ಯಮುನಾ ನದಿಗೆ ಕಳಂಕ ತಂದಿದ್ದೇ ಆಪ್‌ ಸೋಲಿಗೆ ಕಾರಣ: ಅಶೋಕ್

ಬೆಂಗಳೂರು: ಸಾವಿರಾರು ವರ್ಷ ಇತಿಹಾಸ ಹೊಂದಿರುವ ಯುಮುನಾ ನದಿ ಮೇಲೆ
ಅರವಿಂದ್‌ ಕೇಜ್ರಿವಾಲ್‌ ಕಳಂಕ ಹಾಕಿದ್ದೇ ಆಪ್ ಸೋಲಿಗೆ ಕಾರಣ ಎಂದು ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್‌,ಕೇಜರಿವಾಲ್ ಅವರು ಜೈಲಿನಲ್ಲಿದ್ದುಕೊಂಡು 2 ತಿಂಗಳು ಆಡಳಿತ ಸ್ಥಗಿತಗೊಳಿಸಿದ್ದರು, ಯುಮುನಾ ನದಿ ಮೇಲೆ ಕಳಂಕ ಹಾಕಿದರು,ಇದರ ಶಾಪ ತಟ್ಟಿದೆ,ಹಾಗಾಗಿ ಬಿಜೆಪಿಗೆ ಗೆಲುವಾಗಿದೆ ಎಂದು ತಿಳಿಸಿದರು.

ಅವರ ಐಶಾರಾಮಿ ಆಡಳಿತ ನೋಡಿ ಜನ ಬೇಸತ್ತಿದ್ದಾರೆ, ಯಮುನಾ ನದಿ ಒಂದು ದಿನಕ್ಕೆ ಮಲಿನ ಆಗಿಲ್ಲ. ದೆಹಲಿ ಜನ ಪ್ರತಿದಿನ ಕುಡಿಯುತ್ತಿದ್ದ, ಗಂಗೆ ಅಂತ ಪೂಜೆ ಮಾಡುವ ನೀರಿನ ಮೇಲೆಯೇ ಕಳಂಕ ತಂದರು. ಸ್ವಚ್ಛತೆ ಮಾಡುವ ಕೆಲಸ ನದಿಯದ್ದಲ್ಲ. ಕೇಜ್ರಿವಾಲ್‌ ಸರಿಯಾಗಿ ನಿರ್ವಹಣೆ ಮಾಡದೇ ನದಿ ಮೇಲೆ ಆಪಾದನೆ ಮಾಡಿದರು. ಇದೇ ಅವರ ಸೋಲಿಗೆ ಕಾರಣ ಎಂದು ತಿಳಿಸಿದರು.

ಸಿಎಂ ಜೈಲಿಗೆ ಹೋದಾಗ ರಾಜೀನಾಮೆ ಕೊಟ್ಟು ಅವರದ್ದೇ ಪಕ್ಷದ ಮತ್ತೊಬ್ಬರಿಗೆ ಆಡಳಿತ ನಡೆಸಲು ಅವಕಾಶ ಮಾಡಿಕೊಡಬೇಕಿತ್ತು. ಆದರೆ ಕೇಜರಿವಾಲ್ 2 ತಿಂಗಳು ಜೈಲಿನಲ್ಲಿದ್ದುಕೊಂಡು ಆಡಳಿತ ಸ್ಥಗಿತಗೊಳಿಸಿದ್ರು, ಅದರ ಶಾಪ ತಟ್ಟಿದೆ, ಜೊತೆಗೆ ಕಾಂಗ್ರೆಸ್‌ ನೇತೃತ್ವದ ಇಂಡಿ ಒಕ್ಕೂಟವೇ ಕೇಜ್ರಿವಾಲ್‌ ದೊಡ್ಡ ಕಳ್ಳ, ಭ್ರಷ್ಟಾಚಾರಿ ಎಂದು ಹೇಳಿದಾಗ ಜನರಿಗೆ ಅರ್ಥವಾಗಿದೆ, ಜೊತೆಗೆ ಪ್ರಧಾನಿ ಮೋದಿ ಅವರ ಆಡಳಿತ ವೈಖರಿ ಬಿಜೆಪಿ ಗೆಲುವಿಗೆ ಕಾರಣ ಎಂದು ಅಶೋಕ್‌ ಹೇಳಿದರು.

ಮೋದಿ ಜನಕ್ಕೋಸ್ಕರ ಕೆಲಸ ಮಾಡಿದರೆ ಸೋನಿಯಾ, ರಾಹುಲ್‌, ಪ್ರಿಯಾಂಕ ತಮ್ಮ ಕುಟುಂಬಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಾಗಿದೆ ಆದ್ದರಿಂದಲೇ ಜನ ಮೋದಿ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ದೆಹಲಿಯಲ್ಲಿ ಅಧಿಕಾರ ಕೊಟ್ಟಿದ್ದಾರೆ ಅದಕ್ಕಾಗಿ ದೆಹಲಿ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅಶೋಕ್ ತಿಳಿಸಿದರು.

