ಬೆಂಗಳೂರು: ಕೆ.ಎ.ಎಸ್ ಪರೀಕ್ಷಾರ್ಥಿಗಳ ಪ್ರಶ್ನೆ ಪತ್ರಿಕೆಗಳಲ್ಲಿನ ನಿರಂತರ ಭಾಷಾಂತರ ಲೋಪ ಸೇರಿದಂತೆ ಇತರೆ ಬೇಡಿಕೆಗಳಿಗೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷ ಬೆಂಬಲ ಸೂಚಿಸಿತು.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕೆ.ಎ.ಎಸ್ ಪರೀಕ್ಷಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಸೇರಿದಂತೆ ಪಕ್ಷದ ಅನೇಕ ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಸಾಥ್ ನೀಡಿದರು.
ಈ ವೇಳೆ ಕೆ.ಎ.ಎಸ್ ಪರೀಕ್ಷಾರ್ಥಿಗಳೊಂದಿಗೆ ಸೇರಿ ಆಪ್ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.
ಬೇಕೇ ಬೇಕು ನ್ಯಾಯ ಬೇಕು ಎಲ್ಲಿಯವರೆಗೂ ಹೋರಾಟ ಗೆಲ್ಲುವವರೆಗೂ ಹೋರಾಟ,ದಿಕ್ಕಾರ,ದಿಕಾರ ಕೆ ಪಿ ಎಸ್ ಸಿ ಗೆ ದಿಕ್ಕಾರ ಹೀಗೆ ಅನೇಕ ಘೋಷಣೆಗಳನ್ನು ಮುಖ್ಯ ಮಂತ್ರಿ ಚಂದ್ರು ಸೇರಿದಂತೆ ಎಲ್ಲಾ ಪ್ರತಿಭಟನಾ ನಿರತರು ಕೂಗಿದರು.
ಇದೇ ವೇಳೆ ಮುಖ್ಯ ಮಂತ್ರಿ ಚಂದ್ರು ಅವರು ಪ್ರತಿಭಟನಾ ನಿರತ ಪರೀಕ್ಷಾರ್ಥಿಗಳಿಗೆ ಕನ್ನಡದ ಶಾಲು ಹೊದಿಸಿ ಪ್ರೋತ್ಸಾಹಿಸಿದ್ದು ಕಂಡುಬಂದಿತು.
ಮೈಸೂರು: ಬಾಣಂತಿಯರ ಸರಣಿ ಸಾವು ಸಂಭವಿಸಿದರೂ ಕ್ರಮ ಕೈಗೊಳ್ಳದ ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ಮೈಸೂರು ಜಿಲ್ಲಾ ಪಂಚಾಯತ್ ಬಳಿ ಬಿಜೆಪಿ ಮಹಿಳಾ ಮೋರ್ಚ ಪ್ರತಿಭಟನೆ ನಡೆಸಿತು.
ರಾಜ್ಯಾದ್ಯಂತ ನಿರಂತರವಾಗಿ ಬಡಕುಟುಂಬಗಳ ತಾಯಂದಿರು ಹಾಗೂ ಹಸುಗೂಸುಗಳ ಸಾವು ನೋವುಗಳಿದ್ದರೂ, ಜನಸಾಮಾನ್ಯರು ಬೀದಿಗಿಳಿದು ಪ್ರತಿಭಟನೆ ನಡೆಸಿದರೂ ಎಚ್ಚೆತ್ತುಕೊಂಡಿಲ್ಲ ಎಂದು ಕಿಡಿಕಾರಿದರು.
