ಬೆಂಗಳೂರಿನಿಂದ ಬೆಳಗಾವಿಗೆ ಬಂದರೂ ಒಳಬೇಗುದಿ ತಣ್ಣಗಾಗಿಲ್ಲ-ಅಶೋಕ್

ಬೆಂಗಳೂರು: ಬೂದಿ ಮುಚ್ಚಿದ ಕೆಂಡದಂತಿರುವ ಕಾಂಗ್ರೆಸ್ ಪಕ್ಷದ ಒಳಬೇಗುದಿ ಎಷ್ಟು ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿಸಿದರೂ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಗೆ ವೇದಿಕೆಯಾಗಬೇಕಿದ್ದ ಬೆಳಗಾವಿ ಅಧಿವೇಶನ, ಕಾಂಗ್ರೆಸ್ ಪಕ್ಷದ ಕುರ್ಚಿ ಕಿತ್ತಾಟದಲ್ಲಿ ವ್ಯರ್ಥವಾಗುತ್ತಿರುವುದು ವಿಷಾದಕರ ಎಂದು ಟ್ವೀಟ್ ಮಾಡಿ ಹೇಳಿದ್ದಾರೆ.

ಒಂದು ಕಡೆ ಸಿಎಂ ಸಿದ್ದರಾಮಯ್ ಅವರ ಪುತ್ರ ಎಂಎಲ್ಸಿ ಯತೀಂದ್ರ ಅವರು ತಮ್ಮ ಬಾಲಿಶ ಹೇಳಿಕೆಗಳಿಂದ ಇಡೀ ಅಧಿವೇಶನದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸದನಕ್ಕೆ ಗೈರು ಹಾಜರಾಗಿ ಹೈದರಾಬಾದಿನಲ್ಲಿ ತೆಲಂಗಾಣ ಸರ್ಕಾರದ ಹೂಡಿಕೆ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತಮ್ಮ ಮುನಿಸು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನ ನಂಬಿ ಅಧಿಕಾರ ಕೊಟ್ಟ ತಪ್ಪಿಗೆ ಕನ್ನಡಿಗರು ದಿನನಿತ್ಯ ಪಶ್ಚಾತಾಪ ಪಡುವುದಂತೂ ಅನಿವಾರ್ಯ ಎಂದು ಅಶೋಕ್ ವಿಷಾದಿಸಿದ್ದಾರೆ.

ಬೆಂಗಳೂರಿನಿಂದ ಬೆಳಗಾವಿಗೆ ಬಂದರೂ ಒಳಬೇಗುದಿ ತಣ್ಣಗಾಗಿಲ್ಲ-ಅಶೋಕ್ Read More

ಏನ್‌ ಸಣ್ಣ ಅಗಿದ್ಯಾ; ಅಶೋಕ್ ಗೆ ಕಿಚಾಯಿಸಿದ ಸಿದ್ದರಾಮಯ್ಯ

ಬೆಳಗಾವಿ: ಏನ್‌ ಅಶೋಕ ಸಣ್ಣ ಅಗಿದಿಯಲ್ಲಾ…ಹೀಗೆ ಕಿಚಾಯಿಸಿದ್ದು ಸಿಎಂ ಸಿದ್ದರಾಮಯ್ಯ.
ಚಳಿಗಾಲದ ಅಧಿವೇಶನ ಆರಂಭಕ್ಕೂ ಮೊದಲು ಸ್ಪೀಕರ್ ಕೊಠಡಿಯಲ್ಲಿ ಸಿದ್ದರಾಮಯ್ಯ ವಿಧಾನಸಭೆಯ ಪ್ರತಿಪಕ್ಷದ ನಾಯಕರಾದ ಅಶೋಕ್, ಸುನೀಲ್ ‌ಕುಮಾರ್ ಮುಖಾಮುಖಿಯಾದ ವೇಳೆ ಮುಖ್ಯ ಮಂತ್ರಿಗಳು ರೇಗಿಸಿದರು.
ಸಿಎಂ ಬರುವ ಮುಂಚೆಯೇ ಸ್ಪೀಕರ್ ಖಾದರ್‌ ಅವರನ್ನು ಅಶೋಕ್, ಸುನೀಲ್ ‌ಕುಮಾರ್ ಭೇಟಿಯಾಗಿದ್ದರು. ಈ ವೇಳೆ ಆಗಮಿಸಿದ ಸಿದ್ದರಾಮಯ್ಯನವರಿಗೆ ಕೈಕುಲುಕಿ ವಿಪಕ್ಷ ನಾಯಕರು ಶುಭ ಕೋರಿದರು.
ಈ ಸಂದರ್ಭದಲ್ಲಿ ನಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಾಡ್ತೀರೇನಪ್ಪಾ ಎಂದು ನಗುನಗುತ್ತಲೇ ಸಿಎಂ ರೇಗಿಸಿದರು.ಆಗ ಇಬ್ಬರು ನಾಯಕರು ಉತ್ತರ ನೀಡದೇ ನಕ್ಕಿದರು.
ಅಶೋಕ್‌ ಅವರಿಗೆ ಸಿದ್ದರಾಮಯ್ಯ, ಏನ್ ಸಣ್ಣ ಆಗಿದ್ದೀಯಾ ಅಶೋಕ್ ಎಂದು ಕಿಚಾಯಿಸಿದರು. ಅದಕ್ಕೆ ನಿಮ್ಮ ಥರ ನಾಟಿ ಕೋಳಿ ತಿನ್ನಲ್ಲ ಸರ್, ನಾನು ಎಲ್ಲವನ್ನು ಬಿಟ್ಟಿದ್ದೀನಿ ಎಂದು ನಗುತ್ತಲೇ ಟಾಂಗ್ ನೀಡಿದರು.
ಅದಕ್ಕೆ ಸಿಎಂ, ಹೇ.. ತಿನ್ನು ಏನೂ ಆಗಲ್ಲ. ಬಾ ತಿನ್ನೋಣ ಎಂದು ಕರೆದರು. ಇದಕ್ಕೆ ಅಶೋಕ್‌ ನಗುತ್ತಾ ಮುಂದೆ ಸಾಗಿದರು.

ಏನ್‌ ಸಣ್ಣ ಅಗಿದ್ಯಾ; ಅಶೋಕ್ ಗೆ ಕಿಚಾಯಿಸಿದ ಸಿದ್ದರಾಮಯ್ಯ Read More

ಪರಪ್ಪನ ಅಗ್ರಹಾರ ಜೈಲಲ್ಲಿ ಭಯೋತ್ಪಾದಕ ಮೊಬೈಲ್‌ ಬಳಸಿದ ಪ್ರಕರಣ- ಎನ್‌ಐಎ ತನಿಖೆಗೆ ಅಶೋಕ ಆಗ್ರಹ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಭಯೋತ್ಪಾದಕ ಮೊಬೈಲ್‌ ಬಳಸಿದ ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವದೆಹಲಿಯಲ್ಲಿ ನಡೆದ ಘಟನೆ ಭಯೋತ್ಪಾದನಾ ಕೃತ್ಯ ಎಂಬ ಅನುಮಾನವಿದೆ. ಇದೇ ಸಮಯದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಬ್ಬ ಭಯೋತ್ಪಾದಕ ಮೊಬೈಲ್‌ ಬಳಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಹೆಚ್ಚು ತನಿಖೆ ಮಾಡಿದರೆ ಹೊಸ ವಿಚಾರಗಳು ಗೊತ್ತಾಗುತ್ತದೆ. ಇದು ದೇಶದ ಭದ್ರತೆಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಇದನ್ನು ಎನ್‌ಐಎ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಡಾಕ್ಟರ್‌ಗಳು ಸೇರಿದಂತೆ ಹೆಚ್ಚು ಶಿಕ್ಷಣ ಪಡೆದ ಮುಸ್ಲಿಮರೇ ಭಯೋತ್ಪಾದಕರಾಗಿ ಬದಲಾಗುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್‌ ಈ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕಿದೆ, ಅಧಿಕಾರಕ್ಕೆ ಬರಲು ಓಲೈಕೆ ಮಾಡುವುದರಿಂದ ಹೀಗೆಲ್ಲ ಆಗುತ್ತಿದೆ ಎಂದು ಟೀಕಿಸಿದರು.

