್ತಾನ್‌ ಖಡ್ಗ ಬಳಸಿ ಅಮಾಯಕರನ್ನು ಮತಾಂತರ ಮಾಡಿದ್ದ. ಅದೇ ರೀತಿ ಈಗ ಕಾಂಗ್ರೆಸ್‌ ವಕ್ಫ್‌ ಬಳಸಿಕೊಂಡು ಜನರ ಭೂಮಿ ಕಬಳಿಸುತ್ತಿದೆ. ಸರ್‌.ಎಂ.ವಿಶ್ವೇಶ್ವರಯ್ಯನವರು ಓದಿದ ಶಾಲೆಯನ್ನೂ ವಕ್ಫ್‌ ಆಸ್ತಿ ಎಂದು ಉಲ್ಲೇಖಿಸಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಬಸವರಾಜ ಬೊಮ್ಮಾಯಿ ಅವರು ಕಬಳಿಕೆ ಮಾಡಿದ ಭೂಮಿ ವಾಪಸ್‌ ಪಡೆಯಿರಿ ಎಂದು ಹೇಳಿದ್ದಾರೆಯೇ ಹೊರತು, ರೈತರ ಜಮೀನು ಪಡೆಯಲು ಹೇಳಿಲ್ಲ. ಆದರೆ ಮಂಡಳಿಯ ಸದಸ್ಯರು ವಿಧಾನಸೌಧ ನಮ್ಮದು ಎಂದು ಕೂಡ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರವಿದ್ದಾಗ ಕೋಲಾರದಲ್ಲಿ ವಾಲ್ಮೀಕಿ ಭವನ ನಿರ್ಮಿಸಲಾಗಿತ್ತು. ಈಗ ಅದರ ಮೇಲೆ ಮಸೀದಿ ಕಟ್ಟಿಸಿ ಕಾಂಪೌಂಡ್‌ ನಿರ್ಮಿಸಲಾಗಿದೆ. ಇಂತಹ ಅಕ್ರಮದ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಸರ್ಕಾರ ಎಲ್ಲಕ್ಕೂ ಎಸ್‌ಐಟಿ ರಚಿಸುತ್ತಿದೆ. ಸಿದ್ದರಾಮಯ್ಯನವರ ಹಗರಣದ ವಿರುದ್ಧ ಕೆಂಪಣ್ಣ ಆಯೋಗ ರಚಿಸಿದ್ದು, ಅದರ ವರದಿ ಬಂದೇ ಇಲ್ಲ. ಕೋವಿಡ್‌ ಸಮಯದಲ್ಲಿ ಬಿ.ಎಸ್‌.ಯಡಿಯೂರಪ್ಪನವರು ಅಧಿಕಾರಿಗಳು ಹೇಳಿದಂತೆ ಕಿಟ್ ಖರೀದಿ ಮಾಡಲು ಸೂಚಿಸಿದ್ದರು, ಇದರಲ್ಲಿ ಯಾರದ್ದೂ ತಪ್ಪಿಲ್ಲ, ಇದು ರಾಜಕೀಯ ಪ್ರೇರಿತ ಸುಳ್ಳು ಪ್ರಕರಣ. ಖರೀದಿ ಮಾಡುವ ಅಧಿಕಾರ ಮುಖ್ಯಮಂತ್ರಿಗಿಲ್ಲ. ಯಾವ ಕಂಪನಿಯಿಂದ, ಎಲ್ಲಿಂದ ಖರೀದಿ ಮಾಡಬೇಕೆಂದು ಅಧಿಕಾರಿಗಳು ತೀರ್ಮಾನಿಸಿರುತ್ತಾರೆ. ಈ ಪ್ರಕರಣ ಸರ್ಕಾರಕ್ಕೆ ತಿರುಗುಬಾಣವಾಗಲಿದೆ ಎಂದು ಅಶೋಕ್ ಎಚ್ಚರಿಸಿದರು.

ವಕ್ಫ್‌ ಮಂಡಳಿಯಿಂದ ಭೂ ಕಬಳಿಕೆ: ಭೀತಿಗೊಂಡ ಜನ- ಆರ್‌.ಅಶೋಕ್ Read More

ಅಬಕಾರಿ ಸಚಿವ ತಿಮ್ಮಾಪುರ ರಾಜೀನಾಮೆಗೆ ಅಶೋಕ್ ಆಗ್ರಹ

ಬೆಂಗಳೂರು: ಅಬಕಾರಿ ಇಲಾಖೆಯು ಮದ್ಯದಂಗಡಿಗಳಿಂದ ಮಂಥ್ಲಿ ಮನಿ ಹೆಸರಿನಲ್ಲಿ ಲಂಚ ಪಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು,ಕೂಡಲೆ ಇಲಾಖೆಯ ಸಚಿವರು ರಾಜೀನಾಮೆ ನೀಡಬೇಕೆಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಆಗ್ರಹಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಆರ್‌.ಅಶೋಕ್‌,ಕಾಂಗ್ರೆಸ್ ಸರ್ಕಾರದ ಲಂಚಾವತಾರದ ಮತ್ತೂಂದು ಕರಾಳ ಅಧ್ಯಾಯ ಬಹಿರಂಗಗೊಂಡಿದ್ದು, ರಾಜ್ಯ ಮದ್ಯ ಮಾರಾಟಗಾರರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಅಬಕಾರಿ ಸಚಿವರು ಮಂಥ್ಲಿ ಮನಿ ಹೆಸರಿನಲ್ಲಿ ಮದ್ಯದ ಅಂಗಡಿಗಳಿಂದ ಪ್ರತಿ ತಿಂಗಳಿಗೆ 15 ಕೋಟಿ ರೂಪಾಯಿಯಂತೆ ವರ್ಷಕ್ಕೆ 180 ಕೋಟಿ ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಅಬಕಾರಿ ಸಚಿವರನ್ನು ಬದಲಾಯಿಸಲು ಕೋರಿದ್ದಾರೆ ಎಂದು ತಿಳಿಸಿದ್ದಾರೆ.

