ಪ್ರಿಯಾಂಕ್‌ ಖರ್ಗೆ ಅವರಿಗೆ ಬಂದಿದೆ ಎನ್ನಲಾಗಿರುವ ಬೆದರಿಕೆ ಕರೆಗಳು ಸುಳ್ಳು:ವಿಶ್ವನಾಥ್

ಮೈಸೂರು: ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ಸಚಿವ ಪ್ರಿಯಾಂಕ್‌ ಖರ್ಗೆ ಸಿಎಂಗೆ ಪತ್ರ ಬರೆದಿರುವ ಕ್ರಮವನ್ನು ವಿಧಾನಪರಿಷತ್‌ ಸದಸ್ಯ ಎಚ್.ವಿಶ್ವನಾಥ್ ಟೀಕಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಆರ್‌ಎಸ್‌ಎಸ್‌ನಿಂದ ರಾಜ್ಯದಲ್ಲಿ ಯಾವ ಅನಾಹುತ ಆಗಿದೆ ಎಂದು ಪ್ರಶ್ನಿಸಿದರು.

ಪ್ರಿಯಾಂಕ್‌ ಖರ್ಗೆ ಅವರು ಕೆಲಸಕ್ಕೆ ಬಾರದ ವಿಚಾರವನ್ನು ಮಾತನಾಡುತ್ತಿದ್ದಾರೆ, ಅವರಿಗೆ ಬಂದಿದೆ ಎನ್ನಲಾಗಿರುವ ಬೆದರಿಕೆ ಕರೆಗಳು ಸುಳ್ಳು ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಮಗನಿಗೆ ಯಾರು ಬೆದರಿಕೆ ಹಾಕುತ್ತಾರೆ, ತಾನು ಸಿಎಂ ವಿರುದ್ಧ ಟೀಕೆ ಮಾಡಿದರೂ ಇದುವರೆಗೂ ಯಾರೂ ಬೆದರಿಕೆ ಹಾಕಿಲ್ಲ ಎಂದು ವಿಶ್ವನಾಥ್ ಹೇಳಿದರು.

ವಾಸ್ತವವಾಗಿ ಶಾಲೆಗಳಲ್ಲಿ ಮಕ್ಕಳಿಗೆ ಸರಿಯಾಗಿ ಊಟ ಹಾಗೂ ಪಾಠ ಸಿಗುತ್ತಿಲ್ಲ. ಶಿಕ್ಷಕರನ್ನು ಸಮೀಕ್ಷಾ ಕಾರ್ಯಕ್ಕೆ ಬಳಸಿಕೊಂಡಿರುವುದೇ ಇದಕ್ಕೆಲ್ಲಾ ನೇರ ಕಾರಣ ಎಂದು ಆರೋಪಿಸಿದರು.

ಎಸ್‌ಎಸ್‌ಎಲ್‌ಸಿಯಲ್ಲಿ 33 ಅಂಕ ಪಡೆದರೂ ಸಾಕೆಂಬ ಹೊಸ ನಿಯಮದಿಂದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ತೀವ್ರವಾಗಿ ಕುಂಠಿತವಾಗುತ್ತದೆ. ಇದರಿಂದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹಾಳಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಅದರಲ್ಲೂ ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹಾಗೂ ಆತನ ಸ್ನೇಹಿತರು ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ ಎಂದು ವಿಶ್ವನಾಥ್ ಗಂಭೀರ ಆರೋಪ ಮಾಡಿದರು.

ಪ್ರಿಯಾಂಕ್‌ ಖರ್ಗೆ ಅವರಿಗೆ ಬಂದಿದೆ ಎನ್ನಲಾಗಿರುವ ಬೆದರಿಕೆ ಕರೆಗಳು ಸುಳ್ಳು:ವಿಶ್ವನಾಥ್ Read More

