ಸಿಎಂ ಸಿದ್ದರಾಮಯ್ಯ ಮತಾಂತರದ ರಾಯಭಾರಿ-ಅಶೋಕ್ ಟೀಕೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಎಂದರೆ ಮತಾಂತರದ ರಾಯಭಾರಿ, ಯಾರೂ ಯೋಚನೆ ಮಾಡದಂತಹ ಜಾತಿಗಳನ್ನು ಅವರು ಸೃಷ್ಟಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಇಲ್ಲದ ಜಾತಿಗಳನ್ನು ಸಿಎಂ ಸಿದ್ದರಾಮಯ್ಯ ಹುಟ್ಟುಹಾಕಿದ್ದಾರೆ. ಇಂತಹ ಜಾತಿ ಸಮೀಕ್ಷೆ ರದ್ದಾಗಲಿದೆ. ಈ ಸಮೀಕ್ಷೆ ಮೂಲಕ ಮತಾಂತರಕ್ಕೆ ಪ್ರೇರಣೆ ನೀಡಿ, ಹಿಂದೂಗಳನ್ನು ತುಳಿಯಲಾಗುತ್ತಿದೆ. ಏನೇ ಮಾಡಿದರೂ ಸಂವಿಧಾನದ ಪ್ರಕಾರ ಮಾಡಲಿ, ಮೀಸಲಾತಿಗೆ ಸಂಬಂಧಿಸಿದಂತೆ ಕೋರ್ಟ್‌ ಆದೇಶವಿದೆ. ಅದರ ಪ್ರಕಾರ ಕ್ರಮ ವಹಿಸಲಿ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಎಲ್ಲದರಲ್ಲೂ ಮುಸ್ಲಿಂ ಓಲೈಕೆ ಮಾಡುತ್ತಾರೆ. ಹಿಂದೂಗಳ ಮತ ಮಾತ್ರ ಬೇಕು. ಮತ ಸಿಕ್ಕ ನಂತರ ಹಿಂದೂ ಧರ್ಮದಲ್ಲಿ ಲೋಪವಿದೆ ಎಂದಿದ್ದಾರೆ. ಮುಸ್ಲಿಮರಲ್ಲಿ ಮಹಿಳೆಯರು ಮಸೀದಿಗೆ ಹೋಗುವಂತಿಲ್ಲ. ಇದು ಕೂಡ ತಪ್ಪೆಂದು ಅವರಿಗೆ ಅನ್ನಿಸಲಿಲ್ಲ. ಅಂದರೆ ಹಿಂದೂ ಧರ್ಮದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ. ಕೇವಲ ಹಿಂದೂ ಧರ್ಮವನ್ನು ಟಾರ್ಗೆಟ್‌ ಮಾಡುವ ಬದಲು ಬೇರೆ ಧರ್ಮಗಳ ಬಗ್ಗೆ ಕೂಡ ಮಾತಾಡಲಿ ಎಂದು ಒತ್ತಾಯಿಸಿದರು.

ದಸರಾ ಹಬ್ಬವನ್ನು ನಾಡಹಬ್ಬ, ಹಿಂದೂಗಳ ಹಬ್ಬ ಎನ್ನುತ್ತಾರೆ. ಅದೇ ರೀತಿ ಮುಸ್ಲಿಂ ಹಬ್ಬಗಳನ್ನು ಕೂಡ ನಾಡಹಬ್ಬ ಎನ್ನಲಿ ಮತ್ತು ಮುಸ್ಲಿಂ ಹಬ್ಬಗಳನ್ನು ಹಿಂದೂಗಳ ಕೈಯಲ್ಲಿ ಉದ್ಘಾಟನೆ ಮಾಡಿಸಲಿ, ಈ ಹಬ್ಬವನ್ನು ಮೈಸೂರು ಅರಸರು ಮಾಡಿಕೊಂಡು ಬಂದಿದ್ದಾರೆ, ಇದು ಪರಂಪರೆಯೇ ಹೊರತು ಕಾನೂನಲ್ಲ ಆದ್ದರಿಂದ ಇದಕ್ಕಾಗಿ ಪ್ರತ್ಯೇಕ ಕಾನೂನು ತರುವ ಅಗತ್ಯವಿದೆ. ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗಬಾರದು ಎಂಬಂತೆ ಮಾಡಿದ್ದಾರೆ. ಕಾಂಗ್ರೆಸ್‌ ಸರ್ಕಾರದಿಂದ ಹಿಂದೂ-ಮುಸ್ಲಿಂ ನಡುವೆ ಒಡಕು ಮೂಡಿದೆ ಎಂದು ಅಶೋಕ್ ಕಿಡಿಕಾರಿದರು.

ಬೆಂಗಳೂರಿನಲ್ಲಿ 5,000 ಕೋಟಿ ರೂ. ಬಿಡುಗಡೆಯಾಗಿದ್ದರೂ ರಸ್ತೆ ದುರಸ್ತಿ ಮಾಡಿಲ್ಲ. ಶುದ್ಧ ಕುಡಿಯುವ ನೀರಿನ ಘಟಕದ 20 ಲೀಟರ್‌ ನೀರಿನ ದರವನ್ನು 5 ರಿಂದ 10 ರೂ. ಗೆ ಏರಿಸಲಾಗಿದೆ. ತೈಲ ದರ, ಹಾಲಿನ ದರ ಏರಿಕೆ, ಹೊಸದಾಗಿ ಕಸ ಶುಲ್ಕ ಹೇರಲಾಗಿದೆ. ಇನ್ನು ಗಾಳಿಗೂ ಶುಲ್ಕ ತಂದರೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಬ್ರ್ಯಾಂಡ್‌ ಬೆಂಗಳೂರು ಸಾಕಾರವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಬಂದ ನಂತರ ಪಾಲಿಕೆಯನ್ನು ಐದು ಹೋಳು ಮಾಡಲಾಗಿದೆ. 198 ವಾರ್ಡ್‌ಗೆ ಶೇ 90 ನಷ್ಟು ಇಂಜಿನಿಯರ್‌ ಇಲ್ಲ. ಪಾಲಿಕೆಯೇ ಪಾಪರ್‌ ಆಗಿರುವ ಸಮಯದಲ್ಲಿ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ? ಒಂದು ಸಾವಿರಕ್ಕೂ ಅಧಿಕ ನೇಮಕಾತಿ ಮಾಡಿದರೆ ಹಣ ಎಲ್ಲಿಂದ ತರುತ್ತಾರೆ? ಬಹಳ ಕಡೆ ಶಂಕುಸ್ಥಾಪನೆಯಾಗಿ, ಕಾಮಗಾರಿ ಸ್ಥಗಿತವಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

ಧರ್ಮಸ್ಥಳದ ವಿಚಾರದಲ್ಲಿ ಎಸ್‌ಐಟಿ ವೇಗವಾಗಿ ಗುಂಡಿ ಅಗೆದಿದೆ. ಆದರೆ ತನಿಖೆ ನಿಧಾನವಾಗಿದೆ. ತನಿಖೆಗೆ ಒಳಪಟ್ಟವರು ಹೊರಗೆ ಬಂದು ಮಾಧ್ಯಮಗಳ ಜೊತೆ ಮಾತಾಡಿದ್ದಾರೆ. ಈ ವಿಚಾರದಲ್ಲಿ ನಾವು ಹೋರಾಟ ಮಾಡುತ್ತೇವೆ. ಇದೆಲ್ಲದರ ಬಗ್ಗೆ ಸರಿಯಾಗಿ ತನಿಖೆಯಾಗಬೇಕು. ಇದಕ್ಕಾಗಿ ಕೋರ್ಟ್‌ ಮೊರೆ ಕೂಡ ಹೋಗುತ್ತೇವೆ ಎಂದು ಅಶೋಕ್ ಎಚ್ಚರಿಸಿದರು.