ಪರಪ್ಪನ ಅಗ್ರಹಾರ ಜೈಲಿನಲ್ಲೂ ಕಾಂಗ್ರೆಸ್‌ ತಪ್ಪಿನಿಂದಲೇ ಉಗ್ರವಾದಿಗಳು ಮೊಬೈಲ್‌ ಬಳಸುವಂತಾಗಿದೆ. ಇಂತಹ ವಿಫಲತೆಯನ್ನು ಒಪ್ಪಿಕೊಂಡು ಕಾಂಗ್ರೆಸ್‌ ನಾಯಕರು ರಾಜೀನಾಮೆ ನೀಡಬೇಕು ಎಂದು ಅಶೋಕ್ ಒತ್ತಾಯಿಸಿದರು.

ಇದು ಮನಮೋಹನ್‌ ಸಿಂಗ್‌ ಸರ್ಕಾರವಲ್ಲ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಭಯೋತ್ಪಾದಕರಿಗೆ ಯಾವುದೇ ವಿನಾಯಿತಿ ನೀಡುವುದಿಲ್ಲ ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಈ ಘಟನೆಯ ವಿರುದ್ಧವೂ ಕೇಂದ್ರ ಸರ್ಕಾರ ಕಠಿಣ ಕ್ರಮ ವಹಿಸಲಿದೆ. ಕಾಂಗ್ರೆಸ್‌ ಇದ್ದಾಗ ನಕ್ಸಲ್‌ ಚಟುವಟಿಕೆ ಅಧಿಕವಾಗಿತ್ತು. ಅದನ್ನು ಗೃಹ ಸಚಿವ ಅಮಿತ್‌ ಶಾ ಬಹುತೇಕ ನಿರ್ಮೂಲನೆ ಮಾಡಿದ್ದಾರೆ. ಅದೇ ರೀತಿ ಭಯೋತ್ಪಾದನೆ ಕೂಡ ನಿರ್ಮೂಲನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಕೇವಲ ಸುತ್ತೋಲೆ ಹೊರಡಿಸಿದರೆ ಸಾಲದು. ಗೃಹಸಚಿವರು ಹಾಗೂ ಪೊಲೀಸರು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಜನರಲ್ಲಿ ವಿಶ್ವಾಸ ತುಂಬಬೇಕು. ಸಾಧ್ಯವಾದಷ್ಟು ಬಿಗಿ ಭದ್ರತೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಮೇಲೆ ಜನರಿಗೆ ನಂಬಿಕೆ ಇಲ್ಲ. ಪಾಕಿಸ್ತಾನವನ್ನು ಕಾಂಗ್ರೆಸ್‌ ಪ್ರೀತಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ವ್ಯಂಗ್ಯ ಚಾಟಿ ಬೀಸಿದರು.

ಬಿಜೆಪಿಯಿಂದ ಜಿಬಿಎ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದರೀಗ ವಿಧಾನಸಭಾ ಚುನಾವಣೆ ನಡೆಯುವ ಸ್ಥಿತಿ ಬಂದಿದೆ. ಯಾವ ಚುನಾವಣೆ ಮೊದಲು ಬರಲಿದೆ ಎಂದು ಗೊತ್ತಾಗುತ್ತಿಲ್ಲ ಎಂದು ಅಶೋಕ್ ಮಾರ್ಮಿಕವಾಗಿ ನುಡಿದರು.

ಪರಪ್ಪನ ಅಗ್ರಹಾರ ಜೈಲಲ್ಲಿ ಭಯೋತ್ಪಾದಕ ಮೊಬೈಲ್‌ ಬಳಸಿದ ಪ್ರಕರಣ- ಎನ್‌ಐಎ ತನಿಖೆಗೆ ಅಶೋಕ ಆಗ್ರಹ Read More

ಬೀದಿಗೆ ಬಂದಿರುವ ಎಲ್ಲ ಪ್ರಕರಣಗಳಿಗೂ ಸರ್ಕಾರ ನೇರ ಕಾರಣ:ಅಶೋಕ್

ಬೆಂಗಳೂರು: ಕಾನೂನು ತಿದ್ದುಪಡಿಯಿಂದ ಮೈಕ್ರೋ ಫೈನಾನ್ಸ್ ಹಾವಳಿ ನಿಲ್ಲುವುದಿಲ್ಲ ಎಂದು ಕಳೆದ ಮಾರ್ಚ್ ತಿಂಗಳಲ್ಲೇ ಸದನದಲ್ಲಿ ನಾನು ಹೇಳಿದ್ದ ಮಾತು ಮತ್ತೊಮ್ಮೆ ಸಾಬೀತಾಗಿದೆ ಎಂದು ಪ್ರತಿಪಕ್ಷದ ನಾಯಕ ಅಶೋಕ್ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನ ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯವರು ರೈತನ ಮನೆಗೆ ಬೀಗ ಜಡಿದು ಜಪ್ತಿ ಮಾಡಿರುವ ಘಟನೆ ನಡೆದಿದ್ದು, ಮೈಕ್ರೋ ಫೈನಾನ್ಸ್ ಹಾವಳಿಯಿಂದ ರೈತರು, ಕೃಷಿ ಕಾರ್ಮಿಕರು, ಬಡವರನ್ನು ರಕ್ಷಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.

ಕಾನೂನು ತಿದ್ದುಪಡಿಯಿಂದ ಈ ಹಾವಳಿ ನಿಲ್ಲುವುದಿಲ್ಲ, ನಿಗಮ ಮಂಡಳಿಗಳಿಗೆ ಅನುದಾನ ನೀಡಿ ಅದರ ಮೂಲಕ ಬಡವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುವಂತಾದರೆ ಮಾತ್ರ ಈ ಹಾವಳಿ ನಿಲ್ಲುತ್ತದೆ ಎಂದು ಸದನದಲ್ಲಿ ನಾನು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದೆ,ಆದರೂ ಯಾವ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಹೇಳಿದ್ದಾರೆ.

ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ, ಮನೆ-ಮಠ ಕಳೆದುಕೊಂಡು ಬೀದಿಗೆ ಬಂದಿರುವ ಎಲ್ಲ ಪ್ರಕರಣಗಳಿಗೂ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಎಂದು ಅಶೋಕ್ ದೂರಿದ್ದಾರೆ.