ಆರ್.ಎಸ್.ಎಸ್.ನಿಷೇಧ: ಪ್ರಿಯಾಂಕ ಖರ್ಗೆ ಹೇಳಿರೋದರಲ್ಲಿ ತಪ್ಪೇನಿದೆ: ಸಿಎಂ

ಮೈಸೂರು: ಸರ್ಕಾರಿ ಸ್ಥಳಗಳಲ್ಲಿ ಆರ್. ಎಸ್.ಎಸ್ ಚಟುವಟಿಕೆಗಳನ್ನು ಕೈಗೊಳ್ಳಬಾರದು,ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲೂ ನಿಷೇಧ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಹೇಳಿದ್ದಾರೆ,ಅದರಲ್ಲಿ ತಪ್ಪೇನಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,
ಬೆದರಿಕೆ ಕರೆಗಳು ಬರುತ್ತಿರುವುದಾಗಿ ಪ್ರಿಯಾಂಕ್ ಖರ್ಗೆಯವರು ಖುದ್ದು ತಿಳಿಸಿದ್ದಾರೆ ಇಂಥಾ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ತಿಳಿಸಿದರು.

ತಮಿಳುನಾಡಿನಲ್ಲಿ ಆರ್.ಎಸ್.ಎಸ್.
ನಿಷೇಧದ ಬಗ್ಗೆ ಮಾಹಿತಿ ಪಡೆಯಲು ಸೂಚನೆ ನೀಡಲಾಗಿದೆ.
ತಮಿಳುನಾಡಿನಲ್ಲಿ ಯಾವ ರೀತಿ ನಿಷೇಧ ಹೇರಲಾಗಿದೆ ಎಂಬ ಬಗ್ಗೆ ಮಾಹಿತಿ ತರಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಅದನ್ನು ಪರಿಶೀಲಿಸಲಾಗುವುದು, ಪ್ರಿಯಾಂಕ್ ಖರ್ಗೆ ಯವರಿಗೆ ರಕ್ಷಣೆ ಒದಗಿಸಲಾಗುವುದು ಎಂದು ಹೇಳಿದರು.

ದುಷ್ಟ ಶಕ್ತಿಗಳು ಯಾವಾಗಲೂ ಇಂಥದ್ದೇ ಕೆಲಸ ಮಾಡುವುದು. ಬೆದರಿಕೆಗಳಿಗೆ ಪ್ರಿಯಾಂಕ ಅವರು ಹೆದರುವುದಿಲ್ಲ. ನಾನೂ ಹೆಸದರುವುದಿಲ್ಲ ಎಂದು ಸಿಎಂ ತಿಳಿಸಿದರು.

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ತಡವಾಗುತ್ತಿದೆಯಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಬೆಂಗಳೂರು ನಗರ ಬಿಟ್ಟರೆ ಬೇರೆಲ್ಲಿಯೂ ಶೇಕಡಾವಾರು ಪ್ರಮಾಣದಲ್ಲಿ ಕಡಿಮೆಯಾಗಿಲ್ಲ ಎಂದು ಸಿದ್ದು ಉತ್ತರಿಸಿದರು.

ಶಾಸಕರಿಗೆ ಅನುದಾನ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಉಚ್ಚ ನ್ಯಾಯಾಲಯಕ್ಕೆ ಶ್ರೀನಿವಾಸಪುರ ಶಾಸಕರು ಮೊರೆ ಹೋಗಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ಮಂತ್ರಿಗಳು ಜೆಡಿಎಸ್ ನವರು ನಮ್ಮ ಶಾಸಕರಿಗೆ ಅನುದಾನ ನೀಡಿದ್ದರೇ ಎಂದು ಪ್ರಶ್ನಿಸಿದರು.

ರಾಜ್ಯದ ಸರ್ವತೋಮುಖ ಅಭಿವೃದ್ಧಿಯಾಗಬೇಕಿದೆ ಎಲ್ಲರಿಗೂ ಅನುದಾನ ಒದಗಿಸಲಾಗುತ್ತಿದೆ ಎಂದು ಹೇಳಿದರು.

ಮೈಸೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

ಆರ್.ಎಸ್.ಎಸ್.ನಿಷೇಧ: ಪ್ರಿಯಾಂಕ ಖರ್ಗೆ ಹೇಳಿರೋದರಲ್ಲಿ ತಪ್ಪೇನಿದೆ: ಸಿಎಂ Read More

ಸಂಘದ ಚಟುವಟಿಕೆಗಳನ್ನು ನಿಷೇಧ ಮಾಡಲು ಸಾಧ್ಯವಿಲ್ಲ-ಅಶೋಕ್

ಬೆಂಗಳೂರು: ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ,ನಿಮ್ಮ ಮುಖ್ಯ ಮಂತ್ರಿ ಕೈನಲ್ಲಿ ಸಂಘದ ಚಟುವಟಿಕೆಗಳನ್ನು ನಿಷೇಧ ಮಾಡಲು ಸಾಧ್ಯವೆ ಎಂದು ಪ್ರತಿ ಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

352 ಸೀಟು ಗೆದ್ದಿದ್ದ ನಿಮ್ಮ ಪರಮೋಚ್ಛ ನಾಯಕ ರಾಹುಲ್‌ ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿ ಅವರ ಕೈಯಲ್ಲಿ ಸಂಘದ ಚಟುವಟಿಕೆಗಳನ್ನು ನಿಷೇಧ ಮಾಡಲು ಆಗಲಿಲ್ಲ,414 ಸೀಟು ಗೆದ್ದಿದ್ದ ರಾಜೀವ್ ಗಾಂಧಿ ಅವರ ಕೈನಲ್ಲೂ ಸಂಘದ ಚಟುವಟಿಕೆಗಳನ್ನು ನಿಷೇಧ ಮಾಡಲು ಆಗಲಿಲ್ಲ ಇನ್ನು ಸಿದ್ದರಾಮಯ್ಯ ಅವರು ಏನು ಮಾಡಲು ಸಾಧ್ಯ ಎಂದು ಕುಟುಕಿದ್ದಾರೆ.

ಸಂಘವನ್ನ ಮತ್ತು ಸಂಘದ ಚಟುವಟಿಕೆಗಳನ್ನು ನಿಷೇಧ ಮಾಡುವುದು ಅಸಾಧ್ಯ,ಆದರೆ ನಿಮಗೆ ಒಂದು ಸವಾಲು ಹಾಕುತ್ತೇನೆ, ನಿಮಗೆ ತಾಕತ್ತಿದ್ದರೆ, ನೀವು ನಂಬಿರುವ ಸಿದ್ಧಾಂತದ ಬಗ್ಗೆ ನಿಜಕ್ಕೂ ಬದ್ಧತೆ ಇದ್ದರೆ ಮೊದಲು ಅದನ್ನು ಮಾಡಿ ತೋರಿಸಿ‌ ಎಂದು ಅಶೋಕ್ ಟ್ವೀಟ್ ಮಾಡಿ ಸವಾಲು ಹಾಕಿದ್ದಾರೆ.

ಆರೂವರೆ ಕೋಟಿ ಕನ್ನಡಿಗರ ಪಾಲಿಗೆ ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದಲ್ಲಿ ಸದನ ಕಲಾಪದ ವೇಳೆ ನಿಮ್ಮ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ‌ ಡಿ.ಕೆ.ಶಿವಕುಮಾರ್ ಅವರು ಹೆಮ್ಮೆಯಿಂದ ಸಂಘ ಗೀತೆ ಹಾಡಿದ್ದಾರೆ.

ಸಂಘದ ಚಟುವಟಕೆಗಳನ್ನು ನಿಷೇಧ ಮಾಡುವ ಮುನ್ನ ಮೊದಲು ನಿಮ್ಮ ತಂದೆ ಎಐಸಿಸಿ ಅಧ್ಯಕ್ಷರಾದ ಖರ್ಗೆ ಅವರಿಗೆ ಪತ್ರ ಬರೆದು ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಿಸಿ ನೋಡೋಣ,ಆಗುತ್ತಾ ಎಂದು ಕಾರವಾಗಿ ಪ್ರಶ್ನಿಸಿದ್ದಾರೆ.

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗುವ ದೇಶದ್ರೋಹಿಗಳನ್ನು ಸಮರ್ಥನೆ ಮಾಡಿಕೊಳ್ಳುವ ತಾವು ಭಾರತದ ಏಕತೆ, ಸಮಗ್ರತೆ, ಸಂವಿಧಾನದ ಆಶಯಗಳ ಬಗ್ಗೆ ಮಾತನಾಡುವುದು ನಿಜಕ್ಕೂ ಹಾಸ್ಯಾಸ್ಪದ.