ಸಿಎಂ ಸಿದ್ದರಾಮಯ್ಯ ಮತಾಂತರದ ರಾಯಭಾರಿ-ಅಶೋಕ್ ಟೀಕೆ Read More

ಕಾಂಗ್ರೆಸ್‌ನ ಮತಬ್ಯಾಂಕ್‌ ರಾಜಕಾರಣದಿಂದ ಮಿನಿ ಪಾಕಿಸ್ತಾನ ಸೃಷ್ಟಿ-ಅಶೋಕ್

ಮದ್ದೂರು: ಕಾಂಗ್ರೆಸ್‌ನ ಮತಬ್ಯಾಂಕ್‌ ರಾಜಕಾರಣದಿಂದಾಗಿ ರಾಜ್ಯದಲ್ಲಿ ಮಿನಿ ಪಾಕಿಸ್ತಾನಗಳು ಸೃಷ್ಟಿಯಾಗುತ್ತಿವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದರು.

ಮದ್ದೂರಿಗೆ ಬಿಜೆಪಿ ನಿಯೋಗ ಭೇಟಿ ನೀಡಿದ ವೇಳೆ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ಬಳಿಕ ಅಶೋಕ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಇಲ್ಲಿ ಯಾರು ಸತ್ತರೂ ತಮಟೆ ಹೊಡೆದುಕೊಂಡು ಹೋಗುವಂತಿಲ್ಲ. ಮಸೀದಿ ಮುಂದೆ ಮಾತ್ರ ಮೌನವಾಗಿ ಸಾಗಬೇಕಾಗುತ್ತದೆ. ಸಿಎಂ ಸಿದ್ದರಾಮಯ್ಯನವರಿಂದಾಗಿ ನಮ್ಮನ್ನು ಏನೂ ಮಾಡಲ್ಲ ಎಂಬ ಭಾವನೆ ಮುಸ್ಲಿಮರಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಂಜಾನ್‌ ಸಮಯದಲ್ಲಿ ದೇವಾಲಯದ ಮುಂಭಾಗ ಮುಸ್ಲಿಮರು ಮೆರವಣಿಗೆ ಹೋಗಬಹುದು. ಆದರೆ ಹಿಂದೂಗಳು ಮಸೀದಿ ಮುಂಭಾಗ ಮೌನವಾಗಿ ಇರಬೇಕು ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಮದ್ದೂರಿನಲ್ಲಿ ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಬೇರೆ ರಾಜ್ಯಗಳಿಂದಲೂ ಇಲ್ಲಿಗೆ ಜನರು ಬಂದಿದ್ದಾರೆ. ಈಗ ಕಲ್ಲು ಹೊಡೆದಿರುವವರು ಮುಂದೆ ಬಾಂಬ್‌ ಹಾಕುತ್ತಾರೆ. ಕಾಂಗ್ರೆಸ್‌ ನಾಯಕರು ಇವರು ನಮ್ಮ ಬ್ರದರ್‌ಗಳು ಎಂದು ಹೇಳುತ್ತಾರೆ. ಇಲ್ಲಿನ ಕಾಂಗ್ರೆಸ್‌ ಶಾಸಕರು ಕೂಡ ಅದನ್ನೇ ಹೇಳುತ್ತಾರೆ. ಆ ಬೆಂಬಲದಿಂದಲೇ ಮಿನಿ ಪಾಕಿಸ್ತಾನಗಳು ಸೃಷ್ಟಿಯಾಗಿವೆ. ಈ ತಾಲಿಬಾನ್‌ ಸರ್ಕಾರ ಮುಸ್ಲಿಮರಿಗೆ ಬೆಂಬಲ ನೀಡುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.

ಮೆರವಣಿಗೆ ಸಮಯದಲ್ಲೇ ಹೆಚ್ಚು ಪೊಲೀಸರನ್ನು ನಿಯೋಜಿಸಬೇಕಿತ್ತು. ಅದನ್ನು ಸರ್ಕಾರ ಮಾಡಲೇ ಇಲ್ಲ. ಮಾಡಿದ್ದರೆ ಇಂತಹ ಅನಾಹುತ ಆಗುತ್ತಿರಲಿಲ್ಲ. ಕಾನೂನು ಸುವ್ಯವಸ್ಥೆ ಹಾಳಾಗಿರುವುದರಿಂದ ಇಡೀ ದೇಶ ಇತ್ತ ಕಡೆ ನೋಡುತ್ತಿದೆ ಇದು‌ ನಾಚಿಕೆ ವಿಚಾರ ಎಂದು ವ್ಯಂಗ್ಯವಾಡಿದರು.

ಕಲ್ಲು ಹೊಡೆದಿರುವವರು ಇಲ್ಲಿಯವರು ಅಲ್ಲ ಎಂದಾದರೆ ಅವರೇನು ಪಾಕಿಸ್ತಾನದಿಂದ ಬಂದಿದ್ದಾರಾ, ಇದು ಪೂರ್ವ ನಿಯೋಜಿತ ಕೃತ್ಯ,ಗುಪ್ತಚರ ಇಲಾಖೆ ಇದನ್ನು ಪತ್ತೆ ಮಾಡಬೇಕಿತ್ತು ಎಂದು ತರಾಟೆಗೆ ತೆಗೆದುಕೊಂಡರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಹಿಂದೂ ಎಂದು ಹೇಳಿಕೊಳ್ಳುತ್ತಾರೆಯೇ ಹೊರತು, ಅವರಿಗೆ ಯಾವ ಅಭಿಮಾನವೂ ಇಲ್ಲ ಅವರು ನಿರಾಶರಾಗಿದ್ದಾರೆ ಎಂದು ಅಶೋಕ್ ಟಾಂಗ್ ನೀಡಿದರು.

ಕಾಂಗ್ರೆಸ್‌ನ ಮತಬ್ಯಾಂಕ್‌ ರಾಜಕಾರಣದಿಂದ ಮಿನಿ ಪಾಕಿಸ್ತಾನ ಸೃಷ್ಟಿ-ಅಶೋಕ್ Read More

ಚಾಮುಂಡೇಶ್ವರಿ ಚಲೋ ಹೋರಾಟ: ಅಶೋಕ್ ಎಚ್ಚರಿಕೆ

ಮೈಸೂರು: ಚಾಮುಂಡೇಶ್ವರಿ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆಯಾದರೆ ಧರ್ಮಸ್ಥಳ ಚಲೋ ಮಾದರಿಯಲ್ಲಿ ಚಾಮುಂಡೇಶ್ವರಿ ಚಲೋ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಎಚ್ಚರಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರಕ್ಕೆ ಚಾಮುಂಡೇಶ್ವರಿ ತಾಯಿ ಒಳ್ಳೆಯ ಬುದ್ಧಿಯನ್ನು ನೀಡಲಿ. ಹಿಂದೂಗಳ ಶ್ರದ್ಧಾಕೇಂದ್ರವನ್ನು ಟಾರ್ಗೆಟ್ ಮಾಡುವ ಮನಸ್ಥಿತಿಯನ್ನು ನಿವಾರಿಸಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ‌ಹೇಳಿದರು.