ಬಾಣಂತಿಯರ ಸರಣಿ ಸಾವು ಕಂಡರೂ ಕಠಿಣ ಕ್ರಮ ಕೈಗೊಳ್ಳಲು ತಾತ್ಸಾರ ಧೋರಣೆ ತಾಳಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನಸಾಮಾನ್ಯರು, ಬಡವರ ಶಾಪ ತಟ್ಟಲಿದೆ ಎಂದು ಪ್ರತಿಭಟನಾ ನಿರತರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕರೂ,ಬಿಜೆಪಿ ಮೈಸೂರು ನಗರ ಜಿಲ್ಲಾ ಅಧ್ಯಕ್ಷರಾದ ನಾಗೇಂದ್ರ ಹಾಗೂ ಮೈಸೂರು ಗ್ರಾಮಾಂತರ ಮಹಿಳಾ ಜಿಲ್ಲಾ ಅಧ್ಯಕ್ಷರು ನಳಿನಾ ಗೌಡ, ಮೈಸೂರು ನಗರ ಮಹಿಳಾ ಜಿಲ್ಲಾ ಅಧ್ಯಕ್ಷೆ ರೇಣುಕಾ ರಾಜ್ ಹಾಗೂ ರಾಜ್ಯ ಮಹಿಳಾ ಉಪಾಧ್ಯಕ್ಷರು ಪ್ರಫುಲ್ಲ ಮಲ್ನಾಡಿ, ಜಿಲ್ಲಾಪಂಚಾಯತ್ ಮಾಜಿ ಸದಸ್ಯೆ ಮಂಗಳ ಸೋಮಶೇಖರ್ ಹಾಗೂ ಎಲ್ಲಾ ಮಹಿಳಾ ಮೋರ್ಚಾ ಪದಾಧಿಕಾರಿಗಳು, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರತಿಭಟನೆ ನಂತರ ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಮನವಿ ಸಲ್ಲಿಸಲಾಯಿತು.
ಆ ನಂತರ ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಅವರಿಗೂ ಮನವಿಪತ್ರ ಸಲ್ಲಿಸಲಾಯಿತು.
ಮೈಸೂರು: ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರ ಬಗ್ಗೆ ಅವಹೇಳನ ಮತ್ತು ದ್ವೇಷದ ಮಾತನ್ನಾಡಿರುವ ಕೇಂದ್ರಗೃಹ ಸಚಿವ ಅಮಿತ್ ಷಾರನ್ನು ಸಂಸದ ಸ್ಥಾನದಿಂದ ವಜಗೊಳಿಸಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಮೈಸೂರಿನ ಟೌನ್ ಹಾಲ್ ಮುಂಭಾಗ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು,ಮತ್ತಿತರರು ಬೃಹತ್ ಪ್ರತಿಭಟನೆ ನಡೆಸಿ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿದರು,ಜತೆಗೆ ಯುಎಪಿಎ ಕಾಯ್ದೆಯಡಿ ಬಂಧಿಸಬೇಕೆಂದು ಆಗ್ರಹಿಸಿದರು.
ಸಂವಿಧಾನ ಶಿಲ್ಪಿ ವಿಶ್ವಜ್ಞಾನಿ ಡಾ. ಬಿ ಆರ್ ಅಂಬೇಡ್ಕರ್ ಅವರು ಸಮಾನತೆ, ಸಹಬಾಳ್ವೆ, ಭಾತೃತ್ವ, ಜಾತ್ಯತೀತ ಧರ್ಮ, ನಿರಪೇಕ್ಷ, ಸಂವಿಧಾನವನ್ನು ಈ ದೇಶಕ್ಕೆ ನೀಡಿದ್ದಾರೆ.
ಇಂತಹ ವಿಶ್ವ ಶ್ರೇಷ್ಠ ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವುದು ಸಂವಿಧಾನದ ಕರ್ತವ್ಯವನ್ನು ಗೌರವಿಸುವುದು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು ಆಡಳಿತ ನಡೆಸುವ ಸರ್ಕಾರಗಳ ಕರ್ತವ್ಯವಾಗಿದೆ ಎಂದು ಹೇಳಿದರು.