ಯಮುನಾ ನದಿಗೆ ಕಳಂಕ ತಂದಿದ್ದೇ ಆಪ್‌ ಸೋಲಿಗೆ ಕಾರಣ: ಅಶೋಕ್ Read More

ಕರ್ನಾಟಕವನ್ನು ದಿವಾಳಿ ಮಾಡುವುದೇ ರಾಜ್ಯ ಸರ್ಕಾರದ ಅಜೆಂಡಾ:ಅಶೋಕ್

ಬೆಂಗಳೂರು:

ಕರ್ನಾಟಕವನ್ನು ಸಂಪೂರ್ಣ ದಿವಾಳಿ ಮಾಡಬೇಕೆಂಬುದೇ ಕಾಂಗ್ರೆಸ್ ಸರ್ಕಾರದ ಒನ್‌ ಲೈನ್‌ ಅಜೆಂಡಾ‌‌ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಸಾಲ ಮಾಡುವುದನ್ನೇ ಫುಲ್‌ ಟೈಂ ಕಾಯಕವನ್ನಾಗಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು, ಪ್ರಸ್ತುತ ಕರ್ನಾಟಕದ ಒಟ್ಟು ಸಾಲವನ್ನು 6 ಲಕ್ಷ 65 ಸಾವಿರ ಕೋಟಿಗೆ ಮುಟ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರತಿ ಕನ್ನಡಿಗನ ಮೇಲೆ ಬರೋಬ್ಬರಿ 1 ಲಕ್ಷ ರೂಪಾಯಿ ಸಾಲದ ಹೊರೆಯನ್ನು ಭ್ರಷ್ಟ ಕಾಂಗ್ರೆಸ್‌ ಸರ್ಕಾರ ಹೊರೆಸಿದೆ ಎಂದು ಟ್ವೀಟ್ ಮಾಡಿ ಆಕ್ರೋಶ‌ ವ್ಯಕ್ತಪಡಿಸಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ನಾವೀನ್ಯತೆಯ ಸೂಚ್ಯಂಕದಲ್ಲಿ, ಬಂಡವಾಳ ಹೂಡಿಕೆಯಲ್ಲಿ ನಂಬರ್‌ 1 ಆಗಿತ್ತು, ಆದರೆ ಈ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಅತಿ ಹೆಚ್ಚು ಸಾಲ ಮಾಡುವ ರಾಜ್ಯಗಳಲ್ಲಿ ನಂಬರ್‌ 1 ಆಗುತ್ತಿರುವುದು ಅತ್ಯಂತ ನಾಚಿಕೆಗೇಡು ಎಂದು ಜರಿದಿದ್ದಾರೆ.

ಹಿಂದಿನ ಅವಧಿಯಲ್ಲಿ ಕೇಂದ್ರದ ಎನ್ ಡಿ ಎ ಸರ್ಕಾರ‌ ಕೃಷಿ ಕಾಯ್ದೆ‌ಗಳ ತಿದ್ದುಪಡಿಗೆ ಮುಂದಾದಾಗ ಅದನ್ನ ವಿರೋಧಿಸಿ, ಬೀದಿ ರಂಪಾಟ ಮಾಡಿದ್ದ ಕಾಂಗ್ರೆಸ್ ಪಕ್ಷ, ಈಗ ಅದೇ ಮೂರು ಕೃಷಿ ಕಾಯ್ದೆಗಳ ಅನ್ವಯ ರೈತರ ಆದಾಯ ಹೆಚ್ಚಿಸಲು ಶಿಫಾರಸು ನೀಡಿ ಎಂದು ಕೃಷಿ ಬೆಲೆ ಆಯೋಗಕ್ಕೆ ಸಿದ್ದರಾಮಯ್ಯ ಸರ್ಕಾರ ಸೂಚನೆ ನೀಡಿದೆ.

ತನ್ನ ರಾಜಕೀಯ ಲಾಭಕ್ಕಾಗಿ ಅನ್ನದಾತರ ಹಿತಾಸಕ್ತಿಯನ್ನು ಬಲಿಕೊಟ್ಟು, ಪಟ್ಟಭದ್ರ ಹಿತಾಸಕ್ತಿಗಳ ಜೊತೆ ಕೈಜೋಡಿಸಿದ್ದ ಕಾಂಗ್ರೆಸ್ ಪಕ್ಷದ ಅಸಲಿ ಬಣ್ಣ ಈಗ ಬಯಲಾಗಿದೆ ಎಂದು ಅಶೋಕ್ ವ್ಯಂಗ್ಯ ವಾಡಿದ್ದಾರೆ.