ಹಿಂದೂಗಳ ಧಾರ್ಮಿಕ ಕೇಂದ್ರ ಯಾವಾಗಲೂ ರಕ್ಷಣೆಯಾಗಬೇಕು, ಪವಿತ್ರವಾಗಿ ಇರಬೇಕು. ಹಿಂದೂಗಳ ಭಾವನೆಗೆ ಧಕ್ಕೆಯಾಗಬಾರದು ಎಂದು ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ನುಡಿದರು.

ಮೈಸೂರಿನ ಒಡೆಯರ್ ರಾಜವಂಶಸ್ಥರು ನೂರಾರು ವರ್ಷಗಳಿಂದಲೂ ದಸರಾ ಆಚರಿಸಿಕೊಂಡು ಬಂದಿದ್ದಾರೆ. ಇಂತಹ ಪವಿತ್ರವಾದ ಹಬ್ಬವನ್ನು ಕಾಂಗ್ರೆಸ್ ಸರ್ಕಾರ ಅಪವಿತ್ರ ಮಾಡಬಾರದು. ಇದು ಹಿಂದೂಗಳ ದೇವಾಲಯ ಅಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಅಂದಮೇಲೆ ಇದು ಯಾರದ್ದು ಇವರಿಗೆ ಧೈರ್ಯವಿದ್ದರೆ ಮಸೀದಿ ಮುಂದೆ ಹೋಗಿ ಇದು ಮುಸ್ಲಿಮರದ್ದಲ್ಲ ಎಂದು ಹೇಳಲಿ ಎಂದು ಸವಾಲು ಹಾಕಿದರು.

ಚುನಾವಣೆ ಸಮಯದಲ್ಲಿ ಮುಸ್ಲಿಮರ ಮೂಗಿಗೆ ತುಪ್ಪ ಸವರಲಿ.‌ ಅದನ್ನು ಬಿಟ್ಟು ಈ ಸಮಯದಲ್ಲಿ ಓಲೈಕೆ ಮಾಡಲಾಗುತ್ತಿದೆ. ಧರ್ಮಸ್ಥಳಕ್ಕೆ ನಾವೆಲ್ಲರೂ ಹೋಗಿ ಧರ್ಮಸ್ಥಳ ಚಲೋ ಮಾಡಲಿದ್ದೇವೆ. ಚಾಮುಂಡೇಶ್ವರಿ ದೇವಾಲಯಕ್ಕೆ ಧಕ್ಕೆಯಾದರೆ ಆಗ ಚಾಮುಂಡೇಶ್ವರಿ ಚಲೋ ಎಂದು ಹೋರಾಟ ಮಾಡುತ್ತೇವೆ ಎಂದು ಅಶೋಕ್ ತಿಳಿಸಿದರು.

ಚಾಮುಂಡೇಶ್ವರಿ ಚಲೋ ಹೋರಾಟ: ಅಶೋಕ್ ಎಚ್ಚರಿಕೆ Read More

ಡಿ.ಕೆ.ಶಿವಕುಮಾರ್ ಹಿಂದೂಗಳ ಕ್ಷಮೆ ಯಾಚಿಸಲಿ: ಅಶೋಕ ಆಗ್ರಹ

ಬೆಂಗಳೂರು: ಚಾಮುಂಡೇಶ್ವರಿ ದೇವಾಲಯ ಹಿಂದೂಗಳ ಆಸ್ತಿ ಅಲ್ಲ ಎನ್ನುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ, ಕೂಡಲೇ ಅವರು ಹಿಂದೂಗಳ ಬಳಿ ಕ್ಷಮೆ ಯಾಚಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಅಪಮಾನ ಮಾಡುತ್ತಿದೆ. ಧರ್ಮಸ್ಥಳದಿಂದ ಚಾಮುಂಡೇಶ್ವರಿ ದೇವಾಲಯದವರೆಗೂ ಈ ಕೃತ್ಯ ನಡೆಯುತ್ತಿದೆ ಎಂದು ಕಿಡಿಕಾರಿದರು.

ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುವುದಾದರೆ, ಅದೇನು ವಕ್ಫ್ ಮಂಡಳಿಯ ಆಸ್ತಿಯೇ ಎಂದು ಪ್ರಶ್ನಿಸಿದರು.

ಮೈಸೂರು ಮಹಾರಾಜರು ಚಾಮುಂಡೇಶ್ವರಿಯನ್ನು ಕುಲದೇವತೆಯಾಗಿ ಪೂಜಿಸಿಕೊಂಡು ಬಂದಿದ್ದಾರೆ. ಇಂತಹ ಇತಿಹಾಸ ಇರುವ ದೇವರನ್ನು ಹಿಂದೂ ದೇವರಲ್ಲ ಎನ್ನುವ ಮೂಲಕ ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಓಲೈಕೆ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ವಕ್ಫ್ ಮಂಡಳಿ, ಮಸೀದಿ, ಚರ್ಚ್ ಗಳನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲ,ಆದರೆ ಹಿಂದೂ ದೇವಾಲಯ ಮಾತ್ರ ಎಲ್ಲರಿಗೂ ಸೇರಿದೆ ಎನ್ನುತ್ತಾರೆ. ಈ ದೇವಾಲಯವನ್ನು ಮುಟ್ಟಿದರೆ ಇಡೀ ರಾಜ್ಯದಲ್ಲಿ ದಂಗೆಯಾಗುತ್ತದೆ ಎಂದು ಅಶೋಕ್ ಎಚ್ಚರಿಸಿದರು.

ದಸರಾ ಹಬ್ಬವನ್ನು ಒಡೆಯರ್ ರಾಜವಂಶಸ್ಥರು ಆಚರಿಸಿಕೊಂಡು ಬಂದಿದ್ದಾರೆ. ಇಲ್ಲಿಗೆ ಬಂದ ಮುಸ್ಲಿಂ ದೊರೆಗಳು ದೇವಾಲಯಗಳನ್ನು ಒಡೆದುಹಾಕಿದ್ದರು‌. ಈಗ ಸಾಹಿತಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಿಸಲು ಆಹ್ವಾನಿಸಲಾಗಿದೆ. ಕನ್ನಡ ಭುವನೇಶ್ವರಿ ದೇವಿಯ ಬಗ್ಗೆ ಇವರು ಮಾತಾಡುತ್ತಾರೆ. ಇನ್ನೇನು ಪಾಕಿಸ್ತಾನದ ಮಾತೆ ಮಾಡಬೇಕಿತ್ತೇ ಎಂದು ಕಾರವಾಗಿ ಪ್ರಶ್ನಿಸಿದರು.