ನಿಮ್ಮ ವೈಫಲ್ಯ, ದುರಾಡಳಿತವನ್ನ ಮುಚ್ಚಿಕೊಳ್ಳಲು ಈ ರೀತಿ ಕೆಲಸಕ್ಕೆ ಬಾರದ ಪತ್ರಗಳನ್ನು ಬರೆಯುವುದು ಬಿಟ್ಟು ನಿಮ್ಮ ಖಾತೆಗಳನ್ನು ಸರಿಯಾಗಿ ನಿರ್ವಹಿಸಿ, ನೆರೆಯಿಂದ ಸಂಕಷ್ಟದಲ್ಲಿರುವ ಕಲ್ಯಾಣ ಕರ್ನಾಟಕದ ರೈತರಿಗೆ ನೆರವು ನೀಡುವ ಕೆಲಸ ಮಾಡಿ ಎಂದು ಅಶೋಕ್‌ ಹೇಳಿದ್ದಾರೆ.

ಸಂಘದ ಚಟುವಟಿಕೆಗಳನ್ನು ನಿಷೇಧ ಮಾಡಲು ಸಾಧ್ಯವಿಲ್ಲ-ಅಶೋಕ್ Read More

ಸಚಿನ್ ಆತ್ಮಹತ್ಯೆಗೆ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಕಾರಣ:ಅಶೋಕ್

ಬೆಂಗಳೂರು: ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆಗೆ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಕಾರಣ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

ಊರಿಗೆಲ್ಲಾ ಉಪದೇಶ ಮಾಡುವ ಪ್ರಿಯಾಂಕ್ ಖರ್ಗೆ ಮೊದಲು ರಾಜೀನಾಮೆ ಕೊಟ್ಟು ನೈತಿಕತೆ ಪ್ರದರ್ಶನ ಮಾಡಲಿ ಎಂದು ಮಾಧ್ಯಮ ಹೇಳಿಕೆ ಮಾಡಿ ಆಗ್ರಹಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ಕಲಬುರ್ಗಿ ನಿಜಾಮನೂ ಅಲ್ಲ, ಅವರ ಅನುಯಾಯಿಗಳು ರಜಾಕಾರರೂ ಅಲ್ಲ, ಗುತ್ತಿಗೆದಾರ ಸಚಿನ್ ಸಾವಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆಯವರ ಆಪ್ತರ ಪಾತ್ರವಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಈ ಹಿಂದೆ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಾಗ, ಸಚಿವ ಈಶ್ವರಪ್ಪನವರ ರಾಜೀನಾಮೆ ಕೇಳಲಾಗಿತ್ತು. ಈಗ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ. ಸಚಿನ್ ಪಾಂಚಾಳ ಅವರು ಡೆತ್ನೋಟ್ನಲ್ಲಿ ರಾಜು ಕಪನೂರು ಹೆಸರು ಬರೆದಿಟ್ಟು, ಬಳಿಕ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಂಚನೆ ಹಾಗೂ ಹಣಕ್ಕಾಗಿ ಕೊಲೆ ಬೆದರಿಕೆ ಆರೋಪ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು 15 ಲಕ್ಷಕ್ಕೂ ಅಧಿಕ ಹಣ ತೆಗೆದುಕೊಂಡು ಟೆಂಡರ್‌ ನೀಡದೆ ವಂಚನೆ ಮಾಡಿದ್ದು, ಮಾತ್ರವಲ್ಲದೆ 1 ಕೋಟಿ ಹಣ ನೀಡುವಂತೆ ಒತ್ತಡ, ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಡೆತ್ನೋಟ್ನಲ್ಲಿ ಉಲ್ಲೇಖವಾಗಿದೆ, ಇಂತಹ ಗೂಂಡಾಗಳನ್ನು ಆಪ್ತರಾಗಿ ಇಟ್ಟುಕೊಂಡ ಸಚಿವರು ಕೂಡ ಹೊಣೆಗಾರರು ಎಂದು ಅಶೋಕ್ ಹೇಳಿದ್ದಾರೆ.

ಸಚಿನ್ ಆತ್ಮಹತ್ಯೆಗೆ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಕಾರಣ:ಅಶೋಕ್ Read More