ಕರ್ನಾಟಕವನ್ನು ದಿವಾಳಿ ಮಾಡುವುದೇ ರಾಜ್ಯ ಸರ್ಕಾರದ ಅಜೆಂಡಾ:ಅಶೋಕ್ Read More

ರಾಜ್ಯ ಸರ್ಕಾರದ ವಿರುದ್ಧ ಅಶೋಕ್ ಟೀಕಾಪ್ರಹಾರ

ಬೆಂಗಳೂರು: ಫ್ರೀಡಂ ಪಾರ್ಕ್ ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ ಕಾರ್ಯರ್ತೆಯರ ಟೆಂಟ್ ಕಿತ್ತುಹಾಕಿಸಿ ಬಲವಂತವಾಗಿ ಪ್ರತಿಭಟನೆ ಅಂತ್ಯಗೊಳಿಸುವ ಮೂಲಕ ಸರ್ಕಾರ ಹಿಟ್ಲರ್ ಧೋರಣೆ ತೋರಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ, ಚುನಾವಣೆ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಟ್ಟ ಆಶ್ವಾಸನೆ ಈಡೇರಿಸುವುದಕ್ಕಂತೂ ನಿಮ್ಮ ಸರ್ಕಾರಕ್ಕೆ ಯೋಗ್ಯತೆ ಇಲ್ಲ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೆಯುವ ಚಳಿಯನ್ನೂ ಲೆಕ್ಕಿಸದೆ ನಾಲ್ಕು ದಿನದಿಂದ ಅಹೋರಾತ್ರಿ ಪ್ರತಿಭಟನೆ ಮಾಡುತ್ತಿರುವ ಮಹಿಳೆಯರ ಬಳಿ ಹೋಗಿ ಕನಿಷ್ಠ ಪಕ್ಷ ಅವರನ್ನ ಸಮಾಧಾನ ಪಡಿಸುವ ಸೌಜನ್ಯವೂ ನಿಮ್ಮ ಸರ್ಕಾರಕ್ಕೆ ಇಲ್ಲ,
ಈಗ ಅವರ ಶಾಂತಿಯುತ ಪ್ರತಿಭಟನೆಗೂ ಅಡ್ಡಿಪಡಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

ತಮ್ಮ ನಾಯಕ ರಾಹುಲ್ ಗಾಂಧಿ ಅವರು ಹೋಗಿ ಬಂದಲ್ಲೆಲ್ಲ ತೋರಿಸುವ ಸಂವಿಧಾನದ ಪುಸ್ತಕದಲ್ಲಿ ಸಾಮಾನ್ಯ ನಾಗರಿಕರಿಗೆ ಪ್ರತಿಭಟನೆ ಮಾಡುವ ಹಕ್ಕಿಲ್ಲವೆ ಅಥವಾ ನಮ್ಮ ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಏನಾದರೂ ಇದೆಯಾ ಎಂದು ಕಾರವಾಗಿ ಕಿಡಿಕಾರಿದ್ದಾರೆ.

ನಿಮ್ಮ ಈ ಹಿಟ್ಲರ್ ಧೋರಣೆ ಜಾಸ್ತಿ ದಿನ ನಡೆಯುವುದಿಲ್ಲ ನಿಮ್ಮ ಕಾಂಗ್ರೆಸ್ ಸರ್ಕಾರದ ವಿರುದ್ಧ ಕನ್ನಡಿಗರು ತಿರುಗಿ ಬೀಳುವ ದಿನ ಬಹಳ ದೂರವಿಲ್ಲ ಎಂದು ಅಶೋಕ್ ಎಚ್ಚರಿಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಅಶೋಕ್ ಟೀಕಾಪ್ರಹಾರ Read More

ಲೋಕಾಯುಕ್ತ ಪೊಲೀಸರಿಂದ ಮುಡಾ ಹಗರಣ ಮುಚ್ಚಿಹಾಕುವ ಪ್ರಯತ್ನ: ಅಶೋಕ

ಬೆಂಗಳೂರು: ಮುಡಾ ಹಗರಣದಲ್ಲಿ ಇ ಡಿ ಆಸ್ತಿಗಳನ್ನು ವಶಪಡಿಸಿಕೊಂಡಿದ್ದರೂ, ಯಾವುದೇ ಕ್ರಮ ಕೈಗೊಳ್ಳದೆ ಈ ಪ್ರಕರಣ ಮುಚ್ಚಿಹಾಕಲು ಲೋಕಾಯುಕ್ತ ಪೊಲೀಸರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದ ಮುಡಾ ಹಗರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ವಿರುದ್ಧ ಬಿಜೆಪಿ ತೀವ್ರ ಹೋರಾಟ ಮಾಡಿದೆ. ಮುಡಾ ಹಗರಣದಲ್ಲಿ 4-5 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ. ಸಿಎಂ ಸಿದ್ದರಾಮಯ್ಯ14 ಸೈಟು ವಾಪಸ್‌ ನೀಡಿರುವುದರಿಂದ ತಪ್ಪಾಗಿದೆ ಎಂಬುದು ಸಾಬೀತಾಗಿದೆ,ಜಾರಿ ನಿರ್ದೇಶನಾಲಯ ಆಸ್ತಿಗಳನ್ನು ವಶಕ್ಕೆ ಪಡೆದಿದ್ದರೂ, ಲೋಕಾಯುಕ್ತ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಇದರಲ್ಲಿ ಅಧಿಕಾರಿಗಳ ತಪ್ಪು ಎನ್ನಲಾಗುತ್ತಿದೆ ಆದರೆ ಇದರ ಹಿಂದೆ ಸಿಎಂ ಸಿದ್ದರಾಮಯ್ಯ ಇರುವುದನ್ನು ಮುಚ್ಚಿಹಾಕಲಾಗುತ್ತಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ಹೇಳಿದರು.

ಲೋಕಾಯುಕ್ತ ಪೊಲೀಸರು ರಾಜ್ಯ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಾರೆ. ಪೊಲೀಸರಿಗೂ ವರ್ಗಾವಣೆ, ಬಡ್ತಿ ಬೇಕಿರುತ್ತದೆ. ಆದ್ದರಿಂದ ಈ ರೀತಿ ತನಿಖೆ ನಡೆಯುತ್ತಿದೆ, ಪೊಲೀಸರು ವರದಿ ನೀಡಿದರೂ ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್‌ ಚಿಟ್‌ ನೀಡುವುದು ಖಚಿತ ಎಂದು ಅಶೋಕ್ ತಿಳಿಸಿದರು.

ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಮಾತ್ರ ನಿಜಾಂಶ ಹೊರಬರಲಿದೆ. ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಎಸ್‌ಐಟಿ ಕ್ಲೀನ್‌ ಚಿಟ್‌ ನೀಡಿರುವಾಗ ಮುಖ್ಯಮಂತ್ರಿಗೆ ಕ್ಲೀನ್‌ ಚಿಟ್‌ ನೀಡುವುದು ಖಚಿತ. ಆದ್ದರಿಂದ ಹೋರಾಟವನ್ನು ಮತ್ತೆ ಆರಂಭಿಸುತ್ತೇವೆ. ತನಿಖೆಯನ್ನು ಸಿಬಿಐಗೆ ವಹಿಸುವವರೆಗೂ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಪಕ್ಷದಲ್ಲಿ ಗೊಂದಲ ಇರುವುದು ನಿಜ, ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು, ಶ್ರೀರಾಮುಲು ಅವರೊಂದಿಗೆ ನಾನು ಹಾಗೂ ಬಸವರಾಜ ಬೊಮ್ಮಾಯಿ ಚರ್ಚಿಸಲಿದ್ದೇವೆ. ನಮ್ಮಲ್ಲಿ ಯಾವುದೇ ಟೀಮ್‌ ಇಲ್ಲ, ನಾನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಯಾವುದೇ ದೂರು ನೀಡಿಲ್ಲ ಎಂದು ಅಶೋಕ್ ಸ್ಪಷ್ಟಪಡಿಸಿದರು.

ಲೋಕಾಯುಕ್ತ ಪೊಲೀಸರಿಂದ ಮುಡಾ ಹಗರಣ ಮುಚ್ಚಿಹಾಕುವ ಪ್ರಯತ್ನ: ಅಶೋಕ Read More

ಕಾಂಗ್ರೆಸ್ ನಲ್ಲಿ ಬಣ ಬಡಿದಾಟ:ಜನರಿಗೆ ಸರ್ಕಾರದ ನೆರವು ಮರೀಚಿಕೆ- ಅಶೋಕ್

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಕುರ್ಚಿಗಾಗಿ ಕಾದಾಟ ನಡೆಯುತ್ತಿರುವುದರಿಂದ ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆಯಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಕಿಡಿಕಾರಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕಡೆ ಸಚಿವರಾದ ಜಾರಕಿಹೊಳಿ-ಲಕ್ಷ್ಮಿ ಹೆಬ್ಬಾಳಕರ್‌ ನಡುವೆ ಕಲಹವಿದ್ದರೆ, ಮತ್ತೊಂದೆಡೆ ಡಿಸಿಎಂ ಡಿ.ಕೆ.ಶಿವಕುಮಾರ್‌-ಸಚಿವ ಜಾರಕಿಹೊಳಿ ನಡುವೆ ಕಲಹವಿದೆ. ಎರಡೂವರೆ ವರ್ಷಕ್ಕೆ ಅಧಿಕಾರ ಹಸ್ತಾಂತರವಾಗಬೇಕೆಂದು ಒಪ್ಪಂದವಾದರೂ ಸಿಎಂ ಸಿದ್ದರಾಮಯ್ಯ ಅವರಿಗೆ ಅಧಿಕಾರ ಹಸ್ತಾಂತರಿಸಲು ಮನಸ್ಸಿಲ್ಲ,ಅದಕ್ಕಾಗಿ ಸಚಿವರನ್ನು ಛೂ ಬಿಟ್ಟಿದ್ದು, ಡಿ.ಕೆ.ಶಿವಕುಮಾರ್‌ ಒಬ್ಬಂಟಿಯಾಗಿದ್ದಾರೆ,ಹಾಗಾಗಿ ಅವರು ಹೈಕಮಾಂಡ್‌ ಪಾದದ ಬಳಿ ಕೂತಿದ್ದಾರೆ ಎಂದು ವ್ಯಂಗ್ಯ ವಾಡಿದರು.

ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಡಲು ಸಿದ್ಧರಿಲ್ಲ.ಎಲ್ಲರೂ ಕುರ್ಚಿಗಾಗಿ ಕಾದಾಡುತ್ತಿದ್ದಾರೆ. ಇದೆಲ್ಲದರಿಂದಾಗಿ ಯಾರೂ ಜನರ ಪರವಾಗಿ ಮಾತಾಡುತ್ತಿಲ್ಲ. ಗುತ್ತಿಗೆದಾರರು ದಯಾಮರಣಕ್ಕೆ ಕೋರಿದ್ದರೆ, ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವಾಗುತ್ತಿದೆ, ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆಯಾಗಿದೆ ಎಂದು ಗುಡುಗಿದರು.