ಗೌರವಾನ್ವಿತ ಸಾಂವಿಧಾನಿಕ ಹುದ್ದೆ ಹೊಂದಿರುವ ಕೇಂದ್ರ ಸರ್ಕಾರದ ಗೃಹ ಮಂತ್ರಿ ಆಮಿತ್ ಶಾ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ರಾಜ್ಯಸಭೆಯಲ್ಲಿ ಅಸಹನೆ ಮತ್ತು ದ್ವೇಷದ ಮಾತ ನಾಡಿರುವುದು ಅವರ ವಿಕೃತ ಮನಸ್ಥಿತಿಗೆ ಸಾಕ್ಷಿಯಾಗಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿನಿಂದಲೂ ಸಂವಿಧಾನ ಸುಡುವ ಹಾಗೂ ಸಂವಿಧಾನ ಬದಲಿಸುವ ಹೇಳಿಕೆಗಳನ್ನು ನೀಡುತ್ತಾ, ಅಲ್ಪಸಂಖ್ಯಾತರು ಮತ್ತು ಶೋಷಿತ ಸಮುದಾಯಗಳ ವಿರುದ್ಧ ದ್ವೇಷ ಬಿತ್ತಿ ಅರಾಜಕತೆ ಸೃಷ್ಟಿಸಿ ಅಸಹನೆಯಿಂದಲೇ ರಾಜಕೀಯ ಮಾಡುತ್ತಾ ಅಧಿಕಾರಕ್ಕೆ ಬಂದಿರುವ ಬಿಜೆಪಿ ಮತ್ತು ಆರ್ ಎಸ್ ಎಸ್ ಸಂಘ ಪರಿವಾರದ ಮುಖ್ಯಸ್ಥರಾಗಿರುವ ಅಮಿತ್ ಶಾ ಅವರು ಹಿಂದೆ ಗುಜರಾತ್ ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಬೆಂಕಿ ಇಟ್ಟಿದ್ದರು. ನ್ಯಾಯಾಧೀಶರ ಕೊಲೆ ಪ್ರಕರಣದಲ್ಲಿ ಕ್ರಿಮಿನಲ್ ಅಪರಾಧಿಯಾಗಿ ಗಡಿಪಾರಾಗಿದ್ದವರು, ಅಂತವರು ಸಂಸದರಾಗಲು ಅರ್ಹತೆ ಇಲ್ಲ ಎಂದು ಒಕ್ಕೂಟದ ಮುಖಂಡರು ಕಿಡಿಕಾರಿದರು
ದೇಶದ ಕಾನೂನು ಸುವ್ಯವಸ್ಥೆ ಕಾಪಾಡುವ ಪ್ರಮುಖ ಹುದ್ದೆಯಾದ ಗೃಹ ಖಾತೆಯ ಜವಾಬ್ದಾರಿ ಹೊತ್ತಿರುವ ಶಾ ಅಸಮಾನತೆಯ ಮನಸ್ಕೃತಿ ಯನ್ನು ಜಾರಿಗೆ ತರಲು ಯತ್ನಿಸಿದ್ದಾರೆ,ಅಂಥವರ ಬೆಂಬಲಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಿಂತಿರುವುದನ್ನು ದಲಿತ ಸಂಘಟನೆಗಳು ತೀರ್ವವಾಗಿ ಖಂಡಿಸುತ್ತದೆ ಎಂದು ಕಾರವಾಗಿ ಘೋಷಣೆ ಕೂಗಿದರು.
ಅಂಬೇಡ್ಕರ್ ಅವರು ದೇಶದ ಹಾಗೂ ಎಲ್ಲ ವರ್ಗಗಳ ಅಸ್ಮಿತೆ.ಅವರ ಬಗ್ಗೆ ಅಂಬೇಡ್ಕರ್ ಅಂಬೇಡ್ಕರ್ ಎನ್ನುವುದು ಈಗ ಫ್ಯಾಷನ್ ಆಗಿದೆ. ಅಂಬೇಡ್ಕರನ್ನು ಸ್ಮರಿಸುವ ಬದಲು ದೇವರನ್ನು ಸ್ಮರಿಸಿದರೆ ಸ್ವರ್ಗಕ್ಕೆ ಹೋಗುತ್ತಿದ್ದಿರಿ ಎಂದು ಹಿರಿಯರ ಚಾವಡಿಯಾದ ರಾಜ್ಯಸಭೆಯಲ್ಲಿ ಅಮಿತ್ ಶಾ ಹೇಳಿರುವದನ್ನು ಇಡೀ ದೇಶ ಖಂಡಿಸಬೇಕು ಎಂದು ಮುಖಂಡರು ಕರೆನೀಡಿದರು.