ಬೀದಿಗೆ ಬಂದಿರುವ ಎಲ್ಲ ಪ್ರಕರಣಗಳಿಗೂ ಸರ್ಕಾರ ನೇರ ಕಾರಣ:ಅಶೋಕ್ Read More

ಒಂದು ಲೇಯರ್‌ ಡಾಂಬರೀಕರಣಕ್ಕೆ 4-5 ಸಾವಿರ ಕೋಟಿ ಎಲ್ಲಿಂದ ತರುತ್ತಾರೆ: ಅಶೋಕ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ರಸ್ತೆಗಳ ಅಭಿವೃದ್ಧಿಯನ್ನು ಮರೆತಿದೆ. ಸಿಎಂ ಸಿದ್ದರಾಮಯ್ಯ ಒಂದು ಲೇಯರ್‌ ಡಾಂಬರೀಕರಣಕ್ಕೆ ಸೂಚನೆ ನೀಡಿದ್ದಾರೆ,ಸರಿ ಆದರೆ ಅದಕ್ಕೆ ಬೇಕಾದ 4-5 ಸಾವಿರ ಕೋಟಿ ರೂ. ಎಲ್ಲಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆಗುಂಡಿಯಿಂದಾಗಿ ಸುಮಾರು ಹನ್ನೆರಡು ಜನರು ಸತ್ತಿದ್ದು,ರಸ್ತೆಗಳು ಮೃತ್ಯುಕೂಪವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಕೂಲಿಂಗ್‌ ಗ್ಲಾಸ್‌ ಹಾಕಿಕೊಂಡು ನಗರ ಪ್ರದಕ್ಷಿಣೆ ಮಾಡಿದರೆ ರಸ್ತೆಗುಂಡಿ ಕಾಣುವುದಿಲ್ಲ. ತೆರಿಗೆ ಪಾವತಿಸಲ್ಲ, ರಸ್ತೆಗುಂಡಿ ನಾವೇ ಮುಚ್ಚುತ್ತೇವೆ ಎಂದು ಜನರು ಹೇಳುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಇಡೀ ರಾಜ್ಯದ ರಸ್ತೆಗಳಲ್ಲಿ ಎಷ್ಟು ಗುಂಡಿ ಇದೆ ಎಂದು ಸರ್ಕಾರ ತಿಳಿಸಿದರೆ, ಗಿನ್ನೆಸ್‌ ದಾಖಲೆಗೆ ಕಳುಹಿಸಬಹುದು ಎಂದು ವ್ಯಂಗ್ಯ ಸಲಹೆ ನೀಡಿದರು.

ಒಂದು ಲೇಯರ್‌ ಡಾಂಬರೀಕರಣ ಮಾಡಲು ಸುಮಾರು 4-5 ಸಾವಿರ ಕೋಟಿ ರೂ. ಬೇಕಾಗುತ್ತದೆ. ಗ್ರಂಥಪಾಲಕರಿಗೆ, ಅಂಗನವಾಡಿ ಕಾರ್ಯಕರ್ತರಿಗೆ ಸಂಬಳವೇ ಇಲ್ಲ. ಇನ್ನು ಇಷ್ಟೊಂದು ಹಣ ಎಲ್ಲಿದೆ ಎಂದು ಕಾರವಾಗಿ ಅಶೋಕದ ಪ್ರಶ್ನಿಸಿದರು.

ಬಿಬಿಎಂಪಿ ಅಸ್ತಿತ್ವದಲ್ಲಿಲ್ಲದೆ ರಸ್ತೆ ಡಾಂಬರೀಕರಣಕ್ಕೆ ಟೆಂಡರ್‌ ಆಗುತ್ತಿಲ್ಲ. ಆದ್ದರಿಂದ ಬೆಂಗಳೂರು ಗ್ರೇಟರ್‌ ಪ್ರಾಧಿಕಾರವನ್ನು ಮುಂದೆ ನಾವು ರದ್ದು ಮಾಡುತ್ತೇವೆ ಎಂದು ಹೇಳಿದರು.

ನಗರದ ಶ್ವಾಸಕೋಶದಂತಿರುವ ಲಾಲ್‌ಬಾಗ್‌ನಲ್ಲಿ ಐದಾರು ಎಕರೆ ಪಡೆದು ಸುರಂಗ ರಸ್ತೆ ನಿರ್ಮಿಸಲಾಗುತ್ತದೆ. ನಗರಕ್ಕೆ ಹಸಿರು ನೀಡುವ ಇಂತಹ ಉದ್ಯಾನದಲ್ಲಿ ಸುರಂಗ ಕೊರೆಯಬಾರದು. ಈ ಯೋಜನೆಯಿಂದ ಅಂತರ್ಜಲಕ್ಕೆ ಧಕ್ಕೆಯಾಗುತ್ತದೆ. ಕೆಂಪೇಗೌಡ ಗೋಪುರ ಲಾಲ್‌ಬಾಗ್‌ನಲ್ಲಿದ್ದು, ಅದನ್ನೂ ಸರ್ಕಾರ ಒಡೆದುಹಾಕಬಹುದು. ವಿಜ್ಞಾನಿಗಳು, ಪರಿಸರವಾದಿಗಳು ಏನು ಹೇಳಿದ್ದಾರೆ ಎಂದು ಸರ್ಕಾರ ನೋಡಬೇಕು ಎಂದು ಆಗ್ರಹಿಸಿದರು.

ಎತ್ತಿನಹೊಳೆ ಯೋಜನೆಯೇ ಇನ್ನೂ ಅನುಷ್ಠಾನವಾಗಿಲ್ಲ. ಸುರಂಗ ರಸ್ತೆ ಯೋಜನೆ ಕೂಡ ಅದೇ ರೀತಿಯಾಗಲಿದೆ. ಎಷ್ಟೇ ಅನುದಾನ ಹೆಚ್ಚಿದರೂ ಈ ಯೋಜನೆ ಜಾರಿಯಾಗಲು ಸಾಧ್ಯವಿಲ್ಲ. ಮೆಟ್ರೋ ಯೋಜನೆಯನ್ನು ಇದೇ ಹಣದಲ್ಲಿ ವಿಸ್ತರಣೆ ಮಾಡಬಹುದು. ಈ ಯೋಜನೆ ಮಾಡಿ ಡಿ.ಕೆ.ಶಿವಕುಮಾರ್‌ ಬೆಂಗಳೂರಿನ ವಿಲನ್‌ ಆಗುವುದು ಬೇಡ. ಇದರ ವಿರುದ್ಧ ಬಿಜೆಪಿ ಶಾಸಕರೊಂದಿಗೆ ಹೋರಾಟ ಮಾಡಲಾಗುವುದು ಎಂದು ಅಶೋಕ ಎಚ್ಚರಿಸಿದರು.

ಈಗಾಗಲೇ ನಿವೇಶನ ಪಡೆದವರಿಗೆ ಎ ಖಾತಾಗೆ ವರ್ಗಾವಣೆ ಮಾಡಿಸಲು ಹಣ ಪಾವತಿಸಬೇಕು. ಇದನ್ನು ಕ್ರಾಂತಿ ಎನ್ನುತ್ತಿದ್ದಾರೆ. ಆದ್ದರಿಂದ ಜನರು ಎಚ್ಚರಿಕೆಯಿಂದ ಇರಬೇಕು. ಇದು ಹಣ ವಸೂಲಿ ಮಾಡುವ ಸ್ಕೀಮ್‌ ಎಂದು ಲೇವಡಿ ಮಾಡಿದರು.