ವರ್ಗಾವಣೆ ದಂಧೆ, ಲೈಸೆನ್ಸ್ ಮಂಜೂರಾತಿ, ಮದ್ಯದ ಅಂಗಡಿಗಳಿಂದ ಮಂಥ್ಲಿ ಮನಿ ಸೇರಿದಂತೆ ಅಬಕಾರಿ ಸಚಿವರು ವರ್ಷಕ್ಕೆ ಸುಮಾರು 500 ಕೋಟಿ ರೂಪಾಯಿ ಭ್ರಷ್ಟಾಚಾರ ಎಸಗುತ್ತಿದ್ದಾರೆ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘ ಮಾಡಿರುವ ಆರೋಪ ಅತ್ಯಂತ ಗಂಭೀರವಾಗಿದ್ದು, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಈ ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಿ ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಆರ್‌.ಅಶೋಕ್‌ ಒತ್ತಾಯಿಸಿದ್ದಾರೆ.

ಅಬಕಾರಿ ಸಚಿವ ತಿಮ್ಮಾಪುರ ರಾಜೀನಾಮೆಗೆ ಅಶೋಕ್ ಆಗ್ರಹ Read More

ಚನ್ನಪಟ್ಟಣಕ್ಕೂ ಚಾಚಿದ ವಕ್ಫ್ ಕಬಂಧ ಬಾಹುಗಳು: ಅಶೋಕ್ ಟೀಕೆ

ಚನ್ನಪಟ್ಟಣ: ವಕ್ಫ್ ಕಬಂಧ ಬಾಹುಗಳು ಚನ್ನಪಟ್ಟಣಕ್ಕೂ ಚಾಚಿಕೊಳ್ಳುತ್ತಿದೆ ಎಂದು ‌
ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಚನ್ನಪಟ್ಟಣ ಕ್ಷೇತ್ರದ ಚಕ್ಕೆರೆ ಗ್ರಾಮದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರ ಭಾಷಣ ಮಾಡಿದ ಅಶೋಕ್,ರೈತರು ಕೂಡಲೇ ತಾಲ್ಲೂಕು ಕಚೇರಿಗೆ ಹೋಗಿ ತಮ್ಮ ಭೂ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನೂರಾರು ವರ್ಷಗಳಿಂದ ರೈತರು ಭೂಮಿಯಲ್ಲಿ ಬಾಳಿ ಬದುಕುತ್ತಿದ್ದಾರೆ. ಆದರೆ, ಇವರು ಖೊಟ್ಟಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಅದಕ್ಕೂ ಹಿಂದಿನಿಂದಲೂ ಈ ಭೂಮಿ ನಮ್ಮ ವಶದಲ್ಲಿ ಇತ್ತು ಎಂದು ತಗಾದೆ ತೆಗೆಯುತ್ತಿದ್ದಾರೆ. ವಕ್ಫ್ ಎಷ್ಟರ ಮಟ್ಟಿಗೆ ಭೂಮಿಯನ್ನು ಹೊಂದಿದೆ ಎಂದರೆ ಭಾರತೀಯ ಸೇನೆಗಿಂತ ಜಾಸ್ತಿ ಭೂಮಿ ವಕ್ಫ್ ಮಂಡಳಿ ವಶದಲ್ಲಿದೆ ಎಂದು ದೂರಿದರು.

17 ಕೆರೆ ತುಂಬಿಸಲು ಹಣ ನೀಡಿದ್ದು ಅಂದಿನ ಸಿಎಂ ಡಿ.ವಿ.ಸದಾನಂದ ಗೌಡರು. ಹಣ ಬಿಡುಗಡೆಗೆ ಆದೇಶ ಮಾಡಿದ್ದು ಬಸವರಾಜ್ ಬೊಮ್ಮಾಯಿ ಹಾಗೂ ಯೋಜನೆಗೆ ಚಾಲನೆ ನೀಡಿದ್ದು ನೀರಾವರಿ ಎಂಜಿನಿಯರ್ ವೆಂಕಟೇ ಗೌಡ. ಈ ವೆಂಕಟೇ ಗೌಡ ಹಲವು ಸಲ ನಮ್ಮ ಮೇಲೆ ಒತ್ತಡ ಹಾಕಿ ಈ ಯೋಜನೆ ಜಾರಿಗೆ ಬರುವಂತೆ ನೋಡಿಕೊಂಡು, ಅದನ್ನು ಅನುಷ್ಠಾನ ಮಾಡಿದರು. ಇದಕ್ಕೂ ಯೋಗೇಶ್ವರ್ ಅವರಿಗೂ ಸಂಬಂಧವೇ ಇಲ್ಲ ಎಂದು ಅಶೋಕ್ ಹೇಳಿದರು.

ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ರಾಮನಗರ ಜಿಲ್ಲೆಯನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಚನ್ನಪಟ್ಟಣಕ್ಕೆ ಹದಿನೆಂಟು ಸಲ ಸುತ್ತು ಹಾಕಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗದೆ ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ಸಚಿವರಾಗಿದ್ದು ಯಾಕೆ? ಎಂದು ಪ್ರಶ್ನಿಸಿದರು.