ಕವಿ ನಿಸಾರ್ ಅಹ್ಮದ್ ಬಗ್ಗೆ ಯಾರೂ ಮಾತಾಡಲ್ಲ. ನಾನು ಕಂದಾಯ ಸಚಿವನಾಗಿದ್ದಾಗ ಅವರ ಹೆಸರಲ್ಲಿ ಸಂಸ್ಥೆ ‌ನಿರ್ಮಿಸಲು ಐದು ಎಕರೆ ಜಮೀನು ಮಂಜೂರು ಮಾಡಿಸಿದ್ದೆ. ಜೋಗದ ಸಿರಿಯ ಕವನ ಬರೆದು ಅವರು ತಾಯಿ ನಿನಗೆ ನಿತ್ಯೋತ್ಸವ ಎಂದಿದ್ದರು. ಅವರು ಎಂದಿಗೂ ಯಾವುದೇ ಧರ್ಮದ ವಿರುದ್ಧವಾಗಿ ಮಾತಾಡಲಿಲ್ಲ. ಅಂತಹವರಿಗೆ ಬಾನು ಮುಷ್ತಾಕ್ ಅವರನ್ನು ಹೋಲಿಸುವುದೇಕೆ, ನಿಸಾರ್ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇದೆ ಎಂದು ಪ್ರತಿಪಕ್ಷ ನಾಯಕ ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರಿಗೆ ಕುರುಬ, ಒಕ್ಕಲಿಗರಲ್ಲಿ ಯಾರೂ ಸಾಧಕರು ಸಿಕ್ಕಲಿಲ್ಲವೇ? ಇನ್ನಾದರೂ ಒಬ್ಬ ಸಾಧಕರು, ಯೋಧರನ್ನು ಗುರುತಿಸಿ ಅವಕಾಶ ನೀಡಲಿ. ಬಾನು ಮುಷ್ತಾಕ್ ಬರೆದ ಎದೆಯ ಹಣತೆಗೆ ಬೂಕರ್ ಪ್ರಶಸ್ತಿಯಲ್ಲಿ ಮತ್ತೊಬ್ಬರ ಪಾಲು ಇದೆ. ಆದರೆ ಅವರನ್ನು ಆಹ್ವಾನಿಸಿಲ್ಲ. ಇದು ಅಲ್ಪಸಂಖ್ಯಾತರ ಸರ್ಕಾರ ಆಗಿರುವುದು ಖಂಡನೀಯ ಎಂದು ಗುಡುಗಿದರು.

ಯದುವೀರರ ವಂಶಸ್ಥರನ್ನು ಟಿಪ್ಪು ಕುಟುಂಬದವರು ಬಂಧನದಲ್ಲಿರಿಸಿದ್ದರು. ಅಂತಹವರನ್ನೇ ಮತ್ತೆ ಕರೆದುಕೊಂಡು ಬಂದು ತಾಯಿ ಚಾಮುಂಡೇಶ್ವರಿಗೆ ಅಪಮಾನ ಮಾಡಿದ್ದಾರೆ. ಮುಂದೆ ಬಿಜೆಪಿ ಸರ್ಕಾರ ಬಂದ‌ ನಂತರ ಉದ್ಘಾಟನೆ ಮಾಡುವ ಕುರಿತು ಕಾನೂನು ತರಲಾಗುವುದು ಎಂದು ಹೇಳಿದರು.

ಹಿಂದೆ ಘಜನಿ ಮಾಡಿದಂತೆಯೇ ಕಾಂಗ್ರೆಸ್ ಸರ್ಕಾರ ಲೂಟಿ ಮಾಡಲು ಮುಂದಾಗಿದೆ. ಮಂಜುನಾಥ ಸ್ವಾಮಿಗೆ ಕೆಟ್ಟ ಹೆಸರು ತರಲು ಎರಡು ವರ್ಷ ತಯಾರಿ ನಡೆಸಲಾಗಿದೆ. ಎಸ್ಐಟಿಗೆ 3-5 ಕೋಟಿ ರೂ. ಖರ್ಚಾಗಿದೆ. ಧರ್ಮವನ್ನು ರಕ್ಷಣೆ ಮಾಡಲು ಸೆಪ್ಟೆಂಬರ್ 1 ರಂದು ಬಿಜೆಪಿ ಸಮಾವೇಶ ಮಾಡಲಿದ್ದೇವೆ ಎಂದು ಅಶೋಕ ತಿಳಿಸಿದರು.

ಡಿ.ಕೆ.ಶಿವಕುಮಾರ್ ಹಿಂದೂಗಳ ಕ್ಷಮೆ ಯಾಚಿಸಲಿ: ಅಶೋಕ ಆಗ್ರಹ Read More

ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಸಾಲದ ಸುಳಿಗೆ ತಳ್ಳುತ್ತಿದೆ;ಸಿಎಜಿ ಎಚ್ಚರಿಕೆ-ಅಶೋಕ್

ಬೆಂಗಳೂರು: ಸ್ವಯಂಘೋಷಿತ ಆರ್ಥಿಕ ತಜ್ಞ ಸಿಎಂ ಸಿದ್ದರಾಮಯ್ಯಅವರ ದುರಾಡಳಿತ ಮತ್ತು ತಪ್ಪು ಹಣಕಾಸಿನ ನಿರ್ವಹಣೆಯಿಂದ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಯಾವ ಅಧೋಗತಿಗೆ ತಲುಪುತ್ತಿದೆ ಎನ್ನುವುದನ್ನ ಮಹಾಲೇಖಪಾಲರ (ಸಿಎಜಿ) ವರದಿ ಎಳೆಎಳೆಯಾಗಿ ಬಿಚ್ಚಿಟ್ಟಿದೆ ಎಂದು ಪ್ರತಿಪಕ್ಷ ನಾಯಕ‌ ಅಶೋಕ್ ಹೇಳಿದ್ದಾರೆ.

2022–23ರಲ್ಲಿ 46,623 ಕೋಟಿ ಇದ್ದ ವಿತ್ತೀಯ ಕೊರತೆ, 2023–24ರಲ್ಲಿ 65,522 ಕೋಟಿಗೆ ಏರಿದೆ. ಏರುತ್ತಿರುವ ಈ ವಿತ್ತೀಯ ಕೊರತೆಗೆ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ಅವೈಜ್ಞಾನಿಕ ಗ್ಯಾರೆಂಟಿಗಳು ಕರ್ನಾಟಕವನ್ನು ಹೇಗೆ ದಿವಾಳಿತನದತ್ತ ತಳ್ಳುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಅಶೋಕ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರವು ಮಾರುಕಟ್ಟೆಯಿಂದ 63,000 ಕೋಟಿ ಸಾಲ ಪಡೆದಿದ್ದು, ಇದು ಕಳೆದ ವರ್ಷಕ್ಕಿಂತ 37,000 ಕೋಟಿ ಹೆಚ್ಚು. ಇದು ಮುಂದಿನ ತಲೆಮಾರಿನ ಮೇಲೆ ಭಾರಿ ಬಡ್ಡಿ ಹೊರೆ ಹಾಕುತ್ತದೆ ಎಂದು ಸಿಎಜಿ ವರದಿ ಎಚ್ಚರಿಕೆ ನೀಡಿದೆ.

ರಸ್ತೆ, ನೀರಾವರಿ, ಮೂಲಸೌಕರ್ಯ ಹೂಡಿಕೆಯಲ್ಲಿ 5,229 ಕೋಟಿ ಕಡಿತವಾಗಿದ್ದು, ಇದರಿಂದ ಅಪೂರ್ಣ ಯೋಜನೆಗಳು ಶೇ 68 ಏರಿಕೆ ಕಂಡಿವೆ ಎಂದು ಸಿಎಜಿ ವರದಿ ಬಹಿರಂಗಪಡಿಸಿದೆ. ರಾಜ್ಯದ ಭವಿಷ್ಯವೇ ಅಪಾಯದಲ್ಲಿದೆ ಎಂದು ಎಚ್ಚರಿಕೆ ನೀಡಿದೆ.