ನವೆಂಬರ್‌ನಲ್ಲಿ ಕ್ರಾಂತಿಯಾಗಲಿದೆ ಎಂದು ನಾನು ಹೇಳಿದ್ದಾಗ ಟೀಕೆ ಮಾಡಿದ್ದರು. ಈಗ ಕಾಂಗ್ರೆಸ್‌ ನಾಯಕರೇ ಹೇಳುತ್ತಿದ್ದಾರೆ. ಸಿಎಂ ಬದಲಾವಣೆ ಖಚಿತ ಎಂದು ಅಶೋಕ್ ಭವಿಷ್ಯ ನುಡಿದರು.

ಒಂದು ಲೇಯರ್‌ ಡಾಂಬರೀಕರಣಕ್ಕೆ 4-5 ಸಾವಿರ ಕೋಟಿ ಎಲ್ಲಿಂದ ತರುತ್ತಾರೆ: ಅಶೋಕ Read More

ಕಾಂಗ್ರೆಸ್ ಸರ್ಕಾರದ ವಿರುದ್ಧ ಅಶೋಕ್ ಗುಡುಗು

ಬೆಂಗಳೂರು: ಗುಲ್ಬರ್ಗದಿಂದ ದಸರಾ ವೇಳೆ ಬಲೂನ್ ವ್ಯಾಪಾರಕ್ಕಾಗಿ ಮೈಸೂರಿಗೆ ಬಂದಿದ್ದ ಹಕ್ಕಿಪಿಕ್ಕಿ ಜನಾಂಗದ ಬಾಲಕಿಯ ಅಪಹರಿಸಿ ಅತ್ಯಾಚಾರ ಕೊಲೆ ನಡೆದು 5 ದಿನಗಳಾದರೂ ಸರ್ಕಾರ ಪರಿಹಾರ ನೀಡಿಲ್ಲ ಎಂದು ಪ್ರತಿಪಕ್ಷ ನಾಯಕ ಕಿಡಿಕಾರಿದರು.

ಪರಿಶಿಷ್ಟ ಪಂಗಡಕ್ಕೆ ಸೇರಿದ ಒಬ್ಬ ಅಪ್ರಾಪ್ತ ಬಾಲಕಿಗೆ ಆದ ಈ ಅನ್ಯಾಯಕ್ಕೆ ಸಿಎಂ‌ ಸಿದ್ದರಾಮಯ್ಯ ಸರ್ಕಾರ ಈವರೆಗೂ ಪರಿಹಾರವನ್ನೂ ನೀಡಿಲ್ಲ, ಕನಿಷ್ಠ ಪಕ್ಷ ಸೌಜನ್ಯಕ್ಕೂ ಬಾಲಕಿಯ ತಂದೆತಾಯಿಯನ್ನು ಭೇಟಿಯಾಗಿ ಸಾಂತ್ವನ ಹೇಳಿಲ್ಲ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು,
ಸ್ವಾಮಿ ಸಿದ್ದರಾಮಯ್ಯ ನವರೇ, ನಾವು ದಲಿತರು, ಹಿಂದುಳಿದವರ ಪರವಾಗಿದ್ದೇವೆ ಎಂದು ಬೊಗಳೆ ಭಾಷಣ ಮಾಡುತ್ತೀರಲ್ಲ, ನಿಮ್ಮ ತವರು ಜಿಲ್ಲೆಯಲ್ಲಿ, ಮೈಸೂರಿನ ಹೃದಯ ಭಾಗದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಾಲಕಿಗೆ ಆದ ಘೋರ ಅನ್ಯಾಯ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಕಾರವಾಗಿ ಪ್ರಶ್ನಿಸಿದರು.

ಒಂದು ಕಡೆ ಮೈಸೂರು ಜಿಲ್ಲೆಯನ್ನ ಸಂಪೂರ್ಣವಾಗಿ ನಿಮ್ಮ ಪುತ್ರನಿಗೆ ಬಿಟ್ಟುಕೊಟ್ಟು ವರ್ಗಾವಣೆ, ಕಮಿಷನ್ ದಂಧೆಯಲ್ಲಿ ತೊಡಗಿಸಿದ್ದೀರಿ. ಇನ್ನೊಂದು ಕಡೆ ತಾವು ಬೆಂಗಳೂರಿನಲ್ಲಿ ಡಿನ್ನರ್ ಮೀಟಿಂಗ್, ಕಲೆಕ್ಷನ್ ಟಾರ್ಗೆಟ್ ಮೀಟಿಂಗ್ ಎಂದು ಬಿಹಾರ ಚುನಾವಣೆಗೆ ಫಂಡಿಂಗ್ ಕಳುಹಿಸಲು ಪೈಪೋಟಿಗೆ ಬಿದ್ದಂತೆ ಸಚಿವರಿಗೆ ವಸೂಲಿ ಟಾರ್ಗೆಟ್ ನೀಡಿ ಅಕ್ಟೋಬರ್ ಕ್ರಾಂತಿಯ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವಲ್ಲಿ ಬ್ಯುಸಿ ಆಗಿದ್ದೀರಿ ಎಂದು ವ್ಯಂಗ್ಯವಾಗಿ ಟೀಕಿಸಿದರು.

ಹೀಗಾದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯದೇ ಇನ್ನೇನಾಗುತ್ತೆ, ಒಬ್ಬ ದಲಿತ ಬಾಲಕಿಯ ಕೊಲೆಯ ರಕ್ತ ನಿಮ್ಮ ಕೈಗಂಟಿದೆ. ಈ ಪಾಪದ ಶಾಪ ನಿಮ್ಮನ್ನ ತಟ್ಟದೇ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಕಲಬುರ್ಗಿಯ ಗ್ರಂಥಾಲಯದ ನೌಕರಿಯಲ್ಲಿದ್ದ ಮಹಿಳೆಯದು ಆತ್ಮಹತ್ಯೆಯಲ್ಲ; ಅದು ಸರಕಾರಿ ಪ್ರಾಯೋಜಿತ ಕೊಲೆ ಎಂದು ಆರ್. ಅಶೋಕ್ ಇದೇ ವೇಳೆ ಆರೋಪಿಸಿದರು.

ಈ ಅತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಆಗ್ರಹಿಸಿದರು.

ವೇತನ ಸಿಗದೇ ಗ್ರಂಥಪಾಲಕರ ಆತ್ಮಹತ್ಯೆ, ಬಿಲ್ ಪಾವತಿ ಆಗದೇ ಗುತ್ತಿಗೆದಾರರ ಆತ್ಮಹತ್ಯೆ, ವರ್ಗಾವಣೆ ಕಮಿಷನ್ ದಂಧೆಯಲ್ಲಿ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ, ನಿಗಮಗಳಲ್ಲಿ ಸರಕಾರಿ ಸಾಲ ಸಿಗದೇ ಮೈಕ್ರೋ ಫೈನಾನ್ಸ್ ಕಿರುಕುಳದಲ್ಲಿ ಬಡವರ ಆತ್ಮಹತ್ಯೆ, ಬರ ಮತ್ತು ಅತಿವೃಷ್ಟಿಯಿಂದ ಪರಿಹಾರ ಸಿಗದೇ 300ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಆಗಿದೆ. ಇದು ಮನೆಹಾಳರ ಸರಕಾರ,
ದಿವಾಳಿ ಮಾಡಿ ಜನಸಾಮಾನ್ಯರಿಗೆ ಆತ್ಮಹತ್ಯೆ ಭಾಗ್ಯವನ್ನು ಆರನೇ ಗ್ಯಾರಂಟಿಯಾಗಿ ನೀಡಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಇವರು ಕಾಂಗ್ರೆಸ್ಸಿನ ಸಚಿವರಲ್ಲ; ಯಮ ಕಿಂಕರರು,ಸಾವಿನ ಗ್ಯಾರಂಟಿ ಕೊಡುತ್ತಿದ್ದಾರೆ, ಇದೊಂದು ಕೊಲೆಗಡುಕರ ಸರಕಾರ ಎಂದು ಆರೋಪಿಸಿದರು.