ಚನ್ನಪಟ್ಟಣಕ್ಕೂ ಚಾಚಿದ ವಕ್ಫ್ ಕಬಂಧ ಬಾಹುಗಳು: ಅಶೋಕ್ ಟೀಕೆ Read More

ಜಮೀನು ಕಬಳಿಕೆ; ವಕ್ಫ್ ವಿರುದ್ಧ ನ. 4 ರಿಂದ ಹೋರಾಟ: ಆರ್.ಅಶೋಕ್

ಬೆಂಗಳೂರು: ರೈತರ ಜಮೀನು, ದೇವಸ್ಥಾನಗಳ ಆಸ್ತಿಗಳನ್ನು ಕಬಳಿಸುತ್ತಿರುವ ವಕ್ಫ್ ಮಂಡಳಿ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ನವೆಂಬರ್ 4 ರಿಂದ ತೀವ್ರ ಹೋರಾಟ ಆರಂಭಿಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರದ ಬಳಿಕ ಕೋಲಾರದಲ್ಲಿ ದೇವಸ್ಥಾನದ ಆಸ್ತಿಗಳನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಿಸಲಾಗಿದೆ. ನಾಗಮಂಗಲ, ಚನ್ನಪಟ್ಟಣ, ಬೆಳಗಾವಿ ಮೊದಲಾದ ಕಡೆಗಳಲ್ಲಿ ರೈತರ ಜಮೀನುಗಳನ್ನು ಕೊಳ್ಳೆ ಹೊಡೆಯಲು ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. ಇದರ ವಿರುದ್ಧ ಹೋರಾಟ ಆರಂಭಿಸುತ್ತಿದ್ದೇವೆ ಎಂದು ಹೇಳಿದರು.

ಭೂಗಳ್ಳರು ಮಾತ್ರವಲ್ಲದೆ, ಸರ್ಕಾರವೇ ಅಧಿಕೃತವಾಗಿ ಒತ್ತುವರಿ ಆರಂಭ ಮಾಡಿದೆ. ಇದರ ವಿರುದ್ಧ ರೈತ ಸಂಘಟನೆಗಳು ತೀವ್ರವಾಗಿ ಪ್ರತಿಭಟಿಸಬೇಕು. ಹಿಂದೆ ಮುಸ್ಲಿಂ ರಾಜರು ದಾಳಿ ಮಾಡಿ, ಮತಾಂಧತೆ ಮೆರೆದಿದ್ದರು. ಟಿಪ್ಪು ಸುಲ್ತಾನ ಕೊಡಗಿನಲ್ಲಿ ಮತಾಂತರ ಮಾಡಿರುವುದು ಇದಕ್ಕೆ ಸಾಕ್ಷಿ. ಇದೇ ರೀತಿ ಈಗ ಜಮೀನಿನ ಕಬಳಿಕೆ ನಡೆಯುತ್ತಿದೆ. ಇಂತಹವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಓಲೈಸುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಯಾವುದೇ ಸಮಸ್ಯೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಿಲ್ಲವೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ನಾವು ಹೋರಾಟ ಮಾಡಿದ್ದಕ್ಕೇನೆ ಸಿಎಂ ವಿರುದ್ಧ ಪ್ರಕರಣ ದಾಖಲಾಗಿದೆ. ಲೋಕಾಯುಕ್ತ ಹಾಗೂ ಇಡಿ ತನಿಖೆ ಮಾಡುತ್ತಿದೆ ಎಂದು ಟಾಂಗ್ ನೀಡಿದರು.

ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ನಾವು ಹಿಟ್ ಮಾಡಿದ ಕೂಡಲೇ ಕಾಂಗ್ರೆಸ್ ಓಡಿಹೋಗುತ್ತದೆ. ಈ ಸರ್ಕಾರ ತುಘಲಕ್ ಆಡಳಿತ ನೀಡಿ ನಗೆಪಾಟಲಿಗೀಡಾಗಿದೆ. ಗ್ಯಾರಂಟಿ ಯೋಜನೆಗಳ ಪೈಕಿ ಎರಡು ಯೋಜನೆಗಳು ಟುಸ್ ಪಟಾಕಿಯಾಗಲಿದೆ ಎಂದು ಅಶೋಕ್ ವ್ಯಂಗ್ಯವಾಡಿದರು.

ಡಿ.ಕೆ‌.ಶಿವಕುಮಾರ್ ಅವರಿಗೆ ಮಹಿಳೆಯರು ಫೋನ್ ಕರೆ ಮಾಡಿ ಯೋಜನೆ ಬೇಡವೆಂದು ತಿಳಿಸಿದ್ದಾರಂತೆ. ಕಳ್ಳನಿಗೆ ಪಿಳ್ಳೆ ನೆವ ಎಂಬಂತೆ, ಯೋಜನೆ ರದ್ದುಪಡಿಸಲು ಈ ರೀತಿ ಕಾರಣ ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ನಮ್ಮ ಕುಟುಂಬದಿಂದ 65 ಎಕರೆ ಜಾಗವನ್ನು ಎಚ್ಎಂಟಿಗೆ ನೀಡಿದ್ದೆವು. ಈಗ ಆ ಜಾಗದಲ್ಲಿ ಅರಣ್ಯ ನಾಶವಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಇದು ಅರಣ್ಯ ಭೂಮಿ ಎನ್ನುವುದಾದರೆ, ಇದನ್ನು ನೀಡಿದ್ದೇ ಕಾಂಗ್ರೆಸ್ ಸರ್ಕಾರ ಎಂಬುದನ್ನು ನೆನಪಿಸಿಕೊಳ್ಳಬೇಕು. ಎಚ್ಎಂಟಿ ಕಾರ್ಖಾನೆಯನ್ನು ಅಂದಿನ ಪ್ರಧಾನಿ ಜವಹರಲಾಲ್ ನೆಹರು ಉದ್ಘಾಟಿಸಿದ್ದರು‌.ಅವರೇ ಜಾಗ ನೀಡಿ, ಈಗ ಅದು ಅರಣ್ಯ ಭೂಮಿ ಎಂದು ಹೇಳುತ್ತಿದ್ದಾರೆ. ನಾನು ಒಂದನೇ ತರಗತಿಯಲ್ಲಿ ಇದ್ದಾಗಲೂ ಅದು ಎಚ್ಎಂಟಿಗೆ ಸೇರಿತ್ತು. ಈಗ ಇವರು ಮಾಜಿ ಪ್ರಧಾನಿ ನೆಹರು ವಿರುದ್ಧ ಪ್ರಕರಣ ದಾಖಲಿಸುತ್ತಾರಾ, ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿ ವಿರುದ್ಧ ಕೇಸು ದಾಖಲಿಸುತ್ತಾರಾ ಎಂದು ಅಶೋಕ್ ಕಾರವಾಗಿ ಪ್ರಶ್ನಿಸಿದರು.