ಹಿಂದಿನ ಬಿಜೆಪಿ ಸರ್ಕಾರದ ಸಮರ್ಪಕ ಆಡಳಿತ ಮತ್ತು ಹಣಕಾಸಿನ ನಿರ್ವಹಣೆಯಿಂದ ಕೋವಿಡ್ ನಂತರ 2022–23ರಲ್ಲಿ ಚೇತರಿಸಿಕೊಂಡಿದ್ದ ಕರ್ನಾಟಕ, 2023–24ರಲ್ಲಿ ಮತ್ತೊಮ್ಮೆ 9,271 ಕೋಟಿ ಆದಾಯ ಕೊರತೆಯ ಸುಳಿಗೆ ಸಿಕ್ಕಿದೆ. ಇದು ಕಾಂಗ್ರೆಸ್‌ನ ಅವೈಜ್ಞಾನಿಕ ಗ್ಯಾರೆಂಟಿಗಳು ಮತ್ತು ಹಣಕಾಸಿನ ತಪ್ಪು ನಿರ್ವಹಣೆಯ ನೇರ ಪರಿಣಾಮ ಎಂದು ಅಶೋಕ್ ದೂರಿದ್ದಾರೆ.

ವಿತ್ತೀಯ ಕೊರತೆಯನ್ನು ತಕ್ಷಣ ನಿಯಂತ್ರಿಸದಿದ್ದರೆ, ರಾಜ್ಯದ ಆರ್ಥಿಕತೆ ಇನ್ನಷ್ಟು ಹಿಂದುಳಿಯುತ್ತದೆ, ಸಾಲದ ಒತ್ತಡ ಹೆಚ್ಚುತ್ತದೆ, ಅಭಿವೃದ್ಧಿ ಕುಸಿಯುತ್ತದೆ. ಇಂದಿನ ಗ್ಯಾರೆಂಟಿ ಯೋಜನೆಗಳು ಭವಿಷ್ಯದ ಕಗ್ಗತ್ತಲಿನ ಗ್ಯಾರೆಂಟಿ ಎಂದು ಸಿಎಜಿ ಎಚ್ಚರಿಸಿದೆ.

ಇದು ಸ್ವಯಂ ಘೋಷಿತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ ಅವರ ಕಾರ್ಯವೈಖರಿ. ಕಾಂಗ್ರೆಸ್ ಸರ್ಕಾರದ ಕರ್ನಾಟಕ ಮಾಡೆಲ್.

ಕರ್ನಾಟಕ ಸರ್ಕಾರವು ಇಂದಿನ ಕ್ಷಣಿಕ ರಾಜಕೀಯ ಲಾಭಕ್ಕಾಗಿ, ನಾಳಿನ ಕರ್ನಾಟಕದ ಭವಿಷ್ಯ ಬಲಿ ಕೊಡುತ್ತಿದೆ.
ಇದೇ ವ್ಯವಸ್ಥೆ ಮುಂದುವರಿದರೆ ಕರ್ನಾಟಕ ಆರ್ಥಿಕ ದಿವಾಳಿತನದಿಂದ ಚೇತರಿಸಿಕೊಳ್ಳಲಾಗದ ಸಾಲದ ಸುಳಿಗೆ ಸಿಲುಕಿ ಅಭಿವೃದ್ಧಿ ಶೂನ್ಯತೆ ಎದುರಿಸುವುದು ಮಾತ್ರ ಗ್ಯಾರೆಂಟಿ ಎಂದು ಅಶೋಕ್ ಭವಿಷ್ಯ ನುಡಿದಿದ್ದಾರೆ.

ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಸಾಲದ ಸುಳಿಗೆ ತಳ್ಳುತ್ತಿದೆ;ಸಿಎಜಿ ಎಚ್ಚರಿಕೆ-ಅಶೋಕ್ Read More

ಧರ್ಮಸ್ಥಳ ಎಸ್ಐಟಿ ಹಿಂದೆ ಷಡ್ಯಂತ್ರ:ಸಿಎಂ ಉತ್ತರಿಸಲಿ-ಅಶೋಕ್‌ ಆಗ್ರಹ

ಬೆಂಗಳೂರು: ಧರ್ಮಸ್ಥಳ ಎಸ್ಐಟಿ ಹಿಂದೆ ಷಡ್ಯಂತ್ರ ಇದೆ ಎಂಬುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಒಪ್ಪಿಕೊಂಡಿದ್ದಾರೆ,ಹಾಗಾಗಿ ಇದನ್ನು ಬಹಿರಂಗಪಡಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ಈ ಷಡ್ಯಂತ್ರ ಏನು, ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ, ಅವರ ಉದ್ದೇಶ ಏನು, ಇದೆಲ್ಲಾ ಕಾಂಗ್ರೆಸ್ ನಾಯಕರಾದ ರಾಹುಲ್‌ ಗಾಂಧಿ, ಸುರ್ಜೇವಾಲ ಅವರ ಸೂಚನೆಯಂತೆ ನಡುತ್ತಿದೆಯೇ ಎಂದು ಟ್ವೀಟ್ ಮಾಡಿ ಅಶೋಕ ಪ್ರಶ್ನಿಸಿದ್ದಾರೆ.

ಇವೆಲ್ಲಕ್ಕೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಧರ್ಮಸ್ಥಳ ಎಸ್ಐಟಿ ಹಿಂದೆ ಷಡ್ಯಂತ್ರ:ಸಿಎಂ ಉತ್ತರಿಸಲಿ-ಅಶೋಕ್‌ ಆಗ್ರಹ Read More

ಪುಟಗಟ್ಟಲೇ ಜಾಹೀರಾತು ಕೊಟ್ಟು ಬಿಟ್ಟಿ ಪ್ರಚಾರ ಪಡೆದಿದ್ದೆ ನಿಮ್ಮ ಸಾಧನೆ:ಅಶೋಕ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನವರೇ,
ಸಾರಿಗೆ ಸಂಸ್ಥೆಗಳು ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಲಾಭದಲ್ಲಿದೆ ಎಂದು ಸುಳ್ಳು ಹೇಳುತ್ತಾ ಪುಟಗಟ್ಟಲೇ ಜಾಹೀರಾತು ಕೊಟ್ಟು ಬಿಟ್ಟಿ ಪ್ರಚಾರ ಪಡೆದಿದ್ದೆ ನಿಮ್ಮ ಏಕೈಕ ಸಾಧನೆ ಎಂದು ಪ್ರತಿಪಕ್ಷ ನಾಯಕ ಅಶೋಕ್‌ ಜರಿದಿದ್ದಾರೆ.

ಅವೈಜ್ಞಾನಿಕ ಯೋಜನೆಗಳ ಮೂಲಕ ರಾಜ್ಯ ಸಾರಿಗೆ ಸಂಸ್ಥೆಗಳನ್ನ ದಿವಾಳಿ ಮಾಡಿದ ಕುಖ್ಯಾತಿ ನಿಮ್ಮ ಸರ್ಕಾರಕ್ಕೆ ಸಲ್ಲುತ್ತದೆ. ನಿಮ್ಮ ದುರಾಡಳಿತದಿಂದ ಬಸ್ ನಿಲ್ದಾಣಗಳನ್ನೂ ಲೀಸ್‌ಗಿಡುವ ಹೀನಾಯ ಸ್ಥಿತಿಗೆ ಇಂದು ಕೆ ಎಸ್ ಆರ್ ಟಿ ಸಿ ಸಂಸ್ಥೆ ತಲುಪಿದೆ ನಿಮ್ಮ ಕಾರ್ಯವೈಖರಿಗೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಟ್ವೀಟ್ ಮಾಡಿ ಅವರು ಕಾರವಾಗಿ ಪ್ರಶ್ನಿಸಿದ್ದಾರೆ.