ಇಂತಹ ಕೆಟ್ಟ ಹೇಳಿಕೆ ನೀಡಿ ಕೋಟ್ಯಂತರ ಭಾರತೀಯರನ್ನು ಅವಮಾನಿಸಿರುವ ಅಮಿತ್ ಶಾರನ್ನು ಸಂಸದ ಸ್ಥಾನದಿಂದ ವಜಾಗೊಳಿಸಿ ಯುಎಪಿಎ ಕಾಯ್ದೆಯಡಿ ಬಂಧಿಸಬೇಕೆಂದು ಆಗ್ರಹಿಸಿ ರಾಷ್ಟ್ರಪತಿಗಳಿಗೆ ಮನವಿ ರವಾನಿಸಲಾಯಿತು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ದೇವಗಳ್ಳಿ ಸೋಮಶೇಖರ್, ನಾ ದಿವಾಕರ್, ಕೆ ಆರ್ ಸುಮತಿ, ಸವಿತಾ ಮಲ್ಲೇಶ್, ಟಿ ಗುರುರಾಜ್, ರತಿ ಮೇಡಂ, ಕೆ ಆರ್ ಗೋಪಾಲಕೃಷ್ಣ, ಶಂಭುಲಿಂಗ ಸ್ವಾಮಿ, ಹರಕುಮಾರ್ ಸಣ್ಣಸ್ವಾಮಿ, ಕಲ್ಲಳ್ಳಿ ಕುಮಾರ್, ಗುರುಸ್ವಾಮಿ, ಕಾಮ್ರೆಡ್ ಜಗನ್ನಾಥ್, ಎಸ್. ಎಫ್.ಐ.ನ ಕಾಮ್ರೆಡ್‌ಗಳು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಬೆಂಗಳೂರು: ಸಂಸತ್ತಿನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರವರ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿರುವ ಕೇಂದ್ರದ ಗೃಹ ಸಚಿವ ಅಮಿತ್ ಶಾ ಕೂಡಲೇ ರಾಜೀನಾಮೆ ಕೊಟ್ಟು ತೊಲಗಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶುಕ್ರವಾರ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಅಮಿತ್ ಶಾ ಗೃಹ ಸಚಿವ ಸ್ಥಾನದಲ್ಲಿ ಮುಂದುವರಿಯಲು ಅನರ್ಹರು ಎಂದು ವಾಗ್ದಾಳಿ ನಡೆಸಿದರು.
ದೇಶದ ಎಲ್ಲರಿಗೂ ಅಂಬೇಡ್ಕರ್ ಅವರು ದೈವ ಸಮಾನರು ನಮ್ಮ ದೈವಕ್ಕೆ ಅಪಮಾನಕಾರಿಯಾಗುವ ಹೇಳಿಕೆಗಳನ್ನು ಯಾರೆ ನೀಡಿದರು ಪಕ್ಷವು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಪ್ರಜಾಪ್ರಭುತ್ವದ ದೇಗುಲಗಳೆಂದು ನಾವೆಲ್ಲ ನಂಬಿರುವ ಸಂಸತ್ತು ಹಾಗೂ ವಿಧಾನಸಭೆಗಳು ನಡೆಯುವ ರೀತಿ ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂತಿದೆ ಎಂದು ಇದೇ ವೇಳೆ ಸಿ.ಟಿ. ರವಿ ಪ್ರಕರಣ ಉಲ್ಲೇಖಿಸಿ ಜಗದೇಶ್ ಚಂದ್ರ ಕಿಡಿಕಾರಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮ, ರುದ್ರಯ್ಯ ನವಲಿ ಹಿರೇಮಠ, ಪ್ರೊ. ಮಹದೇವಸ್ವಾಮಿ, ಅಶೋಕ್, ಮೃತ್ಯುಂಜಯ ,ಉಷಾ ಮೋಹನ್, ವೀಣಾ,ಶಶಿಧರ್ ಆರಾಧ್ಯ , ಶ್ರೀಧರ,ಸಿದ್ದು,ಸರವಣ,ಮುನೇಂದ್ರ ,ಮುನೇಶ್ , ಮಹಾಲಕ್ಷ್ಮಿ, ಅಂಜನಾ ಗೌಡ, ಮಾರಿಯಾ, ಪುಷ್ಪ,ಇರ್ಷಾದ್, ಮಣಿಕಂಠ ಸೇರಿದಂತೆ ಹಲವು ಮುಖಂಡರುಗಳು ಭಾಗವಹಿಸಿದ್ದರು.