ಜಮೀನು ಕಬಳಿಕೆ; ವಕ್ಫ್ ವಿರುದ್ಧ ನ. 4 ರಿಂದ ಹೋರಾಟ: ಆರ್.ಅಶೋಕ್ Read More

ಡಿಕೆಶಿ ಚನ್ನಪಟ್ಟಣದ ಮನೆ ಮಗನಾದರೆ ಜಿಲ್ಲಾ ಉಸ್ತುವಾರಿ ವಹಿಸಲಿ:ಅಶೋಕ

ಚನ್ನಪಟ್ಟಣ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಚನ್ನಪಟ್ಟಣದ ಮನೆ ಮಗ ಎನ್ನುವುದಾದರೆ ಇಲ್ಲಿನ ಜಿಲ್ಲಾ ಉಸ್ತುವಾರಿ ಹೊಣೆ ವಹಿಸಿಕೊಳ್ಳಲಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಹೇಳಿದ್ದಾರೆ.

ಚುನಾವಣೆ ಬಂದಾಗ ನಾಟಕ ಮಾಡಲು ಮಾತ್ರ ಈ ರೀತಿಯ ಭಾವನಾತ್ಮಕ ಮಾತು ಆಡುತ್ತಾರೆ ಎಂದು ಟೀಕಿಸಿದರು.

ನಿಖಿಲ್ ಪರ ಪ್ರಚಾರ‌ ಸಭೆಯ ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಅಶೋಕ್, ನಿಖಿಲ್‌ ಕುಮಾರಸ್ವಾಮಿ ಅವರು ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಎರಡೂ ಪಕ್ಷ ಇರುವುದರಿಂದ ಗೆಲುವು ಸುಲಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಚ್‌.ಡಿ.ಕುಮಾರಸ್ವಾಮಿ ಅವರು ಈ ಹಿಂದೆ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿ ಬಿಜೆಪಿಯ ಸಾಂಪ್ರದಾಯಿಕ ಮತಗಳೂ ಸಿಗುವುದರಿಂದ ಗೆಲ್ಲುವ ಸಾಧ್ಯತೆ ಹೆಚ್ಚು. ಕಾಂಗ್ರೆಸ್‌ ಸರ್ಕಾರದಲ್ಲಿನ ಭ್ರಷ್ಟಾಚಾರ, ಮುಡಾ ಹಗರಣ, ದಲಿತರ ಹಣವನ್ನು ಬೇರೆಡೆ ವರ್ಗಾಯಿಸಿರುವುದು ಮೊದಲಾದ ಕಾರಣಗಳಿಂದ ಜನರಿಗೆ ಕಾಂಗ್ರೆಸ್‌ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿದರು.

ಈ 16 ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚನ್ನಪಟ್ಟಣಕ್ಕಾಗಲೀ, ರಾಮನಗರಕ್ಕಾಗಲೀ ಭೇಟಿ ನೀಡಿಲ್ಲ. ಭೇಟಿ ನೀಡಲು ಕೂಡ ಸಮಯವಿಲ್ಲವೆಂದಾದರೆ ಅಭಿವೃದ್ಧಿ ಹೇಗೆ ಮಾಡುತ್ತಾರೆ, ಡಿ.ಕೆ.ಶಿವಕುಮಾರ್‌ ನಾನು ಮನೆ ಮಗ ಎಂದು ಜನರ ಕಿವಿ ಮೇಲೆ ಹೂ ಇಡಲು ನೋಡಿದ್ದರು. ನಂತರ ತಾಯಿ ಜಿಲ್ಲೆಯನ್ನು ಬಿಟ್ಟು ಬೆಂಗಳೂರಿನ ಉಸ್ತುವಾರಿ ಪಡೆದುಕೊಂಡರು. ರಾಮಲಿಂಗಾರೆಡ್ಡಿ ಅವರನ್ನು ಇಲ್ಲಿನ ಜಿಲ್ಲಾ ಉಸ್ತುವಾರಿ ಮಾಡಿದ್ದರೂ, ಅವರಿಗೆ ಇಲ್ಲಿಗೆ ಬರಲು ಇಷ್ಟವಿಲ್ಲ. ಚುನಾವಣೆ ಬಂದಿರುವುದರಿಂದ ನಾಟಕ ಮಾಡಲು ಇಲ್ಲಿಗೆ ಬಂದಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರಿಗೆ ಅಷ್ಟೊಂದು ಪ್ರೀತಿ ಇದ್ದರೆ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಬೇಕಿತ್ತು. ಬೆಂಗಳೂರಿನಲ್ಲಿ ಸಮೃದ್ಧಿ ಮಾಡಲು ಹೊರಟಿದ್ದಾರೆ. ಆದರೆ ಚನ್ನಪಟ್ಟಣ ಅಭಿವೃದ್ಧಿಗೆ ಹತ್ತು ಪೈಸೆ ಹಣವಿಲ್ಲ ಎಂದು ಅಶೋಕ್ ಟೀಕಾಪ್ರಹಾರ ನಡೆಸಿದರು.