ಈಗಾಗಲೇ ಶೇ 15-30 ಟಿಕೆಟ್ ದರ ಏರಿಕೆ ಮಾಡಿದ್ದೀರಿ, ಮತ್ತೊಂದೆಡೆ ಕೆ ಎಸ್ ಆರ್ ಟಿಸಿ ಸಂಸ್ಥೆಯನ್ನ 2,000 ಕೋಟಿ ರೂಪಾಯಿ ಸಾಲದ ಸುಳಿಯಲ್ಲಿ ಸಿಲುಕಿಸಿದ್ದೀರಿ. ನೌಕರರಿಗೆ 1,800 ಹಿಂಬಾಕಿ ಉಳಿಸಿಕೊಂಡಿದ್ದೀರಿ, ನಿಗಮಗಳಿಗೆ 6,000 ಕೋಟಿ ರೂಪಾಯಿ ಬಾಕಿ ಇದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಅರ್ಥಿಕ ಪರಿಸ್ಥಿತಿ ನಿಭಾಯಿಸಲು ಬಸ್ ನಿಲ್ದಾಣಗಳನ್ನು ಹರಾಜು ಹಾಕಿದರೂ ಅಚ್ಚರಿಯಿಲ್ಲ ಎಂದು ಲೇವಡಿ‌ ಮಾಡಿದ್ದಾರೆ.

2013ರಲ್ಲಿ ನಾನು ಸಾರಿಗೆ ಸಚಿವನಾಗಿದ್ದಾಗ, ಸಾರಿಗೆ ಸಂಸ್ಥೆಗಳಲ್ಲಿ 1,000 ಕೋಟಿಗೂ ಹೆಚ್ಚು ಲಾಭ ತಂದುಕೊಟ್ಟಿದ್ದೆ. ಸಾರಿಗೆ ನಿಗಮಗಳಲ್ಲಿ 25,000 ಜನರಿಗೆ ಕಾಯಂ ಉದ್ಯೋಗ ಕೊಟ್ಟಿದ್ದೆ. ಪ್ರಯಾಣಿಕರಿಗೆ ಗುಣಮಟ್ಟದ ನಿಲ್ದಾಣ ಮತ್ತು ಬಸ್ ಸೇವೆ, ಇಂಧನ ಉಳಿತಾಯ, ಜೈವಿಕ ಇಂಧನ ಬಳಕೆ ಮತ್ತಿತರ ಕಾರ್ಯದಕ್ಷತೆ ಗಮನಿಸಿ ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರಾಜ್ಯಕ್ಕೆ 30ಕ್ಕೂ ಹೆಚ್ಚು ಪ್ರಶಸ್ತಿ ನೀಡಿತ್ತು ಎಂಬುದುನ್ನು ತಿಳಿದುಕೊಳ್ಳಿ ಎಂದು ಚಾಟಿ ಬೀಸಿದ್ದಾರೆ

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಸಾಂಕ್ರಾಮಿಕದಿಂದ ಸಾರಿಗೆ ಸಂಸ್ಥೆಗಳಿಗೆ ನಷ್ಟ ಆಗಿದ್ದು ನಿಜ. ಆದರೆ ಬೇರೆ ರಾಜ್ಯಗಳಲ್ಲಿ ಸಾರಿಗೆ ನೌಕರರಿಗೆ ಸಂಬಳ ಕೊಡದಿದ್ದ ಸಂದರ್ಭದಲ್ಲೂ ನಾವು ವೇತನ ಕೊಟ್ಟಿದ್ದೇವೆ. ಅದು ಕಾರ್ಮಿಕರ ಕಲ್ಯಾಣದ ಬಗ್ಗೆ ನಮ್ಮ ಪಕ್ಷದ ಬದ್ಧತೆ. ನಮ್ಮ ಪಕ್ಷವಾಗಲಿ, ನಾನಾಗಲಿ ತಮ್ಮಿಂದ ಆಡಳಿತದ ಪಾಠ ಕಲಿಯಬೇಕಿಲ್ಲ ಎಂದು ಅಶೋಕ್ ತಿರುಗೇಟು ನೀಡಿದ್ದಾರೆ.

ಪುಟಗಟ್ಟಲೇ ಜಾಹೀರಾತು ಕೊಟ್ಟು ಬಿಟ್ಟಿ ಪ್ರಚಾರ ಪಡೆದಿದ್ದೆ ನಿಮ್ಮ ಸಾಧನೆ:ಅಶೋಕ್ Read More

ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾದಾಗ ಪ್ರತಿಯೊಬ್ಬರೂ ಧ್ವನಿ ಎತ್ತಬೇಕು: ಅಶೋಕ

ಬೆಂಗಳೂರು: ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾದಾಗ ಪ್ರತಿಯೊಬ್ಬರೂ ಅದರ ವಿರುದ್ಧ ಧ್ವನಿ ಎತ್ತಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಕರೆ ನೀಡಿದರು.

ರಾಜ್ಯ ಒಕ್ಕಲಿಗರ ಜಾಗೃತಿ ಸಂಘದಿಂದ ಕುವೆಂಪು ಕಲಾಕ್ಷೇತ್ರದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ನಮ್ಮ ಸಮುದಾಯಕ್ಕೆ ಅನ್ಯಾಯವಾದಾಗ ಪ್ರತಿಯೊಬ್ಬರೂ ಧ್ವನಿ ಎತ್ತಬೇಕು,ಆಗ ಮಾತ್ರ ಸಮುದಾಯಕ್ಕೆ ನ್ಯಾಯ ದೊರೆಯುತ್ತದೆ ಎಂದು ಹೇಳಿದರು.

ನಾಡಪ್ರಭು ಕೆಂಪೇಗೌಡರು ಯಾರ ಮೇಲೂ ದಂಡೆತ್ತಿ ಹೋಗಿ ಸಾಮ್ರಾಜ್ಯ ಸ್ಥಾಪಿಸಲಿಲ್ಲ. ಅವರು ಎಲ್ಲರನ್ನೂ ಸಮಾನತೆಯಿಂದ ಕಂಡು ಬೆಂಗಳೂರನ್ನು ಕಟ್ಟಿದ್ದರು. ಮಾಜಿ ಸಿಎಂ ಎಸ್‌.ಎಂ.ಕೃಷ್ಣ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಸಮುದಾಯದಲ್ಲಿ ಇನ್ನಷ್ಟು ಯುವಜನರನ್ನು ಬೆಳೆಸಿದರೆ ಈ ರೀತಿ ಮಹಾನ್‌ ವ್ಯಕ್ತಿಗಳಾಗುತ್ತಾರೆ. ಬೇರೆ ಸಮುದಾಯಕ್ಕೆ ಅನ್ಯಾಯ ಮಾಡದೆ ನಮ್ಮ ಸಮುದಾಯಕ್ಕಾಗಿ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.

ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಪ್ರತಿ ವರ್ಷ ಆಚರಣೆ ಮಾಡಿದರೆ ಸಾಲುವುದಿಲ್ಲ, ಒಕ್ಕಲಿಗ ಸಮುದಾಯದವರು ಕೃಷಿ ಮಾಡುವವರು. ಇಂತಹ ಸಮುದಾಯದವರ ಹಕ್ಕುಗಳಿಗಾಗಿ ಎಲ್ಲರೂ ಒಗ್ಗೂಡಬೇಕು. ಈ ಹಿಂದೆ ಒಂದು ಬಾರಿ ಹಕ್ಕುಗಳಿಗಾಗಿ ಹೋರಾಡಿದ್ದನ್ನು ನೋಡಿದ್ದೇನೆ. ಮತ್ತೆ ಎಂದೂ ಹೋರಾಟ ಮಾಡಿದ್ದನ್ನು ಕಂಡಿಲ್ಲ ಎಂದು ಅಶೋಕ್ ತಿಳಿಸಿದರು.