ಕೋಟಿ ಕೋಟಿ ಕೊಟ್ಟರೆ
ಸಿದ್ದರಾಮಯ್ಯ ಟಾರ್ಗೆಟ್ ಫಿಕ್ಸ್ ಆಗಿದೆ; ಕರ್ನಾಟಕದ ಬೊಕ್ಕಸ ಬರಿದಾಗಿದೆ. ಇದು ಡಿನ್ನರ್ ರಾಜಕೀಯದ ಕಾರ್ಯಸೂಚಿ ಎಂದು ಆರ್. ಅಶೋಕ್ ಟೀಕಿಸಿದರು.

ಬಿಹಾರಕ್ಕೆ 300 ಕೋಟಿಗೆ ಸಂಬಂಧಿಸಿ 300 ಚಿನ್ನದ ಗಟ್ಟಿಗಳು ಹೋಗಬೇಕಿತ್ತು. ಈಗ ಸಿದ್ದರಾಮಯ್ಯನವರು ಎಲ್ಲ ಸಚಿವರಿಗೆ ಒಂದೊಂದು ಚಿನ್ನದ ಗಟ್ಟಿ ಫಿಕ್ಸ್ ಮಾಡಿದ್ದಾರೆ. ಇಲಾಖೆ ಭಾರದನ್ವಯ ಕೋಟಿ ಕೋಟಿ ಕೊಟ್ಟರೆ ನೀವು ಡಿಸೆಂಬರ್‍ನಲ್ಲಿ ಸಚಿವರಾಗಿ ಇರುತ್ತೀರಿ; ಇಲ್ಲವಾದರೆ, ಜನವರಿಯಲ್ಲಿ ನೀವು ಇರುವುದಿಲ್ಲ ಎಂದು ತಿಳಿಸಿದ್ದಾರೆ, 300 ರೂ. ಊಟ ಕೊಟ್ಟು 300 ಕೋಟಿ ವಸೂಲಿ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

ಕಿರಣ್ ಮಜುಂದಾರ್ ಅವರು ಬೆಂಗಳೂರು ಕುರಿತು ಟ್ವೀಟ್ ಮಾಡಿದ್ದಾರೆ. ಇದು ಸರ್ಕಾರದ ಮುಖಕ್ಕೆ ಮಂಗಳಾರತಿ ಎತ್ತಿದಂತಲ್ಲವೇ ಎಂದು ಪ್ರತಿ ಪಕ್ಷದ ನಾಯಕ ಪ್ರಶ್ನಿಸಿದರು.

ಮಾಲೂರಿನ ವಿಷಯದಲ್ಲಿ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇವೆ. ಸತ್ಯ ಹೊರಬರಲಿ; ಮತಗಳ್ಳರು ಯಾರೆಂದು ಗೊತ್ತಾಗಲಿ ಎಂದು ಸುದ್ದಿಗಾರರ ಪ್ರಶ್ನೆಗೆ ಅಶೋಕ್ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಉಪಸ್ಥಿತರಿದ್ದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ಅಶೋಕ್ ಗುಡುಗು Read More

ಸಂಘದ ಚಟುವಟಿಕೆಗಳನ್ನು ನಿಷೇಧ ಮಾಡಲು ಸಾಧ್ಯವಿಲ್ಲ-ಅಶೋಕ್

ಬೆಂಗಳೂರು: ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ,ನಿಮ್ಮ ಮುಖ್ಯ ಮಂತ್ರಿ ಕೈನಲ್ಲಿ ಸಂಘದ ಚಟುವಟಿಕೆಗಳನ್ನು ನಿಷೇಧ ಮಾಡಲು ಸಾಧ್ಯವೆ ಎಂದು ಪ್ರತಿ ಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

352 ಸೀಟು ಗೆದ್ದಿದ್ದ ನಿಮ್ಮ ಪರಮೋಚ್ಛ ನಾಯಕ ರಾಹುಲ್‌ ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿ ಅವರ ಕೈಯಲ್ಲಿ ಸಂಘದ ಚಟುವಟಿಕೆಗಳನ್ನು ನಿಷೇಧ ಮಾಡಲು ಆಗಲಿಲ್ಲ,414 ಸೀಟು ಗೆದ್ದಿದ್ದ ರಾಜೀವ್ ಗಾಂಧಿ ಅವರ ಕೈನಲ್ಲೂ ಸಂಘದ ಚಟುವಟಿಕೆಗಳನ್ನು ನಿಷೇಧ ಮಾಡಲು ಆಗಲಿಲ್ಲ ಇನ್ನು ಸಿದ್ದರಾಮಯ್ಯ ಅವರು ಏನು ಮಾಡಲು ಸಾಧ್ಯ ಎಂದು ಕುಟುಕಿದ್ದಾರೆ.

ಸಂಘವನ್ನ ಮತ್ತು ಸಂಘದ ಚಟುವಟಿಕೆಗಳನ್ನು ನಿಷೇಧ ಮಾಡುವುದು ಅಸಾಧ್ಯ,ಆದರೆ ನಿಮಗೆ ಒಂದು ಸವಾಲು ಹಾಕುತ್ತೇನೆ, ನಿಮಗೆ ತಾಕತ್ತಿದ್ದರೆ, ನೀವು ನಂಬಿರುವ ಸಿದ್ಧಾಂತದ ಬಗ್ಗೆ ನಿಜಕ್ಕೂ ಬದ್ಧತೆ ಇದ್ದರೆ ಮೊದಲು ಅದನ್ನು ಮಾಡಿ ತೋರಿಸಿ‌ ಎಂದು ಅಶೋಕ್ ಟ್ವೀಟ್ ಮಾಡಿ ಸವಾಲು ಹಾಕಿದ್ದಾರೆ.

ಆರೂವರೆ ಕೋಟಿ ಕನ್ನಡಿಗರ ಪಾಲಿಗೆ ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದಲ್ಲಿ ಸದನ ಕಲಾಪದ ವೇಳೆ ನಿಮ್ಮ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ‌ ಡಿ.ಕೆ.ಶಿವಕುಮಾರ್ ಅವರು ಹೆಮ್ಮೆಯಿಂದ ಸಂಘ ಗೀತೆ ಹಾಡಿದ್ದಾರೆ.

ಸಂಘದ ಚಟುವಟಕೆಗಳನ್ನು ನಿಷೇಧ ಮಾಡುವ ಮುನ್ನ ಮೊದಲು ನಿಮ್ಮ ತಂದೆ ಎಐಸಿಸಿ ಅಧ್ಯಕ್ಷರಾದ ಖರ್ಗೆ ಅವರಿಗೆ ಪತ್ರ ಬರೆದು ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಿಸಿ ನೋಡೋಣ,ಆಗುತ್ತಾ ಎಂದು ಕಾರವಾಗಿ ಪ್ರಶ್ನಿಸಿದ್ದಾರೆ.