ಸಿ.ಪಿ.ಯೋಗೇಶ್ವರ್‌ ತಾವೇ ನೀರಾವರಿ ಯೋಜನೆ ತಂದಿದ್ದೇನೆಂದು ಹೇಳಿಕೊಂಡರು ಕೂಡ, ಅನುದಾನ ಮಂಜೂರು ಮಾಡಿದ್ದು ಬಿಜೆಪಿ ಸರ್ಕಾರವೇ ಹೊರತು ಅವರಲ್ಲ. ಅದಕ್ಕಿಂತ ಹೆಚ್ಚಾಗಿ ಇಲ್ಲಿ ಎಂಜಿನಿಯರ್‌ ಆಗಿದ್ದ ವೆಂಕಟೇಗೌಡ ನಮ್ಮ ಬಳಿ ಬಂದು ಅನುದಾನ ಮಂಜೂರು ಮಾಡಿಸಿಕೊಂಡಿದ್ದರು ಎಂದು ತಿಳಿಸಿದರು.

ಎಚ್.ಡಿ.ಕುಮಾರಸ್ವಾಮಿ ಅವರು ಭಾವನಾತ್ಮಕ ಜೀವಿ, ಆದರೆ ಕಾಂಗ್ರೆಸ್ ನಾಯಕರು ಕಟುಕರು. ಕುಮಾರಸ್ವಾಮಿ ಕಾರಿನಲ್ಲಿ ಹೋಗುತ್ತಿರುವಾಗ ಬಡ ವ್ಯಕ್ತಿ ಕಂಡರೆ ಅವನ ಬಳಿ ಹೋಗಿ ಸಹಾಯ ಮಾಡುತ್ತಾರೆ. ಆದರೆ ಕಾಂಗ್ರೆಸ್ ನವರು ಈ ಭಾವನೆಯನ್ನೇ ತಮಾಷೆ ಮಾಡುತ್ತಾರೆ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಕೆಶಿ ಚನ್ನಪಟ್ಟಣದ ಮನೆ ಮಗನಾದರೆ ಜಿಲ್ಲಾ ಉಸ್ತುವಾರಿ ವಹಿಸಲಿ:ಅಶೋಕ Read More

ಕಾಂಗ್ರೆಸ್ ಸರ್ಕಾರದಿಂದ ಲ್ಯಾಂಡ್‌ ಜಿಹಾದ್‌: ಸಿಎಂ ಸ್ಪಷ್ಟನೆಗೆ ಅಶೋಕ ಆಗ್ರಹ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಹಾಗೂ ವಕ್ಫ್‌ ಬೋರ್ಡ್‌ನಿಂದ ಲ್ಯಾಂಡ್ ಜಿಹಾದ್ ಆರಂಭವಾಗಿದ್ದು, ಬಡ ರೈತರ ಜಮೀನನ್ನು ಕಬಳಿಸಲು ಎಲ್ಲ ಬಗೆಯ ಪ್ರಯತ್ನ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ.

ಈ ಕುರಿತು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಸ್ಪಷ್ಟೀಕರಣ ಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಬಂದ ನಂತರ ಇಡೀ ಕರ್ನಾಟಕ ಒಂದೇ ಸಮುದಾಯಕ್ಕೆ ಸೇರಿದ್ದು ಎಂಬಂತೆ ಆಡುತ್ತಿದೆ. ಕಾಂಗ್ರೆಸ್‌ನ ತುಷ್ಟೀಕರಣದಿಂದಾಗಿ ಹಿಂದೂಗಳ ಮೇಲೆ ಹಲ್ಲೆಯಾಗಿದೆ. ಗಣೇಶ ವಿಸರ್ಜನೆ ಮಾಡಲು ಅವಕಾಶವಿಲ್ಲ. ಹಿಂದೂಗಳು ಜೈ ಶ್ರೀರಾಮ್ ಎನ್ನುವಂತಿಲ್ಲ. ಹಿಂದೂಗಳಿಗೆ ಭದ್ರತೆ ಇಲ್ಲ ಎಂದು ಕಿಡಿಕಾರಿದರು.

ವಿಜಯಪುರ ಜಿಲ್ಲೆಯ ಹೊನವಾಡ ಗ್ರಾಮದಲ್ಲಿ ಸುಮಾರು 12 ಸಾವಿರ ಹಾಗೂ ಇಡೀ ಜಿಲ್ಲೆಯಲ್ಲಿ ಒಟ್ಟಾರೆ 15 ಸಾವಿರ ಎಕರೆ ಭೂಮಿ ಕಬಳಿಸಲು ವಕ್ಫ್ ಬೋರ್ಡ್ ಯೋಜನೆ ರೂಪಿಸಿದೆ.ಅದಕ್ಕಾಗಿ ಕಂದಾಯ ಇಲಾಖೆಯಿಂದ 139 ರೈತರಿಗೆ ತಿಳುವಳಿಕೆ ನೋಟಿಸ್ ನೀಡಲಾಗಿದೆ. ಇದು ಸ್ಪಷ್ಟವಾಗಿ ಸರ್ಕಾರದಿಂದಲೇ ನಡೆಯುತ್ತಿರುವ ಲ್ಯಾಂಡ್ ಜಿಹಾದ್ ಎಂದು ಅವರು ಕಿಡಿಕಾರಿದರು.