ಶ್ರೀ ಬಾಲಗಂಗಾಧನರನಾಥ ಸ್ವಾಮೀಜಿಯವರ ಪ್ರೇರಣೆಯಿಂದಾಗಿ 70 ವರ್ಷದ ಬಳಿಕ ವಿಧಾನಸೌಧ ಮುಂಭಾಗ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲು ಸಾಧ್ಯವಾಯಿತು. ಅಂದರೆ ಕೆಂಪೇಗೌಡರಿಗೆ ಆ ಗೌರವ ನೀಡಲು ಅಷ್ಟು ವರ್ಷ ಬೇಕಾಯಿತು. ನಾನು ಕಂದಾಯ ಸಚಿವನಾಗಿದ್ದಾಗ ಒಂದೇ ತಿಂಗಳಲ್ಲಿ ನಿರ್ಣಯ ತೆಗೆದುಕೊಂಡು ಬಸವಣ್ಣ ಹಾಗೂ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲಾಯಿತು. ಅದೇ ರೀತಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಪ್ರತಿಮೆ ಸ್ಥಾಪಿಸಲಾಯಿತು ಎಂದು ಅಶೋಕ್‌ ಹೇಳಿದರು.

ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾದಾಗ ಪ್ರತಿಯೊಬ್ಬರೂ ಧ್ವನಿ ಎತ್ತಬೇಕು: ಅಶೋಕ Read More

ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ; ಅಪಪ್ರಚಾರ ಬೇಡ: ಅಶೋಕ್

ಬೆಂಗಳೂರು: ಧರ್ಮಸ್ಥಳದ ಬಳಿ ಸಾವಿರಾರು ಶವಗಳು ಸಿಕ್ಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಎಸ್‌ಐಟಿ ರಚಿಸಿರುವುದು ಸ್ವಾಗತಾರ್ಹ, ಆದರೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಬಗ್ಗೆ ಅಪಪ್ರಚಾರ ಮಾಡುವುದು ತಪ್ಪು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಅನಾಮಧೇಯ ವ್ಯಕ್ತಿ ಹೇಳಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದೆ. ಈ ಪ್ರಕರಣಗಳಲ್ಲಿ ನಿಷ್ಪಕ್ಷಪಾತವಾದ ತನಿಖೆಯಾಗಲಿ ಎಂದು ಆಗ್ರಹಿಸುತ್ತೇನೆ,ಆದರೆ ಯಾರನ್ನೂ ಸಿಕ್ಕಿಹಾಕಿಸುವ ಉದ್ದೇಶದಿಂದ ತನಿಖೆ ನಡೆಯಬಾರದು ಎಂದು ತಿಳಿಸಿದರು.

ದಕ್ಷಿಣ ಭಾರತದಲ್ಲಿ ತಿರುಪತಿ ಹಾಗೂ ಧರ್ಮಸ್ಥಳ ಕೋಟ್ಯಂತರ ಹಿಂದೂಗಳ ಶ್ರದ್ಧಾಕೇಂದ್ರವಾಗಿದೆ. ಧರ್ಮಸ್ಥಳದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಯುವಕ ವೀಡಿಯೋಗಳನ್ನ ಅಪ್‌ಲೋಡ್‌ ಮಾಡುತ್ತಿದ್ದಾರೆ,ಈ ನಡುವೆ ಕೇರಳ ಸರ್ಕಾರ ಮಧ್ಯಪ್ರವೇಶ ಮಾಡಿದೆ. ಕೇರಳ ಸರ್ಕಾರ ಅಲ್ಲಿನ ದೇವಸ್ಥಾನಗಳ ವಿಚಾರದಲ್ಲಿ ಹೇಗೆ ನಡೆದುಕೊಳ್ಳುತ್ತಿದೆ, ಶಬರಿಮಲೆ ಅಯ್ಯಪ್ಪ ದೇವಾಲಯದ ವಿಚಾರದಲ್ಲಿ ಹೇಗೆ ನಡೆದುಕೊಂಡಿದೆ ಎಂಬುದು ಜಗಜ್ಜಾಹೀರಾಗಿದೆ. ಯಾವುದೇ ಕೊಲೆಯಾಗಿದ್ದರೆ ಸ್ಥಳೀಯ ಪೊಲೀಸ್‌ ಠಾಣೆ ತನಿಖೆ ಮಾಡುತ್ತದೆ ಎಂದು ಹೇಳಿದರು.

ಸಾವಿರಾರು ಶವಗಳು ಸಿಕ್ಕಿದೆ ಎಂದರೆ, ಅವರ ಕುಟುಂಬದವರು ದೂರು ದಾಖಲಿಸುತ್ತಾರೆ. ಅಂತಹ ಪ್ರಕರಣ ಎಷ್ಟಿದೆ ಎಂದು ಸರ್ಕಾರ ತಿಳಿಸಬೇಕು. ದೇವಾಲಯ ಮಾತ್ರವಲ್ಲದೆ, ಚರ್ಚ್‌, ಮಸೀದಿ ಮೊದಲಾದ ಧಾರ್ಮಿಕ ಕೇಂದ್ರಗಳ ಬಳಿ ಅನೇಕರು ಸಾಯುತ್ತಾರೆ. ಇಂತಹ ಸಂದರ್ಭಗಳಲ್ಲಿ ಪೊಲೀಸರು ತನಿಖೆ ಮಾಡುತ್ತಾರೆ. ಯಾರೋ ಒಬ್ಬರಿಗೆ 20 ವರ್ಷಗಳ ಬಳಿಕ ಜ್ಞಾನೋದಯವಾಗಿದ್ದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಒಂದು ಧರ್ಮಕ್ಕೆ ಅಪಮಾನ ಮಾಡಲು ವಿವಾದ ಮಾಡುವುದು ಸರಿಯಲ್ಲ. ಇದರಲ್ಲಿ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿಯ ವಿಚಾರವೇ ಬರುವುದಿಲ್ಲ. ಆದರೂ ಪದೇ ಪದೆ ಧಾರ್ಮಿಕ ಕೇಂದ್ರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅಶೋಕ್ ಬೇಸರ ವ್ಯಕ್ತಪಡಿಸಿದರು.

ಯಾವುದೇ ವ್ಯಕ್ತಿ ತಪ್ಪು ಮಾಡಿದರೆ, ಆ ವ್ಯಕ್ತಿಯ ಬಗ್ಗೆ ಆರೋಪ ಮಾಡಲಿ. ಆದರೆ ಇಡೀ ಧಾರ್ಮಿಕ ಸಂಸ್ಥೆಯನ್ನು ಗುರಿ ಮಾಡಿ ಮಾತಾಡುವುದು ಸರಿಯಲ್ಲ. ಎಸ್‌ಐಟಿ ತಂಡಕ್ಕೆ ಸರ್ಕಾರ ಬೇರಾವುದೇ ಜವಾಬ್ದಾರಿ ವಹಿಸಬಾರದು. ಈ ತಂಡದ ಪೊಲೀಸರು ಸಂಪೂರ್ಣವಾಗಿ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲಿ ಎಂದು ಸಲಹೆ ನೀಡಿದರು.