ಆರ್‌ಎಸ್‌ಎಸ್‌ ಸರಸಂಘಚಾಲಕರಾದ ಮೋಹನ್‌ ಭಾಗವತ್‌ ಅವರ ಬಗ್ಗೆ ಕಾಂಗ್ರೆಸ್‌ ನಾಯಕರು ಟೀಕೆ ಮಾಡುತ್ತಿದ್ದಾರೆ. ರಾಮ ಮಂದಿರ ನಿರ್ಮಾಣದ ಹೋರಾಟದಲ್ಲಿ ನಾನು ಕೂಡ ಭಾಗವಹಿಸಿದ್ದೆ. ಮಂದಿರ ನಿರ್ಮಾಣ ಎಂದರೆ ಮತ್ತೊಂದು ಸ್ವಾತಂತ್ರ್ಯ ಹೋರಾಟ. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಯಾವ ಸ್ವಾತಂತ್ರ್ಯ ಹೋರಾಟ ಮಾಡಿದ್ದಾರೆ, ಇಂದಿರಾಗಾಂಧಿ ತಂದ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟವೇ ಒಂದು ಸ್ವಾತಂತ್ರ್ಯ ಸಂಗ್ರಾಮ. ಆ ಸಂಗ್ರಾಮದಲ್ಲಿ ಜನಸಂಘದ ನಾಯಕರು ಭಾಗವಹಿಸಿದ್ದರು. ಕಾಂಗ್ರೆಸ್‌ನವರು ಯಾವ ಹೋರಾಟ ಮಾಡಿದ್ದಾರೆ ಎಂದು ತಿಳಿಸಲಿ ಎಂದು ಅಶೋಕ್ ಒತ್ತಾಯಿಸಿದರು.

ಕೇಂದ್ರ ಸರ್ಕಾರ ಜನಗಣತಿ ನಡೆಸುತ್ತಿರುವಾಗ ಕಾಂಗ್ರೆಸ್‌ ಸರ್ಕಾರ ಜಾತಿ ಗಣತಿ ವರದಿಯ ಬಗ್ಗೆ ಮಾತಾಡುತ್ತಿದೆ. ಜಾತಿ ಗಣತಿ ವರದಿಯನ್ನು ಬೀದಿಬೀದಿಯಲ್ಲಿ ಜನರು ನೋಡಿದ್ದಾರೆ. ಅದು ಈಗಾಗಲೇ ಬಹಿರಂಗವಾಗಿದೆ. ಸಿಎಂ ಸಿದ್ದರಾಮಯ್ಯ ಹೇಳಿ ಬರೆಸಿರುವ ವರದಿ ಇದಾಗಿದ್ದು, ಯಾವುದೇ ರಹಸ್ಯ ಉಳಿದಿಲ್ಲ.ಎಲ್ಲರೂ ಒಪ್ಪುವಂತೆ ಜಾತಿ ಗಣತಿ ವರದಿ ತಯಾರಿಸಬೇಕು,ಒಕ್ಕಲಿಗರು ಹಾಗೂ ಲಿಂಗಾಯತರ ಸಂಖ್ಯೆ ಜಾಸ್ತಿ ಬರಬಾರದೆಂಬ ಕಾರಣಕ್ಕೆ ಬೇಕೆಂದೇ ಮನಬಂದಂತೆ‌‌ ವರದಿ ತಾಯಾರಾಗಿದೆ ಎಂದು ದೂರಿದರು.

ಕಾಂಗ್ರೆಸ್ ನಲ್ಲಿ ಬಣ ಬಡಿದಾಟ:ಜನರಿಗೆ ಸರ್ಕಾರದ ನೆರವು ಮರೀಚಿಕೆ- ಅಶೋಕ್ Read More

ಭತ್ತ, ತೊಗರಿ ಖರೀದಿ ಕೇಂದ್ರ ತೆರೆಯದಿದ್ದರೆ ರೈತ ಸಂಪರ್ಕ ಕೇಂದ್ರಗಳಿಗೆ ಬೀಗ: ಅಶೋಕ

ಬೆಂಗಳೂರು: ಕೂಡಲೇ ಭತ್ತ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ನೆರವಾಗಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಒತ್ತಾಯಿಸಿದ್ದಾರೆ.

ಸರ್ಕಾರ ತಕ್ಷಣ ಇದ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ರೈತ ಸಂಪರ್ಕ ಕೇಂದ್ರಗಳಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಅಶೋಕ್ ಎಚ್ಚರಿಸಿದ್ದಾರೆ.

ಈ ಕುರಿತು ಅವರು ಮಾಧ್ಯಮ ಹೇಳಿಕೆ ಬಿಡುಗಡೆಗೊಳಿಸಿದ್ದು,ಭತ್ತ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಹಲವಾರು ಬಾರಿ ಒತ್ತಾಯ ಮಾಡಿದ್ದರೂ ಅತ್ತ ಗಮನ ಹರಿಸದ ಕಾಂಗ್ರೆಸ್ ಸರ್ಕಾರ ರೈತರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಹೇಳಿದ್ದಾರೆ.

