ಪ್ರತಿಭೆಗಳನ್ನು ಹೊರ ತರಲು ಪ್ರತಿಭಾ ಕಾರಂಜಿ ಸಹಕಾರಿ:ಎ.ಆರ್. ಕೃಷ್ಣಮೂರ್ತಿ
(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮದೇ ಆದ ಪ್ರತಿಭೆಗಳನ್ನು ಹೊಂದಿರುತ್ತಾರೆ. ಪ್ರತಿಭೆಗಳನ್ನು ಹೊರ ತರುವ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ಯಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು
ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವಂತೆ ಶಾಸಕರು ಕರೆ ನೀಡಿದರು.
ಪಟ್ಟಣದ ಆರ್.ಮಿಷನ್ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಕರ ಇಲಾಖೆ ವತಿಯಿಂದ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ-ಕಲೋತ್ಸವ ಕಾರ್ಯಕ್ರಮವನ್ನು ಅವರು ಉದ್ಘಾಟಸಿ ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪತ್ಯೇತರ ಚಟುವಟಿಕೆಗೂ ಒತ್ತು ನೀಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ತಮ್ಮದೇ ಆದ ಪ್ರತಿಭೆಗಳನ್ನು ಹೊಂದಿರುತ್ತಾರೆ,ಅದನ್ನು ಗುರುತಿಸಿ ಪ್ರೊತ್ಸಾಹಿಸಬೇಕು ಎಂದು ದಲಹೆ ನೀಡಿದರು.
ಚಾಮರಾಜನಗರ ಜಿಲ್ಲೆಯು ಜಾನಪದ ಕಲೆಗಳ ತವರೂರಾಗಿದೆ. ವಿದ್ಯಾರ್ಥಿಗಳು ತಮ್ಮ ಸ್ಥಳೀಯ ಜಾನಪದ ಕಲೆಗಳಿಗೆ ಒತ್ತು ನೀಡಬೇಕು. ಆ ಮೂಲಕ ಜಿಲ್ಲೆಯ ಸಂಸ್ಕೃತಿಯನ್ನು ದೇಶಾದ್ಯಂತ ಪಸರಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಇತ್ತೀಚಿಗೆ ಯಳಂದೂರಿನಲ್ಲಿ ಆದರ್ಶ ಶಾಲೆಯ ವಿದ್ಯಾರ್ಥಿನಿಯರು ಕಂಸಾಳೆ ನೃತ್ಯದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ಅವರಂತೆ ಜಿಲ್ಲೆಯ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬೇಕು ಎಂದು ಕೃಷ್ಣಮೂರ್ತಿ ಯವರು ಕರೆ ನೀಡಿದರು.
ರಾಜ್ಯದಲ್ಲಿ 200 ಕೆಪಿಎಸ್ ಶಾಲೆಗಳ ಪ್ರಾರಂಭಕ್ಕೆ ಸರ್ಕಾರ ಮುಂದಾಗಿದ್ದು 3 ಶಾಲೆಗಳನ್ನು ಕೊಳ್ಳೇಗಾಲ ಕ್ಷೇತ್ರಕ್ಕೆ ಮಂಜೂರು ಮಾಡಿದ್ದು ಮತ್ತೆ ಮೂರು ಶಾಲೆಗಳ ಮಂಜೂರಿಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ 6 ಶಾಲೆಗಳನ್ನು ಮಂಜೂರು ಮಾಡಿದ್ದಾರೆ.
ಅಲ್ಲದೇ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಾಲೂಕಿನ ಕುರುಬನ ಕಟ್ಟಿ ಗುಡ್ಡಗಾಡು ಪ್ರದೇಶದಲ್ಲಿ 5 ಎಕರೆ ಜಾಗದಲ್ಲಿ ಮುರಾರ್ಜಿ ದೇಸಾಯಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಸತಿ ಶಾಲೆ ನಿರ್ಮಾಣಕ್ಕೆ ಅನುಮೋದನೆ ದೊರೆತ್ತಿದ್ದು, ಶೀಘ್ರವೇ ವಸತಿ ಶಾಲೆಯ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರು, ತಾಲ್ಲೂಕು ಅಧ್ಯಕ್ಷ ರಾಜೇಂದ್ರ, ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಬಿಇಒ ಮಂಜುಳಾ, ಬಿ.ಆರ್.ಸಿ ಮಹದೇವ ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೋಸೆಫ್ ಅಲೆಕ್ಸಾಂಡರ್, ಪ್ರೌಢಶಾಲಾ ಮುಖ್ಯ ಶಿಕ್ಷಕ ವಿಶ್ವನಾಥ್, ಪ್ರೌಢಶಾಲಾ ಸಹಶಿಕ್ಷಕರ ಸಂಘ ಅಧ್ಯಕ್ಷ ಅಕ್ಬರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ್, ಕಾರ್ಯಕ್ರಮ ನೂಡಲ್ ಅಧಿಕಾರಿ ವಿಜಯ್ ಕುಮಾರ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಉಪಾಧ್ಯಕ್ಷರಾದ ಬುಕಾನಿ, ಸಂಸ್ಥೆಯ ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕಿ ಸಿಸ್ಟರ್ ಲೆತಿಷಿಯ ಹಾಗೂ ಕನ್ನಡ ಮಾಧ್ಯಮದ ಮುಖ್ಯ ಶಿಕ್ಷಕಿ ಅನ್ನಮ್ಮ ದೈಹಿಕ ಶಿಕ್ಷಕ ಪೀಟರ್ ಮತ್ತಿರರು ಹಾಜರಿದ್ದರು.