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗುವ ದೇಶದ್ರೋಹಿಗಳನ್ನು ಸಮರ್ಥನೆ ಮಾಡಿಕೊಳ್ಳುವ ತಾವು ಭಾರತದ ಏಕತೆ, ಸಮಗ್ರತೆ, ಸಂವಿಧಾನದ ಆಶಯಗಳ ಬಗ್ಗೆ ಮಾತನಾಡುವುದು ನಿಜಕ್ಕೂ ಹಾಸ್ಯಾಸ್ಪದ.

ನಿಮ್ಮ ವೈಫಲ್ಯ, ದುರಾಡಳಿತವನ್ನ ಮುಚ್ಚಿಕೊಳ್ಳಲು ಈ ರೀತಿ ಕೆಲಸಕ್ಕೆ ಬಾರದ ಪತ್ರಗಳನ್ನು ಬರೆಯುವುದು ಬಿಟ್ಟು ನಿಮ್ಮ ಖಾತೆಗಳನ್ನು ಸರಿಯಾಗಿ ನಿರ್ವಹಿಸಿ, ನೆರೆಯಿಂದ ಸಂಕಷ್ಟದಲ್ಲಿರುವ ಕಲ್ಯಾಣ ಕರ್ನಾಟಕದ ರೈತರಿಗೆ ನೆರವು ನೀಡುವ ಕೆಲಸ ಮಾಡಿ ಎಂದು ಅಶೋಕ್‌ ಹೇಳಿದ್ದಾರೆ.

ಸಂಘದ ಚಟುವಟಿಕೆಗಳನ್ನು ನಿಷೇಧ ಮಾಡಲು ಸಾಧ್ಯವಿಲ್ಲ-ಅಶೋಕ್ Read More

ಕಾಂಗ್ರೆಸ್‌ನಲ್ಲಿ ಅಕ್ಟೋಬರ್‌ ಕ್ರಾಂತಿಯ ಲಕ್ಷಣಗಳು-ಅಶೋಕ್ ಭವಿಷ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮೊದಲು ಪರಿಹಾರ ಘೋಷಣೆ ಮಾಡಿ ನಂತರ ವೈಮಾನಿಕ ಸಮೀಕ್ಷೆ ಮಾಡಬೇಕಿತ್ತು. ಪರಿಹಾರವನ್ನೇ ತಿಳಿಸದೆ ಕೇವಲ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಆಗಿರುವ ಪ್ರವಾಹದ ಸ್ಥಿತಿ ವೀಕ್ಷಿಸಲು ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ ಮಾಡುತ್ತಿದ್ದಾರೆ. ಎಲ್ಲ ರಸ್ತೆಗಳಲ್ಲಿ ಗುಂಡಿ ಇರುವುದರಿಂದ ಹಾಗೂ ರಸ್ತೆ ತಡೆದು ಜನರು ಪ್ರತಿಭಟಿಸುತ್ತಾರೆಂಬ ಭಯದಿಂದ ಮುಖ್ಯಮಂತ್ರಿ ಹೆಲಿಕಾಪ್ಟರ್‌ನಲ್ಲಿ ವೀಕ್ಷಣೆ ಮಾಡುತ್ತಿದ್ದಾರೆ ಎಂದು ಕುಟುಕಿದರು.

ಜೋಳ ತೊಗರಿ ಸೇರಿದಂತೆ ಪ್ರತಿ ಬೆಳೆಗಳ ಹಾನಿ, ಮನೆ ಹಾನಿ, ಶಾಲೆ ಹಾನಿಗೆ ಎಷ್ಟು ಪರಿಹಾರ ನೀಡಲಾಗುತ್ತದೆ ಎಂದು ಸರ್ಕಾರ ಘೋಷಣೆ ಮಾಡಬೇಕಿತ್ತು. ಆದರೆ ಈವರೆಗೆ ಸರ್ಕಾರ ಆದೇಶ ಮಾಡಿಲ್ಲ. ಒಂದು ಕಡೆ ಖಜಾನೆ ಖಾಲಿಯಾಗಿದೆ. ಮತ್ತೊಂದು ಕಡೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲು ಸಿದ್ಧತೆ ನಡೆದಿದೆ ಎಂದು ದೂರಿದರು.

ಮುಖ್ಯಮಂತ್ರಿಗಳು ಸಚಿವರ ತಂಡ ರಚಿಸಬೇಕಿತ್ತು. ಅಧಿಕಾರಿಗಳ ಸಭೆ ಕರೆದು ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಬೇಕಿತ್ತು. ಪುನರ್ವಸತಿ ಕೇಂದ್ರಗಳಲ್ಲಿ ಸರಿಯಾಗಿ ಆಹಾರ ನೀಡಲಾಗುತ್ತಿದೆಯೇ ಎಂದು ಪರಿಶೀಲಿಸಬೇಕಿತ್ತು. ಏನೂ ಮಾಡದೆಯೇ ಹೆಲಿಕಾಪ್ಟರ್‌ನಲ್ಲಿ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಅಶೋಕ್ ಕಿಡಿ ಕಾರಿದರು.

ಕಾಂಗ್ರೆಸ್‌ನಲ್ಲಿ ಅಕ್ಟೋಬರ್‌ ಕ್ರಾಂತಿಯಾಗುವ ಲಕ್ಷಣಗಳು ಕಂಡುಬಂದಿವೆ. ಕ್ರಾಂತಿಯ ನಂತರ ಸಿಎಂ ಬದಲಾವಣೆಯಾಗುವ ಲಕ್ಷಣವಿದೆ. ಸರ್ಕಾರ ಅಸ್ಥಿರಗೊಂಡು ಬಿದ್ದುಹೋದರೆ ಚುನಾವಣೆ ಮಾಡುವುದೇ ಸೂಕ್ತ ಎಂದು ಇದೇ ವೇಳೆ ಪ್ರತಿಪಕ್ಷ ನಾಯಕರು ಹೇಳಿದರು.

ಬೆಂಗಳೂರಿನ ರಸ್ತೆ ಗುಂಡಿಗಳು ಸಾವಿನ ಗುಂಡಿಗಳಾಗಿವೆ. ಬೆಂಗಳೂರಿನಲ್ಲಿ ಒಬ್ಬ ಯುವತಿ ರಸ್ತೆ ಗುಂಡಿಯಿಂದಾಗಿ ಜೀವ ಕಳೆದುಕೊಂಡಿದ್ದಾಳೆ. ಈ ಸಾವಿಗೆ ಕಾರಣ ಯಾರು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಬೈಕ್‌ನಲ್ಲಿ ಓಡಾಡಿದರೂ, ಸಿಎಂ ನಗರ ಪ್ರದಕ್ಷಿಣೆ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅಶೋಕ್ ಟೀಕಾಪ್ರಹಾರ ನಡೆಸಿದರು.