ಇನ್ನು 24 ಗಂಟೆಯೊಳಗೆ ಭತ್ತ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ತೆರೆದು, ಖರೀದಿ ಆರಂಭಿಸದಿದ್ದರೆ ರೈತ ಸಂಪರ್ಕ ಕೇಂದ್ರಗಳಿಗೆ ಬೀಗ ಜಡಿದು ಪ್ರತಿಭಟನೆ ಮಾಡುತ್ತೇವೆ ಎಂದು ಅವರು ಎಚ್ಚರಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿನ್ನರ್ ಸಭೆಗಳು, ಔತಣಕೂಟಗಳು, ರಾಜಕೀಯ ಮೇಲಾಟಗಳಲ್ಲೇ ನಿರತರಾಗಿದ್ದಾರೆ. ಈ ಕೆಲಸಗಳು ಮುಗಿದಿದ್ದರೆ ಸ್ವಲ್ಪ ರೈತರ ಸಮಸ್ಯೆಗಳತ್ತ ಗಮನ ಹರಿಸುವ ದೊಡ್ಡ ಮನಸ್ಸು ಮಾಡಬೇಕು,ತಮಗೆ ಬಿಡುವು ಇಲ್ಲದಿದ್ದರೆ ಕನಿಷ್ಠ ಪಕ್ಷ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಅವರು ಕೃಷಿ ಸಚಿವರು ಎಂಬುದನ್ನು ನೆನಪು ಮಾಡಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಈ ದರಿದ್ರ ಸರ್ಕಾರದಲ್ಲಿ ಒಬ್ಬರು ಕುರ್ಚಿ ಉಳಿಸಿಕೊಳ್ಳಲು ತಂತ್ರ ಹೆಣೆಯುತ್ತಿದ್ದರೆ, ಇನ್ನೊಬ್ಬರು ಕುರ್ಚಿ ಕಿತ್ತುಕೊಳ್ಳಲು ಕತ್ತಿ ಮಸೆಯುತ್ತಿದ್ದಾರೆ. ಇವರಿಬ್ಬರ ನಡುವೆ ಅತಂತ್ರವಾಗಿರುವ ಸಚಿವರು ಅವರವರ ಅಸ್ತಿತ್ವ ಉಳಿಸಿಕೊಳ್ಳಲು ಡಿನ್ನರ್ ಮೀಟಿಂಗ್, ಸೀಕ್ರೆಟ್ ಸಭೆ ಮಾಡಿ ಕಾಲಹರಣ ಮಾಡುತ್ತಿದ್ದಾರೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ರೈತರು ಕಷ್ಟ ಪಡುವಂತಾಗಿದೆ ಎಂದು ಆರ್.ಅಶೋಕ ಬೇಸರ ಪಟ್ಟಿದ್ದಾರೆ.

ಮಂಡ್ಯದಲ್ಲಿ ಭತ್ತ ಖರೀದಿ ಕೇಂದ್ರಗಳು ಆರಂಭವಾಗದೆ, ರೈತರು ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ದಲ್ಲಾಳಿಗಳಿಗೆ ಭತ್ತ ಮಾರಾಟ ಮಾಡುವ ಅನಿವಾರ್ಯ ಎದುರಾಗಿದೆ. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ತವರು ಜಿಲ್ಲೆಯಲ್ಲೇ ಈ ಗತಿಯಾದರೆ, ಇನ್ನು ಬೇರೆ ಜಿಲ್ಲೆಗಳ ಗತಿ ಕೇಳುವಂತೆಯೇ ಇಲ್ಲ ಎಂದು ಅಶೋಕ್ ಹೇಳಿದ್ದಾರೆ.

ಭತ್ತ, ತೊಗರಿ ಖರೀದಿ ಕೇಂದ್ರ ತೆರೆಯದಿದ್ದರೆ ರೈತ ಸಂಪರ್ಕ ಕೇಂದ್ರಗಳಿಗೆ ಬೀಗ: ಅಶೋಕ Read More

ಬಸ್ ದರ ಏರಿಕೆ;ಜನ ಸಾಮಾನ್ಯರ ಸುಲಿಗೆ- ಅಶೋಕ್ ಟೀಕೆ

ಬೆಂಗಳೂರು: ಅಧಿಕಾರಕ್ಕೆ ಬಂದ ದಿನದಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳ ಹೀಗೆ ಒಂದಲ್ಲ ಒಂದು ರೀತಿ ಜನ ಸಾಮಾನ್ಯರ ಸುಲಿಗೆ ಮಾಡುತ್ತಿರುವ ರಾಜ್ಯ ಸರ್ಕಾರ ಈಗ ಬಸ್ ದರ ಶೇ. 15 ರಷ್ಟು ಏರಿಕೆ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಅಶೋಕ್ ಟೀಕಾಪ್ರಹಾರ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ನವರೇ, ದಿನಬೆಳಗಾದರೆ ಒಂದಲ್ಲ ಒಂದು ಬೆಲೆ ಏರಿಕೆ ಮಾಡಿ ಕನ್ನಡಿಗರ ರಕ್ತ ಹೀರುತ್ತಿದ್ದೀರಲ್ಲ ನಿಮ್ಮ ಸರ್ಕಾರದ ಬಕಾಸುರ ಹೊಟ್ಟೆ ತುಂಬಿಸಲು ಕನ್ನಡಿಗರು ಇನ್ನೆಷ್ಟು ತೆರಿಗೆ, ಶುಲ್ಕ ತೆತ್ತಬೇಕು ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಸಮರ್ಥ ಸಿಎಂ ಸಿದ್ದರಾಮಯ್ಯ ನವರ ದುರಾಡಳಿತದಲ್ಲಿ ಪೆಟ್ರೋಲ್ ಡೀಸೆಲ್ ದರ ಏರಿಕೆ ಅನಿವಾರ್ಯ,ಆಸ್ತಿ ತೆರಿಗೆ ಏರಿಕೆ ಅನಿವಾರ್ಯ,ಮುದ್ರಾಂಕ ದರ ಏರಿಕೆ ಅನಿವಾರ್ಯ,ನೀರಿನ ದರ ಏರಿಕೆ ಅನಿವಾರ್ಯ,ಜನನ ಮರಣ ಪ್ರಮಾಣಪತ್ರ ಶುಲ್ಕ ಏರಿಕೆ ಅನಿವಾರ್ಯ,ಹಾಲಿನ ದರ ಏರಿಕೆ ಅನಿವಾರ್ಯ,
ಬಸ್ ದರ ಏರಿಕೆ ಅನಿವಾರ್ಯವಂತೆ ಈ ಸರ್ಕಾರಕ್ಕೆ.