ರಾಜ್ಯದಲ್ಲಿ ಬಾಂಬ್ ಸ್ಪೋಟವಾಗಿದೆ. ಪಾಕಿಸ್ತಾನಕ್ಕೆ ಜೈಕಾರ ಹಾಕಲಾಗಿದೆ. ಲವ್ ಜಿಹಾದ್‌ನಿಂದ ಹಿಂದೂ ಯುವತಿಯರು ಸಾಯುತ್ತಿದ್ದಾರೆ. ಈಗ ಲ್ಯಾಂಡ್ ಜಿಹಾದ್ ಆರಂಭವಾಗಿದೆ. ಕಳೆದ ತಿಂಗಳು ಜಿಲ್ಲೆಗೆ ಬಂದಿದ್ದ ಸಚಿವ ಜಮೀರ್ ಅಹ್ಮದ್‌, ಗೆಜೆಟ್ ಆಗಿರುವ ಆಸ್ತಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲು ಮೌಖಿಕ ಆದೇಶ ಮಾಡಿದ್ದಾರೆ. ಈ ಮೂಲಕ ಸರ್ಕಾರದಿಂದಲೇ ಅಧಿಕೃತವಾಗಿ ಒತ್ತುವರಿ ನಡೆಯುತ್ತಿದೆ.

ಈ ಹಿಂದೆ ಟಿಪ್ಪು ಸುಲ್ತಾನ್ ಔರಂಗಜೇಬನಂತಹ ಕೋಮು ಮತಾಂಧರು ಹಿಂದೂಗಳ ಭೂಮಿ, ಉದ್ಯೋಗ, ಬದುಕು ಕಿತ್ತುಕೊಂಡು ಮತಾಂತರ ಮಾಡಿದ್ದರು. ಈಗ ರೈತರ ಭೂಮಿ ಕಿತ್ತುಕೊಳ್ಳಲಾಗುತ್ತಿದೆ ಎಂದು ಅಶೋಕ್ ದೂರಿದರು.

ಸಚಿವ ಜಮೀರ್ ಅಹಮದ್‌, ಆಧುನಿಕ ಟಿಪ್ಪು ಸುಲ್ತಾನ್ ಆಗಲು ಹೊರಟಿದ್ದಾರೆ. ಒಂದು ಕಡೆ ಸಿದ್ದರಾಮಯ್ಯ ಮುಡಾ ನಿವೇಶನ ಲೂಟಿ ಮಾಡುತ್ತಾರೆ. ಮತ್ತೊಂದು ಕಡೆ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಸಿಎ ನಿವೇಶನ ಲೂಟಿ ಮಾಡುತ್ತದೆ. ಈಗ ಜಮೀರ್ ಅಹಮದ್ ಕೂಡ ಈ ಪಟ್ಟಿಗೆ ಸೇರಿ ಭೂಮಿ ಕೊಳ್ಳೆ ಹೊಡೆದು ವಕ್ಫ್‌ಗೆ ಸೇರಿಸಲು ತಂತ್ರ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ಉದ್ದೇಶಿತ ವಕ್ಫ್ ಕಾಯ್ದೆ ತಿದ್ದುಪಡಿ ಪ್ರಸ್ತಾವಕ್ಕೆ ರಾಜ್ಯ ವಕ್ಫ್ ಬೋರ್ಡ್ ವಿರೋಧ ವ್ಯಕ್ತಪಡಿಸಿದೆ. ವಕ್ಫ್ ಬೋರ್ಡ್ ಆಡಳಿತ ಮಂಡಳಿ ಸಭೆಯಲ್ಲಿ ತಿದ್ದುಪಡಿ ಕಾಯ್ದೆ ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಜಂಟಿ ಸಂಸದೀಯ ಸಮಿತಿ ರಚಿಸಿ, ಎಲ್ಲ ವಕ್ಫ್ ಬೋರ್ಡ್‌ಗಳಿಂದ ಮಾಹಿತಿ ಕೇಳಿದೆ. ಆದರೆ ಕರ್ನಾಟಕದ ವಕ್ಫ್ ಬೋರ್ಡ್ ಇದನ್ನು ವಿರೋಧಿಸಿದೆ. ನಾವು ಮಾಹಿತಿ ಕೊಡಲ್ಲ, ನಮ್ಮದು ಸ್ವಾಯತ್ತ ಸಂಸ್ಥೆ ಎಂದು ಸಚಿವ ಜಮೀರ್ ಅಹಮದ್ ಹೇಳಿದ್ದಾರೆ. ಹಳೆಯ ಎಲ್ಲ ನಿಯಮ, ಕಾನೂನುಗಳಿಗೆ ಮೋದಿ ಸರ್ಕಾರ ಬದಲಾವಣೆ ತರಲಿದೆ. ಇದಕ್ಕೂ ಮುನ್ನ ಆದಷ್ಟು ಕರ್ನಾಟಕದ ಭೂಮಿ‌ ಕಬಳಿಸಬೇಕು ಎಂಬುದು ಇವರ ಉದ್ದೇಶ ಎಂದು ಆರ್‌.ಅಶೋಕ ಟೀಕಿಸಿದರು.