ಬೆಳಗಾವಿ,ಸುವರ್ಣಸೌಧ: ಗುರುವಾರ ಕೂಡಾ ವಿಧಾನಸಭೆ ಮತ್ತು ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಶಾಸಕರು ಅಂಬೇಡ್ಕರ್ ಭಾವಚಿತ್ರ ಪ್ರದರ್ಶಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿದರು.
ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಅಮಿತ್ ಶಾ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿ ಕಾಂಗ್ರೆಸ್ ಸದಸ್ಯರು ಚರ್ಚೆಗೆ ಆಗ್ರಹಿಸಿ, ನಿರ್ಣಯ ಕೈಗೊಳಲು ಒತ್ತಾಯಿಸಿದರು.
ಸದನದಲ್ಲಿ ಒಟ್ಟಾಗಿ ನಿಂತು ಅಂಬೇಡ್ಕರ್ ಫೊಟೋ ಹಿಡಿದು ಕಾಂಗ್ರೆಸ್ ಸದಸ್ಯರು ಧಿಕ್ಕಾರ ಕೂಗಿದರು. ಈ ಸಂದರ್ಭದಲ್ಲಿ ಬಿಜೆಪಿಯವರು ಕಾಂಗ್ರೆಸ್‌ನಿಂದಲೇ ಅಂಬೇಡ್ಕರ್ ಅವರಿಗೆ ಅನ್ಯಾಯವಾಗಿದೆ ಎಂದು ಹೇಳಿ ಪ್ರತಿಭಟಿಸಿದರು.ಈ ವೇಳೆ ಯಾರೊಬ್ಬರ ಮಾತೂ ಕೇಳದಂತೆ ಗದ್ದಲವಾಯಿತು.
ಈ ವೇಳೆ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಪ್ರದರ್ಶಿಸಿದ ಅಂಬೇಡ್ಕರ್ ಭಾವಚಿತ್ರವನ್ನೇ ತೆಗೆದುಕೊಂಡು ಕಾಂಗ್ರೆಸ್ ವಿರುದ್ಧವೇ ಬಿಜೆಪಿ ಶಾಸಕ ಗುರುರಾಜ್ ಗಂಟಿಹೊಳೆ ಪ್ರದರ್ಶಿಸಿ ವ್ಯಂಗ್ಯವಾಡಿದರು.
ಗದ್ದಲ ಚದರ ಸತತ ಜೋರಾಗುತ್ತಿದ್ದಂತೆ ಸ್ಪೀಕರ್ ಯು.ಟಿ.ಖಾದರ್ ಕೆಲಕಾಲ ಕಲಾಪವನ್ನು ಮುಂದೂಡಿದರು.
ಮೈಸೂರು: ರಾಜ್ಯ ಸರ್ಕಾರ, ಅವೈಜ್ಞಾನಿಕವಾಗಿ ಲಕ್ಷಾಂತರ ಬಡವರ ಬಿ ಪಿ ಎಲ್ ಕಾರ್ಡ್ ಗಳನ್ನು ರದ್ದು ಮಾಡುತ್ತಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಸದಸ್ಯರು ಪ್ರತಿಭಟನೆ ನಡೆಸಿದರು.
ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಬಡವರಿಗೆ ನೀಡಿರುವ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಬಾರದೆಂದು ಆಗ್ರಹಿಸಿದರು.