ಶೀಘ್ರದಲ್ಲೇ ಕನ್ನಡಿಗರು ಸರ್ಕಾರದ ವಿರುದ್ಧ ದಂಗೆ ಏಳುವುದೂ ಅನಿವಾರ್ಯ ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ಬಸ್ ದರ ಏರಿಕೆ;ಜನ ಸಾಮಾನ್ಯರ ಸುಲಿಗೆ- ಅಶೋಕ್ ಟೀಕೆ Read More

ಅಧಿಕಾರಿ ಆತ್ಮಹತ್ಯೆ: ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಅಶೋಕ್ ಆಗ್ರಹ

ಬೆಂಗಳೂರು: ಸಿದ್ದರಾಮಯ್ಯ ನವರು ಮುಖ್ಯಮಂತ್ರಿ ಆದಾಗೆಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ಭಾಗ್ಯ, ಆತ್ಮಹತ್ಯೆ ಗ್ಯಾರೆಂಟಿ ಎಂದು ಪ್ರತಿಪಕ್ಷ ನಾಯಕ ಅಶೋಕ್ ಟೀಕಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಇಲಾಖೆಯ ಲಂಚಕೋರತನಕ್ಕೆ ಬೇಸತ್ತು ದಾವಣಗೆರೆಯ ಗುತ್ತಿಗೆದಾರ ಪಿ.ಸಿ.ಗೌಡರ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ತನಿಖೆ ಮುಗಿಯುವ ಮುನ್ನವೇ ಈಗ ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಕಟ್ಟಿತೂಗಾಂವ್‌ ಗ್ರಾಮದ ನಿವಾಸಿ ಸಿವಿಲ್‌ ಎಂಜಿನಿಯರ್‌ ಸಚಿನ್‌ ಮಾನಪ್ಪ ಪಾಂಚಾಳ್‌ (26) ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇದಕ್ಕೆ ಸರ್ಕಾರ ಕಾರಣ ಎಂದು ಟ್ವೀಟ್ ಮಾಡಿ ಕುಟುಕಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ, ಕಲಬುರಗಿ ಕಾಂಗ್ರೆಸ್‌ ಮುಖಂಡ ರಾಜು ಕಪನೂರ ಸೇರಿ ಎಂಟು ಮಂದಿ ಹಣಕ್ಕೆ ಬೇಡಿಕೆ ಇಟ್ಟು ಕೊಲೆ ಬೆದರಿಕೆ ಹಾಕಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮಾನಪ್ಪ ಪಾಂಚಾಳ್ ಡೆತ್‌ನೋಟ್‌ ಬರೆದಿಟ್ಟಿದ್ದಾರೆ ಎಂದು ‌ಅವರು ಹೇಳಿದ್ದಾರೆ.

ಇಬ್ಬರು ಪ್ರಾಮಾಣಿಕ ಗುತ್ತಿಗೆದಾರರ ಆತ್ಮಹತ್ಯೆಗೆ ಕಾರಣವಾಗಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಸಾವುಗಳಿಗೆ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.

ಅಧಿಕಾರಿ ಆತ್ಮಹತ್ಯೆ: ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಅಶೋಕ್ ಆಗ್ರಹ Read More

ಸಾಹಿತ್ಯ ಸಮ್ಮೇಳನವನ್ನ ರಾಜಕೀಯ ವೇದಿಕೆ ಮಾಡಿದ ಸರ್ಕಾರ: ಅಶೋಕ್ ಟೀಕೆ

ಬೆಂಗಳೂರು: ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿಯನ್ನ ಸಂಭ್ರಮಿಸುವ ವೇದಿಕೆಯಾಗಬೇಕಿದ್ದ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನ ಸರ್ಕಾರ ರಾಜಕೀಯ ವೇದಿಕೆ ಮಾಡಿದೆ ಎಂದು ಪ್ರತಿಪಕ್ಷ‌ ನಾಯಕ ಆರ್.ಅಶೋಕ್ ‌ಟೀಕಿಸಿದ್ದಾರೆ.