ಕಾಂಗ್ರೆಸ್ ಸರ್ಕಾರ ಭೂಮಿ ಕಬಳಿಕೆ ಮಾಡಿಕೊಡುವ ಬದಲು, ಕೇಂದ್ರ ಸರ್ಕಾರದ ಜಂಟಿ ಸಲಹಾ ಸಮಿತಿ ಜೊತೆ ಚರ್ಚೆ ಮಾಡಲಿ. ಅದು ಬಿಟ್ಟು ಸ್ವತಂತ್ರವಾಗಿ ಕ್ರಮ ಕೈಗೊಳ್ಳುವ ಅಧಿಕಾರ ಯಾರಿಗೂ ಇಲ್ಲ. ವಿಜಯಪುರ ಜಿಲ್ಲೆಯಲ್ಲಿ ದೇವಸ್ಥಾನ, ಗುಡಿಗಳು ಕೂಡ ಇದೆ. ಅವೆಲ್ಲಕ್ಕೂ ಎಷ್ಟು ನೋಟಿಸ್ ನೀಡಲಾಗಿದೆ ಎಂಬುದನ್ನು ಸರ್ಕಾರ ತಿಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದಿಂದ ಲ್ಯಾಂಡ್‌ ಜಿಹಾದ್‌: ಸಿಎಂ ಸ್ಪಷ್ಟನೆಗೆ ಅಶೋಕ ಆಗ್ರಹ Read More

ಚನ್ನಪಟ್ಟಣ ಉಪ ಚುನಾವಣೆ:ಸಿ.ಪಿ.ವೈ ಹರಕೆ ಕುರಿ:ಅಶೋಕ್ ವ್ಯಂಗ್ಯ

ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಯೋಗೇಶ್ವರ್‌ ಹರಕೆ ಕುರಿಯಾಗಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ವ್ಯಂಗ್ಯವಾಡಿದರು.

ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಉಪಚುನಾವಣೆಗೆ ಬಿಜೆಪಿ, ಜೆಡಿಎಸ್‌ ಒಟ್ಟಾಗಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ, ಆದರೆ ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರ ಅಭಿಪ್ರಾಯ ಕೇಳದೆ ಸಿ.ಪಿ.ಯೋಗೇಶ್ವರ್‌ ಅವರನ್ನು ಆರಿಸಲಾಗಿದೆ,ಹಾಗಾಗಿ ಕಾಂಗ್ರೆಸ್‌ ಕಾರ್ಯಕರ್ತರು ರೆಬೆಲ್‌ ಆಗಿದ್ದಾರೆ, ಅದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಇದರ ಪರಿಣಾಮ ಕಾಂಗ್ರೆಸ್‌ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡಲಿದ್ದಾರೆ ಎಂದು ತಿಳಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣ, ಎಸ್‌ಸಿ, ಎಸ್‌ಟಿ ಸಮುದಾಯದ ಹಣ ದುರ್ಬಳಕೆಯಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಗಣಿ ಹಗರಣದಲ್ಲಿ ಶಾಸಕ ಸತೀಶ್‌ ಸೈಲ್‌ ತಪ್ಪಿತಸ್ಥರು ಎಂಬುದು ಸಾಬೀತಾಗಿ ಶಿಕ್ಷೆ ನೀಡಲಾಗಿದೆ. ಕಾಂಗ್ರೆಸ್‌ ಲೂಟಿಕೋರರ ಪಾರ್ಟಿ ಎಂಬುದು ಸಾಬೀತಾಗಿದೆ ಎಂದು ಟೀಕಿಸಿದರು.

ಗಣಿ ಹಗರಣ ನಡೆದಿದೆ ಎಂದು ಸಿದ್ದರಾಮಯ್ಯನವರು ಪಂಚೆ ಎತ್ತಿ ಕಟ್ಟಿ ಪಾದಯಾತ್ರೆ ಮಾಡಿ ನೃತ್ಯ ಮಾಡಿದ್ದರು. ಬಳಿಕ ಕಾಲು ನೋವಿಗೆ ಮಸಾಜ್‌ ಮಾಡಿಸಿಕೊಂಡಿದ್ದರು. ಈಗ ಅವರದ್ದೇ ಪಕ್ಷದ ಶಾಸಕ ಗಣಿಯಲ್ಲಿ ಲೂಟಿ ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಟೀಕಿಸಿದರು.

ನಿಖಿಲ್‌ ಕುಮಾರಸ್ವಾಮಿ ಅವರ ಬಗ್ಗೆ ಜನರಿಗೆ ಅನುಕಂಪವಿದೆ. ಸಿ.ಪಿ.ಯೋಗೇಶ್ವರ್‌ ಅವರಿಗೆ ಟಿಕೆಟ್‌ ನೀಡಲು ನಾವೆಲ್ಲರೂ ಪ್ರಯತ್ನ ಮಾಡಿದ್ದೆವು. ಆದರೂ ಅವರು ಪಕ್ಷ ಬಿಟ್ಟು ಕಾಂಗ್ರೆಸ್‌ ಸೇರಿದ್ದಾರೆ. ಬಿಜೆಪಿಯಲ್ಲಿ ಹಿರಿಯ ನಾಯಕರಾಗಿದ್ದವರು ಈಗ ಕಾಂಗ್ರೆಸ್‌ನಲ್ಲಿ ಮೂರನೇ ಸಾಲಿನಲ್ಲಿ ಕುಳಿತಿದ್ದಾರೆ. ಕಾಂಗ್ರೆಸ್‌ ನಾಯಕರು ಅವರನ್ನು ಹರಕೆ ಕುರಿ ಮಾಡಿ ಮುಗಿಸಲಿದ್ದಾರೆ ಎಂದು ಅಶೋಕ್‌ ಭವಿಷ್ಯ ನುಡಿದರು.