ಕಾಂಗ್ರೆಸ್‌ನಲ್ಲಿ ಅಕ್ಟೋಬರ್‌ ಕ್ರಾಂತಿಯ ಲಕ್ಷಣಗಳು-ಅಶೋಕ್ ಭವಿಷ್ಯ Read More

ಸಮೀಕ್ಷೆ‌ ವೇಳೆ ಜನರು ವೈಯಕ್ತಿಕ ಮಾಹಿತಿ ನೀಡಬೇಕಿಲ್ಲ:ಆರ್‌.ಅಶೋಕ್ ಸಲಹೆ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆಯಲ್ಲಿ ಜನರು ವೈಯಕ್ತಿಕ ಮಾಹಿತಿಗಳನ್ನು ನೀಡಲೇಬೇಕು ಎಂದೇನಿಲ್ಲ, ಸೂಕ್ತ ಎನಿಸಿದ ಪ್ರಶ್ನೆಗಳಿಗೆ ಮಾತ್ರ ಜನರು ಉತ್ತರ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಸಲಹೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮಾಡುತ್ತಿರುವ ಜಾತಿ ಸಮೀಕ್ಷೆಯಲ್ಲಿ ಜನರು ಎಲ್ಲ ವಿವರವನ್ನು ಬಹಿರಂಗೊಳಿಸಬಾರದು. ಜನರ ಬಳಿ ಏನೇನೋ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇಂತಹ ಪ್ರಶ್ನೆಗಳಿಗೆ ಉತ್ತರ ನೀಡುವುದು ಜನರಿಗೆ ಬಿಟ್ಟ ವಿಚಾರ. ಇದನ್ನು ಕಾಂಗ್ರೆಸ್‌ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಖಜಾನೆಯಲ್ಲಿ ಹಣವಿಲ್ಲದೆ, ರೇಷನ್‌ ಕಾರ್ಡ್ ರದ್ದು ಮಾಡುತ್ತಿದ್ದಾರೆ. ಅದಕ್ಕಾಗಿ ಮಾನದಂಡ ಬೇಕಾಗುತ್ತದೆ.ಈ ಕಾರಣಕ್ಕಾಗಿ ಹಾಗೂ ಯೋಜನೆಗಳಿಗೆ ಕತ್ತರಿ ಹಾಕಲು ಜಾತಿ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಮುಂದಿನ ಬಜೆಟ್‌ ರಚನೆ ಸಿಎಂ ಸಿದ್ದರಾಮಯ್ಯನವರಿಗೆ ಕಗ್ಗಂಟಾಗಿದೆ. ಅದಕ್ಕಾಗಿ ಹಣ ಉಳಿಸಬೇಕಿದೆ. ಇದು ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಅಲ್ಲ, ಸಿದ್ದರಾಮಯ್ಯನವರ ಜಾತಿ ಸಮೀಕ್ಷೆ ಜನರಿಗೆ ಪಂಗನಾಮ ಹಾಕುವ ಸಮೀಕ್ಷೆ ಎಂದು ಕಿಡಿಕಾರಿದರು.

ಯಾರೂ ವೈಯಕ್ತಿಕ ದಾಖಲೆಗಳನ್ನು ನೀಡಬಾರದು, ಯಾವ್ಯಾವ ಪ್ರಶ್ನೆಗೆ ಉತ್ತರ ಕೊಡಬಹುದೋ ಅಷ್ಟನ್ನು ಮಾತ್ರ ನೀಡಿದರೆ ಸಾಕು. ಹೈಕೋರ್ಟ್‌ ಕೂಡ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕಿಲ್ಲ ಎಂದಿದೆ ಎಂದು ಅಶೋಕ್ ತಿಳಿಸಿದರು.

ತಮಿಳುನಾಡಿನ ಕರೂರಿನಲ್ಲಾದ ಕಾಲ್ತುಳಿತದ ಘಟನೆಯಿಂದ ಇಡೀ ದೇಶ ಬೆಚ್ಚಿಬಿದ್ದಿದೆ. ವಿಧಾನಸೌಧದ ಮುಂಭಾಗ ಕಾಂಗ್ರೆಸ್‌ ಸರ್ಕಾರದಿಂದ ನಡೆದಿದ್ದ ಆರ್‌ಸಿಬಿ ಸಂಭ್ರಮಾಚರಣೆಯಲ್ಲಾದ ಕಾಲ್ತುಳಿತ ಘಟನೆಯಿಂದಲೇ ನಾವೆಲ್ಲ ದುಃಖಕ್ಕೊಳಗಾಗಿದ್ದೆವು. ತಮಿಳುನಾಡಿನಲ್ಲಿ ನಡೆದಿರುವ ದುರ್ಘಟನೆ ಇದಕ್ಕಿಂತಲೂ ದೊಡ್ಡದಾಗಿದೆ. ತಮಿಳುನಾಡಿನ ಡಿಎಂಕೆ ಸರ್ಕಾರ ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದೆ. ಡಿಎಂಕೆ ಸರ್ಕಾರ 10 ಸಾವಿರ ಜನರಿಗೆ ಅನುಮತಿ ನೀಡಿದೆ. ಆದರೆ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಿಲ್ಲ. ಈ ಹಿಂದೆಯೇ ಸರ್ಕಾರಕ್ಕೆ ಕೋರ್ಟ್‌ ಸೂಚನೆ ನೀಡಿದ್ದರೂ, ಅದನ್ನು ಸರ್ಕಾರ ಧಿಕ್ಕರಿಸಿದೆ. ಈ ಅನಾಹುತಕ್ಕೆ ಸ್ಟಾಲಿನ್‌ ನೇತೃತ್ವದ ಡಿಎಂಕೆ ಸರ್ಕಾರವೇ ನೇರ ಕಾರಣ ಎಂದು ಆರೋಪಿಸಿದರು.

ನಟ ವಿಜಯ್‌ ಕೂಡಲೇ ಕ್ಷಮಾಪಣೆ ಕೇಳಿ, ಆಸ್ಪತ್ರೆಗೆ ಭೇಟಿ ನೀಡಬೇಕಿತ್ತು. ಅದನ್ನು ವಿಜಯ್‌ ಮಾಡಿಲ್ಲ. ಈ ಪ್ರಕರಣವನ್ನು ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಗೆ ತನಿಖೆಗೆ ನೀಡಬೇಕೆಂದು ಕರ್ನಾಟಕದ ಬಿಜೆಪಿ ಘಟಕ ಆಗ್ರಹಿಸುತ್ತಿದೆ ಎಂದು ಹೇಳಿದರು.

ಬೆಳಗಾವಿ, ರಾಯಚೂರು, ವಿಜಯಪುರ ಮೊದಲಾದ ಭಾಗಗಳಲ್ಲಿ ಪ್ರವಾಸ ಮಾಡಿ ಮಳೆ ಹಾನಿ ಪರಿಶೀಲನೆ ಮಾಡುತ್ತೇನೆ. ಹಿಂದೆ ಬಿಜೆಪಿ ಇದ್ದಾಗ ಜನರಿಗೆ ಉತ್ತಮ ಪರಿಹಾರ ನೀಡಲಾಗಿತ್ತು. ಈಗ ಕಾಂಗ್ರೆಸ್‌ ಏನೂ ನೀಡುತ್ತಿಲ್ಲ ಎಂದು ಅಶೋಕ್‌ ಗಂಭೀರ ಆರೋಪ ಮಾಡಿದರು.