ಈ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತಾಯಿ ಕನ್ನಡಾಂಬೆಗೆ, ಕನ್ನಡಿಗರ ತಾಯ್ನುಡಿಗೆ ಘೋರ ಅಪಮಾನ ಎಸಗಿದೆ ಎಂದು ಅಶೋಕ್ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

ಮುಖ್ಯಮಂತ್ರಿಗಳ ಭಾಷಣದುದ್ದಕ್ಕೂ ರಾಜಕೀಯ ಕೆಸರೆರಚಾಟ, ಪುಸ್ತಕ ಮಳಿಗೆಗಳಲ್ಲಿ ರಾಜಕೀಯ ಪ್ರೇರಿತ ಪುಸ್ತಕಗಳ ಪ್ರದರ್ಶನ, ಮಾರಾಟ – ಇದೇನಾ ಸಾಹಿತ್ಯ ಸಮ್ಮೇಳನದ ಉದ್ದೇಶ ಎಂದು ಪ್ರಶ್ನಿಸಿದ್ದಾರೆ.

ಸಾಹಿತ್ಯ ಸಮ್ಮೇಳನದ ಮಳಿಗೆಗಳಲ್ಲಿ ಇಟ್ಟಿರುವ ಎಲ್ಲ ರಾಜಕೀಯ ಪ್ರೇರಿತ ಪುಸ್ತಕಗಳನ್ನ ತೆರವು ಮಾಡಬೇಕು, ರಾಜಕೀಯ ಭಾಷಣಗಳಿಗೆ ಕಡಿವಾಣ ಹಾಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಅಶೋಕ್
ಆಗ್ರಹಿಸಿದ್ದಾರೆ.

ಸಾಹಿತ್ಯ ಸಮ್ಮೇಳನವನ್ನ ರಾಜಕೀಯ ವೇದಿಕೆ ಮಾಡಿದ ಸರ್ಕಾರ: ಅಶೋಕ್ ಟೀಕೆ Read More

ಮೌಲಾನಾ ಅಬು ತಾಲಿಬ್ ರೆಹಮಾನಿ ಮೇಲೆ ಎಫ್ಐಆರ್ ಯಾವಾಗ: ಅಶೋಕ್

ಬೆಂಗಳೂರು: ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಮಾತನಾಡಿರುವ ಮೌಲಾನಾ ಅಬು ತಾಲಿಬ್ ರೆಹಮಾನಿ ಮೇಲೆ ಎಫ್ಐಆರ್ ಯಾವಾಗ ಹಾಕುತ್ತೀರಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಸಿಎಂ ಮತ್ತು ಡಿಸಿಎಂ ಅವರನ್ನು ಪ್ರಶ್ನಿಸಿದ್ದಾರೆ.

ನ್ಯಾಯಾಲಯದ ಮಾತು ಕೇಳುವುದಿಲ್ಲ ಸಂಸತ್ತು ನಿಮ್ಮದಾದರೆ, ಬೀದಿಗಳು ನಮ್ಮದು ಎಂದು ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಮಾತನಾಡಿರುವ ಮೌಲಾನಾ ಅಬು ತಾಲಿಬ್ ರೆಹಮಾನಿ ಮೇಲೆ ಕ್ರಮ ಯಾವಾಗ ಎಂದು ಟ್ವೀಟ್ ಮಾಡಿ ಕೇಳಿದ್ದಾರೆ

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಒಬ್ಬ ಹಿಂದೂ ಸ್ವಾಮೀಜಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ, ಬಹಿರಂಗ ಕ್ಷಮೆ ಕೇಳಿದ ಮೇಲೂ ಅವರ ಮೇಲೆ ಎಫ್ಐಅರ್ ಹಾಕಿ ವಿಚಾರಣೆಗೆ ಕರೆಯುವ ಕಾಂಗ್ರೆಸ್ ಸರ್ಕಾರಕ್ಕೆ, ಸಂವಿಧಾನ, ನ್ಯಾಯಾಲಯದ ಘನತೆ ಎಲ್ಲವನ್ನೂ ಗಾಳಿಗೆ ತೂರಿ ಪ್ರಚೋದನಕಾರಿ ಭಾಷಣ ಮಾಡುವ ಮುಸ್ಲಿಂ ಮತಾಂಧರು ಕಣ್ಣಿಗೆ ಕಾಣುವುದಿಲ್ಲವೆ ಎಂದು ಕಾರವಾಗಿ ಪ್ರಶ್ನಿಸಿದ್ದಾರೆ.

ಪಕ್ಷದ ಓಲೈಕೆ ರಾಜಕಾರಣವೇ ಅದಕ್ಕೆ ಮುಳುವಾಗಲಿದೆ. ಈಗಾಗಲೇ ದೇಶದ ಬಹುತೇಕ ರಾಜ್ಯಗಳಲ್ಲಿ ಅಡ್ರೆಸ್ ಇಲ್ಲದಂತಾಗಿರುವ ಹಿಂದೂ ವಿರೋಧಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲೂ ನಿರ್ನಾಮ ಆಗುವ ದಿನ ಬಹಳ ದೂರವಿಲ್ಲ ಎಂದು ಅಶೋಕ್ ಭವಿಷ್ಯ ನುಡಿದಿದ್ದಾರೆ.

ಮೌಲಾನಾ ಅಬು ತಾಲಿಬ್ ರೆಹಮಾನಿ ಮೇಲೆ ಎಫ್ಐಆರ್ ಯಾವಾಗ: ಅಶೋಕ್ Read More