ಇದು ವ್ಯಕ್ತಿಗಳಿಗೆ ಸಂಬಂಧಿಸಿದ ವಿಚಾರವೇ ಹೊರತು, ಧರ್ಮಸ್ಥಳದ ಶ್ರೀ ಮಂಜುನಾಥ ದೇವಾಲಯಕ್ಕೆ ಸಂಬಂಧಿಸಿದ ವಿಷಯವಲ್ಲ. ಯಾರೂ ಧರ್ಮಸ್ಥಳದ ದೇವಾಲಯವನ್ನು ಗುರಿ ಮಾಡಬಾರದು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಮಗಿಂತಲೂ ಹೆಚ್ಚಿನ ದೈವಭಕ್ತರು. ಅವರು ದೇವರ ಇಚ್ಛೆಯಂತೆಯೇ ನಡೆದುಕೊಳ್ಳಲಿ. ಧರ್ಮಸ್ಥಳದ ದೇವಾಲಯದ ಬಗ್ಗೆ ಮನಸ್ಸಿಗೆ ಬಂದಂತೆ ಮಾತಾಡುವುದು ತಪ್ಪು. ಇಂತಹ ಮಾತುಗಳು ಯಾವುದೇ ಸಚಿವರಿಗೆ ಶೋಭೆ ತರುವುದಿಲ್ಲ ಎಂದು ಪ್ರತಿಪಕ್ಷ ನಾಯಕರು ಹೇಳಿದರು.

ಗ್ರೇಟರ್‌ ಬೆಂಗಳೂರು ವಿಷಯಕ್ಕೆ ಸಂಬಂಧಿಸಿದಂತೆ ಉತ್ತರ ನೀಡುವಂತೆ ಸರ್ಕಾರಕ್ಕೆ ಕೋರ್ಟ್‌ ಸೂಚನೆ ನೀಡಿದೆ. ಇದನ್ನೇ ಮುಂದಿಟ್ಟುಕೊಂಡು ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಕಸದ ರಾಶಿ ಎಲ್ಲ ಕಡೆ ರಾರಾಜಿಸುತ್ತಿದೆ, ಆಸ್ಪತ್ರೆಗಳಲ್ಲಿ ಸಂಬಳ ಪಾವತಿಯಾಗಿಲ್ಲ. ಶಾಲೆಗಳ ಶಿಕ್ಷಕರನ್ನು ವಜಾ ಮಾಡಲಾಗುತ್ತಿದೆ. ಬೆಂಗಳೂರಿನ ಅಭಿವೃದ್ಧಿ ಮಾಡಲಾಗದೆ ಐದು ಪಾಲಿಕೆ ಮಾಡುವ ವಿಷಯವನ್ನು ಮುನ್ನೆಲೆಗೆ ತರಲಾಗಿದೆ. ಎಲ್ಲದಕ್ಕೂ ಜನರ ಮೇಲೆ ತೆರಿಗೆ ಹೇರಲಾಗಿದೆ. ಇ ಖಾತಾದಿಂದಾಗಿ ಎಲ್ಲೂ ನೋಂದಣಿ ಮಾಡಲು ಆಗುತ್ತಿಲ್ಲ. ಕಾಂಗ್ರೆಸ್‌ ವಾಮಮಾರ್ಗದಲ್ಲಿ ಗೆಲ್ಲಲು ಈ ರೀತಿ ಪಾಲಿಕೆಗಳನ್ನು ರಚಿಸುತ್ತಿದೆ. ಬೆಂಗಳೂರನ್ನು ಹೋಳು ಮಾಡುವುದನ್ನು ವಿಧಾನಸಭೆ ಅಧಿವೇಶನದಲ್ಲೂ ವಿರೋಧಿಸಲಾಗುವುದು ಎಂದು ಅಶೋಕ್ ತಿಳಿಸಿದರು.

ಮುಡಾ ಹಗರಣದ ವಿರುದ್ಧದ ಬಿಜೆಪಿಯ ಹೋರಾಟದ ಫಲವಾಗಿ ಸಿಎಂ ಸಿದ್ದರಾಮಯ್ಯ ನಿವೇಶನಗಳನ್ನು ವಾಪಸ್‌ ಮಾಡಿದ್ದಾರೆ, ತಪ್ಪಾಗಿದೆ ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆ,ನಾವು ಮುಡಾ ಹಗರಣದ ವಿರುದ್ಧದ ಹೋರಾಟ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ; ಅಪಪ್ರಚಾರ ಬೇಡ: ಅಶೋಕ್ Read More

ರಾಜ್ಯದಲ್ಲಿ ರಣದೀಪ್ ಆಡಳಿತ ಜಾರಿ ಆಗಿದೆಯೆ:ಅಶೋಕ್ ವ್ಯಂಗ್ಯ

ಬೆಂಗಳೂರು: ರಾಜ್ಯದಲ್ಲಿ ರಣದೀಪ್ ಆಡಳಿತ ಜಾರಿ ಆಗಿದೆಯಾ ಏನು ಕಥೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಈ‌‌ ಬಗ್ಗೆ ಟ್ವೀಟ್ ಮಾಡಿ ಕಿಡಿ ಕಾರಿರುವ ಅಶೋಕ್, ಗುರುವಾರದ ಸಂಪುಟ ಸಭೆಯೂ ಸುರ್ಜೆವಾಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆಯೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಮೇಲೆ ಸಂಪೂರ್ಣವಾಗಿ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದಲ್ಲಿ ರಣದೀಪ್ ಆಡಳಿತ ಹೇರಿದೆ ಎಂದು ಲೇವಡಿ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ, ಪಂಚತಾರಾ ಹೋಟೆಲ್ ಗಳಲ್ಲಿ ಅತೃಪ್ತ ಶಾಸಕರ ದೂರು-ದುಮ್ಮಾನ ಕೇಳುತ್ತಿರುವ, ಮಂತ್ರಿಗಳ ಸಾಧನೆ ಪರಾಮರ್ಶೆ ಮಾಡುತ್ತಿರುವ ಸುರ್ಜೆವಾಲ ಅವರು, ಗುರುವಾರ ವಿಧಾನಸೌಧದಲ್ಲಿ ನಡೆಯುವ ಸಂಪುಟ ಸಭೆಗೂ ಬಂದು ತಾವೇ ಅಧ್ಯಕ್ಷತೆ ವಹಿಸಿದರೂ ಅಚ್ಚರಿ ಪಡಬೇಕಿಲ್ಲ ಎಂದು ಅಶೋಕ್ ಟೀಕಿಸಿದ್ದಾರೆ.

ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಆಡಳಿತದ ಮೇಲೆ ಹಿಡಿತವಿಲ್ಲ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಶಾಸಕರ ಬೆಂಬಲ ಇಲ್ಲ, ತಮಗೆ ಬೇಕಾದವರನ್ನು ಸಿಎಂ ಆಗಿ‌ ನೇಮಕ ಮಾಡಲು ರಾಹುಲ್ ಗಾಂಧಿ ಅವರಿಗೆ ಶಕ್ತಿ ಇಲ್ಲ ಎಂದು ಕುಟುಕಿದ್ದಾರೆ.

ರಾಜ್ಯದಲ್ಲಿ ರಣದೀಪ್ ಆಡಳಿತ ಜಾರಿ ಆಗಿದೆಯೆ:ಅಶೋಕ್ ವ್ಯಂಗ್ಯ Read More