ಮೈಸೂರಿನ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಕರ್ನಾಟಕ ರಾಜ್ಯದ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ, ಬಡವರಿಗೆ ನೀಡಿರುವ ಬಿಪಿಎಲ್ ಕಾರ್ಡ್ ಗಳನ್ನು ಕಿತ್ತುಕೊಂಡು ಅವರ ಜೀವನವನ್ನೇ ನಾಶ ಮಾಡುತ್ತಿದೆ ಎಂದು ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಜನತೆಗೆ ಐದು ಬಿಟ್ಟಿ ಭಾಗ್ಯಗಳನ್ನು ನೀಡಿ, ಈಗ ಆ ಭಾಗ್ಯಗಳಿಗೆ ಹಣ ಹೊಂದಿಸಲಾಗದೆ ಬಡವರ ಬಿಪಿಎಲ್ ಕಾರ್ಡನ್ನು ರದ್ದು ಮಾಡಿರುವುದು ಅತ್ಯಂತ ಶೋಚನೀಯ ಸಂಗತಿಯಾಗಿದೆ.
ಒಂದು ಕಡೆ ಸರ್ಕಾರ ಗ್ಯಾರಂಟಿಗಳನ್ನು ಕೊಟ್ಟು, ಜನರಿಗೆ ಮಂಕುಬೂದಿ ಎರಚಿ, ಇನ್ನೊಂದು ಕಡೆ ಅದೇ ಜನರಿಗೆ ನೀಡಿರುವ ಅತಿ ಅವಶ್ಯಕವಾದ ಬಿಪಿಎಲ್ ಕಾರ್ಡ್ಗಳನ್ನು ಕಿತ್ತುಕೊಂಡು ಹೊಟ್ಟೆಯ ಮೇಲೆ ಹೊಡೆಯುತ್ತಿದೆ, ಬರೀ ಹಿಂದೂಗಳ ಕಾರ್ಡುಗಳನ್ನೇ ರದ್ದು ಮಾಡಿರುವುದು, ಈ ಸರ್ಕಾರ ಹಿಂದೂ ವಿರೋಧಿತನ ತೋರಿಸುತ್ತದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರಕ್ಕೆ ನಿಜವಾಗಿ ನೈತಿಕತೆ ಇದ್ದರೆ, ಅವೈಜ್ಞಾನಿಕವಾಗಿ ರದ್ದು ಮಾಡಿರುವ 11 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ಸರಿಪಡಿಸಬೇಕು, ಇಲ್ಲವಾದ ಪಕ್ಷದಲ್ಲಿ ರಾಜ್ಯದ ಜನತೆ ತಮ್ಮ ಸರಕಾರಕ್ಕೆ ಸರಿಯಾದ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು. ಕೃಷ್ಣಪ್ಪ, ಪ್ರಭುಶಂಕರ್, ಪ್ರಜೀಶ್, ಸಿಂಧುವಳ್ಳಿ ಶಿವಕುಮಾರ್, ನಿತ್ಯಾನಂದ, ಡಾ . ಎಸ್ ಎ ನರಸಿಂಹೇಗೌಡ, ಕುಮಾರ್ ಗುರು ಮಲ್ಲಪ್ಪ ಕೆ.ಸಿ, ವಿಜಯೇಂದ್ರ, ಸ್ವಾಮಿ ಗೌಡ, ನೇಹಾ, ಮಂಜುಳಾ, ಭಾಗ್ಯಮ್ಮ, ಗಿರೀಶ್ ಹೆಚ್, ರಘು ಅರಸ್, ರಾಧಾ ಕೃಷ್ಣ, ಎಳನೀರು ರಾಮಣ್ಣ, ದರ್ಶನ್ ಗೌಡ, ಪ್ರದೀಪ್, ಪ್ರಭಾಕರ, ತ್ಯಾಗರಾಜ್, ಹನುಮಂತಯ್ಯ,ಆನಂದ್, ರವೀಶ್, ಚಂದ್ರಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.