ಸಮೀಕ್ಷೆ‌ ವೇಳೆ ಜನರು ವೈಯಕ್ತಿಕ ಮಾಹಿತಿ ನೀಡಬೇಕಿಲ್ಲ:ಆರ್‌.ಅಶೋಕ್ ಸಲಹೆ Read More

ಸಿಎಂ ಸಿದ್ದರಾಮಯ್ಯ ಮತಾಂತರದ ರಾಯಭಾರಿ-ಅಶೋಕ್ ಟೀಕೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಎಂದರೆ ಮತಾಂತರದ ರಾಯಭಾರಿ, ಯಾರೂ ಯೋಚನೆ ಮಾಡದಂತಹ ಜಾತಿಗಳನ್ನು ಅವರು ಸೃಷ್ಟಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಇಲ್ಲದ ಜಾತಿಗಳನ್ನು ಸಿಎಂ ಸಿದ್ದರಾಮಯ್ಯ ಹುಟ್ಟುಹಾಕಿದ್ದಾರೆ. ಇಂತಹ ಜಾತಿ ಸಮೀಕ್ಷೆ ರದ್ದಾಗಲಿದೆ. ಈ ಸಮೀಕ್ಷೆ ಮೂಲಕ ಮತಾಂತರಕ್ಕೆ ಪ್ರೇರಣೆ ನೀಡಿ, ಹಿಂದೂಗಳನ್ನು ತುಳಿಯಲಾಗುತ್ತಿದೆ. ಏನೇ ಮಾಡಿದರೂ ಸಂವಿಧಾನದ ಪ್ರಕಾರ ಮಾಡಲಿ, ಮೀಸಲಾತಿಗೆ ಸಂಬಂಧಿಸಿದಂತೆ ಕೋರ್ಟ್‌ ಆದೇಶವಿದೆ. ಅದರ ಪ್ರಕಾರ ಕ್ರಮ ವಹಿಸಲಿ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಎಲ್ಲದರಲ್ಲೂ ಮುಸ್ಲಿಂ ಓಲೈಕೆ ಮಾಡುತ್ತಾರೆ. ಹಿಂದೂಗಳ ಮತ ಮಾತ್ರ ಬೇಕು. ಮತ ಸಿಕ್ಕ ನಂತರ ಹಿಂದೂ ಧರ್ಮದಲ್ಲಿ ಲೋಪವಿದೆ ಎಂದಿದ್ದಾರೆ. ಮುಸ್ಲಿಮರಲ್ಲಿ ಮಹಿಳೆಯರು ಮಸೀದಿಗೆ ಹೋಗುವಂತಿಲ್ಲ. ಇದು ಕೂಡ ತಪ್ಪೆಂದು ಅವರಿಗೆ ಅನ್ನಿಸಲಿಲ್ಲ. ಅಂದರೆ ಹಿಂದೂ ಧರ್ಮದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ. ಕೇವಲ ಹಿಂದೂ ಧರ್ಮವನ್ನು ಟಾರ್ಗೆಟ್‌ ಮಾಡುವ ಬದಲು ಬೇರೆ ಧರ್ಮಗಳ ಬಗ್ಗೆ ಕೂಡ ಮಾತಾಡಲಿ ಎಂದು ಒತ್ತಾಯಿಸಿದರು.

ದಸರಾ ಹಬ್ಬವನ್ನು ನಾಡಹಬ್ಬ, ಹಿಂದೂಗಳ ಹಬ್ಬ ಎನ್ನುತ್ತಾರೆ. ಅದೇ ರೀತಿ ಮುಸ್ಲಿಂ ಹಬ್ಬಗಳನ್ನು ಕೂಡ ನಾಡಹಬ್ಬ ಎನ್ನಲಿ ಮತ್ತು ಮುಸ್ಲಿಂ ಹಬ್ಬಗಳನ್ನು ಹಿಂದೂಗಳ ಕೈಯಲ್ಲಿ ಉದ್ಘಾಟನೆ ಮಾಡಿಸಲಿ, ಈ ಹಬ್ಬವನ್ನು ಮೈಸೂರು ಅರಸರು ಮಾಡಿಕೊಂಡು ಬಂದಿದ್ದಾರೆ, ಇದು ಪರಂಪರೆಯೇ ಹೊರತು ಕಾನೂನಲ್ಲ ಆದ್ದರಿಂದ ಇದಕ್ಕಾಗಿ ಪ್ರತ್ಯೇಕ ಕಾನೂನು ತರುವ ಅಗತ್ಯವಿದೆ. ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗಬಾರದು ಎಂಬಂತೆ ಮಾಡಿದ್ದಾರೆ. ಕಾಂಗ್ರೆಸ್‌ ಸರ್ಕಾರದಿಂದ ಹಿಂದೂ-ಮುಸ್ಲಿಂ ನಡುವೆ ಒಡಕು ಮೂಡಿದೆ ಎಂದು ಅಶೋಕ್ ಕಿಡಿಕಾರಿದರು.

ಬೆಂಗಳೂರಿನಲ್ಲಿ 5,000 ಕೋಟಿ ರೂ. ಬಿಡುಗಡೆಯಾಗಿದ್ದರೂ ರಸ್ತೆ ದುರಸ್ತಿ ಮಾಡಿಲ್ಲ. ಶುದ್ಧ ಕುಡಿಯುವ ನೀರಿನ ಘಟಕದ 20 ಲೀಟರ್‌ ನೀರಿನ ದರವನ್ನು 5 ರಿಂದ 10 ರೂ. ಗೆ ಏರಿಸಲಾಗಿದೆ. ತೈಲ ದರ, ಹಾಲಿನ ದರ ಏರಿಕೆ, ಹೊಸದಾಗಿ ಕಸ ಶುಲ್ಕ ಹೇರಲಾಗಿದೆ. ಇನ್ನು ಗಾಳಿಗೂ ಶುಲ್ಕ ತಂದರೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಬ್ರ್ಯಾಂಡ್‌ ಬೆಂಗಳೂರು ಸಾಕಾರವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಬಂದ ನಂತರ ಪಾಲಿಕೆಯನ್ನು ಐದು ಹೋಳು ಮಾಡಲಾಗಿದೆ. 198 ವಾರ್ಡ್‌ಗೆ ಶೇ 90 ನಷ್ಟು ಇಂಜಿನಿಯರ್‌ ಇಲ್ಲ. ಪಾಲಿಕೆಯೇ ಪಾಪರ್‌ ಆಗಿರುವ ಸಮಯದಲ್ಲಿ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ? ಒಂದು ಸಾವಿರಕ್ಕೂ ಅಧಿಕ ನೇಮಕಾತಿ ಮಾಡಿದರೆ ಹಣ ಎಲ್ಲಿಂದ ತರುತ್ತಾರೆ? ಬಹಳ ಕಡೆ ಶಂಕುಸ್ಥಾಪನೆಯಾಗಿ, ಕಾಮಗಾರಿ ಸ್ಥಗಿತವಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

ಧರ್ಮಸ್ಥಳದ ವಿಚಾರದಲ್ಲಿ ಎಸ್‌ಐಟಿ ವೇಗವಾಗಿ ಗುಂಡಿ ಅಗೆದಿದೆ. ಆದರೆ ತನಿಖೆ ನಿಧಾನವಾಗಿದೆ. ತನಿಖೆಗೆ ಒಳಪಟ್ಟವರು ಹೊರಗೆ ಬಂದು ಮಾಧ್ಯಮಗಳ ಜೊತೆ ಮಾತಾಡಿದ್ದಾರೆ. ಈ ವಿಚಾರದಲ್ಲಿ ನಾವು ಹೋರಾಟ ಮಾಡುತ್ತೇವೆ. ಇದೆಲ್ಲದರ ಬಗ್ಗೆ ಸರಿಯಾಗಿ ತನಿಖೆಯಾಗಬೇಕು. ಇದಕ್ಕಾಗಿ ಕೋರ್ಟ್‌ ಮೊರೆ ಕೂಡ ಹೋಗುತ್ತೇವೆ ಎಂದು ಅಶೋಕ್ ಎಚ್ಚರಿಸಿದರು.

ಸಿಎಂ ಸಿದ್ದರಾಮಯ್ಯ ಮತಾಂತರದ ರಾಯಭಾರಿ-ಅಶೋಕ್ ಟೀಕೆ Read More