ಚನ್ನಪಟ್ಟಣ ಉಪ ಚುನಾವಣೆ:ಸಿ.ಪಿ.ವೈ ಹರಕೆ ಕುರಿ:ಅಶೋಕ್ ವ್ಯಂಗ್ಯ Read More

ಸುರಕ್ಷಿತ ರೆಗ್ಯುಲರ್‌ ಬೆಂಗಳೂರು ನೀಡಿದರೆ ಸಾಕು:ಅಶೋಕ್

ಬೆಂಗಳೂರು: ಸರ್ಕಾರ ಬ್ರ್ಯಾಂಡ್‌ ಬೆಂಗಳೂರು ನೀಡುವುದು ಬೇಡ, ಸುರಕ್ಷಿತವಾದ ರೆಗ್ಯುಲರ್‌ ಬೆಂಗಳೂರು ನೀಡಿದರೆ ಸಾಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಬಾಬುಸಾಪಾಳ್ಯದಲ್ಲಿ ಕಟ್ಟಡ ಕುಸಿದ ಸ್ಥಳಕ್ಕೆ ಭೇಟಿ ನೀಡಿದ ಅವರು, ಸಂತ್ರಸ್ತರು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಕಾಂಗ್ರೆಸ್‌ ಸರ್ಕಾರ ಬಂದ ನಂತರ ಬ್ರ್ಯಾಂಡ್‌ ಬೆಂಗಳೂರು ಎಂಬ ಹೆಸರು ಹುಟ್ಟುಹಾಕಿದ್ದಾರೆ. ಆದರೆ ನಗರದಲ್ಲಿ ದಿನಕ್ಕೊಂದು ಅವಘಡ ಸಂಭವಿಸುತ್ತಿದೆ. ಬಾಬುಸಾಪಾಳ್ಯದಲ್ಲಿ ಕಟ್ಟಡ ಕುಸಿತದು ಎಂಟು ಅಮಾಯಕರು ಮೃತ‌ ಪಟ್ಟಿದ್ದಾರೆ. ಇಲ್ಲಿನ 20 ಅಡಿ ರಸ್ತೆಗೆ ಹೆಚ್ಚೆಂದರೆ 3 ಮಹಡಿ ನಿರ್ಮಿಸಬಹುದು. ಆದರೆ 7 ಮಹಡಿ ನಿರ್ಮಿಸಲು ಹೊರಟಿದ್ದರಿಂದ ಅವಘಡ ನಡೆದಿದೆ. ಬಿಬಿಎಂಪಿ ಅಧಿಕಾರಿಗಳು ಇದನ್ನು ಸರಿಯಾಗಿ ನಿರ್ವಹಣೆ ಮಾಡಿದ್ದರೆ ಎಲ್ಲವೂ ಸರಿ ಇರುತ್ತಿತ್ತು ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರ ಇಂತಹ ಯಾವುದೇ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೆಲ ತಿಂಗಳ ಹಿಂದೆ ವಿದ್ಯುತ್‌ ತಂತಿ ತಗುಲಿ ತಾಯಿ ಮತ್ತು ಮಗು ಮೃತಪಟ್ಟಾಗ ಅದಕ್ಕೆ ಇಲಿ ಕಾರಣ ಎಂದು ಹೇಳಿದ್ದರು. ಮಳೆ ನೀರಿನಲ್ಲಿ ಮಗು ಕೊಚ್ಚಿಕೊಂಡು ಹೋಗಿರುವುದು, ಮರ ಬೀಳುವುದರಿಂದ ಅನಾಹುತ ಮೊದಲಾದವು ಬ್ರ್ಯಾಂಡ್‌ ಬೆಂಗಳೂರಿನ ಮಹಿಮೆಯಿಂದ ಆಗುತ್ತಿದೆ ಎಂದು ಅಶೋಕ್ ಟೀಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರುವ ರಸ್ತೆಯ ಎರಡೂ ಬದಿ ಕಸದ ರಾಶಿ ಬಿದ್ದಿದೆ, ಅಂದರೆ ಉಪ ಮುಖ್ಯಮಂತ್ರಿಯಾಗಲೀ, ಮುಖ್ಯಮಂತ್ರಿಯಾಗಲಿ, ಇಲ್ಲಿ ಯಾರಿಗೂ ಬೆಲೆ ಇಲ್ಲ.

ಒಂದು ವಾರದಿಂದ ಸರಿಯಾಗಿ ಕಸ ವಿಲೇವಾರಿ ಮಾಡಿಲ್ಲ. ವಿದ್ಯುತ್‌ ಕಂಬಗಳಿಂದ ಇನ್ನೆಷ್ಟು ಜನ ಸಾಯುತ್ತಾರೊ ಗೊತ್ತಿಲ್ಲ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕೆಂದು ತಿಳಿಸಿದರು.

ಪೌರಕಾರ್ಮಿಕರ ಮನೆಗಳಿಗೂ ನೀರು ನುಗ್ಗಿದೆ. ಜನರು ಮನೆಗಳಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ರಾಜಧಾನಿ ಬೆಂಗಳೂರನ್ನು ರಾಜ್ಯ ಸರ್ಕಾರ ಸಂಪೂರ್ಣ ಕಡೆಗಣಿಸಿದೆ. ಸರ್ಕಾರ ಗಾಢ ನಿದ್ದೆಯಲ್ಲಿದೆ, ಮೃತಪಟ್ಟವರ ಕುಟುಂಬದ ಶಾಪ ತಟ್ಟಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಟ್ಟಡ ನಿರ್ಮಾಣದ ವಿಚಾರದಲ್ಲಿ ಸರ್ಕಾರ ಮಾರ್ಗಸೂಚಿ ರೂಪಿಸಬೇಕು,ಕಟ್ಟಡಗಳ ಬಗ್ಗೆ ಸದಾ ನಿಗಾ ಇರಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಪರಿಹಾರ ಕಾರ್ಯಾಚರಣೆಗೆ, ರಾಜಕಾಲುವೆ ಹೂಳು ತೆಗೆಯಲು ಹಣ ಬಿಡುಗಡೆ ಮಾಡಿಲ್ಲ, ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಸುರಕ್ಷಿತ ರೆಗ್ಯುಲರ್‌ ಬೆಂಗಳೂರು ನೀಡಿದರೆ ಸಾಕು:ಅಶೋಕ್ Read More